ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗಾನಿಸ್ತಾನದಲ್ಲಿ ಸಂಘರ್ಷ: 20 ವರ್ಷಗಳ ಅಮೆರಿಕ ಕಾರ್ಯಾಚರಣೆ ಕೊನೆ

Last Updated 29 ಆಗಸ್ಟ್ 2021, 19:45 IST
ಅಕ್ಷರ ಗಾತ್ರ

ಕಾಬೂಲ್‌: ಅಮೆರಿಕವು 20 ವರ್ಷಗಳ ನಂತರ ಅಫ್ಗಾನಿಸ್ತಾನವನ್ನು ತೊರೆಯುವ ಅಂತಿಮ ಹಂತದ ಕಾರ್ಯಾಚರಣೆಗೆ ಸಿದ್ಧತೆ ನಡೆಸಿದೆ.

‘ನಾಗರಿಕರನ್ನು ತೆರವು ಮಾಡುವ ಕಾರ್ಯಾಚರಣೆಯು ಭಾನುವಾರ ತಡರಾತ್ರಿ ಕೊನೆಯಾಗಲಿದೆ. ಭಾನುವಾರ ಬೆಳಿಗ್ಗೆ ವೇಳೆಗೆ ತೆರವು ಮಾಡಬೇಕಿದ್ದ ನಾಗರಿಕರ ಸಂಖ್ಯೆ 1,000 ಮಾತ್ರ’ ಎಂದು ಅಮೆರಿಕದ ರಕ್ಷಣಾ ಸಚಿವಾಲಯ ಹೇಳಿದೆ.

ಅಫ್ಗಾನಿಸ್ತಾನದಲ್ಲಿ ಇರುವ 4,500 ಸೈನಿಕರ ತೆರವು ಕಾರ್ಯಾಚರಣೆ ಸೋಮವಾರ ಬೆಳಿಗ್ಗೆಯಿಂದ ಆಂಭವಾಗಲಿದೆ. ಮಂಗಳವಾರ ಸಂಜೆಯ ವೇಳೆಗೆ ಅಫ್ಗಾನಿಸ್ತಾನವನ್ನು ಸಂಪೂರ್ಣವಾಗಿ ತೊರೆಯಲಾಗುತ್ತದೆ ಎಂದು ಅಮೆರಿಕವು ಹೇಳಿದೆ. ಬುಧವಾರದಿಂದ ಕಾಬೂಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆಯನ್ನು ಕೈಗೆತ್ತಿಕೊಳ್ಳುತ್ತೇವೆ ಎಂದು ತಾಲಿಬಾನ್ ಘೋಷಿಸಿದೆ.

2001ರ ಸೆಪ್ಟೆಂಬರ್ 11ರಂದು ಅಮೆರಿಕದ ಪೆಂಟಗನ್ ಕಟ್ಟಡಗಳ ಮೇಲೆ ಅಲ್‌-ಕೈದಾ ಉಗ್ರರು ದಾಳಿ ನಡೆಸಿದ್ದರು. ಆ ದಾಳಿಯ ಪ್ರತೀಕಾರವಾಗಿ ಅಮೆರಿಕವು ಅಲ್‌-ಕೈದಾ ಉಗ್ರರ ವಿರುದ್ಧ ಹೋರಾಡಲು ಅಫ್ಗಾನಿಸ್ತಾನದಲ್ಲಿ ಸೇನಾ ಕಾರ್ಯಾಚರಣೆ ನಡೆಸಿತ್ತು. ತಾಲಿಬಾನಿಗಳ ವಿರುದ್ಧವೂ ಹೋರಾಟ ನಡೆಸಿದ್ದ ಅಮೆರಿಕವು, ಅಫ್ಗನ್‌ನಲ್ಲಿ ಸರ್ಕಾರ ರಚಿಸಲು ನೆರವು ನೀಡಿತ್ತು.

ಈ 20 ವರ್ಷಗಳ ಅವಧಿಯಲ್ಲಿ ಅಮೆರಿಕದ ಸೇನೆಯು ಉಗ್ರರ ವಿರುದ್ಧ ಹೋರಾಡಿತ್ತಲ್ಲದೆ, ಅಫ್ಗನ್ ಸೈನಿಕರಿಗೆ ತರಬೇತಿ ನೀಡಿತ್ತು. ಅಫ್ಗನ್ ಸೇನೆಗೆ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಪೂರೈಕೆ ಮಾಡಿತ್ತು.

ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಹಂತಹಂತವಾಗಿ ಅಫ್ಗಾನಿಸ್ತಾನದಿಂದ ಸೇನೆಯನ್ನು ವಾಪಸ್ ಕರೆಸಿಕೊಳ್ಳುವುದಾಗಿ ಘೋಷಿಸಿದ್ದರು. ಅದನ್ನು ಅನುಷ್ಠಾನಕ್ಕೆ ತಂದರು. ಜೋ ಬೈಡನ್ ಅಧಿಕಾರಕ್ಕೆ ಬಂದ ನಂತರ ಸೇನೆ ವಾಪಸಾತಿ ಪ್ರಕ್ರಿಯೆಯನ್ನು ತ್ವರಿತಗೊಳಿಸಿದರು. ಆದರೆ ಅಫ್ಗಾನಿಸ್ತಾನದಲ್ಲಿ ಅಮೆರಿಕದ ಸೈನಿಕರ ಸಂಖ್ಯೆ ಕಡಿಮೆಯಾದಂತೆ ತಾಲಿಬಾನಿಗಳು ಒಂದೊಂದೇ ಪ್ರಾಂತ್ಯವನ್ನು ವಶಕ್ಕೆ ಪಡೆದರು. ಆಗಸ್ಟ್ 14ರ ವೇಳೆಗೆ ಸಂಪೂರ್ಣವಾಗಿ ವಶಕ್ಕೆ ಪಡೆದರು. ಲಕ್ಷಾಂತರ ಅಫ್ಗನ್ನರು ದೇಶ ತೊರೆಯಲು ಮುಂದಾದರು.

ಆಗ ಆಗಸ್ಟ್ 31ರ ವೇಳೆಗೆ ಅಫ್ಗಾನಿಸ್ತಾನವನ್ನು ಸಂಪೂರ್ಣವಾಗಿ ತೊರೆಯುವುದಾಗಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಘೋಷಿಸಿದ್ದರು. ಆ ಗಡುವಿನೊಳಗೆ ತೆರವು ಕಾರ್ಯಾಚರಣೆ ಕಷ್ಟವೆಂದು ಅಮೆರಿಕದ ಮಿತ್ರರಾಷ್ಟ್ರಗಳು ಹೇಳಿದ್ದವು. ಗಡುವು ಮೀರುವಂತಿಲ್ಲ ಎಂದು ತಾಲಿಬಾನ್ ಎಚ್ಚರಿಕೆ ನೀಡಿತ್ತು. ಗಡುವಿಗೆ ಬದ್ಧವಾಗಿರುವುದಾಗಿ ಅಮೆರಿಕ ಹೇಳಿದೆ.

ಅಮೆರಿಕಕ್ಕೆ ತಾಲಿಬಾನ್ ಎಚ್ಚರಿಕೆ
ಅಫ್ಗಾನಿಸ್ತಾನ ಮತ್ತು ಪಾಕಿಸ್ತಾನ ಗಡಿಯಲ್ಲಿನ ನಂಗಾರ್ಹರ್ ಪ್ರಾಂತದಲ್ಲಿ ಉಗ್ರರ ವಿರುದ್ಧ ಅಮೆರಿಕವು ಶುಕ್ರವಾರ ನಡೆಸಿದ ಡ್ರೋನ್ ದಾಳಿಯನ್ನು ತಾಲಿಬಾನ್ ಖಂಡಿಸಿದೆ.

‘ಅಫ್ಗಾನಿಸ್ತಾನದಲ್ಲಿ ಕಾರ್ಯಾಚರಣೆ ನಡೆಸಲು ಅಮೆರಿಕಕ್ಕೆ ಯಾವುದೇ ಅಧಿಕಾರವಿಲ್ಲ. ಇಂತಹ ಕಾರ್ಯಾಚರಣೆ ನಡೆಸುವ ಮುನ್ನ ಅಮೆರಿಕವು ನಮಗೆ ಮಾಹಿತಿ ನೀಡಬೇಕಿತ್ತು. ಆ ಕಾರ್ಯಾಚರಣೆಯು ಅಫ್ಗಾನಿಸ್ತಾನದ ಗಡಿಯ ಮೇಲೆ ಅಮೆರಿಕವು ನಡೆಸಿದ ದಾಳಿ ಎಂದೇ ಪರಿಗಣಿಸುತ್ತೇವೆ. ಅಮೆರಿಕದ ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಗಾಯಗೊಂಡಿದ್ದಾರೆ. ಮತ್ತೆ ಇಂತಹ ದಾಳಿ ನಡೆಸಿದರೆ, ತಕ್ಕ ಪ್ರತ್ಯುತ್ತರ ಎದುರಿಸಬೇಕಾಗುತ್ತದೆ’ ಎಂದು ತಾಲಿಬಾನ್ ಎಚ್ಚರಿಕೆ ನೀಡಿದೆ.

*
ಅಫ್ಗಾನಿಸ್ತಾನದಲ್ಲಿರುವ ಕೊನೆಯ ವಿದೇಶಿ ಪ್ರಜೆಯನ್ನು ತೆರವು ಮಾಡಿದ ತಕ್ಷಣ ನಮ್ಮ ಸೈನಿಕರನ್ನು ತೆರವು ಮಾಡುತ್ತೇವೆ. ತೆರವು ಗಡುವಿಗೆ ಬದ್ಧವಾಗಿರುತ್ತೇವೆ.
–ಅಮೆರಿಕ

*
ಕಾಬೂಲ್ ವಿಮಾನ ನಿಲ್ದಾಣವನ್ನು ತೆರವನ್ನು ಅಮೆರಿಕವು ಯಾವಾಗ ಘೋಷಿಸುತ್ತದೆ ಎಂಬುದನ್ನು ಮತ್ತು ನಿಲ್ದಾಣವನ್ನು ಹತೋಟಿಗೆ ತೆಗೆದುಕೊಳ್ಳುವುದನ್ನು ಎದುರು ನೋಡುತ್ತಿದ್ದೇವೆ.
–ತಾಲಿಬಾನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT