ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತ ವಿದ್ವತ್ತಿನ ಮುಂದೆ ತಲೆಬಾಗಿ...

ಚೌಡಯ್ಯ ಸಭಾಂಗಣದಲ್ಲಿ ಉಲ್ಹಾಸ್‍ ಕಶಾಳಕರ್‌ ಅವರ ಹಾಡುಗಾರಿಕೆಯ ನೆನಪಿನಲ್ಲಿ
Last Updated 2 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಸಂಗೀತ ಗೊತ್ತೇ ಇಲ್ಲದ ಕುಟುಂಬದಲ್ಲಿ ಜನಿಸಿದವನು ನಾನು. ಸೇಂಟ್‍ ಸ್ಟೀಫನ್ಸ್ ಕಾಲೇಜಿನಲ್ಲಿ ಸಂಗೀತಪ್ರೇಮಿಗಳಾದ ಬಂಗಾಳಿ ಗುಂಪಿನ ಜತೆಗಿನ ಒಡನಾಟ ಇಲ್ಲದೇ ಇರುತ್ತಿದ್ದರೆ ಶಾಸ್ತ್ರೀಯ ಸಂಗೀತದಲ್ಲಿ ನಾನು ಅಭಿರುಚಿ ಬೆಳೆಸಿಕೊಳ್ಳುವುದು ಸಾಧ್ಯವೇ ಆಗುತ್ತಿರಲಿಲ್ಲ. ಕಮಾನಿ ಆಡಿಟೋರಿಯಂನಲ್ಲಿ ಮಲ್ಲಿಕಾರ್ಜುನ ಮನ್ಸೂರ್ ಮತ್ತು ಭೀಮಸೇನ ಜೋಷಿ ಅವರ ಕಛೇರಿಗಳಿಗೆ ಗೆಳೆಯರು ನನ್ನನ್ನು ಕರೆದೊಯ್ದಿದ್ದರು. ಮಾಡರ್ನ್‌ ಸ್ಕೂಲ್‍ನಲ್ಲಿ ನಡೆದ ಅಲಿ ಅಕ್ಬರ್—ರವಿಶಂಕರ್ ಜುಗಲ್‍ಬಂದಿ ಮರೆಯಲಾಗದ ಕಾರ್ಯಕ್ರಮ. ಶನಿವಾರ ರಾತ್ರಿ ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿದ್ದ ರಾಷ್ಟ್ರೀಯ ಕಾರ್ಯಕ್ರಮಗಳನ್ನೂ ನನಗೆ ಅವರು ಪರಿಚಯಿಸಿದರು. ನಾನು ಖರೀದಿಸಿದ ಮೊದಲ ಕ್ಯಾಸೆಟ್ ರೆಕಾರ್ಡರ್‌ನಲ್ಲಿ ಆ ಕಾರ್ಯಕ್ರಮಗಳನ್ನು ಧ್ವನಿಮುದ್ರಿಸಿಕೊಂಡಿದ್ದೆ.

ಡಾಕ್ಟರೇಟ್‍ಗಾಗಿ ನಾನು ದೆಹಲಿಯಿಂದ ಕಲ್ಕತ್ತಾಕ್ಕೆ ಹೋದೆ. ಅಲ್ಲಿಯೂ ನನ್ನ ಸಂಗೀತ ಶಿಕ್ಷಣ ಮುಂದುವರಿಯಿತು. ಕಲ್ಕತ್ತಾದ ಜೋಕಾದಲ್ಲಿದ್ದ ಸಂಸ್ಥೆಯಲ್ಲಿ ಅಧ್ಯಯನ ಮಾಡುತ್ತಿದ್ದಾಗಲೂ ಆಕಾಶವಾಣಿಯ ಸಂಗೀತ ಕಾರ್ಯಕ್ರಮ ಕೇಳುತ್ತಿದ್ದೆ. ಹಾಗೆಯೇ ಕಲ್ಕತ್ತಾ ಸಿಟಿಯೊಳಗೆ ನಡೆಯುತ್ತಿದ್ದ ಸಂಗೀತ ಕಛೇರಿಗಳಿಗಾಗಿ ದೀರ್ಘ ಪ್ರಯಾಣ ಮಾಡುತ್ತಿದ್ದೆ. ಕಲ್ಕತ್ತಾದಲ್ಲಿದ್ದ ಇಬ್ಬರು ಶ್ರೇಷ್ಠ ಸಂಗೀತ ವಿದ್ವಾಂಸರು (ಇವರು ಅವಜ್ಞೆಗೆ ಒಳಗಾದದ್ದೇ ಹೆಚ್ಚು) ನನಗೆ ಅಚ್ಚುಮೆಚ್ಚಾಗಿದ್ದರು. ಅವರೆಂದರೆ, ಸರೋದ್‍ ವಾದಕ ಬುದ್ಧದೇವ ದಾಸ್‍ಗುಪ್ತಾ ಮತ್ತು ರಾಂಪುರ ಘರಾನಾದ ಗಾಯಕ ನಿಸಾರ್ ಹುಸೇನ್‍ ಖಾನ್‍.

ಬೋಧನೆಯ ಕೆಲಸಕ್ಕಾಗಿ ನಾನು 1986ರಲ್ಲಿ ಒಂದು ವರ್ಷದ ಮಟ್ಟಿಗೆ ಅಮೆರಿಕಕ್ಕೆ ಹೋದಾಗ ಜತೆಗೆ ಕ್ಯಾಸೆಟ್‍ಗಳ ಸಂಗ್ರಹವನ್ನೂ ಒಯ್ದಿದ್ದೆ. ಒಬ್ಬ ವಿದ್ಯಾರ್ಥಿಗೆ ಶಾಸ್ತ್ರೀಯ ಸಂಗೀತದ ಬಗ್ಗೆ ನನಗಿಂತ ಬಹಳ ಬಹಳ ಹೆಚ್ಚು ತಿಳಿದಿತ್ತು. ಹಾಗಾಗಿ ತರಗತಿಯ ಹೊರಗೆ ನಾನು ಆ ವಿದ್ಯಾರ್ಥಿಯ ಜತೆಯಾಗುತ್ತಿದ್ದೆ. ಅವರ ಹೆಸರು ಜೆಫ್‍ ಕ್ಯಾಂಬೆಲ್‍. ಅವರ ಅಪ್ಪ ಮತ್ತು ಅಜ್ಜ ಕೂಡ ಅಮೆರಿಕದಲ್ಲಿ ಧರ್ಮ ಪ್ರಚಾರದ ಕೆಲಸದಲ್ಲಿ ತೊಡಗಿದ್ದವರು. ಜೆಫ್‍ ಬೆಳೆದದ್ದು ಮಸ್ಸೂರಿಯಲ್ಲಿ. ಅವರು ಬಾನ್ಸುರಿ (ಕೊಳಲು) ನುಡಿಸುತ್ತಿದ್ದರು. ಶ್ರೇಷ್ಠ ಕೊಳಲುವಾದಕ ಪನ್ನಾಲಾಲ್‍ ಘೋಷ್‍ ಅವರು ನುಡಿಸಿದ ಯಮನ್‍ ರಾಗದ ಧ್ವನಿಮುದ್ರಿಕೆ ಆಲಿಸಲು ಒಂದು ದಿನ ನನ್ನನ್ನು ಜೆಫ್‍ ಆಹ್ವಾನಿಸಿದರು. ಹಿನ್ನೆಲೆಯಿಂದ ಕೇಳಿಬರುತ್ತಿದ್ದ ಅತ್ಯಂತ ಸೌಮ್ಯವಾದ ತಬಲಾ ಸದ್ದನ್ನು ಗಮನಿಸುವಂತೆ ಸಂಗೀತ ಆರಂಭವಾಗುತ್ತಿದ್ದಂತೆಯೇ ಜೆಫ್‍ ಹೇಳಿದರು. ತಬಲಾ ಸಾಥ್‍ ಹೀಗೆಯೇ ಇರಬೇಕು, ಅದು ಮುಖ್ಯ ಕಲಾವಿದನಿಗೆ ಪೂರಕವಾಗಿ ಸಾಗಬೇಕು ಎಂದು ಜೆಫ್‍ ನನಗೆ ವಿವರಿಸಿದರು. ಅತ್ಯಾಕರ್ಷಕ ಕಲಾವಿದ ಜಾಕಿರ್ ಹುಸೇನ್‍ ಅವರು ಆರಂಭಿಸಿದ, ಪ್ರಧಾನ ಕಲಾವಿದನ ಜತೆಗೇ ಸ್ಪರ್ಧೆಗೆ ನಿಲ್ಲುವಂತಹ ಉಜ್ವಲವಾದ ಹೊಸ ರೀತಿಯ ತಬಲಾ ನುಡಿಸುವಿಕೆ ಶೈಲಿಯ ಬಗ್ಗೆ ಜೆಫ್‍ಗೆ ಆಸಕ್ತಿ ಇರಲಿಲ್ಲ. ನನ್ನ ವಿದ್ಯಾರ್ಥಿಯ ಈ ಬಗೆಯ ಬೋಧನೆಯಿಂದಾಗಿ, ಹಿಂದಿನ ಕಾಲದ ಶಾಸ್ತ್ರೀಯ ಸಂಯಮದ ತಬಲಾ ನುಡಿಸುವಿಕೆಯನ್ನು ನಾನೂ ಇಷ್ಟಪಡತೊಡಗಿದೆ. ಕೊಳಲು ವಾದಕ ಅಥವಾ ಸಿತಾರ್ ವಾದಕ ಅಥವಾ ಗಾಯಕರೇ ನಿಜವಾದ ತಾರೆ ಎಂದು ತಬಲಾ ಸಾಥಿ ನಂಬಿದ್ದಂತಹ ಕಾಲ ಅದು.

ದೆಹಲಿಯ ಸಂಶೋಧನಾ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಸೇರುವುದಕ್ಕಾಗಿ ಭಾರತಕ್ಕೆ ಹಿಂದಿರುಗಿದೆ. ಕೆಲ ವರ್ಷಗಳ ಬಳಿಕ ಜೆಫ್‍ಗೆ ಕೂಡ ದೆಹಲಿಯಲ್ಲಿ ಕೆಲಸ ಸಿಕ್ಕಿತು. ನಮ್ಮ ಗೆಳೆತನ ಪುನಶ್ಚೇತನ ಪಡೆಯಿತು. ಪ್ರಗತಿ ಮೈದಾನದಲ್ಲಿ ನಡೆಯುವ ಸರಣಿ ಸಂಗೀತ ಕಾರ್ಯಕ್ರಮವನ್ನು ಕೇಳಲು ಬರುವುದಕ್ಕೆ ಸಾಧ್ಯವಿದೆಯೇ ಎಂದು ಒಂದು ದಿನ ದೂರವಾಣಿ ಕರೆ ಮಾಡಿ ಜೆಫ್‍ ಆಹ್ವಾನಿಸಿದರು. ಕಾರ್ಯಕ್ರಮದ ಪಟ್ಟಿ ಹೊಂದಿದ್ದ ಜೆಫ್‍, ಹಲವು ಕಲಾವಿದರ ಹೆಸರುಗಳು ಗೊತ್ತಾಗುತ್ತಿಲ್ಲ ಎಂದರು. ಹಲವು ಹೆಸರುಗಳು ‘ಕರ್’ ಪದದಿಂದ ಕೊನೆಯಾಗುತ್ತಿದ್ದವು (ಕ್ರಿಕೆಟ್‍ನಲ್ಲಿ ಇರುವ ಪ್ರಸಿದ್ಧರ ಹಾಗೆ- ಗವಾಸ್ಕರ್, ತೆಂಡುಲ್ಕರ್, ಮಾಂಜ್ರೇಕರ್, ವೆಂಗಸರ್ಕರ್ ಮುಂತಾದವರ ಹಾಗೆ ).

ಕಲಾವಿದರ ಹೆಸರನ್ನು ಜೆಫ್‍ ನನಗೆ ಓದಿ ಹೇಳಿದರು. ಕೊನೆಯ ಹೆಸರುಗಳನ್ನು ಗಮನಿಸಿದರೆ ಅವು ಭರವಸೆದಾಯಕವಾಗಿದ್ದವು. ನನ್ನ ‘ವಿದ್ಯಾರ್ಥಿ ಶಿಕ್ಷಕ’ ಒಂದಿಡೀ ವಾರ, ಸಂಜೆಯ ಹೊತ್ತು ಪ್ರಗತಿ ಮೈದಾನಕ್ಕೆ ಹೋಗುವ ದಾರಿಯಲ್ಲಿ ನನ್ನನ್ನೂ ಕರೆದುಕೊಂಡು ಹೋದರು. ‘ಕರ್’ನಿಂದ ಕೊನೆಯಾಗುವ ಹಲವು ಹೆಸರುಗಳನ್ನು ಹೊಂದಿದ್ದ ಕಲಾವಿದರ ಸಂಗೀತ ಕಛೇರಿಗೆ ನಾವು ಕಿವಿಯಾದೆವು. ಅವರಲ್ಲಿ ಶ್ರುತಿ ಸಡೋಲಿಕರ್‌, ಪದ್ಮಾ ತಲ್ವಲ್ಕರ್, ಆರತಿ ಅಂಕಲೀಕರ್‌ ಟಿಕೆಕರ್‌ ಮತ್ತು ಉಲ್ಹಾಸ್‍ ಕಶಾಳಕರ್‌್‌ ಇದ್ದರು. ಅವರೆಲ್ಲರೂ ಸಣ್ಣ ವಯಸ್ಸಿನವರಾಗಿದ್ದರು- ಕೆಲವರು ಮೂವತ್ತರ ಒಳಗಿದ್ದರೆ, ಕೆಲವರು ಮೂವತ್ತರ ಆರಂಭದಲ್ಲಿದ್ದರು. ಅವರಲ್ಲಿ ಕೊನೆಗೆ ಸೂಚಿಸಿದ ‘ಕರ್’, ಜೆಫ್‍ ಮತ್ತು ನನಗೆ ಬಹಳ ಇಷ್ಟವಾದರು. ಬಳಿಕವೂ ನಾನು ಅವರ ಸಂಗೀತವನ್ನು ನೇರವಾಗಿ ಅಥವಾ ಸಿ.ಡಿ.ಯ ಮೂಲಕ ಆಲಿಸಿದ್ದೇನೆ. ಮಲ್ಲಿಕಾರ್ಜುನ, ಭೀಮಸೇನ, ಕುಮಾರ ಗಂಧರ್ವ, ಬಸವರಾಜ ರಾಜಗುರು ಮತ್ತು ಕಿಶೋರಿ ಅಮೋಣಕರ್‌ ಮರೆಯಾದ ಬಳಿಕ ಕಶಾಳಕರ್‌‌ ನನಗೆ ಅಚ್ಚುಮೆಚ್ಚಿನ ಗಾಯಕರಾದರು. ಅವರ ಹಾಡುಗಾರಿಕೆಯ ಸಾಕಷ್ಟು ಸಿ.ಡಿ.ಗಳು ನನ್ನ ಸಂಗ್ರಹಕ್ಕೆ ಸೇರಿಕೊಂಡವು. ಬಳಿಕ ನನ್ನ ಮಗ ಅದನ್ನು ಐಪಾಡ್‍ಗೆ ಹಾಕಿಕೊಟ್ಟ. ಮನೆಯಲ್ಲಿದ್ದಾಗ, ಸುದೀರ್ಘ ವಿಮಾನ ಪ್ರಯಾಣಗಳಲ್ಲಿ ನಾನು ಈ ಸಂಗೀತವನ್ನು ಆಲಿಸುತ್ತಿದ್ದೆ. ನೆಲದಿಂದ 35 ಸಾವಿರ ಅಡಿ ಮೇಲೆ ಆಕಾಶದಲ್ಲಿ ಕಳೆಯುವ ಹಲವು ತಾಸಿನ ದಣಿವನ್ನು ನಿವಾರಿಸಲು ಕಶಾಳಕರ್‌ ಅವರ ಶುದ್ಧ ನಾಟ ಮತ್ತು ಬಸಂತಿ ಕೇದಾರಗಳು ಅತ್ಯುತ್ತಮ ಪರಿಹಾರ.

2010ರಲ್ಲಿ (ಅಥವಾ ಅದರ ಆಚೀಚಿನ ವರ್ಷ) ನಾನು ದೆಹಲಿಯ ಇಂಡಿಯಾ ಇಂಟರ್ ನ್ಯಾಷನಲ್‍ ಸೆಂಟರ್‌ಗೆ ಹೋಗಿದ್ದೆ. ನನ್ನ ಹಿಂದೆಯೇ ಉಲ್ಹಾಸ್‍ ಕಶಾಳಕರ್‌ ನಿಂತಿದ್ದರು. 1990ರ ದಶಕದಲ್ಲಿ ನಾನು ಪ್ರಗತಿ ಮೈದಾನದಲ್ಲಿ ಅವರ ಹಾಡುಗಾರಿಕೆ ಕೇಳಿದ್ದಾಗ ಅವರ ಕೂದಲು ದಟ್ಟ ಕಪ್ಪು ಬಣ್ಣದ್ದಾಗಿತ್ತು. ಈಗ ಅದು ಅವರ ಸಂಗೀತದಂತೆ ಮಾಗಿ, ಬಿಳಿ ಬಣ್ಣಕ್ಕೆ ತಿರುಗಿದೆ. ಕೌಂಟರ್‌ನಲ್ಲಿ ನನ್ನ ಹಿಂದೆ ನಿಂತಿದ್ದ ವ್ಯಕ್ತಿಯನ್ನು ನೋಡಿದಾಗ, ಹದಿನೈದರ ಹರೆಯದಲ್ಲಿ ಟೈಗರ್ ಪಟೌಡಿ ಅಥವಾ ಬಿಷನ್‍ ಬೇಡಿ ಅವರನ್ನು ನೋಡಿದಾಗ ಆಗಬಹುದಾದ ರೋಮಾಂಚನವೇ ಆಯಿತು. ಆ ದಿನಗಳಲ್ಲಿ ಆಗಿದ್ದರೆ ನನ್ನ ಹೀರೊ ಬಳಿಗೆ ಓಡಿ ಹೋಗಿ, ಹೊಗಳಿಕೆಯ ಮಳೆಗರೆದು ಹಸ್ತಾಕ್ಷರಕ್ಕೆ ಬೇಡಿಕೆ ಇಡುತ್ತಿದ್ದೆ. ಆದರೆ, ಈಗ ನನಗೆ ಹದಿನೈದು ಅಲ್ಲ, ಐವತ್ತು. ಜತೆಗೆ, ಪಕ್ಕದಲ್ಲಿ ಇರುವವರು ಕ್ರಿಕೆಟ್‍ ಆಟಗಾರ ಅಲ್ಲ, ಸಂಗೀತಗಾರ, ಶಾಸ್ತ್ರೀಯ ಸಂಗೀತದ ಗಾಯಕ. ಅಂದು ಸಂಜೆ ಅವರಿಗೆ ಕಛೇರಿ ಇರಬಹುದು, ನಾನು ಅವರಿಗೆ ತೊಂದರೆ ಕೊಡಲೇಬಾರದು. ಹಾಗಾಗಿ ಮೌನವಾಗಿ ಸಹಿ ಮಾಡಿ ನನ್ನ ಕೊಠಡಿಯತ್ತ ಸಾಗಿದೆ. ಅವರೂ ಹಾಗೆಯೇ ಮಾಡಿರಬೇಕು.

ಕೆಲವು ವರ್ಷಗಳ ಹಿಂದೆ, ಬೆಂಗಳೂರಿನ ಚೌಡಯ್ಯ ಸಭಾಂಗಣದಲ್ಲಿ ಕಶಾಳಕರ್‌‌ ಹಾಡುಗಾರಿಕೆ ಇದೆ ಎಂಬುದು ನನ್ನ ಕಿವಿಗೆ ಬಿತ್ತು. ನನ್ನ ವಿದ್ಯಾರ್ಥಿ ದಿನಗಳಲ್ಲಿ ಈ ಬೃಹತ್‍ ಸಭಾಂಗಣದ ಕೊನೆಯ ಸಾಲಿನಲ್ಲಷ್ಟೇ ನನಗೆ ಸೀಟು ಸಿಕ್ಕುತ್ತಿತ್ತು. ವಯಸ್ಸು ಹೆಚ್ಚಾದಂತೆ ಮಧ್ಯ ಭಾಗದ ಸಾಲಿನಲ್ಲಿ ಸೀಟು ದಕ್ಕತೊಡಗಿತು. ಇನ್ನಷ್ಟು ವಯಸ್ಸು ಹೆಚ್ಚಾದಂತೆ, ಸಭಾಂಗಣ ಭರ್ತಿಯಾಗಲು ನಾನು ಕಾಯುತ್ತಿದ್ದೆ, ಬಳಿಕ ಎರಡು ಅಥವಾ ಮೂರನೇ ಸಾಲಿನ ಮೂಲೆಯ ಖಾಲಿ ಕುರ್ಚಿಯೊಂದರತ್ತ ಹೋಗಿ ಕುಳಿತುಕೊಳ್ಳುತ್ತಿದ್ದೆ. ಯಾರಾದರೂ ‘ಟಿಕೆಟ್‍ ಎಲ್ಲಿ’ ಎಂದು ಕೇಳಿದರೆ ನಾನು ‘ಪ್ರೆಸ್‍, ಪ್ರೆಸ್‍’ ಎಂದು ಹೇಳಿಬಿಡುತ್ತಿದ್ದೆ. (‘ಅಶ್ವತ್ಥಾಮ ಹತಾ ಕುಂಜರ’ ಎಂಬಂತಹ ಸುಳ್ಳು ಅದು, ನಾನು ಪತ್ರಿಕೆಗಳಿಗೆ ಬರೆಯುತ್ತೇನಾದರೂ ಎಂದೂ ಸಂಗೀತದ ಬಗ್ಗೆ ಬರೆದಿಲ್ಲ).

ಈ ಸಂಗೀತ ಕಛೇರಿಯ ಸಮಯದಲ್ಲಿ ನಾನು ಇಂತಹ ವಂಚನೆಯ ಮೊರೆ ಹೋಗಬೇಕಾದ ಅಗತ್ಯ ಇರಲಿಲ್ಲ. ನಗರದಲ್ಲಿ ಸಾಕಷ್ಟು ಪರಿಚಿತ ವ್ಯಕ್ತಿಯೇ ಆಗಿದ್ದುದರಿಂದ ನನ್ನ ಹಕ್ಕು ಎಂಬಂತೆ ಮೊದಲ ಸಾಲಿನ ಆಸನದಲ್ಲಿಯೇ ಕುಳಿತುಕೊಳ್ಳಬಹುದಿತ್ತು. 2016ರ ಜೂನ್‍ನಲ್ಲಿ ಚೌಡಯ್ಯ ಸಭಾಂಗಣದಲ್ಲಿ ನಡೆದ ಕಶಾಳಕರ್‌‌ ಅವರ ಈ ಕಾರ್ಯಕ್ರಮದಲ್ಲಿ ನಾನು ಹಾಗೆಯೇ ಕುಳಿತೆ.

ಸಪ್ತಕ್‍ ಎಂಬ ಸಂಗೀತಪ್ರೇಮಿಗಳ ಗುಂಪು ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಗುಂಪಿನ ಸ್ಥಾಪಕ ಜಿ.ಎಸ್‍. ಹೆಗಡೆಯವರ ಪತ್ನಿ ಮತ್ತು ಮಕ್ಕಳು ಶಾಸ್ತ್ರೀಯ ಸಂಗೀತಗಾರರು. ಕಾರ್ಯಕ್ರಮದ ಆರಂಭದಲ್ಲಿ ಕಿರಿಯ ಗಾಯಕರು ಹಾಡು ಮುಗಿಸಿ ಎದ್ದು ಹೋದರು. ಆ ನಡುವಣ ಅವಧಿ ಸಾಮಾನ್ಯಕ್ಕಿಂತ ಹೆಚ್ಚು ದೀರ್ಘವಾಗಿತ್ತು. ಕೊನೆಗೂ, ಕಶಾಳಕರ್‌‌ ಮತ್ತು ಅವರ ತಂಡದವರನ್ನು ವೇದಿಕೆಗೆ ಆಹ್ವಾನಿಸಲಾಯಿತು. ಕೆಲವು ನಿಮಿಷ ಅವರು ವೇದಿಕೆಯಲ್ಲಿ ಸುಮ್ಮನೆ ಕುಳಿತಿದ್ದರು. ಹೆಗಡೆಯವರು ಹಾಡುಗಾರಿಕೆ ಆರಂಭಿಸಲು ಇನ್ನೂ ಅನುಮತಿ ಕೊಟ್ಟಿರಲಿಲ್ಲ. ಕಛೇರಿಗೆ ಚಾಲನೆ ಕೊಡಲು ವಿವಿಐಪಿ ಒಬ್ಬರನ್ನು ಆಹ್ವಾನಿಸಲಾಗಿತ್ತು (ಬಹುಶಃ ಅವರೊಬ್ಬ ಸಚಿವರೇ ಇರಬೇಕು). ಆ ವ್ಯಕ್ತಿ ಬರಲೇ ಇಲ್ಲ. ಕಾಯ್ದು ಸುಸ್ತಾದ ಹೆಗಡೆಯವರು, ಕಲಾವಿದರಿಗೆ ಗೌರವ ಅರ್ಪಿಸುವಂತೆ ಮೊದಲ ಸಾಲಿನಲ್ಲಿ ಎದ್ದು ಕಾಣುವಂತೆ ಕುಳಿತಿದ್ದ ನನ್ನನ್ನು ಕೇಳಿಕೊಂಡರು. ತಬಲಾ, ಹಾರ್ಮೋನಿಯಂ ವಾದಕರಿಗೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಪ್ರಧಾನ ಹಾಡುಗಾರರಿಗೆ ನಾನು ಗೌರವಪೂರ್ವಕವಾಗಿ ವಂದಿಸಿದೆ. ಒಂದೇ ಒಂದು ಪದದ ವಿನಿಮಯವಾಗಲಿಲ್ಲ. ಅಲ್ಲಿ ಮಾತಿನ ಅಗತ್ಯವೇ ಇರಲಿಲ್ಲ.

ಕಛೇರಿ ಅತ್ಯದ್ಭುತವಾಗಿತ್ತು. ಕಶಾಳಕರ್‌‌ ಅವರ ಭೂಪ್‍ ಅತ್ಯುತ್ತಮವಾಗಿದ್ದರೆ, ಕಾಮೋದ್‍ ಅದನ್ನೂ ಮೀರಿಸುವಂತಿತ್ತು. ಸಂಪೂರ್ಣ ತೃಪ್ತನಾಗಿ ನಾನು ಮನೆಗೆ ಹೋದೆ. ಒಂದೆರಡು ದಿನಗಳ ಬಳಿಕ ಜಿ.ಎಸ್‍. ಹೆಗಡೆ ಅವರ ಇ-ಮೇಲ್‍ ಸಂದೇಶ ಬಂತು. ಜತೆಗೆ ಕೆಲವು ಛಾಯಾಚಿತ್ರಗಳೂ ಇದ್ದವು. ಕಶಾಳಕರ್‌‌ ಅವರಿಗೆ ವಂದಿಸಿ ಹೂಗುಚ್ಛ ನೀಡುವ ಚಿತ್ರ ಅವುಗಳಲ್ಲಿ ಒಂದು. ನನ್ನ ಸಂಗೀತ ಶಾಸ್ತ್ರಜ್ಞೆ ಗೆಳತಿ ಸುಮನಾ ರಮಣನ್‍ ಅವರಿಗೆ ಈ ಫೋಟೊವನ್ನು ಕಳುಹಿಸಿದೆ. ಅವರು ಕಶಾಳಕರ್‌‌ ಬಗ್ಗೆ ವಿದ್ವತ್‍ಪೂರ್ಣವಾದ ಲೇಖನಗಳನ್ನು ಬರೆದವರು. ಫೋಟೊದ ಜತೆಗೆ ಹೀಗೊಂದು ಶೀರ್ಷಿಕೆಯನ್ನು ಕೊಟ್ಟಿದ್ದೆ: ‘ಸಂಗೀತಪ್ರೇಮಿಯಾಗಿ ನನ್ನ ಜೀವನದ ಮತ್ತು ವೃತ್ತಿಯ ಅತ್ಯುತ್ಕೃಷ್ಟ ಕ್ಷಣ (ಈ ಕ್ಷೇತ್ರದ ಬಗ್ಗೆ ವಿದ್ವತ್ತು ಇಲ್ಲ, ಆದರೆ ಸಂಪೂರ್ಣ ಪ್ರಾಮಾಣಿಕ). ಅದು ಅಷ್ಟೇ ನಿಜ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT