ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀಸಾ ಅರ್ಜಿಗಳ ತ್ವರಿತ ವಿಲೇವಾರಿ: ಹಲವು ಕ್ರಮ ಜಾರಿಗೊಳಿಸಿದ ಅಮೆರಿಕ

Last Updated 9 ಫೆಬ್ರುವರಿ 2023, 11:30 IST
ಅಕ್ಷರ ಗಾತ್ರ

ವಾಷಿಂಗ್ಟನ್: ಅಮೆರಿಕ ವೀಸಾಕ್ಕೆ ಅರ್ಜಿ ಸಲ್ಲಿಸಿ, ಸಂದರ್ಶನಕ್ಕಾಗಿ ಕಾಯುತ್ತಿರುವ ಭಾರತೀಯರ ಅನುಕೂಲಕ್ಕಾಗಿ ಅಮೆರಿಕ ವಿದೇಶಾಂಗ ಇಲಾಖೆಯು ಅಧ್ಯಕ್ಷರ ಸಲಹಾ ಆಯೋಗದ ಶಿಫಾರಸಿನಂತೆ ಹಲವು ಕ್ರಮಗಳನ್ನು ಜಾರಿಗೆ ತಂದಿದೆ.

ವೀಸಾ ಸಂದರ್ಶನ ಪ್ರಕ್ರಿಯೆಗಾಗಿ ಕಾಯುತ್ತಿರುವವರ ಸಂಖ್ಯೆಯನ್ನು ಕಡಿಮೆಗೊಳಿಸುವ ಸಂಬಂಧ ಇತರ ದೇಶಗಳಲ್ಲಿ ಅಮೆರಿಕದ ರಾಜತಾಂತ್ರಿಕ ಕಚೇರಿಗಳನ್ನು ತೆರೆಯಬೇಕು. ಈ ಕಚೇರಿಗಳಲ್ಲಿ ಕೌಂಟರುಗಳ ಹಾಗೂ ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸಬೇಕು. ವೀಸಾ ಅರ್ಜಿಗಳ ವಿಲೇವಾರಿಗೆ ಅಗತ್ಯವಿರುವ ಹೆಚ್ಚುವರಿ ಸಂಪನ್ಮೂಲಗಳನ್ನು ಒದಗಿಸಬೇಕು ಎಂಬುದು ಸೇರಿದಂತೆ ಆಯೋಗವು ಹಲವಾರು ಶಿಫಾರಸುಗಳನ್ನು ಮಾಡಿತ್ತು.

ವರ್ಚುವಲ್ ವಿಧಾನದ ಮೂಲಕ ಸಂದರ್ಶನ ನಡೆಸಲು ವಿದೇಶಾಂಗ ಇಲಾಖೆ ಅನುಮತಿ ನೀಡಬೇಕು. ವೀಸಾ ಅರ್ಜಿಗಳು ಅಧಿಕ ಸಂಖ್ಯೆಯಲ್ಲಿ ಬಾಕಿ ಇರುವ ಕಚೇರಿಗಳಲ್ಲಿ ನಡೆಯುವ ವರ್ಚುವಲ್ ಸಂದರ್ಶನ ಪ್ರಕ್ರಿಯೆಗೆ, ವಿಶ್ವದ ಇತರ ದೇಶಗಳಲ್ಲಿನ ರಾಯಭಾರ ಹಾಗೂ ಕಾನ್ಸುಲೇಟ್‌ ಕಚೇರಿಗಳ ಸಿಬ್ಬಂದಿ ಸಹಾಯ ಮಾಡಲು ಅನುಮತಿ ನೀಡಬೇಕು ಎಂದೂ ಆಯೋಗವು ಶಿಫಾರಸು ಮಾಡಿತ್ತು.

ಆಯೋಗದ ಸದಸ್ಯರಾದ, ಸಿಲಿಕಾನ್‌ ವ್ಯಾಲಿಯ ಅಜಯ್‌ ಜೈನ್ ಭೂಟೋರಿಯಾ ಅವರು ಈ ಸಲಹೆಗಳನ್ನು ಆಯೋಗದ ಸಭೆಯಲ್ಲಿ ಮಂಡಿಸಿದ್ದರು.

ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ಜಾರಿಯಲ್ಲಿದ್ದ ನಿರ್ಬಂಧಗಳನ್ನು ತೆಗೆದು ಹಾಕಿದ ನಂತರ ಅಮೆರಿಕ ವೀಸಾ ಕೋರಿ ಅರ್ಜಿ ಸಲ್ಲಿಸುವ ಭಾರತೀಯರ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ವೀಸಾ ಸಂದರ್ಶನ ಪ್ರಕ್ರಿಯೆ ಪೂರ್ಣಗೊಳ್ಳಲು ಸದ್ಯ 800 ದಿನಗಳಿಗೂ ಹೆಚ್ಚು ಸಮಯ ತಗುಲುತ್ತಿದ್ದು, ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರಿಗೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ ಈ ಕ್ರಮಗಳನ್ನು ಜಾರಿಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT