ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನದ ಪ್ರಧಾನಿಯಾಗಿ 2ನೇ ಬಾರಿಗೆ ಶೆಹಬಾಜ್ ಷರೀಫ್ ಆಯ್ಕೆ

Published 3 ಮಾರ್ಚ್ 2024, 10:33 IST
Last Updated 3 ಮಾರ್ಚ್ 2024, 10:33 IST
ಅಕ್ಷರ ಗಾತ್ರ

ಇಸ್ಲಾಮಾಬಾದ್: ಪಾಕಿಸ್ತಾನದ ಸಮ್ಮಿಶ್ರ ಸರ್ಕಾರದ ಪ್ರಧಾನಿಯಾಗಿ 2ನೇ ಬಾರಿಗೆ ಶೆಹಬಾಜ್ ಷರೀಫ್ ಆಯ್ಕೆಯಾಗಿದ್ದಾರೆ. ಸಂಸತ್ತಿನಲ್ಲಿ ಷರೀಫ್ ಅವರಿಗೆ ಸ್ಪಷ್ಟ ಬಹುಮತ ಸಿಕ್ಕಿದೆ.

ವಿರೋಧ ಪಕ್ಷಗಳ ಘೋಷಣೆ ನಡುವೆ, ಪಾಕಿಸ್ತಾನ ಮುಸ್ಲಿಂ ಲೀಗ್–ನವಾಜ್(ಪಿಎಂಎಲ್‌–ಎನ್), ಪಾಕಿಸ್ತಾನ ಪೀಪಲ್ಸ್ ಪಕ್ಷದ(ಪಿಪಿಪಿ) ಪಕ್ಷಗಳ ಒಮ್ಮತದ ಪ್ರಧಾನಿಯಾಗಿ 72 ವರ್ಷದ ಶೆಹಬಾಜ್ ಷರೀಫ್ ಆಯ್ಕೆಯಾಗಿದ್ದಾರೆ. 336 ಸದಸ್ಯರ ಸಂಸತ್ತಿನಲ್ಲಿ ಶೆಹಬಾಜ್ ಪರ 201 ಮತಗಳು ಬಿದ್ದಿದ್ದು, ಇದು ಅಗತ್ಯಕ್ಕಿಂತ 32 ಹೆಚ್ಚಾಗಿದೆ.

ಶೆಹಬಾಜ್ ಪ್ರತಿಸ್ಪರ್ಧಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ ತೆಹ್ರೀಕ್ ಇ ಇನ್‌ಸಾಫ್(ಪಿಟಿಐ) ಪಕ್ಷದ ಪ್ರಧಾನಿ ಅಭ್ಯರ್ಥಿ ಓಮರ್ ಅಯೂಬ್ ಖಾನ್ ಅವರಿಗೆ ಕೇವಲ 92 ಮತಗಳು ಬಿದ್ದಿವೆ.

ಶೆಹಬಾಜ್ ಅವರನ್ನು ಪಾಕಿಸ್ತಾನದ 24ನೇ ಪ್ರಧಾನಿಯಾಗಿ ನೇಮಕ ಮಾಡಿ, ರಾಷ್ಟ್ರೀಯ ಸಂಸತ್ತಿನ ಸ್ಪೀಕರ್ ಸರ್ದಾರ್ ಅಯಾಜ್ ಸಾದಿಕ್ ಫಲಿತಾಂಶ ಪ್ರಕಟಿಸಿದ್ದಾರೆ. ಸೋಮವಾರ ಶೆಹಬಾಜ್ ಅವರಿಗೆ ಪ್ರಮಾಣ ವಚನ ಬೋಧಿಸಲಾಗುತ್ತದೆ.

ಪಿಟಿಐ ಬೆಂಬಲಿತ ಸಂಸದರ ಘೋಷಣೆಗಳು ಮತ್ತು ಗದ್ದಲದ ನಡುವೆ ನೂತನ ಸಂಸತ್ತಿನ ಕಲಾಪ ಆರಂಭವಾಗಿತ್ತು.

ಕೆಲವರು ಆಜಾದಿ ಎಂದು ಘೋಷಣೆ ಕೂಗಿದರೆ, ಮತ್ತೆ ಕೆಲವರು ಇಮ್ರಾನ್ ಖಾನ್ ಚಿತ್ರವಿದ್ದ ಭಿತ್ತಿ ಪತ್ರ ಹಿಡಿದಿದ್ದರು.

ಇದಕ್ಕೆ ಪ್ರತಿಯಾಗಿ ಪಿಎಂಎಲ್‌–ಎನ್‌ ಸದಸ್ಯರು, ‘ನವಾಜ್‌ ದೀರ್ಘಕಾಲ ಬಾಳಲಿ’ ಎಂದು ಘೋಷಣೆಗಳನ್ನು ಕೂಗಿದರು. ಕೆಲವರು ವಿರೋಧ ಪಕ್ಷಗಳ ಸದಸ್ಯರತ್ತ ಕೈಗಡಿಯಾರಗಳನ್ನು ತೋರಿಸಿ, ಖಾನ್‌ ವಿರುದ್ಧದ ‘ತೋಷಖಾನ’ ಭ್ರಷ್ಟಾಚಾರ ಪ್ರಕರಣವನ್ನು ಉಲ್ಲೇಖಿಸಿದರು.

ಫೆಬ್ರುವರಿ 8ರಂದು ನಡೆದ ಚುನಾವಣೆಯಲ್ಲಿ ಷರೀಫ್‌ ನೇತೃತ್ವದ ಪಕ್ಷವು ಸ್ಪಷ್ಟ ಬಹುಮತ ಗಳಿಸಲು ವಿಫಲವಾಗಿತ್ತು. ಆದರೂ 265 ಕ್ಷೇತ್ರಗಳ ಪೈಕಿ 75ರಲ್ಲಿ ಗೆಲ್ಲುವ ಮೂಲಕ ಅದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.

ಶೆಹಬಾಜ್‌ ಅವರನ್ನು ಪಿಪಿಪಿ ಜತೆಗೆ, ಮುತ್ತಹಿದಾ ಕ್ವಾಮಿ ಮೂವ್‌ಮೆಂಟ್‌ (ಎಂಒಎಂಪಿ), ಪಾಕಿಸ್ತಾನ ಮುಸ್ಲಿಂ ಲೀಗ್‌ (ಕ್ಯೂ), ಬಲೂಚಿಸ್ತಾನ ಅವಾಮಿ ಪಾರ್ಟಿ, ಪಾಕಿಸ್ತಾನ ಮುಸ್ಲಿಂ ಲೀಗ್‌ (ಜಡ್‌), ಇಸ್ತೇಕಾಂ–ಎ–ಪಾಕಿಸ್ತಾನ ಪಾರ್ಟಿ ಮತ್ತು ನ್ಯಾಷನಲ್‌ ಪಾರ್ಟಿಗಳು ಬೆಂಬಲಿಸಿವೆ. ತನ್ನ ಮೇಲೆ ವಿಶ್ವಾಸವಿಟ್ಟು ಸದನದ ನಾಯಕನನ್ನಾಗಿ ಮಾಡಿದ್ದಕ್ಕಾಗಿ ಶೆಹಬಾಜ್‌ ಅವರು ಸಮ್ಮಿಶ್ರ ಸರ್ಕಾರದ ಎಲ್ಲ ಮಿತ್ರ ಪಕ್ಷಗಳಿಗೆ ಕೃತಜ್ಞತೆ ಸಲ್ಲಿಸಿದರು.

ಕಾಶ್ಮೀರಿಗಳ ಸ್ವಾತಂತ್ರ್ಯಕ್ಕೆ ನಿರ್ಣಯ: ಶೆಹಬಾಜ್‌ ಇಸ್ಲಾಮಾಬಾದ್‌ (ಪಿಟಿಐ): ಪ್ರಧಾನಿಯಾಗಿ ಆಯ್ಕೆಯಾದ ಶೆಹಬಾಜ್‌ ಅವರು ತಮ್ಮ ಮೊದಲ ಭಾಷಣದಲ್ಲಿಯೇ ಕಾಶ್ಮೀರ ಸಮಸ್ಯೆಯನ್ನು ‌ಪ್ಯಾಲೆಸ್ಟೀನ್‌ ಸಮಸ್ಯೆ ಜತೆ ಸಮೀಕರಿಸಿ ಮಾತನಾಡಿದರು. ‘ನಾವೆಲ್ಲರೂ ಒಗ್ಗೂಡಿ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಕಾಶ್ಮೀರಿಗಳು ಮತ್ತು ಪ್ಯಾಲೆಸ್ಟೀನಿಯನ್ನರ ಸ್ವಾತಂತ್ರ್ಯಕ್ಕಾಗಿ ನಿರ್ಣಯ ಅಂಗೀಕರಿಸಬೇಕು’ ಎಂದು ಪ್ರತಿಪಾದಿಸಿದರು. ಮುಂದುವರಿದು ದೇಶದ ನೆರೆಹೊರೆಯವರೂ ಸೇರಿದಂತೆ ಎಲ್ಲ ಪ್ರಮುಖ ದೇಶಗಳೊಂದಿಗೆ ಬಾಂಧವ್ಯ ಸುಧಾರಿಸಲು ಪ್ರಯತ್ನಿಸುವುದಾಗಿ ವಾಗ್ದಾನ ಮಾಡಿದರು. ‘ನಮ್ಮ ನಾಯಕರಾದ ನವಾಜ್‌ ಅವರು ಮೂರು ಬಾರಿ ಪ್ರಧಾನಿಯಾಗಿ ಆಯ್ಕೆಯಾದಾಗ ದೇಶ ಬಹಳ ಪ್ರಗತಿ ಕಂಡಿತ್ತು. ಹೀಗಾಗಿ ಪಾಕಿಸ್ತಾನವನ್ನು ಕಟ್ಟಿದವರು ನವಾಜ್‌ ಷರೀಫ್‌ ಎಂದರೆ ತಪ್ಪಾಗದು’ ಎಂದು ಅವರು ಹೇಳಿದರು. ‘ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಬೇಕಾದ ದೊಡ್ಡ ಸವಾಲು ನಮ್ಮ ಮುಂದಿದೆ. ದೇಶವು ಕೋಟ್ಯಂತರ ರೂಪಾಯಿಗಳನ್ನು ಬಡ್ಡಿಗಾಗಿಯೇ ವ್ಯಯ ಮಾಡುತ್ತಿದೆ. ಇಂಧನ ಮತ್ತು ವಿಮಾನಯಾನ ಕ್ಷೇತ್ರಗಳೂ ಸಾಲದಿಂದಾಗಿ ಕುಸಿಯುತ್ತಿವೆ’ ಎಂದು ಅವರು ಉಲ್ಲೇಖಿಸಿದರು. ‘ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಇರುವ ಎಲ್ಲ ಅಡೆತಡೆಗಳನ್ನೂ ನಿವಾರಿಸಲು ಶ್ರಮಿಸುತ್ತೇನೆ. ಹೆಚ್ಚಿನ ಹೂಡಿಕೆ ತಂದು ಆರ್ಥಿಕ ಪ್ರಗತಿಯನ್ನು ಉತ್ತೇಜಿಸಲು ಕ್ರಮಗಳನ್ನು ಕೈಗೊಳ್ಳುತ್ತೇನೆ’ ಎಂದು ಅವರು ಘೋಷಿಸಿದರು. ಅಲ್ಲದೆ ಪಾಕಿಸ್ತಾನವನ್ನು ಸ್ವಾವಲಂಬಿಯನ್ನಾಗಿಸುವ ಪ್ರತಿಜ್ಞೆಯನ್ನೂ ಅವರು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT