ಇಸ್ಲಾಮಾಬಾದ್: ಇತರ ದೇಶಗಳ ಜೊತೆ ಹೊಂದಾಣಿಕೆ ಕಾಯ್ದುಕೊಳ್ಳದೆ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ಪಾಕಿಸ್ತಾನವು ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರಗಳಲ್ಲಿ ಒಂದು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದರು. ಈಹೇಳಿಕೆಯನ್ನು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅಲ್ಲಗಳೆದಿದ್ದಾರೆ.
ಡೆಮಾಕ್ರಟಿಕ್ ಪಕ್ಷದ ಪ್ರಚಾರ ಸಮಿತಿಯನ್ನು ಉದ್ದೇಶಿಸಿ ಗುರುವಾರ ಮಾತನಾಡಿದ್ದ ಬೈಡನ್, 'ನಾನು ಯೋಚಿಸುವುದು ಏನೆಂದರೆ, ಇತರ ದೇಶಗಳ ಜೊತೆ ಹೊಂದಾಣಿಕೆ ಇಲ್ಲದೆ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವುದರಿಂದ ಬಹುಶಃ ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರಗಳಲ್ಲಿ ಪಾಕಿಸ್ತಾನ ಒಂದಾಗಿದೆ’ ಎಂದಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವಷರೀಫ್, 'ಬೈಡನ್ ಅವರ ಹೇಳಿಕೆಯು ದೋಷಪೂರಿತವಾಗಿದ್ದು, ಹಾದಿ ತಪ್ಪಿಸುತ್ತದೆ' ಎಂದು ಟೀಕಿಸಿದ್ದಾರೆ.
'ಪಾಕಿಸ್ತಾನವು ಪರಮಾಣು ಶಸ್ತ್ರಾಸ್ತ್ರ ಹೊಂದಿರುವ ಅತ್ಯಂತ ಜವಾಬ್ದಾರಿಯುತ ರಾಷ್ಟ್ರ ಎಂಬುದನ್ನು ಕಳೆದ ದಶಕಗಳಲ್ಲಿ ಸಾಬೀತು ಮಾಡಿದೆ. ತನ್ನ ಪರಮಾಣು ಕಾರ್ಯಕ್ರಮಗಳನ್ನು ನುರಿತ ತಂತ್ರಜ್ಞಾನ ಮತ್ತು ದೋಷಗಳಿಗೆ ಆಸ್ಪದವಿಲ್ಲದ ರೀತಿಯ ನಿಯಂತ್ರಣ ವ್ಯವಸ್ಥೆಯ ಮೂಲಕ ನಿರ್ವಹಿಸಲಾಗುತ್ತಿದೆ' ಎಂದು ಅವರು ಹೇಳಿರುವುದಾಗಿ ಪ್ರಧಾನಿ ಕಚೇರಿ ಪ್ರಕಟಿಸಿದೆ.
ಪಾಕಿಸ್ತಾನವುತನ್ನ ಪರಮಾಣು ಶಸ್ತ್ರಾಸ್ತ್ರಗಳ ಸಾಮರ್ಥ್ಯದ ಜವಾಬ್ದಾರಿಯುತ ನಿರ್ವಹಣೆ ಹಾಗೂಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ (ಐಎಇಎ) ಸುರಕ್ಷತೆ ಮತ್ತು ಭದ್ರತೆ ನಿಯಮ ಸೇರಿದಂತೆ ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಹೊಂದಿರುವ ಬದ್ಧತೆಯನ್ನುನಿರಂತರವಾಗಿ ಪ್ರದರ್ಶಿಸುತ್ತಾ ಬಂದಿದೆ ಎಂದೂ ಪ್ರತಿಪಾದಿಸಿರುವುದುದಾಗಿ ಉಲ್ಲೇಖಿಸಿದೆ.
ಬೈಡನ್ ಹೇಳಿಕೆ 'ಅಚ್ಚರಿ ಮೂಡಿಸಿದೆ' ಎಂದು ವಿದೇಶಾಂಗ ಸಚಿವ ಬಿಲಾವಾಲ್ ಭುಟ್ಟೊ ಜರ್ದಾರಿ ಸಹ ಪ್ರತಿಕ್ರಿಯಿಸಿದ್ದಾರೆ.