ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವ ಭಾರತ ಸಮಾಜದ ಕನಸುಗಾರರು ಅಂಬೇಡ್ಕರ್ ಮತ್ತು ಕುವೆಂಪು

Last Updated 29 ಡಿಸೆಂಬರ್ 2022, 13:25 IST
ಅಕ್ಷರ ಗಾತ್ರ

ಹೇಳಿಕೇಳಿ ಇದು ಸಾಮಾಜಿಕ ಜಾಲತಾಣಗಳ ಯುಗ. ಅವುಗಳು ಒಂದು ಪ್ರಬಲ ಮಾಧ್ಯಮವಾಗಿ ಬೆಳೆಯುತ್ತಾ, ಅಭಿಪ್ರಾಯ ಸೃಷ್ಟಿಸುತ್ತಿರುವ ಸಂಕ್ರಮಣ ಸಂದರ್ಭದಲ್ಲಿ ನಾವಿದ್ದೇವೆ. ಇದೊಂದು ರೀತಿಯ ಮುಕ್ತ ವಿಶ್ವವಿದ್ಯಾಲಯದ ಜಗತ್ತು. ಇಲ್ಲಿ ಸುದ್ದಿ ಸೃಷ್ಟಿಕರ್ತರು, ವರದಿಗಾರರು, ಸಂಪಾದಕರು, ಹಂಚಿಕೆದಾರರು ಎಲ್ಲ ಅನಾಮಧೇಯರೇ! ಆಗಾಗ ಇಲ್ಲಿ ಸಮಾಜ ಕುರಿತ ಸೂಕ್ಷ್ಮ ಸ್ಪಂದನೆ ಮಾದರಿಯನ್ನು ಎದುರಾಗುತ್ತೇವೆ. ಸದ್ಯಕ್ಕೆ ನಮಗೆ ಇದೇ ಭರವಸೆಯ ಆಶಾಕಿರಣ. ಹಾಗೆಂದು ಸುಳ್ಳು, ಕುಹಕ, ಆಪಾದನೆ, ಅತಿರೇಕಗಳಿಗೇನೂ ಇಲ್ಲಿ ಕೊರತೆಯಿಲ್ಲ. ಆದರದು ಒಮ್ಮೊಮ್ಮೆ ಚಾರಿತ್ರ್ಯಹನನದ ತನಕ ದಾಪುಗಾಲಿಡುವುದು ದಿಗ್ಭ್ರಮೆ ತರಿಸುತ್ತದೆ.

ಅಂತಹ ಚಾರಿತ್ರ್ಯಹನನದ ಭಾಗವಾಗಿ ಮತ್ತೆಮತ್ತೆ ಚರ್ಚೆಗೊಳಗಾಗುವ ಇಬ್ಬರು ಪ್ರಮುಖ ವ್ಯಕ್ತಿತ್ವಗಳು: ಅಂಬೇಡ್ಕರ್ ಹಾಗೂ ಕುವೆಂಪು. ಒಳ್ಳೆಯ ಮತ್ತು ಕೆಟ್ಟ ವಿಚಾರಗಳ ಚರ್ಚೆಗೆ ಆಗಾಗ ಇಬ್ಬರೂ ಆಹಾರವಾಗುತ್ತಿರುತ್ತಾರೆ. ಕೆಲವೊಮ್ಮೆ ಗಂಭೀರವಾಗಿ, ಹಲವು ಸಲ ಕುತರ್ಕದ ದಾಳವಾಗಿ. ಅಲ್ಲಿ ಸಾಮಾನ್ಯವಾಗಿ ವ್ಯಕ್ತವಾಗುವ ಪ್ರಶ್ನೆ: ಕುವೆಂಪು ತಮ್ಮಕಾಲದ ಮಹಾನ್‌ ಚಿಂತಕ ಅಂಬೇಡ್ಕರವರನ್ನು ತಾತ್ವಿಕವಾಗಿ ಎಲ್ಲಿಯೂ ಎದುರಾಗಿಲ್ಲ; ಅವರ ಪ್ರಸ್ತಾಪವನ್ನು ಒಮ್ಮೆಯೂ ಮಾಡಿಲ್ಲ; ಇದು ಉದ್ದೇಶಪೂರ್ವಕ ಎಂಬುದರ ಕುರಿತಾದುದು. ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಕುವೆಂಪು ಕಳೆದ ಇಪ್ಪತ್ತನೆಯ ಶತಮಾನವು ಸೃಷ್ಟಿಸಿದ ಭಾರತದ ಬಹುದೊಡ್ಡ ಚಿಂತನಶೀಲ ವ್ಯಕ್ತಿತ್ವಗಳು. ವಿಶೇಷವಾಗಿ ಅವರು ಸಾಮಾಜಿಕ ನ್ಯಾಯದ ಪ್ರಬಲ ಪ್ರತಿಪಾದಕರು. ತಮ್ಮ ಸಾಧಕ ಬದುಕಿನ ಉದ್ದಕ್ಕೂ ಅವರು ಈ ಸಮಾಜದ ಯಥಾಸ್ಥಿತಿವಾದಿಗಳಿಂದ ಅನುಭವಿಸಿದ ತೊಂದರೆಗಳು ಅಷ್ಟಿಷ್ಟಲ್ಲ. ಆದರೆ ಆ ಸವಾಲುಗಳ ಬೆಂಕಿಯನ್ನು ನುಂಗಿಕೊಂಡು ಬೆಳಕಾಗಿ ಬೆಳಗಿದ ನಡೆ ಮಾತ್ರ ಮಾದರಿಯಾದುದು. ಅದು ನಮಗೆಲ್ಲ ಸ್ಫೂರ್ತಿಯಾಗಬೇಕು. ಹಲವು ಕಾರಣಗಳಿಗೆ ಅವರಿಗೆ
ಋಣಿಯಾಗಿರಬೇಕು. ಹಾಗೆಂದು ಆರಾಧಿಸುತ್ತಾ ಕೂರುವುದಷ್ಟೇ ಗೌರವವಲ್ಲ. ಬದಲಿಗೆ ನಡೆಯನ್ನು ಬಿಡದೆ
ಅನುಸರಿಸುವುದು ಮಾರ್ಗವಾಗಬೇಕು.

ಕುವೆಂಪು ತಮ್ಮ ಬರಹಗಳಲ್ಲಿ ಅಂಬೇಡ್ಕರವರನ್ನು ವಿಶೇಷವಾಗಿ ಹೆಸರಿಸಿಲ್ಲ ಎಂಬುದು ಸತ್ಯ. ಆದರೆ, ಕಾಲಸಂದರ್ಭದ ಸತ್ಪ್ರೆರಣೆಗಳಿಂದಸಂವೇದನೆಯುಳ್ಳ ಯಾರೂತಪ್ಪಿಸಿಕೊಳ್ಳಲಾರರು. ಅಂತೆಯೇ ಕುವೆಂಪು ಹಲವೆಡೆ ಅವರ ಚಿಂತನೆಗಳಿಂದ ಪ್ರೇರಣೆ ಪಡೆದಿರುವುದು ತಿಳಿಯುತ್ತದೆ. ಉದಾಹರಣೆಗೆ: ಮನುಧರ್ಮಶಾಸ್ತ್ರದ ನಿರಾಕರಣೆ, ಸಾಂಪ್ರದಾಯಿಕ ದೇವರ ತಿರಸ್ಕಾರ, ದೇವಾಲಯ ಸಂಸ್ಕೃತಿಯ ಭಜನೆ, ಆಧುನಿಕ ಶೈಕ್ಷಣಿಕ-ವೈಚಾರಿಕತೆಯ ಪ್ರತಿಪಾದನೆ, ಬುದ್ಧ ಧರ್ಮದ ಒಲವು, ದಲಿತ ಸಾಹಿತ್ಯಕ್ಕೆ ಪ್ರಚೋದನೆ ಇನ್ನು ಇತ್ಯಾದಿ-ಹೀಗೆ ಪಟ್ಟಿ ಬೆಳೆಸಬಹುದು.

ಮನುಧರ್ಮಶಾಸ್ತ್ರ ನಿರಾಕರಣೆ ‘ಯಾವುದು ಎಲ್ಲ ಕಾಲಕ್ಕೂ ಸಲ್ಲುವುದಿಲ್ಲ...ಎಲ್ಲವೂ ಬದಲಾಗುತ್ತಿದೆ. ಬದಲಾವಣೆ ಎಂಬುದು ವ್ಯಕ್ತಿಗಳ ಮತ್ತು ಸಮಾಜ ಜೀವನದ ನಿಯಮ‘ ಎಂಬುದು ಅಂಬೇಡ್ಕರರ ದೃಢವಾಣಿ. ಅದೇ ದೃಢತೆಯಲ್ಲಿ ಮುಂದೆ ಸಾಗಿ ಅವರು ಮನುಧರ್ಮಶಾಸ್ತ್ರವನ್ನು ಸುಟ್ಟದ್ದು ಚಾರಿತ್ರಿಕ ಸಂಗತಿ. ಅದು ನಡೆದದ್ದು ಇದೇ ಡಿಸೆಂಬರ್ 25(1927)ರಂದು ಎಂದು ದಾಖಲೆಗಳು ಹೇಳುತ್ತವೆ. ಆ ಘಟನೆ ಯಾವುದೋ ರೀತಿಯಲ್ಲಿ ಕುವೆಂಪು ಅವರ ಪ್ರಜ್ಞಾಪಾತಳಿಯನ್ನು ಸಂಪರ್ಕಿಸಿರಬಹುದು. ಸರಿ ಸುಮಾರು ಅದೇ ದಶಕದಲ್ಲಿ ಅವರು, ‘ಯಾವ ಕಾಲದ ಶಾಸ್ತ್ರವೇನು ಹೇಳಿದರೇನು?’ ಕವಿತೆ ಮೂಲಕ ಮನುಧರ್ಮಶಾಸ್ತ್ರದ ನಿರಾಕರಣೆಗೆ ಕರೆಕೊಟ್ಟದ್ದು ಕುತೂಹಲಕಾರಿ.

ಶೂದ್ರರನ್ನೂ-ಮಹಿಳೆಯರನ್ನೂ ದಲಿತ-ಗಿರಿಜನಾದಿ ಪಂಚಮವರ್ಗದವರನ್ನೂ ಕೇರಿಗಳಾಚೆ ಕಸದಂತೆ ಬಿಸಾಡಲು ಕಾರಣವಾದದ್ದು ‘ಮನುಧರ್ಮಶಾಸ್ತ್ರ. ಇಂತಹ ಪೂರ್ವಗ್ರಹಪೀಡಿತ ಶಾಸ್ತ್ರಗ್ರಂಥಕ್ಕೆ ತಿಲಾಂಜಲಿ ಇಡುವ ಪಾಠವನ್ನು ಅವರು ಹೇಳುವ ರೀತಿ ಇದು: ‘ಎಂದೋ ಜೀವ ಜೀವಗಳ ನಡುವಣ ದ್ವೇಷಬಿತ್ತುವ ಹಿತಾಸಕ್ತಿ ಹೊತ್ತು, ಯಾರೋ ಬರೆದಿಟ್ಟ ಕಟ್ಟುಕತೆಗಳು ಇಂದು ನಮ್ಮ ಬದುಕನ್ನು ನಿರ್ದೇಶಿಸುವ ಶಾಸ್ತ್ರಗಳಾಗಬೇಕಿಲ್ಲ. ಸ್ವರ್ಗ ಹೋಗಲಿ, ಮತ್ತೆ ನರಕ ಬಂದರು ಬರಲಿ, ಎದೆಯ ಧೈರ್ಯವ ಮಾಡಿ ಬಿಸುಡಾಚೆಗೆತ್ತಿ‘ ಎಂದು ನೇರ ನಿಷ್ಠುರವಾಗಿ ಕರೆಕೊಡುತ್ತಾರೆ. ಇದು ಕುವೆಂಪುಗೆ ಅಂಬೇಡ್ಕರರ ನೇರಪ್ರೇರಣೆ. ಅದರ ಬೆನ್ನಿಗೇ ಮನುಷ್ಯ ಚೇತನವನ್ನು ಘಾಸಿಗೊಳಿಸುವ ಚಾತುರ್ವರ್ಣವನ್ನು, ಜಾತಿಪದ್ಧತಿ-ಅಸ್ಪೃಶ್ಯತೆಯ ಆಚರಣೆಗಳನ್ನೂ, ಮತಿಯನ್ನು ಸಂಕೋಲೆಗೊಡ್ಡುವ ಎಲ್ಲ ಮತಶಾಸ್ತ್ರಗಳನ್ನು ನಿರ್ದಾಕ್ಷಿಣ್ಯವಾಗಿ ನಿರಾಕರಿಸುತ್ತಾರೆ. ಈ ಕುರಿತು ಕನ್ನಡದಲ್ಲಿ ಸಾಕಷ್ಟು ಚರ್ಚೆಯಾಗಿದೆ.

ಅದರೊಟ್ಟಿಗೆ ಮುಖ್ಯವಾಗಿ, ಅಂಬೇಡ್ಕರರನ್ನು ಕುರಿತು ಸ್ಪಷ್ಟವಾಗಿ ಗುರುತಿಸುವ ಎರಡು ಉಲ್ಲೇಖಗಳು ನಮಗೆ ಕುವೆಂಪು ಅವರಲ್ಲಿ ಸಿಗುತ್ತದೆ. ಆ ಕಡೆ ಓದುಗರ ಗಮನ ಸೆಳೆಯಬಯಸುವೆ.

ಉಲ್ಲೇಖ 1:ಅವರ ‘ಸಂಸ್ಕೃತಿ ಕ್ರಾಂತಿಗೆ ಕಹಳೆ ನಾಂದಿ’ ಎಂಬ ಸಾಂಸ್ಕೃತಿಕ ಮಹತ್ವದ ಲೇಖನದಲ್ಲಿ ಅಂಬೇಡ್ಕರರನ್ನು ಮೊದಲ ಬಾರಿಗೆ ಹೀಗೆ ಉಲ್ಲೇಖಿಸುತ್ತಾರೆ: ಅಲ್ಲಿ ‘ಜಯತೀರ್ಥ’ ಎಂಬವರ ವ್ಯಕ್ತಿ ಚಿತ್ರಕೃತಿಯನ್ನು ವಿಮರ್ಶಿಸುತ್ತಾ, “ಇವರೇನು ರಾಷ್ಟ್ರವ್ಯಕ್ತಿಗಳಲ್ಲ, ನಾರಾಯಣಗುರು ಅಥವಾ ಅಂಬೇಡ್ಕರ್‌ ಅಥವಾ ಬಸವೇಶ್ವರ ಅಥವಾ ಸ್ವಾಮಿ ವಿವೇಕಾನಂದ ಮೊದಲಾದವರಂತೆ” ಎನ್ನುತ್ತಾರೆ. ಆ ಮೂಲಕ ಅಂಬೇಡ್ಕರವರನ್ನು “ಲೋಕಕ್ಕೂ ದೇಶಕ್ಕೂ ಸರ್ವಜನರಿಗೂ ಸೇವೆ ಮಾಡಿರುವ... ರಾಷ್ಟ್ರವ್ಯಕ್ತಿಗಳ ಸಾಲಿನಲ್ಲಿ ಸ್ಪಷ್ಟವಾಗಿ ಗುರುತಿಸುತ್ತಾರೆ. ಅಲ್ಲಿಯೇ ‘ರಾಜ್ಯಾಂಗ’ದ ಉಲ್ಲೇಖ ಕೂಡ ಮಾಡುತ್ತಾ, ಅದರ ವಿರುದ್ಧವಿರುವ ತತ್ವ ಚಿಂತನೆಗಳನ್ನು‘ಜನತಾಘಾತಕ’ವಾದುವು ಎಂಬುದಾಗಿ ಕರೆದು ಜರಿಯುತ್ತಾರೆ.

ಉಲ್ಲೇಖ 2: ಕೆ.ವಿ. ಶಂಕರೇಗೌಡ ನೆನಪಿನ ದತ್ತಿ ಉಪನ್ಯಾಸಮಾಲೆಯಲ್ಲಿ ಮಂಡಿಸಿದ ವಿಚಾರಗಳಲ್ಲಿ ದೊರಕುವ ಉಲ್ಲೇಖ (ಕೃತಿ ‘ಜನತಾಪ್ರಜ್ಞೆ ಮತ್ತು ವೈಚಾರಿಕ ಜಾಗೃತಿ’), ಎರಡನೆಯದು. ಅದರಲ್ಲಿ ಆಧುನಿಕತೆಯ ಮುಖಾಂತರ ಭಾರತವು ವಿಶೇಷ
ಯುಗಪರಿವರ್ತನೆಗೆ ಒಳಗಾದ ವಿಚಾರವನ್ನು ಉತ್ಸಾಹದಿಂದ ಹೇಳುತ್ತಾರೆ. ಅಂತಹ ಯುಗಪರಿವರ್ತನೆಗೆ ಕಾರಣರಾದವರ
ಹೆಸರುಗಳು ಅಲ್ಲಿ ಕ್ರಮಾನುಗತವಾಗಿ ಬರುತ್ತವೆ.

ಅವುಗಳೆಂದರೆ: ರಾಜರಾಮರು, ಪರಮಹಂಸ-ವಿವೇಕಾನಂದರು, ದಯಾನಂದ ಸರಸ್ವತಿ-ಅರವಿಂದರು, ಮಹಾತ್ಮಗಾಂಧೀಜಿಯವರು. ಹೀಗೆ ಸಾಗುತ್ತದೆ ಪಟ್ಟಿ. ಮುಂದುವರೆದು ವ್ಯಕ್ತಿಗಳ ಹೆಸರು ಹೇಳುವುದನ್ನು ಅಲ್ಲಿಗೇ ನಿಲ್ಲಿಸಿ, ರಾಜ್ಯಾಂಗವನ್ನು ರಚಿಸಿದ ಶಿಲ್ಪಿಗಳ ಬಗ್ಗೆ ಮಾತಾಡಲಾರಂಭಿಸುತ್ತಾರೆ. ‘ನಮ್ಮ ರಾಜ್ಯಾಂಗವನ್ನು ರಚಿಸಿದ ಮಹಾವ್ಯಕ್ತಿಗಳು ತಕ್ಕಮಟ್ಟಿಗೆ ನಾವು ಮುಂದೆ ವೈಚಾರಿಕವಾಗಿ ಮತ್ತು ವೈಜ್ಞಾನಿಕವಾಗಿ ಮುಂದುವರೆಯಲು ಏನೇನು ಬೇಕೋ ಅದನ್ನೆಲ್ಲಾ ಅದರಲ್ಲಿ ಅಳವಡಿಸಿಕೊಂಡಿದ್ದಾರೆ. ಆದರೆ...ಮೂರು-ನಾಲ್ಕು ಸಾವಿರ ವರ್ಷಗಳಿಂದ ಯಾವುದೋ ಒಂದು ಸಂಪ್ರದಾಯದ ಮಹಾಪ್ರವಾಹದಲ್ಲಿ ಸಿಕ್ಕಿರುವ ನಮ್ಮ ಜನತಾಪ್ರಜ್ಞೆ ಅಷ್ಟು ಸುಲಭವಾಗಿ ಪರಿವರ್ತನೆಗೊಳ್ಳುವುದಕ್ಕೆ ಸಾಧ್ಯವಾಗಿಲ್ಲ. ಇಲ್ಲಿ ‘ರಾಜ್ಯಾಂಗವನ್ನು ರಚಿಸಿದ ಮಹಾವ್ಯಕ್ತಿಗಳು’ ಎನ್ನುವುದು. ನಾವು ಇಂದು ಸಾಮಾನ್ಯವಾಗಿ ಅಂಬೇಡ್ಕರರನ್ನು ಸಂಬೋಧಿಸುವ ‘ಸಂವಿಧಾನ ಶಿಲ್ಪಿ’ಯ ಸಮಾನಾರ್ಥದ ರೂಪವಿಶೇಷಣ. ವಯೋಚಾರಿತ್ರಿಕ ಕ್ರಮವನ್ನು ಅನುಸರಿಸಿರುವುದನ್ನು ನೋಡಿದರೂ ಇದು ತಿಳಿಯುತ್ತದೆ. ಅಲ್ಲಿ ‘ರಾಜ್ಯಾಂಗ’ ಪದವನ್ನು ಸಂವಿಧಾನಕ್ಕೆ ಪರ್ಯಾಯವಾಗಿ
ಬಳಸುತ್ತಾ, ಪ್ರಜಾಪ್ರಭುತ್ವವನ್ನು ಪ್ರಬಲಗೊಳಿಸುವ ವಿಶೇಷ ಕಿವಿಮಾತುಗಳನ್ನು ಹೇಳುತ್ತಾ ಹೋಗುತ್ತಾರೆ. ಆ ಮಾತುಗಳು ಅವರಲ್ಲಿ ಪ್ರಜಾ ಸರ್ಕಾರಗಳ ಬಗ್ಗೆ ಇದ್ದ ಮಹತ್ವಾಕಾಂಕ್ಷೆಗೆ ಕನ್ನಡಿ ಹಿಡಿದು ಸ್ಫೂರ್ತಿಗೊಳಿಸುತ್ತವೆ.

ಸಂವಿಧಾನ ಸ್ವಾಗತ ಗೀತೆ ಇನ್ನು, ನಾವು ನಮ್ಮದೇ ಆದ ಸಂವಿಧಾನವನ್ನು ಸೃಷ್ಟಿಸಿಕೊಂಡ ಗಣರಾಜ್ಯ ದಿನವಂತೂ ಕುವೆಂಪು ಅಕ್ಷರಶಃ ಗರಿಗೆದರಿದ ನವಿಲಂತೆ ಸಂಭ್ರಮಿಸುತ್ತಾರೆ. ಒಂದುಕಡೆ, ಭಾರತದ ಅಲಿಖಿತ ಶಾಸನವಾಗಿದ್ದ ಮನುಧರ್ಮಶಾಸ್ತ್ರ ಇನ್ನೊಂದು ಕಡೆ, ವಂಶಪಾರಂಪರ್ಯದ ನಿರಂಕುಶ ರಾಜಪ್ರಭುತ್ವ-ಎರಡೂ ಕೊನೆಯಾದ ಚಾರಿತ್ರಿಕ ಮಹಾಸಂತೋಷ. ಈ ಜನಪರ ಸುವಾರ್ತೆಯನ್ನು ರೇಡಿಯೋದಲ್ಲಿ ಕೇಳಿ ಪ್ರತಿಸ್ಪಂದಿಸಿ, ‘ಶ್ರೀಸಾಮಾನ್ಯರ ದೀಕ್ಷಾಗೀತೆ’ಯನ್ನು ಬರೆಯುತ್ತಾರೆ; ಹೊಸ ಸಂವಿಧಾನವನ್ನು ಅತ್ಯುತ್ಸಾಹದಿಂದ ಸ್ವಾಗತಿಸುತ್ತಾರೆ. ಸಂವಿಧಾನದಲ್ಲಿ ಅಡಕಗೊಂಡಿರುವ ‘ಸರ್ವಪ್ರಜಾಧಿಪತ್ಯ’ದ ಸದಾಶಯಗಳನ್ನು ಆ ಮೂಲಕ ಎತ್ತಿ ಹಿಡಿದು ಸಾರುತ್ತಾರೆ: ಕೊನೆಗಂಡಿತೊ ಓರೋರ್ವರ ಗರ್ವದ ಕಾಲ, ಇದು ಸರ್ವರ ಕಾಲ-ಎನ್ನುತ್ತಾ, ಬಲವಿದ್ದವರಿಗೆ ಬಾಳುವೆಯ ವಾದದೆದುರು ಸರ್ವರ ಸರ್ವಸ್ತರದ ಉದಯವನ್ನು ಕೋರುತ್ತಾರೆ.

ಶ್ರೀಸಾಮಾನ್ಯರನ್ನು ಸನ್ಮಾನ್ಯರ ಸ್ಥಾನದಲ್ಲಿ ಸ್ಥಾಪಿಸುತ್ತ ಹಾರೈಸುವ ಇದು ಕನ್ನಡದ ಅಪೂರ್ವ ‘ಸಂವಿಧಾನ ಸ್ವಾಗತ ಗೀತೆ’ಯಾಗಿದೆ. ಇದರಲ್ಲಿ, ಅಂಬೇಡ್ಕರರ ಹೊಸ ಸಂವಿಧಾನದ ಸಕಾಲಿಕ ಸ್ಪಂದನವಿದೆ; ಅದು ಸಾವಿರ ಕೈಗಳ ಚಿತ್ತಾರವಾಗಬಲ್ಲ ಜನಾಧಿಕಾರವನ್ನು ಈ ನೆಲದ ತುಂಬ ವಿಸ್ತರಿಸಬಹುದೆಂಬ ಆಶಯವಿದೆ; ಪ್ರಜೆಗಳ ಸಾರ್ವಭೌಮತ್ವಕ್ಕೆ ಜಯ ದೊರಕಿಸಬಲ್ಲ ಸರ್ವಶಕ್ತ ಸಾಧನ ಆಗಬಹುದೆಂಬ ದಾರ್ಶನಿಕ ಕನಸಿದೆ.

ಇದರ ಜೊತೆಗೆ, ಕುವೆಂಪು ಹಲವೆಡೆ ಅಂಬೇಡ್ಕರರ ಪ್ರಜಾಸತ್ತಾತ್ಮಕ ಸಂವಿಧಾನದ ಆಶಯಗಳನ್ನು ಸಾಹಿತ್ಯವಾಗಿಸಿದ್ದಾರೆ. ಹಾಗೆ ನೋಡಿದರೆ, ಭಾರತದ ದಲಿತ ಚಳವಳಿ ಎಂಬ ಸಾಮಾಜಿಕ ನ್ಯಾಯಾಂದೋಲನದ ಹುಟ್ಟಿಗೆ ‘ಅಂಬೇಡ್ಕರ್’ ಎಂಬ ಜ್ಞಾನಸ್ಫೋಟಕವು ಕಾರಣವಾದಂತೆ, ಕನ್ನಡ ನೆಲದಲ್ಲಿ ಕುವೆಂಪು ನೇರಪ್ರೇರಣೆಯಾದದ್ದು ಮಹತ್ವದ ಸಂಗತಿ. ಸಂವಿಧಾನದ ಸಾರ ಧರ್ಮನಿರಪೇಕ್ಷತೆ ಎಂದು ಪರಿಗಣಿಸಬಹುದಾದರೆ, ವಿಶ್ವಮಾನವ ಸಂದೇಶವು ‘ಸಾಂಸ್ಕೃತಿಕ ಸಂವಿಧಾನ’ವಾಗಿ ಕಾಣುತ್ತದೆ.

***

ಗಾಂಧಿ-ಅಂಬೇಡ್ಕರ್ ಎದುರುಬದುರಾಗಿಸಿ ಸಾಕಷ್ಟು ನಷ್ಟ ಅನುಭವಿಸುತ್ತಿದ್ದೇವೆ. ಅದೇ ಚಾಳಿ ಕುವೆಂಪು-ಅಂಬೇಡ್ಕರ್ ಕುರಿತು ಮುಂದುವರೆಯುವ ಮೊದಲು ಎಚ್ಚೆತ್ತುಕೊಳ್ಳಲಿ ಎಂಬುದು ಸದಾಶಯ. ಹೊಸ ಭಾರತ ಸಮಾಜದ ಮಹಾ
ಕನಸುಗಾರರು ಅಂಬೇಡ್ಕರ್ ಮತ್ತು ಕುವೆಂಪು.
- ಚಿಕ್ಕಮಗಳೂರು ಗಣೇಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT