ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಾತಿ ಸಮೀಕರಣ’ ತಲೆಕೆಳಗೆ!

‘ಸೋರಿಕೆ’ ಮಾಹಿತಿ ತಂದಿಟ್ಟಿದೆ ಆತಂಕ * ‘ರಾಜಕೀಯ ಹಿತಾಸಕ್ತಿ’ಗೆ ಮಾರಕ
Last Updated 2 ಅಕ್ಟೋಬರ್ 2020, 19:47 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ (ಜಾತಿ ಗಣತಿ) ವರದಿ ಹಿಂದುಳಿದ ವರ್ಗಗಳ ಆಯೋಗದ ತಿಜೋರಿಯಲ್ಲಿ ಗೆದ್ದಲು ಹಿಡಿಯುತ್ತಿದ್ದರೂ, ಅದರಲ್ಲಿರುವ ಹಲವು ಅಂಶಗಳು ಈಗಾಗಲೇ ‘ಸೋರಿಕೆ’ ಆಗಿವೆ. ಈ ಅಂಶಗಳು ರಾಜ್ಯದಲ್ಲಿನ ‘ಜಾತಿ ಸಮೀಕರಣ’ದ ಲೆಕ್ಕಾಚಾರಗಳನ್ನೇ ತಲೆಕೆಳಗೆ ಮಾಡುವಂತಿದೆ!

2011ರ ಜನಗಣತಿ ಪ್ರಕಾರ ರಾಜ್ಯದ ಜನಸಂಖ್ಯೆ 6.30 ಕೋಟಿ. ಈ ಪೈಕಿ,ಸರಿಸುಮಾರು 6 ಕೋಟಿ ಜನಸಂಖ್ಯೆ ಸಮೀಕ್ಷೆಯ ವ್ಯಾಪ್ತಿಗೆ ಬಂದಿದೆ. ಬೆಂಗಳೂರಿನಲ್ಲಿ ಶೇ 84ರಷ್ಟು ಸಮೀಕ್ಷೆ ನಡೆದಿದೆ. ‘ಸೋರಿಕೆ’ಯಾಗಿರುವ ಮಾಹಿತಿ ಪ್ರಕಾರ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಜನಸಂಖ್ಯೆ 1.08 ಕೋಟಿ, ಪರಿಶಿಷ್ಟ ಪಂಗಡದ 42 ಲಕ್ಷ, ಮುಸ್ಲಿಮರು 75 ಲಕ್ಷ ಹಾಗೂ ಹಿಂದುಳಿದ ಸಮುದಾಯಕ್ಕೆ ಸೇರಿದ ಕುರುಬರು 45 ಲಕ್ಷ ಇದ್ದಾರೆ. ಸಮೀಕ್ಷೆಯ ಸಾಮಾಜಿಕ ಮತ್ತು ಶೈಕ್ಷಣಿಕ ಅಳತೆಗೋಲಿನಲ್ಲಿ ಕುರುಬ ಸಮುದಾಯವನ್ನು ‘ಅತ್ಯಂತ ಹಿಂದುಳಿದ ಸಮುದಾಯ’ ಎಂದು ಘೋಷಿಸಬೇಕು ಎಂದು ಶಿಫಾರಸು ಮಾಡಲಾಗಿದೆ.

ಪರಿಶಿಷ್ಟ ಜಾತಿಯಲ್ಲಿ 101, ಪರಿಶಿಷ್ಟ ಪಂಗಡದಲ್ಲಿ 51 ಜಾತಿಗಳಿವೆ. ಸರ್ಕಾರ ಗುರುತಿಸಿರುವ 816 ಇತರ ಹಿಂದುಳಿದ ಜಾತಿಗಳು (ಒಬಿಸಿ) ಸೇರಿ ಒಟ್ಟು 1,351 ಜಾತಿಗಳ ಕುರಿತು 55 ಮಾನದಂಡಗಳನ್ನು ಆಧರಿಸಿ ಸಮೀಕ್ಷೆ ನಡೆಸಲಾಗಿದೆ. ಆದರೆ, ಸಮೀಕ್ಷೆಯ ಬಳಿಕ 464 ಜಾತಿಗಳನ್ನು ಹೊಸತಾಗಿ ಗುರುತಿಸಿ ಪಟ್ಟಿ ಮಾಡಲಾಗಿದೆ. ಉತ್ತರಪ್ರದೇಶ, ಬಿಹಾರ, ಆಂಧ್ರಪ್ರದೇಶ ಮತ್ತಿತರ ರಾಜ್ಯಗಳಿಂದ ವಲಸೆ ಬಂದು 60–70 ವರ್ಷಗಳಿಂದ ರಾಜ್ಯದಲ್ಲಿ ನೆಲೆಸಿದವರು ತಮ್ಮ ಜಾತಿ ನಮೂದಿಸಿದ್ದಾರೆ. ಈ ಜಾತಿಗಳು ಕೇವಲ 10 ಜನರಿಂದ 200 ರವರೆಗೆ ಜನಸಂಖ್ಯೆ ಹೊಂದಿವೆ. ಪ್ರತಿ ವಿಧಾನಸಭೆ ಕ್ಷೇತ್ರವಾರು ಜಾತಿ ಲೆಕ್ಕ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ಔದ್ಯಮಿಕ, ನಿವೇಶನರಹಿತರು, ನೀರಾವರಿ ಭೂಮಿ ಹೊಂದಿದವರ ಅಂಕಿಅಂಶ ವರದಿಯಲ್ಲಿದೆ. 20 ಸಂಪುಟಗಳಲ್ಲಿ ವರದಿ ಸಿದ್ಧಪಡಿಸಲಾಗಿದೆ.

‘ಅರ್ಹ ಜಾತಿಗಳಿಗೆ ನ್ಯಾಯ ಒದಗಿಸಬೇಕಾಗಿರುವುದರಿಂದ, ಜಾತಿ ವರ್ಗೀಕರಣವನ್ನು ಪುನರ್‌ ರಚಿಸಬೇಕಾದ ಅಗತ್ಯವಿದೆ. ಹೀಗಾಗಿ, ಕೆಲವು ಜಾತಿಗಳ ಸ್ಥಾನ ಪಲ್ಲಟ ಆಗಲಿದೆ. ಹೊಸತಾಗಿ ಗುರುತಿಸಿದ ಜಾತಿಗಳನ್ನು ಸೇರಿಸಬೇಕಿದೆ. ಈ ರೀತಿಯ ವರ್ಗೀಕರಣದಿಂದ ಪ್ರತೀ ವರ್ಗಕ್ಕೆ ಈಗ ನಿಗದಿಪಡಿಸಿರುವ ಮೀಸಲಾತಿ ಪ್ರಮಾಣ ವ್ಯತ್ಯಾಸ ಆಗಲಿದೆ. ಹಲವು ಜಾತಿಗಳು 60–70 ವರ್ಷಗಳಿಂದ ಮೀಸಲಾತಿಯಿಂದ ವಂಚಿತವಾಗಿವೆ’ ಎಂದು ವರದಿಯಲ್ಲಿದೆ.

‘ಸುಪ್ರೀಂಕೋರ್ಟ್‌ ತೀರ್ಪಿನ ಪ್ರಕಾರ ಮೀಸಲಾತಿ ಪ್ರಮಾಣ ಶೇ 50 ಮೀರಬಾರದು. ಆದರೆ, ಸಂವಿಧಾನ ತಿದ್ದುಪಡಿ ಮೂಲಕ ತಮಿಳುನಾಡಿನಲ್ಲಿ ಮೀಸಲಾತಿಯನ್ನು ಶೇ 69ಕ್ಕೆ ಹೆಚ್ಚಿಸಲಾಗಿದೆ. ರಾಜ್ಯದಲ್ಲೂ ಜನಸಂಖ್ಯೆ ಆಧಾರದಲ್ಲಿ ಹಾಲಿ ಮೀಸಲಾತಿಯನ್ನು ಶೇ 50ರಿಂದ (ಪರಿಶಿಷ್ಟ ಜಾತಿಗೆ ಶೇ 15, ಪರಿಶಿಷ್ಟ ವರ್ಗಕ್ಕೆ ಶೇ 3) ಶೇ 70ಕ್ಕೆ ಹೆಚ್ಚಿಸಬೇಕಾದ ಬಗ್ಗೆ ಮತ್ತು ಅದಕ್ಕೆ ಪೂರಕ ಅಂಕಿಅಂಶಗಳು ವರದಿಯಲ್ಲಿವೆ. ಜನಸಂಖ್ಯೆ ಆಧಾರದಲ್ಲಿ ಪರಿಶಿಷ್ಟ ವರ್ಗಕ್ಕೆ ಶೇ 7 ಮೀಸಲಾತಿ ನೀಡಬೇಕಾದ ಬಗ್ಗೆಯೂ ವರದಿಯಲ್ಲಿ ಚರ್ಚಿಸಲಾಗಿದೆ.

ಸಮೀಕ್ಷೆಯಲ್ಲಿ 10ಕ್ಕಿಂತ ಕಡಿಮೆ ಜನಸಂಖ್ಯೆ ಇರುವ 80 ಜಾತಿಗಳ ಹೆಸರು ದಾಖಲಾಗಿವೆ. ಹಲವು ಜಾತಿಗಳು ಇನ್ನೊಂದು ಸಮಾನಾಂತರ ಜಾತಿಗೆ ಹೋಲಿಕೆಯಾಗುತ್ತಿವೆ. 10ಕ್ಕಿಂತ ಹೆಚ್ಚು ಜನಸಂಖ್ಯೆ ಇರುವ 16 ಹೊಸ ಜಾತಿಗಳನ್ನು ಕುಲ ಶಾಸ್ತ್ರಜ್ಞರನ್ನು ಒಳಗೊಂಡ ವಿಷಯ ತಜ್ಞರ ಸಮಿತಿ ಪರಿಶೀಲಿಸಿ ವರದಿ ನೀಡಿದೆ. ಈ ಜಾತಿಗಳ ಪ್ರಸ್ತಾವ ಜನಾಂಗಶಾಸ್ತ್ರಜ್ಞರ (ಎಥನೋಗ್ರಾಫರ್) ಪುಸ್ತಕಗಳಲ್ಲೂ ಇರುವುದನ್ನು ಪತ್ತೆ ಮಾಡಲಾಗಿದೆ.

ಶೈಕ್ಷಣಿಕ ಸ್ಥಿತಿಗತಿ ಹಾಗೂ ಸಾಮಾಜಿಕ ನೆಲೆಯಲ್ಲಿ ಅಸ್ಪೃಶ್ಯತೆ ಅನುಭವಿಸುತ್ತಿರುವವರು, ಜಾತಿಯ ಅಪಮಾನಕ್ಕೆ ಗುರಿಯಾಗಿರುವವರು, ಅನಿಷ್ಟ (ಮಲ ಹೊರುವ) ಪದ್ಧತಿಗಳಿಗೆ ದೂಡಲ್ಪಟ್ಟವರು, ಕುಲಕಸುಬು ಮಾಡುತ್ತಿರುವವರು, ಅದರಿಂದ ದೂರ ಸರಿದವರು, ಕುಲಕಸುಬಿನಿಂದ ಆರೋಗ್ಯ ಸಮಸ್ಯೆಗೆ ತುತ್ತಾದವರು ಎಂಬ ಅಳತೆಗೋಲಿನಲ್ಲಿ ಜಾತಿಗಳನ್ನು ಪ್ರತ್ಯೇಕಿಸಲಾಗಿದೆ. ಈ ಅಂಶಗಳಿಗೆ ನಿರ್ದಿಷ್ಟ ಅಂಕ ನೀಡಲಾಗಿದೆ. ಒಟ್ಟು 200 ಅಂಕಗಳಲ್ಲಿ ಯಾವ ಜಾತಿ ಎಷ್ಟು ಅಂಕ ಗಳಿಸಿವೆ ಎಂದು ಲೆಕ್ಕ ಮಾಡಿ 100 ಅಂಕದ ಒಳಗಿನವರು ಹಿಂದುಳಿದವರು, 100 ರಿಂದ 150 ಮಧ್ಯೆ ಪಡೆದವರು ಅತಿ ಹಿಂದುಳಿದವರು,150ಕ್ಕಿಂತ ಹೆಚ್ಚು ಅಂಕ ಪಡೆದವರು ಅತ್ಯಂತ ಹಿಂದುಳಿದವರು ಎಂದು ಗುರುತಿಸಲಾಗಿದೆ. ಇದರ ಆಧಾರದಲ್ಲಿ ಜಾತಿಗಳ ಮರು ವಿಂಗಡಣೆ ನಡೆಯಲಿದೆ. 150ಕ್ಕಿಂತ ಹೆಚ್ಚು ಅಂಕ ಪಡೆದ ಜಾತಿ ‘ಅತ್ಯಂತ ಹಿಂದುಳಿದ’ ವರ್ಗಕ್ಕೆ ಸೇರುತ್ತದೆ. ಕ್ರೈಸ್ತ‌ ಮತ್ತು ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಅನೇಕರು ತಮ್ಮ ಮೂಲ ಜಾತಿಯನ್ನೇ ನಮೂದಿಸಿದ್ದಾರೆ. ಕ್ರೈಸ್ತರ ಜನಸಂಖ್ಯೆ ತೋರಿಕೆಗೆ ಹೆಚ್ಚು ಕಾಣಿಸಿದರೂ ದಾಖಲೆಯಲ್ಲಿ ಕಡಿಮೆ ಇದೆ’ ಎಂದು ಆಯೋಗದ ಮೂಲಗಳು ಹೇಳಿವೆ.

ಈ ಹಿಂದೆ ಜಾತಿ ವಿಂಗಡಣೆಯಲ್ಲಿ ಲೋಪ ಆಗಿರುವುದನ್ನು ಮರು ವಿಂಗಡಣೆ ವೇಳೆ ಗಮನಿಸಲಾಗಿದೆ. ಯಾವುದೇ ಆಧಾರಗಳಿಲ್ಲದೆ, ಹಿಂದೆ ವಿಂಗಡಣೆ ಮಾಡಲಾಗಿತ್ತು. ಸಮೀಕ್ಷೆಯಿಂದ ನಿಖರ ಮಾಹಿತಿ ಸಿಕ್ಕಿದೆ. 25 ವರ್ಷಗಳಿಂದ ಅನ್ಯಾಯಕ್ಕೆ ಒಳಗಾಗುತ್ತಲೇ ಬಂದ ಕೆಲವು ಜಾತಿಗಳಿಗೆ ಇದರಿಂದ ಅನುಕೂಲ ಆಗಲಿದೆ. ಮಡಿವಾಳ, ಸವಿತಾ ಸಮಾಜ ಸದ್ಯ 2 (ಎ)ಯಲ್ಲಿದ್ದು, ಹಿಂದುಳಿದ ಪಟ್ಟಿಯಲ್ಲಿವೆ. ಹೊಸ ವರ್ಗೀಕರಣದ ಬಳಿಕ ಈ ಜಾತಿಗಳೂ ಸೇರಿದಂತೆ, ಸುಮಾರು 30 ಜಾತಿಗಳು ಅತ್ಯಂತ ಹಿಂದುಳಿದ ಜಾತಿ ವರ್ಗದಡಿ ಸೇರಲಿವೆ. ಈ ರೀತಿಯ ಮರುವಿಂಗಡಣೆಗೆ ವಿಷಯ ತಜ್ಞರಿಂದ ಅಭಿಪ್ರಾಯ ಪಡೆಯಲಾಗಿದೆ

ಪ್ರತಿ ಜಾತಿಯ ಸರ್ಕಾರಿ ಉದ್ಯೋಗ ಮತ್ತು ರಾಜಕೀಯ ಪ್ರಾತಿನಿಧ್ಯ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅದರ ಪ್ರಕಾರ ಸುಮಾರು 150 ಜಾತಿಗಳಿಗೆ ಯಾವುದೇ ಪ್ರಾತಿನಿಧ್ಯ ಸಿಕ್ಕಿಲ್ಲ. ಬೆಸ್ತ, ಉಪ್ಪಾರ, ಗೊಲ್ಲ ಜಾತಿಯವರಲ್ಲಿ ಉನ್ನತ ಉದ್ಯೋಗದಲ್ಲಿರುವವರು ತಲಾ ಒಬ್ಬರು ಮಾತ್ರ. ಶಾಸನ ಸಭೆಯಲ್ಲಿ ಈ ಸಮುದಾಯಗಳ ರಾಜಕೀಯ ಪ್ರಾತಿನಿಧ್ಯವನ್ನೂ ಉಲ್ಲೇಖಿಸಲಾಗಿದೆ. ಜನಸಂಖ್ಯೆ ಅನುಗುಣವಾಗಿ ಹಲವು ಜಾತಿಗಳಿಗೆ ಈ ಪ್ರಾತಿನಿಧ್ಯ ಸಿಕ್ಕಿಲ್ಲ ಎಂಬ ಅಂಶ ಸಮೀಕ್ಷೆಯಿಂದ ಸ್ಪಷ್ಟವಾಗಿದೆ ಎಂದೂ ಗೊತ್ತಾಗಿದೆ.

ಜಾತಿ ಗಣತಿಗೆ ವೆಚ್ಚವಾದ ಮೊತ್ತ (₹ ಲಕ್ಷಗಳಲ್ಲಿ)

* ಸಮೀಕ್ಷೆ ಸಂಬಂಧಿಸಿ ಪೂರ್ವಭಾವಿ ಸಿದ್ಧತೆ, ದೂರವಾಣಿ, ವಾಹನ, ಕಚೇರಿ ವೆಚ್ಚ, ಉಪಕರಣ ಖರೀದಿ; 191.66
* ಫೋಷವಾಕ್ಯ ಮತ್ತು ಲೋಗೋ ಬಹುಮಾನ; 0.60
* ಆಯೋಗದ ಅಧಿಕಾರಿ, ಸಿಬ್ಬಂದಿ ವೇತನ; 449.07
* ಪ್ರಚಾರ ಮಾಧ್ಯಮ ವೆಚ್ಚ; 293.01
* 2001 ಜನಗಣತಿಯ ಬ್ಲಾಕ್‌ ನಕ್ಷೆ, ಮನೆ ಪಟ್ಟಿ ಸರಬರಾಜಿಗೆ; 63.00
*ಸಮೀಕ್ಷೆಗೆ ಪೂರ್ವಭಾವಿ ಸಿದ್ಧತೆ, ಎಲ್ಲ ಜಿಲ್ಲೆಗಳು ಗಣತಿದಾರರ, ಮೇಲ್ವಿಚಾರಕರ ಸಂಭಾವನೆ (ಬಿಬಿಎಂಪಿ ಸೇರಿ); 10,050.01
* ಬಿಇಎಲ್‌ ಸಂಸ್ಥೆಗೆ ಸಮೀಕ್ಷೆ ದಾಖಲೆಗಳ ಗಣಕೀಕರಣಕ್ಕೆ; 3,767.75
* ಎಂಎಸ್‌ಐಎಲ್‌ನಿಂದ ಖರೀದಿಸಿದ ಲೇಖನ ಸಾಮಗ್ರಿ; 191.12
* ಕೈಪಿಡಿ, ನಮೂನೆ, ಗಣತಿದಾರರ, ಮೇಲ್ವಿಚಾರಕರ ಗುರುತಿನ ಚೀಟಿ ಮುದ್ರಣ; 784.00
* ನಮೂನೆಗಳನ್ನು ಜಿಲ್ಲೆಗಳಲ್ಲಿ ದಾಸ್ತಾನಿಡುವ ಬಾಕ್ಸ್‌ಗಳಿಗೆ; 35.31
* ಕಿರುಚಿತ್ರ ನಿರೂಪಣೆ, ಜಾಹೀರಾತು (ಹಂಸಲೇಖ ಅವರಿಗೆ ಸಂಭಾವನೆ); 15.67
* ವಿಚಾರ ಸಂಕಿರಣ; 6.02

ಒಟ್ಟು; 15,847.22

ಒಬ್ಬ ವ್ಯಕ್ತಿಯ ಮಾಹಿತಿ ಗಣಕೀಕರಣಕ್ಕೆ ₹ 6.14 ವೆಚ್ಚ!

ರಾಜ್ಯ ಸರ್ಕಾರ ಈ ಸಮೀಕ್ಷೆಗೆ 2014–2015ನೇ ಸಾಲಿನಿಂದ 2016–17ನೇ ಸಾಲಿನವರೆಗೆ ಒಟ್ಟು ₹ 206.84 ಕೋಟಿ ನಿಗದಿಪಡಿಸಿದ್ದು, ಅದರಲ್ಲಿ ₹ 192.79 ಕೋಟಿ ಬಿಡುಗಡೆ ಮಾಡಿದೆ. ವರದಿ ಸಿದ್ಧಪಡಿಸಲು ₹ 158.47 ಕೋಟಿ ವೆಚ್ಚ ಮಾಡಲಾಗಿದೆ.

ಜಾತಿ ಗಣತಿಯ ಗಣಕೀಕರಣಕ್ಕೆ ಬಿಇಎಲ್‌ ಸಂಸ್ಥೆ ಜತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದಕ್ಕೆ, ₹ 43.09 ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿತ್ತು. 2015 ರಲ್ಲಿ ರಾಜ್ಯದ ಒಟ್ಟು ಜನಸಂಖ್ಯೆಯನ್ನು 6.50 ಕೋಟಿ ಎಂದು ಅಂದಾಜಿಸಿ, ಪ್ರತಿ ವ್ಯಕ್ತಿಯ ಮಾಹಿತಿ ಗಣಕೀಕರಿಸಲು ಮತ್ತು ಪೋರ್ಟಲ್‌ನಲ್ಲಿ ಅಳವಡಿಸಿ ಆಯೋಗಕ್ಕೆ ಬೇಕಾಗುವ ವರದಿ ಒದಗಿಸಲು ತಲಾ ₹ 6.14 ರಂತೆ ಸಂಸ್ಥೆಗೆ ವಹಿಸಲಾಗಿದೆ. ಈವರೆಗೆ ಒಟ್ಟು ₹ 37.67 ಕೋಟಿ ಸಂಸ್ಥೆಗೆ ಪಾವತಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT