ಭಾನುವಾರ, ಜನವರಿ 19, 2020
23 °C

25 ವರ್ಷಗಳ ಹಿಂದೆ| ಸೋಮವಾರ, 19–12–1994

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈರುಳ್ಳಿ ರಫ್ತು ಮೇಲಿನ ನಿಷೇಧ ರದ್ದು

ನವದೆಹಲಿ, ಡಿ. 18 (ಯುಎನ್‌ಐ)– ಈರುಳ್ಳಿ ರಫ್ತು ಮೇಲಿನ ನಿಷೇಧವನ್ನು ರದ್ದುಗೊಳಿಸಲಾಗಿದೆ.

ಈರುಳ್ಳಿ ಪೂರೈಕೆ ತೃಪ್ತಿಕರವಾದ ಹಾಗೂ ಬೆಲೆಯಲ್ಲಿ ಕಂಡು ಬಂದ ಇಳಿಕೆ ಪ್ರವೃತ್ತಿಯ ಹಿನ್ನೆಲೆಯಲ್ಲಿ ಸರ್ಕಾರವು ಈ ಕ್ರಮಕೈಗೊಂಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿದವು.

ವಾಣಿಜ್ಯ ಹಾಗೂ ನಾಗರಿಕ ಪೂರೈಕೆ ಖಾತೆ ಹಾಗೂ ರಾಷ್ಟ್ರೀಯ ಬೇಸಾಯ ಸಹಕಾರಿ ಮಾರುಕಟ್ಟೆ ಒಕ್ಕೂಟದ (ಎನ್‌ಎಎಫ್‌ಇಡಿ–ನಫೆಡ್) ಉನ್ನತ ಮಟ್ಟದ ಸಭೆಯಲ್ಲಿ ಈರುಳ್ಳಿ ನಿಷೇಧ ರದ್ದುಗೊಳಿಸುವ ನಿರ್ಣಯ ಕೈಗೊಳ್ಳಲಾಯಿತು. ನಫೆಡ್ ಮೂಲಕವಷ್ಟೆ ಈರುಳ್ಳಿ ರಫ್ತಾಗುತ್ತದೆ.

 

ವಿಷಯ ಸ್ಥಿತಿಯಲ್ಲಿ ಜೇಲ್‌ಸಿಂಗ್

ಚಂಡಿಗಢ, ಡಿ. 18 (ಯುಎನ್‌ಐ)– ಅಸ್ವಸ್ಥರಾಗಿರುವ ಮಾಜಿ ರಾಷ್ಟ್ರಪತಿ ಗ್ಯಾನಿ ಜೇಲ್‌ಸಿಂಗ್ ಅವರ ಸ್ಥಿತಿ ವಿಷಮಿಸಿದೆ ಎಂದು ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ವಿ.ಕೆ. ಕಾಕ್ ತಿಳಿಸಿದ್ದಾರೆ.

ನಿನ್ನೆ ರಾತ್ರಿ ಅವರ ರಕ್ತದೊತ್ತಡದಲ್ಲಿ ತೀವ್ರ ಏರಿಳಿತ ಉಂಟಾಯಿತು. ನಡುಕ (ಕನ್‌ವಲ್ಷನ್)ದ ಸ್ಥಿತಿ ತಲೆದೋರಿತು, ಆದರೆ ಔಷಧೋಪಚಾರದಿಂದ ಒತ್ತಡವನ್ನು ನಿಯಂತ್ರಣಕ್ಕೆ ತರಲಾಯಿತು ಎಂದು ಅವರು ಹೇಳಿದ್ದಾರೆ.

ಗ್ಯಾನಿ ಅವರಿಗೆ ಬಂದಿರುವ ಜ್ವರ, ಕಾಮಾಲೆ ಸ್ಥಿತಿ ಹಾಗೇ ಇದ್ದು ಕೃತಕ ಉಸಿರಾಟ ಮುಂದುವರಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಪಂಡರೀಬಾಯಿಗೆ ಅಪಘಾತದಲ್ಲಿ ಗಾಯ

ಬೆಂಗಳೂರು, ಡಿ. 11– ಕನ್ನಡ ಚಿತ್ರರಂಗದ ಖ್ಯಾತ ನಟಿ ಪಂಡರೀಬಾಯಿ ಅವರು ಇಂದು ತಮಿಳು ನಾಡಿನ ವೆಲ್ಲೂರಿನಲ್ಲಿ ಅಪಘಾತಕ್ಕೆ ತುತ್ತಾಗಿ ಅಲ್ಲಿನ ಆಸ್ಪತ್ರೆಯೊಂದಕ್ಕೆ ದಾಖಲಾಗಿರುವುದಾಗಿ ಇಲ್ಲಿಗೆ ಬಂದಿರುವ ವರದಿಗಳು ತಿಳಿಸಿವೆ.

ಮದರಾಸಿನಿಂದ ಬೆಂಗಳೂರಿಗೆ ಹಿಂತಿರುಗುತ್ತಿರುವಾಗ ನಡುವೆ ಇಂದು ಮುಂಜಾನೆ 3 ಗಂಟೆಗೆ ವೆಲ್ಲೂರಿನಲ್ಲಿ ಉಪಹಾರಕ್ಕೆಂದು ಇಳಿದ ಪಂಡರೀಬಾಯಿ ರಸ್ತೆ ದಾಟುತ್ತಿದ್ದಾಗ ಅವರನ್ನು ವಾಹನವೊಂದು ಉಜ್ಜಿಕೊಂಡು ಹೋದ ಕಾರಣ ಅವರು ತೀವ್ರವಾಗಿ ಗಾಯಗೊಂಡಿದ್ದಾರೆಂದು ತಿಳಿದು ಬಂದಿದೆ.

 

 

ಪ್ರತಿಕ್ರಿಯಿಸಿ (+)