ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಕೃಷಿ: ಮಾರುಕಟ್ಟೆ ಕಡೆ ಗಮನ

ಕೃಷಿ ಉತ್ಪನ್ನಗಳಿಗೆ ಸ್ಪರ್ಧಾತ್ಮಕ ಬೆಲೆ ದೊರಕಿಸಿಕೊಡುವ ಪ್ರಯತ್ನ...
ಅಕ್ಷರ ಗಾತ್ರ

ಕೇಂದ್ರ ಸರ್ಕಾರವು ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಮೂರು ಕಾಯ್ದೆಗಳನ್ನು ಈಚೆಗೆ ಜಾರಿಗೆ ತಂದಿದೆ. ರೈತರು ತಮ್ಮ ಉತ್ಪನ್ನಗಳನ್ನು ಖಾಸಗಿ ವ್ಯಕ್ತಿಗಳಿಗೆ ಸರ್ಕಾರದ ನೀತಿ–ನಿಯಮಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ, ಅಧಿಕಾರಶಾಹಿಯ ಬಗ್ಗೆ ಚಿಂತಿಸದೆ ಮಾರಾಟ ಮಾಡಲು ಈ ಕಾಯ್ದೆಗಳು ಅವಕಾಶ ಮಾಡಿಕೊಡುತ್ತವೆ. ಗುತ್ತಿಗೆ ಕೃಷಿಯಿಂದ ಲಾಭ ಮಾಡಿಕೊಳ್ಳಲು, ಸ್ಪರ್ಧಾತ್ಮಕ ಬೆಲೆ ಬರುವವರೆಗೆ ಕೃಷಿ ಉತ್ಪನ್ನಗಳನ್ನು ಸಂಗ್ರಹಿಸಿ ಇಟ್ಟುಕೊಂಡು ನಂತರ ಮಾರುವ ಅವಕಾಶವನ್ನೂ ಕಲ್ಪಿಸುತ್ತವೆ. ಇದುವರೆಗೆ, ರೈತ ತನ್ನ ಬೆಳೆಯನ್ನು ಕೃಷಿ ಉತ್ಪನ್ನಗಳ ಮಾರುಕಟ್ಟೆ ಸಮಿತಿಯ (ಎಪಿಎಂಸಿ) ವ್ಯಾಪ್ತಿಯ ಹೊರಗೆ ಮಾರಲು ಯತ್ನಿಸಿದರೆ ಅಥವಾ ಕೃಷಿ ಉತ್ಪನ್ನಗಳನ್ನು ಅಗತ್ಯ ವಸ್ತುಗಳ ಕಾಯ್ದೆಯಡಿ ನಿಗದಿಪಡಿಸಿರುವ ಮಿತಿಗಿಂತ ಹೆಚ್ಚು ಶೇಖರಣೆ ಮಾಡಿದ್ದರೆ, ಕಾನೂನು ಉಲ್ಲಂಘಿಸಿದಂತೆ ಆಗುತ್ತಿತ್ತು. ಹೊಸ ಕಾನೂನುಗಳು ಈ ದೋಷಪೂರಿತ ನೀತಿಯನ್ನು ಬದಲಿಸಿ, ರೈತನಿಗೆ ತನ್ನ ಬೆಳೆಯನ್ನು ಎಪಿಎಂಸಿ ವ್ಯಾಪ್ತಿಯ ಹೊರಗಡೆಯೂ ಮಾರಾಟ ಮಾಡಲು ಅವಕಾಶ ಕಲ್ಪಿಸಿ, ಕೃಷಿ ವಲಯವನ್ನು ನಿಯಂತ್ರಣಮುಕ್ತಗೊಳಿಸುತ್ತವೆ.

ಕೃಷಿ ನೀತಿಗಳು ಮೊದಲೆಲ್ಲ ಬೆಳೆ ಬೆಳೆಯುವ ಕ್ರಮಗಳ ಬಗ್ಗೆ ಹೆಚ್ಚು ಗಮನ ನೀಡುತ್ತಿದ್ದವು. ಬೆಳೆಗೆ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಬೆಲೆ ಪಡೆಯುವುದು ಹೇಗೆ ಎಂಬುದನ್ನು ಮರೆಯುತ್ತಿದ್ದವು. ರಾಜ್ಯಗಳ ಕೃಷಿ ಅಥವಾ ತೋಟಗಾರಿಕಾ ಇಲಾಖೆಗಳು, ಕೇಂದ್ರದ ಕೃಷಿ ಸಚಿವಾಲಯವು ರೈತರಿಗೆ ಮಾರುಕಟ್ಟೆಯ ಬಗ್ಗೆ ಗಮನ ನೀಡುವಂತೆ ತರಬೇತಿ ನೀಡಲಿಲ್ಲ. ಇದರಿಂದಾಗಿ ಆತ ಬಡವನಾದ. ಇಲ್ಲಿ ರೈತರು ನಷ್ಟ ಅನುಭವಿಸಿದರೆ, ವ್ಯಾಪಾರಿಗಳು ಮಾತ್ರ ಲಾಭ ಮಾಡಿಕೊಂಡರು.

ದೇಶದ ಎಲ್ಲ ಜಿಲ್ಲೆಗಳಲ್ಲೂ ಇರುವ, ರೈತರಿಗೆ ಸಲಹೆ ನೀಡುವ ಕೃಷಿ ವಿಜ್ಞಾನ ಕೇಂದ್ರಗಳ ಸ್ಥಿತಿ ನೋಡೋಣ– ಪ್ರತೀ ಕೇಂದ್ರದಲ್ಲೂ ಮಣ್ಣಿನ ವಿಜ್ಞಾನಿ, ಕೀಟ ವಿಜ್ಞಾನಿ, ಸಸ್ಯ ವಿಜ್ಞಾನಿ ಇರುತ್ತಾರೆ. ಆದರೆ, ಕೃಷಿ ಉತ್ಪನ್ನಗಳ ಮಾರುಕಟ್ಟೆಗೆ ಸಂಬಂಧಿಸಿ ಯಾವ ಸಂಪನ್ಮೂಲವೂ ಆ ಕೇಂದ್ರಗಳಲ್ಲಿ ಇರುವುದಿಲ್ಲ. ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಕೃಷಿ, ತೋಟಗಾರಿಕೆಯ ಉತ್ಪಾದನಾ ತಂತ್ರಜ್ಞಾನದ ವಿಸ್ತರಣೆಗೆ, ಸಬ್ಸಿಡಿ ವಿತರಣೆಗೆ ಅನುದಾನ ಇರುತ್ತದೆ; ಆದರೆ, ಕೃಷಿ ಉತ್ಪನ್ನಗಳ ಮಾರಾಟಕ್ಕೆ ಇರುವುದಿಲ್ಲ.

ಈಗ ಕೇಂದ್ರವು ಹೊಸ ಕಾನೂನು ಜಾರಿಗೆ ತಂದಿರುವ ಕಾರಣ ರಾಜ್ಯ ಸರ್ಕಾರಗಳು ತಮ್ಮ ಎಪಿಎಂಸಿ ಕಾನೂನು ಚೌಕಟ್ಟನ್ನು ಬದಲಿಸಬೇಕಿದೆ, ಮಾರುಕಟ್ಟೆ ಶುಲ್ಕ ಅಥವಾ ಸೆಸ್ ಸಂಗ್ರಹಿಸುವ ಪದ್ಧತಿ ಕೈಬಿಡಬೇಕಿದೆ, ಕೆಲವು ದಾಖಲಾತಿ ಪ್ರಕ್ರಿಯೆಗಳನ್ನು ನಿಲ್ಲಿಸಬೇಕಿದೆ. ಮೊದಲಿದ್ದ ಕಾನೂನು, ಕಮಿಷನ್ ಮೊತ್ತವನ್ನು ಖರೀದಿದಾರರಿಂದ ಸಂಗ್ರಹಿಸಬಹುದೇ ವಿನಾ ಮಾರಾಟಗಾರರಿಂದ ಪಡೆಯುವಂತಿಲ್ಲ ಎಂದು ಹೇಳಿತ್ತು. ಆದರೆ ಇದನ್ನು ದೇಶದೆಲ್ಲೆಡೆ ಉಲ್ಲಂಘಿಸಲಾಗುತ್ತಿತ್ತು. ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ ಉತ್ಪನ್ನದ ಮೌಲ್ಯದ ಶೇಕಡ 2.5ರಷ್ಟನ್ನು ಕಮಿಷನ್ ರೂಪದಲ್ಲಿ ರೈತರಿಂದ/ ಮಾರಾಟಗಾರರಿಂದ ಸಂಗ್ರಹಿಸಲು ಅವಕಾಶವಿದೆ. ಇದು ರೈತರ ಹಿತಾಸಕ್ತಿಗಳಿಗೆ ವಿರುದ್ಧ, ವರ್ತಕರಿಗೆ ಮಾತ್ರ ಪೂರಕ. ಇದು ಈಗಿನ ಕಾನೂನಿನಿಂದ ಬಗೆಹರಿದಿದೆ.

ಎಪಿಎಂಸಿ ವ್ಯಾಪ್ತಿಯ ಹೊರಗಡೆ ಆಗುವ ಆಫ್‌ಲೈನ್‌ ವಹಿವಾಟುಗಳು ಎಲ್ಲಿಯೂ ದಾಖಲಾಗುವುದಿಲ್ಲ. ಖರೀದಿ, ಮಾರಾಟದ ದಾಖಲೆಗಳನ್ನು ಸಂವಹನ ವೇದಿಕೆಗಳ ಜೊತೆ ಜೋಡಿಸಬೇಕು. ಕೃಷಿ ಉತ್ಪನ್ನಗಳ ಮಾರಾಟಕ್ಕೆ ಇರುವ ಆನ್‌ಲೈನ್‌ ವೇದಿಕೆ ಇ–ನ್ಯಾಮ್‌ (ರಾಷ್ಟ್ರೀಯ ಕೃಷಿ ಮಾರುಕಟ್ಟೆ). ಇದು ರೈತರಿಗೆ, ವರ್ತಕರಿಗೆ ಮತ್ತು ಖರೀದಿದಾರರಿಗೆ ಆನ್‌ಲೈನ್‌ ಮೂಲಕ ವಹಿವಾಟು ನಡೆಸಲು ಅವಕಾಶ ಕಲ್ಪಿಸುತ್ತದೆ. ಬೆಳೆಗಳಿಗೆ ಒಳ್ಳೆಯ ಬೆಲೆ ಕಂಡುಕೊಳ್ಳಲು, ಕೃಷಿ ಉತ್ಪನ್ನಗಳ ಸರಾಗ ಮಾರಾಟಕ್ಕೆ ಇದು ಸಹಾಯ ಮಾಡುತ್ತದೆ. ಆದರೆ, ಇಂದು ಇ–ನ್ಯಾಮ್‌ ಸೌಲಭ್ಯವು ದೇಶದ ಒಟ್ಟು 7,200 ಎಪಿಎಂಸಿಗಳ ಪೈಕಿ 1,000 ಎಪಿಎಂಸಿಗಳ ಜೊತೆ ಮಾತ್ರ ಜೋಡಣೆಯಾಗಿದೆ.

ರೈತರನ್ನು ಮಾರುಕಟ್ಟೆಯ ಜೊತೆ ಬೆಸೆಯುವ ‘ಆಗ್‌ಮಾರ್ಕ್‌ನೆಟ್‌’ನಲ್ಲಿ ತೋರಿಸುವ ಬೆಲೆಯು ಮುಖ್ಯ ಮಾರುಕಟ್ಟೆಯಲ್ಲಿನ ಬೆಲೆಯನ್ನು ಪ್ರತಿನಿಧಿಸುವುದಿಲ್ಲ. ಇದನ್ನು ವಿವರಿಸಿ ಹೇಳಬೇಕು ಎಂದರೆ: ಕರ್ನಾಟಕದಲ್ಲಿ ಕೆಂಪು ಮೆಣಸಿನಕಾಯಿಯ ಮುಖ್ಯ ಮಾರುಕಟ್ಟೆ ಇರುವುದು ಹಾವೇರಿ ಜಿಲ್ಲೆಯ ಬ್ಯಾಡಗಿ ಎಪಿಎಂಸಿಯಲ್ಲಿ. ಆದರೆ, ಇಲ್ಲಿಬೆಲೆಯನ್ನು ಪ್ರತೀ ಗಂಟೆಗೊಮ್ಮೆ ಆನ್‌ಲೈನ್‌ ಮೂಲಕ ಅಪ್‌ಲೋಡ್‌ ಮಾಡುವ ವ್ಯವಸ್ಥೆ ಇಲ್ಲ. ಇದರಿಂದಾಗಿ ಮಾರುಕಟ್ಟೆಗೆ ಸಂಬಂಧಿಸಿದ ಮಾಹಿತಿಯ ಪ್ರಸರಣ ಆಗುತ್ತಿಲ್ಲ. ಇದು ಒಳ್ಳೆಯ ಬೆಲೆ ಕಂಡುಕೊಳ್ಳುವುದಕ್ಕೆ ಅಡ್ಡಿ.

ಪ್ರಮುಖ ಬೆಳೆಗಳಿಗೆ ಬೆಲೆ ಎಷ್ಟಿದೆ ಎಂಬ ಮಾಹಿತಿಯನ್ನು ಹಂಚಿಕೊಳ್ಳುವ ವೇದಿಕೆ ಇಂದು ರೈತರಲ್ಲಿ ಇಲ್ಲ. ದೇಶದ 7,200 ಎಪಿಎಂಸಿ ಯಾರ್ಡ್‌ಗಳಲ್ಲಿ ಅಥವಾ ಉಪ–ಯಾರ್ಡ್‌ಗಳಲ್ಲಿ ಬೆಲೆ ಎಷ್ಟಿದೆ ಎಂಬುದನ್ನು ತೋರಿಸುವ ಎಲೆಕ್ಟ್ರಾನಿಕ್ ವ್ಯವಸ್ಥೆಯು ದೇಶದಲ್ಲಿ ಇಲ್ಲ. ಕೃಷಿ ಉತ್ಪನ್ನಗಳಿಗೆ ಸಂಬಂಧಿಸಿದ ಶೇಕಡ 80ರಷ್ಟು ವಹಿವಾಟು ಆಫ್‌ಲೈನ್‌ ಮೂಲಕವೇ ನಡೆಯುವ ಕಾರಣ, ಮಾರುಕಟ್ಟೆಗೆ ಸಂಬಂಧಿಸಿದ ಮಾಹಿತಿ ಗುಪ್ತವಾಗಿರು
ವುದು ರೈತರ ಹಣಕಾಸಿನ ಹಿತಾಸಕ್ತಿಗಳಿಗೆ ವಿರುದ್ಧ.

ಗ್ರಾಮೀಣ ಹಾಗೂ ಅರೆಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಅಂದಾಜು 27 ಸಾವಿರದಷ್ಟು ವಾರದ ಸಂತೆಗಳು ಪ್ರಮುಖ ಕೃಷಿ ಮಾರುಕಟ್ಟೆಗಳಿಗೆ ಉತ್ಪನ್ನಗಳನ್ನು ಪೂರೈಸುವ ಕೇಂದ್ರಗಳಂತೆ ಕೆಲಸ ಮಾಡುತ್ತವೆ. ವಾಸ್ತವವಾಗಿ, ಈ ಮಾರುಕಟ್ಟೆಗಳಲ್ಲಿನ ಬೇಡಿಕೆ–ಪೂರೈಕೆ ವ್ಯವಸ್ಥೆಯು ರೈತರ ಸಹಾಯಕ್ಕೆ ಬರಬೇಕಿತ್ತು. ಆದರೆ, ಈ ಮಾರುಕಟ್ಟೆಗಳು ಹರಿದು ಹಂಚಿಹೋಗಿರುವುದರಿಂದ, ಸ್ಪರ್ಧಾತ್ಮಕ ಬೆಲೆ ಸಿಗುವುದಕ್ಕೆ ಪೂರಕವಾಗಿಲ್ಲ. ಕೃಷಿ ಉತ್ಪನ್ನಗಳ ಸಾಗಾಟ ವ್ಯವಸ್ಥೆ, ಶೈತ್ಯಾಗಾರದಂತಹ ಮೂಲಸೌಕರ್ಯ ಸರಿಯಾಗಿ ಇಲ್ಲದಿರುವ ಕಾರಣ ರೈತರು ಬೇಗನೆ ಹಾಳಾಗುವ ತರಕಾರಿಗಳನ್ನು ಅಂದೇ ಮಾರಾಟ ಮಾಡಬೇಕಾದ ಸ್ಥಿತಿ ಇದೆ. ‘ಒಂದು ದೇಶ, ಒಂದು ಮಾರುಕಟ್ಟೆ’ ಪರಿಕಲ್ಪನೆಗೆ ಉತ್ತೇಜನ ನೀಡುವ ಉದ್ದೇಶದಿಂದ, ಕಿಸಾನ್ ರೈಲು ಮೂಲಕ ಕೃಷಿ ಉತ್ಪನ್ನಗಳನ್ನು ದೇಶದ ಯಾವ ಪ್ರದೇಶಕ್ಕೆ ಬೇಕಿದ್ದರೂ ಸಾಗಿಸುವ ವ್ಯವಸ್ಥೆಯನ್ನು ಕಲ್ಪಿಸುವ ಗುರಿಯನ್ನು ಹೊಸ ಕಾನೂನು ಹೊಂದಿದೆ. ಕಿಸಾನ್ ರೈಲು ಜಾಲದ ವಿಸ್ತರಣೆ ಆದಂತೆಲ್ಲ, ಪೂರೈಕೆ ಹೆಚ್ಚಿರುವ ಹಾಗೂ ಕಡಿಮೆ ಇರುವ ಮಾರುಕಟ್ಟೆಗಳು ಬೆಸೆದುಕೊಂಡು ರೈತರಿಗೆ ಸ್ಪರ್ಧಾತ್ಮಕ ಬೆಲೆ ಸಿಗುವಂತಾಗುತ್ತದೆ.

ಪ್ರಾಕೃತಿಕ ವೈಪರೀತ್ಯಗಳು ಹಾಗೂ ಕಾರ್ಮಿಕರ ಕೊರತೆಯ ಕಾರಣದಿಂದಾಗಿ ರೈತರಿಗೆ ಬೆಳೆ ಬೆಳೆಯುವುದು ಸವಾಲಿನದ್ದಾಗುತ್ತಿದೆ. ತಾನು ಬೆಳೆದಿದ್ದನ್ನು ರೈತ, ಸ್ಪರ್ಧಾತ್ಮಕ ಬೆಲೆಗೆ ಮಾರಬೇಕು. ಹೀಗೆ ಮಾಡಬೇಕು ಎಂದಾದರೆ, ಮಾರುಕಟ್ಟೆಯ ಅಗತ್ಯಗಳಿಗೆ ತಕ್ಕಂತೆ ರೈತರು ತಮ್ಮ ಉತ್ಪನ್ನಗಳನ್ನು ಗುಣಮಟ್ಟದ ಆಧಾರದಲ್ಲಿ ವರ್ಗೀಕರಿಸಬೇಕು. ಬೆಳೆಗಳನ್ನು ವರ್ಗೀಕರಿಸುವುದು ಬಹುಮುಖ್ಯ ಕೆಲಸ, ಹಾಗೆ ಮಾಡುವುದರಿಂದ ಮಂಡಿಗಳಲ್ಲಿ ಒಳ್ಳೆಯ ಬೆಲೆ ಸಿಗುತ್ತದೆ ಎಂಬುದನ್ನು ಕೃಷಿ ಅಥವಾ ತೋಟಗಾರಿಕಾ ಇಲಾಖೆಗಳ ಅಧಿಕಾರಿಗಳು ರೈತರಿಗೆ ಹೇಳಬೇಕು. ಇಂದು ಈ ಕೆಲಸವನ್ನು ವರ್ತಕರು ತಮ್ಮ ಲಾಭಕ್ಕಾಗಿ ತಾವೇ ಮಾಡುತ್ತಿದ್ದಾರೆ.

ಹೊಸ ಕಾನೂನುಗಳು ಎಪಿಎಂಸಿ ಮೂಲಸೌಕರ್ಯದ ಬಳಕೆಯನ್ನು ಒಂದು ಹಂತದ ಮಟ್ಟಿಗೆ ಕೈಬಿಡುತ್ತವೆ. ಹಾಗಾಗಿ, ಹೊಸ ಕಾನೂನುಗಳನ್ನು ಒಪ್ಪಿಕೊಂಡು, ಅವುಗಳನ್ನು ಜಾರಿಗೆ ತರುವ ರಾಜ್ಯಗಳು ‘ಕೃಷಿ ಉತ್ಪಾದಕರ ಸಂಘ’ಗಳಿಗೆ, ಖಾಸಗಿಯವರಿಗೆ ಎಪಿಎಂಸಿ ಮೂಲಸೌಕರ್ಯವನ್ನು ಬಳಸಿಕೊಳ್ಳಲು ಬೆಂಬಲ ನೀಡುವ ಬಗ್ಗೆ ಪರಿಗಣಿಸಬಹುದು. ಬಿಹಾರದಲ್ಲಿ ಎಪಿಎಂಸಿ ಕಾಯ್ದೆಯನ್ನು ಹಿಂಪಡೆಯಲಾಯಿತು. ಹಾಗಾಗಿ ಅಲ್ಲಿ ಎಪಿಎಂಸಿ ಮೂಲಸೌಕರ್ಯ ಈಗ ವ್ಯರ್ಥವಾಗುತ್ತಿದೆ. ಹಾಗಾಗಿ, ರಾಜ್ಯ ಸರ್ಕಾರಗಳು ಖಾಸಗಿಯವರ ಜೊತೆಯಾಗಿ ಈಗಿರುವ ಕಾನೂನು ಚೌಕಟ್ಟಿನ ಅಡಿಯಲ್ಲಿ ಎಪಿಎಂಸಿ ಮೂಲಸೌಕರ್ಯವನ್ನು ಬಳಸಿಕೊಳ್ಳಬೇಕು.

ಲೇಖಕರು: ರೆಡ್ಡಿ ಅವರು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕೃಷಿ ಮಾರುಕಟ್ಟೆ ವಿಭಾಗದ ನಿವೃತ್ತ ಪ್ರೊಫೆಸರ್, ಪೂವಯ್ಯ ಅವರು ಗುತ್ತಿಗೆ ರೈತರ ಜೊತೆ ಕೆಲಸ ಮಾಡುವ ಕೃಷಿ ಕಾರ್ಯಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT