ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾರತಕ್ಕೆ ಅಮೆರಿಕ ನೀಡಿದ್ದ ಆದ್ಯತಾ ವ್ಯಾಪಾರ ಮಾನ್ಯತೆ ರದ್ದು ದುರದೃಷ್ಟಕರ’

Last Updated 1 ಜೂನ್ 2019, 10:25 IST
ಅಕ್ಷರ ಗಾತ್ರ

ನವದೆಹಲಿ: ಭಾರತಕ್ಕೆ ನೀಡಲಾಗಿದ್ದ ಆದ್ಯತಾ ವ್ಯಾಪಾರ ಮಾನ್ಯತೆಯನ್ನು ಅಮೆರಿಕ ರದ್ದು ಮಾಡಿರುವ ಕುರಿತು ಇದೇ ಮೊದಲ ಬಾರಿಗೆ ಮಾತನಾಡಿರುವ ಭಾರತೀಯ ವ್ಯಾಪಾರ ವಾಣಿಜ್ಯ ಇಲಾಖೆ, ‘ಎರಡೂ ರಾಷ್ಟ್ರಗಳಿಗೆ ಹೊಂದುವಂಥ ಹಲವು ರೀತಿಯ ನೀತಿ ನಿರ್ಣಯಗಳನ್ನು ಭಾರತ ಅಮೆರಿಕದ ಮುಂದಿಟ್ಟಿತು. ಅವುಗಳನ್ನು ಅಮೆರಿಕ ಪರಿಗಣಿಸಲಿಲ್ಲ. ಇದು ದುರದೃಷ್ಟಕರ ಬೆಳವಣಿಗೆ,’ ಎಂದು ಹೇಳಿದೆ.

ಭಾರತಕ್ಕೆ ನೀಡಲಾಗಿದ್ದ ಆದ್ಯತಾ ವ್ಯಾಪಾರ ಮಾನ್ಯತೆಯನ್ನು ಅಮೆರಿಕ ನಿನ್ನೆಯಷ್ಟೇ ರದ್ದು ಮಾಡಿದೆ. ಈ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರೂ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಇದೇ ಹಿನ್ನೆಲೆಯಲ್ಲಿ ಭಾರತೀಯ ವ್ಯಾಪಾರ ವಾಣಿಜ್ಯ ಇಲಾಖೆಯು ಇಂದು ಹೇಳಿಕೆ ಬಿಡುಗಡೆ ಮಾಡಿದ್ದು,‘ನಿರಂತರವಾಗಿ ನಡೆಯುವ ಯಾವುದೇ ಪ್ರಕ್ರಿಯೆಗಳಲ್ಲಿ, ಅದರಲ್ಲೂ ವಾಣಿಜ್ಯ ವ್ಯವಹಾರಗಳಿಗೆ ಸಂಬಂಧಿಸಿದ ಪ್ರಕ್ರಿಯೆಗಳಲ್ಲಿ ಸಹಜವಾಗಿ ಸಮಸ್ಯೆಗಳು ತಲೆದೋರುತ್ತವೆ. ಹಾಗೇಯೇ ಕಾಲಕಾಲಕ್ಕೆ ಈ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂದು ನಾವು ಅಮೆರಿಕಕ್ಕೆ ಮನವರಿಕೆ ಮಾಡಿಕೊಟ್ಟೆವು. ಆದರೆ, ಅದ್ಯಾವುದೂ ಅಮೆರಿಕಕ್ಕೆ ಸಮ್ಮತಿಯಾಗಿಲಿಲ್ಲ. ಇದು ದುರದೃಷ್ಟಕರ,’ ಎಂದು ವಾಣಿಜ್ಯ ಇಲಾಖೆ ತಿಳಿಸಿದೆ.

ಅಭಿವೃದ್ಧಿಶೀಲ ದೇಶಗಳು ತನ್ನ ನೆಲದಲ್ಲಿ ಸುಂಕ ರಹಿತವಾಗಿ ವ್ಯಾಪಾರ ನಡೆಸಲು ಅಮೆರಿಕ ಅವಕಾಶ ಕಲ್ಪಿಸಿಕೊಟ್ಟಿದೆ. ತಾನು ಬಹುಕಾಲದಿಂದಲೂ ಅನುಸರಿಸಿಕೊಂಡು ಬಂದಿರುವ ವ್ಯಾಪಾರ ವ್ಯವಹಾರದ ಆದ್ಯತೆಗೆ ಸಂಬಂಧಿಸಿದಸಾಮಾನ್ಯ ವ್ಯವಸ್ಥೆಯೊಂದರ ಅಡಿ ( ಜನಲರಲೈಸ್ಡ್‌ ಸಿಸ್ಟಮ್‌ ಆಫ್‌ ಪ್ರಿಫರೆನ್ಸಸ್‌–ಜಿಎಸ್‌ಪಿ) ಅಡಿಯಲ್ಲಿ ಮಾನ್ಯತೆ ಪಡೆದ ರಾಷ್ಟ್ರಗಳಿಗಷ್ಟೇ ಈ ಅವಕಾಶ. ಭಾರತಕ್ಕೆ ಇಂಥದ್ದೊಂದು ಮಾನ್ಯತೆಯನ್ನು ಅಮೆರಿಕಹಿಂದಿನಿಂದಲೂ ನೀಡುತ್ತಾ ಬಂದಿತ್ತು. ಆದರೆ, ಈಗ ಅದನ್ನು ರದ್ದು ಮಾಡಿದೆ.

ವಾಣಿಜ್ಯ ವ್ಯವಹಾರಗಳಲ್ಲಿ ಭಾರತಕ್ಕೆ ಎಷ್ಟೇ ಆದ್ಯತೆ ನೀಡಿದರೂ, ಭಾರತ ತನ್ನ ವ್ಯಾಪಾರಗಳಿಗೆ ಅತ್ಯಧಿಕ ಸುಂಕ ವಿಧಸುತ್ತದೆ ಎಂಬುದು ಅಮೆರಿಕದ ಆಕ್ಷೇಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT