ಭಾನುವಾರ, ಅಕ್ಟೋಬರ್ 25, 2020
22 °C
ಕೃಷಿ ಸಂಬಂಧಿ ಕಾಯ್ದೆಗಳು: ಸಮಾಲೋಚನೆಗೆ ಕೇಂದ್ರ ಸರ್ಕಾರ ಹಿಂದೇಟು ಹಾಕುತ್ತಿರುವುದೇಕೆ?

ಒಳ್ಳೆಯ ಉದ್ದೇಶ, ಕೆಟ್ಟ ಪರಿಣಾಮ

ಕ್ಯಾಪ್ಟನ್ ಜಿ.ಆರ್. ಗೋಪಿನಾಥ್ Updated:

ಅಕ್ಷರ ಗಾತ್ರ : | |

Farm bills

ಕೃಷಿಗೆ ಸಂಬಂಧಿಸಿದ ಕಾನೂನು ತಿದ್ದುಪಡಿ ವಿರೋಧಿಸಿ ವಿರೋಧ ಪಕ್ಷಗಳು ನಡೆಸಿದ ಪ್ರತಿಭಟನೆಗಳು ಒಂದು ಕಥೆಯನ್ನು ನೆನಪಿಸಿದವು. ವಿರೋಧ ಪಕ್ಷದ ನಾಯಕ ಆಗಿದ್ದ ರಾಜಕಾರಣಿಯೊಬ್ಬನ ಹಡಗು ಒಡೆದುಹೋಯಿತು. ಆತ ಮನುಷ್ಯವಾಸ ಇಲ್ಲದ ದ್ವೀಪವೊಂದನ್ನು ಸೇರಿದ. ಗಡ್ಡೆ, ಮೀನು ತಿಂದುಕೊಂಡು ಅಲ್ಲಿ ವರ್ಷಗಳ ಕಾಲ ಉಳಿದ. ಒಮ್ಮೆ ಆ ದ್ವೀಪದ ಸಮೀಪ ಹಡಗೊಂದು ಸಾಗುತ್ತಿದ್ದುದನ್ನು ಕಂಡ. ಅದರತ್ತ ಕೈಬೀಸಿದ. ಅವನನ್ನು ಕಂಡ ಹಡಗಿನ ಕ್ಯಾಪ್ಟನ್, ಒಂದು ದೋಣಿಯಲ್ಲಿ ಅವನತ್ತ ಸಾಗಿದ. ಕ್ಯಾಪ್ಟನ್‌ ಆ ದ್ವೀಪದ ದಡವನ್ನು ತಲುಪುತ್ತಿದ್ದಂತೆಯೇ, ಈ ರಾಜಕಾರಣಿ ‘ನೀನು ಸರ್ಕಾರದ ಕಡೆಯವನಾ? ಹೌದಾದರೆ, ನಾನು ವಿರೋಧ ಪಕ್ಷದ ನಾಯಕ’ ಎಂದು ಕಿರುಚಿದ.

ವಿರೋಧ ಪಕ್ಷಗಳು ಪ್ರತಿಭಟನೆ ಮಾಡುತ್ತವೆ, ಕಲಾಪಕ್ಕೆ ಅಡ್ಡಿ ಉಂಟುಮಾಡುತ್ತವೆ. ಇತ್ತ ಆಡಳಿತ ಪಕ್ಷವು ತನ್ನ ತೀರ್ಮಾನವನ್ನು ಹೇರುತ್ತ ಸಾಗುತ್ತದೆ. ಮಾತುಕತೆ ನಡೆಸುವ, ಅರ್ಥ ಮಾಡಿಕೊಳ್ಳುವ, ಇನ್ನೊಬ್ಬರು ಹೇಳಿದ್ದರಲ್ಲಿ ಪರಿಗಣಿಸಬಹುದಾದ ಅಂಶವಿರಬಹುದು ಎಂಬುದನ್ನು ಗಮನಿಸುವ ಯತ್ನ ಇಬ್ಬರ ಕಡೆಯಿಂದಲೂ ಆಗುತ್ತಿಲ್ಲ.

ಕೃಷಿ ವಲಯಕ್ಕೆ ಸಂಬಂಧಿಸಿದ ಮೂರು ಮಸೂದೆಗಳಿಗೆ ಸಂಸತ್ತಿನ ಎರಡೂ ಸದನಗಳ ಅಂಗೀಕಾರವನ್ನು ಅವಸರದಲ್ಲಿ ಕೊಡಿಸಲಾಯಿತು. ಮಸೂದೆಗಳಿಗೆ ರಾಷ್ಟ್ರಪತಿಯವರ ಅಂಕಿತವೂ ಸಿಕ್ಕಿದೆ. ಹೀಗಿದ್ದರೂ, ಎರಡೂ ಕಡೆಯವರು ಕೆಲವು ಹೆಜ್ಜೆ ಹಿಂದಕ್ಕೆ ಇರಿಸಬೇಕು. ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸ ದಂತೆ ನೋಡಿಕೊಳ್ಳುವ ವಚನ ನೀಡಬೇಕು. ರೈತರ ಪ್ರತಿನಿಧಿಗಳು, ಕೃಷಿ ತಜ್ಞರನ್ನು ಭೇಟಿ ಮಾಡಲು, ಅವರ ಜೊತೆಗೆ ಮುಕ್ತ ಮನಸ್ಸಿನಿಂದ ಚರ್ಚಿಸಲು ಹಾಗೂ ತಮ್ಮ ಗಮನಕ್ಕೆ ಬಾರದಿದ್ದ ಯಾವುದಾದರೂ ವಿಚಾರದ ಬಗ್ಗೆ ಬದಲಾವಣೆ ತರಲು ಒಪ್ಪಬೇಕು. ಒಳ್ಳೆಯ ನೀತಿಯನ್ನು ರೂಪಿಸಲು, ಆ ನೀತಿಯು ತನ್ನ ಉದ್ದೇಶವನ್ನು ಕಾಲಾನುಕ್ರಮದಲ್ಲಿ ಈಡೇರಿಸುವಂತಾಗಲು ಇದು ಅಗತ್ಯ.

ದೇಶದ ರೈತ ಸಮುದಾಯದಲ್ಲಿ ಶೇ 85ರಷ್ಟು ಜನ ಸಣ್ಣ ಪ್ರಮಾಣದ ಹಿಡುವಳಿ ಹೊಂದಿರುವವರು. ಅವರಿಗೆ ಅನುಕೂಲ ಕಲ್ಪಿಸುವ ಹಲವು ಸುಧಾರಣಾ ಕ್ರಮಗಳು ಈಗ ತಂದಿರುವ ತಿದ್ದುಪಡಿಯಲ್ಲಿ ಇವೆ ಎಂಬುದನ್ನು ಅಲ್ಲಗಳೆಯಲಾಗದು. ಒಂದು ಕಾನೂನು ರೈತನನ್ನು ಎಪಿಎಂಸಿ ಮಂಡಿಗಳ ಹಿಡಿತದಿಂದ ಹೊರತಂದು, ಆತನಿಗೆ ತನ್ನ ಉತ್ಪನ್ನವನ್ನು ದೇಶದಲ್ಲಿ ಎಲ್ಲಿ ಬೇಕಿದ್ದರೂ ಮಾರಾಟ ಮಾಡುವ ಸ್ವಾತಂತ್ರ್ಯ ನೀಡುತ್ತದೆ. ಎರಡನೆಯ ಕಾನೂನು ಅಗತ್ಯ ವಸ್ತುಗಳಿಗೆ ಸಂಬಂಧಿಸಿದ್ದು. ಅಗತ್ಯ ವಸ್ತುಗಳ ಪಟ್ಟಿಯಲ್ಲಿ ಇದ್ದ ಹಲವು ಬೆಳೆಗಳನ್ನು ಅಲ್ಲಿಂದ ತೆಗೆಯಲಾಗಿದ್ದು, ಆ ಬೆಳೆಗಳ ಸಾಗಾಟ ಹಾಗೂ ಸಂಗ್ರಹಣೆಯ ವಿಚಾರದಲ್ಲಿ ಹೆಚ್ಚಿನ ಸ್ವಾತಂತ್ರ್ಯ ನೀಡಲಿದೆ. ಮೂರನೆಯ ಕಾನೂನು ರೈತರ ಜೊತೆ ನೇರವಾಗಿ ಗುತ್ತಿಗೆ ಒಪ್ಪಂದ ಮಾಡಿಕೊಂಡು, ಕೃಷಿ ಚಟುವಟಿಕೆ ಗಳಲ್ಲಿ ತೊಡಗಿಕೊಳ್ಳಲು ಅವಕಾಶ ಕೊಡುವುದಕ್ಕೆ ಸಂಬಂಧಿಸಿದೆ. ಇದು ನವೋದ್ಯಮಗಳಿಗೆ ಹೊಸ ಮಾರುಕಟ್ಟೆ ಸೃಷ್ಟಿಸಲು ಉತ್ತೇಜನ ನೀಡುತ್ತದೆ, ಕೃಷಿ ಉತ್ಪನ್ನಗಳ ಖರೀದಿ, ಸಂಸ್ಕರಣೆ ಮತ್ತು ಸಂಗ್ರಹಣೆ
ಯಲ್ಲಿ ಕಾರ್ಪೊರೇಟ್ ಸಂಸ್ಥೆಗಳು ಹೂಡಿಕೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ.

ಈ ಕಾನೂನುಗಳ ಪರಿಣಾಮವಾಗಿ ರೈತರ ಬೆಳೆಗಳಿಗೆ ಒಳ್ಳೆಯ ಬೆಲೆ ಸಿಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಕಾನೂನುಗಳ ಪರಿಣಾಮವಾಗಿ ಎಪಿಎಂಸಿ ವ್ಯವಸ್ಥೆ ಇಲ್ಲವಾಗುವುದಿಲ್ಲ, ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ವ್ಯವಸ್ಥೆ ಕೂಡ ಕೊನೆಗಾಣುವುದಿಲ್ಲ. ಉದ್ದೇಶಗಳು ಎಷ್ಟೇ ಆದರ್ಶವಾಗಿದ್ದರೂ ಕೃಷಿಗೆ ಸಂಬಂಧಿಸಿದ ಈ ಎಲ್ಲ ವಿಚಾರಗಳು ತೀರಾ ಸಂಕೀರ್ಣವಾಗಿವೆ, ಈ ಸಮಸ್ಯೆಗಳನ್ನು ಪರಿಹರಿಸಲು ಸರಳವಾದ ಸೂತ್ರ ಇಲ್ಲ. ಸುಗ್ರೀವಾಜ್ಞೆ ಹೊರಡಿಸಿ ಅಥವಾ ಮಸೂದೆಯನ್ನು ಸಂಸತ್ತಿನ ಮೇಲೆ ಹೇರಿ ಪರಿಹಾರ ಕಂಡುಕೊಳ್ಳಲು ಆಗುವುದಿಲ್ಲ. ಈ ಮಸೂದೆಗಳು (ಈಗ ಕಾಯ್ದೆಗಳು) ಒಂದಕ್ಕೊಂದು ಸಂಬಂಧ ಹೊಂದಿವೆ. ಕೃಷಿ ಪದ್ಧತಿ, ರೈತರ ಜೀವನೋಪಾಯ, ಕೃಷಿ ಕಾರ್ಮಿಕರು, ಜಮೀನಿನಿಂದ ಚಿಲ್ಲರೆ ಮಾರಾಟ ಮಳಿಗೆಗಳವರೆಗಿನ ಪೂರೈಕೆ ಸರಪಳಿ ಮೇಲೆ ದೂರಗಾಮಿ ಪರಿಣಾಮ ಬೀರುವಂಥವು. 

ಎಪಿಎಂಸಿ ವ್ಯವಸ್ಥೆಯ ಅಡಿ ಬರುವ ಬೆಳೆಗಳ ಸಂಖ್ಯೆ ಸೀಮಿತ ಎಂಬುದನ್ನು ನಾವು ಮರೆಯಬಾರದು. ಈ ಬೆಳೆಗಳನ್ನು ಹೊರತುಪಡಿಸಿದರೂ ರೈತರ ಬಹುದೊಡ್ಡ ವರ್ಗಕ್ಕೆ ಸಂಬಂಧಿಸಿದ ಇತರ ಬೆಳೆಗಳು, ಹಣ್ಣು ಮತ್ತು ತರಕಾರಿಗಳು, ಹೂವುಗಳು, ಹಾಲು ಮತ್ತು ಅದರ ಉತ್ಪನ್ನಗಳು ಇವೆ. ಸರ್ಕಾರ ರೂಪಿಸಿದ ಎಂಎಸ್‌ಪಿ ವ್ಯವಸ್ಥೆಯ ವ್ಯಾಪ್ತಿಗೆ ಬಾರದಿರುವ ಬೆಳೆಗಳು ಹಲವಿವೆ. ಎಂಎಸ್‌ಪಿ ವ್ಯವಸ್ಥೆಯಲ್ಲಿ ಹಲವು ಲೋಪಗಳಿದ್ದು, ಸರ್ಕಾರ ಘೋಷಿಸುವ ಬೆಂಬಲ ಬೆಲೆಯ ಪ್ರಯೋಜನವು ರೈತರನ್ನು ತಲುಪುತ್ತಿಲ್ಲ ಎಂಬ ದೂರುಗಳು ಇವೆ.

ಮೂರು ಕಾನೂನುಗಳಿಂದ ಆಗುವ ಪ್ರಯೋಜನ ಗಳು ಹಲವಾರಿವೆ. ಹಾಗೆಯೇ ಹಲವು ಅಪಾಯಗಳೂ ಇವೆ. ಎಪಿಎಂಸಿ ವ್ಯವಸ್ಥೆಯಂತಹ ಸರ್ಕಾರಿ ಏಕಸ್ವಾಮ್ಯದ ಸ್ಥಳಗಳು ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ಕೇಂದ್ರಗಳೂ ಹೌದು. ಅವುಗಳ ಜೀವಿತಾವಧಿ ಮುಗಿಯುತ್ತ ಬಂದಿದೆ. ಈ ವ್ಯವಸ್ಥೆ ದಕ್ಷವಾಗಿಲ್ಲ, ಗ್ರಾಹಕರನ್ನು ಉದಾಸೀನ ಧೋರಣೆಯಿಂದ ನೋಡುತ್ತದೆ. ಖಾಸಗಿ ಏಕಸ್ವಾಮ್ಯದಲ್ಲಿ ದಕ್ಷತೆ ಬಹಳ ಉತ್ತಮವಾಗಿದೆ. ಆದರೆ ಈ ವ್ಯವಸ್ಥೆಯು ಇನ್ನೊಬ್ಬರನ್ನು ತಿಂದು ತಾನು ಬೆಳೆಯುವ ದೈತ್ಯ ಇದ್ದಂತೆ. ರೈತರಲ್ಲಿ ವ್ಯಕ್ತವಾಗುತ್ತಿರುವ ಹಲವು ಆತಂಕಗಳಲ್ಲಿ ಹುರುಳಿಲ್ಲ. ಆದರೆ, ಅವರಲ್ಲಿನ ಒಂದಿಷ್ಟು ಆತಂಕಗಳು ಗಂಭೀರವಾದವು. ವಿದೇಶಿ ಬಹುರಾಷ್ಟ್ರೀಯ ಕಂಪನಿಗಳು ಮಾತ್ರವಲ್ಲದೆ, ಭಾರತದ ಕಾರ್ಪೊರೇಟ್‌ ಕಂಪನಿಗಳು ಹಾಗೂ ಬಂಡವಾಳಶಾಹಿಗಳ ಕೂಟಗಳು ಕೂಡ ಏಕಸ್ವಾಮ್ಯವನ್ನು ಸಾಧಿಸಿದಾಗ ವಿದೇಶಿ ಎಂಎನ್‌ಸಿಗಳಷ್ಟೇ ನಿರ್ಲಜ್ಜವಾಗಬಹುದು ಎಂಬುದು ಅವುಗಳಲ್ಲಿ ಒಂದು. ಇಂಥವನ್ನು ನಿವಾರಿಸುವ ಕೆಲಸ ಸರ್ಕಾರದಿಂದ ಆಗಬೇಕು.

ಕೃಷಿ ಸಂಶೋಧಕಿ ಹಾಗೂ ಮುಂಬೈನ ಇಂದಿರಾ ಗಾಂಧಿ ಅಭಿವೃದ್ಧಿ ಸಂಶೋಧನಾ ಸಂಸ್ಥೆಯಲ್ಲಿ ಸಹಾಯಕ ಪ್ರೊಫೆಸರ್ ಆಗಿರುವ ಸುಧಾ ನಾರಾಯಣ್ ಹೀಗೆ ಹೇಳುತ್ತಾರೆ: ‘ಮಾರುಕಟ್ಟೆಯ ನಿಯಮಗಳು ಬದಲಾಗಿವೆ. ಆದರೆ, ಮುಂದೆ ಸರ್ಕಾರಗಳು ಮಾರುಕಟ್ಟೆ ಯಲ್ಲಿ ಯಾವ ರೀತಿಯಲ್ಲಿ ಮಧ್ಯಪ್ರವೇಶ ಮಾಡುತ್ತವೆ ಎಂಬ ವಿಚಾರವಾಗಿ ಅನುಮಾನಗಳು ಮೂಡಿವೆ. ಸರಿ ಯಾದ ಸುಧಾರಣೆಗಳನ್ನು ತಪ್ಪು ರೀತಿಯಲ್ಲಿ ಮಾಡಿದ್ದಕ್ಕೆ ಒಂದು ಉದಾಹರಣೆ ಈ ಕಾನೂನುಗಳು. ಮುಂದೆ ಸರಿಪಡಿಸಿಕೊಳ್ಳಬೇಕು ಎಂದಾದರೆ ಭಾರಿ ಪ್ರಯತ್ನ ಬೇಕಾಗುತ್ತದೆ’.

ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ‘ಸಹಕಾರಿ ಒಕ್ಕೂಟ ವ್ಯವಸ್ಥೆ’ಯ ಪರವಾಗಿ ಗಟ್ಟಿಯಾಗಿ ಮಾತನಾಡುತ್ತಿದ್ದರು. ಪ್ರೊಫೆಸರ್ ಸ್ವಾಮಿನಾಥನ್ ಅವರ ವರದಿಯನ್ನು ಅನುಷ್ಠಾನಕ್ಕೆ ತಂದಿಲ್ಲ ಎಂದು ಆಗ ಪ್ರಧಾನಿಯಾಗಿದ್ದ ಮನಮೋಹನ ಸಿಂಗ್ ಅವರನ್ನು ಅಣಕಿಸಿದ್ದರು. ಆದರೆ, ಅಧಿಕಾರಕ್ಕೆ ಬಂದ 12 ತಿಂಗಳುಗಳಲ್ಲಿ ಸ್ವಾಮಿನಾಥನ್ ವರದಿಯನ್ನು ಅನುಷ್ಠಾನಕ್ಕೆ ತರುವುದಾಗಿ ಮಾತು ಕೊಟ್ಟಿದ್ದ ಮೋದಿ, ರಾಜ್ಯಗಳು ಹಾಗೂ ರೈತರ ಜೊತೆ ಸಮಾಲೋಚನೆ ನಡೆಸಲು ಹಿಂದೇಟು ಹಾಕುತ್ತಿರುವುದು ಏಕೆ ಎಂಬುದು ಅರ್ಥವಾಗದು. ಅವರು ಸಂಘರ್ಷದ ಹಾದಿ ಹಿಡಿದಿರುವುದು ಏಕೆ?

ಇಲ್ಲೊಂದು ವಿವರಣೆ ಇದೆ. ಆಲ್ಡಸ್ ಹಕ್ಸ್‌ಲೆ ತಮ್ಮ ‘ದಿ ಹ್ಯೂಮನ್ ಸಿಚುವೇಷನ್’ ಪುಸ್ತಕದಲ್ಲಿ, ವ್ಯಕ್ತಿ ಏಕಪಕ್ಷೀಯವಾಗಿ ಕೆಲಸ ಮಾಡಿದಾಗ ಏನಾಗುತ್ತದೆ ಎಂಬುದನ್ನು ಹೇಳಿದ್ದಾರೆ. ಆಫ್ರಿಕಾದ ಘೇಂಡಾಮೃಗಗಳನ್ನು ಕೊಂಬಿಗಾಗಿ ಬೇಟೆಯಾಡಲಾಗುತ್ತಿತ್ತು. ಇದನ್ನು ತಪ್ಪಿಸಲು ಕೆಲವು ವಿಜ್ಞಾನಿಗಳು ಒಂದು ಸರಳ ಪರಿಹಾರವನ್ನು, ಒಳ್ಳೆಯ ಉದ್ದೇಶದಿಂದ ನೀಡಿದರು. ಅರಿವಳಿಕೆ ಮದ್ದು ನೀಡಿ ಘೇಂಡಾಮೃಗಗಳ ಕೊಂಬು ಕತ್ತರಿಸಬಹುದು, ಪ್ರಾಣಿಯನ್ನು ಕೊಲ್ಲುವುದು ಆಗ ತಪ್ಪುತ್ತದೆ ಎಂಬುದು ಆ ಸಲಹೆ. ಆದರೂ, ಘೇಂಡಾ ಮೃಗಗಳ ಸಂಖ್ಯೆ ಕೆಲವು ವರ್ಷಗಳ ನಂತರ ಕಡಿಮೆ ಆಗಿತ್ತು. ಕೊಂಬು ಇಲ್ಲದ ಗಂಡು ರೈನೊಗಳತ್ತ ಹೆಣ್ಣು ರೈನೊಗಳು ಬರುತ್ತಲೇ ಇರಲಿಲ್ಲ!

ಕಥೆಯ ನೀತಿ: ನಮ್ಮ ಉದಾತ್ತ ಆಶಯಗಳು ನಾವು ನಿರೀಕ್ಷಿಸದ ಕೆಟ್ಟ ಪರಿಣಾಮಗಳನ್ನು ಉಂಟು ಮಾಡ ಬಹುದು. ನಮ್ಮ ಕಾನೂನುಗಳಿಂದ ಕೆಟ್ಟ ಪರಿಣಾಮ ಆಗಬಹುದು ಎಂಬುದನ್ನು ಚರ್ಚೆ ಇಲ್ಲದಿದ್ದರೆ ಗುರುತಿಸಲು ಆಗುವುದಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು