ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಸಾ ಆರ್ಬಿಟರ್‌ಗೂ ಸಿಗದ ವಿಕ್ರಮ್?

ಸರಣಿ ಚಿತ್ರಗಳನ್ನು ಸೆರೆಹಿಡಿದ ಲೂನಾರ್ ರಿಕನೈಸನ್ಸ್ ಆರ್ಬಿಟರ್
Last Updated 19 ಸೆಪ್ಟೆಂಬರ್ 2019, 19:55 IST
ಅಕ್ಷರ ಗಾತ್ರ

ಹ್ಯೂಸ್ಟನ್: ಚಂದ್ರಯಾನ–2 ನೌಕೆಯ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈನಲ್ಲಿ ಇಳಿಯಬೇಕಿದ್ದ ಸ್ಥಳದ ಚಿತ್ರಗಳನ್ನು ನಾಸಾದ ಆರ್ಬಿಟರ್ ಸೆರೆಹಿಡಿದಿದ್ದು, ಅವುಗಳ ವಿಶ್ಲೇಷಣೆ ಯಲ್ಲಿ ನಾಸಾ ತೊಡಗಿದೆ. ಈ ಚಿತ್ರಗಳನ್ನು ಸದ್ಯದಲ್ಲೇ ನಾಸಾ ಹಂಚಿಕೊಳ್ಳಲಿದೆ.

ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಿರುವ ನಾಸಾದ ‘ಲೂನಾರ್ ರಿಕನೈಸನ್ಸ್ ಆರ್ಬಿಟರ್’ (ಎಲ್‌ಆರ್‌ಒ) ನೌಕೆಯು ದಕ್ಷಿಣ ಧ್ರುವದಲ್ಲಿ ಇದೇ17ರಂದು ಹಾದುಹೋಗುವಾಗ ಸರಣಿ ಚಿತ್ರಗಳನ್ನು ಸೆರೆಹಿಡಿದಿತ್ತು. ಆದರೆ ಎಲ್‌ಆರ್‌ಒ ಕಳುಹಿಸಿದ ಚಿತ್ರಗಳಲ್ಲಿ ವಿಕ್ರಮ್ ಇರುವಿಕೆ ಖಚಿತಪಟ್ಟಿಲ್ಲ ಎಂದು ಕೆಲವು ಮಾಧ್ಯಮ ವರದಿಗಳು ಉಲ್ಲೇಖಿಸಿವೆ. ಎಲ್‌ಆರ್‌ಒ ಆರ್ಬಿಟರ್ ಪ್ರದಕ್ಷಿಣೆ ಹಾಕುವ ವೇಳೆ ಅಲ್ಲಿ ಮುಸ್ಸಂಜೆಯಾಗಿತ್ತು. ಬೆಳಕಿನ ಪ್ರಮಾಣ ಕಡಿಮೆಯಾಗಿ, ರಾತ್ರಿಗೆ ಹೊರಳುವ ಹೊತ್ತಿನಲ್ಲಿ ಚಿತ್ರಗಳನ್ನು ಸೆರೆ ಹಿಡಿದಿತ್ತು.

ಎಲ್‌ಆರ್‌ಒ ನೌಕೆ ಈ ಬಾರಿ ಸೆರೆಹಿಡಿದ ಚಿತ್ರಗಳು ಹಾಗೂ ಅದೇ ಸ್ಥಳದ ಹಿಂದಿನ ಚಿತ್ರಗಳನ್ನು ಹೋಲಿಕೆ ಮಾಡಿ, ಲ್ಯಾಂಡರ್‌ನ ಇರುವಿಕೆಯನ್ನು ಪತ್ತೆ ಹಚ್ಚಲಾಗುತ್ತಿದೆ. ನೆರಳಿನ ಪ್ರದೇಶ ಆಗಿರುವ ಕಾರಣ ವಿಕ್ರಮ್ ಪತ್ತೆಯಾಗದೇ ಇರಬಹುದು ಅಥವಾ ಆರ್ಬಿಟರ್‌ನ ಕ್ಯಾಮೆರಾ ಚೌಕಟ್ಟಿನ ಆಚೆಗೆ ಅದು ಇರುವ ಸಾಧ್ಯತೆಯಿದೆ ಎಂದು ನಾಸಾ ಮೂಲಗಳು ತಿಳಿಸಿವೆ.

ಭೂಮಿಯ 14 ದಿನಗಳಿಗೆ ಚಂದ್ರನ 1 ದಿನ ಸಮ. ಅಂದರೆ 14 ದಿನ ಕತ್ತಲು ಹಾಗೂ 14 ದಿನ ಬೆಳಕು ಇರುತ್ತದೆ. ಕತ್ತಲಿಗೆ ತಿರುಗುತ್ತಿದ್ದ ಸಮಯದಲ್ಲಿ ಆರ್ಬಿಟರ್ ಹಾದುಹೋದ ಕಾರಣ, ಚಿತ್ರಗಳಲ್ಲಿ ಸ್ಪಷ್ಟತೆ ಇಲ್ಲ ಎನ್ನಲಾಗುತ್ತಿದ್ದು, ನಾಸಾ ವಿಶ್ಲೇಷಣೆ ನಡೆಸುತ್ತಿದೆ.

ಸಂಪರ್ಕ ಯತ್ನ ಕೈಬಿಟ್ಟ ಇಸ್ರೊ

ಬೆಂಗಳೂರು: ಚಂದ್ರನ ಅಂಗಳದಲ್ಲಿ ಲ್ಯಾಂಡಿಂಗ್‌ ಆಗುವಾಗ ಕುಸಿದ ಲ್ಯಾಂಡರ್‌ ‘ವಿಕ್ರಮ್‌’ ಜತೆ ಸಂಪರ್ಕ ಸಾಧಿಸುವ ಪ್ರಯತ್ನವನ್ನು ಇಸ್ರೊ ವಿಜ್ಞಾನಿಗಳು ಕೈಬಿಟ್ಟಿದ್ದಾರೆ.

ಸಂಪರ್ಕ ಸಾಧಿಸಲು ಸಾಧ್ಯವಾಗದೇ ಇರುವುದನ್ನು ಒಪ್ಪಿಕೊಂಡಿರುವ ಇಸ್ರೊ, ‘ಈ ಬಗ್ಗೆ ರಾಷ್ಟ್ರ ಮಟ್ಟದ ತಜ್ಞರು ವಿಶ್ಲೇಷಣೆ ಆರಂಭಿಸಿದ್ದಾರೆ. ಆರ್ಬಿಟರ್‌ ನಿರೀಕ್ಷೆಯಂತೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ’ ಎಂದಿದೆ.

ಇದೇ 7 ರ ಮುಂಜಾನೆ 1.55 ರ ಸುಮಾರಿಗೆ ‘ವಿಕ್ರಮ್‌’ ಚಂದ್ರನ ನೆಲದ ಮೇಲೆ ಇಳಿಯಬೇಕಿತ್ತು. ಆದರೆ, 400 ಮೀಟರ್‌ಗಳಷ್ಟು ಅಂತರವಿರುವಾಗಲೇ ಮಾಸ್ಟರ್‌ ಕಂಟ್ರೋಲ್‌ನೊಂದಿಗೆ ವಿಕ್ರಮ್‌ ಸಂಪರ್ಕ ಕಡಿದುಕೊಂಡಿತು. ಕುಸಿದು ಬಿದ್ದದ್ದನ್ನು ಆರ್ಬಿಟರ್‌ ಪತ್ತೆ ಮಾಡಿತ್ತು. 14 ದಿನಗಳೊಳಗೆ ‘ವಿಕ್ರಮ್‌’ ಅನ್ನು ಸಂಪರ್ಕ ಸಾಧಿಸಲು ಅವಕಾಶವಿದೆ ಎಂದು ಆ ಪ್ರಯತ್ನಕ್ಕೆ ವಿಜ್ಞಾನಿಗಳು ಮುಂದಾದರು. ‘ವಿಕ್ರಮ್‌’ ಮತ್ತು ಅದರೊಳಗಿದ್ದ ರೋವರ್‌ ‘ಪ್ರಜ್ಞಾನ್‌’ 14 ದಿನಗಳು ಕಾರ್ಯ ನಿರ್ವಹಿಸುವ ಕಾಲಾವಧಿ ಹೊಂದಿತ್ತು.

‘ವಿಕ್ರಮ್‌’ ಜತೆ ಸಂಪರ್ಕ ಸಾಧಿಸಲು ನಾಸಾದ ಆರ್ಬಿಟರ್‌ ಕೂಡ ಸಂದೇಶ ಕಳುಹಿಸಿತ್ತು. ಅದೂ ಕೂಡ ವಿಫಲವಾಗಿದೆ. ಇದೇ 17 ರಂದು ನಾಸಾದ ಆರ್ಬಿಟರ್‌ ‘ವಿಕ್ರಮ್‌’ ಚಿತ್ರ ತೆಗೆದು ದತ್ತಾಂಶಗಳ ಮೂಲಕ ಪತನಕ್ಕೆ ಕಾರಣಗಳ ಕುರಿತ ಮಾಹಿತಿ ನೀಡುವುದಾಗಿ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT