ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಗನನೌಕೆ ‘ಸ್ಟಾರ್‌ಲೈನರ್‌’ ಮುನ್ನಡೆಸಿದ ಸುನಿತಾ, ವಿಲ್ಮೋರ್

Published 6 ಜೂನ್ 2024, 15:55 IST
Last Updated 6 ಜೂನ್ 2024, 15:55 IST
ಅಕ್ಷರ ಗಾತ್ರ

ಹ್ಯೂಸ್ಟನ್‌: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಯಾನ ಕೈಗೊಂಡಿರುವ ಭಾರತ ಮೂಲದ ಗಗನಯಾತ್ರಿ ಸುನಿತಾ ವಿಲಿಯನ್ಸ್‌ ಹಾಗೂ ಅವರ ಸಹಯಾತ್ರಿ ಬಚ್‌ ವಿಲ್ಮೋರ್‌ ಅವರು ಗಗನನೌಕೆ ‘ಸ್ಟಾರ್‌ಲೈನರ್‌’ ಅನ್ನು ಮುನ್ನಡೆಸುವ ಮೂಲಕ ಗಮನ ಸೆಳೆದಿದ್ದಾರೆ.

ಈ ಮೂಲಕ, ಅವರು ಭೂಕಕ್ಷೆಯಲ್ಲಿಯೂ ಗಗನನೌಕೆಯನ್ನು ಮುನ್ನಡೆಸುವ ಸಾಮರ್ಥ್ಯವನ್ನು ಸಾಬೀತುಪಡಿಸಿದಂತಾಗಿದೆ.

ಬೋಯಿಂಗ್‌ ಸಂಸ್ಥೆ ನಿರ್ಮಿತ ‘ಸ್ಟಾರ್‌ಲೈನರ್‌’, ಸ್ವಯಂಚಾಲಿತ ಗಗನನೌಕೆಯಾಗಿದೆ. ಆದರೆ, ಗಗನಯಾನ ಸಂದರ್ಭದಲ್ಲಿ, ಸುನಿತಾ ವಿಲಿಯಮ್ಸ್‌ ಮತ್ತು ವಿಲ್ಮೋರ್‌ ಅವರು, ‘ಹ್ಯಾಂಡ್‌ ಕಂಟ್ರೋಲರ್‌’ ಬಳಸಿ, ಎರಡು ಗಂಟೆಗಳ ಕಾಲ ಗಗನನೌಕೆ ನಿಯಂತ್ರಿಸುವ ಪ್ರಾತ್ಯಕ್ಷಿಕೆಯನ್ನು ಪೂರೈಸಿದ್ದಾರೆ.

55 ವರ್ಷದ ಸುನಿತಾ ವಿಲಿಯಮ್ಸ್‌ ಅವರಿಗೆ ಇದು ಮೂರನೇ ಬಾಹ್ಯಾಕಾಶ ಯಾನ. ಇವರು ಈ ಪರೀಕ್ಷಾರ್ಥ ಪ್ರಯೋಗದಲ್ಲಿ ಪೈಲಟ್‌ ಆಗಿ ಕಾರ್ಯ ನಿರ್ವಹಿಸಿದರೆ, 61 ವರ್ಷದ ವಿಲ್ಮೋರ್‌ ಅವರು ಈ ಬಾಹ್ಯಾಕಾಶ ಕಾರ್ಯಕ್ರಮದ ಕಮಾಂಡರ್‌ ಆಗಿದ್ದಾರೆ.

ಈ ಪ್ರಾತ್ಯಕ್ಷಿಕೆ ಸಂದರ್ಭದಲ್ಲಿ, ಗಗನನೌಕೆಯ ಮುಂಭಾಗ ಭೂಮಿಯತ್ತ ಇರುವಂತೆ ಮಾಡಿದ್ದರು. ಸಂವಹನಕ್ಕಾಗಿ ಗಗನನೌಕೆಗೆ ಅಳಡಿಸಿದ್ದ ಆ್ಯಂಟೆನಾ, ಸಂಬಂಧಪಟ್ಟ ಉಪಗ್ರಹಗಳತ್ತ ಮುಖ ಮಾಡುವಂತೆ ಮಾಡಲು ಇದು ನೆರವಾಗಿತ್ತು. 

ನಂತರ, ಸೌರಫಲಕಗಳು ಸೂರ್ಯನಿಗೆ ಮುಖಮಾಡುವಂತೆ ‘ಸ್ಟಾರ್‌ಲೈನರ್’ ಮುನ್ನಡೆಸಿದರು.  ನೌಕೆಯಲ್ಲಿದ್ದ ಬ್ಯಾಟರಿಗಳಲ್ಲಿ ವಿದ್ಯುತ್‌ ಸಂಗ್ರಹಕ್ಕೆ ಇದರಿಂದ ಅನುಕೂಲವಾಗಿತ್ತು ಎಂದು ಬೋಯಿಂಗ್‌ ಪ್ರಕಟಣೆಯಲ್ಲಿ ತಿಳಿಸಿದೆ. 

‘ಗಗನನೌಕೆಯೊಂದಿಗೆ ನಿರಂತರ ಸಂಪರ್ಕದಲ್ಲಿರುವ ಎಲ್ಲ ಮೂರು ಕಂಪ್ಯೂಟರ್‌ಗಳು ಒಂದು ವೇಳೆ ಏಕಕಾಲದಲ್ಲಿ ಕಾರ್ಯನಿರ್ವಹಣೆ ನಿಲ್ಲಿಸಿದಲ್ಲಿ, ಬಾಹ್ಯಾಕಾಶದಲ್ಲಿ ಗಗನಯಾನಿಗಳ ವರ್ತನೆ ಹೇಗಿರಲಿದೆ? ಅಲ್ಲಿನ ಪರಿಸ್ಥಿತಿಯಲ್ಲಿ, ಅವರೇ ಗಗನನೌಕೆಯನ್ನು ಹೇಗೆ ನಿಯಂತ್ರಿಸಬಲ್ಲರು ಎಂಬುದನ್ನು ಒರೆಗ ಹಚ್ಚುವುದು ಸಹ ಈ ಪರೀಕ್ಷೆಯ ಉದ್ದೇಶವಾಗಿತ್ತು’ ಎಂದು ಸಂಸ್ಥೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT