ಸೋಮವಾರ, ಅಕ್ಟೋಬರ್ 3, 2022
24 °C
ಈ ಕಾನೂನು ರೂಪಿಸಲು ಪಕ್ಷವು ಭಿನ್ನವಾದ ಕಾರ್ಯತಂತ್ರದ ಮೊರೆಹೋಗಿದೆ.

ವಿಶ್ಲೇಷಣೆ | ನಾಗರಿಕ ಸಂಹಿತೆ: ಬಿಜೆಪಿಗೆ ಸವಾಲು

ಅರುಣ್ ಸಿನ್ಹಾ Updated:

ಅಕ್ಷರ ಗಾತ್ರ : | |

ತ್ರಿವಳಿ ತಲಾಖ್‌ ನಿಷೇಧಿಸಿ ಕಾಯ್ದೆ ರೂಪಿಸಿರುವ ಬಿಜೆಪಿಯು ಈಗ ಏಕರೂಪ ನಾಗರಿಕ ಸಂಹಿತೆಗೆ ಸಂಬಂಧಿಸಿದಂತೆ ಕಾನೂನು ರೂಪಿಸಲು ಕೆಲಸ ಆರಂಭಿಸಿದೆ. ಈ ಕಾನೂನು ರೂಪಿಸಲು ಪಕ್ಷವು ಭಿನ್ನವಾದ ಕಾರ್ಯತಂತ್ರದ ಮೊರೆಹೋಗಿದೆ. ‍ಪಕ್ಷವು ಇಲ್ಲಿ ನೇರ ಮಾರ್ಗ ಅನುಸರಿಸುತ್ತಿಲ್ಲ; ಬದಲಿ ಮಾರ್ಗ ಅನುಸರಿಸುತ್ತಿದೆ.

ಅಂದರೆ, ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಕಾನೂನು ರೂಪಿಸಲು ಸಂಸತ್ತಿನಲ್ಲಿ ಮಸೂದೆ ಮಂಡಿಸುತ್ತಿಲ್ಲ. ಮಸೂದೆಯನ್ನು ಮೊದಲು ಉತ್ತರಾಖಂಡ ವಿಧಾನಸಭೆಯಲ್ಲಿ ಅಥವಾ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಮಂಡಿಸಲಾಗುತ್ತದೆ. ಹಿಮಾಚಲ ಪ್ರದೇಶ, ಮಧ್ಯಪ್ರದೇಶ ಮತ್ತು ಬಿಜೆಪಿ ಆಡಳಿತವಿರುವ ಇತರ ರಾಜ್ಯಗಳೂ ಈ ವಿಚಾರದಲ್ಲಿ ಉತ್ಸುಕವಾಗಿದ್ದರೂ, ಈ ಎರಡು ರಾಜ್ಯಗಳು ಹೆಚ್ಚಿನ ವೇಗದಿಂದ ಕೆಲಸ ಮಾಡುತ್ತಿವೆ.

ಏಕರೂಪ ನಾಗರಿಕ ಸಂಹಿತೆ ವಿಚಾರದಲ್ಲಿ ಕಾನೂನು ರೂಪಿಸುವ ಇರಾದೆ ತನಗಿಲ್ಲ ಎಂದು ಕೇಂದ್ರ ಸರ್ಕಾರ ಬಹಿರಂಗವಾಗಿ ಹೇಳಿದೆ. ಇಂತಹ ಕಾನೂನಿನ ವಿಚಾರವಾಗಿ ಮುಂದಡಿ ಇರಿಸುವ ಮೊದಲು ‘ಸಂಬಂಧ ಪಟ್ಟವರ ಜೊತೆ ವಿಸ್ತೃತ ಚರ್ಚೆ ಆಗಬೇಕು’ ಎಂದು ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗಳಿಗೆ ಕೇಂದ್ರ ಸರ್ಕಾರವು ಉತ್ತರವಾಗಿ ತಿಳಿಸಿದೆ. ಹೀಗಿದ್ದರೂ, ಪ್ರಧಾನಿ ನರೇಂದ್ರ ಮೋದಿ ಅಥವಾ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಲ್ಲಿ, ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಲ್ಲಿ ಏಕರೂಪ ನಾಗರಿಕ ಸಂಹಿತೆಗೆ ಸಂಬಂಧಿಸಿದ ಕಾನೂನು ತರುವ ಆಲೋಚನೆ ಕೈಬಿಡಿ ಎಂದು ಹೇಳಿಲ್ಲ. ಬೇರೆ ರಾಜ್ಯಗಳ ಮುಖ್ಯಮಂತ್ರಿಗಳಿಗೂ ಅವರು ಈ ಮಾತು ಹೇಳಿಲ್ಲ. ಕಾನೂನು ರೂಪಿಸುವ ಮೊದಲು ‘ಸಂಬಂಧ ಪಟ್ಟವರ ಜೊತೆ ವಿಸ್ತೃತ ಚರ್ಚೆ ನಡೆಸಿ’ ಎಂದೂ ಹೇಳಿಲ್ಲ.

ಬಿಜೆಪಿ ಆಡಳಿತವಿರುವ ರಾಜ್ಯಗಳ ನಡೆಗೆ ಅವರ ಮೌನ ಸಮ್ಮತಿ ಇದೆ. ಏಕರೂಪ ನಾಗರಿಕ ಸಂಹಿತೆಯು ಆರ್‌ಎಸ್‌ಎಸ್‌ನ ಅತ್ಯಂತ ಹಳೆಯ ಕನಸುಗಳಲ್ಲಿ ಒಂದಾಗಿರುವ ಕಾರಣ ಈ ನಡೆಯು ಆಶ್ಚರ್ಯ ಮೂಡಿಸುವಂಥದ್ದೇನೂ ಅಲ್ಲ. ಈ ಕನಸು ಬೇಗ ನನಸಾದಷ್ಟೂ ಬಿಜೆಪಿ–ಆರ್‌ಎಸ್‌ಎಸ್‌ ನಾಯಕತ್ವಕ್ಕೆ ಹೆಚ್ಚು ಖುಷಿಯಾಗುತ್ತದೆ. ಆದರೂ ಈ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇರಿಸಲಾಗುತ್ತಿದೆ. ಯಾವುದೇ ಕಾನೂನಿಗೆ ಅನುಮೋದನೆ ಪಡೆದುಕೊಳ್ಳುವ ಸಂಖ್ಯಾಬಲ ಕೇಂದ್ರ ಸರ್ಕಾರಕ್ಕೆ ಇದೆಯಾದರೂ, ಏಕರೂಪ ನಾಗರಿಕ ಸಂಹಿತೆಯ ವಿಚಾರದಲ್ಲಿ ಕೇಂದ್ರವೇ ಕಾನೂನು ಜಾರಿಗೆ ಮುಂದಾದರೆ ಎದುರಾಗಬಹುದಾದ ಪ್ರತಿಕ್ರಿಯೆಗಳು ಹೇಗಿರಬಹುದು ಎಂಬುದು ಅವರಿಗೆ ಸ್ಪಷ್ಟವಾಗುತ್ತಿಲ್ಲ. ಕೋಮು ಸೌಹಾರ್ದಕ್ಕೆ ಹೆಚ್ಚು ಧಕ್ಕೆಯಾಗದೆ, ಅಂತರರಾಷ್ಟ್ರೀಯ ಸಂಬಂಧಗಳಿಗೆ ಮತ್ತು ಸರ್ಕಾರಕ್ಕೆ ಹಾಗೂ ಪಕ್ಷಕ್ಕೆ ಧಕ್ಕೆಯಾಗದ ರೀತಿಯಲ್ಲಿ ಕಾನೂನು ಜಾರಿಗೊಳಿಸಬಹುದೇ ಎಂಬುದು ಅವರಿಗೆ ಖಚಿತವಾಗುತ್ತಿಲ್ಲ. ಹೀಗಾಗಿ, ಒಂದೆರಡು ರಾಜ್ಯಗಳಲ್ಲಿ ಇದನ್ನು ಪ್ರಾಯೋಗಿಕವಾಗಿ ಜಾರಿಗೆ ತಂದು, ಪರಿಣಾಮ ಏನಾಗುತ್ತದೆ ಎಂಬುದನ್ನು ನೋಡುವುದು ಅವರಿಗೆ ಒಳ್ಳೆಯ ಮಾರ್ಗವಾಗಿ ಕಂಡಿದೆ. ರಾಜ್ಯಗಳ ಮಟ್ಟದಲ್ಲಿ ಮಾತ್ರ ಪ್ರತಿರೋಧ ಎದುರಾದರೆ ಅದನ್ನು ಸುಲಭವಾಗಿ ನಿಯಂತ್ರಿಸಬಹುದು.

ಆದರೆ ಇಲ್ಲಿ ಎಲ್ಲವೂ ಸುಲಭವಿಲ್ಲ. ಬಿಜೆಪಿಯ ಗುರಿ ಮುಸ್ಲಿಮರು ಎಂಬುದು ನಿಜ. ಆದರೆ, ಏಕರೂಪ ನಾಗರಿಕ ಸಂಹಿತೆಯು ಹಿಂದೂಗಳು, ಕ್ರೈಸ್ತರು ಮತ್ತು ‍ಪಾರ್ಸಿಗಳಿಗಾಗಿ ರೂಪಿಸಿರುವ ಮತ–ಧರ್ಮ ನಿರ್ದಿಷ್ಟ ವೈಯಕ್ತಿಕ ಕಾನೂನುಗಳನ್ನು ಇಲ್ಲವಾಗಿ
ಸುತ್ತದೆ. ಈ ಮತಧರ್ಮಗಳಿಗೆ ಸೇರಿದವರ ವಿವಾಹ, ವಿಚ್ಛೇದನ, ಉತ್ತರಾಧಿಕಾರ, ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ಕಾನೂನುಗಳು ಸರಿಸುಮಾರು ಒಂದು ಶತಮಾನದಿಂದ ಜಾರಿಯಲ್ಲಿವೆ. ಹೀಗಾಗಿಯೇ, ಈ ವಿಚಾರವಾಗಿ ವಿಸ್ತೃತ ಚರ್ಚೆಯ ಅಗತ್ಯವಿದೆ ಎಂದು ಮೋದಿ ನೇತೃತ್ವದ ಸರ್ಕಾರವು ಆರಂಭದಿಂದಲೂ ಹೇಳುತ್ತಿದೆ. ಮುಸ್ಲಿಮರು ಮಾತ್ರವೇ ಅಲ್ಲದೆ, ತಮ್ಮ ವೈಯಕ್ತಿಕ ಜೀವನವನ್ನು ಏಕರೂಪ ನಾಗರಿಕ ಸಂಹಿತೆಗೆ ಅನುಗುಣವಾಗಿ ನಡೆಸಲು ಹಿಂದೂಗಳು, ಕ್ರೈಸ್ತರು ಮತ್ತು ಪಾರ್ಸಿಗಳು ಕೂಡ ಸಿದ್ಧರಾಗಬೇಕಾಗುತ್ತದೆ.

ಅಂದಾಜು ಮಾಡಲು ಕೂಡ ಕಷ್ಟವಾಗುವ ಹಲವು ಸಂಗತಿಗಳು ಏಕರೂಪ ನಾಗರಿಕ ಸಂಹಿತೆಯನ್ನು ರೂಪಿಸುವಲ್ಲಿ ಅಡ್ಡಿಯಾಗುತ್ತವೆ. ಉತ್ತರಾಖಂಡ ಅಥವಾ ಉತ್ತರಪ್ರದೇಶದಲ್ಲಿ ಇಂಥದ್ದೊಂದು ಸಂಹಿತೆಯನ್ನು ಜಾರಿಗೆ ತರುವ ಪ್ರಕ್ರಿಯೆಯು ಕಾನೂನು ಅಭಿಪ್ರಾಯಗಳು, ಮನವಿಗಳು, ವಿಧಾನಸಭೆಯಲ್ಲಿ ಆಕ್ರೋಶದ ಭಾಷಣಗಳು, ಪ್ರತಿಭಟನೆಗಳು, ಚಳವಳಿಗಳು ಹಾಗೂ ಕಾನೂನು ವ್ಯಾಜ್ಯಗಳಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇದೆ.

ಧಾಮಿ ಅಥವಾ ಆದಿತ್ಯನಾಥ ಅವರು ಪ್ರಯತ್ನಿಸಬಹುದಾದ ಒಂದು ಬದಲಿ ಮಾರ್ಗ ಇದೆ. ಈ ವಿಚಾರವಾಗಿ ಕೆಲವು ಸೂಚನೆಗಳು ಈ ಹಿಂದೆಯೂ ಬಂದಿವೆ. ಗೋವಾದಲ್ಲಿ ಏಕರೂಪ ನಾಗರಿಕ ಸಂಹಿತೆ ಇದೆ ಎಂದು ಹಲವರು ಹೇಳಿದ್ದಾರೆ. ಅದನ್ನು ಮಾದರಿಯಾಗಿ ಬಳಸಿಕೊಳ್ಳಬಹುದು. ಬಿಜೆಪಿ ನಾಯಕ ಸುಶೀಲ್ ಮೋದಿ ನೇತೃತ್ವದ ಸಂಸದೀಯ ನಿಯೋಗವೊಂದು ಇದರ ಅಧ್ಯಯನಕ್ಕೆ ಗೋವಾಕ್ಕೆ ಭೇಟಿ ನೀಡಿದೆ. ಅದೇನೇ ಇದ್ದರೂ, ಧಾಮಿ ಅಥವಾ ಆದಿತ್ಯನಾಥ ಅವರಿಗೆ ಗೋವಾ ಮಾದರಿಯನ್ನು ಆಯ್ಕೆ ಮಾಡಿಕೊಳ್ಳುವುದು ಸುಲಭವಲ್ಲ. ಉತ್ತರಾಖಂಡ ಹಾಗೂ ಉತ್ತರಪ್ರದೇಶದ ಪುರುಷ ಪ್ರಾಧಾನ್ಯದ ಸಮಾಜವು ಈ ಸಂಹಿತೆಗೆ ಹೇಗೆ ಪ್ರತಿಕ್ರಿಯಿಸ
ಬಹುದು ಎಂಬುದು ಗೊತ್ತಿಲ್ಲ. ಗೋವಾದಲ್ಲಿ ಇದನ್ನು ಏಕರೂಪ ನಾಗರಿಕ ಸಂಹಿತೆ ಎಂದು ಕರೆಯುವುದಿಲ್ಲ; ಅದನ್ನು ಕೌಟುಂಬಿಕ ಕಾನೂನುಗಳು ಎನ್ನಲಾಗುತ್ತದೆ. ಪೋರ್ಚುಗೀಸರು 1870ರ ಸಮಯದಲ್ಲಿ ಜಾರಿಗೆ ತಂದ ಇದರ ಒಂದು ವೈಶಿಷ್ಟ್ಯ ಆಸ್ತಿ ಹಾಗೂ ವಿವಾಹದ ನಡುವಿನ ನಂಟು.

ಇದರ ಪ್ರಕಾರ, ಪತಿ–ಪತ್ನಿ ಪೈಕಿ ಯಾರೇ ಆಸ್ತಿಯನ್ನು ಉಡುಗೊರೆಯಾಗಿ, ಪೂರ್ವಿಕರಿಂದ, ಖರೀದಿಯ ಮೂಲಕ ಪಡೆದುಕೊಂಡರೂ ವಿವಾಹ ಸಂಬಂಧ ಇರುವವರೆಗೆ ಆ ಆಸ್ತಿಯ ಮೇಲೆ ಇಬ್ಬರದೂ ಹಕ್ಕಿರುತ್ತದೆ. ಪತಿ–ಪತ್ನಿಯ ಒಪ್ಪಿಗೆ ಇಲ್ಲದೆ ಇಂತಹ ಆಸ್ತಿಯನ್ನು ಭಾಗ ಮಾಡುವಂತಿಲ್ಲ, ವರ್ಗಾವಣೆ ಮಾಡುವಂತಿಲ್ಲ. ವಿವಾಹ ಸಂಬಂಧ ಅಂತ್ಯಗೊಂಡರೆ ಮಾತ್ರ ಆಸ್ತಿ ವಿಭಜಿಸಬಹುದು. ವಿಚ್ಛೇದನದ ಮೂಲಕ ವಿವಾಹ ಸಂಬಂಧ ಕೊನೆಗೊಂಡರೆ, ಪತಿ–ಪತ್ನಿ ಇಬ್ಬರಿಗೂ ಆಸ್ತಿಯಲ್ಲಿ ಅರ್ಧ ಪಾಲು ಸಿಗುತ್ತದೆ. ವಿಚ್ಛೇದನ ಯಾರೇ ನೀಡಿದ್ದರೂ, ಆಸ್ತಿ ವಿಭಜನೆ ಸಮಾನವಾಗಿ ಆಗುತ್ತದೆ. ಪತಿಯು ನಿಧನ ಹೊಂದಿದರೆ, ಪತ್ನಿಗೆ ಆಸ್ತಿಯಲ್ಲಿ ಅರ್ಧ ಪಾಲು, ಇನ್ನರ್ಧ ಪಾಲು ಮಕ್ಕಳಿಗೆ ಸಿಗುತ್ತದೆ. ಪತ್ನಿಯ ಅರ್ಧ ಪಾಲನ್ನು ವಿಭಜಿಸುವುದಿಲ್ಲ; ಆ ಪಾಲು ಪತಿಗೆ ವರ್ಗಾವಣೆ ಆಗುತ್ತದೆ. ವಿಚ್ಛೇದನ ಇಲ್ಲದೆ, ಪತಿ–ಪತ್ನಿ ಪ್ರತ್ಯೇಕವಾದರೆ ಆಸ್ತಿಯನ್ನು ಸಮಾನವಾಗಿ ಪಾಲು ಮಾಡಲಾಗುತ್ತದೆ.

ವಿಚ್ಛೇದನ ಪ್ರಕರಣಗಳಲ್ಲಿ ಪತ್ನಿಗೆ ಮಧ್ಯಂತರ ಜೀವನಾಂಶ ಹಾಗೂ ಶಾಶ್ವತ ಜೀವನಾಂಶ ಪಡೆಯಲು ಗೋವಾದ ಕಾನೂನು ಅವಕಾಶ ಕಲ್ಪಿಸುತ್ತದೆ. ಇಂತಹ ಅವಕಾಶವು ವೈಯಕ್ತಿಕ ಕಾನೂನುಗಳ ಅಡಿಯಲ್ಲಿ ಮಹಿಳೆಯರಿಗೆ ಇಲ್ಲ.

ಗೋವಾದ ಏಕರೂಪ ನಾಗರಿಕ ಸಂಹಿತೆಯು ಮಹಿಳೆಗೆ ಧರ್ಮ ನಿರ್ದಿಷ್ಟವಾದ ವೈಯಕ್ತಿಕ ಕಾನೂನುಗಳಿಗಿಂತ ಹೆಚ್ಚಿನ ಪ್ರಮಾಣದ ಭದ್ರತೆಯನ್ನು, ಬೆಂಬಲವನ್ನು ನೀಡುತ್ತದೆ. ಮಹಿಳೆಯರಲ್ಲಿ ಲಿಂಗ ಸಮಾನತೆಯ ‍ಪ್ರಜ್ಞೆ ಹೆಚ್ಚುತ್ತಿರುವಾಗ, ಉತ್ತರಾಖಂಡ, ಉತ್ತರಪ್ರದೇಶ, ಹಿಮಾಚಲಪ್ರದೇಶ, ಮಧ್ಯಪ್ರದೇಶದ ಪುರುಷಪ್ರಧಾನ ವ್ಯವಸ್ಥೆಗಳು ಆಸ್ತಿಯ ಸ್ವಾಧೀನ, ಬಳಕೆ ವಿಚಾರದಲ್ಲಿ ಏಕರೂಪ ನಾಗರಿಕ ಸಂಹಿತೆಯು ತಮಗೆ ಅಪಾಯ ಎಂದು ಪರಿಗಣಿಸಬಹುದು.


ಅರುಣ್ ಸಿನ್ಹಾ

ಮಹಿಳೆಯರು ತಮ್ಮ ಅನ್ನವನ್ನು ತಾವೇ ದುಡಿದುಕೊಳ್ಳುವುದು ಹೆಚ್ಚುತ್ತಿರುವ ಈ ಹೊತ್ತಿನಲ್ಲಿ ಪುರುಷ ಪ್ರಧಾನ ಶಕ್ತಿಗಳು ತಮ್ಮ ಬಲ ಕಳೆದುಕೊಳ್ಳುತ್ತಿವೆ. ಎಲ್ಲ ಆಸ್ತಿಗಳಲ್ಲಿಯೂ ಮಹಿಳೆಯರಿಗೆ ಅರ್ಧ ಪಾಲು ದೊರೆತರೆ, ಪುರುಷ ಪ್ರಧಾನ ವ್ಯವಸ್ಥೆಗೆ ನೇರ ಸವಾಲು ಎದುರಾಗಬಹುದು. ಆ ಸವಾಲು ಆರ್ಥಿಕ ನೆಲೆಯಲ್ಲಿ ಮಾತ್ರ ಉಳಿದುಕೊಳ್ಳುವುದಿಲ್ಲ. ಅದು ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ನೆಲೆಗಳಿಗೂ ವ್ಯಾಪಿಸಿಕೊಳ್ಳುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು