ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೈಸ್ಟ್‌ಚರ್ಚ್‌ ಗುಂಡಿನ ದಾಳಿಗೆ ಪ್ರತಿಕಾರವಾಗಿ ಶ್ರೀಲಂಕಾದಲ್ಲಿ ಬಾಂಬ್‌ ದಾಳಿ

ನ್ಯೂಜಿಲೆಂಡ್‌ನ ಕ್ರೈಸ್ಟ್‌ಚರ್ಚ್‌ನಲ್ಲಿನ ಮಸೀದಿ ಮೇಲೆ ನಡೆದ ದಾಳಿಗೆ ಪ್ರತಿದಾಳಿ
Last Updated 23 ಏಪ್ರಿಲ್ 2019, 11:20 IST
ಅಕ್ಷರ ಗಾತ್ರ

ಕೊಲಂಬೊ: ‘ಈಸ್ಟರ್‌ ದಿನ ಶ್ರೀಲಂಕಾದ ಚರ್ಚ್‌ಗಳು ಮತ್ತು ಐಷಾರಾಮಿ ಹೋಟೆಲುಗಳನ್ನು ಗುರಿಯಾಗಿಸಿಕೊಂಡು ನಡೆದ ಸರಣಿ ಬಾಂಬ್‌ ಸ್ಫೋಟವು, ನ್ಯೂಜಿಲೆಂಡ್‌ನಲ್ಲಿ ಮಸೀದಿ ಮೇಲೆ ನಡೆದ ದಾಳಿಯ ಸೇಡಿಗಾಗಿ ನಡೆಸಿರುವ ಕೃತ್ಯ’ ಎಂದು ರಕ್ಷಣಾ ಸಚಿವ ರುವಾನ್‌ ವಿಜೆವರ್ದನೆ ಮಂಗಳವಾರ ಸಂಸತ್ತಿಗೆ ಮಾಹಿತಿ ನೀಡಿದ್ದಾರೆ.

‘ನ್ಯೂಜಿಲೆಂಡ್‌ನ ಕ್ರೈಸ್ಟ್‌ಚರ್ಚ್‌ನಲ್ಲಿ ಮಸೀದಿ ಮೇಲೆ ನಡೆಸಿದ ದಾಳಿಗೆ ಪ್ರತಿಯಾಗಿ, ಶ್ರೀಲಂಕಾದ ಸ್ಥಳೀಯ ಇಸ್ಲಾಮಿಕ್‌ ಉಗ್ರಗಾಮಿಗಳು ಈ ಬಾಂಬ್‌ ಸ್ಫೋಟ ನಡೆಸಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

ಕ್ರೈಸ್ಟ್‌ಚರ್ಚ್‌ನ ಎರಡು ಮಸೀದಿ ಮೇಲೆ ಮಾರ್ಚ್‌ 15ರಂದು ಉಗ್ರನೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ 50 ಮಂದಿ ಅಸುನೀಗಿದ್ದರು.

‘ದಾಳಿಯಲ್ಲಿ ನ್ಯಾಷನಲ್‌ ಥೌಫೀಕ್‌ ಜಮಾತ್‌ (ಎನ್‌ಟಿಜೆ) ಈ ಸರಣಿ ಸ್ಫೋಟ ನಡೆಸಿರುವ ಶಂಕೆ ಇದೆ’ ಎಂದಿರುವ ವಿಜೆವರ್ದನೆ, ಈ ಸಂಘಟನೆಯನ್ನು ನಿಷೇಧಿಸುವ ಪ್ರಸ್ತಾವವನ್ನು ಸಂಸತ್ತಿನ ಮುಂದಿಟ್ಟರು.

‘ದಾಳಿ ನಡೆಸಿದ ಎಲ್ಲ ಆತ್ಮಹತ್ಯಾ ಬಾಂಬರ್‌ಗಳು ಶ್ರೀಲಂಕಾದವರೇ. ಆದರೆ, ಅಂತರರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳ ಜೊತೆಗೆ ಅವರು ಸಂಪರ್ಕ ಹೊಂದಿದ್ದ ಸಾಧ್ಯತೆ ಇದೆ. ಆದರೆ, ಈವರೆಗೆ ಯಾವುದೇ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲ’ ಎಂದು ಅವರು ಹೇಳಿದ್ದಾರೆ.

‘ಮುಸ್ಲಿಂ ಸಮುದಾಯವು ಈ ದಾಳಿಯನ್ನು ತೀವ್ರವಾಗಿ ಖಂಡಿಸಿದೆ. ಅವರು ಈ ದಾಳಿಯ ವಿರುದ್ಧವಾಗಿದ್ದಾರೆ. ಆದರೆ, ಕೆಲವರು ಮಾತ್ರ ಇಂತಹ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದಾರೆ’ ಎಂದು ಪ್ರಧಾನಿ ರನಿಲ್‌ ವಿಕ್ರಮಸಿಂಘೆ ಹೇಳಿದ್ದಾರೆ.

‘ಭಯೋತ್ಪಾದನೆ ನಿಗ್ರಹದಲ್ಲಿ ಅಂತರರಾಷ್ಟ್ರೀಯ ಸಮುದಾಯ ಶ್ರೀಲಂಕಾ ಬೆಂಬಲಕ್ಕೆ ನಿಂತಿದೆ’ ಎಂದೂ ಅವರು ತಿಳಿಸಿದ್ದಾರೆ.

‘ಈಸ್ಟರ್‌ ದಿನ ನಡೆದ ದಾಳಿಯು ಪೂರ್ವನಿಯೋಜಿತವಾದುದಾಗಿದೆ. ತರಬೇತಿ ಪಡೆದ ಉಗ್ರರೇ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಉಗ್ರರನ್ನು ಎದುರಿಸಲು ಸರ್ಕಾರ ಸಮರ್ಥವಾಗಿದೆ’ ಎಂದೂ ಪ್ರಧಾನಿ ಹೇಳಿದ್ದಾರೆ.

ಇಡೀ ಶ್ರೀಲಂಕಾ ಮೂರು ನಿಮಿಷ ಸ್ತಬ್ಧ!

ಭಾನುವಾರ ನಡೆದ ಘಟನೆಯಿಂದ ಆತಂಕಗೊಂಡಿರುವ ಶ್ರೀಲಂಕಾದಲ್ಲಿ ಶೋಕವೂ ಮನೆ ಮಾಡಿದೆ. ಮಂಗಳವಾರ ಬೆಳಗ್ಗೆ 8.30ರಿಂದ ಮೂರು ನಿಮಿಷಗಳ ಕಾಲ ದೇಶಾದ್ಯಂತ ಮೌನಾಚರಣೆ ಮಾಡಲಾಯಿತು. ಇಡೀ ದೇಶ ಮೂರು ನಿಮಿಷಗಳ ಕಾಲ ಸ್ತಬ್ಧವಾಯಿತು. ಈ ಮೂಲಕ ಮೃತರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಭಾನುವಾರ ಬೆಳಗ್ಗೆ 8.30ಕ್ಕೆ ಸರಿಯಾಗಿ ಶ್ರೀಲಂಕಾದಲ್ಲಿ ಮೊದಲ ಬಾಂಬ್‌ ಸ್ಫೋಟಗೊಂಡಿತ್ತು. ಅದೇ ಹೊತ್ತಿಗೆ ಸರಿಯಾಗಿ ದೇಶದಲ್ಲಿ ಮೌನಾಚರಣೆ ಮಾಡಲಾಯಿತು.

ಮೌನಾಚರಣೆ ಮುಗಿಯುತ್ತಲೇ ಮಾಧ್ಯಮಗಳಿಗೆ ಮಾಹಿತಿ ನೀಡಿದ ಪೊಲೀಸ್‌ ಇಲಾಖೆ ವಕ್ತಾರ, ಸಾವಿನ ಸಂಖ್ಯೆ 310ಕ್ಕೆ ಏರಿರುವುದಾಗಿ ಘೋಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT