ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ ಬೆಂಬಲಿಸಿ ಅಮೆರಿಕದ ಸೆನೆಟ್‌ನಲ್ಲಿ ನಿರ್ಣಯ ಅಂಗೀಕಾರ

Last Updated 18 ಫೆಬ್ರುವರಿ 2022, 6:09 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ರಷ್ಯಾದ ಸಂಭವನೀಯ ಆಕ್ರಮಣದ ವಿರುದ್ಧ ಸ್ವತಂತ್ರ ಮತ್ತು ಪ್ರಜಾಸತ್ತಾತ್ಮಕ ಉಕ್ರೇನ್ ಅನ್ನು ಬೆಂಬಲಿಸುವ ಉಭಯಪಕ್ಷೀಯ ನಿರ್ಣಯವನ್ನು ಅಮೆರಿಕ ಸೆನೆಟ್‌ ಗುರುವಾರ ರಾತ್ರಿ ಸರ್ವಾನುಮತದಿಂದ ಅಂಗೀಕರಿಸಿದೆ.

‘ಉಕ್ರೇನ್‌ನ ರಕ್ಷಣಾ ಸಾಮರ್ಥ್ಯಗಳನ್ನು ಬಲಪಡಿಸಲು ಎಲ್ಲ ರೀತಿಯ ಭದ್ರತಾ ನೆರವು ಸೇರಿದಂತೆ ರಾಜಕೀಯ, ರಾಜತಾಂತ್ರಿಕ ಮತ್ತು ಮಿಲಿಟರಿ ಬೆಂಬಲವನ್ನು ಒದಗಿಸುವ ಮೂಲಕ, ತನ್ನ ಪ್ರಾದೇಶಿಕ ಸಮಗ್ರತೆಯನ್ನು ಮರುಸ್ಥಾಪಿಸಲು ಉಕ್ರೇನ್ ಸರ್ಕಾರ ನಡೆಸುತ್ತಿರುವ ನಿರಂತರ ಪ್ರಯತ್ನಗಳನ್ನು ಸೆನೆಟ್‌ ಬೆಂಬಲಿಸಲಿದೆ’ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.

ರಷ್ಯಾ ಕೆಲವೇ ದಿನಗಳಲ್ಲಿ ಉಕ್ರೇನ್‌ ಮೇಲೆ ದಾಳಿ ನಡೆಸುವ ಸಾಧ್ಯತೆಗಳಿವೆ ಎಂಬ ಸೂಚನೆಗಳಿವೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಹೇಳಿದ ಬೆನ್ನಿಗೇ ಸೆನೆಟ್‌ನಲ್ಲಿ ಈ ಮಹತ್ತರ ನಿರ್ಣಯ ಕೈಗೊಳ್ಳಲಾಗಿದೆ. ರಷ್ಯಾ ಸೇನೆ ಉಕ್ರೇನ್‌ ಗಡಿಯಲ್ಲಿ ಜಮಾಯಿಸಿದ್ದು, ಪುಟಿನ್‌ ದಾಳಿಯ ಯೋಜನೆಯಲ್ಲಿದ್ದಾರೆ ಎಂದು ಅಮೆರಿಕದ ಅಧಿಕಾರಿಗಳು ವಿವರಿಸಿದ್ದಾರೆ.

ಸೆನೆಟರ್‌ಗಳ ಈ ನಿರ್ಣಯವು ಕಾನೂನು ಬಲ ಹೊಂದಿಲ್ಲ. ಆದರೆ, ಸುರಕ್ಷಿತ, ಪ್ರಜಾಸತ್ತಾತ್ಮಕ ಮತ್ತು ಸ್ವತಂತ್ರ ಉಕ್ರೇನ್‌ಗಾಗಿ ಅಮೆರಿಕದ ಅಚಲ ಬೆಂಬಲವನ್ನು ದೃಢೀಕರಿಸುವ ಅಧಿಕೃತ ದಾಖಲೆಯಾಗಿರಲಿದೆ. ಉಕ್ರೇನ್‌ನ ಗಡಿಯಲ್ಲಿ ರಷ್ಯಾದ ಮಿಲಿಟರಿ ನಿಯೋಜನೆಯನ್ನು ಅದು ಖಂಡಿಸಿದೆ. ಈ ನಿರ್ಣಯವು ಅಮೆರಿಕ ಸೆನೆಟ್‌ನಲ್ಲಿ ಯಾವುದೇ ವಿರೋಧವಿಲ್ಲದೇ ಸರ್ವಾನುಮತದಿಂದ ಅಂಗೀಕಾರಗೊಂಡಿದೆ.

ರಷ್ಯಾದ ವಿರುದ್ಧ ಮಿಲಿಟರಿ ಬಲವನ್ನು ಬಳಸಲು ಅಥವಾ ಉಕ್ರೇನ್‌ನಲ್ಲಿ ಅಮೆರಿಕದ ಸಶಸ್ತ್ರ ಪಡೆಗಳನ್ನು ನಿಯೋಜಿಸಲು ನಿರ್ಣಯ ಅಧಿಕಾರ ನೀಡುತ್ತದೆ ಎಂದು ಅರ್ಥೈಸಬಾರದು ಎಂದೂ ನಿರ್ಣಯದ ಅಂತ್ಯದಲ್ಲಿ ಬರೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT