ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರ್ಭನಿರೋಧಕ ಮಾತ್ರೆಗೆ ವೈದ್ಯರ ಶಿಫಾರಸು ಬೇಕಿಲ್ಲ: ಔಷಧ ಮಳಿಗೆಯಲ್ಲೇ ಲಭ್ಯ– ರಿಷಿ

Published 16 ನವೆಂಬರ್ 2023, 15:26 IST
Last Updated 16 ನವೆಂಬರ್ 2023, 15:26 IST
ಅಕ್ಷರ ಗಾತ್ರ

ಲಂಡನ್: ವೈದ್ಯರ ಶಿಫಾರಸಿಗಾಗಿ ವಾರಗಟ್ಟಲೆ ಕಾಯುವ ಗೋಜಿನಿಂದ ಮಹಿಳೆಯರನ್ನು ಪಾರು ಮಾಡಿರುವ ಇಂಗ್ಲೆಂಡ್ ಸರ್ಕಾರ, ಗರ್ಭನಿರೋಧಕ ಮಾತ್ರೆ ಖರೀದಿಗೆ ಸ್ಥಳೀಯ ಔಷಧ ಅಂಗಡಿಗೆ ತೆರಳಿದರೆ ಸಾಕು ಎಂದು ಆದೇಶಿಸಿದೆ.

ಡಿಸೆಂಬರ್‌ನಿಂದ ಜಾರಿಗೆ ಬರಲಿರುವ ಈ ಹೊಸ ಕಾನೂನನ್ನು ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಗರ್ಭನಿರೋಧಕ ಮಾತ್ರೆಗಳನ್ನು ಖರೀದಿಸಲು ವೈದ್ಯರ ಭೇಟಿಗಾಗಿ ಸದ್ಯ ಇಂಗ್ಲೆಂಡ್‌ನಲ್ಲಿ ಕನಿಷ್ಠ ಎರಡು ವಾರಗಳ ಕಾಲ ಕಾಯುವ ಪರಿಸ್ಥಿತಿ ಇದೆ. ಇದಕ್ಕೆ ಬದಲಾವಣೆ ತಂದಿರುವ ಅಲ್ಲಿನ ಸರ್ಕಾರ, ಸಮೀಪದ ಔಷಧ ಮಳಿಗೆಗೆ ತೆರಳಿ ರಕ್ತದೊತ್ತಡ ಮತ್ತು ದೇಹದ ತೂಕವನ್ನು ಪರೀಕ್ಷಿಸಿಕೊಂಡು ಗುಳಿಗೆಗಳನ್ನು ಖರೀದಿಸಲು ಅವಕಾಶ ಮಾಡಿಕೊಟ್ಟಿದೆ.

ಪ್ರೊಜೆಸ್ಟೊಜೆನ್‌ ಖರೀದಿಗೆ ಇಂಥ ಸಣ್ಣ ತಪಾಸಣೆಯ ಅಗತ್ಯವೂ ಇಲ್ಲ ಎಂದಿದೆ. ಒಂದೊಮ್ಮೆ ಪ್ರೊಜೆಸ್ಟೊಜೆನ್ ಜತೆಗೆ ಈಸ್ಟ್ರೊಜೆನ್‌ ಮಾತ್ರೆಯನ್ನೂ ತೆಗೆದುಕೊಳ್ಳುವುದಾದರೆ ರಕ್ತದೊತ್ತಡ ಪರೀಕ್ಷೆ ಮತ್ತು ದೇಹದ ತೂಕ ಅಗತ್ಯ ಎಂದು ಹೇಳಿದೆ.

ಇಂಗ್ಲೆಂಡ್‌ನಲ್ಲಿ ಸದ್ಯ ಒಂದು ಕೋಟಿ ಮಹಿಳೆಯರು ಕಳೆದ 2 ವಾರಗಳಿಂದ ವೈದ್ಯರ ಭೇಟಿಯಾಗಿ ಕಾಯುತ್ತಿರುವುದು ವರದಿಯಾದ ಬೆನ್ನಲ್ಲೇ ರಿಷಿ ಸುನಕ್ ಸರ್ಕಾರ ಈ ಕ್ರಮ ಕೈಗೊಂಡಿದೆ. ಕಳೆದ ಸೆಪ್ಟೆಂಬರ್‌ನಲ್ಲೂ ಇದೇ ವಿಷಯವಾಗಿ ಚರ್ಚೆ ನಡೆದಿತ್ತು. ಆಗ ಮಧ್ಯಪ್ರವೇಶಿಸಿದ್ದ ಇಂಗ್ಲೆಂಡ್ ಸರ್ಕಾರ ಕೇವಲ 14 ದಿನಗಳ ಒಳಗಾಗಿ ವೈದ್ಯರ ಭೇಟಿ ಸಾಧ್ಯ ಎಂದು ಹೇಳಿತ್ತು. 

2022–23ರಲ್ಲಿ 40 ಲಕ್ಷ ಜನರು ಪ್ರೊಜೆಸ್ಟೊಜೆನ್ ಮಾತ್ರೆ ಖರೀದಿಸಿದ್ದಾರೆ. 30 ಲಕ್ಷ ಜನರು ಪ್ರೊಜೆಸ್ಟೊಜೆನ್ ಜತೆಗೆ ಈಸ್ಟ್ರೊಜೆನ್‌ ಮಾತ್ರೆಯನ್ನೂ ಖರೀದಿಸಿದ್ದಾರೆ. ಈ ನೂತನ ಕಾನೂನಿನ ಅನ್ವಯ ಐದು ಲಕ್ಷ ಜನರು ಇದರ ಪ್ರಯೋಜನ ಪಡೆಯಲಿದ್ದಾರೆ ಎಂದು ಆರೋಗ್ಯ ಇಲಾಖೆ ಹೇಳಿದೆ.

'ಮಹಿಳೆಯರಿಗೆ ಈ ಸವಲತ್ತು ಮತ್ತೊಂದು ಆಯ್ಕೆಯಾಗಿದೆ. ಮಹಿಳೆಯರು ತಮ್ಮ ಆಯ್ಕೆಯ ಗರ್ಭನಿರೋಧಕ ಮಾತ್ರೆಗಳನ್ನು ಖರೀದಿಸಬಹುದಾಗಿದೆ’ ಎಂದು ಆರೋಗ್ಯ ಸಚಿವೆ ವಿಕ್ಟೋರಿಯಾ ಅಟ್ಕಿನ್ಸ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT