ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ಮೊಬೈಲ್ ಕಂಪನಿಗಳಿಗೆ ದಂಡದ ಬಿಸಿ!

Last Updated 11 ಜನವರಿ 2022, 7:58 IST
ಅಕ್ಷರ ಗಾತ್ರ

ರಾಶಿ ರಾಶಿ ನಿಯಮಗಳ ಉಲ್ಲಂಘನೆಗಳು ಪತ್ತೆಯಾದ ಮೇಲೆ ಚೀನೀ ಮೊಬೈಲ್ ಫೋನ್‌ಗಳ ಉತ್ಪಾದಕ ದೈತ್ಯ ಸಂಸ್ಥೆಗಳು ಆಘಾತಗಳನ್ನು ಎದುರಿಸುತ್ತಿವೆ. ಅವುಗಳ ಮೇಲೆ ದಾಳಿಗಳನ್ನು ನಡೆಸಲಾಗುತ್ತಿದೆ. ಪರಿಣಾಮ, ಮತ್ತಷ್ಟು ಅಕ್ರಮಗಳು ಬಯಲಿಗೆ ಬರುತ್ತಿವೆ.

ಭಾರತದ ಮೊಬೈಲ್ ಫೋನ್ ಮಾರುಕಟ್ಟೆಯಲ್ಲಿ ಚೀನಾದ ಬ್ರ್ಯಾಂಡ್‌ಗಳ ಪ್ರಾಬಲ್ಯ ಶೇಕಡಾ 75ರಷ್ಟು ಇದೆ.
ವಿವೋ (Vivo)ದಿಂದ ರಿಯಲ್ ಮಿ (Realme), ಒಪ್ಪೊ (Oppo) ದಿಂದ ಶಿಯೋಮಿ (Xiaomi) ವರೆಗೆ. ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತಿದೊಡ್ಡ ಸ್ಮಾರ್ಟ್‌ಫೋನ್ ಬ್ರಾಂಡ್‌ಗಳೆಲ್ಲವೂ ಚೀನಾ ದೇಶದವೇ ಆಗಿವೆ. ಗ್ಯಾರಂಟಿ, ವಾರಂಟಿ ಹಾಗೂ ಬಳಕೆದಾರರ ಡೇಟಾದ ಗೌಪ್ಯತೆಯ ಖಾತ್ರಿ ಇಲ್ಲದಿದ್ದರೂ ಮಾರುಕಟ್ಟೆಯಲ್ಲಿ ಅವುಗಳ ಪಾರಮ್ಯ ಮುಂದುವರಿದಿದೆ. ಈ ಕಂಪನಿಗಳು ತಮ್ಮಿಚ್ಛೆಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತವೆ ಎಂಬುದು ಈಗ ಬಹಿರಂಗವಾಗಿದೆ. ಆತಿಥೇಯ ಕಂಪನಿಗಳು ನಿಗದಿಪಡಿಸಿದ ಮಾನದಂಡಗಳನ್ನು ಅಕ್ಷರಶಃ ಗಾಳಿಗೆ ತೂರಲಾಗಿದೆ.

ಈ ನಿಟ್ಟಿನಲ್ಲಿ ತನಿಖೆ ಕೈಗೊಳ್ಳಲು ಭಾರತೀಯ ಅಧಿಕಾರಿಗಳು ನಿರ್ಧರಿಸಿದರು. ಅವರು ಈ ಮೊಬೈಲ್‌ ಕಂಪನಿಗಳ ಕಾರ್ಯಾಚರಣೆಗಳನ್ನು ಮೇಲ್ವಿಚಾರಣೆ ಮಾಡಲು ಪ್ರಾರಂಭಿಸಿದರು ಮತ್ತು ನಿಯಮಗಳ ಉಲ್ಲಂಘನೆಗಳ ಹಲವು ಪ್ರಕರಣಗಳನ್ನು ಪತ್ತೆ ಮಾಡಿದರು. ಭಾರತದ ಆದಾಯ ತೆರಿಗೆ ಇಲಾಖೆ, ಕಂದಾಯ ಗುಪ್ತಚರ ನಿರ್ದೇಶನಾಲಯ ಅಥವಾ ಡಿಆರ್‌ಐ ಮುಂತಾದ ಇಲಾಖೆಗಳು ಚೀನೀ ಕಂಪನಿಗಳನ್ನು ತೀವ್ರ ತನಿಖೆಗೆ ಒಳಪಡಿಸಿವೆ.

ಈ ತನಿಖೆಯಿಂದ ಹಲವು ಅಕ್ರಮಗಳು, ತೆರಿಗೆ ಕಾನೂನುಗಳ ಉಲ್ಲಂಘನೆ ಮತ್ತು ಅಬಕಾರಿ ಸುಂಕ ಪಾವತಿಸದೆ ತಪ್ಪಿಸಿಕೊಳ್ಳುವಿಕೆ ಮುಂತಾದವು ಬಹಿರಂಗವಾಗಿದೆ.

ಶಿಯೋಮಿ ವಿಶ್ವದ ಎರಡನೇ ಅತಿದೊಡ್ಡ ಸ್ಮಾರ್ಟ್‌ಫೋನ್ ತಯಾರಕ ಸಂಸ್ಥೆಯಾಗಿದೆ. ಅದರ ಭಾರತ ಘಟಕವು $ 87.9 ಮಿಲಿಯನ್ ಮೌಲ್ಯದ ಅಬಕಾರಿ ಸುಂಕವನ್ನು ತಪ್ಪಿಸಿದೆ ಎಂದು ಈಗ ವರದಿಯಾಗಿದೆ. ಶಿಯೋಮಿ ಕಚೇರಿಗಳ ಮೇಲೆ ಸತತವಾಗಿ ದಾಳಿಗಳನ್ನು ನಡೆಸಿದ ವೇಳೆ ಈ ಅಕ್ರಮವು ಪತ್ತೆಯಾಗಿದೆ. ಶಿಯೋಮಿ ಆಮದು ಮಾಡಿಕೊಳ್ಳುವ ಸರಕುಗಳ ವಹಿವಾಟು ಮೌಲ್ಯಕ್ಕೆ ರಾಯಧನ ಮತ್ತು ಪರವಾನಗಿ ಶುಲ್ಕವನ್ನು ಸೇರಿಸುತ್ತಿಲ್ಲ ಎಂಬುದು ಬಹಿರಂಗವಾಗಿದೆ. ವಿಚಾರಣೆಯ ವೇಳೆ ಶಿಯೋಮಿ ಸಿಬ್ಬಂದಿ ಇದನ್ನು ದೃಢಪಡಿಸಿದ್ದಾರೆ. ದೋಷಾರೋಪಣೆಗೆ ಸಾಕ್ಷಿಯಾಗುವ ದಾಖಲೆಗಳನ್ನು ಅಧಿಕಾರಿಗಳು ಕಲೆಹಾಕಿದ್ದಾರೆ.

ಭಾರತದಲ್ಲಿ ಅತಿದೊಡ್ಡ ಸ್ಮಾರ್ಟ್‌ಫೋನ್ ತಯಾರಕ ಸಂಸ್ಥೆಯಾದ ಒಪ್ಪೊ, ದೇಶದ ಮಾರುಕಟ್ಟೆಯಲ್ಲಿ ಪ್ರಮುಖ ಹೆಸರು. ವಾಸ್ತವವಾಗಿ ಇದು ಚೀನಾದಲ್ಲಿ ಉತ್ಪಾದನೆಯನ್ನು ನಡೆಸುತ್ತಿದೆ ಮತ್ತು ಭಾರತದ ಮಾರುಕಟ್ಟೆಯಲ್ಲಿ ದೊಡ್ಡ ಪಾಲನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಆದರೆ, ಆ ಸಂಸ್ಥೆಯೂ ಭಾರತದ ತೆರಿಗೆ ಕಾನೂನುಗಳನ್ನು ಉಲ್ಲಂಘಿಸಿರುವುದು ತಿಳಿದು ಬಂದಿದ್ದು, ಇದಕ್ಕಾಗಿ $134 ಮಿಲಿಯನ್ ದಂಡವನ್ನು ಪಾವತಿಸಬೇಕಾಗಿದೆ.

ಆದಾಯ ತೆರಿಗೆ ಇಲಾಖೆ ಒಪ್ಪೋ ಇಂಡಿಯಾದ ಕಚೇರಿಗಳ ಮೇಲೆ ಇತ್ತೀಚೆಗೆ ದಾಳಿ ನಡೆಸಿತ್ತು. 1961ರ ಭಾರತದ ಆದಾಯ ತೆರಿಗೆ ಕಾಯಿದೆಗೆ ಅನುಗುಣವಾಗಿ ಒಪ್ಪೊ ಸಂಸ್ಥೆ ತನ್ನ ವಹಿವಾಟುಗಳನ್ನು ಬಹಿರಂಗಪಡಿಸುತ್ತಿಲ್ಲ ಎಂಬುದನ್ನು ದಾಳಿಯ ವೇಳೆ ಅಧಿಕಾರಿಗಳು ಕಂಡುಕೊಂಡಿದ್ದಾರೆ. ಇದೇ ವೇಳೆ, ಜಾರಿ ನಿರ್ದೇಶನಾಲಯ ಮತ್ತೊಂದು ದಾಳಿಯನ್ನು ನಡೆಸಿದೆ. ಒಪ್ಪೊದ ಚೀನಾದ ವಿತರಣಾ ಪಾಲುದಾರರಲ್ಲಿ ಒಬ್ಬರಿಗೆ ನೂರಾರು ಕೋಟಿ ರೂ.ಗಳಷ್ಟು ದಂಡವನ್ನು ವಿಧಿಸಲಾಗಿದೆ.

ಯಾವ ಕಾರಣಕ್ಕೆ? ಹಣಕಾಸಿನ ದಾಖಲೆಗಳಲ್ಲಿ ಅಕ್ರಮಗಳು! ಈ ಕುರಿತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

ಆದರೆ, ಚೀನಾದ ಕಂಪನಿಗಳು ಭಾರತೀಯ ಕಾನೂನುಗಳನ್ನು ಉಲ್ಲಂಘಿಸುತ್ತಿರುವುದು ಇದೇ ಮೊದಲೇನಲ್ಲ. ಕಳೆದ ವರ್ಷ ಆಗಸ್ಟ್‌ನಲ್ಲಿ ಚೀನಾದ ಟೆಲಿಕಾಂ ಸಲಕರಣೆ ಕಂಪನಿಯಾದ ಝಡ್‌ಟಿಸಿ (ZTE)ಯ ಕಾರ್ಪೊರೇಟ್ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ಆಗಲೂ ಇದೇ ಬಗೆಯ ಅಕ್ರಮಗಳು ಬೆಳಕಿಗೆ ಬಂದವು. ನೂರಾರು ಕೋಟಿ ಮೌಲ್ಯದ ಉಲ್ಲಂಘನೆಗಳು, ತೆರಿಗೆ ವಂಚನೆಗಳು, ಸುಳ್ಳು ವೆಚ್ಚಗಳು, ಅಕ್ರಮ ಷೇರು ಖರೀದಿಗಳು ಮತ್ತು ಲೆಕ್ಕಪತ್ರಗಳಲ್ಲಿ ಅಕ್ರಮಗಳನ್ನು ಆ ಕಂಪನಿಯು ಮಾಡಿತ್ತು.
ದಾಳಿಗಳು ಇನ್ನೂ ನಡೆಯುತ್ತಿವೆ. ಭಾರತವು ಚೀನಾದೊಂದಿಗೆ ಹೇಗೆ ವ್ಯವಹರಿಸುತ್ತಿದೆ ಎಂಬುದರ ಒಂದು ಭಾಗವಾಗಿ ಗಡಿ ಬಿಕ್ಕಟ್ಟನ್ನು ನಾವು ನೋಡಬಹುದು. ದೇಶದ ಆರ್ಥಿಕತೆಯಲ್ಲಿ ನುಸುಳುಕೋರರನ್ನು ಮಟ್ಟ ಹಾಕುವುದು ಇನ್ನೊಂದು. ಭಾರತವು ಎರಡನ್ನೂ ಸಮರ್ಥವಾಗಿ ನಿಭಾಯಿಸುತ್ತಿದೆ ಎಂದು ಹೇಳಲು ಅಡ್ಡಿಯಿಲ್ಲ.

- ಗಿರೀಶ್ ಲಿಂಗಣ್ಣ,ವ್ಯವಸ್ಥಾಪಕ ನಿರ್ದೇಶಕರು,ಎ. ಡಿ. ಡಿ. ಇಂಜಿನಿಯರಿಂಗ್ ಇಂಡಿಯಾ (ರಕ್ಷಣಾ ಸಾಮಗ್ರಿ ಪೂರೈಕೆಯ ಇಂಡೋ -ಜರ್ಮನ್ ಸಂಸ್ಥೆ )

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT