ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Gaza Hospital Strike | ಆಸ್ಪತ್ರೆ ಮೇಲೆ ದಾಳಿ: ಜಾಗತಿಕ ನಾಯಕರ ಖಂಡನೆ, ಆಕ್ರೋಶ

Published 18 ಅಕ್ಟೋಬರ್ 2023, 11:01 IST
Last Updated 18 ಅಕ್ಟೋಬರ್ 2023, 11:01 IST
ಅಕ್ಷರ ಗಾತ್ರ

ಪ್ಯಾರಿಸ್‌: ನೂರಾರು ಮಂದಿಯ ಸಾವಿಗೆ ಕಾರಣವಾಗಿರುವ ಗಾಜಾ ಆಸ್ಪತ್ರೆ ಮೇಲಿನ ದಾಳಿಗೆ ಜಾಗತಿಕ ನಾಯಕರಿಂದ ಖಂಡನೆ ಹಾಗೂ ಆಕ್ರೋಶ ವ್ಯಕ್ತವಾಗಿದೆ. ಜೋರ್ಡನ್‌ ರಾಜಧಾನಿ ಅಮ್ಮಾನ್‌, ಟುನೇಷಿಯಾ ರಾಜಧಾನಿ ಟುನಿಸ್‌, ಲೆಬನಾನ್ ರಾಜಧಾನಿ ಬೈರೂತ್‌ ಹಾಗೂ ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿ ಜನ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

ಟೆಹ್ರಾನ್‌ನಲ್ಲಿರುವ ಬ್ರಿಟನ್‌, ಫ್ರಾನ್ಸ್‌ ರಾಯಭಾರ ಕಚೇರಿ ಹಾಗೂ ಪ್ಯಾಲೆಸ್ಟೀನ್‌ ಸ್ಕ್ವೇರ್ ಹೊರಗಡೆ ಜಮಾಯಿಸಿದ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೈರೂತ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಮುಂದೆ ಜಾಮಾಯಿಸಿದ್ದ ಪ್ರತಿಭಟನಾಕಾರರು ಲೆಬನಾನ್‌ ಭದ್ರತಾ ಪಡೆಗಳೊಂದಿಗೆ ವಾಗ್ವಾದ ನಡೆಸಿದರು. ‘ಅಮೆರಿಕಕ್ಕೆ ಸಾವು’ ‘ಇಸ್ರೇಲ್‌ಗೆ ಸಾವು’ ಎಂದು ಘೋಷಣೆ ಕೂಗಿದ್ದಾರೆ.

ಈ ದಾಳಿಯ ಹಿಂದೆ ಇಸ್ರೇಲ್‌ ಕೈವಾಡ ಇದೆ ಎಂದು ಹಮಾಸ್‌ ಬಂಡುಕೋರರು ಆರೋಪಿಸಿದ್ದಾರೆ. ಅದರೆ ಇದು ಹಮಾಸ್‌ನ ಗುರಿ ತಪ್ಪಿದ ರಾಕೆಟ್‌ ದಾಳಿ ಎಂದು ಹೇಳಿರುವ ಇಸ್ರೇಲ್, ಹಮಾಸ್‌ ಸುಳ್ಳು ಹೇಳುತ್ತಿದೆ ಎಂದು ಆರೋಪಿಸಿದೆ.

ಈ ದಾಳಿಗೆ ಜಾಗತಿಕ ನಾಯಕರು ಖಂಡನೆ ವ್ಯಕ್ತಪಡಿಸಿದ್ದಾರೆ.

‘ಗಾಜಾದ ಆಸ್ಪತ್ರೆಯೊಂದರ ಮೇಲೆ ನಡೆದ ದಾಳಿಯಲ್ಲಿ ನೂರಾರು ಪ್ಯಾಲೇಸ್ಟಿನಿಯನ್ ನಾಗರಿಕರ ಹತ್ಯೆಯಿಂದ ಗಾಬರಿಗೊಂಡಿದ್ದೇನೆ’ ಎಂದು ವಿಶ್ವಸಂಸ್ಥೆಯ ಮುಖ್ಯ ಕಾರ್ಯದರ್ಶಿ ಅಂಟೊನಿಯೊ ಗುಟೆರೆಸ್‌ ಹೇಳಿದ್ದಾರೆ. ಅಲ್ಲದೆ ಈ ದಾಳಿಯನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ನುಡಿದಿದ್ದಾರೆ.

‘ಗಾಜಾದ ಆಸ್ಪತ್ರೆ ಮೇಲೆ ಇಸ್ರೇಲ್‌ ಬಾಂಬ್‌ ದಾಳಿ ಮಾಡಿ ನೂರಾರು ಜನರನ್ನು ಕೊಂದಿರುವ ಘಟನೆಯನ್ನು ಖಂಡಿಸಲು ಶಬ್ದಗಳು ಸಿಗುತ್ತಿಲ್ಲ. ಈ ಬಗ್ಗೆ ಅಂತತರಾಷ್ಟ್ರೀಯ ಸಮುದಾಯಗಳು ಕ್ರಮ ತೆಗೆದುಕೊಳ್ಳಬೇಕು’ ಎಂದು ಆಫ್ರಿಕನ್‌ ಯೂನಿಯನ್‌ನ ಮುಖ್ಯಸ್ಥ ಮೂಸ ಫಕಿ ಮಹಮತ್‌ ಹೇಳಿದ್ದಾರೆ. ಅಲ್ಲದೆ ಇಸ್ರೇಲ್‌ ಯುದ್ಧಾಪರಾದ ಎಸಗಿದೆ ಎಂದು ಅವರು ಆರೋಪಿಸಿದ್ದಾರೆ.

ತಕ್ಷಣವೇ ಇದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿರುವ ಅರಬ್ ಲೀಗ್‌ ಮುಖ್ಯಸ್ಥ ಅಹಮದ್ ಅಬುಲ್ ಘಿಸ್ಟ್, ನಮ್ಮ ಅರಬ್ ಕಾರ್ಯವಿಧಾನಗಳು ಯುದ್ಧ ಅಪರಾಧಗಳನ್ನು ದಾಖಲಿಸುತ್ತವೆ. ಅಪರಾಧಿಗಳನ್ನು ತಪ್ಪಿಸಿಕೊಳ್ಳಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

‘ನಾಗರಿಕರೇ ತುಂಬಿದ್ದ ಆಸ್ಪತ್ರೆ ಮೇಲೆ ಬಾಂಬ್ ದಾಳಿ ಮಾಡಿದ್ದಕ್ಕೆ ಯಾವುದೇ ವಿನಾಯಿತಿ ಇಲ್ಲ. ನೈಜ ಸಂಗತಿ ಪತ್ತೆ ಮಾಡಬೇಕು. ಮತ್ತು ಕಾರಣೀಭೂತರನ್ನು ಜವಾಬ್ದಾರರನ್ನಾಗಿ ಮಾಡಬೇಕು’ ಎಂದು ಯೂರೋಪಿಯನ್ ಕಮಿಷನ್ ಅಧ್ಯಕ್ಷ ಉರ್ಸುಲ ವೊನ್‌ ಡೆರ್‌ ಲೈನ್ ಹೇಳಿದ್ದಾರೆ.

‘ಮತ್ತೊಮ್ಮೆ ಅಮಾಯಕ ನಾಗರಿಕರು ದುಬಾರಿ ಬೆಲೆ ತೆತ್ತಿದ್ದಾರೆ. ಈ ಅಪಾರಾಧಕ್ಕೆ ಕಾರಣವಾದವರನ್ನು ಪತ್ತೆಮಾಡಿ, ಅವರನ್ನು ಹೊಣೆಗಾರರನ್ನಾಗಿ ಮಾಡಬೇಕು’ ಎಂದು ಐರೋಪ್ಯ ಒಕ್ಕೂಟದ ವಿದೇಶಾಂಗ ವ್ಯವಹಾರಗಳ ಮುಖ್ಯ ಕಾರ್ಯರ್ಶಿ ಬೊರೆಲ್‌ ಡೆಪ್ಲೊರೆಡ್‌ ‘ಎಕ್ಸ್‌’ನಲ್ಲಿ ಬರೆದುಕೊಂಡಿದ್ದಾರೆ.

‘ಆಸ್ಪತ್ರೆಗಳು ಮಾನವ ಜೀವವನ್ನು ಸಂರಕ್ಷಿಸುವ ಅಭಯಾರಣ್ಯಗಳಾಗಿರಬೇಕು, ಸಾವು ಮತ್ತು ವಿನಾಶದ ದೃಶ್ಯಗಳಾಗಿರಬಾರದು’ ಎಂದು ಅಂತರರಾಷ್ಟ್ರೀಯ ರೆಡ್‌ಕ್ರಾಸ್‌ ಸಂಸ್ಥೆ ಹೇಳಿದೆ.

ಗಾಜಾದಲ್ಲಿ ಪರಿಸ್ಥಿತಿ ಕೈಮೀರುತ್ತಿದೆ. ಎಲ್ಲಾ ಕಡೆಗಳಿಂದಲೂ ಹಿಂಸಾಚಾರ ನಿಲ್ಲಬೇಕು’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಗೆಬ್ರಿಯೆಸಿಸ್‌ ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT