ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಕುರಿ ಕಾಯಲು ಒಳ್ಳೆಯ ತೋಳ!

ಆಧುನಿಕ ಯುಗದ ವಾಣಿಜ್ಯೋದ್ಯಮ ಮಹಾರಾಜರಿಂದ ಸದ್ಗುಣ ಮಾತ್ರ ನಿರೀಕ್ಷಿಸುವುದೇ?
Last Updated 30 ನವೆಂಬರ್ 2020, 20:55 IST
ಅಕ್ಷರ ಗಾತ್ರ

ಆರಂಭದಲ್ಲಿ ಒಂದು ತಪ್ಪೊಪ್ಪಿಗೆಯ ಮಾತು. ಒಂದು ಬ್ಯಾಂಕ್‌ ತೆರೆದು, ಹೊಸದೊಂದು ವಿಮಾನಯಾನ ಸಂಸ್ಥೆಯನ್ನು ಆರಂಭಿಸುವ ಉದ್ದೇಶದಿಂದ ಬ್ಯಾಂಕ್‌ನ ದುಡ್ಡಿನ ಪೆಟ್ಟಿಗೆಯ ಕೀಲಿಕೈಯನ್ನು ಹೊಂದುವ ಬಯಕೆ ನನ್ನಲ್ಲಿ ಇದೆಯೇ? ಹೌದು, ಇದೆ! ನನ್ನ ವಿಮಾನಯಾನ ಸಂಸ್ಥೆಗೆ ದುಡ್ಡಿನ ಸಮಸ್ಯೆ ಎದುರಾದರೆ ಬ್ಯಾಂಕ್‌ನಲ್ಲಿನ ಹಣಕ್ಕೆ ಕೈಹಾಕುವುದಿಲ್ಲ ಎಂಬ ವಚನ ಕೊಡಬಹುದೇ? ಇದರ ಬಗ್ಗೆ ಅನುಮಾನವೇ ಬೇಡ. ನಾನು ಆ ಬ್ಯಾಂಕ್‌ನಲ್ಲಿ ಕಾರ್ಪೊರೇಟ್‌ ಆಡಳಿತದ ನಿಯಮಗಳನ್ನು ಪಾಲನೆ ಮಾಡುವೆನೇ? ಖಂಡಿತ ಮಾಡುತ್ತೇನೆ.

ಕೋಳಿಯ ಗೂಡಿನ ಮೇಲೆ ನಿಗಾ ಇರಿಸುವ ಹೊಣೆಯನ್ನು ನರಿಗೆ ವಹಿಸಿ, ಹಸಿವಾದಾಗಲೂ ಕೋಳಿಗಳನ್ನು ತಿನ್ನುವುದಿಲ್ಲ ಎಂಬ ಮಾತು ಕೊಡು ಎಂದು ಆ ನರಿಯನ್ನು ಕೇಳಿದಾಗ, ನರಿ ಏನು ಹೇಳಬಹುದು? ಆ ನರಿ ಯಾವ ಭರವಸೆಯನ್ನು ನೀಡುವುದೋ ನಾನು ನೀಡುವ ಭರವಸೆ ಕೂಡ ಅಷ್ಟೇ ವಿಶ್ವಾಸಾರ್ಹವಾಗಿರುತ್ತದೆ! ಕೋಳಿಯ ಗೂಡಿನ ಕೀಲಿಕೈಯನ್ನು ಒಳ್ಳೆಯ ನರಿಯ ಕೈಗೆ ಕೂಡ ಕೊಡುವುದಿಲ್ಲ. ಹಾಗೆಯೇ, ಕುರಿ ಕಾಯುವ ಕೆಲಸವನ್ನು ಒಳ್ಳೆಯ ತೋಳಕ್ಕೂ ವಹಿಸಲಾಗದು. ಕುರಿ ಕಾಯುವ ವಿಚಾರದಲ್ಲಿ ಒಳ್ಳೆಯ ತೋಳ ಸಿಗುವುದಿಲ್ಲ.

ಸಾಲದ ಮರುಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗದೆ ಸಾಲ ವಸೂಲಾತಿ ನ್ಯಾಯಮಂಡಳಿ ಎದುರು ವಿಚಾರ ಬಂದಾಗಲೆಲ್ಲ ನಾನು, ನಾನೇ ಒಂದು ಬ್ಯಾಂಕ್‌ನ ಮಾಲೀಕ ಆಗಿದ್ದಿದ್ದರೆ ಎಂದು ಯೋಚಿಸಿದ್ದಿದೆ! ಆದರೆ, ನಮ್ಮ ಹಣಕಾಸು ಮತ್ತು ಬ್ಯಾಂಕಿಂಗ್ ವ್ಯವಸ್ಥೆಯ ಸರ್ವೋಚ್ಚ ರಕ್ಷಕ ಆಗಿರುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ), ಈಗ ಈ ಮಾದರಿಯ ಕೆಲಸ ಮಾಡಲು ಮುಂದಾಗಿದೆ. ಆಂತರಿಕ ಕಾರ್ಯಕಾರಿ ಸಮಿತಿಯೊಂದನ್ನು ರಚಿಸಿದ ಆರ್‌ಬಿಐ, ದೊಡ್ಡ ಕಾರ್ಪೊರೇಟ್ ಕಂಪನಿಗಳು ಬ್ಯಾಂಕ್‌ನ ಪ್ರವರ್ತಕ ಪಾತ್ರ ವಹಿಸಬಹುದೇ ಎಂಬ ಬಗ್ಗೆ ಚರ್ಚಿಸಿತು. ದೊಡ್ಡ ಮಟ್ಟದಲ್ಲಿ ಸಾರ್ವಜನಿಕ ಚರ್ಚೆಗೆ ದಾರಿ ಮಾಡಿಕೊಡದೆಯೇ, ದೊಡ್ಡ ಕಾರ್ಪೊರೇಟ್ ಕಂಪನಿಗಳು ಬ್ಯಾಂಕ್‌ ಪ್ರವರ್ತಕ ಆಗಬಹುದು ಎಂದು ಆಂತರಿಕ ಸಮಿತಿ ಶಿಫಾರಸು ನೀಡಿರುವುದು ಸರಿಯಾದ ಕ್ರಮವಲ್ಲ. ಕಳೆದ ಐವತ್ತು ವರ್ಷಗಳಲ್ಲಿ, ದೊಡ್ಡ ಉದ್ಯಮಿಗಳಿಗೆ ಬ್ಯಾಂಕ್ ನಡೆಸಲು ಅವಕಾಶ ಆಗುವಂತೆ ನಿಯಮಗಳನ್ನು ಸಡಿಲಿಸಿರಲಿಲ್ಲ ಎಂಬುದನ್ನು ಗಮನಿಸಬೇಕು.

ಇಂತಹ ಮನವಿಗಳು ಬಂದಾಗಲೆಲ್ಲ ಆರ್‌ಬಿಐ ಕಡೆಯಿಂದ ವಿರೋಧ ವ್ಯಕ್ತವಾಗುತ್ತಿತ್ತು. ಆಂತರಿಕ ಸಮಿತಿಯು ಸಂಪರ್ಕಿಸಿದ ತಜ್ಞರ ಪೈಕಿ ಒಬ್ಬರನ್ನು ಹೊರತುಪಡಿಸಿ ಇತರ ಎಲ್ಲರೂ ಕಾರ್ಪೊರೇಟ್‌ ಅಥವಾ ಕೈಗಾರಿಕಾ ಕಂಪನಿಗಳಿಗೆ ಬ್ಯಾಂಕ್‌ ಪ್ರವರ್ತಕ ಆಗಲು ಅವಕಾಶ ಕೊಡಬಾರದು ಎಂದು ಹೇಳಿದ ನಂತರವೂ ಈ ರೀತಿಯ ಶಿಫಾರಸು ಬಂದಿರುವುದು ಸೋಜಿಗ.

ನವೆಂಬರ್‌ 23ರಂದು ಪ್ರಕಟಿಸಿರುವ ಜಂಟಿ ಲೇಖನವೊಂದರಲ್ಲಿ ಆರ್‌ಬಿಐ ಮಾಜಿ ಗವರ್ನರ್ ರಘುರಾಂ ರಾಜನ್ ಮತ್ತು ಮಾಜಿ ಡೆಪ್ಯುಟಿ ಗವರ್ನರ್ ವಿರಲ್ ಆಚಾರ್ಯ ಅವರು ಈ ಶಿಫಾರಸನ್ನು ‘ಬಾಂಬ್‌ಶೆಲ್‌’ ಎಂದು ಕರೆದಿದ್ದಾರೆ. ವಾಣಿಜ್ಯೋದ್ಯಮಗಳು ತಾವೇ ಒಂದು ಬ್ಯಾಂಕ್‌ನ ಮಾಲೀಕತ್ವ ಹೊಂದಿರುವುದು, ತಮಗೆ ತಾವೇ ಸಾಲ ಕೊಟ್ಟುಕೊಳ್ಳುವುದರ ಬಗ್ಗೆ ಉಲ್ಲೇಖಿಸಿ ಅವರು, ‘ಇಂತಹ ಬಗೆಯ ಸಾಲ ಕೊಟ್ಟುಕೊಳ್ಳುವುದು ವಿನಾಶಕಾರಿ ಇತಿಹಾಸವನ್ನು ಹೊಂದಿದೆ. ಸಾಲ ಪಡೆಯುವವನೇ ಬ್ಯಾಂಕ್‌ನ ಮಾಲೀಕನಾಗಿದ್ದಾಗ, ಆ ಬ್ಯಾಂಕ್‌ ಒಳ್ಳೆಯ ಉತ್ಪಾದಕ ಸಾಲ ಕೊಡುವುದು ಹೇಗೆ ಸಾಧ್ಯ? ಸ್ವತಂತ್ರ ಹಾಗೂ ಬದ್ಧತೆಯುಳ್ಳ ನಿಯಂತ್ರಣ ವ್ಯವಸ್ಥೆಗೆ ಕೂಡ ಅಪಾತ್ರರಿಗೆ ಸಾಲ ಕೊಡುವುದನ್ನು ತಡೆಯುವುದು ಕಷ್ಟಕರ’ ಎಂದು ಬರೆದಿದ್ದಾರೆ.

ರಾಜನ್ ಮತ್ತು ಆಚಾರ್ಯ ಏನೇ ಹೇಳಿದರೂ ಅದು ಪಕ್ಷಪಾತಿ ಎಂದು ಕೆಲವರು ಪ್ರತಿಕ್ರಿಯಿಸಬಹುದು. ಆದರೆ, ಇತರ ಹಲವು ತಜ್ಞರೂ ಈ ಶಿಫಾರಸನ್ನು ಸ್ವಾಗತಿಸಿಲ್ಲ. ‘ಸಾಲವನ್ನು ಅತಿಯಾಗಿ ಪಡೆದು, ಅದನ್ನು ಹಿಂದಿರುಗಿಸಲು ಆಗದ ವಿಚಾರವಾಗಿ ಕಾರ್ಪೊರೇಟ್‌ ಜಗತ್ತಿನ ಇತಿಹಾಸ ಗಮನಿಸುವುದಾದರೆ, ಕಾರ್ಪೊರೇಟ್‌ ಕಂಪನಿಗಳು ಬ್ಯಾಂಕಿಂಗ್‌ ವ್ಯವಸ್ಥೆಯನ್ನು ಪ್ರವೇಶಿಸುವುದು ವಿನಾಶಕಾರಿ’ ಎಂದು ಐಐಎಂ (ಅಹಮದಾಬಾದ್‌) ಪ್ರೊಫೆಸರ್ ಟಿ.ಟಿ. ರಾಮಮೋಹನ್ ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಭಾರತದ ಬಂಡವಾಳ ಮಾರುಕಟ್ಟೆಗಳ ಬಗ್ಗೆ ಅಪಾರ ಜ್ಞಾನ ಹೊಂದಿರುವ ಹೇಮೀಂದ್ರ ಹಜಾರಿ ಅವರು, ‘ಈಗಿರುವ ಹಣಕಾಸಿನ ವ್ಯವಸ್ಥೆಯಲ್ಲಿ, ಪ್ರವರ್ತಕರು ತಮಗೆ ನಂಟಿರುವ ಕಂಪನಿಗಳಿಗೆ ಸಾಲ ಕೊಡುವುದನ್ನು ಆರಂಭಿಕ ಹಂತದಲ್ಲಿ ಗುರುತಿಸಲು ಆರ್‌ಬಿಐಗೆ ಸಾಧ್ಯವಾಗಲಿಲ್ಲ. ಈ ರೀತಿಯ ಸಾಲಗಳಿಂದಾಗಿ ಐಎಲ್‌&ಎಫ್‌ಎಸ್‌, ಯೆಸ್ ಬ್ಯಾಂಕ್, ಪಿಎಂಸಿ ಬ್ಯಾಂಕ್, ಡಿಎಚ್‌ಎಫ್‌ಎಲ್‌ನಂತಹ ದೊಡ್ಡ ಸಂಸ್ಥೆಗಳು ತೊಂದರೆಗೆ ಸಿಲುಕಿದವು. ಹೀಗಿರುವಾಗ, ಹಣಕಾಸಿನ ವಹಿವಾಟುಗಳನ್ನು ಮರೆಮಾಚುವುದರಲ್ಲಿ ನಿಸ್ಸೀಮ ಆಗಿರುವ, ದೊಡ್ಡದಾದ ಹಾಗೂ ಸಂಕೀರ್ಣ ರಚನೆ ಹೊಂದಿರುವ ಕಾರ್ಪೊರೇಟ್‌ ಕಂಪನಿಗಳ ಮೇಲೆ ನಿಗಾ ಇಡಲು ಸಾಧ್ಯವೇ’ ಎಂದು ಪ್ರಶ್ನಿಸಿದ್ದಾರೆ. ವಿಶ್ಲೇಷಕ ಆ್ಯಂಡಿ ಮುಖರ್ಜಿ ಅವರು, ಬ್ಯಾಂಕ್‌ ಪ್ರವರ್ತಕ ಆಗುವ ಕಾರ್ಪೊರೇಟ್‌ ಕಂಪನಿಗಳು ತಮ್ಮ ಷೇರು ಪಾಲನ್ನು ದೀರ್ಘಾವಧಿಯಲ್ಲಿ ಶೇಕಡ 15ಕ್ಕೆ ಮಿತಿಗೊಳಿಸಿಕೊಳ್ಳಬೇಕು, ತಮ್ಮ ಸಮೂಹದ ಕಂಪನಿಗಳಿಗೆ ತಾವೇ ಸಾಲ ಕೊಟ್ಟುಕೊಳ್ಳುವ ಕೆಲಸ ಮಾಡಿದವರ ಮತದಾನದ ಹಕ್ಕುಗಳನ್ನು ಶೇಕಡ 5ಕ್ಕೆ ಇಳಿಸಬೇಕು ಎಂಬ ಸಲಹೆ ನೀಡಿದ್ದಾರೆ.

ಬೃಹತ್ ಕಾರ್ಪೊರೇಟ್‌ ಕಂಪನಿಗಳು ಬ್ಯಾಂಕ್‌ನ ಪ್ರವರ್ತಕ ಆಗುವುದು ಹಾಗೂ ಬ್ಯಾಂಕ್‌ಗಳ ಮಾಲೀಕತ್ವ ಹೊಂದುವ ವಿಚಾರದಲ್ಲಿ ಆರ್‌ಬಿಐ ತನ್ನ ಹಿಂದಿನ ತತ್ವವನ್ನು ಕೈಬಿಡುವುದು, ಬ್ಯಾಂಕಿಂಗ್‌ ನಿಯಂತ್ರಣ ಕಾಯ್ದೆ– 1949ಕ್ಕೆ ತಿದ್ದುಪಡಿ ತಂದು ಕಾರ್ಪೊರೇಟ್‌ ಕಂಪನಿಗಳು ಪ್ರವರ್ತಕ ಆಗಲು ಅವಕಾಶ ಕೊಡಬಹುದು ಎಂದು ಹೇಳುವುದು ಬ್ಯಾಂಕ್‌ಗಳ ರಾಷ್ಟ್ರೀಕರಣ ನಡೆದ ಕಾಲದಿಂದ ಕಾಪಿಟ್ಟುಕೊಂಡು ಬಂದಿರುವ ನಿಲುವಿನಿಂದ ದೂರ ಸರಿದಂತೆ ಆಗುತ್ತದೆ. ಆರಂಭದ ಹಂತಗಳಲ್ಲಿ ಒಳ್ಳೆಯವರಾಗಿದ್ದರೂ ನಂತರದ ಹಂತಗಳಲ್ಲಿ ನಿಧಾನವಾಗಿ ಲೂಟಿಕೋರರಂತೆ ವರ್ತಿಸಿದ, ತಮ್ಮಲ್ಲಿದ್ದ ಅಪಾರ ಶ್ರೀಮಂತಿಕೆ ಹಾಗೂ ರಾಜಕಾರಣಿಗಳ ಜೊತೆಗಿನ ಸಂಪರ್ಕದ ಕಾರಣದಿಂದಾಗಿ ಇನ್ನಷ್ಟು ಶ್ರೀಮಂತಿಕೆ ಹೊಂದಿದ ಹಾಗೂ ಸ್ಪರ್ಧೆಯನ್ನೇ ಹೊಸಕಿಹಾಕಿದ ಉದ್ಯಮಪತಿಗಳ ನಿದರ್ಶನಗಳು ಇತಿಹಾಸದಲ್ಲಿ ಹಲವಿವೆ. ಕಾರ್ಪೊರೇಟ್‌ ಕಂಪನಿಯೊಂದರ ಮಾಲೀಕತ್ವದಲ್ಲಿ ಇರುವ ಬ್ಯಾಂಕ್‌, ಆ ಕಂಪನಿಯ ಜೊತೆ ಮಾರುಕಟ್ಟೆಯಲ್ಲಿ ಸ್ಪರ್ಧಿಸುವವರಿಗೆ ಸಾಲ ಕೊಡುತ್ತದೆ ಎಂದು ಭಾವಿಸುವುದು ತೀರಾ ಮುಗ್ಧ ಕೆಲಸವಾದೀತು.

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಅದಕ್ಷವಾಗಿದ್ದಿರಬಹುದು. ಅವು ಕಾಳಜಿಯಿಂದ ಕೆಲಸ ಮಾಡುತ್ತಿಲ್ಲದಿರಬಹುದು. ಅಧಿಕಾರದಲ್ಲಿ ಇರುವ ರಾಜಕೀಯ ಪಕ್ಷದ ಪ್ರಭಾವಕ್ಕೆ ಒಳಗಾಗಿರಬಹುದು. ಆದರೆ, ವಾಣಿಜ್ಯೋದ್ಯಮ ಕ್ಷೇತ್ರದ ದೈತ್ಯರ ಮಾಲೀಕತ್ವದ ಖಾಸಗಿ ಬ್ಯಾಂಕುಗಳು ದುರಾಸೆಯ ಪ್ರವೃತ್ತಿಯನ್ನು ಹೊಂದಿರುತ್ತವೆ. ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳನ್ನು ಖಾಸಗೀಕರಣ ಮಾಡಿ, ಅವುಗಳ ಷೇರುಗಳನ್ನು ಸಾರ್ವಜನಿಕರಲ್ಲಿ ಹೆಚ್ಚಿನವರು ಹೊಂದುವಂತೆ ಮಾಡಬೇಕು. ಸರ್ಕಾರವು ಬ್ಯಾಂಕುಗಳ ಮಾಲೀಕತ್ವ ಹೊಂದುವುದನ್ನು ನಿಲ್ಲಿಸಬೇಕು. ಬ್ಯಾಂಕುಗಳನ್ನು ವೃತ್ತಿಪರರು ಮುನ್ನಡೆಸಬೇಕು. ಬ್ಯಾಂಕಿನ ಸಂಪತ್ತು ಇನ್ನಷ್ಟು ವಿಸ್ತೃತವಾಗಿ ಹಂಚಿಕೆಯಾಗಬೇಕು. ಬ್ಯಾಂಕುಗಳು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಹಾಗೂ ಆರ್‌ಬಿಐ ನಿಯಂತ್ರಣಕ್ಕೆ ಒಳಪಡಬೇಕು.

ಮಹಾಭಾರತದಲ್ಲಿ ಧರ್ಮರಾಯನೇ ತನ್ನ ಹೆಂಡತಿಯನ್ನು, ಕುಟುಂಬದ ಸದಸ್ಯರನ್ನು, ಇಡೀ ಸಾಮ್ರಾಜ್ಯವನ್ನು ಜೂಜಿನಲ್ಲಿ ಪಣಕ್ಕೆ ಒಡ್ಡಿದ್ದ ನಿದರ್ಶನ ಇರುವಾಗ, ಆಧುನಿಕ ಯುಗದ ವಾಣಿಜ್ಯೋದ್ಯಮ ಲೋಕದ ಮಹಾರಾಜರಿಂದ ಸದ್ಗುಣಗಳನ್ನು ಮಾತ್ರ ನಿರೀಕ್ಷಿಸುವುದು ಹೇಗೆ?!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT