ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೃತದ ಹೊನಲು: 1947ರ ಸ್ವಾತಂತ್ರ್ಯ ಕೊಟ್ಟ ಭರವಸೆ ಇದಲ್ಲ– ಎವಿಎಸ್ ನಂಬೂದಿರಿ ಲೇಖನ

Last Updated 14 ಆಗಸ್ಟ್ 2022, 0:15 IST
ಅಕ್ಷರ ಗಾತ್ರ

1947ರ ಆಗಸ್ಟ್‌ 15 ಎಂಬುದು ಸ್ವಾತಂತ್ರ್ಯಕ್ಕೆ, ದೇಶದ ಸ್ವಾತಂತ್ರ್ಯಕ್ಕೆ ಮತ್ತು ಅಷ್ಟೇ ಮುಖ್ಯವಾಗಿ ದೇಶದ ಜನರ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ದಿನ. 1950ರ ಜನವರಿ 26ರಂದು ದೇಶವು ಗಣರಾಜ್ಯವಾಗಿ ಘೋಷಣೆಯಾಯಿತು. ಆ ಸಂದರ್ಭದಲ್ಲಿ ಈ ಸ್ವಾತಂತ್ರ್ಯಗಳನ್ನು ವ್ಯಾಖ್ಯಾನಿಸಿ, ಅವು ಎಲ್ಲ ಪೌರರ ಹಕ್ಕು ಎಂದು ಘೋಷಿಸಲಾಯಿತು. ಈ ಸ್ವಾತಂತ್ರ್ಯಗಳು ಕ್ರಮೇಣ ಕುಗ್ಗುತ್ತಾ ಸಾಗಿವೆ.

ಸರಿಯಾಗಿ ಮುಕ್ಕಾಲು ಶತಮಾನ ಹಿಂದೆ ನಮ್ಮ ಮುತ್ತಾತಂದಿರು ಈ ದೇಶದಲ್ಲಿ ಹೊಸ ವ್ಯವಸ್ಥೆಯೊಂದನ್ನು ತಂದರು, ಸ್ವಾತಂತ್ರ್ಯವನ್ನು ಬಿತ್ತಿದರು ಮತ್ತು ಎಲ್ಲರೂ ಸಮಾನರು ಎಂಬ ಪ್ರತಿಪಾದನೆಯು ದೃಢವಾಗಿ ನೆಲೆಯೂರುವಂತೆ ಮಾಡಿದರು ಎಂದು ಹೇಳಿದರೆ ಅದು ಹೇಳಿದ್ದನ್ನೇ ಮತ್ತೆ ಮತ್ತೆ ಹೇಳಿದಂತೇನೂ ಅಲ್ಲ. ಅಮೆರಿಕವು ಸ್ಥಾಪನೆಗೊಂಡು ಹಲವು ವರ್ಷಗಳ ಬಳಿಕ, ಅಧ್ಯಕ್ಷ ಅಬ್ರಹಾಂ ಲಿಂಕನ್‌ ಅವರು ಗೆಟಿಸ್‌ಬರ್ಗ್‌ನಲ್ಲಿ ಮಾಡಿದ ಭಾಷಣದಲ್ಲಿ, ಈ ರೀತಿಯಲ್ಲಿ ಸೃಷ್ಟಿಯಾದ ದೇಶವು ಬಹು ಕಾಲ ಬಾಳೀತೇ ಎಂಬ ಪ್ರಶ್ನೆಯನ್ನು ಕೇಳಿಕೊಂಡಿದ್ದರು. ಸ್ವಾತಂತ್ರ್ಯ ಮತ್ತು ಸಮಾನತೆಯ ಆಧಾರದಲ್ಲಿ ಸ್ಥಾಪನೆಯಾದ ದೇಶವೊಂದು ಬಹುಕಾಲ ಉಳಿದೀತೇ ಎಂಬ ಪ್ರಶ್ನೆಯನ್ನು ನಾವೂ ಕೇಳಿಕೊಳ್ಳಬೇಕಾಗಿದೆ. ಅಂದು ಮಧ್ಯರಾತ್ರಿ ಭಾರತವು ಸ್ವಾತಂತ್ರ್ಯಗೊಂಡಾಗ, ದೇಶದ ವಿಧಿಯೊಂದಿಗಿನ ಮುಖಾಮುಖಿಯ ಕುರಿತು ಹಲವು ಪ್ರಶ್ನೆಗಳು ಎದ್ದಿದ್ದವು. ಸ್ವತಂತ್ರಗೊಳ್ಳುವ ಮೂಲಕ ಆ ಪ್ರತಿಜ್ಞೆಯನ್ನು ಹೇಗೆ ಜಾರಿಗೊಳಿಸಬೇಕು, ಯಾವುದೇ ಧರ್ಮಕ್ಕೆ ಸೇರಿರಲಿ ಭಾರತಮಾತೆಯ ಎಲ್ಲ ಮಕ್ಕಳಿಗೂ ಹಕ್ಕುಗಳು, ಸೌಲಭ್ಯಗಳು, ಬದ್ಧತೆಗಳು ಸಮಾನ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು ಎಂಬ ಮಾತುಗಳು ಅಂದು ಕೇಳಿಸಿದ್ದವು. 75 ವರ್ಷಗಳ ಬಳಿಕ, ಸ್ವಾತಂತ್ರ್ಯ ಪಡೆದಾಗ ಮಾಡಿಕೊಂಡ ಪ್ರತಿಜ್ಞೆಯು ಉಳಿದಿದೆಯೇ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕಾಗಿದೆ. ಆ ಪ್ರತಿಜ್ಞೆಯನ್ನು ನವೀಕರಿಸಿ ರಕ್ಷಿಸಬೇಕಾದ ಅಗತ್ಯವೂ ಉಂಟಾಗಿದೆ.

1947ರ ಆಗಸ್ಟ್‌ 15 ಎಂಬುದು ಸ್ವಾತಂತ್ರ್ಯಕ್ಕೆ, ದೇಶದ ಸ್ವಾತಂತ್ರ್ಯಕ್ಕೆ ಮತ್ತು ಅಷ್ಟೇ ಮುಖ್ಯವಾಗಿ ದೇಶದ ಜನರ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ದಿನ. 1950ರ ಜನವರಿ 26ರಂದು ದೇಶವು ಗಣರಾಜ್ಯವಾಗಿ ಘೋಷಣೆಯಾಯಿತು. ಆ ಸಂದರ್ಭದಲ್ಲಿ ಈ ಸ್ವಾತಂತ್ರ್ಯಗಳನ್ನು ವ್ಯಾಖ್ಯಾನಿಸಿ, ಅವು ಎಲ್ಲ ಪೌರರ ಹಕ್ಕು ಎಂದು ಘೋಷಿಸಲಾಯಿತು. ಈ ಸ್ವಾತಂತ್ರ್ಯಗಳು ಕ್ರಮೇಣ ಕುಗ್ಗುತ್ತಾ ಸಾಗಿವೆ. ಪ್ರತಿಯೊಬ್ಬ ಪೌರನೂ ತನ್ನ ಹಕ್ಕುಗಳ ರಕ್ಷಣೆಗಾಗಿ ತಮ್ಮ ಸ್ವಾತಂತ್ರ್ಯದ ಒಂದು ಭಾಗವನ್ನು ಸರ್ಕಾರಕ್ಕೆ ಒಪ್ಪಿಸಿಬಿಟ್ಟಿದ್ದಾನೆ. ಸಂವಿಧಾನವು ಪೌರರಿಗೆ ನೀಡಿರುವ ಹಕ್ಕುಗಳನ್ನು ನುಂಗಿ, ಸ್ವಾತಂತ್ರ್ಯವನ್ನು ಕುಗ್ಗಿಸಿ ಸರ್ಕಾರವು ಎಷ್ಟು ಪ್ರಬಲವಾಗಿ ಇರಬೇಕೋ ಅದಕ್ಕಿಂತಲೂ ಹೆಚ್ಚು ಶಕ್ತಿ ಪಡೆದುಕೊಂಡಿದೆ. ಮಾತನಾಡುವ ಹಕ್ಕು, ಬೇಕಾದುದನ್ನು ತಿನ್ನುವ ಹಕ್ಕು, ಇಷ್ಟಪಟ್ಟ ದಿರಿಸನ್ನು ಧರಿಸುವ ಹಕ್ಕು ಮತ್ತು ಇತರ ಹಕ್ಕುಗಳಿಗೆ ಈಗ ಕುತ್ತು ಎದುರಾಗಿದೆ. ಈ ಕುತ್ತು ಎದುರಾಗಿರುವುದು ಸರ್ಕಾರದಿಂದ ಮಾತ್ರವಲ್ಲ, ಸಮಾಜದಲ್ಲಿರುವ ಗುಂಪುಗಳು, ಸಂಘಟನೆಗಳು ಮತ್ತು ಪಕ್ಷಗಳು ಕೂಡ ಇದಕ್ಕೆ ಕಾರಣವಾಗಿವೆ. ಆಗಸ್ಟ್‌ 15 ಜನರಿಗೆ ನೀಡಿದ್ದ ಭರವಸೆ ಇದಲ್ಲ.

ಬಹುಸಂಖ್ಯಾತವಾದವು ಮುನ್ನೆಲೆಗೆ ಬಂದಿದ್ದರಿಂದಾಗಿ ಮತ್ತು ಸರ್ಕಾರಗಳು ಜಾರಿಗೊಳಿಸಿದ ಅಸಮಾನ ನೀತಿಗಳಿಂದಾಗಿ ಎಲ್ಲ ಪೌರರೂ ಸಮಾನರು ಎಂಬ ಯೋಚನೆಯೇ ಹಿನ್ನೆಲೆಗೆ ಸರಿದಿದೆ. ಪಾಕಿಸ್ತಾನವು ಮುಸ್ಲಿಮರ ತಾಯಿ ನಾಡಾಯಿತು. ಆದರೆ, ಧರ್ಮ, ಜನಾಂಗ, ಭಾಷೆ ಮತ್ತು ಇತರ ಯಾವುದೇ ಭಿನ್ನತೆಯನ್ನೂ ಗಣನೆಗೆ ತೆಗೆದುಕೊಳ್ಳದೆ ಎಲ್ಲ ಪೌರರನ್ನು ಸಮಾನವಾಗಿ ನೋಡುವುದಾಗಿ ಭಾರತವು ಭರವಸೆ ಕೊಟ್ಟಿತು. ಆದರೆ, ಆ ಭರವಸೆಗೆ ಈಗ ಸಂಚಕಾರ ಬಂದಿದೆ. ತ್ರಿವಳಿ ತಲಾಖ್‌ ಅಪರಾಧ ಎಂದು ಪರಿಗಣಿಸುವ ಕಾನೂನು, ಪೌರತ್ವಕ್ಕೆ ಧಾರ್ಮಿಕ ಆಯಾಮ ಕೊಟ್ಟಿದೆ; ಬುಲ್ಡೋಜರ್‌ ಬಳಸಿ ಮನೆಗಳನ್ನು ಧ್ವಂಸ ಮಾಡುವಂತಹ ಕಾನೂನುಬಾಹಿರ ಕೃತ್ಯಗಳು ಅಲ್ಪಸಂಖ್ಯಾತರ ಬದುಕನ್ನು ಕಾಡುತ್ತಿವೆ; ಅಲ್ಪಸಂಖ್ಯಾತರ ವಿರುದ್ಧ ಅಭಿಯಾನಗಳು ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತಿವೆ. ಅಲ್ಪಸಂಖ್ಯಾತರನ್ನು ಅನ್ಯ ಎಂದು ಪರಿಗಣಿಸಿ, ಮೂಲೆಗುಂಪು ಮಾಡಲಾಗಿದೆ.ಅವರಿಗೆ ಆಗಸ್ಟ್‌ 15 ಕೊಟ್ಟ ಭರವಸೆ ಇದಲ್ಲ.

ಸ್ವಾತಂತ್ರ್ಯಗೊಂಡಾಗ ಈ ದೇಶವು ರಾಜಾಡಳಿತದ ಹಲವು ರಾಜ್ಯಗಳು ಮತ್ತು ಬ್ರಿಟಿಷ್‌ ಪ್ರೆಸಿಡೆನ್ಸಿಗಳ ಗುಂಪಾಗಿತ್ತು.

ಅವುಗಳು ರಾಜ್ಯಗಳ ಒಕ್ಕೂಟವಾಗಿ ಮಿಳಿತಗೊಂಡು ತಮ್ಮದೇ ಅನನ್ಯತೆಗಳನ್ನು ಪಡೆದುಕೊಂಡವು ಮತ್ತು ಈ ರಾಜ್ಯಗಳಿಗೆ ಅವುಗಳ ವ್ಯಾಪ್ತಿಯಲ್ಲಿ ಗಮನಾರ್ಹವಾದ ಅಧಿಕಾರಗಳನ್ನು ಸಂವಿಧಾನವು ನೀಡಿತು. ಒಕ್ಕೂಟ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರರಿಗೆ ಪೂರಕವಾಗಿರುವ, ಪರಸ್ಪರರನ್ನು ಬಲಪಡಿಸುವ, ಯಾವುದೇ ಸಂದರ್ಭದಲ್ಲಿ ಎದುರಾಗಬಹುದಾದ ಬಿಕ್ಕಟ್ಟನ್ನು ಪರಿಹರಿಸಲು ವ್ಯವಸ್ಥೆಗಳಿರುವ ಅತ್ಯಂತ ಸಮತೋಲಿತ ಒಕ್ಕೂಟ ವ್ಯವಸ್ಥೆ ನಮ್ಮ ಕನಸಾಗಿತ್ತು. ನಮ್ಮಲ್ಲಿ ಇರುವಷ್ಟು ವೈವಿಧ್ಯಗಳಿರುವ ದೇಶವೊಂದಕ್ಕೆ ಇದೊಂದು ಅತ್ಯುತ್ತಮ ಆಡಳಿತ ವ್ಯವಸ್ಥೆ. ಒಕ್ಕೂಟ ಸರ್ಕಾರದ ಕೈ ಮೇಲಾಗಿ, ಅದು ರಾಜ್ಯಗಳ ಮೇಲೆ ಸವಾರಿ ಮಾಡುವ ಸ್ಥಿತಿಯು ಸಮತೋಲಿತ ವ್ಯವಸ್ಥೆಗೆ ಅಡ್ಡಿ ಉಂಟು ಮಾಡಿದೆ. ರಾಜಕಾರಣ, ಹಣಕಾಸು ಪದ್ಧತಿ, ಶಿಕ್ಷಣ, ಸಂಸ್ಕೃತಿ ಅಷ್ಟೇ ಅಲ್ಲ, ಭೂತಕಾಲವನ್ನು ಹೇಗೆ ನೋಡಬೇಕು, ಭವಿಷ್ಯವನ್ನು ಹೇಗೆ ಕಲ್ಪಿಸಿಕೊಳ್ಳಬೇಕು ಎಂಬುದನ್ನು ಏಕರೂಪಗೊಳಿಸಬೇಕು ಎಂಬ ಒತ್ತಡ ಹೆಚ್ಚಾಗಿದೆ. ‘ಒಂದು ದೇಶ, ಒಂದು ಇದು’, ‘ಒಂದು ದೇಶ, ಒಂದು ಅದು’ ಎಂಬಂತಹವುಗಳು ನಮ್ಮಲ್ಲಿ ಒಂದೆರಡಲ್ಲ, ಹೆಚ್ಚೇ ಇವೆ. 1947ರ ಆಗಸ್ಟ್ 15 ನೀಡಿದ ಭರವಸೆ ಇದು ಅಲ್ಲವೇ ಅಲ್ಲ.

ಪ್ರಜಾಪ್ರಭುತ್ವದ ಪಾಲನೆಯೇ ಆಳ್ವಿಕೆಯ ನುಡಿಗಟ್ಟು ಎಂಬುದು 1947 ಕೊಟ್ಟ ಅತ್ಯಂತ ದೊಡ್ಡ ಭರವಸೆ. ಬಡವರು ಮತ್ತು ಅನಕ್ಷರಸ್ಥರೇ ಹೆಚ್ಚಾಗಿರುವ ಈ ದೇಶವನ್ನು ಉದಾರವಾದ ಮತ್ತು ಸಮಾನತಾವಾದದಿಂದ ಸ್ಫೂರ್ತಿಗೊಂಡು ಪ್ರಜಾಪ್ರಭುತ್ವವಾಗಿ ಪರಿವರ್ತಿಸುವ ಪ್ರಯೋಗಕ್ಕೆ ಕೆಚ್ಚೆದೆಯೇ ಬೇಕು. ಈ ಪ್ರಯೋಗ ಯಶಸ್ವಿಯಾಯಿತು ಮತ್ತು ಪ್ರಜಾಪ್ರಭುತ್ವವು ವ್ಯಾಪಕವೂ ಗಾಢವೂ ಆಯಿತು. ಕೆಲವೊಮ್ಮೆ ಲೋಪಗಳಾಗಿವೆ ಮತ್ತು ಕೆಲವೊಮ್ಮೆ ಹಿನ್ನಡೆಯಾಗಿದೆ– ಹಾಗಿದ್ದರೂ ದೇಶವು ಜನತಂತ್ರವಾಗಿಯೇ ಉಳಿದಿದೆ. ಆದರೆ, ಈಗ ಸವಾಲುಗಳು ಹೆಚ್ಚೇ ಇವೆ. ಪ್ರಜಾಸತ್ತಾತ್ಮಕ ಸಂಸ್ಥೆಗಳು ಒತ್ತಡದಲ್ಲಿ ಇವೆ, ಜನಾದೇಶವನ್ನು ಬುಡಮೇಲು ಮಾಡಲಾಗುತ್ತಿದೆ, ವಿರೋಧ ಪಕ್ಷಗಳ ನಾಯಕರನ್ನು ಬಂಧಿಸಿ, ಸೆರೆಯಲ್ಲಿ ಇರಿಸಲಾಗುತ್ತಿದೆ; ಅವರ ಪಕ್ಷಗಳನ್ನು ಮುರಿಯಲಾಗುತ್ತಿದೆ. ಸರ್ಕಾರದ ಅತ್ಯಂತ ಮುಖ್ಯ ಅಂಗವಾದ ಶಾಸಕಾಂಗವನ್ನು ದುರ್ಬಲಗೊಳಿಸಲಾಗಿದೆ ಮತ್ತು ಕಾರ್ಯಾಂಗಕ್ಕೇ ಹೆಚ್ಚಿನ ಮಹತ್ವ ಕೊಡಲಾಗಿದೆ. ಸಹಿಷ್ಣುತೆಯೇ ಪ್ರಜಾಪ್ರಭುತ್ವದ ತಿರುಳು. ಆದರೆ ಈಗ ರಾಜಕಾರಣ ಮತ್ತು ಸಮಾಜದಲ್ಲಿ ಅಸಹಿಷ್ಣುತೆಯದ್ದೇ ಪಾರಮ್ಯವಿದೆ. ಬಹುಸಂಖ್ಯಾತವಾದ ಮತ್ತು ಪ್ರಜಾಪ್ರಭುತ್ವ ಜತೆ ಸಾಗಲು ಸಾಧ್ಯವೇ ಇಲ್ಲ.

ಪ್ರಭುತ್ವ ಎಂಬುದರ ಸ್ವರೂಪವೇ ದಮನಕಾರಿ. ಆದರೆ, ಪೌರರಿಗೆ ಮೂಲಭೂತ ಹಕ್ಕುಗಳನ್ನು ನೀಡುವ ಮೂಲಕ ಪ್ರಭುತ್ವವನ್ನು ಸೌಮ್ಯಗೊಳಿಸಲು ಸಂವಿಧಾನವು ಯತ್ನಿಸಿದೆ. ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆಯ ಮೂಲಕ ಪೌರರ ನಾಗರಿಕ ಮತ್ತು ಮಾನವ ಹಕ್ಕುಗಳನ್ನು ರಕ್ಷಿಸಬೇಕು ಎಂದೂ ಹೇಳಿದೆ. ಇಂತಹ ವ್ಯವಸ್ಥೆಯಲ್ಲಿ ಸ್ವೇಚ್ಛೆಯ ಬದಲು ಕಾನೂನಿನ ಆಳ್ವಿಕೆ ಇರುತ್ತದೆ. ಅಧಿಕಾರದ ಹಂಚಿಕೆಯು ಸರ್ಕಾರದ ವಿವಿಧ ಅಂಗಗಳ ನಡುವೆ ಸಮತೋಲನ ಸೃಷ್ಟಿಸುತ್ತದೆ; ಸಾಂಸ್ಥಿಕ ವ್ಯವಸ್ಥೆಗಳು ಅಧಿಕಾರ ದುರ್ಬಳಕೆಗೆ ಕಡಿವಾಣ ಹಾಕುತ್ತವೆ. ಆದರೆ, ಈಗಿನ ವ್ಯವಸ್ಥೆಯಲ್ಲಿ ಕಾಣಿಸುತ್ತಿರುವ ಅಂಶಗಳು ಹೀಗಿವೆ: ಸರ್ಕಾರವು ಪೌರರ ಮೇಲೆ ಸವಾರಿ ಮಾಡಬಹುದಾಗಿದೆ; ಹಕ್ಕುಗಳಿಗಿಂತ ಕರ್ತವ್ಯದ ಕೈ ಮೇಲಾಗಿದೆ; ಅತಿ ರಾಷ್ಟ್ರೀಯವಾದ ಮುನ್ನೆಲೆಗೆ ಬಂದಿದೆ ಮತ್ತು ಅದಕ್ಕೆ ಮಾನ್ಯತೆಯನ್ನೂ ನೀಡಲಾಗಿದೆ. ಆದರೆ, 1947ರಲ್ಲಿ ಹುಟ್ಟಿದ ದೇಶದ ಯೋಚನೆ ಖಂಡಿತಾ ಹೀಗೆ ಇರಲಿಲ್ಲ. ಮಾನವೀಯವಾದ ಸಮನ್ವಯದ ಮತ್ತು ಎಲ್ಲರನ್ನೂ ಒಳಗೊಂಡ ಭಾರತದ ಪ‍ರಿಕಲ್ಪನೆಯೇ ಸ್ವಾತಂತ್ರ್ಯ ಹೋರಾಟವನ್ನು ರೂಪುಗೊಳಿಸಿತ್ತು ಮತ್ತು ಸ್ವಾತಂತ್ರ್ಯ ಬಂದಾಗ ಅದುವೇ ದೇಶಕ್ಕೊಂದು ಸ್ವರೂಪವನ್ನೂ ಕೊಟ್ಟಿತು. ಆದರೆ, ಈಗ ದೇಶವನ್ನು ಸಂಘರ್ಷಾತ್ಮಕ, ಬಹಿಷ್ಕೃತವಾದಿ, ಬಹುಸಂಖ್ಯಾತವಾದಿ ಭಾರತವನ್ನಾಗಿ ಪರಿವರ್ತಿಸಲಾಗಿದೆ.

1947ರ ಬಳಿಕ, ಕೆಲ ಸಮಯದಲ್ಲಿಯೇ ಭಾರತದ ಆ ಚಿಂತನೆಯು ಪಲ್ಲಟಗೊಂಡಿತು ಮತ್ತು ದುರ್ಬಲಗೊಳ್ಳತೊಡಗಿತು. ದೇಶ ಸ್ಥಾಪನೆಯಾದಾಗ ಈ ಚಿಂತನೆಗಳನ್ನು ಪ್ರತಿಪಾದಿಸಿದ್ದ ಜವಾಹರಲಾಲ್‌ ನೆಹರೂ ಅವರೇ 1951ರಲ್ಲಿ ಸಂವಿಧಾನಕ್ಕೆ ಮೊದಲ ತಿದ್ದುಪಡಿ ತಂದು ಅಭಿವ್ಯಕ್ತಿ ಸ್ವಾತಂತ್ರ್ಯವೂ ಸೇರಿದಂತೆ ಮೂಲಭೂತ ಹಕ್ಕುಗಳನ್ನು ಮೊಟಕು ಮಾಡಿದರು ಮತ್ತು ಜನರಿಂದ ಚುನಾಯಿತವಾಗಿದ್ದ ಸರ್ಕಾರವನ್ನು (ಕೇರಳ) ಸಂವಿಧಾನದ 356ನೇ ವಿಧಿ ಬಳಸಿ ವಜಾ ಮಾಡಿದರು. ಕೆಲ ವರ್ಷಗಳ ಬಳಿಕ, ಇಂದಿರಾ ಗಾಂಧಿ ಅವರು ತುರ್ತುಸ್ಥಿತಿ ಹೇರಿದರು ಮತ್ತು ಸಂವಿಧಾನವನ್ನೇ ಅಮಾನತಿನಲ್ಲಿ ಇರಿಸಿದರು. ರಾಜೀವ್‌ ಗಾಂಧಿ ಅವರು ಬಹುಸಂಖ್ಯಾತರನ್ನೂ ಅಲ್ಪಸಂಖ್ಯಾತರನ್ನೂ ತುಷ್ಟೀಕರಿಸುವ ನೀತಿಯನ್ನು ಅನುಸರಿಸಿದರು. 1947ರ ದರ್ಶನವನ್ನು ಹಾಳುಗೆಡಹುವ ಕೆಲಸವನ್ನು ಎಲ್ಲ ಪಕ್ಷಗಳು ಮತ್ತು ಪ್ರಧಾನಿಗಳು ಮಾಡಿದ್ದಾರೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಈ ಕುಸಿತವು ಹೆಚ್ಚು ತ್ವರಿತವೂ ಹೆಚ್ಚು ಶಕ್ತಿಯುತವೂ ಆಗಿದೆ.

1947ರ ನಂತರದ 75 ವರ್ಷಗಳಲ್ಲಿ ದೇಶವು ಹಲವು ಮಹತ್ವದ ಸಾಧನೆಗಳನ್ನು ಮಾಡಿದೆ. ಜಾಗತಿಕ ಮಟ್ಟದಲ್ಲಿ ದೊರೆತ ಮನ್ನಣೆಯೂ ಒಂದು ದೊಡ್ಡ ಸಾಧನೆಯೇ. ಹಲವು ಸವಾಲುಗಳನ್ನು ಎದುರಿಸಿ ದೇಶವು ನಿಂತಿದೆ, ಕೋಟ್ಯಂತರ ಜನರನ್ನು ಬಡತನದಿಂದ ಮೇಲಕ್ಕೆ ತಂದಿದೆ, ಅಕ್ಷರಸ್ಥರನ್ನಾಗಿಸಿದೆ ಮತ್ತು ವಿವಿಧ ರಂಗಗಳಲ್ಲಿ ದಾಪುಗಾಲಿರಿಸಿದೆ. ಸೂಪರ್‌ ಪವರ್‌ ಆಗುವ ಆಕಾಂಕ್ಷೆಯನ್ನೂ ತನ್ನೊಳಗೆ ಹುದುಗಿಸಿಕೊಂಡಿದೆ. ಬ್ರಿಟನ್‌ನ ಪ್ರಧಾನಿಯಾಗಿದ್ದ ವಿನ್‌ಸ್ಟನ್‌ ಚರ್ಚಿಲ್‌ ಅವರು ಭಾರತವು ಸ್ವಾತಂತ್ರ್ಯ ಪಡೆಯುವುದಕ್ಕೆ ಮುನ್ನವೇ ಹೀಗೆ ಹೇಳಿದ್ದರು: ‘ಭಾರತವೆಂದರೆ ಒಂದು ಭೂ ಪ್ರದೇಶ ಮಾತ್ರ. ಅದೊಂದು ದೇಶ ಅಲ್ಲವೇ ಅಲ್ಲ’. ಆದರೆ, ಭಾರತವು ತಾನೊಂದು ದೇಶ ಎಂಬುದನ್ನು ಸಾಬೀತು ಮಾಡಿದೆ, ಇಷ್ಟೂ ವರ್ಷ ಕಾಲ ಅಸ್ತಿತ್ವ ಉಳಿಸಿಕೊಂಡಿದೆ. ಆದರೆ, ಸಾಬೀತು ಮಾಡಬೇಕಾದುದು ಇನ್ನೂ ಬಹಳಷ್ಟಿದೆ. ದೇಶವು ಹುಟ್ಟಿದ ಆ ಮಧ್ಯರಾತ್ರಿಯ ಸಂದರ್ಭದಲ್ಲಿ ಮೂಡಿದ್ದ ಭರವಸೆಗೆ ಮರುಹುಟ್ಟು ನೀಡಬೇಕಿದೆ. ಭಾರತವೆಂಬ ಆ ಚಿಂತನೆಯ ಹಿಂದಿನ ಮೌಲ್ಯಗಳು ಮತ್ತು ಆದರ್ಶಗಳಿಗೆ ಬದ್ಧರಾಗೋಣ ಮತ್ತು ಈ ಚಿಂತನೆಗಳಿಂದ ದೇಶವು ದೂರ ಸಾಗದಂತೆ ನೋಡಿಕೊಳ್ಳೋಣ. ಆ ಭರವಸೆಯು ವಜ್ರದಂತೆ ಹೊಳೆದು, ಬಾಳಲಿ, ಉಳಿಯಲಿ.

ಮತ್ತೆ ಗೆಟಿಸ್‌ಬರ್ಗ್‌ಗೆ ಬರೋಣ: ಜನತಂತ್ರ ವ್ಯವಸ್ಥೆಗೆ ತಳಹದಿ ಒದಗಿಸಿದ ಲಿಂಕನ್‌ ಅವರು ತಮ್ಮ ಭಾಷಣದಲ್ಲಿ ಜನರಿಂದ, ಜನರಿಗಾಗಿ ಜನರ ಸರ್ಕಾರ ಎಂಬ ಪರಿಕಲ್ಪನೆಯನ್ನು ವಿವರಿಸಿದರು. ಈ ಭೂಮಿಯಲ್ಲಿ ಸ್ವಾತಂತ್ರ್ಯವು ನಶಿಸುವುದನ್ನು ದೇಶದ ಸ್ವಾತಂತ್ರ್ಯವು ತಡೆಯುತ್ತದೆ ಎಂದು ಅವರು ಹೇಳಿದ್ದರು. ಭಾರತವು ಸತ್ತರೆ ಇಲ್ಲಿ ಬದುಕುವವರು ಯಾರು ಮತ್ತು ಭಾರತವು ಬದುಕಿದರೆ ಸಾಯುವವರು ಯಾರು ಎಂದು ಜವಾಹರಲಾಲ್‌ ನೆಹರೂ ಹೇಳಿದ್ದರಲ್ಲಿ ಲಿಂಕನ್‌ ಹೇಳಿದ್ದ ಭಾವವೇ ಇದೆ. ಈ ಭಾವವು ನಿಜವಾಗಬೇಕಿದ್ದರೆ, ದೇಶವೆಂಬ ಚಿಂತನೆಯ ಕೇಂದ್ರದಲ್ಲಿ ಸ್ವಾತಂತ್ರ್ಯವು ಇರಬೇಕು ಮತ್ತು 1947ರಲ್ಲಿ ಗ್ರಹಿಸಿದ ಭಾರತದ ಚಿಂತನೆಯನ್ನು ಮರುಸ್ಥಾಪಿಸಬೇಕು, ಮತ್ತೆ ಹೇಳಬೇಕು ಮತ್ತು ಸಮಗ್ರಗೊಳಿಸಬೇಕು.

***
ಲೇಖಕ: ಹಿರಿಯ ಪತ್ರಕರ್ತ ಕನ್ನಡಕ್ಕೆ: ಹಮೀದ್‌ ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT