ವಾಷಿಂಗ್ಟನ್: ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲೆ ಜುಲೈ 13ರಂದು ನಡೆದಿದ್ದ ಗುಂಡಿನ ದಾಳಿಗೆ ಭದ್ರತಾ ವೈಫಲ್ಯ ಕಾರಣ ಎಂದು ಅಮೆರಿಕದ ಸೀಕ್ರೆಟ್ ಸರ್ವೀಸ್ ಏಜೆನ್ಸಿ ಒಪ್ಪಿಕೊಂಡಿದೆ.
ಪೆನ್ಸಿಲ್ವೇನಿಯಾದ ಜನರನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದ ಟ್ರಂಪ್ ಗುರಿಯಾಗಿಸಿ ಬಂದೂಕುಧಾರಿ ಗುಂಡಿನ ದಾಳಿ ನಡೆಸಿದ್ದ.
‘ಈ ಘಟನೆ ವೈಫಲ್ಯದ ಹೊಣೆಯನ್ನು ಸೀಕ್ರೆಟ್ ಸರ್ವೀಸ್ ಹೊರಲಿದೆ. ರಕ್ಷಣೆ ನೀಡುವುದೇ ಏಜೆನ್ಸಿಯ ಏಕಮಾತ್ರ ಕರ್ತವ್ಯ. ಇದರಲ್ಲಿ ವಿಫಲರಾಗಿದ್ದೇವೆ. ಇಂಥ ಘಟನೆ ಮರುಕಳಿದಂತೆ ಕೆಲಸ ಮಾಡುತ್ತೇವೆ’ ಎಂದು ಸೀಕ್ರೆಟ್ ಸರ್ವೀಸ್‌ನ ಹಂಗಾಮಿ ನಿರ್ದೇಶಕ ರೊನಾಲ್ಡ್ ರೋವೆ ತಿಳಿಸಿದ್ದಾರೆ.
ಅಮೆರಿಕದ ಅಧ್ಯಕ್ಷರು, ಮಾಜಿ ಅಧ್ಯಕ್ಷರು ಮತ್ತು ಅವರ ಕುಟುಂಬವನ್ನು ರಕ್ಷಣೆ ಮಾಡುವುದೇ ಸೀಕ್ರೆಟ್ ಸರ್ವೀಸ್‌ನ ಮುಖ್ಯ ಕರ್ತವ್ಯ. ಅಧ್ಯಕ್ಷೀಯ ಅಭ್ಯರ್ಥಿಯ ರಕ್ಷಣೆ ಸಹ ಸಂಸ್ಥೆಯದ್ದೇ ಹೊಣೆಯಾಗಿರುತ್ತದೆ.
ಕ್ರಿಮಿನಲ್ ಪ್ರಕರಣ ವರ್ಗ:
ಅಮೆರಿಕದ 2020ರ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ತಿರುಚುವ ಯತ್ನ ಕುರಿತಂತೆ ಡೊನಾಲ್ಡ್ ಟ್ರಂಪ್ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ಶುಕ್ರವಾರ ವಿಚಾರಣಾ ನ್ಯಾಯಾಲಯಕ್ಕೇ ಒಪ್ಪಿಸಲಾಗಿದೆ.
ಸುಪ್ರಿಂ ಕೋರ್ಟ್‌ನ ಅಭಿಪ್ರಾಯಯದ ಹಿನ್ನೆಲೆಯಲ್ಲಿ ಜಿಲ್ಲಾ ನ್ಯಾಯಾಧೀಶರ ಕೋರ್ಟ್‌ಗೆ ವಿಚಾರಣೆಯನ್ನು ಔಪಚಾರಿಕವಾಗಿ ವರ್ಗಾಯಿಸಲಾಯಿತು ಎಂದು ವರದಿ ತಿಳಿಸಿದೆ.