ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಸಲದ ಪಂಚಾಯಿತಿಯ ಬಣ್ಣವೇ ಬೇರೆ!

Last Updated 16 ಜೂನ್ 2018, 9:21 IST
ಅಕ್ಷರ ಗಾತ್ರ

ಮಹಾರಾಷ್ಟ್ರದಲ್ಲಿ ಮಹಿಳೆಯರೇ ಮುನ್ನಡೆಸಿದ ಹನ್ನೆರಡು ಪಂಚಾಯಿತಿಗಳನ್ನು ಕುರಿತ ಅಧ್ಯಯನ ಕುತೂಹಲಕರ ಸಂಗತಿಯೊಂದನ್ನು ಹೇಳುತ್ತದೆ: ಮಹಿಳಾ ನಾಯಕತ್ವದ ಈ ಪಂಚಾಯಿತಿಗಳಲ್ಲಿ ಭ್ರಷ್ಟಾಚಾರ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆಯಿತ್ತು; ಈ ಪಂಚಾಯಿತಿಗಳು ಭ್ರಷ್ಟವಲ್ಲ ಎಂಬುದು ಊರಿನ ಒಟ್ಟಾರೆ ಅಭಿಪ್ರಾಯವಾಗಿತ್ತು.

ಈ ವಿವರಗಳಿರುವ ‘ಅಂಡ್ ಹೂ ವಿಲ್ ಮೇಕ್ ಚಪಾತೀಸ್’ ಎಂಬ ಪುಸ್ತಕ ಹದಿನೈದು ವರ್ಷಗಳ ಕೆಳಗೆ ಕಂಡುಕೊಂಡ ಸತ್ಯಗಳು ಭಾರತದ ಮಹಿಳಾ ರಾಜಕಾರಣದ ಮುಖ್ಯ ಸಾಧ್ಯತೆಗಳನ್ನು ಹೇಳುತ್ತವೆ. ಆ ಪುಸ್ತಕದ ಅವಲೋಕನ ಬರೆದ ಅಲಕಾ ಬಸು ಹೇಳುವಂತೆ, ಪಂಚಾಯಿತಿ ನಡೆಸುವ ಗಂಡಸರಿಗೂ ಹೆಂಗಸರಿಗೂ ಮುಖ್ಯ ವ್ಯತ್ಯಾಸ ಅವರ ಆದ್ಯತೆಗಳಲ್ಲಿರುತ್ತದೆ.

ಮಹಿಳೆಯರು ಮುನ್ನಡೆಸುವ ಪಂಚಾಯಿತಿಗಳಲ್ಲಿ ಹೆಂಗಸರಿಗೆ ಹಳ್ಳಿಗಳಲ್ಲಿ ಅಗತ್ಯವಾಗಿ ಬೇಕಾದ ನಲ್ಲಿ ನೀರು, ರಸ್ತೆ ಇತ್ಯಾದಿಗಳ ಬಗ್ಗೆ ಹೆಚ್ಚು ಒತ್ತು ಇರುವುದನ್ನೂ ಅಲಕಾ ಗಮನಿಸುತ್ತಾರೆ. ಈ ಅಧಿಕಾರಾವಧಿಯಲ್ಲಿ ಬದಲಾದ ಮಹಿಳೆಯರ ದೇಹಭಾಷೆ ಹಾಗೂ ಆತ್ಮವಿಶ್ವಾಸಗಳನ್ನು ನೋಡುತ್ತಿದ್ದರೆ, ಸಾವಿರಾರು ವರ್ಷಗಳು ಸುಮ್ಮನೆ ನಿಂತಿದ್ದ ಚರಿತ್ರೆಯ ಚಕ್ರ ಇದ್ದಕ್ಕಿದ್ದಂತೆ ಓಡತೊಡಗಿದಂತೆ ಕಾಣುತ್ತದೆ.

ಈ ಬಗ್ಗೆ ಯೋಚಿಸುತ್ತಿರುವಾಗ, ಮಹಿಳೆಯರಲ್ಲಿ ಆರ್ಥಿಕ ಭ್ರಷ್ಟತೆಯ ಪ್ರಮಾಣ ಅತ್ಯಂತ ಕಡಿಮೆಯಿದೆ ಎಂಬ ಅಂಶವನ್ನು ನಮ್ಮ ಆಡಳಿತ ನೀತಿಗಳನ್ನು ವಿಶ್ಲೇಷಿಸುವ ಚಿಂತಕರು ಗಂಭೀರವಾಗಿ ಪರಿಗಣಿಸಿಯೇ ಇಲ್ಲವಲ್ಲ ಎನ್ನಿಸತೊಡಗಿತು. ಮಹಿಳೆಯರ ಆರ್ಥಿಕ ಭ್ರಷ್ಟತೆ ತುಂಬ ಕಡಿಮೆಯೆಂಬುದು ಯಾವುದೇ ವಲಯಗಳಲ್ಲಿ ನಡೆಯುವ ಭ್ರಷ್ಟಾಚಾರಗಳನ್ನು ಗಮನಿಸಿದರೂ ಕಾಣುತ್ತದೆ.

ಭ್ರಷ್ಟಾಚಾರಕ್ಕಿಳಿಯಲು ಬೇಕಾದ ಭಂಡತನ ಹೆಣ್ಣಿಗೆ ಇಲ್ಲವೆನ್ನುವುದು ಆಕೆಯ ಸಹಜಶಕ್ತಿಯೂ ಆಗಿರಬಹುದು ಎಂಬುದನ್ನೂ ನಾವು ಸರಿಯಾಗಿ ಗ್ರಹಿಸಿಲ್ಲ. ಕೆಲವು ಸಂದರ್ಭಗಳಲ್ಲಿ ಮಹಿಳೆಯ ಸಹಜ ಲಜ್ಜೆ ಆಕೆಯ ಪ್ರಗತಿಗೆ ಮಾರಕವೆನ್ನಿಸಬಹುದು. ಆದರೆ ಸಾರ್ವಜನಿಕ ಹಣ ಹಾಗೂ ಸಾರ್ವಜನಿಕ ಆಸ್ತಿಯ ಬಗ್ಗೆ ಮಹಿಳೆಯರಿಗೆ ಇರುವ ಲಜ್ಜೆ ಮತ್ತು ಭಯ ಯಾವುದೇ ದೇಶದ ಸಾರ್ವಜನಿಕ ಜೀವನಕ್ಕೆ ಅತ್ಯಗತ್ಯ. 

ಜಾತಿ, ಅಸ್ಪೃಶ್ಯತೆಯ ಆಚರಣೆ, ಮೂಢನಂಬಿಕೆಗಳಿಂದ ಹೊರಬರಲು ಮಹಿಳೆಯರಲ್ಲಿ ಕಾಣುವ ಹಿಂಜರಿತ ಒಪ್ಪತಕ್ಕದ್ದಲ್ಲ; ಆದರೆ ಆರ್ಥಿಕ ಭ್ರಷ್ಟಾಚಾರದ ವಿಷಯದಲ್ಲಿ ಮಹಿಳೆಯರಲ್ಲಿರುವ ಹಿಂಜರಿತ ಹಾಗೂ ಸಂಕೋಚ ಆದರ್ಶಪ್ರಾಯ. ಸಂಸ್ಕೃತಿಗಳ ಮುಖಾಮುಖಿಯ ಸಂದರ್ಭದಲ್ಲಿ ಸಂಸ್ಕೃತಿಯ ಕೆಲವು ವಲಯಗಳು ಬದಲಾಗದೆ ಉಳಿಯುವುದನ್ನು ವಿವರಿಸಲು ಸಮಾಜವಿಜ್ಞಾನಿಗಳು ‘ಕಲ್ಚರಲ್ ಇನರ್ಷಿಯಾ’ ಅಥವಾ ‘ಸಾಂಸ್ಕೃತಿಕ ಜಡತೆ’ ಎಂಬ ಪರಿಕಲ್ಪನೆಯನ್ನು ಬಳಸುತ್ತಾರೆ. ಆರ್ಥಿಕ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಮಹಿಳೆಯರ ಈ ‘ಜಡತೆ’ ಕೂಡ ಅವರನ್ನು ಭ್ರಷ್ಟರಾಗದಂತೆ ರಕ್ಷಿಸಿರಬಹುದು.

ಭಾರತದಲ್ಲಿ ಮೊದಲ ಬಾರಿಗೆ ಪಂಚಾಯಿತಿಗಳಿಗೆ ಶೇಕಡ ಐವತ್ತು ಭಾಗ ಮಹಿಳೆಯರು ಆರಿಸಿ ಬರುವ ಮೀಸಲಾತಿ ಕರ್ನಾಟಕದಲ್ಲಿ ಈ ಸಲ ಜಾರಿಗೆ ಬಂದು ಚುನಾವಣೆಯೂ ನಡೆದಿದೆ; ಫಲಿತಾಂಶವೂ ಬಂದಿದೆ. ಮಹಿಳಾ ಮೀಸಲು ಕ್ಷೇತ್ರಗಳನ್ನು ಮೀರಿ ಸಾಮಾನ್ಯ ಕ್ಷೇತ್ರಗಳಲ್ಲೂ ಮಹಿಳೆಯರು ಗೆದ್ದಿರುವುದರಿಂದ ಈ ಸಲ ಅವರ ಸಂಖ್ಯೆ ಪುರುಷರಿಗಿಂತ ಹೆಚ್ಚಿದೆ.

ಈ ಮಹತ್ವದ ಚಾರಿತ್ರಿಕ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿ ಗ್ರಾಮ ಕರ್ನಾಟಕವನ್ನು ಹೊಸ ರೀತಿಯಲ್ಲಿ ಕಟ್ಟಲು ಯೋಚಿಸಿದರೆ, ಗ್ರಾಮ ಪಂಚಾಯಿತಿಗಳ ಸ್ವರೂಪ ಹಾಗೂ ದಿಕ್ಕುಗಳೆರಡೂ ಪೂರ್ತಿ ಬೇರೆಯಾಗಬಲ್ಲವು. ಅನೇಕ ಸಲ ಗ್ರಾಮಗಳ ಗಂಡಸರು ಬೇಜವಾಬ್ದಾರಿಯಾಗಿ ವರ್ತಿಸುವಾಗ, ಹಲ್ಲುಕಚ್ಚಿ ಮನೆ, ಹೊಲ, ತೋಟ ನಿಭಾಯಿಸುವ ಹೆಂಗಸರ ವಿಚಿತ್ರ ಶಕ್ತಿ ಹಾಗೂ ಶ್ರದ್ಧೆಗಳನ್ನು ಕಂಡವರಿಗೆ, ಗ್ರಾಮ ಪಂಚಾಯಿತಿಗಳನ್ನು ಹೊಸ ರೀತಿಯಲ್ಲಿ ಕಟ್ಟುವ ಕೆಲಸಕ್ಕೆ ಮಹಿಳೆಯರು ಹೆಚ್ಚು ಅರ್ಹರು ಎಂಬ ಬಗ್ಗೆ ಅನುಮಾನವಿರಲಾರದು.

ಇಂಥ ಆಶಾದಾಯಕ ಮಾತುಗಳನ್ನಾಡಿದ ತಕ್ಷಣ ಕಾಯಂ ಸಿನಿಕರ ಸಿದ್ಧ ಪ್ರತಿಕ್ರಿಯೆ: ‘ಪಂಚಾಯಿತಿಯಲ್ಲಿ ಶೇಕಡ ಐವತ್ತು ಭಾಗ ಹೆಂಗಸರು ಗೆದ್ದ ಮಾತ್ರಕ್ಕೆ ಏನು ಮಹಾ ಆಗುತ್ತೆ!’  ಹಾಗೆಯೇ, ‘ಹೆಂಗಸರು ಗೆದ್ದರೂ ಅವರ ಗಂಡಂದಿರೇ ಅಧಿಕಾರ ಚಲಾಯಿಸುತ್ತಾರೆ’, ‘ಹೆಂಗಸರಿಗೆ ರಾಜಕಾರಣ ಏನು ಗೊತ್ತಾಗುತ್ತೆ!’, ‘ಇದು ಕೈಗೊಂಬೆ ಪ್ರಜಾಪ್ರಭುತ್ವ’ ಎಂಬ ಸಿನಿಕ ಮಾತುಗಳನ್ನು ಜನ ಜಗಿಯುತ್ತಲೇ ಇರುತ್ತಾರೆ.

ಆದರೂ ಕಳೆದ ಆರೂವರೆ ದಶಕಗಳ ಇಂಡಿಯಾದ ಪ್ರಜಾಪ್ರಭುತ್ವ ಇಂಥ ಸಿನಿಕತೆಗಳು ಸೃಷ್ಟಿಸುವ ತಡೆಗೋಡೆಗಳನ್ನು ಹಾದು ಹೊಸ ಘಟ್ಟಗಳನ್ನು ತಲುಪಿದೆ. 1992ರ ಸಂವಿಧಾನ ತಿದ್ದುಪಡಿಯ ನಂತರ ಗ್ರಾಮ ಪಂಚಾಯಿತಿಯಿಂದ ಜಿಲ್ಲಾ ಪಂಚಾಯಿತಿ ತನಕ ಅಧಿಕಾರ ವಿಕೇಂದ್ರೀಕರಣವಾಗಿ, ಮಹಿಳೆಯರಿಗೆ ಶೇಕಡ 33 ಭಾಗ ಮೀಸಲಾತಿ ಬಂತು; ಅಲ್ಲಿಂದ ಶುರುವಾದ ಗ್ರಾಮೀಣ ಮಹಿಳೆಯರ ಹೊಸ ರಾಜಕೀಯ ಚಲನೆ ಕರ್ನಾಟಕದ ಈ ಸಲದ ಪಂಚಾಯಿತಿ ಚುನಾವಣೆಯ ಫಲಿತಾಂಶದ ನಂತರ ಮತ್ತೊಂದು ಘಟ್ಟ ಮುಟ್ಟಿದೆ.

ಚರಿತ್ರೆಯ ಚಲನೆ ಬಲ್ಲವರಿಗೆ ಒಂದು ಘಟ್ಟದಲ್ಲಿ ಶುರುವಾದ ಬದಲಾವಣೆ ಮುಂದೆ ಯಾವುದೋ ಘಟ್ಟದಲ್ಲಿ  ಬೇರೆ ಬೇರೆ ರೀತಿಯ ಫಲ ಕೊಡಬಲ್ಲದು ಎಂಬುದು ಗೊತ್ತಿರುತ್ತದೆ. ಅರವತ್ತರ ದಶಕದಲ್ಲಿ ಗ್ವಾಲಿಯರ್ ಲೋಕಸಭಾ ಚುನಾವಣೆಗೆ ಗ್ವಾಲಿಯರ್ ಮಾಜಿ ಮಹಾರಾಣಿ ಚುನಾವಣೆಗೆ ನಿಂತರು. ಆಗ ಸಮಾಜವಾದಿ ಪಕ್ಷ ಪೌರಕಾರ್ಮಿಕ ಮಹಿಳೆ ಸುಖೋರಾಣಿಯವರನ್ನು ಚುನಾವಣೆಗೆ ನಿಲ್ಲಿಸಿ, ರಾಜವರ್ಗದ ಸೊಕ್ಕನ್ನೂ ಜಾತಿ ಶ್ರೇಣೀಕರಣವನ್ನೂ ಎದುರಿಸಲೆತ್ನಿಸಿತು.

ಅವತ್ತು ಸುಖೋರಾಣಿಯವರ ಸ್ಪರ್ಧೆ ಸಾಂಕೇತಿಕವೆಂದು ನಕ್ಕವರಿರಬಹುದು. ಮೂರೇ ದಶಕಗಳಲ್ಲಿ ಅದೇ ದಲಿತ ಸಮುದಾಯದಿಂದ ಬಂದ ಮಾಯಾವತಿಯವರು ಉತ್ತರಪ್ರದೇಶದ ಮುಖ್ಯಮಂತ್ರಿಯಾದರು. ಸಮಾಜವೊಂದರ ಸಾವಿರಾರು ವರ್ಷಗಳ ಜಡನಿಯಮಗಳನ್ನು ಪ್ರಜಾಪ್ರಭುತ್ವದ ಚಲನೆಗಳು ಹೇಗೆ ಒಡೆಯುತ್ತವೆ ಎಂಬುದಕ್ಕೆ ಇವೆಲ್ಲ ಸಾಕ್ಷಿಯಂತಿವೆ. 

ಜಾತಿ ಪೀಡಿತ ಸಮಾಜ ಕೆಳಜಾತಿಗಳ ರಾಜಕೀಯ ನಾಯಕತ್ವವನ್ನು ಒಪ್ಪಲೇಬೇಕಾದ ಅನಿವಾರ್ಯತೆಯನ್ನು ಕೂಡ ಪ್ರಜಾಪ್ರಭುತ್ವವೇ ಕಲಿಸುತ್ತದೆ; ಹಾಗೆಯೇ ಮಹಿಳಾ ನಾಯಕತ್ವವನ್ನು ಒಪ್ಪಬೇಕಾದ ವಿನಯವನ್ನೂ ಪುರುಷ ಸಮಾಜಕ್ಕೆ ಕಲಿಸುತ್ತಾ ಹೋಗುತ್ತದೆ.

ಈ ಹಿನ್ನೆಲೆಯಲ್ಲಿ, ಮಹಿಳೆಯರು ಅರ್ಧದಷ್ಟು ಪಂಚಾಯಿತಿಗಳ ನಾಯಕತ್ವ ವಹಿಸಲಿರುವ ಈ ಸಂದರ್ಭದಲ್ಲಿ ಮಹಿಳೆಯರ ಸಹಜ ಶಕ್ತಿಗಳು ರಾಜಕಾರಣದ ಹೊಸ ಮೌಲ್ಯಗಳಾಗಬೇಕೆಂಬುದನ್ನು ಒತ್ತಿ ಹೇಳಬೇಕಾಗುತ್ತದೆ. ಸಾರ್ವಜನಿಕ ಆಸ್ತಿ, ಹಣಗಳನ್ನು ದುರ್ಬಳಕೆ ಮಾಡಿಕೊಳ್ಳುವುದರ ಬಗ್ಗೆ ಮಹಿಳೆಯರಲ್ಲಿರುವ ಹಿಂಜರಿಕೆಯನ್ನೂ ಆ ಸಂಕೋಚದಿಂದ  ಹುಟ್ಟುವ ಅವರ ನೈತಿಕ ಪ್ರಜ್ಞೆಯನ್ನೂ ಪ್ರಜಾಪ್ರಭುತ್ವದ ಹೊಸಮೌಲ್ಯಗಳ ಮುಖ್ಯ ಮಾದರಿ ಯನ್ನಾಗಿ ಬಿಂಬಿಸಬೇಕಾಗಿದೆ.

ಆದ್ದರಿಂದ ಈ ಸಲ ಕರ್ನಾಟಕದಲ್ಲಿ ಗೆದ್ದಿರುವ ಸಾವಿರಾರು ಮಹಿಳಾ ಪ್ರತಿನಿಧಿಗಳು ನಿರ್ವಹಿಸಲಿರುವ ಪಾತ್ರವನ್ನು ಗಂಭೀರವಾಗಿ ಗಮನಿಸಬೇಕು; ಕೆಲವು ಕಡೆ ಇದು ಶೇಕಡ ಐವತ್ತರ ಮೀಸಲಾತಿಯ ಗಡಿಯನ್ನೂ ದಾಟಿರುವುದರಿಂದ ಮಹಿಳಾ ಪ್ರತಿನಿಧಿಗಳ ಸಂಖ್ಯೆ ಈ ಸಲ ಪುರುಷರಿಗಿಂತ ಹೆಚ್ಚು ಇದೆ. ಹೀಗಾಗಿ ಈ ಸಲದ ಗ್ರಾಮ ಪ್ರಜಾಪ್ರಭುತ್ವದ ಬಗೆಗಿನ ಓರಿಯೆಂಟೇಶನ್ ಸಂಪೂರ್ಣ ಬೇರೆಯ ಥರವೇ ಇರಬೇಕಾಗುತ್ತದೆ.

ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್ ಹಾಗೂ ಕಾನೂನು-ಸಂಸದೀಯ ವ್ಯವಹಾರಗಳ ಸಚಿವ ಜಯಚಂದ್ರ ತಮ್ಮೆಲ್ಲ ಗ್ರಾಮೀಣಾನುಭವ ಬಳಸಿ ಮಹತ್ವದ ಪ್ರಯೋಗವೊಂದನ್ನು ಉದ್ಘಾಟಿಸಿದ್ದಾರೆ. ಈ ಪ್ರಯೋಗವನ್ನು ನಮ್ಮ ಮಹಿಳೆಯರು ಹೇಗೆ ಮುಂದಕ್ಕೆ ಒಯ್ಯುತ್ತಾರೆ ಎಂಬುದನ್ನು ಇಡೀ ದೇಶವೇ ಕುತೂಹಲದಿಂದ ನೋಡಲಿದೆ.

ಈ ನಿಟ್ಟಿನಲ್ಲಿ ನಮ್ಮ ಸ್ತ್ರೀವಾದಿ ಚಿಂತನೆ ಕೂಡ ನಗರದಿಂದ ಗ್ರಾಮಕ್ಕೆ ಹಾಗೂ ಪರಿಭಾಷೆಗಳ ಕಗ್ಗಂಟಿನಿಂದ ನಿತ್ಯದ ರಾಜಕೀಯ ವಿವರಗಳತ್ತ ಬರುವುದು ಅನಿವಾರ್ಯವಿದೆ. ಪ್ರಜಾಪ್ರಭುತ್ವದ ಈ ಹೊಸ ಪ್ರಯೋಗದಲ್ಲಿ ಮಹಿಳೆಯರು ದೊಡ್ಡ ಮಟ್ಟದಲ್ಲಿ ಭಾಗಿಯಾಗಲಿರುವ ಸಂದರ್ಭದಲ್ಲಿ ಪುರುಷ ರಾಜಕಾರಣಿಗಳಿಗೆ ಭಾಷೆಯ ಬಳಕೆಯಿಂದ ಹಿಡಿದು ವರ್ತನೆಯ ವಿಧಾನಗಳವರೆಗೂ ಅನೇಕ ಬಗೆಯ ತರಬೇತಿಗಳನ್ನು ಕೊಡಬೇಕಾಗುತ್ತದೆ.

ಹಾಗೆಯೇ ಇದು ಸಮೂಹ ಮಾಧ್ಯಮಗಳ ಹದ್ದುಗಣ್ಣಿನ ಹಾಗೂ ಮಾಹಿತಿ ಹಕ್ಕಿನ ಕಾಲವೆಂಬುದು ಎಲ್ಲರಿಗೂ ಗೊತ್ತಿರಲಿ. ಗಂಡಂದಿರ ಅಥವಾ ಇನ್ನಿತರರ ಹಂಗಿಗೆ ಒಳಗಾಗಿ ಅಥವಾ ಅಧಿಕಾರದ ಮದದಿಂದ ಭ್ರಷ್ಟಾಚಾರಕ್ಕೆ ಇಳಿಯುವ ಸಂದರ್ಭಗಳು ಮಹಿಳೆಯರಿಗೂ ಬರಬಹುದು. ಆದರೆ ಕೊನೆಗೆ ಕಟಕಟೆಯಲ್ಲಿ ನಿಲ್ಲುವವರು ತಾವೇ ಎಂಬ ಎಚ್ಚರವೂ ಅವರಿಗಿರಲಿ! 

ಈ ಸಲ ಇನ್ನಷ್ಟು ಮಹತ್ವದ ಬೆಳವಣಿಗೆಗಳಾಗಿವೆ. ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಬೆಂಬಲಿಸಿದ  262 ಜನ ಕೂಡ ಆಯ್ಕೆಯಾಗಿದ್ದಾರೆ. ಇದು ಕೂಡ ಕರ್ನಾಟಕದ ಗ್ರಾಮರಾಜಕಾರಣದ ಮುಖ್ಯ ಚಲನೆಯೊಂದನ್ನು ಸೂಚಿಸುತ್ತದೆ. ದಲಿತ ಚಳವಳಿಯ ಕೆಲವರು ಜನರಲ್ ವಾರ್ಡುಗಳಿಂದ ಕೂಡ ಗೆದ್ದು ಬಂದಿರುವುದು ದಲಿತರನ್ನು ಬಳಸಿ ರಾಜಕಾರಣ ಮಾಡುವ ರಾಜಕೀಯ ಪಕ್ಷಗಳಿಗೆ ಬ್ರೇಕ್ ಹಾಕಿದಂತಿದೆ.

ದಲಿತ ಹಾಗೂ ರೈತ ಚಳವಳಿ ರೂಪಿಸಿರುವ ‘ಸರ್ವೋದಯ ಕರ್ನಾಟಕ’ದ ಬೆಂಬಲ ಪಡೆದವರು ಪಾಂಡವಪುರ ತಾಲ್ಲೂಕಿನ 26 ಪಂಚಾಯಿತಿಗಳಲ್ಲಿ 13 ಪಂಚಾಯಿತಿಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಹೊಸನಗರ ತಾಲ್ಲೂಕಿನ ಹರಿದ್ರಾವತಿ ಪಂಚಾಯಿತಿಯಲ್ಲಿ ಆಮ್ ಆದ್ಮಿ ಪಕ್ಷದ ಬೆಂಬಲ ಪಡೆದ ಸದಸ್ಯರು ಗೆದ್ದು ಅಧಿಕಾರ ಹಿಡಿಯಲಿದ್ದಾರೆ. 

ಈ ಮೂಲಕ ಆಮ್ಆದ್ಮಿ ಪಕ್ಷವೂ ಕರ್ನಾಟಕದಲ್ಲಿ ಖಾತೆ ತೆರೆದಂತಾಗಿದೆ. ಕೋಡಿಹಳ್ಳಿ ಚಂದ್ರಶೇಖರ್ ಬಣದ ರೈತ ಸಂಘ ಬೆಂಬಲಿಸಿದ ಅಭ್ಯರ್ಥಿಗಳು ಕೆಲವೆಡೆ ಗೆದ್ದಿದ್ದಾರೆ. ತಿಪಟೂರು ತಾಲ್ಲೂಕಿನ ನಾಗರಘಟ್ಟದಲ್ಲಿ ಜನರಲ್ ವಾರ್ಡ್‌ನಿಂದ ಅಲೆಮಾರಿ ಸಮುದಾಯದ ರಾಜು ಗೆದ್ದಿದ್ದಾರೆ. ಕಳೆದ ಸಲದ ಮಂಡ್ಯ ಜಿಲ್ಲೆಯ ಪಂಚಾಯಿತಿ ಆಫೀಸೊಂದರಲ್ಲಿ ಕಸ ಗುಡಿಸುವ ನೌಕರಿ ಮಾಡುತ್ತಿದ್ದ ಮಹಿಳೆಯೊಬ್ಬರು ಗೆದ್ದು ಅದೇ ಪಂಚಾಯಿತಿಯ ಅಧ್ಯಕ್ಷೆಯಾಗಿದ್ದರು.

ರಾಜಕೀಯ ಅಧಿಕಾರದಿಂದ ವಂಚಿತರಾದ ಸ್ತ್ರೀ ಹಾಗೂ ದಲಿತ ವರ್ಗಗಳ ಜೊತೆಗೇ ಮುಸ್ಲಿಂ ಹಾಗೂ ಕ್ರೈಸ್ತರು ದೊಡ್ಡ ಮಟ್ಟದಲ್ಲಿ ರಾಜಕೀಯದಲ್ಲಿ ಭಾಗವಹಿಸುವ ಸಾಧ್ಯತೆಯನ್ನು ಕೂಡ ಈಗ ಪರಿಶೀಲಿಸಬೇಕು. ರಾಜಕೀಯ ಭಾಗವಹಿಸುವಿಕೆ ಅವಕಾಶವಂಚಿತ ಸಮುದಾಯಗಳಲ್ಲಿ ಹಲಬಗೆಯ ಆತ್ಮವಿಶ್ವಾಸ ತರಬಲ್ಲದು. ಈ ಸಲ ಕೆಲವು ಪಂಚಾಯಿತಿಗಳಾದರೂ ಗ್ರಾಮ ರಾಜಕಾರಣದ ಹೊಸ ಪ್ರಯೋಗಶಾಲೆಗಳಾದರೆ ಅದರ ಪರಿಣಾಮ ಅದ್ಭುತವಾಗಿರಬಲ್ಲದು.

ಪಂಚಾಯಿತಿಗಳ ಬಜೆಟ್ ಕೂಡ ಹೆಚ್ಚಾಗಬೇಕಾಗುತ್ತದೆ.  ಕಳೆದ ಐವತ್ತು ವರ್ಷಗಳಲ್ಲಿ ರಾಜಕೀಯ ಚಕ್ರ ವೇಗವಾಗಿ ಚಲಿಸುತ್ತಿದೆ. ಪ್ರಜಾಪ್ರಭುತ್ವದ ಅನೇಕ ದೋಷಗಳ ನಡುವೆಯೂ ಅದು ಸೃಷ್ಟಿಸುವ ವಿಶಿಷ್ಟ ಸಾಧ್ಯತೆಗಳನ್ನು ನೋಡಿದಾಗ ಸಿನಿಕತೆ ಕರಗಿ ಹೊಸ ರಾಜಕಾರಣದ ಕನಸು ಮೂಡುತ್ತದೆ. ಸದಾ ರಾಷ್ಟ್ರ ಹಾಗೂ ರಾಜಕಾರಣದ ಬಗ್ಗೆ ತಲೆ ಕೆಡಿಕೊಳ್ಳುವವರು ಗ್ರಾಮ ರಾಜಕಾರಣ ದತ್ತ ನೋಡಲೇಬೇಕೆಂದು ಈ ಸಲದ ಗ್ರಾಮ ಪಂಚಾಯಿತಿ ಚುನಾವಣೆ ದೊಡ್ಡ ಮಟ್ಟದಲ್ಲಿ ಒತ್ತಾಯಿಸುತ್ತಿದೆ. 

ಕೊನೆ ಟಿಪ್ಪಣಿ: ನಮ್ಮ ಮನೆ ಮತ್ತು ನಮ್ಮ ಗ್ರಾಮ
ಮಹಾರಾಷ್ಟ್ರದ ಮೆಟಿಖೇಡದ ಪಂಚಾಯಿತಿಯನ್ನು ತಮ್ಮ ಮನೆಗಳನ್ನು ನಡೆಸುವ ಸರಳ ರೀತಿಯಲ್ಲೇ ಮಹಿಳೆಯರು ನಡೆಸಿ ತೋರಿಸಿದ ಒಂದು ಪುಟ್ಟ ಉದಾಹರಣೆ: ಪಂಚಾಯಿತಿ ಸಮಿತಿಯ ಎಂಜಿನಿಯರ್ ಶೌಚಾಲಯಗಳಲ್ಲಿ ಬಳಸುವ ಪ್ಯಾನ್‌ಗಳಿಗೆ ತಲಾ 475 ರೂಪಾಯಿ ಬೇಕಾಗುತ್ತದೆಂದು ಅಂದಾಜು ತೋರಿಸಿದ್ದ. ಪಂಚಾಯಿತಿಯ ಸದಸ್ಯೆಯರು ಅವನ್ನು 95 ರೂಪಾಯಿಗೆ ಕೊಂಡು ಪಂಚಾಯಿತಿಯ ಹಣ ಉಳಿಸಿದರು. ತಮ್ಮ ಮನೆಯ ನಿರ್ವಹಣೆಗೂ ಊರಿನ ನಿರ್ವಹಣೆಗೂ ಸಂಬಂಧವಿದೆಯೆಂಬುದನ್ನು ತೋರಿಸಿ ಉತ್ತಮ ಆಡಳಿತದ ಮಾದರಿಯೊಂದನ್ನು ರೂಪಿಸಿದರು.

ಇಂಥ ಗ್ರಾಮ ಪಂಚಾಯಿತಿಗಳ ಕಡೆಗೆ ಮಧ್ಯವರ್ತಿಗಳು ತಲೆ ಕೂಡ ಇಡುವುದಿಲ್ಲ. ಅಲ್ಲಿಗೆ ಭ್ರಷ್ಟಾಚಾರದ ಒಂದು ಕೊಂಡಿ ತುಂಡಾದಂತೆ. ಗ್ರಾಮ ಪಂಚಾಯಿತಿಗಳು ವಿಧಾನಸೌಧದಂತೆ ಜನರಿಂದ ದೂರವಲ್ಲ. ಅವುಗಳ ಸುತ್ತ ಪೊಲೀಸ್ ಕಾವಲಿಲ್ಲ. ಅವು ಜನರ ಆಸುಪಾಸಿನಲ್ಲೇ ಇರಬೇಕಾಗುತ್ತದೆ; ಜನರಿಗೆ ನಿತ್ಯ ಉತ್ತರ ಕೊಡುತ್ತಿರಬೇಕಾಗುತ್ತದೆ. ಸದಾ ಗ್ರಾಮಸಭೆಗಳಲ್ಲಿ ಎಚ್ಚರದಿಂದ ಭಾಗಿಯಾಗಬೇಕೆಂಬ ತಿಳಿವಳಿಕೆ ಜನರಲ್ಲಿ ಮೂಡಿದರೆ ಸಾಕು, ಪಂಚಾಯಿತಿಗಳು ನೆಟ್ಟಗಿರಬಲ್ಲವು.

editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT