ಗುರುವಾರ , ಜನವರಿ 21, 2021
21 °C
ಜಾತಿ ಪ್ರೇಮಒಪ್ಪಿತ ‘ಮೌಲ್ಯ’ ಆಗುತ್ತಿರುವುದು ಅಪಾಯಕಾರಿ ಬೆಳವಣಿಗೆ

ವೈ.ಗ. ಜಗದೀಶ್‌ ಬರಹ: ಅಧಿಕಾರಸ್ಥರ ಜಾತಿ ಮೀಮಾಂಸೆ

ವೈ.ಗ. ಜಗದೀಶ್‌ Updated:

ಅಕ್ಷರ ಗಾತ್ರ : | |

ಜಾತಿಗಳ ಓಲೈಸಿ ಮತಗಳಿಸುವುದು, ಧರ್ಮದ ಅಮಲನ್ನು ಜನರ ಮಿದುಳಿಗೆ ತುಂಬಿ ಅಧಿಕಾರ ಹಿಡಿಯುವುದು ರಾಜಕಾರಣಿಗಳ ಬತ್ತಳಿಕೆಯಲ್ಲಿರುವ ದಿವ್ಯಾಸ್ತ್ರ. ಜಾತಿ–ಧರ್ಮದ ಮೇಲೆ ಗಾಢಾಭಿಮಾನ ಇರುವ ಭಾರತದಲ್ಲಿ ಇದು ಅನುಕೂಲಕರ ರಾಜಕೀಯ ದಾರಿ. ಸೈದ್ಧಾಂತಿಕ ರಾಜಕೀಯ ಸಂಸ್ಕೃತಿಯನ್ನು ನೆಚ್ಚಿಕೊಂಡ ಎಡಪಕ್ಷಗಳನ್ನು ಬಿಟ್ಟು ಉಳಿದೆಲ್ಲ ರಾಷ್ಟ್ರೀಯ, ಪ್ರಾದೇಶಿಕ ಪಕ್ಷಗಳು ಜಾತಿ ಕೆಸರನ್ನು ಕದಡಿಯೇ ರಾಜಕೀಯದ ಫಸಲು ತೆಗೆಯುವುದು ವಾಸ್ತವ.

ದಶಕಗಳ ಹಿಂದೆ ಅಂತರಂಗದಲ್ಲಿ ಜಾತಿಯ ಅಭಿಮಾನ ಇದ್ದರೂ ಅದನ್ನು ಬಹಿರಂಗವಾಗಿ ತೋರಿಸದಷ್ಟು ಸಾರ್ವಜನಿಕ ಲಜ್ಜೆ ಇತ್ತು. ಜನರು ಕೂಡ ಜಾತಿ ದುರ್ಬಳಕೆ ಮಾಡುವವರ ಬಗ್ಗೆ ಸಾತ್ವಿಕ ಕ್ರೋಧ ಹಾಗೂ ಅಸಹ್ಯ ಭಾವನೆ ಹೊಂದಿದ್ದರು. ಜಾತಿ ಅಭಿಮಾನ ಈಗ ದುರಭಿಮಾನವಾಗಿದ್ದು, ಅಂಗಿಯ ಒಳಗಿರುತ್ತಿದ್ದ ಜಾತಿಸೂಚಕಗಳಾದ ಜನಿವಾರ–ಶಿವದಾರ–ಉಡುದಾರಗಳು ಅಂಗಿಯೇ ಮೇಲೆ ‘ಕಂಠೀಹಾರ’ದಂತೆ ವಿಜೃಂಭಿಸುತ್ತಿವೆ.

ಅಧಿಕಾರಕ್ಕೆ ಏರಲು ಜಾತಿಯನ್ನು ಬಳಸುವುದು ಒಂದು ಬಗೆ. ಯಾರಲ್ಲೂ ಭೇದ ಭಾವ ಎಣಿಸುವುದಿಲ್ಲ ಎಂದು ಸಾರಿ, ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸ್ವಜಾತಿಯವರನ್ನು ತಮ್ಮ ಸುತ್ತ ಗುಡ್ಡೆ ಹಾಕಿಕೊಳ್ಳುವುದು ಈಗ ಮಾಮೂಲು. ಜಾತಿಯೊಂದು ಸಾಂಸ್ಥೀಕರಣದ ರೂಪ ತಾಳಿ ಅದಕ್ಕೆ ಸಾರ್ವಜನಿಕ ಮಾನ್ಯತೆ ಹಾಗೂ ಸ್ಥೀರೀಕರಣದ ಹೊಸಬಗೆ ಅಪಾಯಕಾರಿ.

ಜಾತಿಗೊಂದು ನಿಗಮ ರಚನೆ, ಮೀಸಲಾತಿಯ ಘೋಷಣೆ, ಮಠಗಳಿಗೆ ಪುರಸ್ಕಾರ ಇವೆಲ್ಲವೂ ತಮ್ಮ ಜಾತಿಯ ಬೆಂಬಲವನ್ನು ಪೋಷಿಸಿಕೊಳ್ಳುವ ನಡೆ. ಹೀಗಾಗಿ ಚುನಾವಣೆ ಬಳಿಕ ಆಡಳಿತದ ಚುಕ್ಕಾಣಿ ಹಿಡಿಯುವ ಮುಖ್ಯಮಂತ್ರಿ ಹಾಗೂ ಸಚಿವರ ಸುತ್ತ ಅವರ ಜಾತಿಯವರೇ ಗಿರಕಿ ಹೊಡೆಯುತ್ತಾರೆ. ಒಕ್ಕಲಿಗ, ಕುರುಬ, ಲಿಂಗಾಯತ ಹೀಗೆ ಯಾವುದೇ ಜಾತಿಗೆ ಸೇರಿದವರು ಮುಖ್ಯಮಂತ್ರಿಯಾದರೂ ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಸರ್ಕಾರದ ಜಾತೀಕರಣ ಸುಲಲಿತವಾಗಿ ಜಾರಿಯಾಗುತ್ತದೆ. ಸಚಿವರು– ಅವರ ಭಟ್ಟಂಗಿಗಳಿಗೆ ಅಂಜಿಕೆಯೂ ಇಲ್ಲ.

ಮುಖ್ಯಮಂತ್ರಿ ಒಕ್ಕಲಿಗರಾದರೆ ಸಚಿವಾಲಯದ ಆಯಕಟ್ಟಿನ ಹುದ್ದೆಗಳಲ್ಲಿ, ಆ‍ಪ್ತ ಶಾಖೆಗಳಲ್ಲಿ ಆ ಜಾತಿಯವರೇ ಒಗ್ಗೂಡುತ್ತಾರೆ. ಅದೇ ಲಿಂಗಾಯತ/ಕುರುಬ  ಸಮುದಾಯದವರು ಮುಖ್ಯಮಂತ್ರಿಯಾದರೆ ಅದೇ ಜಾತಿ ಜನಾಂಗದವರು ಶಕ್ತಿಕೇಂದ್ರಗಳನ್ನು ಆವರಿಸಿಕೊಳ್ಳುತ್ತಾರೆ. ಬ್ರಾಹ್ಮಣರು ಮುಖ್ಯಮಂತ್ರಿಯಾದರೆ ಇದೇ  ಚಿತ್ರಣ ಸೃಷ್ಟಿಯಾದೀತು.

ಮುಖ್ಯಮಂತ್ರಿ ಪ್ರಧಾನ ಕಾರ್ಯದರ್ಶಿ, ಇಲಾಖೆಯ ಮುಖ್ಯಸ್ಥರ ಹುದ್ದೆಯಲ್ಲಿ ಜಾತಿಯ ವಿಜೃಂಭಣೆ ಸಾಧ್ಯವಾಗಿಲ್ಲ; ಯುಪಿಎಸ್‌ಸಿ ಮೂಲಕವೇ ಐಎಎಸ್‌, ಐಪಿಎಸ್‌ ಅಧಿಕಾರಿಗಳ ಆಯ್ಕೆ ನಡೆಯುತ್ತಿದ್ದು, ಅನ್ಯ ರಾಜ್ಯಗಳವರೇ ಹೆಚ್ಚಿನ ಸಂಖ್ಯೆಯಲ್ಲಿ ಕರ್ನಾಟಕ ಕೇಡರ್‌ಗೆ ಬರುವುದರಿಂದ ಇಲ್ಲಿ ಜಾತಿ ಲೆಕ್ಕಾಚಾರ ಅಷ್ಟಾಗಿ ಕೆಲಸ ಮಾಡದು. ಸೇವಾ ಜ್ಯೇಷ್ಠತೆ ಆಧರಿಸಿ ಕೆಲವು ಹುದ್ದೆಗಳನ್ನು ನೀಡಬೇಕಾಗುವುದರಿಂದ ಮುಖ್ಯಮಂತ್ರಿ–ಸಚಿವರಿಗೆ ಅಪೇಕ್ಷೆಯಿದ್ದರೂ ಜಾತಿ ಪರಿಗಣನೆ ಸಾಧ್ಯವಾಗದು.

ಆದರೆ, ಆಯಕಟ್ಟಿನ ಹುದ್ದೆಗಳಲ್ಲಿ ‘ತಮ್ಮವರನ್ನೇ’ ತಂದು ಕೂರಿಸುವ ಚಾಳಿಯನ್ನು ಮಾತ್ರ ಬಿಟ್ಟುಕೊಡುವುದಿಲ್ಲ. ಪ್ರಧಾನ ಕಾರ್ಯದರ್ಶಿಯಾಗಿ ಯಾರೇ ಇದ್ದರೂ  ‘ವ್ಯವಹಾರ’ಕ್ಕಾಗಿ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಉಪಕಾರ್ಯದರ್ಶಿ ಹುದ್ದೆಗಳಲ್ಲಿ ‘ತಮ್ಮವರನ್ನೇ’ ನೇಮಿಸಿಕೊಂಡಿರುವುದು ರಹಸ್ಯವೇನಲ್ಲ. ಕಾರ್ಯದರ್ಶಿ, ಉಪಕಾರ್ಯದರ್ಶಿ ಹುದ್ದೆಗಳಿಗೆ ಕೆಎಎಸ್ (ಹಿರಿಯ) ಶ್ರೇಣಿಯ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲು ಸಾಧ್ಯವಿರುವುದರಿಂದ ಜಾತ್ಯಸ್ಥರಿಗೆ ಮಣೆ ಹಾಕುವುದು;  ತಮಗೆ ನಿಯಮಿತವಾಗಿ ಆದಾಯ ಹರಿಯುವ ‘ಸುರಂಗ ಮಾರ್ಗ’ವನ್ನು ಸಂರಕ್ಷಿಸಿಕೊಳ್ಳುವ ಜಾಣ್ಮೆಯನ್ನು ಅಧಿಕಾರಸ್ಥರು ತೋರುತ್ತಾರೆ.

ಹೆಚ್ಚು ಆದಾಯ ತರುವ ಸಾರಿಗೆ ಇಲಾಖೆಯ ಆಯುಕ್ತರು, ಬೆಂಗಳೂರು ನಗರ ಜಿಲ್ಲಾಧಿಕಾರಿ, ನೋಂದಣಿ ಮತ್ತು ಮುದ್ರಾಂಕ ಇಲಾಖೆ, ವಾಣಿಜ್ಯ ತೆರಿಗೆ ಇಲಾಖೆ, ಬಿಡಿಎ, ಕಂದಾಯ ಇಲಾಖೆ, ಅಬಕಾರಿ, ಕೈಗಾರಿಕೆ ಇಲಾಖೆಗಳಲ್ಲಿ ಜಾತಿವಂತರಿಗೆ ಮಣೆ ಹಾಕುವ ಸಂಪ್ರದಾಯವನ್ನು ಅಧಿಕಾರಸ್ಥರು ನಡೆಸಿಕೊಂಡು ಬಂದಿದ್ದಾರೆ. ಇವರಲ್ಲದೇ, ಸಚಿವರ ಆಪ್ತ ಕಾರ್ಯದರ್ಶಿ, ವಿಶೇಷ ಕರ್ತವ್ಯಾಧಿಕಾರಿ (ಒಎಸ್‌ಡಿ), ಆಪ್ತ ಸಹಾಯಕ, ಕಚೇರಿ ಸಹಾಯಕ ಹುದ್ದೆಗಳಲ್ಲೂ ಜಾತಿಯೇ ವಿಜೃಂಭಿಸುತ್ತದೆ.

ಸಚಿವರು ನಂಬುವುದು ಆಪ್ತಕಾರ್ಯದರ್ಶಿ, ಒಎಸ್‌ಡಿ ಹಾಗೂ ಆಪ್ತರಕ್ಷಕ (ಗನ್‌ ಮ್ಯಾನ್) ಹಾಗೂ ಆಪ್ತ ಸಹಾಯಕರನ್ನು ಮಾತ್ರ. ಸಚಿವರ ಪತ್ನಿಗೆ ಗೊತ್ತಿಲ್ಲದ ಸಂಗತಿ, ವ್ಯವಹಾರಗಳನ್ನು ನಿಭಾಯಿಸುವುದು ಗನ್ ಮ್ಯಾನ್ ಹಾಗೂ ಆಪ್ತ ಸಹಾಯಕರು. ಇವರು ಒಂದು ರೀತಿಯಲ್ಲಿ ಸಾಕು ಮಕ್ಕಳ ತರಹ. ಸಚಿವರ ಎಲ್ಲ ರೀತಿಯ ವ್ಯವಹಾರಗಳಿಗೂ ಇವರು ‘ಪಾಸ್‌ವರ್ಡ್‌’ ಇದ್ದಂತೆ.

ಮೊದಲೆಲ್ಲ ಜಾತೀಕರಣ ಎಂದರೆ ಮೂಗು ಮುರಿಯುವ, ಅಂತಹವರನ್ನು ದೂರ ಇಡುವ ಪದ್ಧತಿ ಇತ್ತು. ಕಾಲ ಎಷ್ಟು ಬದಲಾಗುತ್ತಿದೆ ಎಂದರೆ, ಆಯಾ ಜಾತಿಯವರು ಅಧಿಕಾರದಲ್ಲಿದ್ದಾಗ ತಮ್ಮ ಜಾತಿಯವರನ್ನು ಓಲೈಸುವುದು, ಆಯಕಟ್ಟಿನ ಜಾಗದಲ್ಲಿ ಕೂರಿಸುವುದು, ಅನುಕೂಲ ಮಾಡಿಕೊಡುವುದು, ಯೋಜನೆ ರೂಪಿಸುವುದು ತಪ್ಪೇನು ಎಂದು ಜನರೇ ಪ್ರಶ್ನಿಸಲಾರಂಭಿಸಿದ್ದಾರೆ. ಜಾತೀಕರಣವು ಒಪ್ಪಿತ ಅಥವಾ ಪುರಸ್ಕೃತ ಮೌಲ್ಯವಾಗಿ ಮಾರ್ಪಾಡಾಗುತ್ತಿರುವುದು ಆತಂಕಕಾರಿ. ಇದು ಸಂವಿಧಾನದ ಆಶಯಕ್ಕೆ ಅಪಚಾರ. ಈ ಬಗ್ಗೆ ಜಾಗೃತಿ ಮೂಡಿಸಿ, ಸಂವಿಧಾನದ ಉದಾತ್ತ ಆಶಯಗಳ ಬಗ್ಗೆ ಅರಿವು ಮೂಡಿಸದೇ ಇದ್ದರೆ ಸರ್ಕಾರವೊಂದು ಜಾತೀಯ ಮಠವಾಗಿ, ಸ್ವಜಾತಿಯ ಕೂಟವಾಗಿ ಪರಿವರ್ತಿತವಾಗುತ್ತದೆ.

ರಾಜಕೀಯ ಬಲವೇ ಇಲ್ಲದೇ, ಸ್ವಾತಂತ್ರ್ಯ ಬಂದ ಕಾಲದಿಂದಲೂ ಪ್ರಾತಿನಿಧ್ಯವನ್ನೇ ಕಾಣದಂತಹ ಶೋಷಿತ ಜಾತಿಗಳ ಜನರಿಗೆ ನ್ಯಾಯವಾಗಿ ಸಿಗಬೇಕಾದ ಪಾಲು ಸಿಗದೇ ಹೋಗುವ ಕಾಲಕ್ಕೆ ನಾವು ಸರಿದುಹೋಗಲಿದ್ದೇವೆ. ಸರ್ಕಾರದ ಭಾಗೀದಾರರಾಗಿರುವ ಪ್ರಬಲ ಜಾತಿಗಳ ಸಚಿವರು ತಮ್ಮ ಜಾತಿಗೆ ಆದ್ಯತೆ–ಪ್ರಾಧಾನ್ಯ ಕೊಡಿಸುತ್ತಾ ಹೋದರೆ
ಸಾವಿರಾರು ಸಂಖ್ಯೆಯಲ್ಲಿರುವ ಅಲಕ್ಷಿತರು, ಕುರುಹುಗಳೇ ಇಲ್ಲದೇ ಸಣ್ಣಪುಟ್ಟ ಜಾತಿಗಳವರು ನ್ಯಾಯಕ್ಕಾಗಿ
ಯಾರನ್ನು ಕೇಳಬೇಕು?

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು