ಶನಿವಾರ, ಆಗಸ್ಟ್ 13, 2022
26 °C
ಪ್ರಾದೇಶಿಕ ಪಕ್ಷಗಳನ್ನು ಆಪೋಶನ ತೆಗೆದುಕೊಳ್ಳುವ ತಂತ್ರಗಾರಿಕೆಯ ಭಾಗ

ಶಿಂಧೆಗೆ ಪಟ್ಟ: ಅರ್ಥೈಸಬೇಕಿರುವುದು ಹೀಗೆ- ದಿನೇಶ್ ಅಮಿನ್‌ಮಟ್ಟು ಅವರ ವಿಶ್ಲೇಷಣೆ

ದಿನೇಶ್ ಅಮಿನ್ ಮಟ್ಟು Updated:

ಅಕ್ಷರ ಗಾತ್ರ : | |

ಮಹಾರಾಷ್ಟ್ರದಲ್ಲಿ ಶಿವಸೇನಾದ ಬಂಡುಕೋರ ನಾಯಕ ಏಕನಾಥ ಶಿಂಧೆ ಅವರನ್ನು ಮುಖ್ಯಮಂತ್ರಿಯ ಪಟ್ಟಕ್ಕೇರಿಸಿದ್ದು ಬಿಜೆಪಿಯ ಚಾಣಕ್ಯತಂತ್ರ ಎಂದು ಕೆಲವರು ಹುಬ್ಬೇರಿಸಿದರೆ, ಇದು ಬಿಜೆಪಿ ನಾಯಕರಲ್ಲಿನ ಅಧಿಕಾರ ಮೋಹವಿಲ್ಲದ ಔದಾರ್ಯ ಎಂದು ಇನ್ನು ಕೆಲವರು ಕೊಂಡಾಡತೊಡಗಿದ್ದಾರೆ. ಈ ಎರಡೂ ಬಗೆಯ ವಿಶ್ಲೇಷಣೆಗಳನ್ನು ಮೀರಿದ ರಾಜಕೀಯ ತಂತ್ರವೊಂದು ಈ ದಿಢೀರ್‌ ರಾಜಕೀಯ ಬೆಳವಣಿಗೆಯ ಹಿಂದೆ ಕೆಲಸ ಮಾಡಿರುವುದು ಬಹಳ ಮಂದಿಗೆ ಅರ್ಥವಾಗಿಲ್ಲ.

ಇಡೀ ಭಾರತವನ್ನು ತನ್ನ ಏಕಚಕ್ರಾಧಿಪತ್ಯವನ್ನಾಗಿಮಾಡಲು ಹೊರಟಿರುವ ಬಿಜೆಪಿಯ ಮಹತ್ವಾಕಾಂಕ್ಷೆಗೆ ಅಡ್ಡಿ ಆಗಿರುವುದು ಕಾಂಗ್ರೆಸ್ ಪಕ್ಷ ಅಲ್ಲ, ಬಿಜೆಪಿ ಹೊರತುಪಡಿಸಿದರೆ ಅಖಿಲ ಭಾರತ ಮಟ್ಟದಲ್ಲಿ ಈಗಲೂ ವಿಸ್ತಾರವಾದ ನೆಲೆ ಹೊಂದಿರುವುದು ಕಾಂಗ್ರೆಸ್‌ ಎನ್ನುವುದು ನಿಜವಾದರೂ ಸದ್ಯೋಭವಿಷ್ಯದಲ್ಲಿ ಕರ್ನಾಟಕವೊಂದನ್ನು ಹೊರತುಪಡಿಸಿ ಬಿಜೆಪಿಯ ಜೈತ್ರಯಾತ್ರೆಗೆ ತಡೆಯೊಡ್ಡುವ ಶಕ್ತಿ ಕಾಂಗ್ರೆಸ್‌ಗೆ ಇಲ್ಲ ಎನ್ನುವುದು ಇಂದಿನ ರಾಜಕೀಯ ವಾಸ್ತವ.

‘ಏಕನಾಯಕ- ಏಕಪಕ್ಷ’ ಎಂಬ ಈಗಿನ ಬಿಜೆಪಿಯ ರಾಜಕೀಯ ಮಹತ್ವಾಕಾಂಕ್ಷೆಯನ್ನು ಹೊತ್ತಿರುವ ಯಾಗದ ಕುದುರೆಯನ್ನು ಕಟ್ಟಿಹಾಕಿರುವುದು ಪಶ್ಚಿಮ ಬಂಗಾಳ, ಒಡಿಶಾ, ಆಂಧ್ರಪ್ರದೇಶ, ತೆಲಂಗಾಣ, ಜಾರ್ಖಂಡ್, ತಮಿಳುನಾಡು, ದೆಹಲಿ, ಪಂಜಾಬ್, ಮಿಜೋರಾಂ, ಮೇಘಾಲಯ ರಾಜ್ಯಗಳಲ್ಲಿರುವ ಪ್ರಾದೇಶಿಕ ಪಕ್ಷಗಳು ಮಾತ್ರ. ಈ ಪಟ್ಟಿಯಲ್ಲಿದ್ದ ಮಹಾರಾಷ್ಟ್ರ ಕಳಚಿಕೊಂಡಿದೆ. ರಾಜಸ್ಥಾನ ಮತ್ತು ಛತ್ತೀಸಗಡದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಕೇರಳದಲ್ಲಿ ಸಿಪಿಎಂ ಅಧಿಕಾರದಲ್ಲಿದೆ. ಉಳಿದ ಎಲ್ಲ ರಾಜ್ಯಗಳಲ್ಲಿ ಬಿಜೆಪಿ ಇಲ್ಲವೇ ಬಿಜೆಪಿ ಬೆಂಬಲಿತ ಪ್ರಾದೇಶಿಕ ಪಕ್ಷಗಳು ಅಧಿಕಾರದಲ್ಲಿವೆ.

ಬಿಜೆಪಿಯ ಮಹತ್ವಾಕಾಂಕ್ಷೆಗೆ ನಿಜವಾಗಿ ಅಡ್ಡಿಯಾಗಿರುವುದು ಈ ಪ್ರಾದೇಶಿಕ ಪಕ್ಷಗಳು. ಇದನ್ನು ಬಹಳ ಹಿಂದೆಯೇ ಅರ್ಥಮಾಡಿಕೊಂಡಿದ್ದ ಬಿಜೆಪಿಯು ಹಿಂದುತ್ವದ ಅಜೆಂಡಾ ಜೊತೆ ಪ್ರಾದೇಶಿಕ ಪಕ್ಷಗಳನ್ನು ಆಪೋಶನ ತೆಗೆದುಕೊಳ್ಳುವ ಕೂಟ ನೀತಿಯನ್ನೂ ಉಪಾಯದಿಂದ ಅನುಸರಿಸಿಕೊಂಡು ಬಂದಿದೆ. ಈ ರಾಜಕೀಯ ಕಸರತ್ತನ್ನು ಬಿಜೆಪಿ ಕಲಿತದ್ದೇ ಕಾಂಗ್ರೆಸ್‌
ನಿಂದ. ಗುಜರಾತ್, ರಾಜಸ್ಥಾನ ಮತ್ತು ಮಧ್ಯಪ್ರದೇಶದ ಮೂರು ದಶಕಗಳ ಇತಿಹಾಸದ ಪುಟಗಳನ್ನು ಮಗುಚಿಹಾಕಿದರೆ ಪ್ರಾದೇಶಿಕ ಪಕ್ಷಗಳನ್ನು ಈ ಎರಡೂ ಪಕ್ಷಗಳು ಹೇಗೆ ಆಪೋಶನ ತೆಗೆದುಕೊಳ್ಳುತ್ತಾ ಬಂದಿವೆ ಎನ್ನುವುದು ಅರ್ಥವಾಗುತ್ತದೆ.

ರಾಜಸ್ಥಾನದಲ್ಲಿ 1990ರಲ್ಲಿ ಜನತಾದಳದ 55 ಶಾಸಕರ ಬೆಂಬಲದಿಂದ ಮುಖ್ಯಮಂತ್ರಿಯಾಗಿದ್ದ ಬಿಜೆಪಿಯ ಭೈರೋನ್ ಸಿಂಗ್ ಶೆಖಾವತ್ ತನ್ನ ಕುರ್ಚಿ ಉಳಿಸಿಕೊಳ್ಳಲು ಜನತಾದಳವನ್ನೇ ಒಡೆದಿದ್ದರು. 1993ರ ಚುನಾವಣೆಯಲ್ಲಿ ಬಿಜೆಪಿ ಬಲ 95ಕ್ಕೆ ಏರಿತು. ಜನತಾದಳ ಆರಕ್ಕೆ ಕುಸಿಯಿತು. ಅಂದಿನಿಂದ ಇಂದಿನವರೆಗೆ ಆ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಒಂದೊಂದು ಅವಧಿಗೆ ಅಧಿಕಾರ ಹಂಚಿಕೊಂಡು ಹಾಯಾಗಿವೆ.

ಗುಜರಾತ್‌ನಲ್ಲಿ ಕಾಂಗ್ರೆಸ್ ಬೆಂಬಲದಿಂದ ಮುಖ್ಯಮಂತ್ರಿಯಾಗಿದ್ದ ಜನತಾದಳದ ನಾಯಕ ಚಿಮನ್ ಭಾಯ್ ಪಟೇಲ್ ಕೊನೆಗೆ ತಮ್ಮ ಪಕ್ಷವನ್ನು ಕಾಂಗ್ರೆಸ್ ಜೊತೆ ವಿಲೀನಗೊಳಿಸಿದರು. ಅದರ ನಂತರ ಅಲ್ಲಿ ಉಳಿದುಕೊಂಡಿರುವುದು ಬಿಜೆಪಿ ಮತ್ತು ಕಾಂಗ್ರೆಸ್ ಮಾತ್ರ. ಬಿಜೆಪಿಯಿಂದ ಸಿಡಿದುಹೋದ ವಘೇಲಾ ಗುಂಪು ಕೂಡಾ ಅಂತಿಮವಾಗಿ ಕಾಂಗ್ರೆಸ್‌ನಲ್ಲೇ ಲೀನವಾಯಿತು. ಈಗ ಅಲ್ಲಿರುವುದು ಎರಡೇ ಪಕ್ಷ. ಮಧ್ಯಪ್ರದೇಶ ದಲ್ಲಿ ಪ್ರಾರಂಭದಿಂದಲೂ ಕಾಂಗ್ರೆಸ್ ಮತ್ತು ಜನಸಂಘ- ಬಿಜೆಪಿಗಳದ್ದೇ ಕಾರುಬಾರು, ಪರ್ಯಾಯ ಇಲ್ಲವೇ ಇಲ್ಲ.

ಈ ಮೂರು ರಾಜ್ಯಗಳ ನಂತರ ಬಿಜೆಪಿ ಕಣ್ಣಿಟ್ಟದ್ದು ಬಿಹಾರದ ಮೇಲೆ. ಲಾಲು ಪ್ರಸಾದ್ ಎಂದೂ ಬಿಜೆಪಿ ಜೊತೆ ಸೂಜಿಯ ಮೊನೆಯಷ್ಟೂ ರಾಜಿ ಮಾಡಿಕೊಂಡವರಲ್ಲ. ಈ ಬದ್ಧತೆಯ ಕಾರಣಕ್ಕಾಗಿಯೇ ತನ್ನ ವೃದ್ಧಾಪ್ಯದ ದಿನಗಳನ್ನು ಈ ನಾಯಕ ಜೈಲಿನಲ್ಲಿ ಕಳೆಯಬೇಕಾಗಿ ಬಂದಿದೆ. ಬಿಹಾರದಲ್ಲಿ ಆರ್‌ಜೆಡಿಯನ್ನು ಮುರಿಯಲು ಬಿಜೆಪಿ ಎತ್ತಿಕೊಂಡದ್ದು ಆ ಪಕ್ಷದೊಳಗಿನ ‘ವಿಭೀಷಣ’ ನಿತೀಶ್ ಕುಮಾರ್ ಅವರನ್ನು. ಈ ಬಾರಿಯ ವಿಧಾನಸಭಾ ಚುನಾವಣೆಯ ನಂತರ ನಿತೀಶ್ ಮುಖ್ಯಮಂತ್ರಿ
ಯಾಗಿರುವುದು ಸ್ವಂತ ಬಲದಿಂದ ಅಲ್ಲ, ಬಿಜೆಪಿಯ ಔದಾರ್ಯದಿಂದ. ಮುಂದಿನ ವಿಧಾನಸಭಾ ಚುನಾವಣೆ
ಯಲ್ಲಿ ಜೆಡಿಯು ಎಲ್ಲಿರುತ್ತೋ ಗೊತ್ತಿಲ್ಲ. ಕೊನೆಗೆ ಉಳಿಯುವುದು ಎರಡೇ ಪಕ್ಷಗಳು ಬಿಜೆಪಿ ಮತ್ತು ಆರ್‌ಜೆಡಿ.

ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್‌ನಿಂದ ಹೊರಬಂದ ಮಮತಾ ಬ್ಯಾನರ್ಜಿಯವರನ್ನು ತೆಕ್ಕೆಗೆ ತೆಗೆದುಕೊಂಡು ಅಲ್ಲಿನ ಆಡಳಿತಾರೂಢ ಎಡಪಕ್ಷಗಳು ಮತ್ತು ಕಾಂಗ್ರೆಸ್ ವಿರುದ್ಧ ಬೆಳೆಸಿದ್ದೇ ಬಿಜೆಪಿ. ಇದರಿಂದಾಗಿ ಅಲ್ಲಿ ಎಡಪಕ್ಷಗಳ ಆಳ್ವಿಕೆ ಕೊನೆಯಾಯಿತು. ಕಾಂಗ್ರೆಸ್‌ಗೆ ಕಳೆದುಕೊಂಡಿದ್ದ ನೆಲೆಯನ್ನು ಮರಳಿ ಪಡೆಯಲಾಗಿಲ್ಲ. ಅಲ್ಲಿ ಈಗ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್‌ ಪಕ್ಷವೇ ಪ್ರಮುಖ ರಾಜಕೀಯ ಎದುರಾಳಿಗಳು. ಈಶಾನ್ಯ ರಾಜ್ಯಗಳ ಪ್ರಾದೇಶಿಕ ಪಕ್ಷಗಳು ಕೂಡಾ ನಿಧಾನವಾಗಿ ಬಿಜೆಪಿ ಎಂಬ ಹೆಬ್ಬಾವಿನ ಹೊಟ್ಟೆ ಸೇರುತ್ತಿವೆ.

ಕರ್ನಾಟಕದಲ್ಲಿ ಜೆಡಿಎಸ್ ಜೊತೆಗಿನ ಬಿಜೆಪಿಯ ಹಿಂದಿನ ಮೈತ್ರಿ ಮತ್ತು ಮುಂದಿನ ದಿನಗಳ ಮೈತ್ರಿಯ ಸಾಧ್ಯತೆಯ ಚರ್ಚೆಯನ್ನು ಕೂಡಾ ಪ್ರಾದೇಶಿಕ ಪಕ್ಷಗಳ ವಿರುದ್ಧದ ಬಿಜೆಪಿಯ ಎರಡನೇ ಹಂತದ ‘ಆಪರೇಷನ್ ಕಮಲ’ದ ಭಾಗವಾಗಿಯೇ ನೋಡಬೇಕಾಗುತ್ತದೆ.

ಮಹಾರಾಷ್ಟ್ರದಲ್ಲಿಯೂ ಇದೇ ಕಾರ್ಯವಿಧಾನವನ್ನು ಬಿಜೆಪಿ ಬಳಸಿತು. ಬಿಜೆಪಿ ಪಾಲಿಗೆ ಏಕನಾಥ ಶಿಂಧೆಯವರೇ ‘ಮಹಾರಾಷ್ಟ್ರದ ನಿತೀಶ್ ಕುಮಾರ್’. ಶಿಂಧೆ ಪಾಲಿಗೆ ಈಗ ಎರಡು ಆಯ್ಕೆಗಳಿವೆ. ಮೊದಲನೆಯದ್ದು ಬಿಜೆಪಿ ಜೊತೆ ತಮ್ಮ ಗುಂಪಿನ ವಿಲೀನ, ಇದು ಬಿಜೆಪಿಯ ಇಷ್ಟದ ಆಯ್ಕೆ. ಎರಡನೆಯದ್ದು, ತಮ್ಮ ಗುಂಪನ್ನು ಪ್ರತ್ಯೇಕವಾಗಿ ಉಳಿಸಿಕೊಳ್ಳುವುದು, ಇದು ಶಿಂಧೆ ಗುಂಪಿನ ಇಷ್ಟದ್ದು. ಇವೆರಡರಲ್ಲಿ ಯಾವ ಆಯ್ಕೆ ಮಾಡಿದರೂ ಅಂತಿಮವಾಗಿ ಶಿಂಧೆ ಗುಂಪು ಬಿಜೆಪಿ ಜೊತೆಯಲ್ಲಿಯೇ ಇರಬೇಕಾಗಬಹುದು.

ಒಂದೊಮ್ಮೆ ಶಿಂಧೆ ಗುಂಪು ಬಿಜೆಪಿ ಜೊತೆ ವಿಲೀನಗೊಂಡರೆ ಮುಂದಿನ ಚುನಾವಣೆಯಲ್ಲಿ ಇವರ ಗುಂಪಿನಲ್ಲಿರುವ ಬಹುಪಾಲು ಶಾಸಕರು ಗೆಲ್ಲಲು ಏಳು ಸಮುದ್ರಗಳ ನೀರು ಕುಡಿಯಬೇಕಾಗಬಹುದು. ಇದಕ್ಕೆ ಕಾರಣ ಇದೆ. ಶಿವಸೇನಾ ಹುಟ್ಟು ಹಿಂದುತ್ವದ ಪಕ್ಷ ಅಲ್ಲ, ಅದು ಹುಟ್ಟಿಕೊಂಡದ್ದೇ ರಾಷ್ಟ್ರೀಯ ಪಕ್ಷಗಳಿಗೆ ವಿರುದ್ಧವಾಗಿರುವ ಪ್ರಾದೇಶಿಕ ಪಕ್ಷವಾಗಿ. ಆದರೆ ಜಾಣ ಬಾಳಾ
ಠಾಕ್ರೆ, ಪ್ರಾಂತೀಯ ಭಾವನೆಯ ಮಿತಿ ಮತ್ತು ಮುಖ್ಯವಾಗಿ ಮುಂಬೈನ ಕಾಸ್ಮೊಪಾಲಿಟನ್ ಲಕ್ಷಣವನ್ನು ಅರ್ಥ
ಮಾಡಿಕೊಂಡು ಪಕ್ಷದ ನೆಲೆಯನ್ನು ವಿಸ್ತರಿಸಿಕೊಳ್ಳಲು ಪ್ರಾಂತೀಯ ಭಾವನೆಯ ‘ಮರಾಠಿ ಮಾನುಸ್’ ಜೊತೆ ಹಿಂದುತ್ವದ ಅಜೆಂಡಾವನ್ನು ಕಸಿಮಾಡಿಸಿಕೊಂಡರು.

ಈಗ ಶಿವಸೇನಾದ ಬಂಡಾಯ ನಾಯಕರು ಬಿಜೆಪಿ ಜೊತೆ ವಿಲೀನವಾದರೂ ಶಿವಸೇನಾದ ಬದ್ಧ ಮತದಾರರೆಲ್ಲರೂ ಕಣ್ಣುಮುಚ್ಚಿ ಮತಹಾಕುವುದು ಕಷ್ಟ. ಅಂತಹವರಿಗೆ ಎನ್‌ಸಿಪಿ ಕೂಡಾ ಆಯ್ಕೆಯಾಗಬಹುದು.

ಬಿಜೆಪಿ ಮತ್ತು ಶಿವಸೇನಾ ನಾಯಕರು ಎರಡು ದಶಕಗಳ ಕಾಲ ಮೈತ್ರಿ ಮಾಡಿಕೊಂಡು ಸಮಬಲದ ಸಾಧನೆಯ ಮೂಲಕ ಹಾಯಾಗಿದ್ದರು. 2014ರ ನಂತರ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯ ಉಗ್ರ ಹಿಂದುತ್ವದ ಎರಡನೇ ಅಲೆ ಅಪ್ಪಳಿಸತೊಡಗಿದಾಗ ಶಿವಸೇನಾಗೆ ಅಭದ್ರತೆ ಕಾಡತೊಡಗಿತ್ತು. ಹಿಂದುತ್ವದ ಮತಗಳು ತಮ್ಮಿಂದ ಬಿಜೆಪಿ ಕಡೆ ಸರಿದು ಹೋಗತೊಡಗಿರುವುದು ಆ ಪಕ್ಷದ ನಾಯಕತ್ವಕ್ಕೆ ಗೊತ್ತಾಗಿತ್ತು. 50-60ರ ಆಜುಬಾಜಿನಲ್ಲಿರುತ್ತಿದ್ದ ಬಿಜೆಪಿ ಶಾಸಕರ ಬಲ ಕಳೆದ ಎರಡು ಚುನಾವಣೆಗಳಲ್ಲಿ ಕ್ರಮವಾಗಿ 122, 106 ಆಗಿತ್ತು. 2019ರ ಚುನಾವಣೋತ್ತರ ಘರ್ಷಣೆಗೆ ಇದೂ ಒಂದು ಕಾರಣ. ಅಲ್ಲಿಯವರೆಗೆ ಶಿವಸೇನಾವನ್ನು ಹಿರಿಯಣ್ಣನೆಂದು ಒಪ್ಪಿಕೊಂಡಿದ್ದ ಬಿಜೆಪಿ ಇದ್ದಕ್ಕಿದ್ದ ಹಾಗೆ ಅದರ ಮೇಲೆ ಸವಾರಿ ಮಾಡತೊಡಗಿತ್ತು.

ಅದೇ ಸಮಯಕ್ಕೆ ಸರಿಯಾಗಿ ಬಾಳಾ ಠಾಕ್ರೆಯವರ ಎರಡನೇ ಮತ್ತು ಮೂರನೇ ತಲೆಮಾರಿನ ಪ್ರತಿನಿಧಿಗಳಾಗಿ
ಉದ್ಧವ್ ಮತ್ತು ಆದಿತ್ಯ ಠಾಕ್ರೆಯವರ ಆಗಮನವಾಗಿತ್ತು. ಸ್ವಭಾವದಲ್ಲಿ ಬಾಳಾ ಠಾಕ್ರೆಗಿಂತ ಸಂಪೂರ್ಣವಾಗಿ ಭಿನ್ನವಾಗಿದ್ದ ಅಪ್ಪ ಮತ್ತು ಮಗ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಬದಲಾಗುತ್ತಿರುವ ಹೊಸತಲೆಮಾರಿನ ಮತದಾರರಿಗೆ ಒಪ್ಪಿತವಾಗುವ ರೀತಿಯಲ್ಲಿ ಪಕ್ಷವನ್ನು ಕಟ್ಟುವ ತೀರ್ಮಾನಕ್ಕೆ ಬಂದಿದ್ದರು. ಬಿಜೆಪಿ ತಮ್ಮನ್ನು ಸಂಪೂರ್ಣ ನುಂಗಿಹಾಕುವ ಮೊದಲು ತಮ್ಮ ಪಕ್ಷಕ್ಕೆ ಸ್ವತಂತ್ರವಾದ ಗುರುತನ್ನು ಕೊಡುವುದು ಅವರಿಗೂ ಅನಿವಾರ್ಯವಾಗಿರಬಹುದು.

ಇದಕ್ಕಾಗಿ ತಂದೆ, ಮಗ ರಾಜಕೀಯವಾಗಿ ಅಪಾಯಕಾರಿ ನಿರ್ಧಾರ ಕೈಗೊಂಡಿದ್ದರು. ಈ ನಿರ್ಧಾರವೇ ಶಿವಸೇನಾಗೆ ಮುಳುವಾಯಿತು. ಸದ್ಯಕ್ಕೆ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಯೋಜನೆ ಫಲಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು