ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೋದಿ– ಬೈಡನ್‌ ಮಾತುಕತೆ: ಭಾರತ–ಅಮೆರಿಕ ಬಾಂಧವ್ಯ ವೃದ್ಧಿ ಕುರಿತು ಚರ್ಚೆ

Published : 21 ಸೆಪ್ಟೆಂಬರ್ 2024, 23:55 IST
Last Updated : 21 ಸೆಪ್ಟೆಂಬರ್ 2024, 23:55 IST
ಫಾಲೋ ಮಾಡಿ
Comments

ವಿಲ್ಮಿಂಗ್ಟನ್‌, ಅಮೆರಿಕ: ‘ಕ್ವಾಡ್’ ಶೃಂಗ ಸಭೆಯಲ್ಲಿ ಭಾಗಿಯಾಗಲು ಶನಿವಾರ ಅಮೆರಿಕಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಡೆಲವೇರ್‌ನ ವಿಲ್ಮಿಂಗ್ಟನ್‌ನಲ್ಲಿರುವ ಬೈಡನ್‌ ಅವರ ನಿವಾಸದಲ್ಲಿ ಉಭಯ ನಾಯಕರು ಭಾರತ–ಅಮೆರಿಕ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುವ ಸಂಬಂಧ ಚರ್ಚಿಸಿದರು. 

ಉಭಯ ದೇಶಗಳ ನಡುವಣ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ವಿಸ್ತರಿಸಲು ಹೊಸ ಮಾರ್ಗಗಳನ್ನು ಅನ್ವೇಷಿಸುವ ಬಗ್ಗೆಯೂ ಮಾತುಕತೆ ನಡೆಯಿತು. 

ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಮತ್ತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಅವರು ಮಾತುಕತೆ ವೇಳೆ ಹಾಜರಿದ್ದರು.

ದ್ವಿಪಕ್ಷೀಯ ಮಾತುಕತೆಗೆ ತಮ್ಮ ನಿವಾಸಕ್ಕೆ ಬಂದ ಮೋದಿ ಅವರನ್ನು ಬೈಡನ್‌ ಆತ್ಮೀಯವಾಗಿ ಬರಮಾಡಿಕೊಂಡರು. ಇಬ್ಬರೂ ನಾಯಕರು ಪರಸ್ಪರ ಆಲಿಂಗಿಸಿಕೊಂಡರು. ಬೈಡನ್‌, ಮೋದಿ ಅವರ ಕೈಹಿಡಿದು ತಮ್ಮ ಮನೆಯೊಳಗೆ ಕರೆದೊಯ್ದರು. 

‘ಮೋದಿ ಅವರನ್ನು ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ತಮ್ಮ ನಿವಾಸದಲ್ಲಿ ಆತ್ಮೀಯವಾಗಿ ಬರಮಾಡಿಕೊಂಡರು’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌ ‘ಎಕ್ಸ್‌’ನಲ್ಲಿ ಹೇಳಿದ್ದಾರೆ.

‘ಕ್ವಾಡ್’ ಶೃಂಗಸಭೆ ಬೈಡನ್ ಅವರ ಊರಾಗಿರುವ ವಿಲ್ಮಿಂಗ್ಟನ್ನಲ್ಲಿ ನಡೆಯಲಿದೆ. ಇಂಡೊ–ಪೆಸಿಫಿಕ್ ಪ್ರದೇಶದಲ್ಲಿ ಸಹಕಾರವನ್ನು ಹೆಚ್ಚಿಸಲು ಹೊಸ ಉಪಕ್ರಮಗಳನ್ನು ಘೋಷಿಸುವ, ಉಕ್ರೇನ್ ಮತ್ತು ಗಾಜಾ ಸಂಘರ್ಷಕ್ಕೆ ಶಾಂತಿಯುತ ಪರಿಹಾರ ಕಂಡುಕೊಳ್ಳಲು ಮಾರ್ಗೋಪಾಯ ಅರಸುವ ಕೆಲಸ ‘ಕ್ವಾಡ್’ ಶೃಂಗ ಸಭೆ ಮೂಲಕ ನಡೆಯುವ ನಿರೀಕ್ಷೆ ಇದೆ.

‘ದಿನವಿಡೀ ನಡೆಯುವ ಚರ್ಚೆಗಳು ನಮ್ಮ ಜಗತ್ತಿನ ಒಳಿತಿಗೆ ಮತ್ತು ಪ್ರಮುಖ ಜಾಗತಿಕ ಸವಾಲುಗಳನ್ನು ಎದುರಿಸಲು ನೆರವಾಗುತ್ತದೆ ಎಂಬುದು ನನಗೆ ಖಾತ್ರಿಯಿದೆ’ ಎಂದು ಮೋದಿ ಹೇಳಿದ್ದಾರೆ.

ಮೋದಿ ಅವರು ವಿಲ್ಮಿಂಗ್ಟನ್‌ನಿಂದ ನ್ಯೂಯಾರ್ಕ್‌ಗೆ ಪ್ರಯಾಣ ಬೆಳೆಸಲಿದ್ದಾರೆ. ಅಲ್ಲಿ ಲಾಂಗ್ ಐಲ್ಯಾಂಡ್‌ನಲ್ಲಿ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಭಾನುವಾರ ಮಾತನಾಡಲಿದ್ದಾರೆ. ಅಲ್ಲದೆ, ಅತ್ಯಾಧುನಿಕ ತಂತ್ರಜ್ಞಾನ ಕ್ಷೇತ್ರದ ಅಮೆರಿಕದ ಕಂಪನಿಗಳ ಸಿಇಒಗಳ ಜೊತೆ ದುಂಡುಮೇಜಿನ ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಸೋಮವಾರ ನಡೆಯುವ ‘ಭವಿಷ್ಯದ ಶೃಂಗ’ ಹೆಸರಿನ ಕಾರ್ಯಕ್ರಮ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ತಮ್ಮ ಮೂರು ದಿನಗಳ ಭೇಟಿಯ ವೇಳೆ ಮೋದಿ ಅವರು ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್‌ ಮತ್ತು ಜಪಾನ್‌ ಪ್ರಧಾನಿ ಫುಮಿಯೊ ಕಿಶಿಡಾ ಅವರೊಂದಿಗೂ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

ಸಿಖ್‌ ಸಂಘಟನೆಗಳ ಜತೆ ಚರ್ಚೆ: ಮೋದಿ ಭೇಟಿಯ ಸಂದರ್ಭದಲ್ಲೇ ಅಮೆರಿಕದ ರಾಷ್ಟ್ರೀಯ ಭದ್ರತಾ ಮಂಡಳಿಯ ಅಧಿಕಾರಿಗಳು, ಪ್ರತ್ಯೇಕ ಖಾಲಿಸ್ತಾನಿ ರಾಷ್ಟ್ರದ ಪರ ಇರುವ ಅಮೆರಿಕದ ಸಿಖ್ ಸಂಘಟನೆಗಳ ಪ್ರತಿನಿಧಿಗಳನ್ನು ಭೇಟಿ ಮಾಡಿ ಚರ್ಚಿಸಿದರು.

ಅದ್ದೂರಿ ಸ್ವಾಗತ

ಮೂರು ದಿನಗಳ ಅಮೆರಿಕ ಭೇಟಿಗಾಗಿ ಶನಿವಾರ ಫಿಲಡೆಲ್ಫಿಯಾಗೆ ಬಂದಿಳಿದ ಮೋದಿ ಅವರಿಗೆ ಅದ್ದೂರಿ ಸ್ವಾಗತ ಲಭಿಸಿತು. ಫಿಲಡೆಲ್ಫಿಯಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗೆ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದ ಭಾರತೀಯ ಸಮುದಾಯದ ಸದಸ್ಯರು ಪ್ರಧಾನಿ ಅವರನ್ನು ಬರಮಾಡಿಕೊಂಡರು. 

ಸಾಂಪ್ರದಾಯಿಕ ಉಡುಪು ಧರಿಸಿದ್ದ ಹಲವರು ತ್ರಿವರ್ಣ ಧ್ವಜವನ್ನು ಕೈಯಲ್ಲಿ ಹಿಡಿದಿದ್ದರು. ಕೆಲವರು ನೀಡಿದ ಆಟೋಗ್ರಾಫ್‌ಗೆ ಸಹಿ ಹಾಕಿದ ಪ್ರಧಾನಿ ಅವರಿಗೆ ಹಸ್ತಲಾಘವ ನೀಡಿದರು.  ‘ಉತ್ಸಾಹ ಇಮ್ಮಡಿಗೊಳಿಸುವಂತಹ ಸ್ವಾಗತ ಫಿಲಡೆಲ್ಫಿಯಾದಲ್ಲಿ ದೊರೆತಿದೆ.

ಅಮೆರಿಕದಲ್ಲಿರುವ ಭಾರತೀಯ ಸಮುದಾಯವು ತನ್ನನ್ನು ತಾನು ವಿಶಿಷ್ಟವಾಗಿ ಗುರುತಿಸಿಕೊಂಡಿದೆ. ವಿವಿಧ ಕ್ಷೇತ್ರಗಳಲ್ಲಿ ಸಕಾರಾತ್ಮಕ ಪ್ರಭಾವ ಬೀರುತ್ತಾ ಬಂದಿದೆ. ಅವರೊಂದಿಗೆ ಮಾತುಕತೆ ನಡೆಸುವುದು ಸಂತಸದ ಸಂಗತಿ’ ಎಂದು ಪ್ರಧಾನಿ ಅವರು ‘ಎಕ್ಸ್‌’ನಲ್ಲಿ ಹೇಳಿದ್ದಾರೆ.

ಔಷಧ ನೀತಿ: ಒಪ್ಪಂದಕ್ಕೆ ಸಹಿ

ಮೋದಿ ಮತ್ತು ಬೈಡನ್‌ ಅವರು ದ್ವಿಪಕ್ಷೀಯ ಔಷಧ ನೀತಿಗೆ ಸಂಬಂಧಿಸಿದ ಒಪ್ಪಂದವೊಂದಕ್ಕೆ ಸಹಿ ಹಾಕಿದರು. ಕೆಲವೊಂದು ಔಷಧಗಳ ಅಕ್ರಮ ಉತ್ಪಾದನೆ ಮತ್ತು ಕಳ್ಳಸಾಗಣೆಯನ್ನು ತಡೆಗಟ್ಟಲು ಭಾರತ ಮತ್ತು ಅಮೆರಿಕ ಪರಸ್ಪರ ಕೈಜೋಡಿಸಲು ಈ ಒಪ್ಪಂದವು ವೇದಿಕೆ ಕಲ್ಪಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT