ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಪ್ರಜ್ಞಾ ಜಾಗೃತಿ ಮತ್ತು ಹೊಣೆಗಾರಿಕೆ

ಕೌಟುಂಬಿಕ ಹಾಗೂ ಸಾಮಾಜಿಕ ರಚನೆಗಳ ಮರುಕಟ್ಟುವಿಕೆಯಿಂದ ದೌರ್ಜನ್ಯಗಳೂ ಕೊನೆಗೊಳ್ಳುತ್ತವೆ
Last Updated 20 ನವೆಂಬರ್ 2022, 19:30 IST
ಅಕ್ಷರ ಗಾತ್ರ

ಮೂವತ್ತು ವರ್ಷಗಳ ಹಿಂದಿನ ಒಂದು ನೆನಪು: ಟಿ.ವಿ.ಯಲ್ಲಿ ಪ್ರಸಾರವಾಗುತ್ತಿದ್ದ ಸಿನಿಮಾವೊಂದರಲ್ಲಿ ಒಬ್ಬಾತ ಹೆಂಗಸೊಬ್ಬಳನ್ನು ಅಟ್ಟಿಸಿಕೊಂಡು ಹೋಗುತ್ತಿದ್ದ. ಆಕೆಯ ಮುಖ ಭಯಭೀತವಾಗಿತ್ತು. ಅವನ ಮುಖ ಕ್ರೂರವಾಗಿತ್ತು. ಇದನ್ನು ನೋಡುತ್ತಿದ್ದಂತೆ ಪಕ್ಕದ ಮನೆಯ ಒಂದನೇ ತರಗತಿ ಓದುತ್ತಿದ್ದ ಗಂಡು ಮಗುವು ‘ಗಂಡ, ಗಂಡ’ ಅಂತ ಕಿರುಚಿಕೊಂಡಿತು. ನಾನು ಶಾಕ್‍ನಿಂದ ಮೂಕವಾಗಿ ಆ ಮಗುವನ್ನೇ ನೋಡಿದೆ. ಇದು ಪ್ರಬಲ ಜಾತಿಯ, ಎಂಜಿನಿಯರ್ ಅಪ್ಪ, ಪದವಿ ಓದಿ ಗೃಹಿಣಿಯಾಗಿರುವ ಅಮ್ಮ ಇರುವ ಆ ಮಗುವಿನ ವೈಯಕ್ತಿಕ ಅನುಭವವೇ? ಆತನ ಅಪ್ಪನ ವ್ಯಕ್ತಿತ್ವದ ಕೊರತೆಯೇ? ಅಮ್ಮನಿಗೆ ಒದಗಿದ ದುರದೃಷ್ಟ ಮಾತ್ರವೇ?

ದಿನ ದಿನದ ಮಾತೇ ಆಗಿರುವ ದೌರ್ಜನ್ಯಗಳಿಗೆ ನಾನಾ ರೀತಿಯ ಪ್ರತಿಕ್ರಿಯೆಗಳು ಬರುತ್ತವೆ. ಇವುಗಳಲ್ಲಿ ಶೇ 99ರಷ್ಟು ಪ್ರತಿಕ್ರಿಯೆಗಳು ಅಪರಾಧಿಯನ್ನು ಶಿಕ್ಷಿಸುವ ಮಾತಾಡುತ್ತವೆ. ಅವರ ಕಾಳಜಿಯ ಬಗೆಗೆ ಯಾವ ಸಂಶಯವೂ ಇಲ್ಲ. ಆದರೆ ಈ ಅಪರಾಧಗಳು ಯಾಕೆ ಮರುಕಳಿಸುತ್ತಿವೆ ಎಂಬ ಬಗ್ಗೆ ನಾವೆಲ್ಲರೂ ಜೊತೆಯಾಗಿ ಗಂಭೀರವಾಗಿ ಯೋಚನೆ ಮಾಡುತ್ತಿದ್ದೇ ವೆಯೇ? ನಮ್ಮದೊಂದು ಹೇಳಿಕೆ ದಾಖಲಿಸಿ ‘ಏನೋ ನನ್ನಿಂದಾದದ್ದು ಮಾಡಿದೆ’ ಎಂದು ನಿರಾಳವಾಗುತ್ತಿ ದ್ದೇವೆಯೇ? ‘ನಾವು ಮಾಡಿದ ಕೆಲಸ ಬೇರೆಯವರು ಮಾಡುತ್ತಿಲ್ಲ’ ಎಂದು ಆಕ್ರೋಶಕ್ಕೆ ಒಳಗಾಗುತ್ತಾ ಹೊಣೆಗಾರಿಕೆಯನ್ನು ಅನ್ಯರ ಮೇಲೆ ಹೇರುತ್ತಿದ್ದೇ ವೆಯೇ? ಎಲ್ಲಕ್ಕಿಂತ ಹೆಚ್ಚಾಗಿ ನಮಗೆ ಸಮಸ್ಯೆಯನ್ನು ನಿವಾರಿಸುವುದರ ಬಗೆಗೆ ನಂಬಿಕೆ, ಆಸಕ್ತಿ ಇದೆಯೇ? ಹಾಗಿದ್ದರೆ ಸಮಸ್ಯೆಯ ಮೂಲ ಹುಡುಕಬೇಕು ಅಲ್ಲವೇ?

ಒಬ್ಬ ಮಠಾಧಿಪತಿ ಸಮಾಜದಲ್ಲಿ ತನ್ನದೊಂದು ಬಿಂಬವನ್ನು ಬಲಿಷ್ಠವಾಗಿ ಕಟ್ಟಿಕೊಂಡು ಮಠದೊಳಗೆ ಊಹಾತೀತವಾಗಿ ಎಳೆಯ ಬಾಲೆಯರ ಮೇಲೆ ದೌರ್ಜನ್ಯ ಎಸಗುವುದಕ್ಕೂ, ಧಾರ್ಮಿಕತೆಯನ್ನು ಅಧಿಕಾರ ಕೇಂದ್ರವಾಗಿಸಿ, ಎಲ್ಲ ಭೋಗಗಳಿಗೆ ಅನುವು ಮಾಡಿಕೊಟ್ಟು, ಸರ್ಕಾರಿ ಶಾಲೆಗಳನ್ನು ಬಡವಾಗಿಸಿ, ಮಠಗಳಿಗೆ ಕೋಟಿ ಕೋಟಿ ಹಣ ‘ಕೊಟ್ಟು’ ಕೊಬ್ಬಿಸಿ, ಅದರ ಮೂಲಕ ಅವರು ಆಳುವ ವರ್ಗದ ಅಂಗಸಂಸ್ಥೆಗಳೆಲ್ಲದರ ಮೇಲೂ ಹಿಡಿತವುಳ್ಳವರು ಎಂಬ ಭಯವು ತನ್ನಿಂದ ತಾನೇ ಪಸರಿಸಿ ಪರ್ಯಾಯ ಸರ್ಕಾರಗಳೇ ಆಗಿ ಪ್ರಶ್ನಾತೀತರಾಗುವುದಕ್ಕೂ ಸಂಬಂಧ ಇದೆ ಎಂಬುದು ನಮಗೇಕೆ ಕಾಣಿಸುತ್ತಿಲ್ಲ? ಪ್ರೀತಿಸಿ ಮದುವೆಯಾದವ ಹೆಂಡತಿಯನ್ನು ಕೊಂದು ಕತ್ತರಿಸಿ ಎಸೆಯುವ ರಕ್ಕಸತನ ತೋರುವುದಕ್ಕೆ ಸಾಧ್ಯವಾಗುವುದು ಹೇಗೆ? ಅವನನ್ನು ಮದುವೆ ಯಾದದ್ದಕ್ಕೆ ತಕ್ಕ ಶಾಸ್ತಿಯಾಯಿತು ಎನ್ನುವುದರ ಮೂಲಕ ಆ ಹುಡುಗಿಯನ್ನು ಮತ್ತೊಮ್ಮೆ ಕತ್ತರಿಸಿ ಎಸೆಯುವವರ ಮನಃಸ್ಥಿತಿ ಯಾವ ರೀತಿಯದು? ಅದು ತಮ್ಮ ಮನದೊಳಗಣ ಬಯಕೆಗೆ ಒದಗಿದ ಸಾಕ್ಷಿಯಂತೆ ಸಂಭ್ರಮಿಸುವಾಗ, ಅದು ಅಂತಹ ಕೃತ್ಯಗಳಿಗೆ ತಾವು ಒದಗಿಸುತ್ತಿರುವ ಸಮ್ಮತಿ ಎಂಬುದು ಅವರಿಗೆ ಅರ್ಥ ವಾಗುತ್ತಿಲ್ಲವೇ? ಇವೆಲ್ಲದರ ಹಿಂದೆ ಈ ‘ಗಂಡಸು’ ಎಂಬುದೂ ಒಂದು ಸಂಸ್ಥೆಯಾಗಿರುವುದನ್ನು ನಾವೀಗ ಒಡೆದು ಕಾಣಬೇಕಾಗಿದೆ.

ಯಾವುದೇ ಒಂದು ಸತ್ತೆಯು ಇತರರ ಮೇಲೆ ಅಧಿಕಾರ ಸ್ಥಾಪಿಸಲು ಆರ್ಥಿಕತೆಗಳ ಮೇಲೆ ಹಿಡಿತ ಸಾಧಿಸುವಂತೆಯೇ, ಸಾಮಾಜೀಕರಣ, ಸಾಂಸ್ಕೃತೀಕರಣಗಳನ್ನೂ ಅದರ ಜೊತೆಗೆ ತಳುಕು ಹಾಕುತ್ತಾ ಇತರರು ಅದನ್ನು ಒಪ್ಪಿಕೊಳ್ಳುವಂತೆ ಮಾಡುತ್ತದೆ. ಇದೆಲ್ಲದರ ಜೊತೆಗೆ ಜನರನ್ನು ಮಾನಸಿಕ ದಾಸ್ಯಕ್ಕೆ ಒಳಪಡಿಸಲು ‘ಅಮಲ’ನ್ನು ಉದ್ದೀಪಿಸುತ್ತದೆ. ಇದಕ್ಕವರು ಯಾವ ಸುಂದರ ಹೆಸರನ್ನಾದರೂ ಕೊಡಬಹುದು. ಉದಾಹರಣೆಗೆ, ಅದನ್ನವರು ಸಂಸ್ಕೃತಿ ಎಂದು ಬೇಕಾದರೂ ಕರೆಯಬಹುದು. ಮೇಲೆ ಉಲ್ಲೇಖಿಸಿದ ಎರಡು ಪ್ರಸಂಗಗಳ ಮಿತಿಯಲ್ಲಿಯೇ ಇದನ್ನು ಅರಿತು ಕೊಳ್ಳಬಹುದು. ಒಮ್ಮೆ ಮದುವೆಯಾಯಿತು ಎಂದಾದ ಮೇಲೆ ಹೆಂಡತಿಯು ಗಂಡನ ಅಂಕೆಗೆ ಒಳಪಡುವುದು ‘ನಮ್ಮ ಸಂಸ್ಕೃತಿ’ ಎಂದು ತುಂಬಿಸಿರುವ ಪಾಠಕ್ಕೂ ಆ ಹುಡುಗಿಯು ಕೊಲೆಯಾಗುವುದಕ್ಕೂ ನೇರ ಸಂಬಂಧ ಇದೆ. ವರದಿಗಳ ಪ್ರಕಾರ, ತನ್ನ ಜೀವಕ್ಕೆ ಅಪಾಯ ಇದೆ ಎಂದು ಆಕೆ ಗೆಳೆಯರಿಗೆ ಮೆಸೇಜ್ ಮಾಡಿದ್ದಾಳೆ. ಹಾಗಿದ್ದರೆ ಆಕೆ ಯಾಕೆ ಅದರಿಂದ ಹೊರಬರಲಿಲ್ಲ? ಆಕೆ ಬುದ್ಧಿವಂತೆ, ಪ್ರತಿಭಾವಂತೆ, ದುಡಿಯುವವಳು, ಮಹಾ ನಗರದಲ್ಲಿ ವಾಸಿಸುವವಳು, ಆಧುನಿಕಳು ಎಲ್ಲವೂ ಆಗಿದ್ದು ಅವಳನ್ನು ತಡೆದದ್ದು ಯಾವುದು?

ಮದುವೆಯನ್ನು ನಾವು ನಿರ್ವಚಿಸಿಕೊಂಡಿರುವುದರ ಸಮಸ್ಯೆ ಇಲ್ಲಿದೆ. ಬಾಲ್ಯದಿಂದಲೇ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಿಕ್ಕಿರುವ ತರಬೇತಿಯು ಗಂಡನನ್ನು ಸಹಿಸಿಕೊಳ್ಳುವ, ತಿದ್ದುವ, ನಂಬುವ ಮತ್ತು ಒಪ್ಪುವ ಸ್ಥಿತಿಗೆ ಹೆಣ್ಣನ್ನು ತಳ್ಳಿರುತ್ತದೆ. ಮದುವೆಯ ಮೂಲಕ ಹೆಣ್ಣನ್ನು ಗಂಡಿನ ಸ್ವಾಧೀನಕ್ಕೆ ಒಪ್ಪಿಸಲಾಗಿದೆ ಎಂಬ ರೀತಿಯಲ್ಲಿಯೇ ನಮ್ಮೆಲ್ಲಾ ಆಚರಣೆಗಳೂ ನಂಬಿಕೆಗಳೂ ಇದ್ದು ಅವನ್ನು ಅವಳೂ ನಂಬಿ ಅಸಹಾಯಕತೆ ಅನುಭವಿಸುತ್ತಾಳೆ. ಗಂಡು ಕೂಡಾ ಹೀಗೆ ಭಾವಿಸುವುದರಿಂದಲೇ ಮದುವೆಯ ನಂತರದ ಬದುಕಿನ ಸುಮಧುರ ಅನುಭವವನ್ನು ಕಳೆದುಕೊಳ್ಳುತ್ತಾನೆ. ಹೆಣ್ಣಿನ ಅಸಮ್ಮತಿ, ಪ್ರತಿಭಟನೆಗಳನ್ನು ತನ್ನ ಪ್ರತಿಷ್ಠೆಗೆ ಉಂಟಾದ ಧಕ್ಕೆ ಎಂದು ಭಾವಿಸುವಂತೆ ಒಟ್ಟು ಕೌಟುಂಬಿಕ ರಚನೆಯು ರೂಪುಗೊಂಡಿದೆ. ಮಹಿಳೆಯರು ಅಲ್ಪಸಂಖ್ಯಾತರಲ್ಲ. ಆದರೆ ಅವರೊಳಗಡೆಯೇ ವಿಭಜನೆ ಯನ್ನು ಸೃಷ್ಟಿಸಿ ಈ ರಚನೆಯನ್ನು ಕಾಪಿಡಲಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಿ ಎಂದರೇನು ಎಂಬ ಬಗೆಗೆ ಇಂದಿಗೂ ಹರೆಯದ ಮಕ್ಕಳಿಗೆ ವೈಜ್ಞಾನಿಕವಾದತಿಳಿವಳಿಕೆಯನ್ನು ಕೊಡುವ ಆಸಕ್ತಿ, ನಂಬಿಕೆಗಳೇ ನಮ್ಮ ವ್ಯವಸ್ಥೆಯಲ್ಲಿ ಇಲ್ಲ. ಹಿರೀಕರಿಗೂ ಇದು ಗೊತ್ತಿಲ್ಲ. ಮದುವೆ ಮಾಡಿಕೊಳ್ಳುವುದು ಮತ್ತು ಅದನ್ನು ಉಳಿಸಿ ಕೊಳ್ಳುವುದು ತಮಗಾಗಿಯೋ ಲೋಕಕ್ಕಾಗಿಯೋ ಎಂಬ ಬಗೆಗೆ ಹಿರಿಯರಿಗೂ ಖಚಿತತೆ ಇಲ್ಲ.

ಕುಟುಂಬವನ್ನು ಹೀಗೆ ತಾರತಮ್ಯ, ದೌರ್ಜನ್ಯ, ಅಟ್ಟಹಾಸದ ಕೇಂದ್ರವಾಗಿ ರೂಪಿಸಿರುವುದು ಒಟ್ಟು ಸಮಾಜದ ಆಳ್ವಿಕೆಯ ಸ್ವರೂಪದ ಮಿನಿಯೇಚರ್‌ನಂತೆ ಇದೆ. ಈಗ ಬದಲಾಗಬೇಕಿರುವುದು ಈ ಸ್ವರೂಪ. ಹೆಣ್ಣೊ ಬ್ಬಳನ್ನು ಗುರುತಿಸಬೇಕಾಗಿರುವುದು, ಗೌರವಿಸಬೇಕಾ ಗಿರುವುದು ಅವಳು ಮದುವೆಯಾದವಳೋ ಅಲ್ಲವೋ ವಿಚ್ಛೇದನ ಪಡೆದವಳೋ ವಿಧವೆಯೋ ಮಕ್ಕಳು ಇರುವವಳೋ ಅಲ್ಲವೋ ಲಿವ್ ಇನ್‍ನಲ್ಲಿ ಇದ್ದಾಳಾ ಯಾವುದರಿಂದಲೂ ಅಲ್ಲ. ವ್ಯಕ್ತಿತ್ವ, ಕೆಲಸ, ಕೊಡುಗೆ ಗಳಷ್ಟೇ ಅವಳ ಗುರುತುಗಳು. ಪರಾವಲಂಬಿತನವನ್ನೇ ಮೌಲ್ಯವಾಗಿಸಿ ಹೆಣ್ಣನ್ನು ದುರ್ಬಲಗೊಳಿಸುವುದಕ್ಕೂ ಅತ್ಯಾಚಾರಗಳಾಗುವುದಕ್ಕೂ ನೇರ ಸಂಬಂಧವಿದೆ.

ಮಠದೊಳಗಿನ ಮಕ್ಕಳು ತಮ್ಮ ಮೇಲಿನದೌರ್ಜನ್ಯಗಳನ್ನು ಸಹಿಸಿಕೊಳ್ಳುವುದರ ಹಿಂದೆಯೂ ಇಂತಹ ಪರಾವಲಂಬಿತನಗಳು ಇವೆ. ಒಂದೆಡೆ, ಹೆಣ್ಣೆಂಬುದೇ ಸಹಿಸುವಿಕೆಗೆ ಕಾರಣವಾದರೆ, ಇನ್ನೊಂದೆಡೆ, ಬಡತನವೂ ಸಹಿಸುವಿಕೆಗೆ ಕಾರಣ
ವಾಗಿರುತ್ತದೆ. ಆಳುವ ಶಕ್ತಿಗಳು ಹೀಗೆ ತಮ್ಮ ಕೆಲಸ ಸಾಧಿಸಿಕೊಳ್ಳುತ್ತವೆ ಎಂಬುದನ್ನು ಅರಿಯುವ ಕಣ್ಣುಗಳಾಗಿಸಿ ಕೊಳ್ಳಬೇಕಿದೆ. ವರದಿಯೊಂದರ ಪ್ರಕಾರ, ಆ ಮಕ್ಕಳನ್ನು ಅಮಲಿನ ದಾಸರನ್ನಾಗಿಸಿ ಆಕ್ರಮಣ ಮಾಡಲಾಗಿದೆ. ಸಾಮಾಜೀಕರಣದಲ್ಲೂ ಕಣ್ಣಿಗೆ ಕಾಣದ ಇಂತಹ ಹಲವು ಅಮಲುಗಳನ್ನು ನೀಡಿ ನಿಯಂತ್ರಿಸಲಾಗುತ್ತದೆ. ಇದು ಗೋಚರಿಸಬೇಕೆಂದರೆ ಇಂತಹ ರಚನೆಗಳ ತಳಪಾಯವೇ ತಾರತಮ್ಯದಿಂದ ಕೂಡಿದೆ ಎಂಬುದು ತಿಳಿಯಬೇಕು. ಅದು ಮೊದಲುಗೊಳ್ಳುವುದೇ ಕುಟುಂಬದೊಳಗೆ ಹೆಣ್ಣನ್ನು ನಿಯಂತ್ರಿಸುವುದರ ಮೂಲಕ. ಸಮಾಜದ ಇನ್ನಿತರ ಎಲ್ಲ ತರತಮಗಳ ಮೂಲ ಇಲ್ಲೇ ಇದೆ. ಇಲ್ಲಿಂದ ಆಗುವ ಬದಲಾವಣೆಯು ಸಮುದಾಯ, ಸರ್ಕಾರಗಳು ನಾಯಕತ್ವವನ್ನು ವಿವರಿಸಿಕೊಳ್ಳುವ ಕ್ರಮವನ್ನೇ ಬದಲಾ ಯಿಸಬಲ್ಲುದು. ಯಾಕೆಂದರೆ ಇವ್ಯಾವುವೂ ಪ್ರತ್ಯೇಕ ಘಟಕಗಳಲ್ಲ.

ಹೆಣ್ಣು ಯಾರ ಸೊತ್ತೂ ಅಲ್ಲ ಎಂಬುದನ್ನು ಮೊದಲು ಸ್ಥಾಪಿಸಬೇಕು. ಅದರಂತೆ ಗಂಡು ಹೆಣ್ಣುಗಳು ನಡೆದು
ಕೊಳ್ಳುವುದನ್ನು ಜಾರಿಗೊಳಿಸಬೇಕು. ಇದಕ್ಕಾಗಿ ನಮ್ಮ ಒತ್ತಾಯ ಮುನ್ನೆಲೆಗೆ ಬರಬೇಕು. ಈ ಪ್ರಜ್ಞಾ ಜಾಗೃತಿಯೆಡೆಗೆ ಚಲಿಸದೆ ದೌರ್ಜನ್ಯವನ್ನೇ ಅಸ್ತ್ರವಾಗಿಸಿಕೊಂಡಿರುವ ಅಧಿಕಾರ ರಾಜಕಾರಣ, ಸೆಲೆಕ್ಟಿವ್ ಆಗಿ ವಾದ ಪ್ರತಿವಾದ ಮಂಡಿಸುತ್ತಾ ದೌರ್ಜನ್ಯದ ಮೂಲ ಬೇರುಗಳೆಡೆಗೆ ತಿರುಗಿಯೂ ನೋಡದಿರುವ ಸಮೂಹಗಳ ಭೋಳೇತನ, ಆಚರಣೆಗೆ ಇಳಿಸದೆ ಮಾತಿನಲ್ಲಿ ದೌರ್ಜನ್ಯಗಳನ್ನು ವಿರೋಧಿಸುವವರ ಟೊಳ್ಳುತನ- ಇವುಗಳಿಗೂ ಆ ಪುಟ್ಟ ಬಾಲಕನಿಗೆ ಕಂಡ ‘ಗಂಡ’ನಿಗೂ ಯಾವ ವ್ಯತ್ಯಾಸವೂ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT