ಶನಿವಾರ, ಆಗಸ್ಟ್ 20, 2022
21 °C

PV Web Exclusive| ಒಂದು ಟೀ ಪ್ರಸಂಗ!

ಜಯಸಿಂಹ ಆರ್. Updated:

ಅಕ್ಷರ ಗಾತ್ರ : | |

Prajavani

ತೃತೀಯ ಲಿಂಗಿಗಳ ಜತೆಗೆ ನನ್ನ ಮುಖಾಮುಖಿ ಅಷ್ಟಕ್ಕಷ್ಟೆ. ಕಾಲೇಜು ದಿನಗಳಲ್ಲಿ ಒಂದು ಅಧ್ಯಯನ ವರದಿ ಬರೆಯುವ ಉದ್ದೇಶದಿಂದ ಒಂದಿಬ್ಬರ ಸಣ್ಣ ಸಂದರ್ಶನ ಬರೆದಿದ್ದೆ. ಆನಂತರದ 10-12 ವರ್ಷಗಳಲ್ಲಿ ರಸ್ತೆಗಳಲ್ಲಿ ಆಗೊಮ್ಮೆ-ಈಗೊಮ್ಮೆ ನೋಡುವುದು ಅಷ್ಟೇ ನಡೆದಿತ್ತು.

ಈಚೆಗೆ ಮತ್ತೊಮ್ಮೆ ಅವರ ಬಗ್ಗೆ ಒಂದು ಸ್ಟೋರಿ ಮಾಡಬೇಕು ಎಂದು ಕಾಡುತ್ತಿತ್ತು. ಕೋವಿಡ್‌ ಸಂದರ್ಭದಲ್ಲಿ ಬಹುತೇಕ ಎಲ್ಲರ ಬದುಕೂ ಬದಲಾಗಿತ್ತು. ತೃತೀಯ ಲಿಂಗಿಗಳ ಬದುಕೂ ಬದಲಾಗಿರುವುದರಲ್ಲಿ ಅನುಮಾನವೇ ಇರಲಿಲ್ಲ. ಹೀಗಾಗಿ ಅವರನ್ನೊಮ್ಮೆ ಮಾತನಾಡಿಸಿ ವಿಶೇಷ ವರದಿ ಬರೆಯುವುದೆಂದು ಹೊರಟೆ. ವಿದ್ಯಾರ್ಥಿ ಗೆಳೆಯನೊಬ್ಬನ ಬಳಿ ಮಾತನಾಡುವಾಗ, ಆತನೂ ಈ ಬಗ್ಗೆ ಸಣ್ಣ ಅಧ್ಯಯನ ವರದಿ ಸಿದ್ಧಪಡಿಸಬೇಕು ಎಂದು ಹೇಳಿದ. ಇಬ್ಬರೂ ಒಟ್ಟಿಗೇ ಈ ಕೆಲಸ ಮಾಡೋಣ ಎಂದು ನಿರ್ಧರಿಸಿದವು.

ವರದಿಗಾರಿಕೆ ಬಿಟ್ಟು ಆರು ವರ್ಷ ಕಳೆದಿತ್ತು. ಡೆಸ್ಕ್‌ನಲ್ಲೇ ಉಳಿದಿದ್ದರಿಂದ ಹೊರಜಗತ್ತಿನ ಜೆತೆಗೆ ವೈಯಕ್ತಿಕ ಕಾಂಟಾಕ್ಟ್ ಅಷ್ಟಕ್ಕಷ್ಟೆ. ಹೀಗಾಗಿ ಅಲ್ಲಿ ಇಲ್ಲಿ ಹುಡುಕಿ, ತಮ್ಮ ಬಗ್ಗೆ ಮಾತನಾಡಬಹುದಾದ ತೃತೀಯ ಲಿಂಗಿಗಳ ಫೋನ್‌ ನಂಬರ್ ಪಡೆದುಕೊಳ್ಳುವುದರಲ್ಲಿ ಸಾಕುಬೇಕಾಯಿತು. ಕೊನೆಗೂ ಒಬ್ಬರ ನಂಬರ್ ದೊರೆಯಿತು. ತೃತೀಯ ಲಿಂಗಿಗಳು ಮತ್ತು ಎಲ್‌ಜಿಬಿಟಿ ಸಮುದಾಯದ ಹಕ್ಕುಗಳ ರಕ್ಷಣೆಗೆ ಹೋರಾಟ ನಡೆಸುವ ಸಂಘಟನೆಯೊಂದರ ಮುಂದಾಳುವಿನ ಫೋನ್ ನಂಬರ್ ಅದು. ಅವರೊಂದಿಗೆ ಮಾತನಾಡಿದ ಮೇಲೆ, ಇಬ್ಬರಿಗೂ ಹಳೆಯ ಪರಿಚಯ ನೆನಪಾಯಿತು.

'ನಾನೊಬ್ಬಳೇ ಮಾತನಾಡಿದರೆ ವಿವರಗಳು ಒಮ್ಮುಖವಾಗಬಹುದು. ನಾಲ್ಕೈದು ಜನರ ಜತೆ ಮಾತನಾಡಿದರೆ ವಸ್ತುಸ್ಥಿತಿ ಅರ್ಥವಾಗುತ್ತದೆ' ಎಂದರು. ನಾವೂ ಅದಕ್ಕೆ ಒಪ್ಪಿದೆವು. ದಿನ ಮತ್ತು ಸಮಯ ನಿಗದಿಯಾಯಿತು. ಬೆಂಗಳೂರಿನ ಜೆ.ಸಿ.ನಗರದ ಗಲ್ಲಿಯೊಂದರಲ್ಲಿ ಆ ಸಂಘಟನೆಯ ಕಚೇರಿ, ವಸತಿಗೃಹ ಎಲ್ಲವೂ ಇತ್ತು. ಮಳೆ ಇದ್ದ ಕಾರಣ ಕ್ಯಾಬ್ ಮಾಡಿಕೊಂಡು ಹೊರಟೆವು.

ಆ ವ್ಯಕ್ತಿ ಕಳುಹಿಸಿದ್ದ ಲೊಕೇಷನ್‌ಗೆ ಬಂದೆವು. ಆದರೆ ಆ ಸಂಘಟನೆಯ ಯಾವ ಬೋರ್ಡೂ ಸಹ ಅಲ್ಲಿ ಇರಲಿಲ್ಲ. ಆದರೆ ಆ ವ್ಯಕ್ತಿ ಹೇಳಿದ್ದ ಕಟ್ಟಡದ ಮುಂಭಾಗದ ಮೆಟ್ಟಿಲುಗಳ ಮೇಲೆ ನಾಲ್ಕಾರು ಯುವತಿಯರು ಮತ್ತು ಮಹಿಳೆಯರು ಕುಳಿತಿದ್ದರು. ನಾವಿಬ್ಬರೂ ಅವರ ಬಳಿ ಹೋಗಿ ಆ ಸಂಘಟನೆಯ ಹೆಸರು ಕೇಳಿದೆವು. ಅವರೆಲ್ಲಾ ಒಕ್ಕೊರಲಿನಿಂದ, 'ಇದೇ ಆಫೀಸ್. ವೇಯ್ಟ್ ಮಾಡಿ, ಬರ್ತಾರೆ' ಅಂದರು.

ಒಂದೆರಡು ತಾಸು ಅಲ್ಲೇ ಕಾದೆವು. ಅಷ್ಟರಲ್ಲಿ ನಾವು ಭೇಟಿ ಮಾಡಿದ್ದ ವ್ಯಕ್ತಿ ಬಂದರು. ಅಲ್ಲೇ ಕುಳಿತಿದ್ದವರೊಂದಿಗೆ, 'ನಮ್ಮನ್ನೇ ಮಾತಾಡ್ಸಕ್ಕೆ ಬಂದಿದಾರೆ. ಮೀಡಿಯಾದವರು' ಎಂದು ಹೇಳಿದರು. ಅಲ್ಲಿ ಕುಳಿತಿದ್ದವರೆಲ್ಲರೂ ನಮ್ಮಂತೆಯೇ ಇದ್ದರು. ಅವರು ತೃತೀಯ ಲಿಂಗಿಗಳು ಎಂಬ ಸಣ್ಣ ಅನುಮಾನವೂ ನಮಗೆ ಬಂದಿರಲಿಲ್ಲ.

ಇಷ್ಟು ಯೋಚನೆ ಮಾಡುವಷ್ಟರಲ್ಲಿ ಆ ವ್ಯಕ್ತಿ, ಬನ್ನಿ ಬನ್ನಿ ಎನ್ನುತ್ತಾ ಮೆಟ್ಟಿಲು ಏರತೊಡಗಿದರು. ನಾವೂ ಹಿಂಬಾಲಿಸಿದೆವು. ಒಂದೊಂದು ಮಹಡಿ ಹತ್ತಿದಾಗಲೂ ಎದುರಾಗುತ್ತಿದ್ದ ಕೊಠಡಿಗಳು, ಹತ್ತಾರು ನಿಗೂಢ ತುಂಬಿಕೊಂಡ ಖಜಾನೆಯಂತೆ ಭಾಸವಾಗುತ್ತಿತ್ತು. ಅಗತ್ಯವಿದ್ದಷ್ಟು ಬೆಳಕಿಲ್ಲದಿದ್ದರಿಂದ, ಮೆಟ್ಟಿಲೇರುವಾಗ ಯಾವುದೋ ಲೋಕಕ್ಕೆ ಏರಿ ಹೋಗುತ್ತಿದ್ದೇವೊ ಎನಿಸುತ್ತಿತ್ತು. ಅಂತೂ ಮೂರನೆ ಮಹಡಿ ತಲುಪಿದೆವು.

ಮೂರನೇ ಮಹಡಿಯಲ್ಲಿ ಅವರ ಕಚೇರಿ. ಅಸ್ತವ್ಯಸ್ತವಾಗಿದ್ದ ಟೇಬಲು, ಖುರ್ಚಿಗಳಲ್ಲೇ ನಮ್ಮ ಮಾತುಕತೆಗೆ ಸಿದ್ಧತೆ ನಡೆಯಿತು. ಅಲ್ಲಿದ್ದವರೊಂದಿಗೆ ನಮ್ಮ ಪರಿಚಯ ನಡೆಯಿತು. ಲಕ್ಷ್ಮಿ, ಮಂಗಳ, ಜಾಜಿ... ಕೊನೆಗೆ ನಾವು ಭೇಟಿ ಮಾಡಬೇಕಿದ್ದವರ ಹೆಸರು ಅಕ್ಕ.

ನಾವು ಸಿದ್ಧಪಡಿಸಿಕೊಂಡು ಬಂದಿದ್ದ ಪ್ರಶ್ನೆಗಳನ್ನು ಕೇಳತೊಡಗಿದೆವು. ಅವರೂ ಸಾವಧಾನವಾಗಿ ಉತ್ತರಿಸಿದರು. ವಸ್ತುನಿಷ್ಠವಾಗಿ ಇರಬೇಕು ಎಂದು ಎಷ್ಟೇ ಪ್ರಜ್ಞಾಪೂರ್ವಕವಾಗಿ ಇದ್ದರೂ, ಅವರ ಬಗ್ಗೆ ನಮಗೆ ಇದ್ದ ಪೂರ್ವಗ್ರಹಗಳು ಮತ್ತು ಆ ಕಟ್ಟಡದಲ್ಲಿ ಇದ್ದ ವಾತಾವರಣ ನಮ್ಮಲ್ಲಿ ಸಣ್ಣ ಇರುಸುಮುರುಸು ಉಂಟುಮಾಡುತ್ತಿತ್ತು. ನಮ್ಮ ನಡುವಿನ ಸಂಭಾಷಣೆ ತೀರಾ ಯಾಂತ್ರಿಕವಾಗಿತ್ತು. ಅದರ ಅನುಭವ ನಮಗೂ ಆಗುತ್ತಿತ್ತು. ಅವರಿಗೂ ಆಗುತ್ತಿತ್ತು. ನಮ್ಮಂತ ವರದಿಗಾರರ ಜತೆ ಮಾತನಾಡಿ ಅವರಿಗೆ ಅನುಭವವಿರಬೇಕು. 'ಸಂಕೋಚ ಪಡಬೇಡಿ' ಎಂದು ಹೇಳಿ ತಮ್ಮ ಕಥೆಗಳನ್ನು ಹೇಳಿದರು. ಅಲ್ಲಿದ್ದವರೆಲ್ಲಾ ತಮ್ಮ ಕಥೆಗಳನ್ನು ಹೇಳಿಕೊಂಡರು. ಲಾಕ್‌ಡೌನ್‌ ಸಂದರ್ಭದಲ್ಲಿ ಎದುರಿಸಿದ ಸಮಸ್ಯೆಗಳನ್ನು ಬಿಚ್ಚಿಟ್ಟರು. ಈಗ ಸ್ಥಿತಿ ಸ್ವಲ್ಪ ಸುಧಾರಿಸಿದೆ ಎಂದು ನಿಟ್ಟುಸಿರು ಬಿಟ್ಟರು.

ನಂತರ ಮಾತುಕತೆ ಅವರ ಹಕ್ಕುಗಳ ಕಡೆಗೆ ಸಾಗಿತು. ಈಗ ಅವರೇ ಪ್ರಶ್ನೆಗಳನ್ನು ನಮ್ಮ ಮುಂದೆ ಇರಿಸಿದರು.

'ನಮ್ಮಿಷ್ಟದಂತೆ ನಾವು ಬದುಕಬಾರದೇ...?'

'ನಮಗ್ಯಾರೂ ಮನೆ ಬಾಡಿಗೆಗೆ ಕೊಡಲ್ಲ...?

'ವೋಟರ್ ಐಡಿ ಇಲ್ಲ. ರೇಷನ್ ಕಾರ್ಡ್ ಇಲ್ಲ. ನಮ್ಮ ಮನೆಯವರೂ ನಮ್ಮನ್ನು ಮನೆಗೆ ಸೇರಿಸುವುದಿಲ್ಲ. ಏನು ಮಾಡೋದು...?'

ಪ್ರಶ್ನೆಗಳನ್ನಷ್ಟೇ ಸಿದ್ಧಪಡಿಸಿಕೊಂಡು ಬಂದಿದ್ದ ನಮಗೆ ಉತ್ತರ ಗೊತ್ತಿರಲಿಲ್ಲ. ನಾವು ಉತ್ತರ ಹೇಳಬೇಕಾಗುವ ಸಂದರ್ಭ ಎದುರಾಗಬಹುದು ಎಂಬ ಊಹೆಯೂ ನಮಗೆ ಇರಲಿಲ್ಲ. ಆದರೆ ಅವರ ಸ್ಥಿತಿಯನ್ನು ಹೊರಜಗತ್ತಿನ ಎದುರು ಇಡುವುದಷ್ಟೇ ನಮ್ಮ ಕರ್ತವ್ಯ ಎಂದು ಸಮಾಧಾನಮಾಡಿಕೊಂಡೆವು.

ಅಷ್ಟರಲ್ಲೇ ನಾವು ಕೆಳಗೆ ನೋಡಿದ್ದ ವ್ಯಕ್ತಿ ಒಳ ಬಂದು, 'ಅಕ್ಕ ಟೀ ರೆಡಿ ಇದೆ ತರ್ಲಾ...' ಎಂದರು.

ಅಕ್ಕ ನಮ್ಮತ್ತ ನೋಡಿ, 'ಟೀ ಕುಡಿತೀರಾ?' ಎಂದು ಕೇಳಿದರು.

ಆವರೆಗೆ ಎಂದಿಗೂ ನಾನು ಟೀ ಕುಡಿದಿರಲಿಲ್ಲ. ನಾನು ಇದ್ದದ್ದನ್ನು ಹೇಳಿದೆ.

'ನಾನೂ ಟೀ ಮುಟ್ಟೇ ಇಲ್ಲ' ಎಂದ ನನ್ನ ಗೆಳೆಯ.

ಇಬ್ಬರೂ ಒಮ್ಮತದಲ್ಲಿ ಟೀ ಬೇಡ ಎಂದೆವು.

ಅಕ್ಕ ಅವರ ಮುಖ ಪೆಚ್ಚಾಯಿತು. 'ನಾವು ಮಾಡಿದ ಟೀ ಕುಡಿಬಾರದು ಅಂತಾನ' ಎಂದು ಪ್ರಶ್ನಿಸಿದರು.

ಯಾರಿಗೂ ಇರುಸುಮುರುಸು ಆಗಬಾರದು ಎಂದು ಇಬ್ಬರೂ ಟೀ ಕುಡಿದೆವು. ಅಕ್ಕ ಸಹ ಕುಡಿದರು. ನಾವು ಬಂದಿದ್ದ ಕೆಲಸ ಮುಗಿದಿತ್ತು. ಬರುತ್ತೇವೆ ಎಂದು ಹೇಳಿ ಹೊರಟೆವು. ಮೆಟ್ಟಿಲು ಇಳಿಯುವಾಗ 1ನೇ ಮಹಡಿಯ ಕೊಠಡಿ ಬಾಗಿಲೊಂದು ತೆರೆದಿತ್ತು. ನಮಗೆ ಟೀ ತಂದುಕೊಟ್ಟ ಹುಡುಗಿ, ಸಿಗರೇಟು ಸೇದುತ್ತಾ ನಿಂತಿದ್ದಳು. ಆಕೆ ಸಾಮಾನ್ಯ ಸ್ಥಿತಿಯಲ್ಲಿ ಇದ್ದಂತೆ ನಮಗೆ ಅನಿಸಲಿಲ್ಲ. ನಾವು ಆಕೆಯನ್ನು ನೋಡುತ್ತಿರುವ ಅರಿವೂ ಆ ಹುಡುಗಿಗೆ ಇದ್ದಂತಿರಲಿಲ್ಲ. ಇಬ್ಬರೂ ಸುಮ್ಮನೆ ಮೆಟ್ಟಿಲಿಳಿದು ಹೊರಬಂದೆವು.

ಮುಂದಿನ 10 ನಿಮಿಷದಲ್ಲಿ ಕ್ಯಾಬ್ ಬಂತು. ಅಲ್ಲಿಂದ ನಮ್ಮ ಮನೆಗಳಿಗೆ ಸುಮಾರು 20 ಕಿ.ಮೀ. ಅಂತರ. ಕ್ಯಾಬ್ ಹೋಗುತ್ತಿದ್ದ ರಸ್ತೆಯಲ್ಲಿ ಹಳ್ಳಕೊಳ್ಳಗಳು ಹೆಚ್ಚು ಇದ್ದವು. ಕ್ಯಾಬ್ ಓಲಾಡುತ್ತಿತ್ತು. ಅಷ್ಟರಮಧ್ಯೆ ಗೆಳೆಯ, 'ಯಾಕೋ ತಲೆ ಸುತ್ತು ಬರ್ತಿದೆ ಕಣೋ. ಟೀಯಲ್ಲಿ ಏನೋ ಹಾಕ್ಕೊಟ್ಟಿದಾರೆ ಅನ್ಸುತ್ತೆ. ವಾಂತಿ ಬೇರೆ ಬರಂಗಾಗ್ತಿದೆ' ಎಂದು ಹೇಳಿ ಗಾಬರಿ ಬೀಳಿಸಿದ.

ಅದೇ ಟೀ ಕುಡಿದಿದ್ದ ನನಗೆ ಮಾತ್ರ ಏನೂ ಆಗುತ್ತಿರಲಿಲ್ಲ. ಆದರೆ, ಗೆಳೆಯನ ಮಾತಿನ ನಂತರ ನನಗೂ ವಾಕರಿಕೆ ಬಂದಹಾಗೆ ಅಯಿತು. ನನ್ನದ್ಯಾವುದೋ ಲೇಖನಕ್ಕೆ ಮಾಹಿತಿ ಪಡೆಯಲು ಈ ಆಸಾಮಿಯನ್ನು ಎಳೆದುಕೊಂಡು ಹೋಗಿದ್ದೆ. ಈಗ ಹೀಗಾಯ್ತಲ್ಲಾ ಎಂದು ಗಾಬರಿ ಬಿದ್ದೆ. ಅವರು ಟೀಯಲ್ಲಿ ಏನಾದರೂ ಬೆರೆಸಿಕೊಟ್ಟಿದ್ದಾರೆಯೇ ಎಂಬ ಅನುಮಾನುವೂ ಕಾಡಲು ಆರಂಭವಾಯಿತು.

ನಮ್ಮ ಮಾತುಗಳನ್ನೆಲ್ಲಾ ಕೇಳಿಸಿಕೊಂಡಿದ್ದ ಕ್ಯಾಬ್ ಚಾಲಕ, 'ಟೀ ಅಭ್ಯಾಸ ಇಲ್ವಾ?' ಎಂದು ಕೇಳಿದರು.

'ಇದೇ ಫರ್ಸ್ಟ್ ಟೈಂ ಕುಡಿದದ್ದು'

'ಟೀ ಪಿತ್ತ ಜಾಸ್ತಿ ಸರ್. ಫರ್ಸ್ಟ್ ಟೈಂ ಕುಡ್ದಾಗ ಕೆಲ್ವರ್ಗೆ ಹಿಂಗಾಗುತ್ತೆ. ನೀವ್ ಇಳಿಯೋದು ಇನ್ನೂ ದೂರ ಅಲ್ವಾ. ಹಾಗೆ ನಿದ್ದೆ ಮಾಡಿ, ಸರಿ ಹೋಗುತ್ತೆ' ಎಂದರು.

ನಮ್ಮ ಮನೆ ಬಂದಾಗ ಇಬ್ಬರೂ ಆರಾಮಾಗಿದ್ದೆವು. ಅವ ಅವನ ಮನೆಯತ್ತ, ನಾನು ನನ್ನ ಮನೆಯತ್ತ ಹೆಜ್ಜೆ ಹಾಕಿದೆವು. ಆದರೆ ಅವರ ಬಗ್ಗೆ ಸುಖಾಸುಮ್ಮನೆ ಅನುಮಾನ ಪಟ್ಟೆವಲ್ಲಾ ಎಂಬ ವಿಷಾದ ಈಗಲೂ ಕಾಡುತ್ತಿದೆ.

ಸೂಚನೆ: ಹೆಸರುಗಳನ್ನು ಬದಲಿಸಲಾಗಿದೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.