ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಾಕ್: ಅಮೆರಿಕ ರಾಯಭಾರ ಕಚೇರಿ ಮೇಲೆ ದಾಳಿ ಯತ್ನ; ಡ್ರೋನ್‌ ಹೊಡೆದುರುಳಿಸಿದ ಸೇನೆ

Last Updated 6 ಜುಲೈ 2021, 2:02 IST
ಅಕ್ಷರ ಗಾತ್ರ

ಬಾಗ್ದಾದ್‌: ಅಮೆರಿಕದ ರಾಯಭಾರ ಕಚೇರಿಯ ಮೇಲೆ ಹಾರಾಟ ನಡೆಸಿದ ಡ್ರೋನ್‌ ಅನ್ನು ಅಮೆರಿಕದ ಭದ್ರತಾ ಪಡೆಗಳು ಹೊಡೆದುರುಳಿಸಿವೆ. ಇರಾಕ್‌ನ ಪಶ್ಚಿಮ ಭಾಗದಲ್ಲಿ ಅಮೆರಿಕ ಯೋಧರ ನೆಲೆಗಳ ಮೇಲೆ ರಾಕೆಟ್‌ ದಾಳಿ ನಡೆದ ಬೆನ್ನಲ್ಲೇ ಸೋಮವಾರ ರಾತ್ರಿ ಈ ಘಟನೆ ನಡೆದಿದೆ.

ಅಮೆರಿಕದ ರಕ್ಷಣಾ ವ್ಯವಸ್ಥೆಯು ಬಾಗ್ದಾದ್‌ನಲ್ಲಿ ಆಗಸದತ್ತ ರಾಕೆಟ್‌ ಸಿಡಿಸಿದೆ ಎಂದು ಎಎಫ್‌ಪಿ ವರದಿ ಮಾಡಿದೆ. ಇರಾಕ್‌ನ ಭದ್ರತಾ ಪಡೆಯ ಮೂಲಗಳ ಪ್ರಕಾರ, ಸ್ಫೋಟಗಳನ್ನು ಹೊತ್ತು ಹಾರಾಟ ನಡೆಸಿದ್ದ ಡ್ರೋನ್‌ ಅನ್ನು ಹೊಡೆದುರುಳಿಸಲಾಗಿದೆ.

ಜಿಹಾದಿ ಇಸ್ಲಾಮಿಕ್‌ ಉಗ್ರರ ವಿರುದ್ಧದ ಹೋರಾಟಕ್ಕಾಗಿ ಅಂತರರಾಷ್ಟ್ರೀಯ ಸಹಕಾರದ ಭಾಗವಾಗಿ ಅಮೆರಿಕದ 2,500 ಪಡೆಗಳನ್ನು ನಿಯೋಜಿಸಲಾಗಿದೆ. ಈ ವರ್ಷ ಅಮೆರಿಕ ಪಡೆಗಳನ್ನು ಗುರಿಯಾಗಿಸಿ 47 ಬಾರಿ ದಾಳಿ ನಡೆಸಲಾಗಿದೆ.

ಅಮೆರಿಕ ಮತ್ತು ಇರಾಕ್‌ನ ಪಡೆಗಳಿರುವ ಕೇಂದ್ರಗಳ ಮೇಲೆ ಡ್ರೋನ್‌ಗಳ ಮೂಲಕ ದಾಳಿಗೆ ಪ್ರಯತ್ನಿಸಲಾಗುತ್ತಿದೆ. ಇದು ಉಭಯ ರಾಷ್ಟ್ರಗಳ ಭದ್ರತಾ ಪಡೆಗಳಿಗೆ ತಲೆ ನೋವಾಗಿ ಪರಿಣಮಿಸಿದೆ. ಏಪ್ರಿಲ್‌ನಲ್ಲಿ ಸ್ಫೋಟಕಗಳನ್ನು ಹೊತ್ತು ಬಂದ ಡ್ರೋನ್‌, ಅರ್ಬಿಲ್‌ನ ಮಿಲಿಟರಿ ವ್ಯಾಪ್ತಿಯ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸಿತ್ತು. ಮೇ ತಿಂಗಳಲ್ಲೂ ಅಮೆರಿಕ ಪಡೆಗಳನ್ನು ಗುರಿಯಾಗಿಸಿ ಅಲ್‌–ಅಸಾದ್‌ ವಾಯುನೆಲೆಯ ಮೇಲೆ ಮತ್ತೊಂದು ಡ್ರೋನ್‌ ಬಾಂಬ್‌ ದಾಳಿ ಮಾಡಿತ್ತು.

ಜೂನ್‌ 9ರಂದು ಸ್ಫೋಟಕಗಳನ್ನು ಹೊತ್ತು ಬಂದ ಮೂರು ಡ್ರೋನ್‌ಗಳು ಬಾಗ್ದಾದ್‌ ವಿಮಾನ ನಿಲ್ದಾಣದ ಮೇಲೆ ದಾಳಿ ಮಾಡಿದವು. ಒಂದು ಡ್ರೋನ್‌ ಅನ್ನು ಇರಾಕಿ ಸೇನೆ ಹೊಡೆದುರುಳಿಸಿತು.

ಅಮೆರಿಕ ಪಡೆಗಳ ಮೇಲೆ ಡ್ರೋನ್‌ ದಾಳಿ ನಡೆಯುವ ಕುರಿತು ಮಾಹಿತಿ ಪಡೆಯಲು 3 ಮಿಲಿಯನ್‌ ಡಾಲರ್‌ ವ್ಯಯಿಸಲು ಅಮೆರಿಕ ಮುಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT