ಮಂಗಳವಾರ, ನವೆಂಬರ್ 29, 2022
29 °C
ಹೊಸ ಕ್ರಾಂತಿಯ ಫಲವಾದ ತಂತ್ರಜ್ಞಾನಗಳು ನಮಗೆ ವರವೋ? ಶಾಪವೋ?

ಇದೋ... ನಾಲ್ಕನೇ ಕೈಗಾರಿಕಾ ಕ್ರಾಂತಿ: ಗುರುರಾಜ ದಾವಣಗೆರೆ ಲೇಖನ

ಗುರುರಾಜ್ ಎಸ್. ದಾವಣಗೆರೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು ದಸರಾ ಉದ್ಘಾಟಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ‘ಜಗತ್ತು ಬದಲಾವಣೆಯ ಹಾದಿಯಲ್ಲಿದೆ, ನಾಲ್ಕನೇ ಕೈಗಾರಿಕಾ ಕ್ರಾಂತಿಗೆ ಸಾಕ್ಷಿಯಾಗುತ್ತಿದೆ, ಅದರ ಬೆಳಕಿನಲ್ಲಿ ನಾಡಿನ ಸಂಸ್ಕೃತಿ ಮತ್ತಷ್ಟು
ವಿಸ್ತಾರಗೊಳ್ಳಬೇಕಿದೆ ಮತ್ತು ನಾವೆಲ್ಲ ಒಟ್ಟಾಗಿ ಸಾಗಬೇಕಿದೆ’ ಎಂದಿದ್ದರು. ವರ್ಷದ ಬಜೆಟ್ ಭಾಷಣದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ‘ಕೈಗಾರಿಕಾ ಕ್ರಾಂತಿ- ಐಆರ್4’ ಕುರಿತು ಪ್ರಸ್ತಾಪ ಮಾಡಿ, ನವೋದ್ಯಮಗಳಿಗೆ ಮುಕ್ತ ಆಹ್ವಾನ ನೀಡಿದ್ದರು. ಅದಕ್ಕೆ ಕಾರಣ, ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ತೀವ್ರತರದ ಬದಲಾವಣೆಗಳು.

ಉದ್ದೇಶಿತ ಕೆಲಸ ಮುಗಿದ ನಂತರ ದೇಹದಲ್ಲೇ ಕರಗಬಲ್ಲ ಹೃದಯದ ಪೇಸ್ ಮೇಕರ್‌ ಅನ್ನು ಅಮೆರಿಕದ ಸಂಶೋಧಕರು ಈ ವರ್ಷದ ಮೇ ತಿಂಗಳಿನಲ್ಲಿ ಜಗತ್ತಿಗೆ ಪರಿಚಯಿಸಿದ್ದರು. ದೇಹದ ಉಷ್ಣತೆ, ಆಮ್ಲಜನಕದ ಪ್ರಮಾಣ ಮತ್ತು ಹೃದಯದ ವಿದ್ಯುದೀಯ ಚಟುವಟಿಕೆಯನ್ನು (ಇಸಿಜಿ) ಪತ್ತೆ ಹಚ್ಚುವ ಮೂರು ಸಂವೇದಕಗಳು ಅದರಲ್ಲಿದ್ದವು. ಮೂರೂ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಹೃದಯದ ಬಡಿತವನ್ನು ಅಗತ್ಯಕ್ಕೆ ತಕ್ಕಂತೆ ಹೆಚ್ಚಿಸುವ ಮತ್ತು ಕಡಿಮೆಗೊಳಿಸುವ ಮತ್ತೊಂದು ಸೆನ್ಸರ್ ಕೂಡಾ ಅದರಲ್ಲಿತ್ತು. ಈ ಚಟುವಟಿಕೆಯ ಇಡೀ ಚಿತ್ರಣವನ್ನು ರಿಮೋಟ್ ವಿಧಾನದಲ್ಲಿ ತಮ್ಮ ಮೊಬೈಲ್‌ ಇಲ್ಲವೆ ಕಂಪ್ಯೂಟರ್ ತೆರೆಯ ಮೇಲೆ ನೋಡಬಲ್ಲ ಸೌಲಭ್ಯ ವೈದ್ಯರಿಗಿತ್ತು.

ಇದಕ್ಕೂ ಆರು ತಿಂಗಳ ಮೊದಲು ವಿಜ್ಞಾನಿಗಳ ತಂಡವೊಂದು ಸ್ವಯಂ ಪುನರುತ್ಪತ್ತಿ ಮಾಡಬಲ್ಲ ಚಿಕ್ಕದೊಂದು ಸಂಸ್ಕರಿತ ಝೆನೊಬಾಟ್ ಒಂದನ್ನು ಸೃಷ್ಟಿಸಿ ಅಚ್ಚರಿ ಮೂಡಿಸಿತ್ತು. ಒಂದು ಮಿಲಿಮೀಟರ್‌
ಗಿಂತಲೂ ಕಡಿಮೆ ಉದ್ದವಿದ್ದ ಝೆನೊಬಾಟನ್ನು ಆಫ್ರಿಕಾದ ಪಂಜಗಳಿರುವ ಕಪ್ಪೆಯ ಆಕರ ಕೋಶಗಳಿಂದ (ಸ್ಟೆಮ್‌ ಸೆಲ್‌) ತಯಾರಿಸಲಾಗಿತ್ತು. ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ಅವುಗಳಲ್ಲಿ ಪುನರುತ್ಪತ್ತಿ ಕ್ರಿಯೆ ಜರುಗುವಂತೆ ಮಾಡುವ ಸವಲತ್ತು ಇತ್ತು. ಕಪ್ಪೆಯ ಅಂಗಾಂಶದ ಈ ಝೆನೊಬಾಟ್‍ಗಳನ್ನು ಪೆಟ್ರಿಡಿಶ್‌ನಲ್ಲಿ ಹಾಕಿದಾಗ, ಅವು ಸಾವಿರಾರು ಚಿಕ್ಕ ಕೋಶಗಳನ್ನು ಬಾಯಿಯಿಂದ ನುಂಗಿ, ಒಂದು ವಾರದ ನಂತರ ಅಷ್ಟೇ ಸಂಖ್ಯೆಯ ಹೊಸ ಕೋಶಗಳನ್ನು ಉತ್ಪತ್ತಿ ಮಾಡಿದ್ದುದು ಕಂಡುಬಂತು.

ಇದನ್ನು ನೋಡಿ ನಿಬ್ಬೆರಗಾದ ವಿಜ್ಞಾನಿಗಳು, ಇದು ಯಶಸ್ವಿಯಾದಲ್ಲಿ, ಜಗತ್ತನ್ನು ಮಾರಿಯಂತೆ ಕಾಡುತ್ತಿರುವ ಮೈಕ್ರೊ ಪ್ಲಾಸ್ಟಿಕ್‍ ಅನ್ನು ನುಂಗಿ ನೊಣೆಯಲು ಮತ್ತು ಮನುಷ್ಯ- ಪ್ರಾಣಿ ದೇಹದೊಳಗಿನ ಸತ್ತ ಜೀವಕೋಶ
ಗಳನ್ನು ರಿಪ್ಲೇಸ್ ಮಾಡಲು ಈ ತಂತ್ರಜ್ಞಾನವನ್ನು ಮುಕ್ತವಾಗಿ ಬಳಸಬಹುದು ಎಂದರು. ಈ ತಂತ್ರಜ್ಞಾನವು ನಾಲ್ಕನೆಯ ಕೈಗಾರಿಕಾ ಕ್ರಾಂತಿಯ ಆಗಮನದ ಮೊದಲ ಅಲೆ ಎಂಬುದು ಕೆಲವರ ಅಂಬೋಣ. ಇದು
ಕ್ಲೌಡ್‍ಕಂಪ್ಯೂಟಿಂಗ್, ಬಿಗ್‍ಡೇಟಾ, ಆಗ್‌ಮೆಂಟೆಡ್ ರಿಯಾಲಿಟಿ, ಸಿಸ್ಟಂ ಇಂಟಿಗ್ರೇಶನ್, ಅಟಾನಮಸ್ ರೊಬೋಟಿಕ್ಸ್, ಸೈಬರ್ ಸೆಕ್ಯುರಿಟಿ, ಸಿಮ್ಯುಲೇಷನ್, ಆ್ಯಡಿಟಿವ್ ಮ್ಯಾನುಫ್ಯಾಕ್ಚರಿಂಗ್ (3D ತಂತ್ರಜ್ಞಾನ) ಮತ್ತು ಇಂಟರ್‌ನೆಟ್ ಆಫ್ ಥಿಂಗ್ಸ್‌ ಅನ್ನು ಒಳಗೊಂಡಿರುತ್ತದೆ.

ಹೊಸ ಕ್ರಾಂತಿಯ ಫಲವಾಗಿ ಜೈವಿಕ ವಿಜ್ಞಾನ, ಡಿಜಿಟಲ್ ತಂತ್ರಜ್ಞಾನ ಮತ್ತು ಭೌತ ಜಗತ್ತುಗಳ ಗಡಿಗಳು ಕರಗುತ್ತಿವೆ. ಕೃಷಿ, ಉತ್ಪಾದನೆ, ಆಟೊಮೊಬೈಲ್, ಸಗಟು ವ್ಯಾಪಾರ ಹಾಗೂ ಸೇವಾಕ್ಷೇತ್ರಗಳೆಲ್ಲ ಬಹುದೊಡ್ಡ ತಾಂತ್ರಿಕ ಸ್ಥಿತ್ಯಂತರಕ್ಕೆ ತೆರೆದುಕೊಳ್ಳುತ್ತಿವೆ. ವೈಜ್ಞಾನಿಕ ಕಥೆಗಳಲ್ಲಿ ಕಂಡುಬರುತ್ತಿದ್ದ ಉಪಕರಣ, ಪಾತ್ರ, ಸನ್ನಿವೇಶಗಳೆಲ್ಲ ನೈಜರೂಪಕ್ಕಿಳಿದು ನಿಂತಿವೆ. ಹಿಂದಿನ ಶತಮಾನದ ಅಂತ್ಯದಲ್ಲಿ ಆವಿರ್ಭವಿಸಿದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಕ್ರಾಂತಿ, ಈಗ ಡೇಟಾದ (ದತ್ತಾಂಶ) ಬಲದಿಂದ ಪ್ರಚ್ಛನ್ನ ವೇಗ ಗಳಿಸಿಕೊಂಡು ನಾಗಾಲೋಟದಲ್ಲಿ ಓಡುತ್ತಿದೆ. ಹೊಸ ಕ್ರಾಂತಿಯ ಕೇಂದ್ರ ಸ್ಥಾನದಲ್ಲಿರುವ ‘ಡೇಟಾ’ ನಾವು ಮಾಡುವ ಕೆಲಸಗಳನ್ನು ಬದಲಾಯಿಸುವುದಿಲ್ಲ, ಬದಲಿಗೆ ನಮ್ಮನ್ನೇ ಬದಲಾಯಿಸುತ್ತದೆ, ಅದಕ್ಕೆ ಸಿದ್ಧರಾಗಲೇಬೇಕು.

ಇನ್ನು ಹತ್ತೇ ವರ್ಷಗಳಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನಗಳು ಮನುಷ್ಯನ ಸ್ವಾಭಾವಿಕ ಬುದ್ಧಿಮತ್ತೆಯನ್ನು ಮೀರಿಸಲಿವೆ ಎನ್ನುವ ಗೂಗಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ರೇ ಕುರ್ಜ್‌ವೆಲ್‌, ಆ ವೇಳೆಗೆ ನಮ್ಮ ಬುದ್ಧಿವಂತಿಕೆಯನ್ನು ಕೃತಕ ಬುದ್ಧಿಯ ಜೊತೆ ಸಂಯೋಗ
ಗೊಳಿಸಬೇಕಾದ ಅನಿವಾರ್ಯ ಎದುರಾಗುತ್ತದೆ ಎಂದಿದ್ದಾರೆ. ಇದನ್ನೊಪ್ಪದ ದಕ್ಷಿಣ ಆಫ್ರಿಕಾದ
ವಿಟ್‌ವಾಟರ್‌ಸ್ಯಾಂಡ್ ವಿಶ್ವವಿದ್ಯಾಲಯದ ತಜ್ಞ ಇಯಾನ್ ಮೊಲ್, ಹಿಂದಿನ ಕೈಗಾರಿಕಾ ಕ್ರಾಂತಿಯಿಂದ ಉದ್ಭವಿಸಿರುವ ಆರ್ಥಿಕ ಅಸಮಾನತೆಯನ್ನು ಸರಿಪಡಿಸುತ್ತೇವೆ ಎಂದು ಕೆಲವು ಜಾಗತಿಕ ಉದ್ಯಮ ಸಂಸ್ಥೆಗಳು ಮಾಡುತ್ತಿರುವ ನಾಟಕದ ಹೆಸರೇ ಐಆರ್4, ಇದು ಹಲವರ ಕೆಲಸ ಕಳೆಯುವುದರಿಂದ ದೊಡ್ಡ ಮಟ್ಟದ ಸಾಮಾಜಿಕ ಕ್ಷೋಭೆ, ಅಸಮಾನತೆಗೆ ಎಡೆಮಾಡಿಕೊಡುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ನಾವು ಐಆರ್4 ಅನ್ನು ಮುಕ್ತವಾಗಿ ಸ್ವಾಗತಿಸಿದ್ದೇವೆ. ಕೃತಕ ಬುದ್ಧಿಮತ್ತೆ, ಐಒಟಿ ಮತ್ತು ಬ್ಲಾಕ್‍ಚೈನ್ ತಂತ್ರಜ್ಞಾನಗಳತ್ತ ಕಣ್ಣು ನೆಟ್ಟು ಕೂತಿರುವ ನಾವು, ಬಂಡವಾಳ ಕ್ರೋಡೀಕರಣ, ಕೌಶಲ ಕಲಿಕೆ ಮತ್ತು ನೀತಿ ನಿರೂಪಣೆ ಮಾಡುತ್ತಿದ್ದೇವೆ. ಮುಂಬೈನಲ್ಲಿ 2020ರಲ್ಲೇ ಕೇಂದ್ರ ಕಚೇರಿ ಪ್ರಾರಂಭಗೊಂಡಿದೆ. ಕೇಂದ್ರ ಸರ್ಕಾರದ ‘ಸಮರ್ಥ್’ ಯೋಜನೆ (SAMARTH- ಸ್ಮಾರ್ಟ್ ಅಡ್ವಾನ್ಸ್ಡ್ ಮ್ಯಾನ್ಯುಫ್ಯಾಕ್ಚರಿಂಗ್ ಆ್ಯಂಡ್ ಟ್ರಾನ್ಸ್‌ಫರ್ಮೇಷನ್ ಹಬ್) ಉತ್ಪಾದಕ, ಮಾರಾಟಗಾರ ಮತ್ತು ಗ್ರಾಹಕ ಮೂವರನ್ನೂ ಒಂದೇ ವೇದಿಕೆಗೆ ತಂದು ಅವರೆಲ್ಲರಿಗೂ ಐಆರ್4ನ ಬಗ್ಗೆ ಖಚಿತ ತಿಳಿವಳಿಕೆ ಮೂಡಿಸುತ್ತಿದೆ.

ತಂತ್ರಜ್ಞಾನ ಬಳಕೆಗೆ ಕರ್ನಾಟಕ ಮತ್ತು ತೆಲಂಗಾಣದೊಂದಿಗೆ ಒಪ್ಪಂದ ಮಾಡಿಕೊಂಡಿರುವ ಕೇಂದ್ರ ಸರ್ಕಾರವು ಮೇಘಾಲಯದಲ್ಲಿ ಈಗಾಗಲೇ ಟಾಸ್ಕ್‌ಫೋರ್ಸ್ ರಚಿಸಿದೆ. ಮಹಾರಾಷ್ಟ್ರ ಮತ್ತು ತಮಿಳು
ನಾಡಿನಲ್ಲಿ ಸಮಸ್ಯೆ ಆಧಾರಿತ ಕ್ಷೇತ್ರಗಳ ಕುರಿತ ಕೆಲಸ ಜಾರಿಯಲ್ಲಿದೆ. ಸಂಪನ್ಮೂಲ ಕೊರತೆಯಿಂದ ನರಳುತ್ತಿರುವ ಕೃಷಿ ಕ್ಷೇತ್ರಕ್ಕೆ ನವಚೈತನ್ಯ ನೀಡಲು ಐಆರ್4 ತಂತ್ರಜ್ಞಾನ ಬಳಕೆಯಾಗಲಿದೆ. ನಮ್ಮಲ್ಲಿ ಪ್ರಾರಂಭ
ವಾಗಿರುವ ‘ಇಂಟರ್‌ನೆಟ್‍ ಎಥಿಕಲ್ ಸೆಂಟರ್’ (IEC) ಐಆರ್4 ತಂತ್ರಜ್ಞಾನಗಳ ಬಗ್ಗೆ ಏಳುವ ನೈತಿಕ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಕೇಂದ್ರವಾಗಲಿದೆ.

ನೂರು ‘ಸ್ಮಾರ್ಟ್ ಸಿಟಿ’ಗಳಲ್ಲಿ ಐಒಟಿ, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆಧಾರಿತ ಡ್ರೈವರ್‌
ಗಳಿಲ್ಲದ ಕಾರು ಓಡಾಟದ ವ್ಯವಸ್ಥೆ ಇರಲಿದೆ. ದೇಶದ
ಶೇ 20ರಷ್ಟು ಕಾನೂನು ಸೇವೆಗಳು ಇನ್ನು ಮೂರರಿಂದ ಐದು ವರ್ಷಗಳ ಅವಧಿಯಲ್ಲಿ ಕೃತಕ ಬುದ್ಧಿಮತ್ತೆ
ಯಿಂದಲೇ ನಡೆಯಲಿವೆ. ಇದರಿಂದ ದೊಡ್ಡ ಪ್ರಮಾಣದ ಉದ್ಯೋಗ ನಷ್ಟವಾಗಲಿದೆ ಎಂದಿರುವ ಸಮಾಜವಿಜ್ಞಾನಿ
ಗಳು, ಈ ತರಾತುರಿಯ ತಂತ್ರಜ್ಞಾನ ಒಳ್ಳೆಯದಲ್ಲ, ಈಗಾಗಲೇ ನಿರುದ್ಯೋಗ ಸಮಸ್ಯೆ ದೊಡ್ಡದಾಗಿದೆ, ಉತ್ಪಾದನಾ ವಲಯದಲ್ಲಿ ಕೆಲಸಗಳಿಲ್ಲ, ಸೇವಾಕ್ಷೇತ್ರ ಗಟ್ಟಿಮುಟ್ಟಾಗಿದೆ ಎಂಬ ಕಾರಣ ನೀಡಿ ಹೊಸ ತಂತ್ರಜ್ಞಾನವನ್ನು ಕಣ್ಣುಮುಚ್ಚಿಕೊಂಡು ಸ್ವಾಗತಿಸುವುದರಲ್ಲಿ ಅರ್ಥವಿಲ್ಲ ಎಂದು ಕಿಡಿಕಾರಿದ್ದಾರೆ. ಐಆರ್4ರ ಕೆಲಸಗಳಿಗೆ ನಿರಂತರತೆ ಇರುವುದಿಲ್ಲ ಎಂದಿದ್ದಾರೆ.

ಗುತ್ತಿಗೆ ಇಲ್ಲವೆ ತಾತ್ಕಾಲಿಕ ಉದ್ಯೋಗಗಳ ಪ್ರಮಾಣ ಈಗಾಗಲೇ ಜಾಸ್ತಿಯಾಗಿದ್ದು ಕಾಯಂ ಉದ್ಯೋಗಗಳಿಗೆ ಶಾಶ್ವತವಾಗಿ ತೆರೆ ಬೀಳಲಿದೆ. ರೈಲು ಪ್ರಯಾಣಿಕರ ಟಿಕೆಟ್ ಮಾರಾಟ ಮತ್ತು ಹಳಿಗಳ ಉಸ್ತುವಾರಿಯು ಯಂತ್ರಗಳ ಸಾರಥ್ಯದಲ್ಲಿ ನಡೆಯುತ್ತಿದೆ. ನಮ್ಮ ರೈಲ್ವೆಯ ಬಹುಪಾಲು ಕೆಲಸಗಾರರು ಇದನ್ನು ಬಹಿರಂಗವಾಗಿ ವಿರೋಧಿಸಿದ್ದಾರೆ. 

ಒಮ್ಮೆ ತಂತ್ರಜ್ಞಾನ ಪರಿಪಕ್ವವಾದಂತೆ ಅಲ್ಲಿಯೂ ಕೆಲಸಗಳು ಕಡಿಮೆಯಾಗುತ್ತವೆ. ಇದನ್ನು ಒಪ್ಪದ ಐಆರ್4ರ ಪ್ರತಿಪಾದಕರು ಮೂರನೆಯ ಔದ್ಯೋಗಿಕ ಕ್ರಾಂತಿಯ ಸಮಯದಲ್ಲಿ ಉತ್ಪಾದನಾ ಕ್ಷೇತ್ರಕ್ಕೆ ಯಂತ್ರಗಳು ಕಾಲಿಟ್ಟಾಗ ಭಾರಿ ಉದ್ಯೋಗ ನಷ್ಟವೇನೋ ಆಯಿತು, ಆದರೆ ಸೇವಾಕ್ಷೇತ್ರ ಜೀವತಳೆದು ಅಲ್ಲೆಲ್ಲ ಉತ್ಪಾದನಾ ಕ್ಷೇತ್ರಕ್ಕಿಂತ ಹೆಚ್ಚಿನ ಕೆಲಸಗಳು ಸೃಷ್ಟಿಯಾಗ
ಲಿಲ್ಲವೆ, ಹಾಗೆಯೇ ಇಲ್ಲೂ ಹೊಸ ಪರಿಸ್ಥಿತಿ ಮತ್ತು ಬೇಡಿಕೆ ಆಧಾರಿತ ಉದ್ಯೋಗಗಳು ಸೃಷ್ಟಿಯಾಗಬಹುದು ಎನ್ನುತ್ತಾರೆ. ಇದನ್ನು ನಂಬುವುದು ಹೇಗೆ?

ಲೇಖಕ: ಪ್ರಾಚಾರ್ಯ, ವಿಡಿಯಾ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜು, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು