ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಫ್ಲ್ಯಾಟ್‌ ಹೂಡಿಕೆ’ಯ ಸಂಕಟ

Last Updated 22 ಜನವರಿ 2016, 8:52 IST
ಅಕ್ಷರ ಗಾತ್ರ

ಮಹಾನಗರದಲ್ಲಿ ಮನೆ ಮಾಡಿಕೊಳ್ಳಬೇಕೆಂಬ ಕನಸು ಹಲವರದ್ದು. ತಾವಿರಲು ಒಂದು ಸೂರು ಸಾಕು ಎಂದು ಯೋಚಿಸುವ ವರ್ಗ ಒಂದಾದರೆ, ವ್ಯವಹಾರದ ದೃಷ್ಟಿಯಿಂದ ಮನೆ ಹೊಂದುವ ವರ್ಗ ಮತ್ತೊಂದು. ನಗರದಲ್ಲಿ ಅಪಾರ್ಟ್‌ಮೆಂಟ್‌ ಸಂಸ್ಕೃತಿ ಬೆಳೆದು, ಬಲಿತಂತೆಲ್ಲಾ ಬಾಡಿಗೆ ಇಲ್ಲವೇ  ಭೋಗ್ಯಕ್ಕೆ ನೀಡುವ ಉದ್ದೇಶದಿಂದ ಫ್ಲ್ಯಾಟ್‌ ಕೊಂಡವರ ಸಂಖ್ಯೆಯೂ ಹೆಚ್ಚಾಗಿದೆ.

ದೊಡ್ದ ನಿರ್ಮಾಣ ಸಂಸ್ಥೆಗಳು ನಗರದಲ್ಲಿ ಮುಗಿಲು ಮುಟ್ಟುವಂಥ ವಸತಿ ಸಮುಚ್ಚಯಗಳನ್ನು ನಿರ್ಮಿಸುತ್ತಿರುವ ಇಂದಿನ ದಿನಗಳಲ್ಲಿ ಸ್ವಂತಕ್ಕಾಗಿ ಫ್ಲ್ಯಾಟ್‌ ಕೊಳ್ಳುವವರ ಸಂಖ್ಯೆಯೇ ಹೆಚ್ಚು. ಫ್ಲ್ಯಾಟ್‌ಗಳ ಬೆಲೆ ಲಕ್ಷ ರೂಪಾಯಿ ಮೀರಿ ಕೋಟಿಯ ಕಡೆಗೆ ಬೆಳೆಯುತ್ತಿದ್ದರೂ ಕೊಳ್ಳುವವರೇನೂ ಕಡಿಮೆಯಾಗಿಲ್ಲ. ಹೀಗಾಗಿ ನಗರದ ಖಾಲಿ ಜಾಗಗಳೆಲ್ಲಾ ದಿನ ಕಳೆದಂತೆ ಅಪಾರ್ಟ್‌ಮೆಂಟ್‌ಗಳಾಗಿ ಪರಿವರ್ತನೆಯಾಗುತ್ತಿವೆ.

ಬಾಡಿಗೆ ಇಲ್ಲವೇ ಭೋಗ್ಯಕ್ಕೆ ನೀಡುವ ಉದ್ದೇಶದಿಂದ ಫ್ಲ್ಯಾಟ್‌ಗಳ ಮೇಲೆ ಬಂಡವಾಳ ಹೂಡಿರುವವರಿಗೆ ಈಗ ಹೊಸದೊಂದು ಸಂಕಟ ಶುರುವಾಗಿದೆ. ಒಂದು ಅಥವಾ ಎರಡು ಕೊಠಡಿಗಳ ಫ್ಲ್ಯಾಟ್‌ಗಳನ್ನು ಬಾಡಿಗೆ ಅಥವಾ ಭೋಗ್ಯಕ್ಕೆ ಹಿಡಿಯುವ ಪರಿಪಾಠ ನಗರದಲ್ಲಿ ಈಗ ಕಡಿಮೆಯಾಗುತ್ತಿದೆ. ನಗರದ ಬಹುತೇಕ ಕಡೆಗಳಲ್ಲಿ ಒಂದು ಕೊಠಡಿಯ ಫ್ಲ್ಯಾಟ್‌ಗಳನ್ನು ಬಾಡಿಗೆ ಅಥವಾ ಭೋಗ್ಯಕ್ಕೆ ಪಡೆಯುವ ಜನಕಡಿಮೆಯಾಗಿದ್ದಾರೆ. ಇದರಿಂದ ಫ್ಲ್ಯಾಟ್‌ಗಳ ಮೇಲೆ ಹೂಡಿಕೆ ಮಾಡಿರುವ ಎಷ್ಟೋ ಮಂದಿ ಈಗ ಕೈ ಕೈ ಹಿಸುಕಿಕೊಳ್ಳುವಂತಾಗಿದೆ.

‘ಎರಡು ವರ್ಷದ ಹಿಂದೆ ₹ 40 ಲಕ್ಷ ಕೊಟ್ಟು ಎರಡು ಬೆಡ್‌ರೂಂ ಫ್ಲ್ಯಾಟ್‌ ಖರೀದಿಸಿದ್ದೆ. ಆರು ತಿಂಗಳ ಹಿಂದಿನವರೆಗೂ ನಾವೇ ಆ ಫ್ಲ್ಯಾಟ್‌ನಲ್ಲಿದ್ದೆವು. ಹೊಸದಾಗಿ ಮನೆ ಕಟ್ಟಿಸಿದ ಮೇಲೆ ನಮ್ಮ ಕುಟುಂಬ ಹೊಸ ಮನೆಗೆ ಸ್ಥಳಾಂತರವಾಯಿತು. ಆ ನಂತರ ಸುಮಾರು ನಾಲ್ಕು ತಿಂಗಳ ಕಾಲ ಆ ಫ್ಲ್ಯಾಟ್‌ ಖಾಲಿಯಾಗೇ ಇತ್ತು’ ಎಂದು ಫ್ಲ್ಯಾಟ್‌ ಸಂಕಟದ ಮಾತು ಶುರು ಮಾಡಿದವರು ನಂದಿನಿ ಬಡಾವಣೆಯ ನಾಗರಾಜ್‌.

‘ಎರಡು ಬೆಡ್‌ರೂಂ ಫ್ಲ್ಯಾಟ್‌ಗೆ ₹ 15 ಸಾವಿರ ಬಾಡಿಗೆ ಕೊಡಲೂ ಜನ ಈಗ ಹಿಂದೇಟು ಹಾಕುತ್ತಾರೆ. ಕೊನೆಗೆ ಉತ್ತರ ಭಾರತದ ನಾಲ್ವರು ಜನ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ₹ 12 ಸಾವಿರಕ್ಕೆ ಒಪ್ಪಿ ಫ್ಲ್ಯಾಟ್‌ ಬಾಡಿಗೆಗೆ ಪಡೆದರು. ಎರಡು ವರ್ಷದ ಹಿಂದೆ ₹ 40 ಲಕ್ಷ ಬಂಡವಾಳವನ್ನು ನಗರದ ಹೊರಗೆ ಹೊಸ ನಿವೇಶನದ ಮೇಲೆ ಹೂಡಿದಿದ್ದರೆ ಇಂದಿಗೆ ಅದರ ಬೆಲೆ ದುಪ್ಪಟ್ಟಾಗುತ್ತಿತ್ತು. ಈಗ ಫ್ಲ್ಯಾಟ್‌ ಮಾರಲು ಮುಂದಾದರೆ ಕೇವಲ ₹ 30 ಲಕ್ಷಕ್ಕೆ ಕೇಳುತ್ತಾರೆ’ ಎನ್ನುತ್ತಾರೆ  ನಾಗರಾಜ್‌.

ಅವರಂತೆ ಒಂದು ಅಥವಾ ಎರಡು ಬೆಡ್‌ರೂಂನ ಫ್ಲ್ಯಾಟ್ ಹೊಂದಿರುವ ಅನೇಕರಿಗೆ ಈಗ ಬಾಡಿಗೆದಾರರು ಸಿಗುವುದೇ ಕಷ್ಟವಾಗಿದೆ. ಫ್ಲ್ಯಾಟ್‌ ಬಾಡಿಗೆ ಇಲ್ಲವೇ ಭೋಗ್ಯದಿಂದ ಬರುವ ಹಣದಿಂದ ಏನೇನೋ ಮಾಡಿಕೊಳ್ಳಬೇಕೆಂದು ಹಾಕಿದ್ದ ಇಂಥ ಬಹುತೇಕರ ಲೆಕ್ಕಾಚಾರ ಈಗ ತಲೆಕೆಳಗಾಗಿದೆ.

ಬಾಡಿಗೆ ದುಡ್ಡಿಗೆ ಸ್ವಂತ ಮನೆ!
ತಿಂಗಳಿಗೆ ₹ 20 ಸಾವಿರದಿಂದ ₹ 30 ಸಾವಿರದವರೆಗೆ ಬಾಡಿಗೆ ಕೊಡುವುದಕ್ಕಿಂತ ಅದೇ ಹಣವನ್ನು ಸ್ವಂತ ಮನೆಯ ಮೇಲೆ ಹೂಡುವುದು ಮೇಲು ಎಂಬುದು ಈಗ ಹಲವರ ಆಲೋಚನೆ. ಹೊಸ ನಿರ್ಮಾಣ ಸಂಸ್ಥೆಗಳು ಕಂತಿನಲ್ಲಿ ಹಣ ಪಾವತಿಸುವ ಯೋಜನೆ ಪರಿಚಯಿಸಿರುವುದರಿಂದ ಬಾಡಿಗೆಗೆ ಕಟ್ಟುವ ಹಣವನ್ನೇ ಕಂತಾಗಿ ಕಟ್ಟಿದರೆ ಮುಂದೊಂದು ದಿನ ಮನೆಯೇ ತಮ್ಮದಾಗುತ್ತದೆ ಎಂಬ ಆಲೋಚನೆ ಈಗ ಹಳತು.

‘ಬಾಡಿಗೆ ಪಡೆಯಲು ನೀಡುವ ಮುಂಗಡ ಹಣವನ್ನೇ ಮೂಲ ಬಂಡವಾಳವೆಂದು ಸ್ವಂತ ಫ್ಲ್ಯಾಟ್ ಅಥವಾ ನಿವೇಶನದ ಮೇಲೆ ಹೂಡಬಹುದು. ಎರಡು ವರ್ಷಗಳ ಹಿಂದೆ ₹ 5 ಲಕ್ಷ ಪಾವತಿಸಿ ಪ್ರತಿ ತಿಂಗಳು ಕಂತಿನ ಹಣವಾಗಿ ₹ 30 ಸಾವಿರ ಪಾವತಿಸುತ್ತಿದ್ದೇನೆ. ಇನ್ನೆರಡು ವರ್ಷ ಕಳೆದರೆ ಈ ಫ್ಲ್ಯಾಟ್‌ ನನ್ನ ಸ್ವಂತದ್ದಾಗುತ್ತದೆ. ಅದೇ ₹ 30 ಸಾವಿರ ಬಾಡಿಗೆ ಕಟ್ಟುತ್ತಿದ್ದರೆ ಇನ್ನೂ ಬಾಡಿಗೆ ಮನೆಯಲ್ಲೇ ದಿನ ದೂಡಬೇಕಾಗುತ್ತಿತ್ತು’ ಎನ್ನುವುದು ನಾಗರಬಾವಿಯ ಚೇತನ್‌ ಅವರ ಅನುಭವದ ಮಾತು.

ಐಷಾರಾಮಿ ಫ್ಲ್ಯಾಟ್‌ಗಳಿಗೆ ಬೇಡಿಕೆ
ಫ್ಲ್ಯಾಟ್‌ಗಳನ್ನು ಕೊಳ್ಳುವವರು ಹೆಚ್ಚಾದ ಮಾತ್ರಕ್ಕೆ ಫ್ಲ್ಯಾಟ್‌ಗಳಿಗೆ ಬಾಡಿಗೆದಾರರು ಇಲ್ಲವೇ ಇಲ್ಲ ಎಂದೇನಿಲ್ಲ. ಐಷಾರಾಮಿ ಫ್ಲ್ಯಾಟ್‌ಗಳನ್ನು ಬಾಡಿಗೆಗೆ ಪಡೆಯುವ ವರ್ಗವೊಂದಿದೆ. ದೊಡ್ಡ ದೊಡ್ಡ ಕಂಪೆನಿಗಳು ತಮ್ಮಲ್ಲಿ ಉನ್ನತ ಹುದ್ದೆಯಲ್ಲಿರುವವರಿಗೆ ಉತ್ತಮ ವೇತನದ ಜತೆಗೆ ವಸತಿ ವ್ಯವಸ್ಥೆಯನ್ನೂ ನೀಡುತ್ತವೆ. ಅಂಥ ಕಂಪೆನಿಗಳು ಐಷಾರಾಮಿ ಫ್ಲ್ಯಾಟ್‌ಗಳನ್ನು ಬಾಡಿಗೆಗೆ ಪಡೆಯುತ್ತವೆ. ಈ ಫ್ಲ್ಯಾಟ್‌ಗಳ ಬಾಡಿಗೆ ಭರಿಸುವ ಹೊಣೆ ಕಂಪೆನಿಯದ್ದೇ.

ಇನ್ನು ಸದಾ ವ್ಯವಹಾರದ ಪ್ರವಾಸದಲ್ಲಿರುವ ದೊಡ್ಡ ಉದ್ಯಮಿಗಳು ಮಹಾನಗರಗಳಲ್ಲಿ ಫ್ಲ್ಯಾಟ್‌ ಅಥವಾ ವಿಲ್ಲಾ ಹೊಂದುವುದು ಸಾಮಾನ್ಯ. ಕೆಲವರು ಐಷಾರಾಮಿ ಫ್ಲ್ಯಾಟ್‌ ಅಥವಾ ವಿಲ್ಲಾಗಳನ್ನು ಬಾಡಿಗೆಗೆ ಪಡೆದರೆ, ಕೆಲವರು ಖರೀದಿಸಿ ಅವನ್ನು ತಮ್ಮದಾಗಿಸಿಕೊಳ್ಳುತ್ತಾರೆ.

ನಿರ್ಮಾಣ ವಲಯ ಬೆಳೆದಂತೆಲ್ಲಾ ಮನೆ, ಫ್ಲ್ಯಾಟ್‌ಗಳನ್ನು ಕೊಳ್ಳುವ ಆ ಯ್ಕೆ ಸ್ವಾತಂತ್ರ್ಯವೂ ಹೆಚ್ಚಾಗುತ್ತಿದೆ. ಐದಂಕಿಯಿಂದ ಆರಂಕಿ ಸಂಬಳ ಎಣಿಸುವವರು ಸ್ವಂತ ಸೂರನ್ನೇ ಹೊಂದಲು ಬಯಸುತ್ತಾರೆ. ಇನ್ನು ಖರೀದಿಸಿದ ಫ್ಲ್ಯಾಟ್‌ ಬಾಡಿಗೆಗೆ ಕೊಡಬಾರದೆಂಬ ನಿಯಮ ಕೆಲವು ಅಪಾರ್ಟ್‌ಮೆಂಟ್‌ಗಳಲ್ಲಿದೆ. ಹೀಗಾಗಿ ಬಾಡಿಗೆ ಅಥವಾ ಭೋಗ್ಯಕ್ಕೆ ಫ್ಲ್ಯಾಟ್‌ಗಳನ್ನು ಹೊಂದುವುದು ನಗರದಲ್ಲಿ ನಿಧಾನವಾಗಿ ತೆರೆಮರೆಗೆ ಸರಿಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT