ವಿಶ್ವಸಂಸ್ಥೆ(ಎಪಿ): ಸೂಡಾನ್‌ನಲ್ಲಿ ವಿಶ್ವಸಂಸ್ಥೆಯ ವಿಶೇಷ ರಾಯಭಾರಿಯಾಗಿರುವ ವೊಲ್ಕರ್ ಪರ್ಥೆಸ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಸೇನಾ ಸಂಘರ್ಷದಲ್ಲಿ ಮುಳುಗಿರುವ ಸೂಡಾನ್‌ನ ಸೇನಾ ಆಡಳಿತಗಾರರು ಪರ್ಥೆಸ್ ಅವರು ರಾಯಭಾರಿಯಾಗಿ ಮುಂದುವರಿಯುವುದನ್ನು ಸ್ವಾಗತಿಸದ ಕಾರಣ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕೊನೆ ಭಾಷಣ ಮಾಡಿದ ವೊಲ್ಕರ್ ಪರ್ಥೆಸ್ ಅವರು, ದೇಶದ ಸೇನೆಯ ನಾಯಕರ ನಡುವಿನ ಸಂಘರ್ಷವು ಪೂರ್ಣ ಪ್ರಮಾಣದ ನಾಗರಿಕ ಅಂತರ್ಯುದ್ಧವಾಗಿ ಪರಿಣಮಿಸಬಹುದು ಎಂದು ಎಚ್ಚರಿಸಿದ್ದಾರೆ.
ಸುಡಾನ್‌ನಲ್ಲಿ ಸೇನೆ ಮತ್ತು ಅರೆಸೇನೆ ನಡುವಿನ ಆಂತರಿಕ ಸಂಘರ್ಷ ತಗ್ಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಎರಡೂ ಕಡೆಯವರು ನಿರ್ಣಾಯಕ ಮಿಲಿಟರಿ ವಿಜಯಕ್ಕೆ ಹತ್ತಿರವಾದಂತೆಯೂ ಕಾಣಿಸುತ್ತಿಲ್ಲ. ದೇಶದ ಪಶ್ಚಿಮ ಡಾರ್ಫರ್ ಪ್ರದೇಶದಲ್ಲಿ ಹಿಂಸಾಚಾರವು ತೀವ್ರಗೊಂಡಿದೆ. ಜನಾಂಗೀಯ ಆಧಾರದ ಮೇಲೆ ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿರುವುದು ಮುಂದುವರಿದಿದೆ ಎಂದು ಅವರು ಹೇಳಿದ್ದಾರೆ.
ಜನರಲ್ ಅಬ್ದೆಲ್ ಫತಾಹ್ ಬುರ್ಹಾನ್ ನೇತೃತ್ವದ ಸುಡಾನ್ ಸೇನೆ ಮತ್ತು ಜನರಲ್ ಮೊಹಮ್ಮದ್ ಹಮ್ದಾನ್ ದಗಾಲೊ ನೇತೃತ್ವದ ಅರೆಸೇನಾ ಪಡೆ ನಡುವೆ ಏಪ್ರಿಲ್‌ನಿಂದ ಸಂಘರ್ಷ ನಡೆಯುತ್ತಲೇ ಇದೆ. ಈವರೆಗೆ ಕನಿಷ್ಠ 5 ಸಾವಿರ ಜನರು ಹತರಾಗಿದ್ದು, 12 ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಆದರೆ, ವಾಸ್ತವದಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚಿಗೆ ಇದೆ ಎಂದು ಪರ್ಥೆಸ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.