ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ – ಅನಕೃ: ಕನ್ನಡದ ಕಾವು ಮತ್ತು ಬೆಳಕು

ಕನ್ನಡಪ್ರಜ್ಞೆಯ ಆದರ್ಶ ಮತ್ತು ಬರಹಗಾರನ ವ್ಯಕ್ತಿತ್ವ: ಅನಕೃ ತೋರಿದ ಮಾದರಿ
Last Updated 13 ಜುಲೈ 2021, 19:30 IST
ಅಕ್ಷರ ಗಾತ್ರ

ಸಾಮಾಜಿಕ ಜಾಲತಾಣಗಳಲ್ಲಿ ಆಸಕ್ತಿಯುಳ್ಳ ಕನ್ನಡಿಗರ ಗುಂಪೊಂದು ‘ಕ್ಲಬ್‌ ಹೌಸ್‌’ ಎನ್ನುವ ಹೊಸ ‘ಡಿಜಿಟಲ್‌ ಹರಟೆಕಟ್ಟೆ’ಯಲ್ಲಿ ಮಾತಿನ ತಾಲೀಮು ನಡೆಸುತ್ತಿರುವ ಸಂದರ್ಭದಲ್ಲಿ, ಕನ್ನಡ ಸಾರಸ್ವತ ಪರಂಪರೆಯ ಬಹುದೊಡ್ಡ ಭಾಷಣಕಾರರಲ್ಲೊಬ್ಬರಾದ ಅರಕಲಗೂಡು ನರಸಿಂಗರಾವ್‌ ಕೃಷ್ಣರಾವ್‌ (ಮೇ 9, 1908– ಜುಲೈ 8, 1971) ನಿಧನರಾಗಿ ಐವತ್ತು ವರ್ಷ ತುಂಬಿದೆ.

ಅನಕೃ ಅವರನ್ನು ‘ಕನ್ನಡ ಕಾದಂಬರಿ ಸಾರ್ವಭೌಮ’ ಎಂದು ಬಣ್ಣಿಸಲಾಗುತ್ತದೆ. ಸಂಖ್ಯಾದೃಷ್ಟಿಯಿಂದ (111 ಕಾದಂಬರಿಗಳು) ಆ ವಿಶೇಷಣ ಗಮನ ಸೆಳೆಯುತ್ತದಾದರೂ, ಆಶಯ ಹಾಗೂ ಗುಣಮಟ್ಟದ ಕನ್ನಡಿಯಲ್ಲಿ ಎಸ್‌.ಎಲ್‌. ಭೈರಪ್ಪನವರ ಸಾತ್ವಿಕ ಆವೃತ್ತಿಯಂತೆ ‘ಕಾದಂಬರಿಕಾರ ಅನಕೃ’ ಕಾಣಿಸುತ್ತಾರೆ. ಭೈರಪ್ಪ ಹಾಗೂ ಅನಕೃ ಇಬ್ಬರೂ ಕನ್ನಡ ಓದುಗ ವಲಯವನ್ನು ಹಿಗ್ಗಿಸಿದವರು. ಹಾಗೆಂದು ಇಬ್ಬರನ್ನೂ ಒಂದೇ ತಕ್ಕಡಿಯಲ್ಲಿ ತೂಗಲಾಗದು. ಅನಕೃ ಅವರ ಕಾದಂಬರಿಗಳಲ್ಲಿ ಪ್ರಾಚೀನ ಹಿಂದೂ ಧರ್ಮದ ಮೌಲ್ಯಗಳ ಪ್ರತಿಪಾದನೆಯಿದ್ದರೂ ಅದು ಭೈರಪ್ಪನವರ ಕಾದಂಬರಿಗಳಂತೆ ಅಜೆಂಡಾದ ರೂಪದಲ್ಲಿ ಓದುಗ ರನ್ನು ಪ್ರಭಾವಿಸುವ ಕಸರತ್ತಲ್ಲ. ಸಾಮಾಜಿಕ ಅನಿಷ್ಟಗಳು ಹಾಗೂ ವರ್ತಮಾನದ ಸಮಾಜದಲ್ಲಿನ ಬದಲಾವಣೆಗಳ ಬಗ್ಗೆಯೂ ಅವರ ಕಾದಂಬರಿಗಳು ಚರ್ಚಿಸಿವೆ; ಐತಿಹಾಸಿಕ ಕಥನಗಳನ್ನೂ ಒಳಗೊಂಡಿವೆ. ವಿರಳ ಒಳನೋಟಗಳ, ಕಪ್ಪುಬಿಳುಪು ಪಾತ್ರಗಳ, ಜನರ ಭಾವಕೋಶವನ್ನು ಉದ್ದೀಪಿಸುವ ರಚನೆಗಳ ರೂಪದಲ್ಲಿ ಅನಕೃ ಕಾದಂಬರಿಗಳಿವೆ ಹಾಗೂ ಆ ಕೃತಿಗಳ ರಚನೆಯ ಹಿನ್ನೆಲೆಯಲ್ಲಿ ಬರೆದೇ ಬದುಕಬೇಕಾದ ಬರಹಗಾರನೊಬ್ಬನ ಒತ್ತಡವಿದೆ.

ಕಾದಂಬರಿಗಳ ಕಾರಣದಿಂದಾಗಿಯಷ್ಟೇ ಅನಕೃ ಅವರನ್ನು ನೆನಪಿಸಿಕೊಳ್ಳುವಂತಿದ್ದರೆ ಬಹುಶಃ, ಅವರು ಭೈರಪ್ಪನವರ ಅಣ್ಣನಂತೆ ಕಾಣುತ್ತಿದ್ದರೇನೊ. ಆದರೆ, ಅನಕೃ ಭಿನ್ನವಾಗಿ ನಿಲ್ಲುವುದು ಅವರ ಜನಪರ ನಿಲುವು ಗಳು ಹಾಗೂ ಕನ್ನಡ ಚಳವಳಿಗೆ ವಿವೇಕ, ತಾತ್ವಿಕತೆ ಒದಗಿಸಿಕೊಟ್ಟ ಕಾರಣದಿಂದಾಗಿ. ಕಾದಂಬರಿ ರಚನೆ ಹಿನ್ನೆಲೆಯಲ್ಲಿ ಬರವಣಿಗೆಯನ್ನೇ ವೃತ್ತಿಯನ್ನಾಗಿಸಿ ಕೊಂಡ ಮಹತ್ವಾಕಾಂಕ್ಷೆಯಿಲ್ಲದ ಅವಸರದ ಬರಹಗಾರ ನೊಬ್ಬ ಇಣುಕಿದರೆ, ಸಾರ್ವಜನಿಕ ಬದುಕಿನಲ್ಲಿ ಅವರ ಸಾಮಾಜಿಕ ಕಾಳಜಿ, ವೈಚಾರಿಕತೆ ಸ್ಪಷ್ಟವಾಗಿ ಕಾಣಿಸುತ್ತವೆ.

ಭಾಷಣಕಾರರಾಗಿ ಅನಕೃ ಬಗ್ಗೆ ದಂತಕಥೆಗಳಂತಹ ಪ್ರಸಂಗಗಳಿವೆ. ಒಂದೇ ದಿನ ನಾಲ್ಕೈದು ಕಡೆ ಯಾವ ಪೂರ್ವಸಿದ್ಧತೆಯೂ ಇಲ್ಲದೆ ಅದ್ಭುತ ಭಾಷಣ ಮಾಡಬಲ್ಲ ಶಕ್ತಿಯಿದ್ದ ಅವರು ಕನ್ನಡನಾಡು ಕಂಡ ಅಪ್ರತಿಮ ವಾಗ್ಮಿಗಳಲ್ಲೊಬ್ಬರು. ಎಡ, ಬಲ, ನಡು ಪಂಥಗಳ ಚಲಾವಣೆಯ ದಿನಗಳಲ್ಲಿ ‘ಸಂವಿಧಾನವಾದಿಗಳು’ ಎಂದು ಕರೆದುಕೊಳ್ಳುವವರೂ ನಮ್ಮ ನಡುವೆ ಇದ್ದಾರೆ. ಅನಕೃ ಕೂಡ ಸಂವಿಧಾನಪ್ರಿಯರೇ. ಆದರೆ, ಅವರು ಪ್ರತಿಪಾದಿಸಿದ್ದು ‘ಕನ್ನಡ ಸಂವಿಧಾನ’ವನ್ನು. ‘ನಮ್ಮ ಧರ್ಮ, ನೀತಿ, ಮತ, ಸಾಹಿತ್ಯ, ರಾಜಕಾರಣ ಎಲ್ಲವೂ ಕನ್ನಡಮಯವಾಗಬೇಕು. ಕನ್ನಡದ ಪೂರ್ಣಕಳೆಯನ್ನು ನಾವು ಎಂದು ಕಾಣುತ್ತೇವೆಯೋ ಅಂದು ವಿಶ್ವದ ಹಾಗೂ ವಿಶ್ವೇಶ್ವರನ ಸಾಕ್ಷಾತ್ಕಾರ ಪಡೆಯುತ್ತೇವೆ’ ಎನ್ನುವ ಅವರ ಮಾತಿನಲ್ಲಿ ‘ಕನ್ನಡ ಸಂವಿಧಾನ’ದ ಪರಿಕಲ್ಪನೆಯಿದೆ. ಕುವೆಂಪು ಅವರಂತೆಯೇ ಅನಕೃ ಕೂಡ ಕನ್ನಡ ಜಗತ್ತಿನ ಮೂಲಕ ಭಾರತವನ್ನು, ವಿಶ್ವವನ್ನು ಪರಿಭಾವಿಸುವ ಮಾದರಿಯನ್ನು ಕಾಣಿಸಿದವರು. ‘ನನ್ನಂಥವರು ಕನ್ನಡಕ್ಕೆ ಅನೇಕರಿದ್ದಾರೆ. ಆದರೆ ನನಗಿರುವುದು ಒಂದೇ ಕನ್ನಡ’ ಎನ್ನುವುದು ಅವರ ಪ್ರಸಿದ್ಧ ಹೇಳಿಕೆ.

‘ಕರ್ನಾಟಕದ ಹಿತವನ್ನು ವಿರೋಧಿಸುವ ವ್ಯಕ್ತಿ ಎಷ್ಟೇ ದೊಡ್ಡ ರಾಷ್ಟ್ರಭಕ್ತನಾದರೂ ಕನ್ನಡಿಗರು ಅವನನ್ನು ವಿರೋಧಿಸಬೇಕು’ ಎನ್ನುವ ಅನಕೃ ಮಾತು, ರಾಜಕೀಯ ಕಾರಣಗಳಿಗಾಗಿ ಕನ್ನಡದ ಹಿತಾಸಕ್ತಿ ಯನ್ನು ನಿರ್ಲಕ್ಷಿಸುವ ಇಂದಿನ ರಾಜ ಕಾರಣಿಗಳ ಬಗ್ಗೆ ಮರುಯೋಚಿಸಲು ಪ್ರೇರಣೆಯಂತಿದೆ. ‘ನಮ್ಮ ರಾಜ ಕೀಯ, ಸಾಮಾಜಿಕ ಜೀವನ ಕುಲಗೆಟ್ಟು ಹೋಗಿರು ವುದು ಕೋಮುವಾದ ಭೂತಸ್ಥಾಪನೆಯಿಂದ. ಈ ಬೀದಿಯ ಮಾರಿಯನ್ನು ಮನೆಗೆ ಬರಮಾಡಿ ಕೊಳ್ಳುವುದು ಸಾಹಿತಿಗೆ ಭೂಷಣವಲ್ಲ; ಜನಾಂಗಕ್ಕೆ
ಶ್ರೇಯಸ್ಕರವಲ್ಲ. ಉತ್ತಮ ಸಾಹಿತ್ಯ ಉತ್ತಮ ರಾಷ್ಟ್ರವನ್ನು ಬೆಳೆಸುವುದಕ್ಕೆ ಹೇತುವೆಂದು ನಂಬುವವರು ಇಂತಹ ವಿಷವಾಹಿನಿಗಳನ್ನು ತಡೆಗಟ್ಟಬೇಕು. ಕಲುಷಿತವಾಗಿರುವ ನಮ್ಮ ಸಾಮಾಜಿಕ ಜೀವನ ಮತ್ತಷ್ಟು ಕಲುಷಿತವಾಗಿ ಶಸ್ತ್ರಚಿಕಿತ್ಸೆಗೆ ಒದಗದಂತೆ ಎಚ್ಚರವಾಗಿರಬೇಕು’ ಎನ್ನುವ ಅವರ ಮಾತುಗಳು ಹಿಂದಿಗಿಂತ ಇಂದಿಗೇ ಹೆಚ್ಚು ಹೊಂದುವಂತಿವೆ.

ವಿಶ್ವ ಸಿಡಿದೊಡೆಯದಂತೆ ಕಾಪಾಡಬಲ್ಲುದು ಮಾನವೀಯತೆಯೊಂದೆ ಎಂದು ನಂಬಿದ್ದ ಅನಕೃ, ಮಾನವೀಯತೆಯ ಪ್ರವಾದಿಯ ರೂಪದಲ್ಲಿ ಕವಿಯನ್ನು ಕಂಡಿದ್ದರು. ‘ಸಾಹಿತ್ಯವೆಂಬ ಮಡಿಕೋಟೆಯನ್ನು ಕಟ್ಟಿ ಕೊಂಡು ಸುತ್ತಮುತ್ತಲಿನ ಜಗತ್ತಿನ ಹಾಹಾಕಾರದ ಮೇಲೆ ಅವಕುಂಠನ ಹಾಕಿ ತನ್ನ ಭಾವ ಪ್ರಪಂಚದಲ್ಲಿ ಮೈಮರೆಯುವ ಸಾಹಿತಿ ತನ್ನ ಅಥವಾ ದೇಶದ ಹಿತವನ್ನು ಸಾಧಿಸಲಾರ’ ಎನ್ನುವ ಅವರ ಮಾತು, ಲೇಖಕನೊಬ್ಬ ಹೇಗಿರಬೇಕು ಎನ್ನುವ ಪ್ರಶ್ನೆಗೆ ಉತ್ತರ ದಂತಿದೆ. ಈ ಮಾತಿನ ಮುಂದುವರಿಕೆಯಾಗಿ, ‘ಸರ್ವೇ ಜನೋ ಸುಖಿನೋ ಭವಂತು ಎಂಬ ತತ್ವವನ್ನು ನಿತ್ಯ ಪಠಿಸುವ ಸಾಹಿತಿಗಳು ಸರ್ವಜನ ಸುಖಾಕಾಂಕ್ಷಿ ಗಳಾದರೆ ಬಂಡವಾಳ ಭೂತವನ್ನೆದುರಿಸಬೇಕು. ಫ್ಯಾಸಿಸಂ, ಇಂಪೀರಿಯಲಿಸಂ, ಕಮ್ಯುನಿಸಂ ಎಲ್ಲಾ ಹೇಗೆ ಒಂದೊಂದು ದೇಶದ ಸ್ವಾತಂತ್ರ್ಯವನ್ನು ನುಂಗಿವೆಯೋ ಹಾಗೆ ಬಂಡವಾಳಶಾಹಿ ನಮ್ಮ ದೇಶವನ್ನು ನುಂಗುತ್ತದೆ. ಪ್ರಜಾಸ್ವಾಮ್ಯ, ಬಂಡವಾಳಸ್ವಾಮ್ಯಗಳೆಂಬ ಎರಡು ಪಕ್ಷ ಗಳು ಜಗತ್ತಿನಲ್ಲೆಲ್ಲಾ ಉದಯಿಸುತ್ತಿವೆ. ಇವೇ ಎರಡು ಜಾತಿಗಳು. ಇವುಗಳ ಮುಂದೆ ಉಳಿದವು ಗೌಣ. ಸಾಹಿತಿ ತಾನು ಯಾವ ಜಾತಿಯವನೆಂದು ನಿರ್ಧರಿಸಿಕೊಳ್ಳಬೇಕು’ ಎನ್ನುತ್ತಾರೆ.

ರಾಜಕಾರಣ ಮತ್ತು ಧರ್ಮದ ನಡುವಣ ಗೆರೆ ಅಳಿಸಿ ಹೋಗಿರುವ ವಿರೋಧಾಭಾಸದೊಂದಿಗೆ, ಸರ್ಕಾರ ಹಾಗೂ ಕಾರ್ಪೊರೇಟ್‌ ಕಂಪನಿಯೊಂದರ ಎಚ್‌.ಆರ್‌. ವಿಭಾಗಕ್ಕೂ ಹೆಚ್ಚಿನ ವ್ಯತ್ಯಾಸ ಇಲ್ಲವಾಗಿರುವ ಸನ್ನಿವೇಶ ಇಂದಿನದು. ‘ಬಂಡವಾಳಶಾಹಿ’ ವ್ಯವಸ್ಥೆಗೆ ಆರ್ಥಿಕ ಮುಖದ ಜೊತೆಗೆ ಧಾರ್ಮಿಕ ಮುಖವಾಡವೂ ಇದೆ. ‘ಧರ್ಮ ರಾಜಕಾರಣ’ದ ಚರ್ಚೆಯಲ್ಲಿ ಬಂಡವಾಳಿಗರ ಸೊಲ್ಲು ಸದ್ದಿಲ್ಲದೆ ಬಲವಾಗುತ್ತಿದೆ. ಈ ಅಪಾಯದ ಬಗ್ಗೆ ಗಮನಸೆಳೆಯುವುದರ ಜೊತೆಗೆ, ಪ್ರಜಾಸ್ವಾಮ್ಯ ಮತ್ತು ಬಂಡವಾಳಸ್ವಾಮ್ಯಗಳಲ್ಲಿ ಬರಹಗಾರ ಹಾಗೂ ಸಮಾಜ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕೆನ್ನುವುದಕ್ಕೆ ಅನಕೃ ಮಾತು ದಾರಿದೀಪದಂತಿದೆ ಹಾಗೂ ಆ ವಿಚಾರ, ಆರೋಗ್ಯಕರ ಸಮಾಜವನ್ನು ಹಂಬಲಿಸಿದ ಕನ್ನಡ ಸಾಂಸ್ಕೃತಿಕ ಲೋಕದ ವಿವೇಕದ ದನಿಯಾಗಿದೆ. ಅನಕೃ ಅವರ ಪಾಲಿಗೆ, ಧರ್ಮ–ರಾಜಕಾರಣದ ಸಹನಡಿಗೆಯನ್ನು ವಿರೋಧಿಸಿ, ಜಾತ್ಯತೀತ ಪ್ರಜಾಪ್ರಭುತ್ವದ ದಾರಿಯಲ್ಲಿ ನಡೆದ ಬಸವಣ್ಣ ‘ಕನ್ನಡದ ಗುರು’. ಆ ಗುರುವಿನ ಪಥದಲ್ಲಿ ಅನಕೃ ನಡೆದ ದಾರಿ ಕನ್ನಡದ ಹಿತಾಸಕ್ತಿಗೆ ಪೂರಕವಾದ ಮಾದರಿ.

‘ನಾನು ತಮಿಳು ಕನ್ನಡಿಗ. ಮಿರ್ಜಾ ಇಸ್ಮಾಯಿಲ್ಲರು ಮುಸ್ಲಿಂ ಕನ್ನಡಿಗ, ಅನಕೃ ಅಚ್ಚ ಕನ್ನಡಿಗ’ ಎಂದು ಮಾಸ್ತಿ ಹೊಗಳಿದ್ದರು. ‘ಅಚ್ಚ ಕನ್ನಡಿಗ’ ಹೊಗಳಿಕೆ ಹುಟ್ಟಿಗೆ ಸೀಮಿತವಾಗಿರದೆ, ಕನ್ನಡದ ಕೆಲಸವನ್ನೂ ಸೂಚಿಸುವಂತಹದ್ದು. ತಮಿಳಿನ ಪ್ರಾಬಲ್ಯದಿಂದ ಬೆಂಗಳೂರಿನಲ್ಲಿ ಕನ್ನಡಿಗರು ಅನುಭವಿಸುತ್ತಿದ್ದ ಕೀಳರಿಮೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಅನಕೃ ಹಾಗೂ
ಮ. ರಾಮಮೂರ್ತಿ ಎಣ್ಣೆ ಬತ್ತಿಯಾಗಿ ಕೆಲಸ ಮಾಡಿದರು. ಆ ಬೆಳಕಿನಲ್ಲೀಗ ನಾವು ಬದುಕುತ್ತಿದ್ದೇವೆ. ಕನ್ನಡ ಚಿತ್ರ ರಂಗ ಮದರಾಸಿನಿಂದ ಬೆಂಗಳೂರಿಗೆ ಸ್ಥಳಾಂತರಗೊಳ್ಳು ವುದಕ್ಕೆ ಅಗತ್ಯವಾದ ಭೂಮಿಕೆಯನ್ನು ಸಿದ್ಧಪಡಿಸಿದವ
ರಲ್ಲಿ ಅನಕೃ ಒಬ್ಬರಾಗಿದ್ದರು. ಮಲ್ಲಿಕಾರ್ಜುನ ಮನ್ಸೂರರು ವಚನಗಳನ್ನು ಹಾಡುವುದಕ್ಕೆ ಅನಕೃ ಒತ್ತಾಸೆಯೇ ಕಾರಣವಾಗಿತ್ತು.

ತ್ಯಾಗ ಮತ್ತು ತತ್ವಾಧಾರಿತವಾಗಿದ್ದ ಕನ್ನಡ ಚಳವಳಿ, ರಾಜಕಾರಣ–ಧರ್ಮದೊಂದಿಗೆ ತಳಕು ಹಾಕಿಕೊಂಡ ನಂತರ ತುಂಗೆಯಲ್ಲಿ ಸಾಕಷ್ಟು ನೀರು ಹರಿದಿದೆ. ಕನ್ನಡ ವನ್ನು ಜೀವದಂತೆ ಕಂಡು ಚಳವಳಿಯ ಭಾಗವಾಗಿದ್ದ ನಾಯಕರು, ಬದಲಾದ ಸಂದರ್ಭದಲ್ಲಿ ನುಡಿಪ್ರಜ್ಞೆ
ಯನ್ನು ಧರ್ಮಪ್ರಜ್ಞೆಯಾಗಿಸಿಕೊಂಡ ರೂಪಾಂತರವನ್ನು ಈ ನಾಡು ಕಂಡಿದೆ. ಆದರೆ, ಅ.ನ.ಕೃ. ಅವರ ಹೃದಯ ದಲ್ಲಿ ಕನ್ನಡದೀಪ ಕೊನೆಯವರೆಗೂ ನಿಷ್ಕಲ್ಮಶವಾಗಿ ಉರಿ ಯುತ್ತಿತ್ತು. ಆ ಉರಿ ಮತ್ತು ಬೆಳಕಿನ ಅಗತ್ಯವನ್ನು, ಅನಕೃ ಅಗಲಿಕೆಯ ಐವತ್ತನೇ ವರ್ಷದ ಸಂದರ್ಭ ನಮಗೆ ನೆನಪಿಸಬೇಕಿತ್ತು. ನಮ್ಮ ಕನ್ನಡದ ವರ್ತಮಾನಕ್ಕೋ ಉರಿ ಮತ್ತು ಬೆಳಕುಗಳ ಅರಿವಿನ ಮರೆವೆಯಾದಂತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT