ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೇವರು ಪ್ರತ್ಯಕ್ಷನಾದಾಗ ನಾವಿರಬೇಡವೇ ಅಲ್ಲಿ?

ಗಾಂಧೀಜಿಯನ್ನು ಫ್ಯಾಷನ್ನಿನ ಐಕಾನ್ ಮಾಡಲು ಹೊರಟಿದ್ದಾರೆ ಯುವಜನರು
Last Updated 26 ಸೆಪ್ಟೆಂಬರ್ 2018, 20:06 IST
ಅಕ್ಷರ ಗಾತ್ರ

ಅತಿಯಾಗಿ ಕೊಳ್ಳುವುದು, ಅತಿಯಾಗಿ ಸಂಗ್ರಹಿಸುವುದು ಹಾಗೂ ಅತಿಯಾಗಿ ತಿನ್ನುವುದು ಒಂದು ರೋಗ. ರಾಷ್ಟ್ರೀಯ ರೋಗ. ಜಾಗತಿಕ ರೋಗವೂ ಹೌದು ಇದು. ರೋಗ ಮೊದಲೂ ಇತ್ತು. ಆದರೆ ಅದು, ಅರಮನೆಗಳಿಗೆ, ಜಮೀನುದಾರ ವಾಡೆಗಳಿಗೆ, ಶ್ರೀಮಂತ ವೈಶ್ಯರು ಹಾಗೂ ಬ್ರಾಹ್ಮಣರ ಭೋಜನಕ್ಕೆ ಸೀಮಿತವಾಗಿತ್ತು. ಈಗ, ಮನುಕುಲವು ಮಾರುಕಟ್ಟೆಯ ಗುಲಾಮನಾದ ನಂತರ, ಸಾಂಕ್ರಾಮಿಕವಾಗಿದೆ. ಮಾರಣಾಂತಿಕವಾಗಿದೆ.

ಎಲ್ಲ ರೋಗಗಳಂತೆ ಈ ರೋಗಕ್ಕೂ ಲಕ್ಷಣಗಳಿವೆ. ರೋಗದ ಪ್ರಮುಖ ಲಕ್ಷಣ ಅಸಹಿಷ್ಣುತೆ. ನಿಮಗೆ ಆಶ್ಚರ್ಯವಾಗಬಹುದು, ಆದರೂ ನಿಜ! ಕೊಳ್ಳುವುದು, ಸಂಗ್ರಹಿಸಿಡುವುದು ಹಾಗೂ ತಿನ್ನುವುದು ಹೆಚ್ಚಿದಂತೆಲ್ಲ ಮನುಷ್ಯರ ಅನುಮಾನ, ಆತಂಕ ಹಾಗೂ ಅಸಹಿಷ್ಣುತೆಗಳು ಹೆಚ್ಚುತ್ತಾ ಹೋಗಿವೆ. ಸಮಾಜ ಹಾಗೂ ಸಾಮಾಜಿಕರು, ಈಚಿನ ದಿನಗಳಲ್ಲಿ ಅನಗತ್ಯವಾಗಿ ಸಿಟ್ಟಾಗುತ್ತಿದ್ದಾರೆ. ಯಾರು ಯಾರನ್ನೂ ನಂಬುತ್ತಿಲ್ಲ. ಶತ್ರುಗಳ ಮೇಲೆ ಪ್ರಯೋಗಿಸುತ್ತೇನೆ ಎಂದು ಎತ್ತುವ ಅವರ ಆಯುಧಗಳು- ಎಲ್ಲರೂ ಶತ್ರುಗಳಂತೆ ಕಾಣುತ್ತಾರಾದ್ದರಿಂದ, ಎರ್‍ರಾಬಿರ್‍ರಿ ಆಡತೊಡಗಿವೆ.

ಗಣ್ಯರೆಲ್ಲರೂ ಗನ್‌ಮ್ಯಾನುಗಳನ್ನು ಇಟ್ಟುಕೊಂಡು ಓಡಾಡುತ್ತಿದ್ದಾರೆ ಹಾಗೂ ಝಡ್ ಮಾದರಿಯ ರಕ್ಷಣಾ ವ್ಯವಸ್ಥೆಯೇ ಗಣ್ಯತೆಯ ಸಂಕೇತವಾಗಿ ಕಾಣತೊಡಗಿದೆ ಅವರಿಗೆ! ಪಾಪ, ರಾಜಕೀಯ ಧುರೀಣರು ತಾವೇ ಹಿಂಸೆಗೆ ಬಲಿಯಾಗುತ್ತಿದ್ದಾರೆ, ಇಲ್ಲವೇ ಇತರರನ್ನು ಬಲಿ ಮಾಡುತ್ತಿದ್ದಾರೆ. ಅಥವಾ, ಜೀವಕ್ಕೆ ಅಪಾಯವಿದೆ ಎಂದು ಸುಳ್ಳೇ ಹೇಳಿ ಚುನಾವಣೆಗಳನ್ನು ಗೆಲ್ಲುತ್ತಿದ್ದಾರೆ. ಜಗಳ, ದೊಂಬಿ, ಹಿಂಸಾಚಾರ, ಅತ್ಯಾಚಾರ, ಯುದ್ಧ ಇತ್ಯಾದಿಗಳು ರಾಷ್ಟ್ರಪ್ರೇಮದ ಸಂಕೇತಗಳಾಗಿವೆ. ಬದುಕಿದ್ದಕ್ಕಿಂತ ಮಿಗಿಲಾಗಿ ಸತ್ತದ್ದು ಸಮ್ಮಾನ ಗಳಿಸುತ್ತಿದೆ. ಹಾಗೂ, ಎಲ್ಲಕ್ಕಿಂತ ಮಿಗಿಲಾಗಿ, ಸನ್ಯಾಸವು ವೈರಾಗ್ಯ ಮರೆತು ಕಾವಿಯನ್ನೇ ಕತ್ತಿಯನ್ನಾಗಿ ಆಡಿಸುತ್ತಿದೆ... ಇತ್ಯಾದಿ.

ರೋಗದ ಎರಡನೆಯ ಲಕ್ಷಣ ಹೆದರಿಕೆ. ಅಥವಾ ಧಾರ್ಮಿಕ ಪುಕ್ಕಲುತನ. ದೇವರು, ಜಾತಿ, ಜ್ಯೋತಿಷ, ಮಠ ಇತ್ಯಾದಿ ಹೆಸರೆತ್ತಿದರೆ ಸಾಕು ಗಡಗಡಗಡ ನಡುಗುವ ಪ್ರವೃತ್ತಿ! ನನ್ನ ಮಾತಿನ ಅರ್ಥವೇನೆಂದರೆ, ರೋಗದಿಂದಾಗಿ ಧೈರ್ಯ ಕಳೆದುಕೊಂಡಿರುವ ಮನುಷ್ಯ, ಅವಸರವಸರವಾಗಿ ಧಾರ್ಮಿಕನಾಗಲು ಹೊರಟಿದ್ದಾನೆ. ಪೂಜಾರಿಯನ್ನೇ ದೇವರೆಂದು ಭ್ರಮಿಸುತ್ತಿದ್ದಾನೆ, ಪೂಜಾರಿಯ ಅಸಹ್ಯ ಬೊಜ್ಜನ್ನೇ ಧರ್ಮವೆಂದು ತಿಳಿದು ಅಪ್ಪಿಕೊಳ್ಳುತ್ತಿದ್ದಾನೆ. ಗಳಗಳ ಅಳುತ್ತಾನೆ, ಕೆನ್ನೆಕೆನ್ನೆ ಬಡಿದುಕೊಳ್ಳುತ್ತಾನೆ, ಜೇಬಲ್ಲಿರುವ ದುಡ್ಡನ್ನೆಲ್ಲ ತೆಗೆತೆಗೆದು ಪೂಜಾರಿಯ ಕಡೆಗೆ ತೂರುತ್ತಾನೆ.

ಪಾದ್ರಿ, ಪೂಜಾರಿ, ಮುಲ್ಲಾಗಳನ್ನು, ನೆನ್ನೆಮೊನ್ನಿನವರೆಗೆ ಅನುಮಾನದಿಂದ ನೋಡುತ್ತಿದ್ದವನು ಒಮ್ಮೆಗೇ ದಾಸನಾಗಿ ಬಿಟ್ಟಿದ್ದಾನೆ. ಅವರು ಹೇಳಿದ್ದೆಲ್ಲ ವೇದವಾಕ್ಯವಾಗಿ ಕೇಳಿಸತೊಡಗಿದೆ ಅವನಿಗೆ. ಇತ್ತ, ಮುಲ್ಲಾ, ಪಾದ್ರಿ, ಪೂಜಾರಿಗಳೂ ಉಪ್ಪುಖಾರ ಉಂಡವರೇ ತಾನೆ? ವ್ಯಾಪಾರಿಬುದ್ಧಿ ಚುರುಕಾಗಿದೆ. ಎಲ್ಲದಕ್ಕೂ ಅವರು ದರ ನಿಗದಿ ಮಾಡಿದ್ದಾರೆ. ಸ್ವರ್ಗ ತಲುಪಿಸುವುದಕ್ಕೆ ದರ, ನರಕ ತಪ್ಪಿಸುವುದಕ್ಕೆ ದರ, ಭೂತ ಬಿಡಿಸುವುದಕ್ಕೆ ದರ... ಇತ್ಯಾದಿ. ಮುಲಾಜಿಲ್ಲದೆ, ದೇವರ ಹೆಸರಿನಲ್ಲಿ ವಸೂಲಿ ನಡೆದಿದೆ.

ಪೂಜೆ ಉದ್ದಿಮೆಯಾಗಿದೆ. ಧರ್ಮ ಸ್ಥಾವರವಾಗಿದೆ. ಮಠಗಳು ಕಾರ್ಪೊರೇಟ್ ಸಂಸ್ಥೆಗಳಂತಾಗಿವೆ! ಚರ್ಚು, ಮಂದಿರ, ಮಸೀದಿಗಳು ಚಿನ್ನದ ಲೇಪ ಹೊತ್ತು ಮೇಲೆದ್ದು ನಿಂತಿವೆ. ಜಂಗಮ ಸಣಕಲಾಗಿದೆ. ಮತ್ತುಮತ್ತೂ ಸಣ್ಣದಾಗಿ ಕಡೆಗೊಮ್ಮೆ ಕಣ್ಣಿಗೇ ಕಾಣಿಸದಂತಾಗಿ ಸಂಕೇತವಾಗಿದೆ. ಇಲ್ಲದ ಸಂಕೇತವನ್ನು ಮುಲ್ಲಾ, ಪಾದ್ರಿ, ಪೂಜಾರಿಗಳು ಬಂಗಾರದ ವಸ್ತ್ರದಲ್ಲಿ ಸುತ್ತಿ, ಹೇಗೋ ಭಕ್ತರ ಕಣ್ಣಿಗೆ ಕಾಣುವಂತೆ ಮಾಡಿದ್ದಾರೆ. ಹೀಗೆ ಬೆಳೆದಿದೆ, ಇಪ್ಪತ್ತೊಂದನೆಯ ಶತಮಾನದ ಅತಿದೊಡ್ಡ ಉದ್ದಿಮೆ, ಪುರೋಹಿತಶಾಹಿ ಉದ್ದಿಮೆ!

ಉದ್ದಿಮೆಯು ತನ್ನದೇ ಪ್ರವಾಸೋದ್ಯಮ, ತನ್ನದೇ ಐಷಾರಾಮಿ ಆಶ್ರಮ, ಖಾಸಗಿ ಶಿಕ್ಷಣ ಸಂಸ್ಥೆ, ಖಾಸಗಿ ಆಸ್ಪತ್ರೆ ಇತ್ಯಾದಿ ಪೂರಕ ಉದ್ದಿಮೆಗಳನ್ನು ಸ್ಥಾಪಿಸಿಕೊಂಡು ಕೋಟಿಕೋಟಿ ಲಾಭ ಗಳಿಸುತ್ತಿದೆ. ಪುರೋಹಿತಶಾಹಿ ಉದ್ದಿಮೆಯ ಆರ್ಭಟಕ್ಕೆ ಹೆದರಿರುವ ಇತರೆ ಉದ್ದಿಮೆಪತಿಗಳು ಹಾಗೂ ರಾಜಕಾರಣಿಗಳು, ಬಾಲ ಮುದುಡಿಕೊಂಡು ಪುರೋಹಿತಶಾಹಿಗೆ ಮಣಿಯುತ್ತಿದ್ದಾರೆ.

ಪುರೋಹಿತಶಾಹಿಯು ರಾಜಕೀಯ ಪ್ರವೇಶ ಮಾಡಿದೆ.

ಜಯಭೇರಿ ಬಾರಿಸಿ ಅಧಿಕಾರ ಹಿಡಿದಿದೆ. ಅತಿಯಾಗಿ ತಿನ್ನುವ ರಾಜಕಾರಣಿಗಳಿಗೆ, ಅದು, ತಿನ್ನಲಿಕ್ಕೆ ಇನ್ನಷ್ಟು ನೀಡಿ
ರಾಜ್ಯಭಾರವನ್ನು ಔಟ್‌ಸೋರ್ಸ್ ಮಾಡಿದೆ. ಅಥವಾ ತಾನೇ ಕಾವಿ ತೊಟ್ಟು ನೇರವಾಗಿ ರಾಜ್ಯಭಾರ ನಡೆಸಿದೆ. ಅತಿಯಾಗಿ ತಿನ್ನುವ ಉದ್ದಿಮೆಪತಿಗಳು, ಹೆಗ್ಗಣಗಳಂತೆ ತಮ್ಮ ಮಾಮೂಲಿನ ತೆರೆಮರೆ ಕೆಲಸವನ್ನು ಉಮೇದಿನಿಂದ ನಡೆಸಿದ್ದಾರೆ. ವಿಶ್ವದಾದ್ಯಂತ ಈ ಪ್ರಕ್ರಿಯೆ ನಡೆದಿದೆ. ಪಾಕಿಸ್ತಾನದಲ್ಲಿ ಮುಲ್ಲಾಗಳು ವಹಿಸಿದ್ದರೆ, ಭಾರತದಲ್ಲಿ ಕಾವಿ ತೊಟ್ಟವರು ಮುಂದಾಳತ್ವ ವಹಿಸಿದ್ದಾರೆ.

ರೋಗಗ್ರಸ್ತರು ಕಟ್ಟಿದ ರಾಜಕಾರಣವಾದ್ದರಿಂದ ಸಹಜವಾಗಿಯೇ ಇದು ಅಸಹಿಷ್ಣುವಾಗಿದೆ. ವಿಮರ್ಶಕರು, ವಿಚಾರವಾದಿಗಳು, ದಲಿತರು, ಅಲ್ಪಸಂಖ್ಯಾತರು ಇತ್ಯಾದಿ ಇತರೆ ಎಲ್ಲರನ್ನೂ ಬಲವಂತದಿಂದ ಶಿಸ್ತಿಗೆ ಒಳಪಡಿಸಲಾಗುತ್ತಿದೆ. ರಕ್ತ ಹರಿಸಲಾಗುತ್ತಿದೆ. ಇದು ಇಂದಿನ ರಾಜಕಾರಣ. ಇರಲಿ, ಈಗ ರೋಗಕ್ಕೆ ಮರಳೋಣ.

ತಜ್ಞರು ಹೇಳುತ್ತಾರೆ, ತಕ್ಷಣ ಗಮನಹರಿಸದೆ ಹೋದರೆ ರೋಗವು ಮಾರಣಾಂತಿಕವಾಗಬಲ್ಲದು ಎಂದು. ಒಂದು ಸಮಸ್ಯೆ ಮತ್ತೊಂದು ಸಮಸ್ಯೆಯನ್ನು ಪ್ರೇರೇಪಿಸುತ್ತದೆ ಎನ್ನುತ್ತಾರೆ. ಅತಿಯಾಗಿ ತಿನ್ನುವುದು ಅತಿಯಾದ ಹೆದರಿಕೆಯನ್ನೂ, ಅತಿಯಾದ ಹೆದರಿಕೆಯು ಅತಿ ಧಾರ್ಮಿಕತೆಯನ್ನೂ, ಅತಿಯಾದ ಧಾರ್ಮಿಕತೆಯು ಅಸಹಿಷ್ಣು ರಾಜಕಾರಣವನ್ನೂ ಪ್ರಚೋದಿಸುತ್ತದೆ, ಸಮಾಜವನ್ನು ಸಾಯಿಸುತ್ತದೆ ಎಂದು ಹೇಳುತ್ತಾರೆ. ರೋಗಿಗಳು, ಕ್ರಮೇಣ ಮಾನಸಿಕ ಸ್ವಾಸ್ಥ್ಯ ಕಳೆದುಕೊಳ್ಳುತ್ತಾರೆ ಎಂದು ಹೇಳುತ್ತಾರೆ. ಅಹಿಂಸೆಯ ಪ್ರತೀಕಗಳಾದ ಏಸು, ಬುದ್ಧ, ಬಸವ, ಅಲ್ಲಾ ಇತ್ಯಾದಿ ಮಹನೀಯರು ರೋಗಿಗಳ ಕಣ್ಣಲ್ಲಿ ಹಿಂಸೆಯ ಪ್ರಚೋದಕರಂತೆ ಕಾಣತೊಡಗುತ್ತಾರೆ. ಮನುಷ್ಯರು, ಹುಚ್ಚುನಾಯಿಗಳಂತೆ ಪರಸ್ಪರರನ್ನು ಕಚ್ಚಿ ಸಾಯಿಸುತ್ತಾರೆ ಎಂದವರು ಹೇಳುತ್ತಿದ್ದಾರೆ.

ರೋಗಕ್ಕೆ ಮದ್ದಿಲ್ಲವೇ? ಇದೆ. ಮಾತ್ರವಲ್ಲ, ಮದ್ದು ಸರಳವಾಗಿದೆ. ಪ್ರತೀ ವ್ಯಕ್ತಿಯೂ, ಸಾಮಾಜಿಕ ಚಳವಳಿಯೋ ಎಂಬಂತೆ ಕಡಿಮೆ ತಿನ್ನಬೇಕು. ಉಪವಾಸ ವ್ರತ ಮಾಡಬೇಕು. ಅದೇ ಮದ್ದು ಎನ್ನುತ್ತಾರೆ ತಜ್ಞರು. ಉಳ್ಳವರು ಉಪವಾಸ ಮಾಡುವುದು ಫ್ಯಾಷನ್ನಾಗಬೇಕು. ಸ್ಟಾರುಗಳು, ಸ್ಪೋರ್ಟ್ಸ್‌ಮನ್‌ಗಳು, ರಾಜಕಾರಣಿಗಳು ಉಪವಾಸ ಮಾಡಬೇಕು ಎನ್ನುತ್ತಾರೆ ತಜ್ಞರು. ‘ನಾವೇನು ಮಾಡಬೇಕು?’ ಎಂದು ಸಮಾಜವಾದಿ ಸಂಸ್ಥೆಗಳು ಹಾಗೂ ಸಮತಾವಾದಿ ಸಂಸ್ಥೆಗಳು ಕೇಳಿದಾಗ, ನೀವೂ ಧಾರ್ಮಿಕರಂತೆ ಉಪವಾಸ ವ್ರತ ಮಾಡಿ ಎಂದು ಸಲಹೆ ನೀಡುತ್ತಿದ್ದಾರೆ ತಜ್ಞರು.

ಓಡುವುದನ್ನು ಕಡಿಮೆ ಮಾಡಿ ಎನ್ನುತ್ತಿದ್ದಾರೆ. ಓಡಲಿಕ್ಕೆಂದೇ ಬಳಸುತ್ತಿರುವ ಯಂತ್ರಗಳ ಬಳಕೆ ಕಡಿಮೆ ಮಾಡಿ ಎನ್ನುತ್ತಿದ್ದಾರೆ. ನಿಧಾನಗತಿಯೆಂಬುದನ್ನು ಅಭ್ಯಾಸ ಮಾಡಿ, ಉದ್ದಿಮೆಗಳು, ಆಡಳಿತಗಳು, ಕ್ರಾಂತಿಗಳು ಇತ್ಯಾದಿ ಎಲ್ಲವೂ ಓಡಬಾರದು ನಡೆಯಬೇಕು ಎನ್ನುತ್ತಿದ್ದಾರೆ. ಮನಸ್ಸು ಓಡಬಾರದು, ದೇಹ ಓಡಬಾರದು, ಕನಸು– ಒಳಿತು– ಪ್ರೀತಿ– ಮಮತೆ ಇತ್ಯಾದಿ ಯಾವುದೂ ಓಡಬಾರದು ಅನ್ನುತ್ತಿದ್ದಾರೆ.

ಇದೇ ಅಭಿವೃದ್ಧಿ, ಇದೇ ಮಾದರಿ ಅನ್ನುತ್ತಿದ್ದಾರೆ! ಅತ್ಯಾಧುನಿಕ ಅಭಿವೃದ್ಧಿ ಮಾದರಿ ಇದು ಅನ್ನುತ್ತಿದ್ದಾರೆ! ಉಳ್ಳವರು ಉಪವಾಸವ್ರತ ಮಾಡಿದರೆ ಹಾಗೂ ಓಡುವುದನ್ನು ಕಡಿಮೆ ಮಾಡಿದರೆ, ರೋಗ ನಿಧಾನವಾಗುತ್ತದೆ, ತಾಪ ಕಳೆದಂತೆ ಹೆದರಿಕೆ ಕಡಿಮೆಯಾಗುತ್ತದೆ, ಹೆದರಿಕೆ ಕಡಿಮೆಯಾದಂತೆ ಪೂಜಾರಿಯೇ ದೇವರಲ್ಲ ಎಂದು ಅರಿವಾಗುತ್ತದೆ ಎನ್ನುತ್ತಾರೆ ತಜ್ಞರು. ಸಮಾಜವಾದ, ಸಮತಾವಾದ, ಆಧುನಿಕತೆ ಇತ್ಯಾದಿ ಸಂಸ್ಥೆಗಳಿಗೂ ಅರಿವಾಗುತ್ತದೆ. ಕಾರ್ಖಾನೆಗಳು, ರಸ್ತೆಗಳು ಹಾಗೂ ಡ್ಯಾಮುಗಳೇ ಸಮಾಜವಾದವಲ್ಲ ಎಂಬ ಅರಿವಾಗುತ್ತದೆ ಎನ್ನುತ್ತಾರೆ ತಜ್ಞರು.

ಹೀಗೆ ಅರಿವು ಮೂಡಿದಾಗ, ಒಂದು ಅದ್ಭುತ ಘಟಿಸುತ್ತದಂತೆ! ದೇವರು ಪ್ರತ್ಯಕ್ಷನಾಗುತ್ತಾನಂತೆ! ಶ್ರಮದ ರೂಪದಲ್ಲಿ ಪ್ರತ್ಯಕ್ಷನಾಗುತ್ತಾನಂತೆ, ಶ್ರಮದ ವಿಶ್ವರೂಪ ದರ್ಶನ ಮಾಡಿಸುತ್ತಾನಂತೆ! ಒಮ್ಮೆಗೇ, ಉಳ್ಳವರಿಗೂ ಹಸಿವು ಗೋಚರಿಸುತ್ತದಂತೆ! ನಿದ್ರೆ ಮರಳುತ್ತದಂತೆ! ಹಳವಂಡಗಳು ಹಸಿತೇಗು ಪಿತ್ತವಿಕೋಪ ಇತ್ಯಾದಿ ಕಾಯಿಲೆಗಳೆಲ್ಲವೂ ಮಾಯವಾಗುತ್ತವಂತೆ! ಕಾರ್ಖಾನೆಗಳು, ಮಾಲ್‌ಗಳು, ಮನರಂಜನೆಗಳು ಹಾಗೂ ಜಾಹೀರಾತುಗಳು ಆಶ್ಚರ್ಯಕರ ರೀತಿಯಲ್ಲಿ ಸಣ್ಣಗಾಗುತ್ತವಂತೆ. ವಿಧಾನ
ಸೌಧಗಳು, ಬಹುಮಹಡಿ ಕಟ್ಟಡಗಳು ಸಣ್ಣಗಾಗುತ್ತವಂತೆ. ಭ್ರಷ್ಟಾಚಾರ ಸಣ್ಣಗಾಗುತ್ತದಂತೆ!

ಮುಲ್ಲಾಗಳು, ಪಾದ್ರಿಗಳು, ಪೂಜಾರಿಗಳು ಸಣ್ಣಗಾಗುತ್ತಾರಂತೆ! ಉಳ್ಳವರು, ಬೊಜ್ಜು ಕರಗಿಸಿಕೊಂಡು, ಏಸುಕ್ರಿಸ್ತನ ತರಹ, ಕಬೀರದಾಸನ ತರಹ, ಫುಕವೋಕಾನ ತರಹ, ಅಥವಾ ಗಾಂಧಿ ತರಹ ಸಣ್ಣಗೆ ಹಾಗೂ ಸುಂದರವಾಗಿ ಕಾಣತೊಡಗುತ್ತಾರಂತೆ.

ಇತ್ತ ಗ್ರಾಮಗಳಲ್ಲಿ ಹಾಗೂ ನಗರ ಸ್ಲಮ್ಮುಗಳಲ್ಲಿ ಮತ್ತೊಂದು ಆಶ್ಚರ್ಯಕರ ಘಟನೆ ಘಟಿಸುತ್ತದಂತೆ. ಶ್ರಮದ ಕೆಲಸಕ್ಕೆ ಬೆಲೆ ಬರುತ್ತದಂತೆ! ರೈತರು, ನೇಕಾರರು, ಕುರಿಗಾಹಿಗಳು, ದನಗಾಹಿಗಳು, ಕೃಷಿಕಾರ್ಮಿಕರು ಹಾಗೂ ನಗರಬಡವರು ಚಿಗಿಯತೊಡಗುತ್ತಾರಂತೆ. ಭಿಕ್ಷಾಟನೆಗೆ ಇಳಿದಿದ್ದವರು, ಮರಳಿ ಮಗ್ಗದ ಕುಣಿಗೆ, ಕಾವಲುಭೂಮಿಗೆ, ಹೊಲಗದ್ದೆಗಳಿಗೆ ಹಿಂದಿರುಗುತ್ತಾರಂತೆ.

ಈ ಕಾಲಮ್ಮು ಓದುತ್ತಿರುವ ಅನೇಕರು, ‘ಥತ್! ಹೇಳಿದ್ದೇ ಹೇಳುತ್ತಿದ್ದೀಯ ಮಾರಾಯ! ನಿನ್ನ ಲೇಖನಗಳು ಕಟ್ಟುಕತೆಗಳಂತಿವೆ, ವಾಸ್ತವತೆಯಿಂದ ಬಲುದೂರ!’ ಎಂದುಗೊಣಗತೊಡಗಿದ್ದಾರಂತೆ! ಈ ಬಾರಿಯ ಕಾಲಮ್ಮು ಓದುವವರು, ‘ಅಯ್ಯೋ, ಮಾರಾಯ! ಬೊಜ್ಜು ಕರಗಿಸಲಿಕ್ಕೂ ಯಂತ್ರಗಳಿವೆ!... ಉಪವಾಸ ವ್ರತವೇಕೆ ಬೇಕು ಹೇಳು?... ಹೊಟ್ಟೆಗೆ ಯಂತ್ರ ಜೋಡಿಸಿ ಸಮಾ ಹೀರಿಬಿಟ್ಟರೆ... ಬೊಜ್ಜೆಲ್ಲ ಕರಗಿ ಕಸವಾಗಿ ಚರಂಡಿಗೆ ಹರಿದು ಹೋಗುತ್ತದೆ’ ಎಂದು ಗೊಣಗಿಕೊಂಡರೆ ಆಶ್ಚರ್ಯವಿಲ್ಲ!

ಆದರೆ ನಾನೇನು ಮಾಡಲಿ ಹೇಳಿ! ಕತೆ ಕಟ್ಟುವುದು ನನ್ನ ವೃತ್ತಿ. ವಾಸ್ತವತೆ ರೋಗಗ್ರಸ್ತವಾದಾಗ ಕಟ್ಟುಕತೆಗಳೇ ಸತ್ಯ ನುಡಿಯುತ್ತವೆ ಎಂದು ನಂಬಿರುವವನು ಬೇರೆ! ಹಾಗಾಗಿ,ಕಟ್ಟುಕತೆ ನಿಜವಾಗು ತ್ತಿರುವ ಒಂದು ಉದಾಹರಣೆ ನೀಡಿ ಈ ಲೇಖನ ಮುಗಿಸುತ್ತೇನೆ. ಆಗಲಾದರೂ ನಂಬಿಕೆ ಬಂದೀತು ನಿಮಗೆ!

ಗ್ರಾಮ ಸೇವಾ ಸಂಘ ಎಂಬ ಯುವಜನರ ಸಂಘಟನೆಯೊಂದು ಈಚೆಗೆ ಹುಟ್ಟಿಕೊಂಡಿದೆ. ಸಂಘಟನೆಯೊಟ್ಟಿಗೆ ನನಗೆ ಸಂಪರ್ಕವಿದೆ. ಹಾಗಾಗಿ ಗೊತ್ತು. ‘ಸಾಮೂಹಿಕ ಉಪವಾಸ ಸತ್ಯಾಗ್ರಹ ಮಾಡಿ’ ಎಂದು ಗ್ರಾಮ ಸೇವಾ ಸಂಘವು ಯುವಜನರಿಗೆ ಕರೆ ನೀಡಿದೆಯಂತೆ! ಮುಂದಿನ ತಿಂಗಳು ಅಂದರೆ ಅಕ್ಟೋಬರ್ 6ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಆವರಣದ ಸಂಸ ರಂಗಮಂದಿರದಲ್ಲಿ ಯುವಕರು ಸಾಮೂಹಿಕ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರಂತೆ! ಆ ನಂತರದಲ್ಲಿ ದೇಶದ ತುಂಬೆಲ್ಲ ಉಪವಾಸದ ಚಾಳಿ ಹರಡಲಿದೆಯಂತೆ! ಯುವಕರ ಸ್ನೇಹಿತರು ಹಾಗೂ ಬಂಧುಬಳಗದವರು ಅಲ್ಲಿ ನೆರೆದು ಉಪವಾಸದ ರುಚಿಯನ್ನು ಸವಿಯಲಿದ್ದಾರಂತೆ!

ಎಲ್ಲವೂ ತಲೆಕೆಳಗಾಗುತ್ತದೆಯಂತೆ! ಕಟ್ಟುಕತೆ ವಾಸ್ತವವೂ, ವಾಸ್ತವತೆ ಕಟ್ಟುಕತೆಯೂ ಆಗುತ್ತದಂತೆ! ಯುವಕರು ಮಹಾತ್ಮ ಗಾಂಧಿಯವರನ್ನು ಫ್ಯಾಷನ್ನಿನ ಐಕಾನ್ ಮಾಡುತ್ತಾರಂತೆ. ಹಾಡು, ನಾಟಕ ಇತ್ಯಾದಿ ಎಲ್ಲವನ್ನೂ ತಲೆಕೆಳಗು ಮಾಡುತ್ತಾರಂತೆ. ಕೊಳ್ಳುಬಾಕತೆ, ಸ್ಪರ್ಧಾತ್ಮಕತೆ, ಠೇಂಕಾರ, ಜಂಬ, ಕುಡಿತ, ಜೂಜು, ಡ್ರಗ್ಸು ಇತ್ಯಾದಿಗಳ ಬದಲು ಸಹಿಷ್ಣುತೆ, ಪ್ರೀತಿ– ಪ್ರೇಮಗಳ ಕತೆಕಟ್ಟುತ್ತಾರಂತೆ! ಹಸಿವಿನ ರಸ ಹೊರಡಿಸಿ ರುಚಿ ಮೆಲ್ಲುತ್ತಾರಂತೆ! ಎಲ್ಲವೂ ತಲೆಕೆಳಗಾಗಿರುವ ಜಗತ್ತಿನಲ್ಲಿ, ತಲೆಕೆಳಗಾಗಿ ನೋಡಿದರೇನೇ ಸರಿದಾರಿ ಕಾಣುತ್ತದೆ ಅನ್ನುತಾರೆ ಯುವಕರು!

ನನಗೂ ನಂಬಲಾಗುತ್ತಿಲ್ಲ! ಆದರೇನು ಮಾಡಲಿ! ಒಂದೊಮ್ಮೆ ಅಲ್ಲಿ ದೇವರು ಪ್ರತ್ಯಕ್ಷನಾಗಿಬಿಟ್ಟರೆ! ಏನಾದರಾಗಲಿ ನೋಡಿಬಿಡೋಣ ಎಂದು ಅಕ್ಟೋಬರ್ 6, ಶನಿವಾರ, ಬೆಳಿಗ್ಗೆ ಒಂಬತ್ತು ಗಂಟೆಗೆ, ರವೀಂದ್ರ ಕಲಾಕ್ಷೇತ್ರದ ಸುತ್ತಲ ಬಯಲು ಆವರಣಕ್ಕೆ ಹೊರಟಿದ್ದೇನೆ. ನೀವೂ ಬನ್ನಿ! ಒಂದೊಮ್ಮೆ ದೇವರು ಪ್ರತ್ಯಕ್ಷನಾಗದಿದ್ದರೆ ನಷ್ಟವೇನಿಲ್ಲ. ಪ್ರತ್ಯಕ್ಷನಾದರೆ, ಆದಾಗ ಅಲ್ಲಿ ನಾವಿರದಿದ್ದರೆ ನಷ್ಟ! ಹಾಗಾಗಿ ಬನ್ನಿ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT