ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೈವಾನ್‌ ಭೂಕಂಪ: ನಾಪತ್ತೆಯಾದವರಿಗಾಗಿ ಶೋಧ

ಮೃತರ ಸಂಖ್ಯೆ 10ಕ್ಕೆ, ಗಾಯಾಳುಗಳ ಸಂಖ್ಯೆ 1,070ಕ್ಕೆ ತಲುಪಿದೆ    
Published 4 ಏಪ್ರಿಲ್ 2024, 14:10 IST
Last Updated 4 ಏಪ್ರಿಲ್ 2024, 14:10 IST
ಅಕ್ಷರ ಗಾತ್ರ

ಹುವಾಲಿಯನ್‌: ದೇಶದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಿಂದ ಹಲವು ಕಟ್ಟಡಗಳು ಧರೆಗುರುಳಿವೆ. ದೂರದ ಪ್ರದೇಶಗಳಲ್ಲಿ ಕಟ್ಟಡಗಳ ಅವಶೇಷಗಳಡಿ ಸಿಲುಕಿರುವ ಹಲವು ಜನರ ರಕ್ಷಣೆಗೆ ಗುರುವಾರ ಕೂಡ ಕಾರ್ಯಾಚರಣೆ ಮುಂದುವರಿದಿದೆ. 

ಕಣ್ಮರೆಯಾದವರ ಪತ್ತೆಗಾಗಿ ಶೋಧ ಕಾರ್ಯ ಕೂಡ ನಡೆಯುತ್ತಿದೆ. ಅತ್ಯಂತ ಪ್ರಬಲವಾದ ಈ ಭೂಕಂಪದಲ್ಲಿ ಸತ್ತವರ ಸಂಖ್ಯೆ 10ಕ್ಕೆ ತಲುಪಿದ್ದು, ಗಾಯಾಳುಗಳ ಸಂಖ್ಯೆ 1,070ಕ್ಕೆ ಮುಟ್ಟಿದೆ.   

ಭೂಕಂಪದ ನಂತರ ಬುಧವಾರ ಬೆಳಿಗ್ಗೆಯಿಂದ ಗುರುವಾರದವರೆಗೆ 300ಕ್ಕೂ ಹೆಚ್ಚು ಬಾರಿ ಭೂಮಿ ಕಂಪಿಸಿರುವುದನ್ನು ಕೇಂದ್ರ ಹವಾಮಾನ ಆಡಳಿತವು ದಾಖಲಿಸಿದೆ.   

ಭೂಕಂಪದಿಂದ 48 ವಸತಿ ಕಟ್ಟಡಗಳು ಹಾನಿಗೊಳಗಾಗಿವೆ. ಇದರಲ್ಲಿ ಕೆಲವು ಧರೆಗೆ ವಾಲಿದ್ದು, ನೆಲಮಹಡಿಗಳು ನಜ್ಜುಗುಜ್ಜಾಗಿವೆ  ಎಂದು ಮೇಯರ್ ಹು ಚೆನ್-ವೀ ಹೇಳಿದ್ದಾರೆ.

ಭೂಕಂಪದ ಕೇಂದ್ರ ಬಿಂದುವಿದ್ದ ಪೂರ್ವ ಕರಾವಳಿ ನಗರ ಹುವಾಲಿಯನ್‌ನಲ್ಲಿನ ನಿವಾಸಿಗಳು ಟೆಂಟ್‌ಗಳಲ್ಲೇ ರಾತ್ರಿ ಕಳೆಯುತ್ತಿದ್ದಾರೆ. ರಾಜಧಾನಿ ತೈಪೆ ಸಂಪರ್ಕಿಸುವ ಮುಖ್ಯ ರಸ್ತೆಯನ್ನು ಗುರುವಾರ ಮಧ್ಯಾಹ್ನದವರೆಗೂ ಮುಚ್ಚಲಾಗಿತ್ತು. ಆದರೆ, ತೈವಾನ್‌ನ ಹೆಚ್ಚಿನ ಕಡೆಗಳಲ್ಲಿ ಜನಜೀವನವು ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ಹುವಾಲಿಯನ್‌ಗೆ ಕೆಲವು ಸ್ಥಳೀಯ ರೈಲು ಸೇವೆ ಪುನರಾರಂಭವಾಗಿದೆ. ಕಂಪ್ಯೂಟರ್ ಚಿಪ್‌ಗಳ ವಿಶ್ವದ ಪ್ರಮುಖ ತಯಾರಕರಲ್ಲಿ ಒಂದಾದ ತೈವಾನ್ ಸೆಮಿಕಂಡಕ್ಟರ್ ತಯಾರಕಾ ಕಂಪನಿ ತನ್ನ ಕಾರ್ಯಾಚರಣೆ ಪುನರಾರಂಭಿಸಿದೆ ಎಂದು ಸೆಂಟ್ರಲ್‌ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.

ಸಿಲ್ಕ್ಸ್ ಪ್ಲೇಸ್ ಟರೊಕೊ ಎಂಬ ಹೋಟೆಲ್‌ನಲ್ಲಿ ಸಿಲುಕಿರುವ 600ಕ್ಕೂ ಹೆಚ್ಚು ಜನರು ಸೇರಿ ಸುಮಾರು 700 ಮಂದಿ ಇನ್ನೂ ಪತ್ತೆಯಾಗಿಲ್ಲ ಎಂದು ರಾಷ್ಟ್ರೀಯ ಅಗ್ನಿಶಾಮಕ ಸಂಸ್ಥೆ ತಿಳಿಸಿದೆ. ಆದರೆ, ಈ ಹೋಟೆಲ್‌ ನೌಕರರು ಮತ್ತು ಅತಿಥಿಗಳು ಸುರಕ್ಷಿತವಾಗಿದ್ದಾರೆ. ಅವರ ಬಳಿ ಸಾಕಷ್ಟು ಆಹಾರ ಮತ್ತು ಕುಡಿಯುವ ನೀರು ಇದೆ. ಹೋಟೆಲ್‌ ತಲುಪುವ ರಸ್ತೆಗಳನ್ನು ದುರಸ್ತಿಪಡಿಸುವ ಕೆಲಸ ಪೂರ್ಣವಾಗುವ ಹಂತದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರೀಯ ಉದ್ಯಾನದಲ್ಲಿರುವ ಹೋಟೆಲ್‌ನಲ್ಲಿ ಸಿಲುಕಿರುವ ಸುಮಾರು 40 ಜನರು ಸಂಪರ್ಕಕ್ಕೆ ಇನ್ನು ಸಿಕ್ಕಿಲ್ಲ ಎಂದೂ ಅಧಿಕಾರಿಗಳು ಹೇಳಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT