ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ತಣಿಯದ ತಾಳೆ ಎಣ್ಣೆಯ ದಾಹ

ಖಾದ್ಯತೈಲ ಉತ್ಪಾದನೆಯಲ್ಲಿ ಸ್ವಾವಲಂಬನೆಯೆಡೆಗೆ ನಡೆಯುವುದು ಭಾರತಕ್ಕೆ ಅಂಥಾ ಕಷ್ಟವೇನಲ್ಲ
Last Updated 6 ಸೆಪ್ಟೆಂಬರ್ 2021, 4:02 IST
ಅಕ್ಷರ ಗಾತ್ರ

ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 15ರಂದು ಎಣ್ಣೆ ತಾಳೆ ಬೇಸಾಯಕ್ಕೆ ₹ 11 ಸಾವಿರ ಕೋಟಿ ಪ್ರೋತ್ಸಾಹಧನವನ್ನು ಘೋಷಿಸಿ, 6.5 ಲಕ್ಷ ಹೆಕ್ಟೇರ್ ಭೂಮಿಯನ್ನು ಈ ಬೇಸಾಯದಡಿ ತರಲು ಉದ್ದೇಶಿಸಿ ರುವುದಾಗಿ ತಿಳಿಸಿದರು. ಮುಂದಿನ 15 ವರ್ಷಗಳಲ್ಲಿ ತಾಳೆ ಎಣ್ಣೆಯ ಉತ್ಪಾದನೆಯನ್ನು ದ್ವಿಗುಣಗೊಳಿಸುವ ಇಂಗಿತವನ್ನು ವ್ಯಕ್ತಪಡಿಸಿದರು. ಸದ್ಯ ಭಾರತವು ತನ್ನ ಅಗತ್ಯದ ಖಾದ್ಯತೈಲದ ಶೇ 60ರಷ್ಟನ್ನು ಆಮದು ಮಾಡಿಕೊಳ್ಳುತ್ತಿದ್ದು, ಇದರಲ್ಲಿ ಶೇ 40ರಷ್ಟು ತಾಳೆ ಎಣ್ಣೆಯಾಗಿದೆ.

ಭಾರತ ಪ್ರಪಂಚದಲ್ಲೇ ಅತಿಹೆಚ್ಚು ತಾಳೆ ಎಣ್ಣೆ ಬಳಕೆ ಮಾಡುತ್ತಿದ್ದು, ಇಂಡೊನೇಷ್ಯಾ ಮತ್ತು ಮಲೇಷ್ಯಾದಿಂದ ವರ್ಷಕ್ಕೆ 1.84 ಕೋಟಿ ಟನ್ ಆಮದು ಮಾಡಿಕೊಳ್ಳುತ್ತದೆ. ಸದ್ಯದ ಬಳಕೆಯ ಪ್ರಮಾಣದಲ್ಲಿ ಭಾರತಕ್ಕೆ 2.5 ಕೋಟಿ ಟನ್ ಖಾದ್ಯತೈಲದ ಅವಶ್ಯಕತೆ ಇದ್ದು, 1.5 ಕೋಟಿ ಟನ್ ಮಾತ್ರ ನಮ್ಮಲ್ಲಿ ಉತ್ಪಾದನೆಯಾಗುತ್ತಿದೆ. ಇದು ಮುಖ್ಯವಾಗಿ ಎಣ್ಣೆ ಕಾಳುಗಳಿಂದ ಬರುತ್ತಿದೆ.

ಪ್ರಪಂಚದಲ್ಲೇ ಅತ್ಯಂತ ಜನಪ್ರಿಯವಾಗಿರುವ ತಾಳೆ ಎಣ್ಣೆ ಸದ್ಯ ಜಾಗತಿಕ ಮಾರುಕಟ್ಟೆಯಲ್ಲಿ 7.7 ಕೋಟಿ ಟನ್ ಲಭ್ಯವಿದ್ದು, 2024ರ ವೇಳೆಗೆ 10.76 ಕೋಟಿ ಟನ್‍ನ ನಿರೀಕ್ಷೆ ಹೊಂದಲಾಗಿದೆ. ಇದರ ಶೇ 68ರಷ್ಟು ‍ಪಾಲು ಆಹಾರದಲ್ಲಿ, ಶೇ 25ರಷ್ಟು ಕೈಗಾರಿಕೆಯಲ್ಲಿ ಮತ್ತು ಶೇ 5ರಷ್ಟು ಜೈವಿಕ ಇಂಧನದಲ್ಲಿ ಬಳಕೆಯಾಗುತ್ತದೆ. ತಾಳೆ ಎಣ್ಣೆಯ ವಿಶಿಷ್ಟ ಗುಣಗಳಿಂದ ಅದನ್ನು ಅಲಂಕಾರ ಸಾಮಗ್ರಿ, ಸಿದ್ಧ ಆಹಾರ ಮತ್ತು ಡಿಟರ್ಜೆಂಟ್ ಕೈಗಾರಿಕೆಗಳಲ್ಲಿ ವ್ಯಾಪಕವಾಗಿ ಬಳಸುತ್ತಾರೆ. ಜೈವಿಕ ಇಂಧನದಲ್ಲಿ ಇದರ ಬೇಡಿಕೆ ಅಧಿಕವಾಗಿದೆ.

ಇದರ ಹೆಕ್ಟೇರ್‌ವಾರು ಉತ್ಪಾದನೆಯು ಎಣ್ಣೆಕಾಳು ಗಳಿಗಿಂತ ಹತ್ತು ಪಟ್ಟು ಹೆಚ್ಚು. ಅಗ್ಗವಾಗಿ ದೊರಕುವ ‘ಸರ್ವಗುಣ ಸಂಪನ್ನ’ ತಾಳೆ ಎಣ್ಣೆಗೆ ಜಾಗತಿಕ ಬೇಡಿಕೆ ಗಗನಕ್ಕೇರಿ ಆಮದು ಸುಂಕವನ್ನು ಕನಿಷ್ಠಗೊಳಿಸಿದ್ದರಿಂದ, ಕೆಲ ಉಷ್ಣವಲಯದ ದೇಶಗಳು ಇದರ ಬೇಸಾಯಕ್ಕೆ ಮುಗಿಬಿದ್ದವು.

ಎಣ್ಣೆ ತಾಳೆಯು ಭೂಮಧ್ಯ ರೇಖೆಯ 20 ಡಿಗ್ರಿ ಒಳಗಡೆ ಬರುವ ಪ್ರದೇಶದಲ್ಲಷ್ಟೇ ಬೆಳೆಯುತ್ತದೆ. ದುರಂತವೆಂದರೆ, ಇಲ್ಲಿ ಸರ್ವಶ್ರೇಷ್ಠ ಮಳೆಕಾಡುಗಳಿದ್ದು ಪ್ರಪಂಚದ ಶೇ 80ರಷ್ಟು ಜೀವವೈವಿಧ್ಯವನ್ನು ಹೊಂದಿವೆ. ಪ್ರಪಂಚದ ತಾಳೆ ಎಣ್ಣೆಯ ಶೇ 80ರಷ್ಟು ಉತ್ಪಾದನೆ ಮಾಡಿ ರಫ್ತು ಮಾಡುತ್ತಿರುವ ಇಂಡೊನೇಷ್ಯಾ ಮತ್ತು ಮಲೇಷ್ಯಾ, ಎಣ್ಣೆ ತಾಳೆ ಬೇಸಾಯಕ್ಕೆ ತಮ್ಮ ಅಮೂಲ್ಯ ಮಳೆಕಾಡಿನ ಅರ್ಧ ಭಾಗವನ್ನು ಈಗಾಗಲೇ ಕಳೆದುಕೊಂಡಿವೆ. ಇಂಡೊನೇಷ್ಯಾದಲ್ಲಿ 2002ರಿಂದ 2020ರವರೆಗೆ ಸುಮಾರು 92.69 ಲಕ್ಷ ಹೆಕ್ಟೇರ್ ಮತ್ತು ಮಲೇಷ್ಯಾದಲ್ಲಿ ಶೇ 47ರಷ್ಟು ಕಾಡಿನ ನಾಶವಾಗಿದೆ. ಅರಣ್ಯವನ್ನು ನಂಬಿ ಬದುಕುವ ಜನರ ಬದುಕು ಮೂರಾಬಟ್ಟೆಯಾಗಿದೆ. ರೈತರು ಎಣೆಯಿಲ್ಲದ ಸಂಕಷ್ಟಕ್ಕೊಳಗಾಗಿದ್ದಾರೆ. ಇಷ್ಟಿದ್ದೂ ತಾಳೆ ಎಣ್ಣೆಗೆ ಮಾತ್ರ ಜಾಗತಿಕ ಬೇಡಿಕೆ ಹೆಚ್ಚುತ್ತಲೇ ಇದೆ. ಬಡ ದೇಶಗಳಲ್ಲಿ ಖಾದ್ಯತೈಲ ಮತ್ತು ಶ್ರೀಮಂತ ದೇಶಗಳಲ್ಲಿ ವಿವಿಧ ಕೈಗಾರಿಕೆಗಳಿಗೆ ಇದೇ ಮುಖ್ಯ ಆಧಾರವಾಗಿದೆ.

ಭಾರತದಲ್ಲಿ ತಾಳೆ ಎಣ್ಣೆ ಉತ್ಪಾದನೆ ಹೆಚ್ಚಿಸಲು ಕೇಂದ್ರ ಸರ್ಕಾರ 2014- 15ರಲ್ಲಿ ‘ನ್ಯಾಷನಲ್ ಮಿಷನ್ ಆನ್ ಆಯಿಲ್‌ಸೀಡ್ಸ್‌ ಆ್ಯಂಡ್ ಆಯಿಲ್‌ ಪಾಮ್’ (NMOOP) ಸ್ಥಾಪಿಸಿ 2018-19ರಲ್ಲಿ ಅದನ್ನು ‘ರಾಷ್ಟ್ರೀಯ ಆಹಾರ ಭದ್ರತಾ ಮಿಷನ್’ ಜೊತೆ ವಿಲೀನಗೊಳಿಸಿತು. 2019ರಲ್ಲಿ ಕೇಂದ್ರ ಕೃಷಿ ಸಚಿವರು, ದೇಶದ 19 ರಾಜ್ಯಗಳ 19.30 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಎಣ್ಣೆ ತಾಳೆ ಬೆಳೆಯುತ್ತಿದ್ದು, ಕಳೆದ ಐದು ವರ್ಷಗಳಲ್ಲಿ ತಾಳೆ ಎಣ್ಣೆ ಉತ್ಪಾದನೆಶೇ 45ರಷ್ಟು ಹೆಚ್ಚಾಗಿರುವುದಾಗಿ ಘೋಷಿಸಿದರು. ಆದರೆ ವಾಸ್ತವದಲ್ಲಿ ಎಣ್ಣೆ ತಾಳೆ ಬೆಳೆಯುತ್ತಿದ್ದದ್ದು 16 ರಾಜ್ಯಗಳ 3.49 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮತ್ತು ಅದರಲ್ಲಿ ಫಸಲು ಕೊಡುತ್ತಿದ್ದ ಪ್ರದೇಶ 8 ರಾಜ್ಯಗಳ 1.35 ಲಕ್ಷ ಹೆಕ್ಟೇರ್ ಮಾತ್ರ.

ದೇಶದಲ್ಲಿ ಎಣ್ಣೆ ತಾಳೆ ಬೇಸಾಯ ನೆಲ ಕಚ್ಚಿರುವು ದನ್ನು ಸಚಿವರು ಮರೆಮಾಚಿದ್ದರು. ನೆಲಕಚ್ಚಲು ಕಾರಣ ಗಳೂ ಸ್ಪಷ್ಟವಾಗಿದ್ದವು. ಎಣ್ಣೆ ತಾಳೆ ಫಸಲು ಕೊಡಲು ಏಳು ವರ್ಷ ಬೇಕು. ಆ ಅವಧಿಯಲ್ಲಿ ರೈತರಿಗೆ ಆದಾಯ ಶೂನ್ಯ. ಮುಂದೆ ಇಳುವರಿ ಖಾತರಿ ಇಲ್ಲ. ಛತ್ತೀಸಗಡದಲ್ಲಿ ಅರ್ಧಕ್ಕರ್ಧ ಮರಗಳು ಫಲವನ್ನೇ ಕೊಡಲಿಲ್ಲ. ಕರ್ನಾಟಕ ದಲ್ಲಿ ಹಣ್ಣಿನ ಇಳುವರಿ ಮತ್ತು ಕಚ್ಚಾ ಎಣ್ಣೆ ಪ್ರಮಾಣ ತೀರಾ ಕಡಿಮೆ. ಸಮತಟ್ಟು ಭೂಮಿ, ಅಧಿಕ ಗೊಬ್ಬರ ಬೇಡುವ ಈ ಬೆಳೆಗೆ ಗಿಡವೊಂದಕ್ಕೆ ದಿನಕ್ಕೆ 300 ಲೀಟರ್ ನೀರು ಬೇಕು. ಕೀಟರೋಗ ಬಾಧೆಗೆ ಮಿತಿಯಿಲ್ಲದೆ ರಾಸಾಯನಿಕ ಸಿಂಪಡಣೆ. ಸ್ವತಂತ್ರ ಮಾರುಕಟ್ಟೆ ಇಲ್ಲದ ಇದನ್ನು ಸಸಿ ಕೊಟ್ಟ ಕಂಪನಿಗೇ ಮಾರಬೇಕು.

ಮೂರು ವರ್ಷದಲ್ಲಿ ಸ್ಥಳೀಯವಾಗಿ ಸಂಸ್ಕರಣಾ ಘಟಕ ತೆಗೆಯುವ ಆಶ್ವಾಸನೆಯೊಂದಿಗೆ ರೈತರಿಗೆ ಸಸಿ ಕೊಡುವ ಕಂಪನಿಗಳು ಫಸಲು ಕೈಗೆ ಬಂದರೂ ಸುಳಿವೇ ಇರುವುದಿಲ್ಲ. ರೈತರು ಬಹುದೂರ ಸಾಗಣೆ ಮಾಡಿ ತಲುಪಿಸುವ ವೇಳೆಗೆ ಹಣ್ಣು ಗುಣಮಟ್ಟ ಕಳೆದುಕೊಂಡು ತಿರಸ್ಕೃತವಾಗುವುದೇ ಹೆಚ್ಚು. ಎಣ್ಣೆ ತಾಳೆಯ ಕಟಾವು, ನಾಟಿ ಮತ್ತು ಸಂಸ್ಕರಣೆಗಳಲ್ಲಿ ಬೃಹತ್ ತ್ಯಾಜ್ಯ ಉತ್ಪತ್ತಿ ಯಾಗುತ್ತಿದ್ದು, ಇದುವರೆಗೂ ಅದರ ಶೇ 10ರಷ್ಟು ಮಾತ್ರ ಕೈಗಾರಿಕಾ ಕಚ್ಚಾ ವಸ್ತುವಾಗಿ ಬಳಕೆಯಾಗುತ್ತಿದೆ. ಎಣ್ಣೆ ತಾಳೆ ಬೇಸಾಯದಲ್ಲಿ ಉತ್ಸಾಹದಿಂದ ತೊಡಗಿ ಕೊಂಡ ಆಂಧ್ರಪ್ರದೇಶ, ಛತ್ತೀಸಗಡದ ಹೆಚ್ಚಿನ ರೈತರು ಫಲ ಕೊಡುವ ಮುನ್ನವೇ ಬೆಳೆ ನಾಶಪಡಿಸಿದ್ದಾರೆ. ಕರ್ನಾಟಕದಲ್ಲಿ ‘ಬಂಗಾರದ ಬೆಳೆ’ ಎಂದು ರೈತರನ್ನು ಆಕರ್ಷಿಸಿ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರನ್ನು ನೆಲಕಚ್ಚಿಸಿದ ದುರಂತ ನಮ್ಮ ಕಣ್ಣಮುಂದಿದೆ. ಆರು ಈಶಾನ್ಯ ರಾಜ್ಯಗಳಲ್ಲಿ 2.18 ಲಕ್ಷ ಹೆಕ್ಟೇರ್ ಪ್ರದೇಶವನ್ನು ಸರ್ಕಾರ ಎಣ್ಣೆ ತಾಳೆ ಬೇಸಾಯಕ್ಕೆ ಗುರುತಿಸಿದ್ದರೂ ಯಾವ ರಾಜ್ಯವೂ ಹೆಚ್ಚಿನ ಆಸಕ್ತಿ ತೋರಲಿಲ್ಲ.

ಹೀಗಿದ್ದೂ ಕೇಂದ್ರ ಸರ್ಕಾರ ಈಗ ರೈತರಿಗೆ ಆರ್ಥಿಕ ಬೆಂಬಲ ಘೋಷಿಸಿ, ನರ್ಸರಿ ಮತ್ತು ಎಣ್ಣೆ ಸಂಸ್ಕರಣಾ ಮಿಲ್‍ಗಳನ್ನು ಸ್ಥಾಪಿಸಲು ಖಾಸಗಿ ಕಂಪನಿ ಗಳನ್ನು ಆಹ್ವಾನಿಸಿದೆ. ಅದಾನಿ ಮತ್ತು ಪತಂಜಲಿ ಕಂಪನಿಗಳು ಇದರಲ್ಲಿ ತೀವ್ರ ಆಸಕ್ತಿ ತೋರಿ, ವಿವಿಧ ರಾಜ್ಯ ಸರ್ಕಾರಗಳ ಜೊತೆ ಒಪ್ಪಂದಕ್ಕೆ ಸಹಿ ಹಾಕಿವೆ. ಕಾಡು ನಾಶಪಡಿಸದೆ ಎಣ್ಣೆ ತಾಳೆ ಬೇಸಾಯ ಮಾಡ ಬೇಕಾದರೆ, ಉತ್ಪತ್ತಿ ಕಳೆದುಕೊಂಡಿರುವ ಭತ್ತದ ಗದ್ದೆ ಗಳನ್ನು ಮತ್ತು ಕಾಡಂಚಿನಲ್ಲಿ ಗಿರಿಜನರು ಬೇಸಾಯ ಮಾಡುವ ಭೂಮಿಯನ್ನು ಬಳಸಬಹುದು ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಡಾ. ಉಮೇಶ್ ಶ್ರೀನಿವಾಸನ್ ಶಿಫಾರಸು ಮಾಡಿದ್ದಾರೆ! ಪಟ್ಟಣ ಸೇರಿದ ಜಮೀನುದಾರರ ಬೀಳು ಭೂಮಿಗಳನ್ನು ಬಳಸಿಕೊಳ್ಳುವುದಾಗಿ ಆಂಧ್ರಪ್ರದೇಶ ಸರ್ಕಾರ ಹೇಳಿದೆ. ಇದೀಗ ಭಾರತೀಯ ಕೃಷಿ ಅನುಸಂಧಾನ ಪರಿಷತ್ (ಐಸಿಎಆರ್) ಅಂಡಮಾನ್- ನಿಕೊಬಾರ್‌ಗೆ ದೌಡಾಯಿಸಿ, ಅಲ್ಲಿ ಎಣ್ಣೆ ತಾಳೆ ಬೇಸಾಯಕ್ಕೆ ಇರುವ ಅವಕಾಶಗಳನ್ನು ಶೋಧಿ ಸುತ್ತಿದೆ. ಒಟ್ಟಿನಲ್ಲಿ ಇವೆಲ್ಲಾ ಪ್ರಹಸನದಂತೆ ಕಾಣುತ್ತಿವೆ.

ಖಾದ್ಯತೈಲ ಉತ್ಪಾದನೆಯಲ್ಲಿ ಸ್ವಾವಲಂಬನೆಯೆಡೆಗೆ ನಡೆಯುವುದು ಭಾರತಕ್ಕೆ ಅಂತಹ ಕಷ್ಟವೇನಲ್ಲ. ನಮ್ಮಲ್ಲಿ ಶೇ 70ಕ್ಕೂ ಹೆಚ್ಚಿರುವ ಮಳೆಯಾಶ್ರಿತ ಪ್ರದೇಶಕ್ಕೆ ಎಣ್ಣೆ ಕಾಳುಗಳು ಹೇಳಿ ಮಾಡಿಸಿದ ಬೆಳೆಗಳು. 1990ರ ದಶಕದಲ್ಲಿ ‘ಹಳದಿ ಕ್ರಾಂತಿ’ಯ ಮೂಲಕ ದೇಶದಲ್ಲಿ ಎಣ್ಣೆ ಕಾಳುಗಳ ಉತ್ಪಾದನೆಯನ್ನು ಹೆಚ್ಚು ಮಾಡಲು ಪ್ರಯತ್ನಿಸಿದರೂ, ವಿಶ್ವ ವ್ಯಾಪಾರ ಸಂಘಟನೆಯ (ಡಬ್ಲ್ಯುಟಿಒ) ನಿಬಂಧನೆಗಳಿಂದಾಗಿ ಯಶಸ್ಸು ಕಾಣಲಾಗಲಿಲ್ಲ. ಭಾರತ ತನ್ನ ಎಣ್ಣೆಕಾಳು ಬೆಳೆಗಾರರಿಗೆ ಕೊಡುವ (ಅಲ್ಪ) ಸಬ್ಸಿಡಿಯ ಮೇಲೆ ಸದಸ್ಯ ದೇಶಗಳ ಕೆಂಗಣ್ಣು.

ಎಣ್ಣೆಕಾಳು ಫಸಲಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ, ಹೆಚ್ಚು ರಾಸಾಯನಿಕ ಬಳಸದೇ ಉತ್ಪಾದನೆ ಹೆಚ್ಚಳಕ್ಕೆ ಅಗತ್ಯವಾದ ಮಾರ್ಗೋಪಾಯಗಳನ್ನು ಕಂಡುಕೊಂಡರೆ, ದೇಶವು ಖಾದ್ಯತೈಲ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವುದು ಅಸಾಧ್ಯವೇನಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT