ಗುರುವಾರ , ಆಗಸ್ಟ್ 11, 2022
26 °C
ಏಕಬಳಕೆ ಪ್ಲಾಸ್ಟಿಕ್ ನಿಷೇಧವು ಈ ಸರ್ವಾಂತರ್ಯಾಮಿಯ ಅಂತ್ಯಕ್ಕೆ ನಾಂದಿಯಾದೀತೆ?

ಪ್ಲಾಸ್ಟಿಕ್ ನಿಷೇಧ: ತ್ಯಾಜ್ಯರಕ್ಕಸನ ಕುಣಿತಕ್ಕೆ ಕಡಿವಾಣ– ಅಖಿಲೇಶ್ ಚಿಪ್ಪಳಿ ಲೇಖನ

ಅಖಿಲೇಶ್‌ ಚಿಪ್ಪಳಿ Updated:

ಅಕ್ಷರ ಗಾತ್ರ : | |

ತರಕಾರಿ ಕೊಳ್ಳಲು ಮಾರುಕಟ್ಟೆಗೆ ಹೋಗುವುದು, ಖರೀದಿಸಿದ ತರಕಾರಿಯನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಕೊಂಡು ಮನೆಗೆ ಬರುವುದು, ಆ ಚೀಲವನ್ನು ಮನೆಯ ಕಾಂಪೌಂಡಿನಿಂದ ಆಚೆ ಎಸೆಯುವುದು... ಹೀಗೆ, ಮಳೆಗಾಲದಲ್ಲಿ ಚರಂಡಿಯಲ್ಲಿ ಸಿಕ್ಕಿಕೊಂಡ ಪ್ಲಾಸ್ಟಿಕ್ ತ್ಯಾಜ್ಯವು ನೀರಿನ ಸರಾಗ ಹರಿವಿಗೆ ಅಡ್ಡಿಪಡಿಸುತ್ತದೆ. ನೀರು ಮನೆಯೊಳಗೆ ನುಗ್ಗುತ್ತದೆ. ಆಗ ಸರ್ಕಾರಕ್ಕೆ ಹಿಡಿಶಾಪ ಹಾಕಿ ತಮ್ಮ ಸಾಮಾಜಿಕ ಜವಾಬ್ದಾರಿ ಮೆರೆದರಾಯಿತು. ಇದು, ಹಲವಾರು ವರ್ಷಗಳಿಂದ ನಡೆದುಬಂದ ಪರಿಪಾಟ. ಪ್ಲಾಸ್ಟಿಕ್ ಎಂಬ ಸರ್ವಾಂತರ್ಯಾಮಿ ತ್ಯಾಜ್ಯರಕ್ಕಸನ ಭೂತ ಕುಣಿತಕ್ಕೆ ಪ್ರೋತ್ಸಾಹ ನೀಡುವಲ್ಲಿ ಪ್ರತಿಯೊಬ್ಬ ನಾಗರಿಕನ ಪಾಲೂ ಇದೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಿಂದ ಎಂಟು ಕಿ.ಮೀ. ದೂರದಲ್ಲಿ ವರದಾಶ್ರಮ ಎಂಬ ಧಾರ್ಮಿಕ ಕೇಂದ್ರವಿದೆ. ಅಲ್ಲಿಗೆ ಬರುವ ಭಕ್ತಾದಿಗಳಿಗೆ ಹಣ್ಣು– ಕಾಯಿಯಂತಹ ಪದಾರ್ಥಗಳನ್ನು ನೀಡಲು ಪ್ಲಾಸ್ಟಿಕ್ ಚೀಲಗಳನ್ನು ಬಳಸುತ್ತಿದ್ದರು. 2009ರಲ್ಲಿ ಪರಿಸರಾಸಕ್ತ ಸಂಸ್ಥೆಯೊಂದು ಪ್ಲಾಸ್ಟಿಕ್ ಬದಲಿಗೆ ಬಟ್ಟೆ ಚೀಲ ಬಳಸುವಂತೆ ಸಲಹೆ ನೀಡಿತು. ಸುಲಭದ ಪ್ಲಾಸ್ಟಿಕ್ ಚೀಲದ ಬಳಕೆಗೆ ಒಗ್ಗಿಹೋದ ಮನಃಸ್ಥಿತಿಯನ್ನು ಬದಲಿಸುವುದು ಅಷ್ಟು ಸುಲಭವಾಗಿರಲಿಲ್ಲ. ಅಲ್ಲಿನ ಆಡಳಿತ ಮಂಡಳಿ ಮೇಲಿಂದ ಮೇಲೆ ಸಭೆಗಳನ್ನು ನಡೆಸಿತು. ಅಂತೂ 2009ರ ಜೂನ್‌ ತಿಂಗಳಲ್ಲಿ ಪ್ಲಾಸ್ಟಿಕ್ ಚೀಲ ತ್ಯಜಿಸುವ ನಿರ್ಧಾರ ಕೈಗೊಂಡಿತು. ಅಲ್ಲಿ ಪ್ರತಿದಿನ ಸರಾಸರಿ ಇನ್ನೂರು ಪ್ಲಾಸ್ಟಿಕ್ ಚೀಲಗಳು ಬಳಕೆಯಾಗುತ್ತಿದ್ದವು. ಈ ಹನ್ನೆರಡು ವರ್ಷಗಳಲ್ಲಿ ಹತ್ತಿರ ಹತ್ತಿರ 9 ಲಕ್ಷ ಪ್ಲಾಸ್ಟಿಕ್ ಚೀಲಗಳು ಭೂಮಿಗೆ ಸೇರಿ ಮಲಿನವಾಗಿಸುವುದು ತಪ್ಪಿತು. ಶ್ರೀಧರ ಸ್ವಾಮಿಗಳ ಚಿತ್ರವಿರುವ ಬಟ್ಟೆ ಕೈಚೀಲಗಳು ಧಾರ್ಮಿಕ ಶ್ರದ್ಧೆಯ ಕಾರಣಕ್ಕೆ ಮರುಬಳಕೆಯೂ ಆಗುತ್ತವೆ ಹಾಗೂ ಇದೇ ಕಾರಣಕ್ಕೆ, ಎಲ್ಲೆಂದರಲ್ಲಿ ಬಿಸಾಡುವುದು ಸಹ ತಪ್ಪುತ್ತದೆ.

ನಗರ ಪ್ರದೇಶದಲ್ಲಿ ವಾಸಿಸುವ ಜಾನುವಾರುಗಳ ಹೊಟ್ಟೆಯಲ್ಲಿ ತಲಾ 20-30 ಕೆ.ಜಿ. ಪ್ಲಾಸ್ಟಿಕ್ ತ್ಯಾಜ್ಯ ಸಿಕ್ಕಿರುವ ಅನೇಕ ಉದಾಹರಣೆಗಳಿವೆ. ಸತ್ತ ಜಾನುವಾರಿನ ಮರಣೋತ್ತರ ಪರೀಕ್ಷೆಯಲ್ಲಿ ಈ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಆದರೆ, ಕಾಡಾನೆಗಳ ಹೊಟ್ಟೆಯೂ ಪ್ಲಾಸ್ಟಿಕ್ ಚೀಲಗಳ ಗುಡಾಣವಾಗಿದೆ ಎಂಬ ಮತ್ತೂ ಆಘಾತಕಾರಿ ಅಂಶವುಳ್ಳ ವರದಿಯನ್ನು ‘ದಿ ನ್ಯೂಯಾರ್ಕ್ ಟೈಮ್ಸ್’ ಮೇ ತಿಂಗಳಲ್ಲಿ ಪ್ರಕಟಿಸಿದೆ. ಅದರಲ್ಲೂ ಭಾರತದ ಆನೆಗಳು, ಕಾಡಂಚಿಗೆ ತಂದು ಸುರಿಯುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಭಕ್ಷಿಸಿ ನಂತರದಲ್ಲಿ ಅಭಯಾರಣ್ಯದ ಒಳಭಾಗಕ್ಕೆ ತೆರಳುತ್ತವೆ. ಅಭಯಾರಣ್ಯದ ಹತ್ತಾರು ಕಿ.ಮೀ. ಒಳಭಾಗದಲ್ಲಿ ಕಂಡ ಆನೆಗಳ ಲದ್ದಿಯಲ್ಲಿ ಪ್ಲಾಸ್ಟಿಕ್ ಚೀಲಗಳು ಪತ್ತೆಯಾಗಿದ್ದನ್ನು ಸಂಶೋಧಕರು ವರದಿ ಮಾಡಿದ್ದಾರೆ. ಇದು ಆನೆಗಳ ಜೀರ್ಣಾಂಗ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರ ಜೊತೆಗೆ ಪ್ಲಾಸ್ಟಿಕ್‌ನಲ್ಲಿರುವ ರಾಸಾಯನಿಕಗಳು ಅವುಗಳ ವಂಶವಾಹಿಯ ಮೇಲೂ ಗಂಭೀರ ಪರಿಣಾಮಗಳನ್ನು ಬೀರುತ್ತವೆ ಎನ್ನಲಾಗಿದೆ. ಲಾಭಕ್ಕಿಂತ ಹೆಚ್ಚು ನಷ್ಟವನ್ನೇ ಉಂಟು ಮಾಡುವ ಪ್ಲಾಸ್ಟಿಕ್ಕಿಗೆ ಪರ್ಯಾಯ ಹುಡುಕುವ ಕಾರ್ಯ ಇವತ್ತಿನ ತುರ್ತು.

ಪ್ರತಿಯೊಂದನ್ನೂ ಜಿಡಿಪಿಯ ಆಧಾರದ ಮೇಲೆ ಅಳೆಯುವ ನಾವು, ಹೆಚ್ಚು ಹೆಚ್ಚು ಪ್ಲಾಸ್ಟಿಕ್‌ ಬಳಸುವ ಅನಿವಾರ್ಯ ಸ್ಥಿತಿಗೆ ಬಂದಿದ್ದೇವೆ. ಅಮೆರಿಕದ ತಲಾವಾರು ಪ್ಲಾಸ್ಟಿಕ್ ಬಳಕೆ 35 ಕೆ.ಜಿ. ಇದ್ದರೆ, 2019ರ ಅಂಕಿಅಂಶದ ಪ್ರಕಾರ, ಭಾರತದ ತಲಾವಾರು ಪ್ಲಾಸ್ಟಿಕ್ ಬಳಕೆ 11 ಕೆ.ಜಿ ಇತ್ತು. 2022ರ ಅಂತ್ಯದ ವೇಳೆಗೆ ಈ ಪ್ರಮಾಣ 20 ಕೆ.ಜಿ.ಗೆ
ಏರಿಕೆಯಾಗಲಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಅಂದಾಜು ಮಾಡಿತ್ತು. ಅಲ್ಲಿಗೆ ಅಮೆರಿಕ
ದವರಿಗಿಂತ ನಾವು ಕಡಿಮೆ ಪ್ಲಾಸ್ಟಿಕ್ ಬಳಸುತ್ತೇವೆ, ಏಕೆಂದರೆ ನಾವು ಬಡವರು ಎಂಬ ಮಿಥ್ಯಾಲೋಚನೆ ನಮ್ಮ ಮೆದುಳಿನಲ್ಲಿ ಹಾಸುಹೊಕ್ಕಾಗಿದೆ. ಅಪ್ಪಿತಪ್ಪಿಯೂ ನಮಗೆ ಪಕ್ಕದ ಪುಟ್ಟ ದೇಶವಾದ ಭೂತಾನ್ ನೆನಪಿಗೆ ಬರುವುದಿಲ್ಲ. ಅಲ್ಲಿನ ಆದರ್ಶ ಅಥವಾ ಮಾದರಿಯನ್ನು ನಾವು ಅನುಕರಿಸುವುದಿಲ್ಲ.

ಒಂದು ಬಾರಿ ಉಪಯೋಗಿಸುವ ಎಲ್ಲಾ ಪ್ಲಾಸ್ಟಿಕ್ ಉತ್ಪನ್ನಗಳು ಕರ್ನಾಟಕದಲ್ಲಿ 2016ರಲ್ಲೇ ನಿಷೇಧಕ್ಕೆ ಒಳಗಾಗಿದ್ದವು. ಇದರಲ್ಲಿ, ಪ್ಲಾಸ್ಟಿಕ್ ಕೊಟ್ಟೆ, ಗ್ಲಾಸ್, ಪ್ಲೇಟ್, ಚಮಚ, ಸ್ಟ್ರಾ, ಕ್ಯಾಂಡಿ ಕಡ್ಡಿಗಳು ಎಲ್ಲವೂ ಸೇರಿದ್ದವು. ಸದಾಶಯದ ಒಂದು  ಆದೇಶವು ಬಿಗಿಯಾಗಿ ಅನುಷ್ಠಾನಗೊಳ್ಳದ ಕಾರಣ ಆರು ವರ್ಷಗಳಲ್ಲಿ ಮಹಾನಗರಗಳ ಹೊರವಲಯ
ದಲ್ಲಿ ಪ್ಲಾಸ್ಟಿಕ್ ಪರ್ವತಗಳೇ ಸೃಷ್ಟಿಯಾದವು. ಏಕಬಳಕೆ ಪ್ಲಾಸ್ಟಿಕ್‌ ವಿರುದ್ಧ ಈಗ ಕೇಂದ್ರ ಸರ್ಕಾರವು ನಿಷೇಧದ ಅಸ್ತ್ರ ಪ್ರಯೋಗಿಸಿದೆ. ಈ ಆದೇಶವು ಇದೇ ಜುಲೈ 1ರಿಂದ ಜಾರಿಗೆ ಬರಲಿದೆ. ಹೀಗಾಗಿ, ನಾವು ಏಕೋಪಯೋಗಿ ಪ್ಲಾಸ್ಟಿಕ್‌ರಹಿತ ಜೀವನಕ್ಕೆ ಒಗ್ಗಿಕೊಳ್ಳುವುದು ಅನಿವಾರ್ಯ.

ಪ್ಲಾಸ್ಟಿಕ್ ಉತ್ಪಾದಕರ ತಲೆನೋವು ಏನೇ ಇರಲಿ. ಅನಗತ್ಯವಾಗಿ ಅದನ್ನು ಬಳಸಿ ಬಳಸಿ ಎಸೆಯುವ ನಮ್ಮ ಮನಃಸ್ಥಿತಿ ಮುಂದಿನ ದಿನಗಳಲ್ಲಿ ಹೇಗಿರಬೇಡ? ಹಣ್ಣು-ಹಂಪಲು, ತರಕಾರಿ, ದಿನಸಿ ಇತ್ಯಾದಿ ತರಲು ಬಟ್ಟೆಯ ಚೀಲವನ್ನು ನಾವು ಜೊತೆಗೆ ಇಟ್ಟುಕೊಳ್ಳಲೇಬೇಕು. ಪ್ಲಾಸ್ಟಿಕ್‌ ತ್ಯಾಜ್ಯ ನಿರ್ವಹಣಾ ತಿದ್ದುಪಡಿ ನಿಯಮ– 2021ರ ಪ್ರಕಾರ, ಏಕೋಪಯೋಗಿ ಪ್ಲಾಸ್ಟಿಕ್‌ ಅನ್ನು ತಯಾರಿಸುವುದು, ಆಮದು ಮಾಡಿಕೊಳ್ಳುವುದು, ಸಂಗ್ರಹಿಸಿ ಇಟ್ಟುಕೊಳ್ಳುವುದು, ಮಾರಾಟ ಮಾಡುವುದು ಮತ್ತು ಉಪಯೋಗಿಸುವುದು ನಿಷಿದ್ಧ. ಪ್ಲಾಸ್ಟಿಕ್ ಚೀಲಕ್ಕೆ ಮಾತ್ರ ಈ ನಿಷೇಧ ಸೀಮಿತವಾಗಿಲ್ಲ, ಪ್ಲಾಸ್ಟಿಕ್ಕಿನಿಂದ ತಯಾರಿಸಿದ ಗುಗ್ಗೆ ಕಡ್ಡಿ, ಐಸ್ ಕ್ರೀಂ ಕಡ್ಡಿ, ಕ್ಯಾಂಡಿಗಳು, ಬಲೂನುಗಳು, ಧ್ವಜ, ಅಲಂಕಾರಕ್ಕಾಗಿ ಬಳಸುವ ಥರ್ಮೊಕೋಲ್ ಎಲ್ಲವೂ ಸೇರಿವೆ. ಜೊತೆಗೆ ಪ್ಲಾಸ್ಟಿಕ್ ಪ್ಲೇಟುಗಳು, ಲೋಟ, ಫೋರ್ಕ್, ಚಮಚ, ಕೇಕ್ ತುಂಡರಿಸುವ ಪ್ಲಾಸ್ಟಿಕ್ ಚಾಕು, ಸ್ಟ್ರಾ ಅಂತಹವು ಸಹ ನಿಷೇಧದ ಪಟ್ಟಿಯಲ್ಲಿವೆ. ಬೇಕರಿಯಲ್ಲಿ ಪ್ಯಾಕಿಂಗ್ ರಟ್ಟಿನ ಮೇಲೆ, ಆಮಂತ್ರಣ ಪತ್ರ, ಸಿಗರೇಟು ಪ್ಯಾಕ್ ಮೇಲೆ ಬಳಸುವ ತೆಳು ಪ್ಲಾಸ್ಟಿಕ್ ಹೊದಿಕೆ, 100 ಮೈಕ್ರಾನ್‌ಗಿಂತ ಕಡಿಮೆ ಇರುವ ಫ್ಲೆಕ್ಸ್ ಬ್ಯಾನರ್‌ಗಳೂ ಸೇರಿವೆ.

ಏಕೋಪಯೋಗಿ ಪ್ಲಾಸ್ಟಿಕ್‌ಗೆ ಪರ್ಯಾಯ ಏನು? ಬಟ್ಟೆ ಚೀಲ, ಬಿದಿರಿನ ಉತ್ಪನ್ನಗಳು, ವಿವಿಧ ಸಾವಯವ ವಸ್ತುಗಳಿಂದ ತಯಾರಿಸಿದ ಕೈಚೀಲದಂತಹವನ್ನು ಇಲ್ಲಿ ಪರಿಗಣಿಸಬಹುದು. ಈಶಾನ್ಯ ರಾಜ್ಯಗಳಲ್ಲಿ ಈಗೀಗ ಬಿದಿರಿನ ನೀರಿನ ಬಾಟಲಿಗಳನ್ನು ತಯಾರಿಸುತ್ತಿದ್ದಾರೆ. ಮಣ್ಣಿನಲ್ಲಿ ವೇಗವಾಗಿ ಕರಗಬಲ್ಲಂತಹ ಧಾನ್ಯಾಧಾರಿತ ತೆಳು ಚೀಲಗಳನ್ನು ಕೆಲ ದೇಶಗಳಲ್ಲಿ ತಯಾರಿಸುತ್ತಿದ್ದಾರೆ. ಪರ್ಯಾಯ ಚಿಂತನೆಗಳಿಗೆ, ಆವಿಷ್ಕಾರಗಳಿಗೆ ತೆರೆದುಕೊಳ್ಳುವ ಮನಸ್ಸಿದ್ದರೆ ಹಾಗೂ ಸರ್ಕಾರಗಳ ಒತ್ತಾಸೆಯಿದ್ದರೆ, ಹಳ್ಳಿ ಹಳ್ಳಿಗಳಲ್ಲೂ ಪ್ಲಾಸ್ಟಿಕ್ಕಿಗೆ ಪರ್ಯಾಯವಾದ ಉತ್ತಮ ಉತ್ಪನ್ನಗಳನ್ನು
ತಯಾರಿಸುವ ಪಡೆಯನ್ನೇ ಸಜ್ಜುಗೊಳಿಸಬಹುದು. ಇದರಿಂದ ನಿರುದ್ಯೋಗ ಸಮಸ್ಯೆಯೂ ಕೊಂಚ ಮಟ್ಟಿಗೆ ತಗ್ಗುವ ನಿರೀಕ್ಷೆಯಿದೆ.

ಸದ್ಯಕ್ಕೆ ಕೆಲವು ಬಗೆಯ ಏಕೋಪಯೋಗಿ ಪ್ಲಾಸ್ಟಿಕ್ ಅನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಹಾಲಿನ ಪ್ಯಾಕೆಟ್‌, ಎಣ್ಣೆ, ಜಂಕ್‌ಫುಡ್ ತುಂಬಿಸಲು ಬಳಸುವ ಪ್ಯಾಕೆಟ್‌ಗಳಂತಹ ಇನ್ನೂ ಅನೇಕ ಬಗೆಯ ಏಕೋಪಯೋಗಿ ಪ್ಲಾಸ್ಟಿಕ್ ವಸ್ತುಗಳಿವೆ. ಅವುಗಳ ಕುರಿತಾಗಿ ಇನ್ನೂ ಸ್ಪಷ್ಟವಾದ ನಿಲುವು ತೆಗೆದುಕೊಳ್ಳಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ.

ದೇಶದ ಸಂವಿಧಾನದಲ್ಲಿ ನಾಗರಿಕರ ಅನುಕೂಲಕ್ಕಾಗಿಯೇ ಅನೇಕ ಕಾನೂನುಗಳಿವೆ. ಆ ಕಾನೂನುಗಳಿಗೆ ಬೆಲೆ ಬರುವುದು ಅವು ಸಮರ್ಪಕವಾಗಿ ಅನುಷ್ಠಾನವಾದಾಗ ಮಾತ್ರ. ಏಕೋಪಯೋಗಿ ಪ್ಲಾಸ್ಟಿಕ್ ನಿಷೇಧ ಮಾಡಿರುವುದನ್ನು ನಾಗರಿಕರೆಲ್ಲಾ ಸ್ವಾಗತಿಸಬೇಕು ಜೊತೆಗೆ ಮುಂದಿನ ದಿನಗಳಲ್ಲಿ ಎಲ್ಲಾ ತರಹದ ಪ್ಲಾಸ್ಟಿಕ್ ನಿಷೇಧ ಮಾಡುವ ಉಪಕ್ರಮಗಳಿಗೂ ಸರ್ಕಾರದ ಜೊತೆ ಕೈಜೋಡಿಸಬೇಕು. ಆಗ ಮಾತ್ರ ಸ್ವಚ್ಛ ಭಾರತದ ಕಲ್ಪನೆ ಸಾಕಾರಗೊಳ್ಳಲು ಸಾಧ್ಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು