ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಸೋತು ಸೊರಗುತ್ತಿರುವ ಶರಾವತಿ

ಮಲೆನಾಡಿನಲ್ಲಿ ಹುಟ್ಟಿ ನಾಡನ್ನು ಪೋಷಿಸುತ್ತಿರುವ ಹೆಚ್ಚಿನ ಜೀವನದಿಗಳು ಅಕ್ಷರಶಃ ಸಾಯುತ್ತಿವೆ
Last Updated 14 ಮಾರ್ಚ್ 2022, 2:37 IST
ಅಕ್ಷರ ಗಾತ್ರ

ಕಾಡು ಕಾಣೆಯಾಗುವುದು, ಕೆರೆಗಳು ಕಣ್ಮುಚ್ಚುವುದು, ಅದಿರು ಮಾಯವಾಗುವುದು ಇವೆಲ್ಲ ನಮಗೆ ಗೊತ್ತು. ಹಲವೆಡೆ ಈಗ ನದಿಗಳೂ ಕಣ್ಮರೆಯಾಗುತ್ತಿವೆ! ತುಮಕೂರಿನ ಜಯಮಂಗಲಿ ನದಿ, ಕೋಲಾರದ ಪಿನಾಕಿನಿ ನದಿ ಅಥವಾ ಚಿತ್ರದುರ್ಗ ಜಿಲ್ಲೆಯ ವೇದಾವತಿಯಂಥ ಹಲವು ನದಿಗಳ ಬಹುತೇಕ ನದಿಪಾತ್ರಗಳು ಒಣಗಿ ಬಯಲಾಗುತ್ತಿವೆ. ನೀರಿರುವ ನದಿಗಳಾದರೋ ಮೀತಿಮೀರಿ ಕಲುಷಿತವಾಗುತ್ತಿವೆ.

ರಾಜ್ಯದ ಹದಿನೇಳಕ್ಕೂ ಹೆಚ್ಚಿನ ನದಿಗಳ ನೀರು ಕುಡಿಯುವುದು ಬಿಡಿ, ಕೃಷಿಗೂ ಯೋಗ್ಯವಲ್ಲ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯೇ ಒಪ್ಪಿದೆ. ಹೀಗಾಗಿ, ಮುಂದಿನ ಎರಡು ದಶಕಗಳಲ್ಲಿ ದೇಶದ ಬಹಳಷ್ಟು ನದಿಗಳು ನಾಶವಾಗಲಿವೆ ಎಂಬ ಹವಾಮಾನ ಬದಲಾವಣೆ ಕುರಿತ ಅಂತರರಾಷ್ಟ್ರೀಯ ಸಮಿತಿಯ (ಐಪಿಸಿಸಿ) ಇತ್ತೀಚಿನ ವರದಿಯಲ್ಲಿನ ಎಚ್ಚರಿಕೆ ಆಶ್ಚರ್ಯವನ್ನೇ ಉಂಟುಮಾಡುತ್ತಿಲ್ಲ!

ನದಿಗಳು ಜೀವ ಕಳೆದುಕೊಳ್ಳುವುದರ ಪ್ರತ್ಯಕ್ಷ ದರ್ಶನವಾಗಬೇಕಾದರೆ, ರಾಜ್ಯದ ಜೀವನದಿಗಳಲ್ಲೊಂದಾದ ಶರಾವತಿ ನದಿಗುಂಟ ಒಮ್ಮೆ ಸಾಗಬೇಕು. ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆ ವ್ಯಾಪ್ತಿಯಲ್ಲಿ ಹರಿಯುವ 128 ಕಿ.ಮೀ. ಉದ್ದದ ಈ ನದಿಯ ಜಲಾನಯನ ಪ್ರದೇಶವು ಕೇವಲ ಮೂರು ಸಾವಿರ ಚದರ ಕಿ.ಮೀ. ಮಾತ್ರ. ಆದರೆ, ನದಿ ಸಣ್ಣದಾದರೂ ಅದರ ಪಾರಿಸರಿಕ, ಆರ್ಥಿಕ ಹಾಗೂ ಸಾಮಾಜಿಕ ಮಹತ್ವ ಮಾತ್ರ ಅನನ್ಯವಾದದ್ದು. ಲಕ್ಷಾಂತರ ರೈತರು, ವನವಾಸಿಗರು ಹಾಗೂ ಮೀನುಗಾರರು ಈ ಕಣಿವೆಯ ತೊರೆಗಳು ಮತ್ತು ಸಮೃದ್ಧ ಕಾಡನ್ನೇ ನೆಚ್ಚಿ ಬಾಳುತ್ತಿದ್ದಾರೆ. ಲಿಂಗನಮಕ್ಕಿ, ಜೋಗ ಹಾಗೂ ಗೇರುಸೊಪ್ಪೆಯ ಜಲವಿದ್ಯುತ್ ಸ್ಥಾವರಗಳು ನಾಡನ್ನು ಬೆಳಗುತ್ತಿವೆ. ಕತ್ತಲೆಕಾನಿನಂಥ ನಿತ್ಯಹರಿದ್ವರ್ಣ ಕಾಡುಗಳು ಅಪಾರ ಜೀವವೈವಿಧ್ಯವನ್ನು ಪೋಷಿಸುತ್ತ, ಪರಿಸರ ಸಮತೋಲನಕ್ಕೆ ಜಾಗತಿಕ ಕೊಡುಗೆ ನೀಡುತ್ತಿವೆ. ವರ್ತಮಾನ ಹಾಗೂ ಭವಿಷ್ಯದಲ್ಲಿ ಜನಜೀವನದ ನೆಮ್ಮದಿ ಕಾಯಬಲ್ಲ ಸುಸ್ಥಿರ ಆರ್ಥಿಕತೆಯೊಂದರ ಅಡಿಗಲ್ಲಾಗಬಲ್ಲ ಅಮೂಲ್ಯ ಜೈವಿಕವ್ಯವಸ್ಥೆಯಿದು ಎಂದು, ಭಾರತಿಯ ವಿಜ್ಞಾನ ಮಂದಿರದ ಅಧ್ಯಯನಗಳು ನಿರೂಪಿಸಿವೆ.

ಆದರೆ, ಅದನ್ನು ಈಗ ಹೇಗೆ ನಿರ್ವಹಿಸಲಾಗುತ್ತಿದೆ? ತೀರ್ಥಹಳ್ಳಿಯ ಅಂಬುತೀರ್ಥದಲ್ಲಿ ಹುಟ್ಟುವ ಸಣ್ಣತೊರೆಯೊಂದನ್ನು ಶರಾವತಿ ಮೂಲವೆಂದು ಗುರುತಿಸುವುದಾದರೂ, ಅಂಥ ನೂರಾರು ಹೊಳೆ- ಹಳ್ಳಗಳು ಸೇರಿಯೇ ಶರಾವತಿ ಮೈದುಂಬಿಕೊಳ್ಳುವುದು. ಸಾಗರ ಹಾಗೂ ಹೊಸನಗರ ತಾಲ್ಲೂಕುಗಳಲ್ಲಿ ವ್ಯಾಪಿಸಿರುವ ಈ ತೊರೆಗಳ ಜಾಲದ ಕಣಿವೆಯ ಅರಣ್ಯಗಳೆಲ್ಲ ಇದೀಗ ಭೂ-ಅತಿಕ್ರಮಣ, ಮರಕಡಿತ, ಅಕ್ರಮ ಕ್ವಾರಿಗಳು, ಅಕೇಶಿಯಾ- ನೀಲಗಿರಿ ನೆಡುತೋಪುಗಳಿಗೆ ಬಲಿಯಾಗುತ್ತಿವೆ. ಕಾಡು ಬರಿದಾದಂತೆ ಮಣ್ಣುಸವೆತ ಹೆಚ್ಚಿ, ಮಳೆನೀರು ಇಂಗುವಿಕೆ ಕಡಿಮೆಯಾಗಿ ಅಂತರ್ಜಲ ಕುಸಿಯುತ್ತಿದೆ. ಕೆರೆಗಳು ಹೂಳುತುಂಬಿ, ತೊರೆಗಳು ಒಣಗುತ್ತಿವೆ. ಈ ಪ್ರದೇಶದ ನಂದಿಹೊಳೆ, ಮಾವಿನಹೊಳೆ, ಹುರಳಿಹೊಳೆ, ನಾಗೋಡಿಹೊಳೆ, ಹರಿದ್ರಾವತಿಯಂಥ ತೊರೆಗಳು ವರ್ಷದ ಬಹುಕಾಲ ಒಣಗಿ, ಶರಾವತಿಗೆ ಕನಿಷ್ಠ ನೀರುಣಿಸಲೂ ಹೆಣಗುತ್ತಿವೆ. ಇವೆಲ್ಲವುಗಳಿದಾಗಿ ಲಿಂಗನಮಕ್ಕಿ ಜಲಾಶಯದಲ್ಲಿ ಹೂಳಿನ ಪ್ರಮಾಣ ಹೆಚ್ಚುತ್ತಿದ್ದು, ರಕ್ಷಿಸಿಕೊಳ್ಳಬೇಕಾದ ಕರ್ನಾಟಕ ವಿದ್ಯುತ್ ನಿಗಮವು ಅರಿವಿದ್ದೂ ತೆಪ್ಪಗಿದೆ!

ನದಿಯ ಮಧ್ಯಭಾಗ ಎನ್ನಬಹುದಾದ ಜಗತ್ಪ್ರಸಿದ್ಧ ಜೋಗ ಜಲಪಾತದ ಸುತ್ತಲಿನ ಪರಿಸ್ಥಿತಿಯಾದರೋ ಮತ್ತಷ್ಟು ಅಪಾಯದಿಂದ ಕೂಡಿದೆ. ಪಶ್ಚಿಮಘಟ್ಟದ ಹೃದಯದಂತಿರುವ ಇಲ್ಲಿನ ಗುಡ್ಡ- ಕಣಿವೆಗಳಲ್ಲಿ, ಇತ್ತೀಚಿನ ವರ್ಷಗಳಲ್ಲಿ ಎಲ್ಲೆಂದರಲ್ಲಿ ರೆಸಾರ್ಟ್, ಬೃಹತ್ ವಿದ್ಯುತ್ ಮಾರ್ಗ ಹಾಗೂ ರಸ್ತೆ ಅಗಲೀಕರಣ ಕಾಮಗಾರಿಗಳು ಎಗ್ಗಿಲ್ಲದೆ ಸಾಗಿವೆ. ಜೊತೆಗೆ ಅಕ್ರಮ ಕ್ವಾರಿಗಳು ಗುಡ್ಡಗಳ ನೆತ್ತಿಯಲ್ಲೂ ಗುಂಡಿಗಳನ್ನು ನಿರ್ಮಿಸುತ್ತಿವೆ. ಹವಾಮಾನ ಬದಲಾವಣೆಯಿಂದಾಗಿ ಒಮ್ಮೆಲೇ ಅತಿಯಾಗಿ ಮಳೆ ಸುರಿಯುವ ಸಂದರ್ಭಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿರುವುದು ಅನುಭವಕ್ಕೆ ಬರುತ್ತಿದೆ. ಅಂಥ ಭಾರಿ ಮಳೆಯಲ್ಲಿ ಮೊದಲೇ ಗಾಸಿಗೊಂಡ ಗುಡ್ಡಗಳು ಜರಿಯುತ್ತಿವೆ. ಲಿಂಗನಮಕ್ಕಿ ಅಣೆಕಟ್ಟೆಯಿಂದ ಕೂಗಳತೆ ದೂರದ ಅರಲಗೋಡು ಬಳಿ ಕಳೆದ ವರ್ಷ ಪರ್ವತಗಳು ಸಾಲಾಗಿ ಕುಸಿದು, ಹಲವಾರು ಕುಟುಂಬಗಳು ಮನೆ-ಜಮೀನು ಕಳೆದುಕೊಂಡಿವೆ. ಇಲ್ಲಿನ ಹೆಚ್ಚಿನವರು ಜಲವಿದ್ಯುತ್ ಯೋಜನೆಗಳಲ್ಲಿ ಈಗಾಗಲೇ ನೆಲೆ ಕಳೆದುಕೊಂಡು ಪುನರ್ವಸತಿಯಾದ ನಿರಾಶ್ರಿತರು. ಮಂಗನಕಾಯಿಲೆ, ಬೇಸಿಗೆಯ ನೀರಿನ ಕೊರತೆ, ವನ್ಯಪ್ರಾಣಿ ಹಾವಳಿಯಿಂದಾಗಿ ಹೈರಾಣಾಗಿರುವ ಹಳ್ಳಿಗರು. ಇತ್ತೀಚಿನ ಭೂಕುಸಿತಗಳಿಂದಾಗಿ ಅವರ ಜೀವನ ಮತ್ತಷ್ಟು ನಲುಗಿಹೋಗಿದೆ.

ಜೋಗ ಜಲಪಾತದಿಂದ ಮುಂದೆ ಸಾಗಿ, ಟೆಲರೇಸ್ ಅಣೆಕಟ್ಟನ್ನೂ ದಾಟಿ, ಗೇರುಸೊಪ್ಪೆ ಬಳಿ ಶರಾವತಿ ಘಟ್ಟವನ್ನಿಳಿಯುತ್ತಾಳೆ. ಮುಂದೆ ಸುಮಾರು ಮೂವತ್ತೈದು ಕಿ.ಮೀ. ಕರಾವಳಿ ಬಯಲಲ್ಲಿ ಪ್ರಶಾಂತವಾಗಿ ಸಾಗಿ ಹೊನ್ನಾವರದಲ್ಲಿ ಅರಬ್ಬಿಸಮುದ್ರ ಸೇರುತ್ತಾಳೆ. ಈ ಹರಿವಿನ ಇಕ್ಕೆಲಗಳಲ್ಲಿ ಹಲವಾರು ಹಳ್ಳಿಗಳು, ಸಮೃದ್ಧ ಕೃಷಿ ಜಮೀನು, ಗುಡ್ಡ- ಬೆಟ್ಟಗಳಿವೆ. ಇಲ್ಲಿನ ರೈತರು, ಕೃಷಿ ಕಾರ್ಮಿಕರು, ಮೀನುಗಾರರು ಎಲ್ಲರಿಗೂ ಅವಳೇ ಅನ್ನ- ನೀರು ನೀಡುವವಳು. ಕರಾವಳಿಯ ಅಂಬಿಗರಿಗಂತೂ ಆಕೆ ಸಾಕ್ಷಾತ್ ಗಂಗೆಯೇ.

ಅರಾಧಿಸಬೇಕಾದ ನದಿಯನ್ನು ಇಲ್ಲಿ ಆದರಿಸಿರುವ ಬಗೆಯಾದರೂ ಹೇಗೆ? ಮೇಲ್ಭಾಗದ ಅಣೆಕಟ್ಟುಗಳು ನೀರನ್ನು ತಡೆಯುವುದರಿಂದ, ಇಲ್ಲಿ ವರ್ಷದ ಬಹುಕಾಲ ನೀರಿನ ಹರಿವು ಕಡಿಮೆಯೇ. ನೀರಿಗಿಂತ ಮೇಲಿಂದ ಬರುವ ಹೂಳಿನ ಪ್ರವಾಹವೇ ಹೆಚ್ಚೆನ್ನಬೇಕು. ಜೋರುಮಳೆಯ ದಿನಗಳನ್ನು ಹೊರತುಪಡಿಸಿದರೆ, ನದಿಯ ಈ ಕರಾವಳಿ ಭಾಗದಲ್ಲಿ ಸಿಹಿನೀರಿನ ಸಹಜ ಹರಿವೇ ಇಲ್ಲ. ಸಮುದ್ರಮುಖಿ ಹರಿವೇ ಇಲ್ಲದೆ, ಕಡಲಿನ ಉಪ್ಪುನೀರು ನದಿಪಾತ್ರದ ಒಳಪ್ರದೇಶಕ್ಕೆ ಮುನ್ನುಗ್ಗುತ್ತಿದೆ. ಅಕ್ಕಪಕ್ಕದ ಬಾವಿ, ಕೆರೆ, ಹೊಳೆ, ಗದ್ದೆ-ತೋಟಗಳಿಗೆ ಈ ಸವಳುನೀರು ವ್ಯಾಪಿಸಿ, ಕೃಷಿಕರು ಸೋಲುತ್ತಿದ್ದಾರೆ. ಮೀನು, ಏಡಿಗಳಂಥ ಜಲಚರಗಳಲ್ಲಿನ ವೈವಿಧ್ಯ ಮತ್ತು ಲಭ್ಯತೆ ಕಡಿಮೆಯಾಗಿ ಮೀನುಗಾರರು ಸಂಕಷ್ಟಕ್ಕೀಡಾಗುತ್ತಿದ್ದಾರೆ. ನದಿಯ ಜೈವಿಕ ಸಂರಚನೆಯೇ ಗಾಸಿಗೊಂಡು, ಜನಜೀವನ ಕುಸಿಯುತ್ತಿದೆ.

ಜೊತೆಗೆ, ಎರಡೂ ದಂಡೆಗಳ ಮಿತಿಮೀರಿದ ಅತಿಕ್ರಮಣ. ಮೊದಲೆಲ್ಲ ಕೇದಿಗೆ ಗಿಡವನ್ನು ನೆಟ್ಟೋ ತೋಟ ವಿಸ್ತರಿಸಿಯೋ ಇಂಚಿಂಚಾಗಿ ನದಿಯಂಚು ಅತಿಕ್ರಮಿಸುವ ಸಂದರ್ಭಗಳಿದ್ದವು. ಆದರೆ, ಇತ್ತೀಚಿನ ಅಳತೆಯಿಲ್ಲದ ಮರಳು ಗಣಿಗಾರಿಕೆಯಿಂದಾಗಿ ನದಿಪಾತ್ರವು ನಾಶವಾಗುತ್ತಲೇ, ಅತಿಕ್ರಮಣಕ್ಕೂ ಒಳಗಾಗುತ್ತಿದೆ. ಮರಳು ಉದ್ಯಮಿಗಳು ಪ್ರತಿವರ್ಷವೂ ನದಿಯಂಚಿನ ಹೊಸ ಜಾಗದಲ್ಲಿ ನದಿಯಲ್ಲೇ ಮಣ್ಣುತುಂಬಿ ಮರಳು ದಾಸ್ತಾನು ನಿರ್ಮಿಸುತ್ತಾರೆ. ಮುಂದಿನ ವರ್ಷ ಹೊಸ ಜಾಗ ಅತಿಕ್ರಮಿಸಿಕೊಂಡು, ಹಿಂದಿನ ವರ್ಷ ಬಳಸಿದ್ದ ನದಿಯಂಚನ್ನು ಇನ್ನಾರಿಗೋ ಮಾರುವ ರಿಯಲ್ ಎಸ್ಟೇಟ್ ಉದ್ಯಮಕ್ಕಿಳಿದಿದ್ದಾರೆ. ಬಳ್ಕೂರು, ಇಡಗುಂಜಿ, ಮಾಳ್ಕೋಡು, ಪಡ್ಕುಳಿ, ಹೊಳೆಬಾಡದಂಥ ನದಿತಟದ ಊರುಗಳಲ್ಲಿ ಇದನ್ನು ಈಗಲೂ ನೋಡಬಹುದು. ನದಿಯ ಕನಿಷ್ಠ ನಿರ್ವಹಣೆಯೂ ಕಂದಾಯ, ಗಣಿ, ಪರಿಸರ ಇಲಾಖೆಗಳು ಹಾಗೂ ಪಂಚಾಯತ್‌ ವ್ಯವಸ್ಥೆಗೆ ಸಾಧ್ಯವಾಗುತ್ತಿಲ್ಲ!

ಈ ಅಧ್ವಾನಗಳಿಂದಾಗಿ ನದಿಪಾತ್ರ ಕಿರಿದಾಗಿ, ಹೂಳು-ಗಿಡಗಂಟಿ ತುಂಬಿ, ಕನಿಷ್ಠ ಪ್ರಮಾಣದ ನೀರಿನ ಹರಿವೂ (ಇಟಿviಡಿoಟಿmeಟಿಣಚಿಟ ಈಟoತಿ) ಇಲ್ಲವಾಗುತ್ತಿದೆ. ಶರಧಿ ಸೇರುವ ಮುನ್ನವೇ ಶರಾವತಿ ಬರಿದಾಗುತ್ತಿದ್ದಾಳೆ. ಇದನ್ನೆಲ್ಲ ಅರ್ಥೈಸಿಕೊಂಡು ನದಿಯ ಪುನರುಜ್ಜೀವನ ಕೈಗೊಳ್ಳಲು ಸರ್ಕಾರ ಹೆಜ್ಜೆಯಿರಿಸಬೇಕಿತ್ತು. ಬದಲಾಗಿ, ನದಿಕಣಿವೆಯ ಕಾಡನ್ನು ಮತ್ತಷ್ಟು ಕತ್ತರಿಸಿ ಜಲಾನಯನ ಪ್ರದೇಶವನ್ನೇ ಛಿದ್ರಮಾಡುವ ನೂರಾರು ಮಿನಿ ಒಡ್ಡುಗಳ ಕಾಮಗಾರಿ ಜಾಲ ಕೈಗೊಳ್ಳಲು ಸಣ್ಣ ನೀರಾವರಿ ಇಲಾಖೆಯ ‘ಪಶ್ಚಿಮವಾಹಿನಿ’ ಯೋಜನೆಗೆ ಮಂಜೂರಾತಿ ನೀಡಿದೆ. ಇತ್ತ ಜೋಗದಲ್ಲಿ ಪ್ರವಾಸಿಗರನ್ನು ಆಕರ್ಷಿಸಲು, ಕೃತಕವಾಗಿ ‘ಸರ್ವಋತು ಜಲಪಾತ’ ನಿರ್ಮಿಸುವ ಕಾಮಗಾರಿಗೆ ಜೋಗ ಅಭಿವೃದ್ಧಿ ಪ್ರಾಧಿಕಾರಕ್ಕೆ ಒಪ್ಪಿಗೆ ನೀಡಿದೆ! ನದಿಯ ನಿರ್ವಹಣೆಗೆ ವೈಜ್ಞಾನಿಕ ನೀತಿಯನ್ನೇ ರೂಪಿಸದೆ, ಕಾಮಗಾರಿಗಳಲ್ಲೇ ಹಣ ಹರಿಸುವ ಈ ಅವಿವೇಕಕ್ಕೆ ಏನೆನ್ನಬೇಕು?

ಆರೋಗ್ಯ ಹದಗೆಟ್ಟ ರೋಗಿಗೆ ಚಿಕಿತ್ಸೆ ನೀಡುವ ಬದಲು, ಹೆಣವಾಗುವ ಮುನ್ನವೇ ಮಾಡುತ್ತಿರುವ ಶೃಂಗಾರವೆಂದೇ?

___

ಲೇಖಕ: ನಿರ್ದೇಶಕ, ಸಂರಕ್ಷಣಾ ಜೀವಶಾಸ್ತ್ರ ಮತ್ತುಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರ, ಶಿರಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT