ಕೀವ್: ಉಕ್ರೇನ್ ರಾಜಧಾನಿ ಕೀವ್‌ನಲ್ಲಿರುವ ಭಾರತೀಯರು ತಕ್ಷಣವೇ ನಗರ ತೊರೆಯುವಂತೆ ಅಲ್ಲಿನ ಭಾರತೀಯ ರಾಯಭಾರ ಕಚೇರಿ ಮಂಗಳವಾರ ಸೂಚಿಸಿದೆ.
‘ವಿದ್ಯಾರ್ಥಿಗಳೂ ಸೇರಿದಂತೆ ಎಲ್ಲ ಭಾರತೀಯರೂ ಇಂದೇ ತುರ್ತಾಗಿ ಕೀವ್ ತೊರೆಯಬೇಕು. ರೈಲುಗಳ ಮೂಲಕ ಅಥವಾ ಲಭ್ಯವಿರುವ ಇತರ ಯಾವುದೇ ವ್ಯವಸ್ಥೆಯನ್ನು ಬಳಸಿಕೊಂಡು ನಗರ ತೊರೆಯಬೇಕು’ ಎಂದು ರಾಯಭಾರ ಕಚೇರಿ ಟ್ವೀಟ್ ಮಾಡಿದೆ.
ರಷ್ಯಾ ಹಾಗೂ ಉಕ್ರೇನ್ ನಡುವೆ ಸೋಮವಾರ ನಡೆದ ಮಾತುಕತೆಯಲ್ಲಿ ಒಮ್ಮತಕ್ಕೆ ಬರುವುದು ಸಾಧ್ಯವಾಗಿಲ್ಲ. ಇದರ ಬೆನ್ನಲ್ಲೇ ರಷ್ಯಾ ದಾಳಿ ಮುಂದುವರಿಸಿದೆ. ಹಾರ್ಕಿವ್ ನಗರದ ಮೇಲೆ ಮಂಗಳವಾರ ಶೆಲ್ ದಾಳಿ ಆರಂಭಿಸಿದೆ. ರಷ್ಯಾ ಪಡೆಗಳು ರಾಜಧಾನಿ ಕೀವ್ ಸಮೀಪಿಸಿವೆ ಎಂದೂ ವರದಿಯಾಗಿದೆ.