ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಗಲ್, ಘಾತಕ್, ರೋಸ್ಟಂ: ಡ್ರೋನ್ ಅಭಿವೃದ್ಧಿಗೆ ಬೆಂಗಳೂರಲ್ಲೂ 'ಯುವ' ಹವಾ

Last Updated 21 ಏಪ್ರಿಲ್ 2022, 11:29 IST
ಅಕ್ಷರ ಗಾತ್ರ

ಕಾರ್ಗೊ ಡ್ರೋನ್‌ಗಳನ್ನು ಅಭಿವೃದ್ಧಿಪಡಿಸುವುದೂ ಸೇರಿದಂತೆ ಹಲವು ಉದ್ದೇಶಗಳಿಗಾಗಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್‌ಡಿಒ) ಐದು ವಿಶೇಷ ಸಂಶೋಧನಾ ಪ್ರಯೋಗಾಲಯಗಳನ್ನು ಸ್ಥಾಪಿಸಿದೆ. ‘ ಯುವ ವಿಜ್ಞಾನಿ ಪ್ರಯೋಗಾಲಯ (ಡಿವೈಎಸ್‌ಎಲ್)’ ಎಂದು ಕರೆಯಲ್ಪಡುವ ಇವುಗಳು ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ ಹಾಗೂ ಕಲ್ಕತ್ತಾಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

2020ರ ಜನವರಿ 2ರಂದು ಪ್ರಧಾನ ಮಂತ್ರಿಗಳು ಇವುಗಳನ್ನು ಉದ್ಘಾಟಿಸಿದ್ದರು. ನಿಯಮಗಳ ಪ್ರಕಾರ, ಈ ಎಲ್ಲ ಪ್ರಯೋಗಾಲಯಗಳಲ್ಲಿ ಕಾರ್ಯನಿರ್ವಹಿಸುವವರೆಲ್ಲ 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು. ಈ ಪ್ರಯೋಗಾಲಯಗಳು ವಿಜ್ಞಾನದ ನಿರ್ದಿಷ್ಟ ಕ್ಷೇತ್ರದ ಮೇಲೆ ಗಮನ ಕೇಂದ್ರೀಕರಿಸಿವೆ.

ಐದು ಸಂಶೋಧನಾ ಪ್ರಯೋಗಾಲಯಗಳು ಹೀಗಿವೆ

1. ಕೃತಕ ಬುದ್ಧಿಮತ್ತೆ (ಡಿವೈಎಸ್‌ಎಲ್–ಎಐ), ಬೆಂಗಳೂರು

2. ಕಾಗ್ನಿಟಿವ್ ಟೆಕ್ನಾಲಜೀಸ್ (ಡಿವೈಎಸ್‌ಎಲ್–ಸಿಟಿ), ಚೆನ್ನೈ

3. ಸ್ಮಾರ್ಟ್ ಮೆಟೀರಿಯಲ್ಸ್ (ಡಿವೈಎಸ್‌ಎಲ್–ಎಸ್‌ಎಂ), ಹೈದರಾಬಾದ್

4. ಅಸಿಮ್ಮೆಟ್ರಿಕ್ ಟೆಕ್ನಾಲಜೀಸ್ (ಡಿವೈಎಸ್‌ಎಲ್–ಎಟಿ), ಕೋಲ್ಕತ್ತಾ

5. ಕ್ವಾಟಂ ಟೆಕ್ನಾಲಜೀಸ್ (ಡಿವೈಎಸ್‌ಎಲ್–ಕ್ಯುಟಿ), ಮುಂಬೈ

ಡಿವೈಎಸ್‌ಎಲ್–ಸಿಟಿ ‘ಯುವ ವಿಜ್ಞಾನಿ ಪ್ರಯೋಗಾಲಯ’ವು ಕಾಗ್ನಿಟಿವ್ ರೇಡಾರ್, ಕಾಗ್ನಿಟಿವ್ ರೇಡಿಯೊ ವ್ಯವಸ್ಥೆಯ ಅಭಿವೃದ್ಧಿ ಮತ್ತು ವಿನ್ಯಾಸದ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಇದು ‘ನ್ಯೂರಲ್ ನೆಟ್‌ವರ್ಕ್ (ಮಾನವನ ಮೆದುಳು ಮತ್ತು ನರಮಂಡಲದ ಮಾದರಿಯ ಕಂಪ್ಯೂಟರ್ ವ್ಯವಸ್ಥೆ)’ ಹಾಗೂ ‘ರಿ ಇನ್ಫೋರ್ಸ್‌ಮೆಂಟ್ ಲರ್ನಿಂಗ್ ಟೆಕ್ನಿಕ್ (ಗುರಿ ಆಧಾರಿತ ಕಲಿಕೆ ಮತ್ತು ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಸ್ವಯಂಚಾಲಿತಗೊಳಿಸುವುದು)’ ಬಳಸಿಕೊಂಡು ಗುರಿಯನ್ನು ಸಾಧಿಸುತ್ತದೆ.

2022ರ ಎಎವಿ (ಅಟಾನಮಸ್ ಏರ್ ವೆಹಿಕಲ್ಸ್) ವಿಚಾರ ಸಂಕಿರಣದಲ್ಲಿ ಘೋಷಿಸಿದಂತೆ, ಡಿಆರ್‌ಡಿಒದ ‘ಯುವ ವಿಜ್ಞಾನಿ ಪ್ರಯೋಗಾಲಯ’ ಯೋಜನೆಯು 'ಮಾನವರಹಿತ ವೈಮಾನಿಕ ವಾಹನ (ಯುಎವಿ) ಅಥವಾ ಡ್ರೋನ್‌’ ಅಭಿವೃದ್ಧಿಪಡಿಸಬೇಕಿದೆ. ಅತಿ ಎತ್ತರದ ಪ್ರದೇಶಗಳಲ್ಲಿ, ಹಿಮಾಲಯದ ಗಡಿ ಪ್ರದೇಶಗಳಲ್ಲಿ 50 ಕೆಜಿ ಭಾರ ಹೊತ್ತೊಯ್ಯುವ ಸಾಮರ್ಥ್ಯದ ‘ಯುಎವಿ’ಯನ್ನು ಅಭಿವೃದ್ಧಿಪಡಿಸಬೇಕಿದೆ.

ಸಿಡಿತಲೆಯೂ ಸೇರಿದಂತೆ 80 ಕೆಜಿ ತೂಕವುಳ್ಳ ಆಕ್ಟೋಕಾಪ್ಟರ್ (ಮಾನವರಹಿತ ಹೆಲಿಕಾಪ್ಟರ್) ಅಭಿವೃದ್ಧಿಪಡಿಸುವ ಬಗ್ಗೆ ‘ಡಿವೈಎಸ್‌ಎಲ್’ ಇತ್ತೀಚೆಗೆ ತನ್ನ ಪಾಲುದಾರರಿಗೆ ಮನವಿ ಸಲ್ಲಿಸಿತ್ತು. ಈ ಆಕ್ಟೋಕಾಪ್ಟರ್ ಸಮುದ್ರ ಮಟ್ಟದಲ್ಲಿ ಕನಿಷ್ಠ 50 ಕೆಜಿ ಮತ್ತು 15,000 ಅಡಿ ಎತ್ತರದಲ್ಲಿ 20 ಕೆಜಿ ಸರಕು ಒಯ್ಯಬಲ್ಲದ್ದಾಗಿರಬೇಕು. ಮೈನಸ್ 20 ಡಿಗ್ರಿ ವಾತಾವರಣದಲ್ಲಿಯೂ ಹಾರಾಟ ಮಾಡಬಲ್ಲದ್ದಾಗಿರಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿತ್ತು.

ಸವಾಲುಗಳು

ಪ್ರತಿಕೂಲ ಹವಾಮಾನ ಇರುವ ಹಾಗೂ ಅತಿ ಎತ್ತರದ ಪ್ರದೇಶಗಳಲ್ಲಿ ಡ್ರೋನ್‌ಗಳ ಹಾರಾಟ ನಡೆಸುವುದು ಸುಲಭದ ಕೆಲಸವಲ್ಲ. ಅತಿ ಎತ್ತರದ ಪ್ರದೇಶಗಳಲ್ಲಿ ಗಾಳಿಯ ಸಾಂದ್ರತೆ ಕಡಿಮೆ ಇರುವುದು ಡ್ರೋನ್ ಹಾರಾಟಕ್ಕೆ ಮತ್ತಷ್ಟು ಸವಾಲಾಗಿ ಪರಿಣಮಿಸುತ್ತದೆ. ಇಂಥ ಪ್ರದೇಶಗಳ ವಾತಾವರಣದಿಂದಾಗಿ ಬ್ಯಾಟರಿ ಬೇಗನೇ ಖಾಲಿಯಾಗುವುದರಿಂದ ಡ್ರೋನ್‌ ಹಾರಾಟದ ಅವಧಿ ಕುಂಠಿತಗೊಳ್ಳುತ್ತದೆ.

ಪರ್ವತ ಪ್ರದೇಶಗಳಲ್ಲಿ ಡ್ರೋನ್‌ ಕಾರ್ಯಾಚರಣೆ ನಡೆಸುವ ಸಂದರ್ಭದಲ್ಲಿ ಅನುಭವಕ್ಕೆ ಬಂದ ಎರಡು ಪ್ರಮುಖ ಅಡೆತಡೆಗಳನ್ನು ಇರಿನಾ ಕೆ ರಾಮನೊವಾ ಅವರು ಅಧ್ಯಯನದಲ್ಲಿ ಕಂಡುಕೊಂಡಿದ್ದಾರೆ.

1) ಮೂಲಸೌಕರ್ಯ, ಇಂಟರ್‌ನೆಟ್, ಸೆಟಲೈಟ್ ನೆಟ್‌ವರ್ಕ್‌, ರೇಡಿಯೊ ಹಾಗೂ ಇತರ ಸಂವಹನ ಸಾಧನಗಳ ಕೊರತೆ ಡ್ರೋನ್ ಕಾರ್ಯಾಚರಣೆ ಮೇಲೆ ಪರಿಣಾಮ ಬೀರುತ್ತವೆ. ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು, ಕಡಿಮೆ ಬ್ಯಾಂಡ್‌ವಿಡ್ತ್ ಹಾಗೂ ಇತರ ಅನೇಕ ಸಮಸ್ಯೆಗಳಿಂದ ಕಾರ್ಯಾಚರಣೆ ವಿಳಂಬವಾಗುತ್ತದೆ. ಹಿಮ ಮತ್ತು ಶೂನ್ಯ ತಾಪಮಾನವು ಬ್ಯಾಂಡ್‌ವಿಡ್ತ್ ತಂತ್ರಜ್ಞಾನದ ಮೇಲೆ ಪರಿಣಾಮ ಬೀರುತ್ತವೆ.

2) ಪರ್ವತ ಪ್ರದೇಶಗಳಲ್ಲಿ ಡ್ರೋನ್‌ಗಳ ಕಾರ್ಯಾಚರಣೆ ನಡೆಸುವಾಗ ಪರಸ್ಪರ ಡಿಕ್ಕಿಯಾಗದಂತೆ ತಡೆಯುವುದು ಬಹಳ ಸವಾಲಿನದ್ದಾಗಿದೆ. ಸಾಮಾನ್ಯವಾಗಿ ಸಂವೇದಕಗಳು ಮತ್ತು ಘರ್ಷಣೆ ಪತ್ತೆ ಅಲ್ಗಾರಿದಂಗಳನ್ನು ಬಳಸಿಕೊಂಡು ಡಿಕ್ಕಿಯಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ಆದ್ದರಿಂದ ಡ್ರೋನ್‌ಗಳ ನೆಟ್‌ವರ್ಕ್‌ಗಳನ್ನು ಗುರುತಿಸಬೇಕಾದದ್ದು ಅತೀ ಅಗತ್ಯವಾಗಿದೆ.

ಭಾರತದ ಇತ್ತೀಚಿನ ಡ್ರೋನ್‌ಗಳು

ಡಿಆರ್‌ಡಿಒ ಇಂಪೀರಿಯಲ್ ಈಗಲ್: ಇದು ‘ನ್ಯಾಷನಲ್ ಏರೋನಾಟಿಕಲ್ ಲ್ಯಾಬೋರೇಟರಿ’ಯ ‘ಏರೋನಾಟಿಕಲ್ ಡೆವಲಪ್‌ಮೆಂಟ್ ಎಸ್ಟಾಬ್ಲಿಷ್‌ಮೆಂಟ್’ ಅಭಿವೃದ್ಧಿಪಡಿಸಿದ ಹಗುರವಾದ ಮಿನಿ ಡ್ರೋನ್. ರಾಷ್ಟ್ರೀಯ ಭದ್ರತಾ ಸಿಬ್ಬಂದಿ ಮತ್ತು ಸೇನಾ ಸೇವೆಗಳಲ್ಲಿ ಇದನ್ನು ಮುಖ್ಯವಾಗಿ ಬಳಸಲಾಗುತ್ತಿದೆ. ಈ ಡ್ರೋನ್ ಅನ್ನು ಟ್ರ್ಯಾಕ್ ಮಾಡಲು ಜಿಪಿಎಸ್ ಅಥವಾ ಅಟೊಮ್ಯಾಟಿಕ್ ಗೇಯ್ನ್ ಕಂಟ್ರೋಲ್ ವ್ಯವಸ್ಥೆಯನ್ನು ಬಳಸಲಾಗುತ್ತಿದೆ.

ಡಿಆರ್‌ಡಿಒ ರೋಸ್ಟಂ II: ಇದು ಕಡಿಮೆ ಸಹಿಷ್ಣುತೆಯ, ಮಧ್ಯಮ ಎತ್ತರದ ಪ್ರದೇಶಲ್ಲಿ ಹಾರಾಡಬಲ್ಲ ಡ್ರೋನ್ ಆಗಿದ್ದು, ಭಾರತೀಯ ಸೇನೆಗಾಗಿ (ಭೂಸೇನೆ, ವಾಯುಪಡೆ ಹಾಗೂ ನೌಕಾಪಡೆ) ಅಭಿವೃದ್ಧಿಪಡಿಸಲಾಗಿದೆ. ಡಾ. ರೋಸ್ಟಮ್ ದಮಾನಿಯಾ ನೇತೃತ್ವದ ತಂಡವು ಎನ್‌ಎಎಲ್‌ನ ಲಘು ಕಾನಾರ್ಡ್ ರಿಸರ್ಚ್ ಏರ್‌ಕ್ರಾಫ್ಟ್‌ನಿಂದ (ಎಲ್‌ಸಿಆರ್‌ಎ) ಪ್ರೇರಣೆಗೊಂಡು ಈ ಡ್ರೋನ್‌ ಅನ್ನು ಅಭಿವೃದ್ಧಿಪಡಿಸಿದೆ.

ಡಿಆರ್‌ಡಿಒ ಘಾತಕ್ : ಇದು ಡಿಆರ್‌ಡಿಒ ಅಭಿವೃದ್ಧಿಪಡಿಸಿದ ರಹಸ್ಯ ಕಾರ್ಯಾಚರಣೆ ನಡೆಸಬಲ್ಲ ಡ್ರೋನ್ ಅಥವಾ ‘ಅನ್‌ಮ್ಯಾನ್ಡ್ ಕಾಂಬ್ಯಾಟ್ ಏರಿಯಲ್ ವೆಹಿಕಲ್ (ಯುಸಿಎವಿ). ಎಯುಆರ್‌ಎ (ಸ್ವಾಯತ್ತ ಮಾನವರಹಿತ ಸಂಶೋಧನಾ ವಿಮಾನ) ಯೋಜನೆಯ ಅಡಿಯಲ್ಲಿ ಈ ಡ್ರೋನ್‌ ಅನ್ನು ಅಭಿವೃದ್ಧಿಪಡಿಸಲಾಗಿದೆ. ಈ ಯೋಜನೆ ಸದ್ಯ ಆರಂಭಿಕ ಹಂತದಲ್ಲಿದ್ದು, 2025ರ ವೇಳೆಗೆ ಪೂರ್ಣಪ್ರಮಾಣದಲ್ಲಿ ಸಿದ್ಧವಾಗಲಿದೆ.

–ಲೇಖಕರು, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT