ಬುಧವಾರ, ಸೆಪ್ಟೆಂಬರ್ 22, 2021
24 °C
ಆಧುನಿಕ ಅರ್ಥ ವ್ಯವಸ್ಥೆಯ ಪಾಲಿನ ‘ತೈಲ’ವಾದ ಮಾಹಿತಿ ಮತ್ತು ಡೇಟಾಗೂ ಒಂದು ಮಿತಿ ಇದೆ

ಕ್ಯಾಪ್ಟನ್ ಜಿ.ಆರ್. ಗೋಪಿನಾಥ್ ಬರಹ: ಇಂಟರ್ನೆಟ್ ಮಾತ್ರ ನಂಬಿ ಬದುಕಲಾದೀತೇ?

ಕ್ಯಾಪ್ಟನ್ ಜಿ.ಆರ್. ಗೋಪಿನಾಥ್ Updated:

ಅಕ್ಷರ ಗಾತ್ರ : | |

ಜೊಮ್ಯಾಟೊ ಕಂಪನಿಯ ಐಪಿಒ ಈಚೆಗೆ ಪೂರ್ಣಗೊಂಡಿದೆ. ಕಂಪನಿಯ ಮಾರುಕಟ್ಟೆ ಮೌಲ್ಯ ₹ 66 ಸಾವಿರ ಕೋಟಿ ಎಂಬ ಅಂದಾಜಿನ ನೆಲೆಯಲ್ಲಿ ಸರಿಸುಮಾರು ₹ 9 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಲಾಗಿದೆ. ಇದನ್ನು ಕಂಡಾಗ, ದುಡ್ಡು ಗಿಡ–ಮರಗಳಲ್ಲಿ ಬೆಳೆಯುತ್ತದೆ ಎಂದು ನಂಬಬೇಕಾಗುತ್ತದೆ. ಟೊಮ್ಯಾಟೊ ಗಿಡದಲ್ಲಿ ಅಲ್ಲದಿದ್ದರೂ, ಜೊಮ್ಯಾಟೊ ಗಿಡದಲ್ಲಿ ದುಡ್ಡು ಬೆಳೆಯುತ್ತದೆ!

‘ಮೌಲ್ಯ ಇರುವ ಎಲ್ಲವನ್ನೂ ಹಳ್ಳಿಗಳಲ್ಲಿ ಉತ್ಪಾದಿ ಸಲಾಗುತ್ತಿದೆ ಎಂದಾದರೆ, ಹಳ್ಳಿಗಳು ಬಡತನದಲ್ಲಿ ಇರುವುದು ಏಕೆ? ನಗರಗಳು ಶ್ರೀಮಂತಿಕೆಯಿಂದ ತುಂಬಿರುವುದು ಹೇಗೆ’ ಎಂದು ಲಿಯೊ ಟಾಲ್‌ಸ್ಟಾಯ್‌ ತಮ್ಮ ‘ವಾಟ್ ದೆನ್ ಮಸ್ಟ್ ವಿ ಡು’ ಕೃತಿಯಲ್ಲಿ ಪ್ರಶ್ನಿಸಿದ್ದರು. ಈ ಪ್ರಶ್ನೆಗೆ ಇಂದಿಗೂ ಸ್ಪಷ್ಟ ಉತ್ತರ ಸಿಕ್ಕಿಲ್ಲ.

1980ರ ದಶಕದ ನನ್ನ ಜೀವನ ನೆನಪಾಗುತ್ತಿದೆ. ಆ ದಿನಗಳಲ್ಲಿ ರೈತನಾಗಿ ನಾನು ನನ್ನ ಅಗತ್ಯಗಳನ್ನು ಪೂರೈಸಿಕೊಳ್ಳಲು ಹೆಣಗುತ್ತಿದ್ದೆ. ಇಡೀ ದಿನ ಕೆಲಸ ಮಾಡುತ್ತಿದ್ದೆ ಆಗ. ಒಂದು ದಿನ ಬಾಳೆಗೊನೆಗಳನ್ನು ಕೊಯ್ದು, ಸೂರ್ಯೋದಯಕ್ಕೆ ಮುನ್ನವೇ ಅವುಗಳನ್ನು ನನ್ನ ಟ್ರ್ಯಾಕ್ಟರ್‌ಗೆ ಹೇರಿಕೊಂಡು ಹಾಸನದ ಸಂತೆಗೆ ಒಯ್ದೆ. ಸಂತೆಗೆ ಹೋಗುವ ಮುಖ್ಯ ರಸ್ತೆಯು ಬೇರೆ ರೈತರ ಟ್ರಕ್‌ಗಳು, ವಾಹನಗಳಿಂದಾಗಿ ಜಾಮ್ ಆಗಿತ್ತು. ಒಂದು ಕಿ.ಮೀ. ಮುಂದೆ ನಡೆದು ನೋಡಿದರೆ, ಅಲ್ಲಿ ರೈತರು ತಾವು ಬೆಳೆದ ಟೊಮ್ಯಾಟೊ ಮತ್ತು ಹಸಿಮೆಣಸಿನ ಕಾಯಿಗಳನ್ನು ರಸ್ತೆಯ ಮೇಲೆ ಚೆಲ್ಲಿದ್ದರು. ಬೆಳೆಗಳಿಗೆ ಬೆಲೆ ಕುಸಿದಿದೆ ಎಂದು ತಿಳಿದ ರೈತರು ಉದ್ರಿಕ್ತರಾಗಿದ್ದರು. ಅವರಿಗೆ ಸಿಗುತ್ತಿದ್ದ ಬೆಲೆಯು ಸಾಗಣೆ ವೆಚ್ಚಕ್ಕೂ ಸಾಲುತ್ತಿರಲಿಲ್ಲ. ಮಧ್ಯಾಹ್ನದ ಸುಮಾರಿಗೆ ಅಲ್ಲಿಂದ ತಪ್ಪಿಸಿ ಕೊಂಡು ನಾನು ಮನೆಗೆ ಮರಳಿದೆ. ಬಾಳೆಗೊನೆ ಮಾರಲಾಗದ ಕಾರಣ ಅವುಗಳನ್ನು ದನಗಳಿಗೆ ತಿನ್ನಿಸಿದೆ.

ಆ ಸಂದರ್ಭದಲ್ಲಿ ನಾನು ಒಂದು ಲಕ್ಷ ರೂಪಾಯಿ ಸಾಲ ಕೋರಿ ಬ್ಯಾಂಕ್‌ಗೆ ಸಲ್ಲಿಸಿದ್ದ ಅರ್ಜಿಯು ಮತ್ತೆ ಮತ್ತೆ ತಿರಸ್ಕೃತವಾಗುತ್ತಿತ್ತು. ಆದರೆ, ಎರಡು ದಶಕಗಳ ನಂತರದಲ್ಲಿ, ನನ್ನ ವಿಮಾನಯಾನ ಕಂಪನಿಗೆ ಬ್ಯಾಂಕೊಂದು ₹ 500 ಕೋಟಿ ಸಾಲವನ್ನು ತ್ವರಿತವಾಗಿ ಮಂಜೂರು ಮಾಡಿತ್ತು. ಆಗ ನನ್ನ ಕಂಪನಿಯು ಷೇರು ಪೇಟೆಯಲ್ಲಿ ನೋಂದಾಯಿತವಾಗಿತ್ತು, ಷೇರುಗಳಿಗೆ ಬಹಳ ಮೌಲ್ಯ ಇತ್ತು. ಇದು ಕೂಡ ನನಗೆ ಜೊಮ್ಯಾಟೊ ಐಪಿಒ ಕಾರಣದಿಂದಾಗಿ ನೆನಪಾಯಿತು. ಷೇರು ಮಾರುಕಟ್ಟೆಗಳ ಏರಿಳಿತವನ್ನು ನಿಯಂತ್ರಿಸುವ, ಪುರಾಣ ಪಾತ್ರಗಳಂತೆ ಬೆಳೆದಿರುವ ಗೂಳಿ–ಕರಡಿಯ ಪ್ರಭಾವಕ್ಕೆ ಒಳಗಾಗಿರುವ ನೋಡುಗನ ಕಣ್ಣಲ್ಲಿಯೇ ಎಲ್ಲದರ ‘ಬೆಲೆ’ ಅಡಗಿದೆ!

ಜಮೀನಿನ ಮಾಲೀಕತ್ವ ಹೊಂದಿರುವ, ಉಳುಮೆ– ಬಿತ್ತನೆ ಮಾಡಿ, ನಾವು ಉಣ್ಣಬಹುದಾದ ವಸ್ತುಗಳನ್ನು ಉತ್ಪಾದಿಸುವ ರೈತರು ಬಡತನದಲ್ಲಿ ಇರುವುದು ಏಕೆ? ಆ ವಸ್ತುಗಳನ್ನು ಮಾರಾಟ ಮಾಡುವ ವ್ಯಾಪಾರಿ, ಷೇರು ಹೂಡಿಕೆದಾರ ಮಾತ್ರ ಶ್ರೀಮಂತ ಆಗುವುದು ಹೇಗೆ? ಆಧುನಿಕ ಅರ್ಥ ವ್ಯವಸ್ಥೆಯ ವೈಚಿತ್ರ್ಯಗಳು ಈ ಹಳೆಯ ಪ್ರಶ್ನೆಯತ್ತ ನಮ್ಮನ್ನು ಒಯ್ಯುತ್ತವೆ. ದಿನಸಿ ಹಾಗೂ ಇತರ ವಸ್ತುಗಳನ್ನು ಗ್ರಾಹಕರಿಗೆ ಮಾರಾಟ ಮಾಡುವ ಬಹು ರಾಷ್ಟ್ರೀಯ ಕಂಪನಿಗಳು, ಉಕ್ಕು ಉತ್ಪಾದಿಸುವವರು, ವಾಹನ ತಯಾರಿಸುವವರು, ಕಟ್ಟಡ, ಸೇತುವೆ, ಹಡಗು, ರೈಲು ಮಾರ್ಗ ನಿರ್ಮಿಸುವ ಕಂಪನಿಗಳು, ಹತ್ತಾರು ಕಡೆಗಳಲ್ಲಿ ಹೋಟೆಲ್‌ಗಳನ್ನು ಹೊಂದಿರುವ ಕಂಪನಿಗಳು ಈಗ ಇನ್ನೊಂದು ಬಗೆಯಲ್ಲಿ ಆಲೋಚಿಸಬಹುದು. ತಾವು ಇಷ್ಟೆಲ್ಲ ಕಷ್ಟದ ಕೆಲಸ ಮಾಡುತ್ತಿದ್ದರೂ, ಕಣ್ಣಿಗೆ ಕಾಣಿಸದ ಇಂಟರ್ನೆಟ್‌ ಮೂಲಕ ಸೇವೆ ಒದಗಿಸುವ ಅಮೆಜಾನ್, ಮೈಕ್ರೊಸಾಫ್ಟ್‌, ಟಿಸಿಎಸ್, ಇನ್ಫೊಸಿಸ್‌ನಂತಹ ಕಂಪನಿಗಳು ಮಾರುಕಟ್ಟೆ ಬಂಡವಾಳದ
ಲೆಕ್ಕಾಚಾರದಲ್ಲಿ ತಮಗಿಂತ ಬಹಳ ಮುಂದಿರುವುದು ಹೇಗೆ ಎಂದು ಅವು ಪ್ರಶ್ನಿಸಿಕೊಳ್ಳಬಹುದು. ದಶಕಗಳಿಂದ ನಿಧಾನಗತಿಯಲ್ಲಿ ಸಾಗುತ್ತಿರುವ ಹಲವು ಕಂಪನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯಕ್ಕಿಂತಲೂ ಈಚೆಗೆ ಜನ್ಮತಾಳಿರುವ ಬೈಜುಸ್, ಜೊಮ್ಯಾಟೊ, ಪೇಟಿಎಂ ನಂತಹ ಕಂಪನಿಗಳು ಹೆಚ್ಚು ಮೌಲ್ಯಯುತವಾಗಿವೆ.

ಹತ್ತು ಹಲವು ವೈದ್ಯಕೀಯ ಕಾಲೇಜುಗಳು, ಎಂಜಿನಿಯರಿಂಗ್ ಕಾಲೇಜುಗಳನ್ನು, ಆಸ್ಪತ್ರೆಗಳನ್ನು, ದೇಶ ವಿದೇಶಗಳ ಪ್ರಮುಖ ನಗರಗಳ ಪ್ರಮುಖ ಸ್ಥಳಗಳಲ್ಲಿ ಎಕರೆಗಟ್ಟಲೆ ಜಮೀನು ಹೊಂದಿರುವ ಮಣಿಪಾಲ್ ಸಮೂಹವನ್ನು ಉದಾಹರಣೆಯಾಗಿ ಪರಿಗಣಿಸೋಣ. ಈ ಸಮೂಹದ ಬಳಿಯಲ್ಲಿ ಬೃಹತ್ ಪ್ರಮಾಣದ ಕಟ್ಟಡಗಳು, ಪ್ರಯೋಗಾಲಯಗಳು, ನೂರಾರು ಪ್ರೊಫೆಸರ್‌ಗಳ ಸಮೂಹ, ವೈದ್ಯರ ದಂಡು ಇವೆ. ಹೀಗಿದ್ದರೂ ಸಮೂಹದ ಮಾರುಕಟ್ಟೆ ಮೌಲ್ಯವು ಬೈಜುಸ್‌ನ ಮೌಲ್ಯಕ್ಕಿಂತ ಕಡಿಮೆ.

ತಾಜ್ ಮತ್ತು ಒಬೆರಾಯ್ ಹೋಟೆಲ್ಸ್‌ ಹಾಗೂ ಇತರ ಪಂಚತಾರಾ ಹೋಟೆಲ್‌ಗಳನ್ನು ಗಮನಿಸೋಣ. ಇವು ಅತ್ಯಂತ ಮೌಲ್ಯಯುತವಾದ ರಿಯಲ್ ಎಸ್ಟೇಟ್ ಆಸ್ತಿಯನ್ನು, ರುಚಿಕರ ಭೋಜನ ಉಣಬಡಿಸುವ ರೆಸ್ಟೊರೆಂಟ್‌ಗಳನ್ನು, ಸ್ಪಾ ಮತ್ತು ಸಲೂನ್‌ಗಳನ್ನು, ಮಹಾರಾಜರಿಗೆ ಸರಿಹೊಂದುವ ಈಜುಕೊಳಗಳನ್ನು ಹೊಂದಿವೆ. ಹೀಗಿದ್ದರೂ ಇವುಗಳ ಮಾರುಕಟ್ಟೆ ಮೌಲ್ಯವು ಜೊಮ್ಯಾಟೊಗಿಂತ ಕಡಿಮೆ. ಏನನ್ನೂ ಉತ್ಪಾದಿಸದ, ದೇಶದ ಸಹಸ್ರಾರು ರೆಸ್ಟೊರೆಂಟ್‌ಗಳಲ್ಲಿ ಸಿದ್ಧವಾದ ಆಹಾರವನ್ನು ಗ್ರಾಹಕರಿಗೆ ತಲುಪಿಸುವ ಕೆಲಸವನ್ನಷ್ಟೇ ಮಾಡುವ ಜೊಮ್ಯಾಟೊ ಮಾರುಕಟ್ಟೆ ಮೌಲ್ಯವು ಡಾಮಿನೊಸ್ ಪಿಜ್ಜಾದ ಮಾಲೀಕತ್ವ ಹೊಂದಿರುವ ಜ್ಯುಬಿಲೆಂಟ್‌ ಫುಡ್‌ ವರ್ಕ್ಸ್‌ನ ಮೌಲ್ಯಕ್ಕಿಂತ ದುಪ್ಪಟ್ಟು ಜಾಸ್ತಿ. ಷೇರು ಮಾರುಕಟ್ಟೆಗೆ ಬರಲು ಸಿದ್ಧವಾಗಿರುವ ಪೇಟಿಎಂನ ಮೌಲ್ಯವೂ ಭಾರಿ ಆಗಿಯೇ ಇದೆ. ಬೇರೆ ಕಂಪನಿಗಳು ಲಾಭ ತಂದುಕೊಡುತ್ತಿವೆ. ಆದರೆ, ಜೊಮ್ಯಾಟೊ ಮತ್ತು ಇತರ ಹಲವು ಯೂನಿಕಾರ್ನ್‌ಗಳು ಭಾರಿ ಮೌಲ್ಯ ಹೊಂದಿದ್ದರೂ ಲಾಭ ಕಾಣುತ್ತಿಲ್ಲ.

ಈಗ ಒಂಬತ್ತು ಸಾವಿರ ಕಾರುಗಳನ್ನು ಹೊಂದಿರುವ ಮೆರು ಕ್ಯಾಬ್ಸ್‌ನ ನೀರಜ್ ಗುಪ್ತಾ ಅವರನ್ನು ನಾನು ಭೇಟಿಯಾಗಿದ್ದೆ. ಈಗ ಓಲಾ ಮತ್ತು ಉಬರ್ ಕಂಪನಿಗಳು ಗುಪ್ತಾ ಅವರ ವಹಿವಾಟಿನ ಮಾದರಿಯನ್ನು ತಲೆ ಕೆಳಗಾಗಿಸಿವೆ. ಓಲಾ, ಉಬರ್‌ ಕಂಪನಿಗಳು ತಮ್ಮದೇ ಆದ ಆಸ್ತಿಯನ್ನು ಹೊಂದಿಲ್ಲ. ಅವು ತಮ್ಮ ಇಂಟರ್ನೆಟ್ ವೇದಿಕೆಯ ಮೂಲಕ ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ಟ್ಯಾಕ್ಸಿ ಸೇವೆ ಒದಗಿಸುತ್ತವೆ. ಇವುಗಳ ಮಾರುಕಟ್ಟೆ ಮೌಲ್ಯವೂ ದೊಡ್ಡದಾಗಿಯೇ ಇದೆ. ನಾನು ಇಂಟರ್ನೆಟ್ ಆಧಾರಿತ ಕಂಪನಿಗಳನ್ನು ದೂಷಿಸುತ್ತಿಲ್ಲ. ಇಂತಹ ಕಂಪನಿಗಳು ನಿಜಕ್ಕೂ ಅದ್ಭುತವಾದವು.

ಮಾಹಿತಿ ಮತ್ತು ಡೇಟಾ ಎಂಬುದು ಆಧುನಿಕ ಅರ್ಥ ವ್ಯವಸ್ಥೆಯ ಪಾಲಿಗೆ ‘ತೈಲ’ವಿದ್ದಂತೆ ಎನ್ನಲಾಗುತ್ತಿದೆ. ಹೀಗಿದ್ದರೂ, ಇವುಗಳಿಗೆ ಮಿತಿ ಇದೆ. ಈ ಜಗತ್ತನ್ನು, ಜೀವನವನ್ನು ಭ್ರಮಾಲೋಕದಲ್ಲಿ ಸುತ್ತಿಡಲು ಆಗದು. ಮಾಹಿತಿಯನ್ನು ತಿನ್ನಲು ಆಗುವುದಿಲ್ಲ, ಇಂಟರ್ನೆಟ್‌ ಗುಳ್ಳೆಯ ಮೇಲೆ ಎಲ್ಲರೂ ಜೀವನ ಕಟ್ಟಿಕೊಳ್ಳಲು ಸಾಧ್ಯವಿಲ್ಲ. ನಮಗೆ ಆಹಾರ, ಬಟ್ಟೆ, ನೀರು, ಮನೆ, ಸಾರಿಗೆ, ವಿದ್ಯುತ್, ಆಸ್ಪತ್ರೆಗಳು, ಒಳ್ಳೆಯ ಕಾವ್ಯ, ಕಲೆ... ಎಲ್ಲವೂ ಬೇಕು. ರೆಸ್ಟೊರೆಂಟ್‌ಗಳೂ ಬೇಕು, ಪ್ರವಾಸವೂ ಬೇಕು. ಹಾಗಂತ, ಇಂಟರ್ನೆಟ್ಟಿನ ಬಂಜೆ ಜಗತ್ತು ನಿಮ್ಮನ್ನು ಶ್ರೀಮಂತರನ್ನಾಗಿಸಿದಷ್ಟು, ಇವು ನಿಮಗೆ ಸಿರಿವಂತಿಕೆ ತರಲಿಕ್ಕಿಲ್ಲ. ಆದರೆ, ಅಧೀರರಾಗುವುದು ಬೇಡ. ನೆಲದ ಜೊತೆ ಸಂಬಂಧ ಹೊಂದಿರುವ ನಿಜದ ಜಗತ್ತು ಕೂಡ ಸಂಪತ್ತು ಸೃಷ್ಟಿಸಿಕೊಡಬಲ್ಲದು. ನೀವು ನಿಮ್ಮ ಕೆಲಸವನ್ನು ಪ್ರೀತಿ, ಬದ್ಧತೆಯಿಂದ ಮಾಡಿದರೆ ಖುಷಿ ತಂದು
ಕೊಡಬಲ್ಲದು.

ನನ್ನ ಪತ್ನಿ ಬೆಂಗಳೂರಿನ ಮಲ್ಲೇಶ್ವರದಲ್ಲಿ ನಡೆಸುವ 25 ವರ್ಷ ಹಳೆಯದಾದ, ಅಯ್ಯಂಗಾರ್ ಬೇಕರಿ ಬಗ್ಗೆ ಆಲೋಚನೆ ಹೊರಳುತ್ತದೆ. ನನ್ನ ಪತ್ನಿಯ ಸಂಪತ್ತು ಇಂಟರ್ನೆಟ್ ಕಂಪನಿಗಳ ಷೇರುಮೌಲ್ಯದಂತೆ ಹೆಚ್ಚಳ ವಾಗಿಲ್ಲ. ಹೀಗಿದ್ದರೂ, ಅವಳಿಗೆ ಸಂತೃಪ್ತಿ ಇದೆ. ಪ್ರತಿದಿನವೂ ಬ್ರೆಡ್, ಬನ್ ಮಾಡುವುದರಲ್ಲಿ ಅವಳಿಗೆ ಖುಷಿಯಿದೆ. ಇಂಥವರ ಸಂಖ್ಯೆ ದೇಶದಲ್ಲಿ ಅಗಣಿತ.ರೈತ, ಶಿಕ್ಷಕ, ವೈದ್ಯ, ಲೇಖಕ, ಪತ್ರಕರ್ತ, ಬಡಗಿ, ಕಲಾವಿದ, ಮೆಕ್ಯಾನಿಕ್, ವಣಿಕ... ಎಲ್ಲ ಸಮುದಾಯ
ಗಳಲ್ಲೂ ಇಂತಹ ಸಂತೃಪ್ತರು ಇದ್ದಾರೆ. ಮನುಷ್ಯ ಇಂಟರ್ನೆಟ್‌ ಮಾತ್ರ ನಂಬಿ ಬದುಕಲಾಗದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು