ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಿ ಮಾಂಸಕ್ಕೆ ನಿಷೇಧ ಹೇರಲು ದಕ್ಷಿಣ ಕೊರಿಯಾ ಸಿದ್ಧತೆ: ಪ್ರಾಣಿ ಪ್ರಿಯರ ಹರ್ಷ

Published 17 ನವೆಂಬರ್ 2023, 13:01 IST
Last Updated 17 ನವೆಂಬರ್ 2023, 13:01 IST
ಅಕ್ಷರ ಗಾತ್ರ

ಸಿಯೋಲ್: ನಾಯಿ ಮಾಂಸ ಭಕ್ಷಿಸುವುದನ್ನು ನಿಷೇಧಿಸಲು ಉದ್ದೇಶಿಸಿರುವ ದಕ್ಷಿಣ ಕೊರಿಯಾ, ಪ್ರಾಣಿಗಳ ಹಕ್ಕುಗಳ ಕುರಿತು ಹೆಚ್ಚುತ್ತಿರುವ ಕಾಳಜಿಗಾಗಿ ಪ್ರಾಚೀನ ಪದ್ಧತಿಯನ್ನು ಕೈಬಿಡಲು ಮುಂದಾಗಿದೆ.

ಆಡಳಿತರೂಢ ಪಕ್ಷದ ನೀತಿ ಆಯೋಗದ ಮುಖ್ಯಸ್ಥ ಯು ಇಯು ಡಾಂಗ್‌ ಅವರು ಈ ವಿಷಯವನ್ನು ಶುಕ್ರವಾರ ತಿಳಿಸಿದ್ದು, ದಕ್ಷಿಣ ಕೊರಿಯಾದ ಜನ ನಾಯಿ ಮಾಂಸ ತಿನ್ನುವುದಕ್ಕೆ ಜಾಗತಿಕ ಮಟ್ಟದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಜತೆಗೆ ದೇಶದೊಳಗೂ ಯುವ ಸಮುದಾಯ ಸೇರಿದಂತೆ ಹಲವರು ಪ್ರಾಣಿ ಮೇಲಿನ ಈ ಕ್ರೌರ್ಯವನ್ನು ವಿರೋಧಿಸಿದ್ದಾರೆ. ಈ ನಿಟ್ಟಿನಲ್ಲಿ ನಾಯಿ ಮಾಂಸ ಕುರಿತು ಎದ್ದಿರುವ ವಿವಾದಕ್ಕೆ ಶಾಶ್ವತ ತೆರೆ ಎಳೆಯಲು ಸರ್ಕಾರ ಮುಂದಾಗಿದೆ’ ಎಂದಿದ್ದಾರೆ.

‘ನಾಯಿ ಮಾಂಸ ನಿಷೇಧಿಸುವ ಕುರಿತ ಮಸೂದೆಯನ್ನು ಈ ವರ್ಷಾಂತ್ಯದೊಳಗೆ ಮಂಡಿಸಲಾಗುವುದು. ಸಂಸತ್ತಿನಲ್ಲಿ ಇದಕ್ಕೆ ಬೆಂಬಲ ಸಿಗುವ ವಿಶ್ವಾಸವಿದೆ’ ಎಂದಿದ್ದಾರೆ.

ಕೃಷಿ ಸಚಿವ ಚಾಂಗ್‌ ಹ್ವಾಂಗ್‌ ಕ್ಯೂನ್ ಅವರು ಮಾಹಿತಿ ನೀಡಿ, ‘ನಾಯಿ ಮಾಂಸದ ಮೇಲಿನ ನಿಷೇಧವನ್ನು ತ್ವರಿತವಾಗಿ ಜಾರಿಗೊಳಿಸಲಾಗುವುದು. ಜತೆಗೆ ನಾಯಿ ಮಾಂಸ ಮಾರಾಟ ಉದ್ಯಮದಲ್ಲಿರುವವರಿಗೆ ಅಗತ್ಯ ನೆರವು ನೀಡಲಾಗುವುದು’ ಎಂದು ಭರವಸೆ ನೀಡಿದ್ದಾರೆ.

ಬೀದಿ ನಾಯಿಗಳನ್ನು ಸಾಕಿರುವ ದೇಶದ ಪ್ರಥಮ ಮಹಿಳೆ ಕಿಮ್ ಕೋನ್‌ ಹೀ ಅವರು ನಾಯಿ ಮಾಂಸ ಭಕ್ಷಣೆಯನ್ನು ವಿರೋಧಿಸಿದ್ದರು. ಇದಕ್ಕೆ ಅಧ್ಯಕ್ಷ ಯೋನ್ ಸುಕ್ ಯೂಲ್ ಅವರೂ ಬೆಂಬಲ ವ್ಯಕ್ತಪಡಿಸಿದ್ದರು. 

ನಾಯಿ ಮಾಂಸ ಮಾರಾಟ ನಿಷೇಧ ಪ್ರಯತ್ನ ಈ ಹಿಂದೆಯೂ ದಕ್ಷಿಣ ಕೊರಿಯಾದಲ್ಲಿ ನಡೆದಿತ್ತು. ಆದರೆ ಸಾರ್ವಜನಿಕ ವಲಯದಲ್ಲಿ ಮತ್ತು ಉದ್ಯಮದಿಂದ ವ್ಯಕ್ತವಾದ ತೀವ್ರ ವಿರೋಧದಿಂದಾಗಿ ಮಸೂದೆ ಬಿದ್ದು ಹೋಯಿತು. ಹೋಟೆಲ್ ಮಾಲೀಕರು ಹಾಗೂ ರೈತರ ಬದುಕಿನ ಪ್ರಶ್ನೆ ಎಂದು ಕೊರಿಯಾದ ಜನ ಆಕ್ರೋಶ ವ್ಯಕ್ತಪಡಿಸಿ, ನಾಯಿ ಮಾಂಸ ನಿಷೇಧವನ್ನು ವಿರೋಧಿಸಿದ್ದರು.

ಕೊರಿಯಾದಲ್ಲಿ ಬೇಸಿಗೆಯ ಸೆಕೆಯನ್ನು ತಡೆದುಕೊಳ್ಳಲು ಪ್ರಾಚೀನ ಕಾಲದಿಂದ ನಾಯಿ ಮಾಂಸ ತಿನ್ನುವ ಪದ್ಧತಿ ಬೆಳೆದುಬಂದಿದೆ. ಆದರೆ ದಕ್ಷಿಣ ಕೊರಿಯಾದಲ್ಲಿ ಈ ಪದ್ಧತಿ ಕಡಿಮೆ. ಕೆಲವು ಹಿರಿಯರು ಮಾತ್ರ ನಾಯಿ ಮಾಂಸ ತಿನ್ನುತ್ತಾರೆ. ಜತೆಗೆ ಕೆಲವೇ ಕೆಲವು ಹೋಟೆಲುಗಳು ಇದರ ಖಾದ್ಯವನ್ನು ಸಿದ್ಧಪಡಿಸುತ್ತವೆ ಎಂದು ವರದಿಯಾಗಿದೆ.

ಸದ್ಯ ಮಂಡಿಸಲಾಗುತ್ತಿರುವ ಮಸೂದೆಯಲ್ಲಿ ನಾಯಿ ಮಾಂಸ ಮಾರಾಟದಲ್ಲಿರುವ ಉದ್ಯಮಿಗಳಿಗೆ ಮೂರು ವರ್ಷಗಳವರೆಗೆ ಆರ್ಥಿಕ ಬೆಂಬಲ ನೀಡುವುದೂ ಒಳಗೊಂಡಿದೆ. 

ಸರ್ಕಾರದ ಈ ಕ್ರಮವನ್ನು ಸ್ವಾಗತಿಸಿರುವ ಪ್ರಾಣಿ ಹಕ್ಕುಗಳ ಸಂಘಟನೆಗಳು, ‘ಈ ಕ್ರೌರ್ಯವನ್ನು ಕೊನೆಗಾಣಿಸಲು ನಡೆಸಿದ ಹೋರಾಟದ ಫಲವಾಗಿ ಈಗ ಕನಸೊಂದು ನನಸಾಗುತ್ತಿದೆ’ ಎಂದಿವೆ.

ದಕ್ಷಿಣ ಕೊರಿಯಾದಲ್ಲಿ ನಾಯಿ ಮಾಂಸಕ್ಕಾಗಿಯೇ 1,150 ಸಾಕುತಾಣಗಳಿವೆ. 34 ಕಸಾಯಿಖಾನೆಗಳಿವೆ. 219 ವಿತರಣಾ ಕಂಪನಿಗಳಿವೆ. ಸುಮಾರು 1600 ಹೋಟೆಲುಗಳು ನಾಯಿ ಮಾಂಸದ ಖಾದ್ಯವನ್ನು ಬಡಿಸುತ್ತವೆ ಎಂದು ಸರ್ಕಾರಿ ದಾಖಲೆ ಹೇಳುತ್ತದೆ.

ಕಳೆದ ವರ್ಷ ಕೊರಿಯಾದಲ್ಲಿ ನಡೆದ ಅಭಿಯಾನದಲ್ಲಿ ಶೇ 64ರಷ್ಟು ಜನ ನಾಯಿ ಮಾಂಸ ಭಕ್ಷಣೆಯನ್ನು ವಿರೋಧಿಸಿದ್ದರು. ಶೇ 8ರಷ್ಟು ಜನ ನಾಯಿ ಮಾಂಸ ತಿನ್ನುವವರು ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT