ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಂಗೆ ಎದ್ದಿದ್ದ ಪ್ರಿಗೋಷಿನ್ ನಿಧನಕ್ಕೆ 'ಪ್ರಾಮಾಣಿಕ ಸಂತಾಪ' ಸೂಚಿಸಿದ ಪುಟಿನ್

Published 25 ಆಗಸ್ಟ್ 2023, 6:19 IST
Last Updated 25 ಆಗಸ್ಟ್ 2023, 6:19 IST
ಅಕ್ಷರ ಗಾತ್ರ

ಮಾಸ್ಕೊ: ಸೇನೆಯ ವಿರುದ್ಧ ದಂಗೆ ಎದ್ದಿದ್ದ ಖಾಸಗಿ ಸೇನಾ ಗುಂಪು 'ವ್ಯಾಗ್ನರ್‌' ಮುಖ್ಯಸ್ಥ ಯೆವ್ಗೆನಿ ಪ್ರಿಗೋಷಿನ್‌ ನಿಧನಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ಸಂತಾಪ ಸೂಚಿಸಿದ್ದಾರೆ.

ರಷ್ಯಾದ ಟಿವೆರ್‌ ಪ್ರದೇಶದಲ್ಲಿ ಬುಧವಾರ ಖಾಸಗಿ ವಿಮಾನವೊಂದು ಅಪಘಾತಕ್ಕೀಡಾಗಿ ಮೂವರು ಸಿಬ್ಬಂದಿ ಸೇರಿ  10 ಮಂದಿ ಮೃತ ಪಟ್ಟಿದ್ದಾರೆ. ಪ್ರಿಗೋಷಿನ್‌ ಹೆಸರು ಮೃತರ ಪಟ್ಟಿಯಲ್ಲಿದೆ ಎಂದು ದೇಶದ ಸರ್ಕಾರಿ ಸುದ್ದಿ ಸಂಸ್ಥೆಗಳು ವರದಿ ಮಾಡಿದ್ದವು.

ಉಕ್ರೇನ್‌ನ ಡೊನೆಟ್‌ಸ್ಕ್‌ ಪ್ರಾಂತ್ಯದಲ್ಲಿ ರಷ್ಯಾ ನೇಮಿಸಿರುವ ಸೇನಾ ಮುಖ್ಯಸ್ಥರೊಂದಿಗೆ ತಮ್ಮ ಅಧಿಕೃತ ನಿವಾಸ ಕ್ರಮ್ಲಿನ್‌ನಲ್ಲಿ ಸಭೆ ನಡೆಸಿದ ಪುಟಿನ್‌, 'ವೈಮಾನಿಕ ದುರಂತಕ್ಕೆ ಸಂಬಂಧಿಸಿದಂತೆ ಮೊದಲಿಗೆ ಸಂತ್ರಸ್ತರ ಕುಟುಂಬದವರಿಗೆ  ಅತ್ಯಂತ ಪ್ರಾಮಾಣಿಕವಾಗಿ ಸಂತಾಪ ವ್ಯಕ್ತಪಡಿಸಲು ಬಯಸುತ್ತೇನೆ' ಎಂದು ಹೇಳಿದ್ದಾರೆ.

'ವ್ಯಾಗ್ನರ್ ಗುಂಪಿನ ಸಿಬ್ಬಂದಿ ಉಕ್ರೇನ್‌ನಲ್ಲಿ ನವ–ನಾಜಿ ಆಡಳಿತದ ವಿರುದ್ಧ ನಮ್ಮ ಸೇನೆ ನಡೆಸುತ್ತಿರುವ ಕಾರ್ಯಾಚರಣೆಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂಬುದನ್ನು ಉಲ್ಲೇಖಿಸುತ್ತೇನೆ. ಅದನ್ನು ನಾವು ಎಂದಿಗೂ ಮರೆಯುವುದಿಲ್ಲ' ಎಂದಿದ್ದಾರೆ.

ಪ್ರಿಗೋಷಿನ್‌ ನೇತೃತ್ವದ ಖಾಸಗಿ ಸೇನೆ, ರಷ್ಯಾ ಸೇನಾ ನಾಯಕತ್ವದ ವಿರುದ್ಧ ದಂಗೆ ಎದ್ದಿದ್ದ ಎರಡು ತಿಂಗಳಲ್ಲೇ ವಿಮಾನ ಪತನ ದುರಂತ ಸಂಭವಿಸಿದೆ. 'ದಂಗೆಯ ವಿರುದ್ಧ ಕಿಡಿಕಾರಿದ್ದ ವ್ಯಾಗ್ನರ್‌ ಗುಂಪು ಬೆನ್ನಿಗೆ ಚೂರಿ ಹಾಕಿದೆ. ಪ್ರಿಗೋಷಿನ್‌ ದೇಶಕ್ಕೆ ಮೋಸಮಾಡಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಪ್ರಿಗೋಷಿನ್‌ ಶಿಕ್ಷೆಗೊಳಗಾಗಿದ್ದ ಅಪರಾಧಿ. ಬಳಿಕ ಕೇಟರಿಂಗ್ ಉದ್ಯಮದಲ್ಲಿ ಯಶಸ್ಸು ಸಾಧಿಸಿ ನಂತರ ಖಾಸಗಿ ಸೇನೆ ಆರಂಭಿಸಿದ್ದ. ಆತನ ಬಗ್ಗೆ 1990 ದಶಕದಿಂದಲೂ ತಿಳಿದಿತ್ತು ಎಂದು ಪುಟಿನ್‌ ನೆನಪಿಸಿಕೊಂಡಿದ್ದಾರೆ.

'ಆತ (ಪ್ರಿಗೋಷಿನ್‌) ಪ್ರತಿಭಾವಂತ ವ್ಯಕ್ತಿ. ಪ್ರತಿಭಾನ್ವಿತ ಉದ್ಯಮಿ. ಆತ ದೇಶದಲ್ಲಿ ಮಾತ್ರವೇ ಕೆಲಸ ಮಾಡಿಲ್ಲ. ಬದಲಾಗಿ ವಿದೇಶಗಳಲ್ಲಿಯೂ.. ವಿಶೇಷವಾಗಿ ಆಫ್ರಿಕಾದಲ್ಲಿ ಸಾಧನೆ ಮಾಡಿದ್ದಾನೆ' ಎಂದು ಹೇಳಿದ್ದಾರೆ.

ಯಾರು ಈ ಪ್ರಿಗೋಷಿನ್?
1961ರಲ್ಲಿ ಸೋವಿಯತ್ ಯೂನಿಯನ್‌ನ ಲೆನಿನ್‌ಗ್ರಾಡ್‌ನಲ್ಲಿ (ಈಗಿನ ಸೇಂಟ್‌ಪೀಟರ್ಸ್‌ಬರ್ಗ್) ಜನಿಸಿದ್ದ ಪ್ರಿಗೋಷಿನ್ ಬಾಲ್ಯದಿಂದಲೂ ತುಂಬಾ ಆಕ್ರಮಣಕಾರಿ. ಬಾಲಕನಾಗಿದ್ದಾಗಲೇ ಸ್ಥಳೀಯ ಮಾಫಿಯಾದವರ ಜೊತೆ ಸೇರಿ ಭಾರಿ ಪ್ರಮಾಣದ ಹಣ ದರೋಡೆ ಮಾಡಿದ್ದ. ಈ ಅಪರಾಧಕ್ಕಾಗಿ ಆತನನ್ನು 9 ವರ್ಷ ಬಾಲ ಮಂದಿರದಲ್ಲಿ ಇರಿಸಲಾಗಿತ್ತು.

ಅಲ್ಲಿಂದ ಬಿಡುಗಡೆಯಾಗಿ ಬಂದ ನಂತರ ಸೇಂಟ್‌ಪೀಟರ್ಸ್‌ಬರ್ಗ್‌ನಲ್ಲಿ ಹೋಟೆಲ್ ಉದ್ಯಮ ಆರಂಭಿಸಿದ ಪ್ರಿಗೋಷಿನ್ ಕೆಲವೇ ದಿನಗಳಲ್ಲಿ ನಗರದ ಹೋಟೆಲ್ ಉದ್ಯಮವನ್ನು ನಿಯಂತ್ರಣಕ್ಕೆ ತೆಗೆದುಕೊಂಡ. 2004ರಿಂದ ಮಿಲಿಟರಿ ಸಿಬ್ಬಂದಿಗೆ ಹಾಗೂ ಸರ್ಕಾರಿ ಅಧಿಕಾರಿಗಳಿಗೆ, ಕಚೇರಿಗಳಿಗೆ ಆಹಾರ ಪೂರೈಕೆ ಮಾಡುವ ಕೇಟರಿಂಗ್ ಉದ್ಯಮ ಶುರು ಮಾಡಿದ್ದ.

ಅಲ್ಲಿಂದ ಪುಟಿನ್ ಸಾಂಗತ್ಯ ಬೆಳೆಸಿಕೊಂಡು ಕ್ರಮೇಣ ಅವರಿಗೆ ಆಪ್ತ ಆಗುತ್ತಾ ಬಂದಿದ್ದ. 2014ರಲ್ಲಿ ಪುಟಿನ್‌ ಅವರನ್ನು ಪುಸಲಾಯಿಸಿ 'ವ್ಯಾಗ್ನರ್‌' ಎಂಬ ಖಾಸಗಿ ಸೇನಾಪಡೆಯನ್ನು ಅಸ್ತಿತ್ವಕ್ಕೆ ತಂದ. ಪ್ರಿಗೋಷಿನ್‌ನಲ್ಲಿದ್ದ ಆಕ್ರಮಣಕಾರಿ ಗುಣವನ್ನು ಕಂಡಿದ್ದ ಪುಟಿನ್ ಅದಕ್ಕೆ ಬೆಂಬಲ ನೀಡುತ್ತಾ ಬಂದರು.

ಪುಟಿನ್ ಬೆಂಬಲದಿಂದ ಸೇಂಟ್‌ಪೀಟರ್ಸ್‌ಬರ್ಗ್ ಮೇಯರ್ ಆಗಿದ್ದ ಪ್ರಿಗೋಷಿನ್ ಹಣಕಾಸು ದೃಷ್ಟಿಯಿಂದಲೂ ಸಾಕಷ್ಟು ಪ್ರಭಾವಶಾಲಿಯಾಗಿ ಬೆಳೆದ.

ರಷ್ಯಾ ಸೇನೆ 2022ರ ಫೆಬ್ರವರಿಯಲ್ಲಿ ಉಕ್ರೇನ್ ಮೇಲೆ ಆಕ್ರಮಣ ಆರಂಭಿಸಿತು. ರಷ್ಯಾ ದಾಳಿಗೆ ಉಕ್ರೇನ್ ಜಗ್ಗಲಿಲ್ಲ. ಪುಟಿನ್‌ ನಡೆಗೆ ವ್ಯಾಪಕ ಟೀಕೆಗಳು ಕೇಳಿಬಂದವು. ಇದರಿಂದ ಬೆದರಿದ ಪುಟಿನ್, ರಷ್ಯಾದಲ್ಲಿದ್ದುಕೊಂಡು ಉಕ್ರೇನ್ ಬೆಂಬಲಿಸುವರನ್ನು ಬಗ್ಗುಬಡಿಯಲು ಹಾಗೂ ಉಕ್ರೇನ್‌ ಹೋರಾಟದಲ್ಲಿ ಸೇನೆಗೆ ಸಹಾಯ ಮಾಡಲು ಈ 'ವ್ಯಾಗ್ನರ್‌' ಪಡೆಗೆ ಹಸಿರು ನಿಶಾನೆ ತೋರಿದರು.

ಈ ನಡುವೆ ರಷ್ಯಾ ಅಧ್ಯಕ್ಷರ ವಿರೋಧಿಗಳನ್ನು, ಸರ್ಕಾರದ ವಿರೋಧಿಗಳನ್ನು ಹಾಗೂ ಅಮೆರಿಕವನ್ನು ಕಟುವಾಗಿ ಟ್ರೋಲ್ ಮಾಡಲು ಇಂಟರ್‌ನೆಟ್ ರಿಸರ್ಚ್ ಏಜನ್ಸಿ (ಐಆರ್‌ಎ) ಎಂಬ ಸಂಸ್ಥೆಯನ್ನೂ ಸ್ಥಾಪಿಸಿದ್ದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT