ಕೀವ್ (ಉಕ್ರೇನ್): ರಷ್ಯಾದ ಕುರ್ಸ್‌ಕ್ ಪ್ರದೇಶದ ಮೇಲೆ ಉಕ್ರೇನ್ ಸೇನೆ ಆಕ್ರಮಣ ಕೈಗೊಂಡ ಆರು ದಿನಗಳ ಬಳಿಕ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಮೌನ ಮುರಿದಿದ್ದಾರೆ.
ಈ ಸಂಬಂಧ ಶನಿವಾರ ರಾತ್ರಿ ಪ್ರತಿಕ್ರಿಯಿಸಿರುವ ಝೆಲೆನ್‌ಸ್ಕಿ, ‘ಇದೀಗ ಯುದ್ಧವು ಆಕ್ರಮಣಕಾರರ ಪ್ರದೇಶಕ್ಕೆ ನುಗ್ಗಿದೆ’ ಎಂದು ಹೇಳುವ ಮೂಲಕ ಉಕ್ರೇನ್‌ನ ಸೇನಾ ಆಕ್ರಮಣವನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.
ಉಕ್ರೇನ್ ಪಡೆಯ ಸಹಸ್ರಾರು ಸೈನಿಕರು ರಷ್ಯಾದ ವಿರುದ್ಧದ ದಾಳಿಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಉಕ್ರೇನ್‌ನ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ರಷ್ಯಾದ ಕುರ್ಸ್‌ಕ್ ಪ್ರದೇಶದಲ್ಲಿ ಆರನೇ ದಿನವೂ ಉಕ್ರೇನ್‌ನಿಂದ ದಾಳಿ ಮುಂದುವರಿದ್ದು, ರಷ್ಯಾದ ದೌರ್ಬಲ್ಯವನ್ನು ತೋರಿಸುವುದು ಮತ್ತು ಅದನ್ನು ಅಸ್ಥಿರಗೊಳಿಸುವುದು ಉಕ್ರೇನ್‌ನ ಉದ್ದೇಶವಾಗಿದೆ ಎಂದು ಅವರು ಹೇಳಿದ್ದಾರೆ.
‘ನಾವು ಆಕ್ರಮಣಕಾರಿಯಾಗಿದ್ದು, ಶತ್ರುಗಳ ಸ್ಥಾನವನ್ನು ವಶಪಡಿಸಿಕೊಳ್ಳುತ್ತಿದ್ದೇವೆ. ಈ ಮೂಲಕ ರಷ್ಯಾಕ್ಕೆ ಗರಿಷ್ಠ ನಷ್ಟ ಉಂಟು ಮಾಡುವುದು ಹಾಗೂ ತನ್ನ ಗಡಿಯನ್ನೇ ರಕ್ಷಿಸಿಕೊಳ್ಳಲಾಗದ ರಷ್ಯಾದ ಪರಿಸ್ಥಿತಿಯನ್ನು ಇನ್ನಷ್ಟು ಅಸ್ಥಿರಗೊಳಿಸುವುದು ನಮ್ಮ ಗುರಿಯಾಗಿದೆ’ ಎಂದು ಅವರು ವಿವರಿಸಿದ್ದಾರೆ.
ಕಳೆದ ಮಂಗಳವಾರದಿಂದ ಪ್ರಾರಂಭವಾಗಿರುವ ಈ ಆಕ್ರಮಣದಲ್ಲಿ ಸಾವಿರಕ್ಕೂ ಹೆಚ್ಚು ಉಕ್ರೇನ್ ಸೈನಿಕರು ವೀರಾವೇಷದಿಂದ ಹೋರಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
‘ಉಕ್ರೇನ್ ಸೇನೆಯು ತನ್ನ ಗಡಿ ಪ್ರದೇಶಗಳ ಮೇಲೆ ನಡೆಸಿರುವ ದಾಳಿಯನ್ನು ರಷ್ಯಾದ ಪಡೆಗಳು ಸಮರ್ಥವಾಗಿ ಎದುರಿಸಲಿದ್ದು, ಕಠಿಣ ಪ್ರತಿಕ್ರಿಯೆ ನೀಡಲಿವೆ. ಇದಕ್ಕಾಗಿ ಹೆಚ್ಚು ಸಮಯ ಬೇಕಾಗುವುದಿಲ್ಲ’ ಎಂದು ರಷ್ಯಾದ ವಿದೇಶಾಂಗ ಸಚಿವಾಲಯ ಭಾನುವಾರ ಪ್ರತಿಕ್ರಿಯಿಸಿದೆ.
ರಷ್ಯಾದ ಕುರ್ಸ್‌ಕ್, ವೊರೊನೆಜ್, ಬೆಲ್ಗೊರೊಡ್, ಬ್ರಿಯಾನ್ಸ್‌ಕ್ ಮತ್ತು ಓರಿಯೊಲ್ ಪ್ರದೇಶಗಳಲ್ಲಿ ರಾತ್ರಿಯಿಡಿ 35 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.
ಉಕ್ರೇನ್‌ನ ಕ್ಷಿಪಣಿಯೊಂದನ್ನು ಹೊಡೆದುರುಳಿಸಿದಾಗ ಅದರ ಅವಶೇಷಗಳು ವಸತಿಗೃಹದ ಮೇಲೆ ಬಿದ್ದ ಪರಿಣಾಮ 13 ಜನರಿಗೆ ಗಾಯಗಳಾಗಿವೆ ಎಂದು ರಷ್ಯಾದ ಕುರ್ಸ್‌ಕ್‌ನ ಪ್ರಾದೇಶಿಕ ಗವರ್ನರ್ ಹೇಳಿದ್ದಾರೆ.
ಆದರೆ, ರಷ್ಯಾದ ಮೇಲೆ ಭಾನುವಾರ ನಡೆದ ಡ್ರೋನ್ ದಾಳಿಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದ ಉಕ್ರೇನ್, ‘ಕೀವ್ ಮೇಲೆ ರಷ್ಯಾ ನಡೆಸಿದ ಡ್ರೋನ್ ಮತ್ತು ಕ್ಷಿಪಣಿ ದಾಳಿಯಿಂದ ನಾಲ್ಕು ವರ್ಷದ ಬಾಲಕ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ’ ಎಂದು ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.