ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ.ಎನ್‌.ವಾಸುದೇವಮೂರ್ತಿ ಲೇಖನ: ಅಂತರಂಗ ಕಲಕುವ ಕ್ಷಮಾತತ್ವ

ಕರ್ಮಭಯ ಮತ್ತು ದೈವಭಯ ಎರಡನ್ನೂ ನಿರಸನಗೊಳಿಸಿ ಪ್ರೀತಿ ಹಂಚಿದ ಯೇಸು
Last Updated 24 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ
ಟಿ.ಎನ್‌.ವಾಸುದೇವಮೂರ್ತಿ ಲೇಖನ: ಅಂತರಂಗ ಕಲಕುವ ಕ್ಷಮಾತತ್ವ
ADVERTISEMENT
""

ಬೈಬಲ್ಲಿನಲ್ಲಿ ಹೀಗೊಂದು ಪ್ರಸಂಗವಿದೆ: ಒಮ್ಮೆ ಒಬ್ಬ ವೇಶ್ಯೆ, ಯಹೂದಿ ಪುರೋಹಿತನೊಬ್ಬನ ಮನೆಗೆ ದಯಮಾಡಿಸಿದ್ದ ಯೇಸುವಿನ ದರ್ಶನ ಪಡೆಯಲೆಂದು ಅಲ್ಲಿಗೆ ಬಂದಳು. ತನ್ನ ಕಣ್ಣೀರಿನಿಂದಲೇ ಯೇಸುವಿನ ಪಾದಗಳನ್ನು ತೊಳೆದು, ತಲೆಗೂದಲಿನಿಂದ ಅವನ ಕಾಲುಗಳನ್ನು ಒರೆಸಿದಳು. ಬಳಿಕ ಅವನ ಪಾದಗಳನ್ನು ಚುಂಬಿಸಿ, ತಾನು ತಂದಿದ್ದ ಸುಗಂಧದ್ರವ್ಯವನ್ನು ಅವನ ಪಾದಗಳಿಗೆ ಲೇಪಿಸಿದಳು. ಯೇಸು ಬಹಳ ಪ್ರೀತ್ಯಾದರಗಳಿಂದ ಅವಳನ್ನು ಅನುಗ್ರಹಿಸಿದ. ಅವನನ್ನು ಆಹ್ವಾನಿಸಿದ್ದ ಪುರೋಹಿತನಿಗೆ ಯೇಸುವಿನ ಈ ನಡೆ ಅರ್ಥವಾಗಲಿಲ್ಲ.

‘ಇವನು ನಿಜವಾಗಿಯೂ ಪ್ರವಾದಿಯೇ ಆಗಿದ್ದರೆ ಇವಳು ಯಾವ ತರಹದ ಹೆಂಗಸು ಎಂದು ತಕ್ಷಣವೇ ಇವನಿಗೆ ತಿಳಿಯಬೇಕಿತ್ತು’ ಎಂದು ತನ್ನಲ್ಲೇ ಅನುಮಾನಿಸಿದ. ಸೂಕ್ಷ್ಮಜ್ಞನಾದ ಯೇಸುವಿಗೆ ಆ ಪುರೋಹಿತನ ಮನದ ಆಲೋಚನೆ ಅರ್ಥವಾಯಿತು. ಯೇಸು ಅವನಿಗೊಂದು ಕತೆ ಹೇಳಿದ (ಯೇಸು ತನ್ನ ಬಹುತೇಕ ಉಪದೇಶಗಳನ್ನು ಕತೆ, ದೃಷ್ಟಾಂತಗಳ ಮೂಲಕವೇ ನುಡಿಯುತ್ತಿದ್ದುದು). ‘ಸೈಮನ್, ನಾನು ನಿನಗೆ ಒಂದು ಮಾತು ಕೇಳಬೇಕು. ಒಬ್ಬ ಸಾಲಗಾರನಿಂದ ಇಬ್ಬರು ಸಾಲ ಪಡೆದಿದ್ದರು. ಒಬ್ಬ ಐದುನೂರು ನಾಣ್ಯಗಳನ್ನು ಹಿಂದಿರುಗಿಸಿದರೆ ಮತ್ತೊಬ್ಬ ಕೇವಲ ಐದು ನಾಣ್ಯಗಳನ್ನು ಹಿಂದಿರುಗಿಸಿದ್ದ. ಆ ಸಾಲಗಾರ ಇಬ್ಬರ ಸಾಲವನ್ನೂ ವಜಾ ಮಾಡಿದ. ಈಗ ಹೇಳು, ಯಾರು ಅವನಿಗೆ ಹೆಚ್ಚು ಕೃತಜ್ಞರಾಗಿರುತ್ತಾರೆ?’

ಸೈಮನ್ ‘ನನಗನ್ನಿಸುತ್ತದೆ, ಯಾರು ಹೆಚ್ಚು ಸಾಲ ಪಡೆದಿದ್ದನೋ ಅವನು ಹೆಚ್ಚು ಕೃತಜ್ಞನಾಗಿದ್ದ’. ಆಗ ಯೇಸು ‘ನೀನು ಸರಿಯಾಗಿಯೇ ತೀರ್ಮಾನಿಸಿರುವೆ. ಅವಳು ಹೆಚ್ಚು ಪಾಪಿಯಾದ ಕಾರಣ ಅವಳನ್ನು ಕ್ಷಮಿಸಲಾಗಿದೆ. ಆದ್ದರಿಂದ ಅವಳು ಹೆಚ್ಚು ಕೃತಜ್ಞಳಾಗಿದ್ದಾಳೆ’ ಎಂದಿದ್ದ. ಯೇಸುವಿನ ಮಾತುಗಳಿಂದ ಆ ಪುರೋಹಿತನಿಗೆ ಜ್ಞಾನೋದಯವಾಯಿತೋ ಇಲ್ಲವೋ ತಿಳಿಯದು. ಆದರೆ ಯೇಸುವಿನ ಕ್ಷಮೆಗೆ ಪಾತ್ರಳಾದ ಮೇರಿ ಮ್ಯಾಗ್ದಲೀನ್ ಅಂದಿನಿಂದ ಪವಿತ್ರಾತ್ಮಳೆನಿಸಿದಳು. ಯೇಸುವಿನ ಅಂತರಂಗದ ಶಿಷ್ಯೆಯಾದಳು.

ಕ್ರಿಸ್ತನ ಬೋಧನೆಗಳಲ್ಲಿ ಕ್ಷಮಾತತ್ವಕ್ಕೆ ವಿಶೇಷ ಮಹತ್ವವಿದೆ. ಅವನು ತನ್ನನ್ನು ಶಿಲುಬೆಗೇರಿಸಿದವರನ್ನೂ ಮನ್ನಿಸಿದ್ದ. ಯೇಸುವಿನ ಈ ಕ್ಷಮಾಗುಣ ಮೃದು ಹೃದಯಿಯೊಬ್ಬನ ಉದಾರತನವಲ್ಲ. ಅವನ ಕ್ಷಮಾತತ್ವಕ್ಕೆ ಒಂದು ದೃಢವಾದ ತಾತ್ವಿಕ ತಳಹದಿ ಇದೆ.

ಪೂರ್ವದೇಶದ ಪ್ರಾಚೀನ ಧರ್ಮಗಳಲ್ಲಿ ಕ್ಷಮಾತತ್ವಕ್ಕೆ ಹೆಚ್ಚಿನ ಮಹತ್ವವಿಲ್ಲ. ಅವು ಕ್ಷಮಾತತ್ವಕ್ಕಿಂತ ಕರ್ಮತತ್ವವನ್ನು ಹಿರಿದಾಗಿ ಭಾವಿಸುತ್ತವೆ. ನಮ್ಮ ದಾರ್ಶನಿಕ ಧಾರೆಗಳು ಪರಸ್ಪರ ಅದೆಷ್ಟೇ ವಾಗ್ವಾದ ನಡೆಸಿದರೂ ಕರ್ಮತತ್ವವನ್ನು ಮಾತ್ರ ಏಕಕಂಠದಿಂದ ಪ್ರತಿಪಾದಿಸುತ್ತವೆ. ವೈದಿಕ, ಅವೈದಿಕ, ಬೌದ್ಧ, ಜೈನ ಅಷ್ಟೇ ಅಲ್ಲ ನಮ್ಮ ಜನಪದರೂ ಕರ್ಮಸಿದ್ಧಾಂತವನ್ನು ಎತ್ತಿ ಹಿಡಿಯುತ್ತಾರೆ.

ಭೀಷ್ಮನು ರಸ್ತೆಯಲ್ಲಿ ತನ್ನ ಪಾಡಿಗೆ ತಾನು ಹೋಗುತ್ತಿದ್ದ ಒಂದು ಓತಿಗೆ ಹಿಂಸೆ ಮಾಡಿದ್ದನಂತೆ. ಆ ಕರ್ಮದ ಫಲವಾಗಿ ಅವನು ಶರಶಯ್ಯೆಯಲ್ಲಿ ಮಲಗಬೇಕಾಯಿತು ಎಂದು ಜನಪದ ಮಹಾಭಾರತ ಹೇಳುತ್ತದೆ.

ಇಲ್ಲಿ ದೇವಾನುದೇವತೆಗಳಿಗೂ ಕರ್ಮ ವಿಪಾಕದಿಂದ ಬಿಡುಗಡೆ ಇಲ್ಲ. ನಮ್ಮಲ್ಲಿ ಕರ್ಮಸಿದ್ಧಾಂತ ಬಹಳ ವೈಜ್ಞಾನಿಕವಾದುದು ಎಂದು ವಾದಿಸುವ ವಿದ್ವಾಂಸರುಗಳುಂಟು. ಆದರೆ ಒಂದು ಸಿದ್ಧಾಂತ ಅದೆಷ್ಟೇ ವೈಜ್ಞಾನಿಕವಾದುದಿರಲಿ ಕಾಲಾಂತರದಲ್ಲಿ ಅದು ಅಪ್ರಸ್ತುತವಾಗುತ್ತದೆ. ಅಲ್ಲದೆ ತೆರಣಿಯ ಹುಳು ತನ್ನ ಸ್ನೇಹದಲ್ಲೇ ಸಿಲುಕಿ ಸಾಯುವಂತೆ ವಿಮೋಚನೆಗಾಗಿ ಕರ್ಮಕ್ಕೆ ತೊಡಗಿದಾಗಲೂ ಕರ್ಮಸಂಚಯವೇ ಆಗುತ್ತದಲ್ಲ! ಹೀಗೆ ಕರ್ಮಸಿದ್ಧಾಂತ ಒಂದು ವಿಷಮ ಚಕ್ರವಾಗಿದೆ.

ಇದು ಕ್ರಮೇಣ ಭಾರತದಲ್ಲಿ ತನ್ನ ಪ್ರಸ್ತುತತೆಯನ್ನು ಕಳೆದುಕೊಂಡಿತು. ಕರ್ಮಸಿದ್ಧಾಂತದಿಂದ ಭಾರತದ ಸಮಾಜ, ಧರ್ಮಗಳು ತಮ್ಮ ಚಲನಶೀಲತೆ, ಪರಿವರ್ತನಶೀಲತೆಗಳನ್ನು ಕಳೆದುಕೊಂಡವು. ಇನ್ನು ಪಶ್ಚಿಮದ ಯಹೂದಿ ಪರಂಪರೆಯು ದೈವಭೀರುತ್ವವನ್ನುಎತ್ತಿಹಿಡಿದಿತ್ತು. ದೇವರು ತನ್ನನ್ನು ನಿರಾಕರಿಸುವವರನ್ನು ಕಠಿಣವಾಗಿ ಶಿಕ್ಷಿಸುತ್ತಾನೆ, ಅವನಿಗೆ ಹೆದರಿ ಬಾಳ್ವೆ ಮಾಡಬೇಕು ಎಂದು ಯಹೂದಿ ಧರ್ಮ ಬೋಧಿಸುತ್ತಿತ್ತು. ಭಯಭೀತನಾದವನು ಮತ್ತಷ್ಟು ಬಂದಿಯಾಗುವನೇ ವಿನಾ ವಿಮೋಚನೆಯತ್ತ ಮುಖ ಮಾಡುವುದಿಲ್ಲ.

ಹೀಗೆ ಪೂರ್ವದ ಜನ ಕರ್ಮಭಯದಲ್ಲೂ ಪಶ್ಚಿಮದವರು ದೈವಭಯದಲ್ಲೂ ಸಿಲುಕಿದ್ದ ಸನ್ನಿವೇಶದಲ್ಲಿ ಯೇಸು ಅವತರಿಸಿದ. ಭಯ, ತಲ್ಲಣಗಳನ್ನು ಹೋಗಲಾಡಿಸಿ ಪ್ರೀತಿ, ನಿರ್ಭೀತಿಗಳನ್ನು ಬೋಧಿಸಿದ. ‘ಮೋಸೆಸ್‌ ನಿಮಗೆ ನೀತಿ ನಿಯಮಗಳನ್ನು ನೀಡಿದ್ದ. ನಾನಾದರೂ ಪ್ರೇಮವನ್ನು ನೀಡಲು ಬಂದಿದ್ದೇನೆ. ನಾನು ಪುರಾತನರ ನಿಯಮಗಳನ್ನು ಭಗ್ನಗೊಳಿಸಲು ಬಂದವನಲ್ಲ, ಪೂರ್ಣಗೊಳಿಸಲು ಬಂದವನು’ (ಮ್ಯಾಥ್ಯೂ 5:17) ಎಂದು ಸಾರಿದ. ಒಬ್ಬ ವ್ಯಕ್ತಿ ಅದೆಷ್ಟೇ ಪಾಪಿಯಾಗಿರಲಿ, ಶ್ರದ್ಧಾಪೂರ್ವಕವಾಗಿ ಭಗವಂತನಲ್ಲಿ ಮೊರೆಯಿಟ್ಟಾಗ ಅವನ ಸಮಸ್ತ ಪಾಪಗಳೂ ಕ್ಷಣಾರ್ಧದಲ್ಲಿ ಲಯವಾಗುತ್ತವೆ, ಅವನು ಪವಿತ್ರಾತ್ಮನಾಗುತ್ತಾನೆ ಎಂದು ಉಪದೇಶಿಸಿದ. ಇದು ಕರ್ಮಸಿದ್ಧಾಂತ ಹಾಗೂ ದೈವಭೀರುತ್ವ ಎರಡೂ ತತ್ವಗಳ ಬೇರುಗಳನ್ನು ಏಕಕಾಲಕ್ಕೆ ಕತ್ತರಿಸುವಂತಹ ಉಪದೇಶವಾಗಿದೆ.

ಯೇಸುವಿನ ಕ್ಷಮಾತತ್ವ ಬರಿಮಾತಿನ ಉಪದೇಶವಾಗಿರಲಿಲ್ಲ. ಕ್ಷಮೆಯ ಸಾಕಾರಮೂರ್ತಿಯಾದ ಅವನ ಪ್ರೇಮಸಾನ್ನಿಧ್ಯದಲ್ಲಿ ಲೆಕ್ಕವಿಲ್ಲದಷ್ಟು ಮಂದಿ ಪವಾಡಸದೃಶವಾಗಿ ತಮ್ಮ ಪಾಪಸಂಚಯವನ್ನು ಕಳೆದುಕೊಂಡು ಪವಿತ್ರಾತ್ಮರಾದರು.

ಯೇಸುವಿನ ಬೋಧನೆಗಳನ್ನು ಫ್ರೆಡರಿಕ್‌ ನೀಷೆ ‘ಗುಲಾಮ ನೈತಿಕತೆ’ ಎಂದು ವರ್ಣಿಸುತ್ತಾನೆ. ಆದರೆ ಯೇಸುವಿನ ಶಿಷ್ಯರು ಯಾವ ಪರಿಣಾಮಕ್ಕೂ ಹೆದರದೆ ಸ್ವತಂತ್ರವಾದ, ನಿರ್ಭೀತವಾದ ಬಾಳ್ವೆ ಮಾಡಿದರು. ಜೇಮ್ಸ್‌ ಶಿರಚ್ಛೇದನವಾಯಿತು, ಪೀಟರ್‌ ತಲೆಕೆಳಗಾಗಿ ಶಿಲುಬೆಗೇರಬೇಕಾಯಿತು, ಬಾರ್ತಲೋಮಿಯೊ ಜೀವಂತವಿದ್ದಾಗಲೇ ಅವನ ಚರ್ಮವನ್ನು ಸುಲಿಯಲಾಯಿತು. ಸ್ಟೀಫನ್‌ನನ್ನು ಕಲ್ಲಿನಲ್ಲಿ ಹೊಡೆದು ಕೊಂದರು, ಜಾನ್‌ ಒಬ್ಬನನ್ನು ಬಿಟ್ಟರೆ ಅವನ ಉಳಿದೆಲ್ಲ ಶಿಷ್ಯರೂ (ಅಪೋಸ್ತಲರು) ಬರ್ಬರವಾಗಿ ಹತ್ಯೆಯಾದರು. ಆದರೆ ಅವರೆಲ್ಲರೂ ನಗುನಗುತ್ತಲೇ ಸಾವನ್ನು ಬರಮಾಡಿಕೊಂಡರು. ಅವರ ಈ ದಿಟ್ಟ ಚಾರಿತ್ರ್ಯವನ್ನು ಹೇಡಿತನವೆಂದು, ಗುಲಾಮತನವೆಂದು ಕರೆಯಲಾದೀತೇ? ಪ್ರಾಯಶಃ ನೀಷೆ ತನ್ನ ಸಮಕಾಲೀನ ಧರ್ಮದ ಅವನತಿಯನ್ನು ಉದ್ದೇಶಿಸಿ ಹಾಗೆಂದಿರಬೇಕು.

ರೋಮನ್ನರ ಗುಲಾಮರಾಗಿ ಕೀಳರಿಮೆ, ಪಾಪಪ್ರಜ್ಞೆಗಳನ್ನು ಅನುಭವಿಸುತ್ತಿದ್ದ ಸಾಮಾನ್ಯ ಯಹೂದಿಗಳಿಗೆ ಇವನ ಕ್ಷಮಾತತ್ವ ಹಾಗೂ ಅಂತರಂಗದಲ್ಲಿನ ಭಗವಂತನ ಸಾಮ್ರಾಜ್ಯದ ವರ್ಣನೆಗಳು ವಿಚಿತ್ರ ವಿಸ್ಮಯ, ಸಂಚಲನ ಉಂಟು ಮಾಡಿದವು. ಇವನೊಂದಿಗೆ ಹೆಜ್ಜೆ ಹಾಕುತ್ತ ಗುಲಾಮತನವನ್ನರಿಯದ ಸ್ವತಂತ್ರ ಬದುಕಿನ ಸ್ವಾದವನ್ನು ಅನುಭವಿಸಿದರು. ಪ್ರತಿದಿನ ಲೆಕ್ಕವಿಲ್ಲದಷ್ಟು ಜನ ಇವನನ್ನು ಅನುಸರಿಸಲಾರಂಭಿಸಿದರು. ಯೇಸುವಿನ ಈ ಪ್ರಭಾವ ಅಂದಿನ ರಾಜಕೀಯ ಹಾಗೂ ಧಾರ್ಮಿಕ ಪ್ರತಿಷ್ಠೆಗಳನ್ನು ಮಂಕಾಗಿಸಿತು. ಕೊನೆಗೆ ರೋಮನ್‌ ಆಡಳಿತಾಧಿಕಾರಿಗಳು ಮತ್ತು ಯಹೂದಿ ಪುರೋಹಿತರು ಸೇರಿಕೊಂಡು ಯೇಸುವನ್ನು ಮುಗಿಸಿದರು.

ಶಿಲುಬೆಗೇರುವಾಗಲೂ ಅವನೊಳಗಿನ ಕ್ಷಮಾಗುಣ ಅಳಿಯಲಿಲ್ಲ. ತನ್ನನ್ನು ಕೊಲ್ಲುತ್ತಿದ್ದ ರಾಜಕಾರಣಿಗಳ ಶ್ರೇಯಸ್ಸಿಗಾಗಿ ಪ್ರಾರ್ಥಿಸಿದ. ‘ದೇವರೇ, ಇವರನ್ನು ಕ್ಷಮಿಸು. ತಾವೇನು ಮಾಡುತ್ತಿದ್ದೇವೆ ಎಂಬುದು ಇವರಿಗೆ ತಿಳಿದಿಲ್ಲ’ ಎಂದು ಉದ್ಗರಿಸಿದ್ದ. ಕಾಲಾಂತರದಲ್ಲಿ ಅಂದಿನ ರೋಮನ್‌ ಪ್ರಭುತ್ವ ಇವನ ಈ ವಿಪರೀತ ಚಾರಿತ್ರ್ಯಕ್ಕೆ ಮನಸೋತು ಶರಣಾಯಿತು. ಯೇಸುವಿನ ಬೋಧನೆಗಳನ್ನು ತಾನೂ ಅನುಸರಿಸಿತು.

ಪ್ರಜಾಕಂಟಕರೂ ಅಧಿಕಾರಲೋಭಿಗಳೂ ಆದ ಇಂದಿನ ರಾಜಕಾರಣಿಗಳಿಗೆ ತಾವೇನು ಮಾಡುತ್ತಿದ್ದೇವೆ ಎಂಬುದು ಚೆನ್ನಾಗಿಯೇ ಗೊತ್ತಿದೆ. ತನ್ನನ್ನು ಶಿಲುಬೆಗೇರಿಸಿದವರನ್ನೂ ಕ್ಷಮಿಸಿದ ಯೇಸು ಕೂಡ ಇಂದಿನ ರಾಜಕಾರಣಿಗಳ ಜನವಿರೋಧಿ ನಡೆಯನ್ನು ಕ್ಷಮಿಸಲಾರನೇನೋ. ಅವನು ತನ್ನ ಕ್ಷಮಾಗುಣದಿಂದ ವ್ಯಕ್ತಿಯ ಅಂತರಂಗದಲ್ಲಿ ಪವಾಡವನ್ನೇ ಮಾಡಿದ್ದ. ಅದಕ್ಕೇ ಇರಬೇಕು ಡಚ್‌ ಕಲಾವಿದ ವಿನ್ಸೆಂಟ್‌ ವ್ಯಾನ್‌ಗಖ್‌, ಯೇಸುವನ್ನು ಅದ್ಭುತ ಕಲಾವಿದ ಎಂದು ಕರೆದದ್ದು. ‘ಅವನು ಪ್ರತಿಮೆಗಳನ್ನು ಕೆತ್ತಲಿಲ್ಲ, ವರ್ಣಚಿತ್ರಗಳನ್ನು ಬಿಡಿಸಲಿಲ್ಲ, ಪುಸ್ತಕಗಳನ್ನು ಬರೆಯಲಿಲ್ಲ. ಆದರೆ ಕರಸ್ಪರ್ಶ ಮಾತ್ರದಿಂದ ಜೀವಂತ ವ್ಯಕ್ತಿಗಳನ್ನು, ಚಿರಂಜೀವಿಗಳನ್ನು ಸೃಷ್ಟಿಸಿದ’ ಎಂದು ಉದ್ಗರಿಸಿದ್ದು.

ಟಿ.ಎನ್‌.ವಾಸುದೇವಮೂರ್ತಿ ಲೇಖನ: ಅಂತರಂಗ ಕಲಕುವ ಕ್ಷಮಾತತ್ವ
ಟಿ.ಎನ್‌.ವಾಸುದೇವಮೂರ್ತಿ

ಲೇಖಕ: ಸಹಾಯಕ ಪ್ರಾಧ್ಯಾಪಕ, ಜ್ಯೋತಿನಿವಾಸ್‌ ಕಾಲೇಜ್‌, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT