ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟರಾಜ್ ಹುಳಿಯಾರ್ ಲೇಖನ: ರೈತರೂ ಆಮ್ ಆದ್ಮಿಯೂ ಎತ್ತ ಹೊರಟಿದ್ದಾರೆ?

ಆಮ್ ಆದ್ಮಿ ಪಕ್ಷ ಮತ್ತು ರೈತ ಚಳವಳಿಯ ಗುರಿಗಳು ಒಗ್ಗೂಡುವ ಚೌಕಟ್ಟು ಸಿದ್ಧವಾಗಬಹುದೇ?
Last Updated 24 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಮೂರು ವರ್ಷಗಳ ಕೆಳಗೆ ರಾಜ್ಯ ರೈತಸಂಘದ ಪುಟ್ಟಣ್ಣಯ್ಯ ಬಣವನ್ನೊಳಗೊಂಡ ಸರ್ವೋದಯ ಕರ್ನಾಟಕ ಪಕ್ಷವು ಯೋಗೇಂದ್ರ ಯಾದವರ ‘ಸ್ವರಾಜ್ ಇಂಡಿಯಾ’ದಲ್ಲಿ ಲೀನವಾಯಿತು. ಮೊನ್ನೆ ಕೋಡಿಹಳ್ಳಿ ಚಂದ್ರಶೇಖರ್ ಬಣದ ರೈತಸಂಘವು ಆಮ್ ಆದ್ಮಿ ಪಕ್ಷದಲ್ಲಿ ಲೀನವಾಗದೆ ಸ್ವತಂತ್ರ ಅಸ್ತಿತ್ವವನ್ನು ಉಳಿಸಿಕೊಂಡೇ ಅದರ ಜೊತೆಗೂಡಿದೆ. ‘ಎಎಪಿ ರೈತಸಂಘದ ರಾಜಕೀಯ ಮುಖವಾಣಿ’ ಎಂದು ರೈತಸಂಘ ಘೋಷಿಸಿದೆ.

ಕಳೆದ ವರ್ಷ ಕೋಡಿಹಳ್ಳಿ ಅವರು ಕೆಎಸ್ಆರ್‌ಟಿಸಿ ನೌಕರರ ಮುಷ್ಕರದ ನೇತೃತ್ವ ವಹಿಸಿದ್ದ ಕಾಲದಲ್ಲಿ ಎಎಪಿ ಆ ಮುಷ್ಕರಕ್ಕೆ ಬೆಂಬಲ ಕೊಟ್ಟಿತ್ತು. ಆಗ ಶುರುವಾದ ಸಂಬಂಧವು ರೈತಸಂಘ- ಎಎಪಿ ನಂಟಿಗೆ ಕಾರಣವಾಗಿರಬಹುದು. ದೇಶದೆಲ್ಲೆಡೆಯಲ್ಲಿ ಜನತಾ ಚಳವಳಿಗಳ ನಂಟಿನ ಅಗತ್ಯ ಎಎಪಿಗೆ ಇದೆ; ಪರಿಚಿತ ರಾಜಕೀಯ ಪಕ್ಷಗಳಿಗಿಂತ ಭಿನ್ನವಾದ ಪಕ್ಷವೊಂದರ ಅಗತ್ಯ ರೈತಸಂಘಕ್ಕೂ ಇದ್ದಂತಿದೆ. ಕೊಂಚ ಜನಬೆಂಬಲವಿರುವ ವ್ಯಕ್ತಿಗಳನ್ನು ತೆಕ್ಕೆಗೆ ತಂದುಕೊಂಡು ಲಾಭ ಪಡೆಯುವ ಎಎಪಿ ರಾಜಕೀಯ ಇಲ್ಲಿಯೂ ಮುಂದುವರಿದಿದೆ.

ಏಳು ವರ್ಷಗಳ ಕೆಳಗೆ ಎಎಪಿ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬಂದಾಗ, ಹರಿಯಾಣದಲ್ಲಿ ಗಟ್ಟಿ ರೈತ ಸಂಘಟನೆ ಮಾಡಲು ಹೊರಟಿದ್ದ ಯೋಗೇಂದ್ರ ಯಾದವ್ ಅವರನ್ನು ಪಕ್ಷದಿಂದ ಹೊರಹಾಕಲಾಯಿತು. ಅರವಿಂದ ಕೇಜ್ರಿವಾಲ್‌ ಅವರಿಗಿಂತ ಭಿನ್ನವಾದ ನಾಯಕತ್ವವನ್ನು ಬೆಳೆಯಗೊಡದ ಎಎಪಿ ಧೋರಣೆಯೂ ಇದಕ್ಕೆ ಕಾರಣವಾಗಿತ್ತು. ಆದರೆ ಎಎಪಿ 2020ರಲ್ಲಿ ರೈತಶಕ್ತಿಯ ರಾಜಕೀಯ ಲಾಭ ಕಂಡುಕೊಂಡಿತು. ಕೇಜ್ರಿವಾಲ್ ದೆಹಲಿ ವಿಧಾನಸಭೆಯಲ್ಲಿ ಕೇಂದ್ರದ ಕೃಷಿ ಕಾನೂನು ಪ್ರತಿಗಳನ್ನು ಹರಿದುಹಾಕಿದ್ದರೂ, ಎಎಪಿಯು ಕೇಂದ್ರದ ಕಾನೂನುಗಳನ್ನು ವಿರೋಧಿಸಿ ಮಸೂದೆ ಮಂಡಿಸಿದ್ದು ಮಾತ್ರ ಕಾಂಗ್ರೆಸ್, ಟಿಎಂಸಿ ನೇತೃತ್ವದ ಸರ್ಕಾರಗಳು ಆ ಕೆಲಸ ಮಾಡಿದ ನಂತರವೇ. ಆದರೂ ಪಂಜಾಬಿನ ರೈತರು ಎಎಪಿ ಕೈ ಹಿಡಿದರು. ಆದರೆ ಟಿಕ್ರಿ ಗಡಿಯಲ್ಲಿನ ಉತ್ತರಪ್ರದೇಶ ಭಾಗದಲ್ಲಿ ರೈತರು ಎಎಪಿ ಕೈ ಹಿಡಿಯಲಿಲ್ಲ. ಕರ್ನಾಟಕದಲ್ಲಿ ಇನ್ನೂ ಬೆಂಗಳೂರು ಪಕ್ಷವಾಗಿರುವ ಎಎಪಿಗೆ ರೈತ ಸಂಘದ ಬೆಂಬಲ ಬೋನಸ್‌ನಂತೆ ಕಂಡಿರಬಹುದು.

ಮೊನ್ನೆಯ ಸಮಾವೇಶದಲ್ಲಿ ರೈತರು ಶೇ 80ರಷ್ಟು ಇದ್ದರೆ, ಎಎಪಿ ಕಾರ್ಯಕರ್ತರು ಶೇ 20ರಷ್ಟು ಮಾತ್ರ ಇದ್ದರೆಂಬ ಅಂದಾಜಿದೆ. ಇದು ಯಾರಿಗೆ ಯಾರ ಅಗತ್ಯ ಇದೆ ಎಂಬುದರ ಸೂಚಿಯಂತಿದೆ! ನಲವತ್ತು ವರ್ಷಗಳ ಇತಿಹಾಸವುಳ್ಳ ಕರ್ನಾಟಕದ ರೈತ ಚಳವಳಿ ಮೂವತ್ತೈದು ವರ್ಷಗಳ ಕೆಳಗೆ ಪ್ರಯತ್ನಿಸಿದ ರಾಜಕೀಯ ಪ್ರಯೋಗದ ತಾತ್ವಿಕ ತಳಹದಿ ಇಂದಿನ ಪ್ರಯೋಗಕ್ಕೂ ತಳಹದಿಯಾಗ ಬಲ್ಲದೇ ಎಂಬುದನ್ನು ನೋಡೋಣ: 1987ರಲ್ಲಿ ಪ್ರೊ. ಎಂ.ಡಿ.ನಂಜುಂಡಸ್ವಾಮಿ (ಎಂಡಿಎನ್) ನೇತೃತ್ವದ ರಾಜ್ಯ ರೈತಸಂಘ ಚುನಾವಣೆಗೆ ಇಳಿಯಲು ನಿರ್ಧರಿಸಿ, ‘ಕನ್ನಡ ದೇಶ’ ಪಕ್ಷವನ್ನು ಸ್ಥಾಪಿಸಿತು. ಎಂಡಿಎನ್ ಬರೆದ ‘ಕನ್ನಡ ದೇಶ’ದ ಪ್ರಣಾಳಿಕೆಯು ಪ್ರಾದೇಶಿಕ ಅಗತ್ಯಗಳಿಗೆ ಒತ್ತು ಕೊಡುವ ಯಾವುದೇ ಪಕ್ಷಕ್ಕೆ ಅತ್ಯುತ್ತಮ ಮಾದರಿ ಯಾಗಿದೆ.

ಈ ಪ್ರಣಾಳಿಕೆಯನ್ನು ಈಗ ಪ್ರಸ್ತಾಪಿಸಲು ಕಾರಣವಿದೆ: ಯಾವುದೇ ಜನತಾ ಚಳವಳಿಯು ರಾಜಕೀಯ ಪಕ್ಷವಾದಾಗ, ರಾಜಕೀಯ ಪಕ್ಷದ ಜೊತೆ ಕೈಜೋಡಿಸಿದಾಗ ಆ ಚಳವಳಿ ತನ್ನ ಆವರೆಗಿನ ಉದ್ದೇಶ ವನ್ನು ಎಷ್ಟರಮಟ್ಟಿಗೆ ಚುನಾವಣಾ ರಾಜಕಾರಣದ ಮೂಲಕ ಈಡೇರಿಸಿಕೊಳ್ಳಲು ಹೊರಟಿದೆ ಎಂಬುದೇ ಮುಖ್ಯ ಪ್ರಶ್ನೆ. ‘ಕನ್ನಡ ದೇಶ’ದ ಪ್ರಣಾಳಿಕೆಯಲ್ಲಿ ಕರ್ನಾಟಕ, ರೈತರು ಹಾಗೂ ಜನಸಾಮಾನ್ಯರನ್ನೇ
ಕೇಂದ್ರವಾಗಿಸಿಕೊಂಡ ಮಹತ್ವದ ಅಂಶಗಳಿವೆ: ಭಾಷೆ, ಶಿಕ್ಷಣ ನೀತಿ, ಉತ್ಪಾದನಾ ನೀತಿ, ಬೆಲೆ ನೀತಿ, ರೈತರಿಗೆ ವಿಶೇಷ ಕಾರ್ಯಕ್ರಮಗಳು, ಬರಗಾಲ ನಿರ್ಮೂಲನೆ, ಪರಿಸರ, ಸಹಕಾರಿ ಕ್ಷೇತ್ರದ ಸುಧಾರಣೆ; ಕಾರ್ಮಿಕರು, ಪರಿಶಿಷ್ಟರು, ಹಿಂದುಳಿದವರು ಮತ್ತು ಮೀಸಲಾತಿ; ಅಲ್ಪಸಂಖ್ಯಾತರು, ಚುನಾವಣಾ ಸುಧಾರಣೆ, ಸಂಪನ್ಮೂಲ ಸಂಗ್ರಹ, ಸ್ವಾಯತ್ತತೆ, ಕೇಂದ್ರ- ರಾಜ್ಯ ಸಂಬಂಧಗಳು. ವಿಕೇಂದ್ರೀಕರಣ, ದ್ವಿಪೌರತ್ವ, ಶಕ್ತಿಯುತ ಗ್ರಾಮಗಳು, ಮಹಿಳೆಯರಿಗೆ ಸಮಾನ ಆಸ್ತಿ ಹಕ್ಕು... ಇವೆಲ್ಲವನ್ನೂ ಇಲ್ಲಿ ವಿವರವಾಗಿ ಚರ್ಚಿಸಲಾಗಿದೆ.

‘ಇಂತಹ ವಿಚಾರವುಳ್ಳ ರಾಜ್ಯ ಪಕ್ಷಗಳು ಭಾರತದ ಏಕತೆಯನ್ನು ಬಲಪಡಿಸಲು ಎಲ್ಲ ರಾಜ್ಯಗಳಲ್ಲಿಯೂ ಈ ಕೂಡಲೇ ರಚನೆಯಾದರೆ ಮತ್ತು ಇಂತಹ ಪಕ್ಷಗಳ ಒಕ್ಕೂಟವು ಕೇಂದ್ರದಲ್ಲಿ ಸರ್ಕಾರ ನಡೆಸಿದರೆ ಮಾತ್ರ ಜನತೆಯ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಸಾಧ್ಯ’ ಎಂದು ಪ್ರಣಾಳಿಕೆ ಘೋಷಿಸುತ್ತದೆ. ಇದೀಗ ಪ್ರಬಲ ಕೇಂದ್ರದ ವಿರುದ್ಧ ತಮಿಳುನಾಡು, ಪಶ್ಚಿಮ ಬಂಗಾಳ ಸರ್ಕಾರಗಳು ಎತ್ತುತ್ತಿರುವ ಪ್ರಶ್ನೆಗಳಿಗೆ ಸಮರ್ಥವಾದ ವಿಕೇಂದ್ರೀಕರಣದ ಪರಿಹಾರವನ್ನು ಪ್ರಣಾಳಿಕೆ ಆ ಕಾಲದಲ್ಲೇ ಕೊಟ್ಟಿದೆ. ಈಗ ಕೇಂದ್ರದ ಹಿಡಿತದಲ್ಲಿರುವ ಯಾವ ಯಾವ ಬಾಬ್ತುಗಳು ರಾಜ್ಯಪಟ್ಟಿಗೆ ಬರಬೇಕೆಂಬುದನ್ನೂ ಪ್ರಣಾಳಿಕೆ ಸವಿಸ್ತಾರವಾಗಿ ಹೇಳುತ್ತದೆ.

ಆದರೆ ಕೆಲವು ಕಾರಣಗಳಿಂದಾಗಿ 1989ರ ವಿಧಾನಸಭಾ ಚುನಾವಣೆಯಲ್ಲಿ ರೈತ ಸಂಘದ ಅಭ್ಯರ್ಥಿಗಳು ಕನ್ನಡ ದೇಶದಿಂದ ಸ್ಪರ್ಧಿಸದೆ, ರೈತ ಸಂಘದಿಂದಲೇ ಸ್ಪರ್ಧಿಸಿದರು. ಎರಡು ಕ್ಷೇತ್ರಗಳಿಂದ ಆಯ್ಕೆಯಾದ ಬಾಬಾಗೌಡ ಪಾಟೀಲ ಅವರು ತೆರವು ಮಾಡಿದ ಧಾರವಾಡ ಗ್ರಾಮೀಣ ಕ್ಷೇತ್ರದಿಂದ ಎಂಡಿಎನ್ ಗೆದ್ದರು. ಮುಂದೆ ಕೆ.ಎಸ್.ಪುಟ್ಟಣ್ಣಯ್ಯ ಅವರು ಪಾಂಡವಪುರದಿಂದ ಗೆದ್ದರು. ರೈತಸಂಘದ
ಒತ್ತಾಯಗಳು, ಎಂಡಿಎನ್ ವಿಶ್ಲೇಷಣೆಗಳು ಸದನದ ಚರ್ಚೆಯ ದಿಕ್ಕನ್ನೇ ಬದಲಿಸಿದವು.

ಈ ಹಿನ್ನೆಲೆಯಲ್ಲಿ ಇವತ್ತು ಎಎಪಿ ಜೊತೆ ಕೈ ಜೋಡಿಸಿರುವ ರೈತ ಸಂಘವು ರಾಜ್ಯದ ರೈತರ ಹಿತಾಸಕ್ತಿ ಹಾಗೂ ರಾಜ್ಯದ ಸಂಪನ್ಮೂಲಗಳನ್ನು ಹೆಚ್ಚಿಸುವ ಸಮರ್ಥ ಸಾಮಾಜಿಕ ನ್ಯಾಯದ ಮೂಲಪ್ರಣಾಳಿಕೆಯನ್ನು ಎಎಪಿಗೆ ಹೇಗೆ ಮನವರಿಕೆ ಮಾಡಿಕೊಡುತ್ತದೆ ಎಂಬುದು ಮುಖ್ಯ ಪ್ರಶ್ನೆ. ವಿದ್ಯುತ್, ಶಾಲೆ, ಆಸ್ಪತ್ರೆ, ಭ್ರಷ್ಟಾಚಾರ ರಹಿತ ಆಡಳಿತದ ಮಾತು ಬಿಟ್ಟರೆ ಬೇರಾವುದೇ ತಾತ್ವಿಕ ತಳಹದಿಯಿಲ್ಲದಂತೆ ಕಾಣುವ ಎಎಪಿಗೆ ಕರ್ನಾಟಕದ ರೈತ ಚಳವಳಿ ತಾತ್ವಿಕ ಸ್ಪಷ್ಟತೆ ಒದಗಿಸಬಲ್ಲದೇ? ಅಂಥ ಬೌದ್ಧಿಕ ಸಿದ್ಧತೆ ಎಂಡಿಎನ್ ನಂತರದ ರೈತ ಚಳವಳಿಯಲ್ಲಿ ಉಳಿದಿದೆಯೇ? ರೈತ ಚಳವಳಿಯ ಬಗ್ಗೆ ಯೋಗೇಂದ್ರ ಯಾದವರಿಗೆ ಇದ್ದ ತಾತ್ವಿಕ ಸ್ಪಷ್ಟತೆಯನ್ನು, ರೈತ ರಾಜ ಕಾರಣದ ಆಳವಾದ ಜ್ಞಾನವನ್ನು ಬಳಸಿಕೊಳ್ಳಲಾರದೆ ಹೊರಗಟ್ಟಿದ ಎಎಪಿ ಈಗ ರೈತಸಂಘದ ಗುರಿ, ಉದ್ದೇಶ ಗಳನ್ನು ಅರ್ಥ ಮಾಡಿಕೊಳ್ಳಬಲ್ಲದೇ? ಯೋಗೇಂದ್ರ ಯಾದವರ ಲೋಹಿಯಾವಾದಿ ನೋಟಗಳು ಕೂಡ ದೇಶದ ದೊಡ್ಡ ರೈತ ಚಳವಳಿಯನ್ನು ಕಟ್ಟಲು ನೆರವಾಗಿದ್ದನ್ನು ಎಎಪಿ ಅರ್ಥ ಮಾಡಿಕೊಂಡಿದೆಯೇ?

ಯಾವುದೇ ಆರೋಗ್ಯಕರ ರಾಜಕೀಯ ಧ್ರುವೀಕರಣ ವನ್ನು ಸಿನಿಕತೆಯಿಂದ ನೋಡಬಾರದು. ಭ್ರಷ್ಟಾಚಾರ ವಿರೋಧಿ ಆಂದೋಲನದ ಅಲೆಯಲ್ಲಿ ತೇಲಿಬಂದ ಎಎಪಿ ಕೆಲಬಗೆಯ ಭ್ರಷ್ಟಾಚಾರಗಳಿಗೆ ಕಡಿವಾಣ ಹಾಕಿರು ವುದಂತೂ ನಿಜ. ಎಎಪಿಯನ್ನು ಬೆಂಬಲಿಸುವ ತರುಣ ತರುಣಿಯರಲ್ಲಿರುವ ಮೇಲ್ಪದರದ ಕಾಳಜಿಗಳು, ಎಲ್ಲ ಅರ್ಥದಲ್ಲೂ ‘ಆಮ್ ಆದ್ಮಿ’ಯಾದ ರೈತರ ಪರವಾದ ಕಾಳಜಿಯಾಗುವಂತೆ ರೈತಸಂಘ ಮಾಡಬಲ್ಲದೇ? ಕರ್ನಾಟಕದ ಎಎಪಿ ಅಂಥದ್ದೊಂದು ತಾತ್ವಿಕ ಚಲನೆಗೆ ನಾಂದಿ ಹಾಡಬಲ್ಲದೇ?

ಮೊನ್ನೆ ದೆಹಲಿಯಲ್ಲಿ ನಡೆಯುತ್ತಿದ್ದ ಬುಲ್ಡೋಜರ್ ಕಾರ್ಯಾಚರಣೆಯ ವಿರುದ್ಧ ದನಿಯೆತ್ತದ ಎಎಪಿ ಬಗ್ಗೆ ಕರ್ನಾಟಕದಲ್ಲಿ ‘ಗೋ ಬ್ಯಾಕ್ ಕೇಜ್ರಿವಾಲ್’ ಟ್ವಿಟರ್ ಅಭಿಯಾನ ಬಿರುಸಾಗಿದ್ದರ ಪರಿಣಾಮ: ದೆಹಲಿಯ ಉಪಮುಖ್ಯಮಂತ್ರಿ ಮನಿಶ್ ಸಿಸೋಡಿಯಾ, ಬುಲ್ಡೋಜರ್ ಕಾರ್ಯಾಚರಣೆಯ ವಿರುದ್ಧ ಖಡಕ್ ಹೇಳಿಕೆ ಕೊಟ್ಟೇಬಿಟ್ಟರು! ಹೀಗೆ ಜನಾಭಿಪ್ರಾಯದ ಬಗ್ಗೆ ಅಷ್ಟಿಷ್ಟಾದರೂ ಕಿವಿ ತೆರೆದಿರುವ ಎಎಪಿ ಪಂಜಾಬಿನಲ್ಲಿ ಅಧಿಕಾರಕ್ಕೆ ಬರಲು ರೈತ ಚಳವಳಿಯೂ ಕಾರಣ.

ಇತ್ತ ಕರ್ನಾಟಕದ ರೈತ ಚಳವಳಿಯೇ ದೇಶದ ಮೊದಲ ವ್ಯಾಪಕ ಭ್ರಷ್ಟಾಚಾರ ವಿರೋಧಿ ಆಂದೋಲನ. ಮೊನ್ನೆ ಎಂ.ಡಿ. ನಂಜುಂಡಸ್ವಾಮಿಯವರ ಚಿಂತನೆಗಳ ‘ಬಾರುಕೋಲು’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ರೈತ ಚಳವಳಿಯ ಉತ್ತುಂಗದ ಕಾಲದಲ್ಲಿ ಭ್ರಷ್ಟ ಅಧಿಕಾರಿಗಳು ನಡುಗುತ್ತಿದ್ದುದನ್ನು ನೆನಸಿಕೊಂಡರು. ಭ್ರಷ್ಟ ಅಧಿಕಾರಿ ಗಳಿಗೆ ಇಂಥ ಭಯ ಎಎಪಿ ಬಗ್ಗೆ ಹುಟ್ಟಿದಂತಿಲ್ಲ. ಆದರೆ ಆಧುನಿಕ ತಂತ್ರಜ್ಞಾನ ಬಳಸಿ ಸರ್ಕಾರಿ ಭ್ರಷ್ಟಾಚಾರದ ಬಾಲ ಕತ್ತರಿಸುವ ಕೆಲವು ಮಾರ್ಗಗಳನ್ನಂತೂ ಎಎಪಿ ಕಂಡುಕೊಂಡಿದೆ. ಅಧಿಕಾರಶಾಹಿಯಡಿ ನರಳುತ್ತಿರುವ ಕರ್ನಾಟಕದ ರೈತರಿಗೆ ಎಎಪಿ ಮಾರ್ಗ ಪ್ರಿಯವಾದರೆ ಅಚ್ಚರಿಯಲ್ಲ.

ಎಎಪಿ ಮತ್ತು ರೈತರ ಕೆಲವು ಗುರಿಗಳನ್ನಾದರೂ ಒಗ್ಗೂಡಿಸುವ ಚೌಕಟ್ಟು ಕರ್ನಾಟಕದಿಂದಲೂ ಸಿದ್ಧವಾಗ ಬಹುದಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT