ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಿನ್ನಾ: ಇತಿಹಾಸದ ಬೆರಗುಗೊಳಿಸುವ ವೈರುಧ್ಯ

Last Updated 14 ಸೆಪ್ಟೆಂಬರ್ 2018, 20:04 IST
ಅಕ್ಷರ ಗಾತ್ರ

ರಾಷ್ಟ್ರಪಿತ ಎಂದು ಪರಿಗಣಿಸಲಾದ ವ್ಯಕ್ತಿಯನ್ನು ಜನರು ಹೇಗೆ ನೋಡುತ್ತಾರೆ ಎಂಬುದು ಭಾರತ ಮತ್ತು ಪಾಕಿಸ್ತಾನದ ನಡುವಣ ವ್ಯತ್ಯಾಸಗಳಲ್ಲಿ ಒಂದು. ಗಾಂಧೀಜಿಯನ್ನು ಎಲ್ಲ ರೀತಿಯ ಭಾರತೀಯರು ಸಾರಾಸಗಟಾಗಿ ಮೂಲೆಗುಂಪು ಮಾಡಿಬಿಟ್ಟಿದ್ದಾರೆ; ಗಾಂಧಿ ನಿಗೂಢವಾದ ಪ್ರತಿಗಾಮಿ ಎಂದು ನಕ್ಸಲರು ಪರಿಗಣಿಸುತ್ತಾರೆ; ಮುಸ್ಲಿಮರ ಬಗ್ಗೆ ಅತಿಯಾದ ಮೃದು ಧೋರಣೆ ಹೊಂದಿದ್ದರು ಎಂದು ಹಿಂದುತ್ವವಾದಿಗಳು ಭಾವಿಸಿದ್ದಾರೆ; ಜಾತಿ ತಾರತಮ್ಯಕ್ಕೆ ಅವರ ವಿರೋಧ ಪ್ರಾಮಾಣಿಕವಾಗಿರಲಿಲ್ಲ ಎಂದು ಅಂಬೇಡ್ಕರ್‌ವಾದಿಗಳು ನಂಬಿದ್ದಾರೆ; ಲಿಂಗ ತಾರತಮ್ಯಕ್ಕೆ ಅವರು ತೋರಿದ ವಿರೋಧ ಗಟ್ಟಿಯಾಗಿರಲಿಲ್ಲ ಎಂಬುದು ಸ್ತ್ರೀವಾದಿಗಳ ದೂರು; ಹಿಂದಿನ ದಿನಗಳು ಬಹಳ ರೋಮಾಂಚಕಾರಿ ಎಂದು ಅವರು ಚಿತ್ರಿಸಿದ್ದರು ಎಂಬುದು ಆಧುನಿಕವಾದಿಗಳ ಭಾವನೆ; ಧರ್ಮಗ್ರಂಥಗಳನ್ನು ಅವರು ಅಗೌರವದಿಂದ ಕಂಡಿದ್ದರು ಎಂದು ಸಂಪ್ರದಾಯವಾದಿಗಳು ಹೇಳುತ್ತಾರೆ.

ಭಾರತದಲ್ಲಿ ರಾಷ್ಟ್ರಪಿತನ ಬಗ್ಗೆ ಮುಕ್ತವಾಗಿ ಮಾತನಾಡುತ್ತಾರೆ. ಆದರೆ, ಪಾಕಿಸ್ತಾನದಲ್ಲಿ ಆ ದೇಶದ ರಾಷ್ಟ್ರಪಿತನ ಬಗ್ಗೆ ವಿಮರ್ಶಾತ್ಮಕವಾಗಿ ಯಾರೂ ಮಾತನಾಡುವುದಿಲ್ಲ. ಪಾಕಿಸ್ತಾನ ರಚನೆಯಾದ ಸ್ವಲ್ಪ ದಿನಗಳಲ್ಲಿ ಲಾಹೋರ್‌ನ ಕವಿಯೊಬ್ಬರು ಜಿನ್ನಾ ಬಗ್ಗೆ ಹೀಗೆ ಬರೆದಿದ್ದರು: ‘ಓ ಖೈದ್‍-ಇ-ಅಜಂ, ಇಡೀ ದೇಶಕ್ಕೆ ನಿಮ್ಮ ಉಸಿರಷ್ಟೇ ಸಾಕು, ಓ ಖೈದ್‍– ಇ– ಅಜಂ, ಇಡೀ ದೇಶವನ್ನು ಒಟ್ಟಾಗಿರಿಸುವ ಶಕ್ತಿ ನೀವೇ’. ಆಗಿನಿಂದಲೂ ಪಾಕಿಸ್ತಾನದಲ್ಲಿ ಜಿನ್ನಾ ಬಗ್ಗೆ ಈ ರೀತಿಯ ಆರಾಧನಾಭಾವವೇ ಇದೆ. ದೂರು ಏನಾದರೂ ಇದ್ದರೆ, ಅದು ಅವರು ದೇಶಬಾಂಧವರನ್ನು ಬೇಗ ಬಿಟ್ಟು ಹೋದರು ಎಂಬುದು ಮಾತ್ರ.

ಎಪ್ಪತ್ತು ವರ್ಷಗಳ ಹಿಂದೆ ಇದೇ ವಾರ ಜಿನ್ನಾ ನಿಧನರಾದರು. ಆಗಿನಿಂದಲೂ ಅವರ ಅಕಾಲ ಮರಣದ ಬಗ್ಗೆ ಪಾಕಿಸ್ತಾನೀಯರಲ್ಲಿ ದುಃಖವಿದೆ. ಮತ್ತೊಂದು ಐದು ಅಥವಾ ಹತ್ತು ವರ್ಷ ಜಿನ್ನಾ ಬದುಕಿದ್ದಿದ್ದರೆ ತಮ್ಮ ದೇಶ ಭ್ರಷ್ಟಾಚಾರ ಅಥವಾ ಬಡತನ ಅಥವಾ ಭಯೋತ್ಪಾದನೆ ಅಥವಾ ಮೂಲಭೂತವಾದ ಅಥವಾ ಸೇನಾ ನಿರಂಕುಶಾಧಿಕಾರದಿಂದಾಗಿ ಈ ರೀತಿಯಲ್ಲಿ ವಿರೂಪಗೊಳ್ಳುತ್ತಿರಲಿಲ್ಲ ಎಂದು ಅಲ್ಲಿನ ಜನರು ಭಾವಿಸಿದ್ದಾರೆ. ಯಾವುದೇ ರಾಜಕೀಯ ಪಕ್ಷದ ನಂಟು ಇರಲಿ, ಎಲ್ಲ ಪಾಕಿಸ್ತಾನೀಯರೂ ಈ ವಿಚಾರದಲ್ಲಿ ಒಂದೇ ಅಭಿಪ್ರಾಯ ಹೊಂದಿದ್ದಾರೆ. ಜಿನ್ನಾ ಇನ್ನಷ್ಟು ದಿನ ಜೀವಿಸಿದ್ದಿದ್ದರೆ ತಮ್ಮದು ಶಾಂತಿಯುತ ಮತ್ತು ಹೆಚ್ಚು ಸಮೃದ‍್ಧವಾದ ದೇಶವಾಗಿರುತ್ತಿತ್ತು ಎಂಬುದೇ ಅವರ ಭಾವನೆ. ಸಮೃದ್ಧಿಯ ವಿಚಾರದಲ್ಲಿ ಭಾರತವನ್ನು ಮಾತ್ರವಲ್ಲ, ಇರಾನ್‍, ಇಂಡೊನೇಷ್ಯಾ ಮತ್ತು ಸೌದಿ ಅರೇಬಿಯಾ ದೇಶಗಳನ್ನೂ ಮೀರಿಸುತ್ತಿತ್ತು ಎಂಬುದು ಅವರ ಮನದಲ್ಲಿದೆ. ‘ಡಾನ್‌’ ಪತ್ರಿಕೆಯ ಕಳೆದ ವಾರದ ಸಂಪಾದಕೀಯ ಇದನ್ನೇ ಧ್ವನಿಸಿದ್ದು ಆ ಯೋಚನೆ ಹೀಗಿತ್ತು: ‘ಜಿನ್ನಾ ಅವರ ಪಾಕಿಸ್ತಾನ ಸಹಿಷ್ಣು, ಪ್ರಗತಿಪರ, ಎಲ್ಲರನ್ನೂ ಒಳಗೊಂಡ ಪ್ರಜಾತಂತ್ರ. ರಾಷ್ಟ್ರಪಿತ ತೋರಿದ ದಾರಿಗೆ ಪಾಕಿಸ್ತಾನದ ನಾಯಕರು ಮರಳುವರೇ?’

ರಾಷ್ಟ್ರಪಿತನನ್ನು ಹೇಗೆ ನೋಡಬೇಕು ಎಂದು ಪಾಕಿಸ್ತಾನೀಯರಿಗೆ ಹೇಳುವುದು ಒಬ್ಬ ಭಾರತೀಯನಾಗಿ ನನ್ನ ಕೆಲಸವಲ್ಲ. ಆದರೆ, ಜಿನ್ನಾ ಬದುಕಿದ್ದಾಗ ಅವರ ಸಮಕಾಲೀನರು ಅವರನ್ನು ಹೇಗೆ ಕಂಡಿದ್ದರು ಎಂಬುದನ್ನು ನೆನಪಿಸುವುದು ಒಬ್ಬ ಇತಿಹಾಸಕಾರನಾಗಿ ನನ್ನ ಕೆಲಸ ಹೌದು. ಜಿನ್ನಾ ಅವರ ಪ್ರಮುಖ ರಾಜಕೀಯ ಪ್ರತಿಸ್ಪರ್ಧಿಗಳಾದ ಗಾಂಧೀಜಿ ಮತ್ತು ನೆಹರೂ ಅವರನ್ನು ನಾನು ಇಲ್ಲಿ ಪ್ರಸ್ತಾಪಿಸುವುದಿಲ್ಲ. ಯಾಕೆಂದರೆ, ಜಿನ್ನಾ ಬಗ್ಗೆ ಈ ನಾಯಕರು ಹೊಂದಿದ್ದ ನಿಲುವುಗಳು ಎಲ್ಲರಿಗೂ ಗೊತ್ತಿರುವಂತಹುದೇ ಆಗಿವೆ.

ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯದ ಪ್ರಸಿದ್ಧ ಹಳೆ ವಿದ್ಯಾರ್ಥಿ ಮೌಲಾನಾ ಶೌಕತ್‍ ಅಲಿ ಅವರಿಂದ ಆರಂಭಿಸೋಣ. ಅಲಿ ಸಹೋದರರಲ್ಲಿ ಒಬ್ಬರಾದ ಶೌಕತ್‍, 1920ರ ದಶಕದ ಶುರುವಿನಲ್ಲಿ ಹಮ್ಮಿಕೊಳ್ಳಲಾದ ಅಸಹಕಾರ ಚಳವಳಿಯ ಸಂದರ್ಭದಲ್ಲಿ ಜಿನ್ನಾ ವಿರುದ್ಧ ಗಾಂಧಿಯ ಜತೆ ನಿಂತರು. 1926ರ ಹೊತ್ತಿಗೆ ಈ ಚಳವಳಿ ಸಂಪೂರ್ಣವಾಗಿ ತಣ್ಣಗಾಗಿತ್ತು. ಆ ಸಂದರ್ಭದಲ್ಲಿ, ಶಾಸನ ಸಭೆಗೆ ಬಾಂಬೆ ಕ್ಷೇತ್ರದಿಂದ ಜಿನ್ನಾ ತಮ್ಮ ಉಮೇದುವಾರಿಕೆ ಘೋಷಿಸಿದರು. ಬಾಂಬೆಯ ಮುಸ್ಲಿಮರನ್ನು ಪ್ರತಿನಿಧಿಸಲು ಜಿನ್ನಾ ಯಾಕೆ ಅರ್ಹರಲ್ಲ ಎಂಬ ಕಾರಣಗಳನ್ನು ವಿವರಿಸಿ ಶೌಕತ್‍ ಮನವಿಯೊಂದನ್ನು ನೀಡಿದರು. ಆ ಕಾರಣಗಳಲ್ಲಿ ಕೆಲವು ಹೀಗಿದ್ದವು:

1. ಬಾಂಬೆಯ ಮುಸ್ಲಿಮರ ಬಗ್ಗೆ ಜಿನ್ನಾ ಅವರಿಗೆ ಏನೂ ಗೊತ್ತಿಲ್ಲ. ಅದಕ್ಕಿಂತ ಮುಖ್ಯವಾಗಿ ಅದನ್ನು ತಿಳಿದುಕೊಳ್ಳುವ ಇಚ್ಛೆಯೂ ಅವರಿಗೆ ಇಲ್ಲ.

2. ಮುಸ್ಲಿಮರು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಆದರೆ ಈ ನೋವನ್ನು ಜಿನ್ನಾ ಅವರು ಹಂಚಿಕೊಂಡಿಲ್ಲ. ಹಾಗಾಗಿ, ತಮ್ಮ ಅಗತ್ಯದ ಸಮಯಗಳಲ್ಲಿ ಜಿನ್ನಾ ಅವರನ್ನು ಹೇಗೆ ಮತ್ತು ಎಲ್ಲಿ ಸಂಪರ್ಕಿಸಬೇಕು ಎಂಬುದು ಬಾಂಬೆಯ ಮುಸ್ಲಿಮರಿಗೆ ಗೊತ್ತಿಲ್ಲ.
ಮುಸ್ಲಿಮರ ಎಲ್ಲ ಚಳವಳಿಗಳಿಂದ ಜಿನ್ನಾ ದೂರ ನಿಂತಿದ್ದಾರೆ. ಖಲೀಫತ್‍ ಮತ್ತು ಅಸಹಕಾರ ಚಳವಳಿಗಳನ್ನು ಅವರು ವಿರೋಧಿಸಿದ್ದಾರೆ.

3. ಜಿನ್ನಾ ಅವರು ಸಂಕುಚಿತ ಮತ್ತು ಪುರಾತನ ಕಾಲದ ಸಂವಿಧಾನ ಹೊಂದಿರುವ ಮುಸ್ಲಿಂ ಲೀಗ್‍ನ ಶಾಶ್ವತ ಅಧ್ಯಕ್ಷರಾಗಿಬಿಟ್ಟಿದ್ದಾರೆ. ಅವರು ಅದನ್ನು ಕೊಂದು ಬಿಟ್ಟಿದ್ದಾರೆ. ಅದು (ಲೀಗ್‍) ವರ್ಷದ 363 ದಿನವೂ ಚೆನ್ನಾಗಿ ನಿದ್ದೆ ಮಾಡುತ್ತಿರುತ್ತದೆ. ಉಳಿದ ಎರಡು ದಿನ ಜಿನ್ನಾ ಅವರ ನಿಲುವುಗಳನ್ನು ಹೇಳಲು ಸುರಕ್ಷಿತ ವೇದಿಕೆ ಒದಗಿಸಲು ಕೆಲಸ ಮಾಡುತ್ತದೆ.

4. ಶಿಸ್ತನ್ನು ಅವರಿಗೆ ಸಹಿಸಿಕೊಳ್ಳಲಾಗದು; ತಮ್ಮ ಸಮಾನರು ಮತ್ತು ಮೇಲಿನವರ ಜತೆ ಕೆಲಸ ಮಾಡಬೇಕಾದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವುದು ಅವರಿಗೆ ಸಾಧ್ಯವೇ ಇಲ್ಲ.

5. ‘ಇಸ್ಲಾಂ ಬಗ್ಗೆ ಅವರ ಅಜ್ಞಾನ ದಿಗಿಲು ಹುಟ್ಟಿಸುವಂತಿದೆ ಮತ್ತು ಅವರು ಬಾಂಬೆಯ ದೌರ್ಭಾಗ್ಯಕರ ಮುಸ್ಲಿಮರನ್ನು ಪ್ರತಿನಿಧಿಸಬಹುದು ಎಂಬ ನಂಬಿಕೆ ಸಾಧ್ಯವೇ ಇಲ್ಲ. ಲೈಟು ಕಂಬ ಕೂಡ ಅವರಿಗಿಂತ ಕಡಿಮೆ ಅಪಾಯಕಾರಿ’ ಎಂದು ತಮ್ಮ ಮನವಿಯನ್ನು ಶೌಕತ್‍ ಕೊನೆಗೊಳಿಸಿದ್ದರು.

ಇದೇನೇ ಇದ್ದರೂ ಚುನಾವಣೆಯಲ್ಲಿ ಜಿನ್ನಾ ಗೆದ್ದರು. ನಂತರದ ವರ್ಷಗಳಲ್ಲಿ ಜಿನ್ನಾ ಅವರಿಗೆ ಅದೃಷ್ಟ ಖುಲಾಯಿಸುತ್ತಲೇ ಹೋಯಿತು ಮತ್ತು ಶೌಕತ್‍ ಅದೃಷ್ಟ ಕೆಳಗಿಳಿಯಿತು. 1938ರಲ್ಲಿ ಶೌಕತ್‍ ನಿಧನರಾಗುವ ಹೊತ್ತಿಗೆ ಜಿನ್ನಾ ಅವರು ಭಾರತೀಯ ಮುಸ್ಲಿಮರ ಪ್ರಶ್ನಾತೀತ ನಾಯಕರಾಗಿದ್ದರು. 1940ರ ಮಾರ್ಚ್‍ನಲ್ಲಿ ಲಾಹೋರ್‌ನಲ್ಲಿ ನಡೆದ ಮುಸ್ಲಿಂ ಲೀಗ್‍ ವಾರ್ಷಿಕ ಸಮಾವೇಶಕ್ಕೆ ಜಿನ್ನಾ ಅಧ್ಯಕ್ಷರಾಗಿದ್ದರು. ಆಗ, ಬಾಂಬೆಯ ಅವರ ಆರಾಧಕರೊಬ್ಬರು ಹೀಗೆ ಬರೆದಿದ್ದರು: ‘ಬಹುಶಃ, ಜಿನ್ನಾ ಅವರು ತಮ್ಮ ಶಕ್ತಿ ಏನು ಎಂಬುದನ್ನು ನೋಡಿಕೊಂಡ ಮೊದಲ ಸಂದರ್ಭ ಇದಾಗಿರಬಹುದು. ತಮ್ಮ ಸೇವೆಯಿಂದಾಗಿ ಮಾತ್ರ ಅನುಯಾಯಿಗಳಿಂದ ಯಾವ ಮಟ್ಟದ ನಿಷ್ಠೆಯನ್ನು ತಾನು ಗಳಿಸಿಕೊಂಡಿದ್ದೇನೆ ಎಂಬುದನ್ನು ಅವರು ಅರ್ಥಮಾಡಿಕೊಂಡ ಸಮಯ ಇದು. ಭಾರತದ ಮುಸ್ಲಿಮರು ತಮ್ಮ ಮೇಲೆ ಯಾವ ಮಟ್ಟದ ನಂಬಿಕೆ ಇರಿಸಿದ್ದಾರೆ ಎಂಬುದು ಅವರ ಅರಿವಿಗೆ ಬಂದ ಸಂದರ್ಭ ಇದು’.

ಭಾರತದ ಮುಸ್ಲಿಮರಿಗೆ ಪ್ರತ್ಯೇಕ ದೇಶ ಬೇಕು ಎಂದು ಆಗ್ರಹಿಸುವ ‘ಪಾಕಿಸ್ತಾನ ನಿರ್ಣಯ’ವನ್ನು ಈ ಸಭೆಯಲ್ಲಿಯೇ ಲೀಗ್‍ ಅಂಗೀಕರಿಸಿತು.ಈ ಸಭೆಯು ಮೂರು ಅಂಶಗಳನ್ನು ಸ್ಪಷ್ಟಪಡಿಸಿತು ಎಂದು ಹಿರಿಯ ಐಸಿಎಸ್‍ ಅಧಿಕಾರಿ ಪೆಂಡರೆಲ್‍ ಮೂನ್‍ ಅವರು ಪಂಜಾಬ್‍ ಗವರ್ನರ್‌ಗೆ ಕಳುಹಿಸಿದ ಟಿಪ್ಪಣಿಯಲ್ಲಿ ಹೇಳಿದ್ದರು: 1) ಮುಸ್ಲಿಮರ ನಿಜವಾದ ಪ್ರಾತಿನಿಧಿಕ ಸಂಘಟನೆ ಎಂಬ ನಿಟ್ಟಿನಲ್ಲಿ ಲೀಗ್‍ನ ಮಹತ್ವ ಅಪಾರವಾಗಿ ಹೆಚ್ಚಳವಾಗಿದೆ; 2) ಜಿನ್ನಾ ಅವರ ವೈಯಕ್ತಿಕ ಪ್ರತಿಷ್ಠೆ ಅದ್ಭುತ ಪ್ರಮಾಣದಲ್ಲಿ ಏರಿಕೆಯಾಗಿದೆ. ಮುಸ್ಲಿಮರ ಅಖಿಲ ಭಾರತ ಮಟ್ಟದ ನಾಯಕ ಎಂಬ ಅವರ ಸ್ಥಾನ ಪ್ರಶ್ನಾತೀತವಾಗಿದೆ; 3) ಭಾರತದ ವಿಭಜನೆಯ ಪರವಾಗಿ, ಕನಿಷ್ಠ ಪಕ್ಷ ಬಾಹ್ಯವಾಗಿಯಾದರೂ ಮುಸ್ಲಿಮರು ಅವಿರೋಧವಾಗಿ ನಿಂತಿದ್ದಾರೆ. ಕೆಲವೇ ಕೆಲವು ದಿಟ್ಟ ಮುಸ್ಲಿಂ ನಾಯಕರು ಮಾತ್ರ ಈ ನಿಲುವನ್ನು ವಿರೋಧಿಸಲು ಅಥವಾ ಟೀಕಿಸಲು ಮುಂದೆ ಬರಬಹುದು’.

ಉದಾರವಾದಿ ನಾಯಕ ವಿ.ಎಸ್‍. ಶ್ರೀನಿವಾಸ ಶಾಸ್ತ್ರಿ ಅವರು ‘ಪಾಕಿಸ್ತಾನ ನಿರ್ಣಯ’ ಅಂಗೀಕಾರವಾಗಿ ಮೂರು ತಿಂಗಳ ಬಳಿಕ ಗಾಂಧಿಗೆ ಪತ್ರ ಬರೆದರು. ‘ಜಿನ್ನಾ ಅವರ ಪ್ರಭಾವವನ್ನು ನಿಖರವಾಗಿ ಅಂದಾಜಿಸಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಪತ್ರದಲ್ಲಿ ಅವರು ಬರೆದಿದ್ದರು. ‘ಒಬ್ಬ ವ್ಯಕ್ತಿ ಮತ್ತು ರಾಜಕಾರಣಿಯಾಗಿ ಅವರು ಅನಿರೀಕ್ಷಿತ ಬೆಳವಣಿಗೆ ಕಂಡಿದ್ದಾರೆ. ವೈಯಕ್ತಿಕ ಅಹಂ ಮತ್ತು ರಾಜಕೀಯ ಬೂಟಾಟಿಕೆಯ ದೈತ್ಯ ಎಂದು ಅವರನ್ನು ಈಗ ಬಣ್ಣಿಸಿದರೆ ಅದು ಸತ್ಯಕ್ಕೆ ಮಾಡಿದ ಅಪಚಾರ ಅಲ್ಲ. ಅದೇನೇ ಇದ್ದರೂ, ಅವರನ್ನು ನಿರ್ಲಕ್ಷಿಸುವುದು ಅಥವಾ ಕಡೆಗಣಿಸುವುದು ಕಾಂಗ್ರೆಸ್‍ಗೆ ಸಾಧ್ಯವಿಲ್ಲ. ಹಾಗಿರುವಾಗ ಬ್ರಿಟಿಷ್‍ ಸರ್ಕಾರ ಹೀಗೆ ಮಾಡುವುದು ಸಾಧ್ಯವೇ?’ ಎಂದು ಶಾಸ್ತ್ರಿ ತಮ್ಮ ಪತ್ರದಲ್ಲಿ ಹೇಳಿದ್ದರು.

‘ಕಾಂಗ್ರೆಸ್ ನೀಡುತ್ತಿರುವ ಬೆಂಬಲದ ಅನುಕೂಲಕ್ಕಿಂತ ಮುಸ್ಲಿಮರು ಈಗ ಹೊಂದಿರುವ ಅಸಂತೃಪ್ತಿಯೇ ದೊಡ್ಡ ಅನನುಕೂಲ’ ಎಂದು ಬ್ರಿಟಿಷರು ಭಾವಿಸಿದ್ದಾರೆ ಎಂಬುದನ್ನು ಶಾಸ್ತ್ರಿ ಗ್ರಹಿಸಿದ್ದರು. ಹಾಗಾಗಿಯೇ ಗಾಂಧಿಗೆ ಅವರು ಹೀಗೆ ಹೇಳಿದ್ದರು: ‘ಹಿಂದೂ-ಮುಸ್ಲಿಂ ಸಂಘರ್ಷಕ್ಕೆ ಬ್ರಿಟಿಷರನ್ನು ದೂಷಿಸುವುದರಲ್ಲಿ ಯಾವುದೇ ಅರ್ಥ ಇಲ್ಲ… ನಾವು ಈಗ ಬ್ರಿಟಿಷರನ್ನು ನಿರ್ಮೂಲನೆ ಮಾಡಬಹುದು ಆದರೆ ಜಿನ್ನಾರನ್ನು ನಿರ್ಮೂಲನೆ ಮಾಡುವುದು ಸಾಧ್ಯವೇ ಇಲ್ಲ’.

ಗಾಂಧಿ ಅವರ ಆಪ್ತ ಸಹಾಯಕ ಮಹಾದೇವ ದೇಸಾಯಿ ಬೇರೊಂದು ರೀತಿಯಲ್ಲಿ ಯೋಚಿಸಿದ್ದರು. ‘ದೇಶ ವಿಭಜನೆಯ ಸಿದ್ಧಾಂತದ ಪ್ರಮುಖ ಶಕ್ತಿ ವಸಾಹತುಶಾಹಿ ಬ್ರಿಟನ್‌’ ಎಂಬುದು ಅವರ ಯೋಚನೆಯಾಗಿತ್ತು. ಹಿಂದೂ ಮತ್ತು ಮುಸ್ಲಿಮರನ್ನು ವಿಭಜಿಸಿ ಈ ವಿಭಜನೆಯನ್ನು ಕಲ್ಲಿನಲ್ಲಿ ಕೆತ್ತಿಬಿಡಲು ಬ್ರಿಟಿಷರು ಶ್ರಮಿಸಿದ್ದರು. ‘ಈ ಸಲಹೆಯ (ದೇಶ ವಿಭಜನೆ) ಹಿಂದಿನ ರಾಕ್ಷಸತ್ವ ಅಥವಾ ಸಲಹೆಯ ಮೂಲ ಜಿನ್ನಾ ಸಾಹೇಬ್‍ ಎಂದು ನಾವು ಹೇಳಲಿಕ್ಕಾಗದು. ಆಡಳಿತಗಾರರೇ ಈ ಸಿದ್ಧಾಂತವನ್ನು ರೂಪಿಸಿದವರು ಮತ್ತು ವ್ಯಾಖ್ಯಾನಿಸಿದವರು’ ಎಂದು ದೇಸಾಯಿ ಹೇಳಿದ್ದರು.

1940ರಲ್ಲಿ ದೇಶ ವಿಭಜನೆ ಅನಿವಾರ್ಯ ಎಂಬ ಸ್ಥಿತಿ ಇರಲಿಲ್ಲ. ಆದರೆ, ಎರಡನೇ ಮಹಾಯುದ್ಧದ ಸಮಯದಲ್ಲಿ ಮುಸ್ಲಿಂ ಲೀಗ್‍ ಮತ್ತು ಜಿನ್ನಾ ಅವರ ಪ್ರಭಾವ ನಿರಂತರವಾಗಿ ಬೆಳೆಯಿತು. ಯುದ್ಧ ಕೊನೆಗೊಂಡ ಬಳಿಕ ಬ್ರಿಟಿಷ್‍ ಭಾರತದಲ್ಲಿ ಚುನಾವಣೆಗಳು ನಡೆದವು. ಈ ಚುನಾವಣೆಗಳಲ್ಲಿ ಮುಸ್ಲಿಂ ಕ್ಷೇತ್ರಗಳಲ್ಲಿ ಲೀಗ್‍ ಜಯಭೇರಿ ಬಾರಿಸಿತು. ಸ್ವತಂತ್ರ ಪಾಕಿಸ್ತಾನದ ಕನಸಿಗೆ ಈ ಗೆಲುವು ಮತ್ತಷ್ಟು ಕಸುವು ತುಂಬಿತು. 1946ರ ಡಿಸೆಂಬರ್‌ನಲ್ಲಿ ಐಸಿಎಸ್‍ ಅಧಿಕಾರಿ ಮಾಲ್ಕಂ ಡಾರ್ಲಿಂಗ್‍ ಅವರು ಪಂಜಾಬ್‍ ಪ್ರದೇಶದ ಪ್ರಮುಖನಾಗಿದ್ದ ಕೋಟ್‍ನ ಸರ್ದಾರ್ ಜತೆಗೆ ಮಾತನಾಡಿದರು. ಸರ್ದಾರ್ ಜತೆಗಿನ ಮಾತಿನ ಬಗ್ಗೆ ಡಾರ್ಲಿಂಗ್‌ ಹೀಗೆ ಹೇಳಿದ್ದರು:‘ಸ್ವತಂತ್ರ ದೇಶದ ನಾಯಕನಾಗುವ ಇಚ್ಛೆ ಜಿನ್ನಾ ಅವರಿಗೆ ಇದೆ ಎಂದು ಸರ್ದಾರ್‌ ಭಾವಿಸಿದ್ದರು. ಅವರಲ್ಲಿ ದುರಹಂಕಾರ ಇದೆ. ತಮ್ಮ ಜತೆಗಿದ್ದ ಜನರಿಗಷ್ಟೇ ಜಿನ್ನಾ ನಿಷ್ಠರು... ಇನ್ನೊಂದು ವಿಚಾರವೆಂದರೆ ಜಿನ್ನಾರನ್ನು ಖರೀದಿ ಮಾಡುವುದು ಸಾಧ್ಯವಿಲ್ಲ ಎಂಬುದು ಸರ್ದಾರ್‌ ಅವರ ದೃಢ ನಂಬಿಕೆಯಾಗಿತ್ತು. ಇಸ್ಲಾಂ ಅಪಾಯದಲ್ಲಿದೆ ಎಂದು ಜಿನ್ನಾ ಕೂಗು ಎಬ್ಬಿಸಿದ್ದಾರೆ. ಆದರೆ, ದೇಶ ವಿಭಜನೆಯನ್ನು ತಮ್ಮ ಕಾರ್ಯಸೂಚಿಯಾಗಿ ಮಾಡಿಕೊಳ್ಳುವವರೆಗೆ ಇಸ್ಲಾಂ ಧರ್ಮದ ಎ.ಬಿ.ಸಿ.ಯೇ ಜಿನ್ನಾ ಅವರಿಗೆ ಗೊತ್ತಿರಲಿಲ್ಲ’.

1926ರಲ್ಲಿ ಶೌಕತ್‍ ಏನು ಹೇಳಿದ್ದರೋ ಬಹುತೇಕ ಅದನ್ನೇ ಸರ್ದಾರ್ ‍ಪುನರಾವರ್ತಿಸಿದ್ದಾರೆ. ಇತಿಹಾಸದ ಬೆರಗುಗೊಳಿಸುವ ವೈರುಧ್ಯ ಏನೆಂದರೆ, ‘ಮುಸ್ಲಿಮರ ಬಗ್ಗೆ ಏನೂ ಗೊತ್ತಿಲ್ಲದ ಮತ್ತು ಏನನ್ನಾದರೂ ತಿಳಿದುಕೊಳ್ಳಲು ಆಸಕ್ತಿಯೂ ಇಲ್ಲದ ವ್ಯಕ್ತಿ’ ಬ್ರಿಟಿಷ್‍ ಭಾರತದಿಂದ ಮುಸ್ಲಿಮರಿಗಾಗಿ ಸ್ವತಂತ್ರ ದೇಶವೊಂದನ್ನು ಸೃಷ್ಟಿಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT