ಶನಿವಾರ, ಆಗಸ್ಟ್ 13, 2022
23 °C

PV Web Exclusive: ಗೋಹತ್ಯಾ ನಿಷೇಧ ಕಾಯ್ದೆ ವಿರೋಧಿಸಿದ್ದರೇ ಮಹಾತ್ಮಾ ಗಾಂಧಿ?

ರವೀಂದ್ರ ಭಟ್ಟ Updated:

ಅಕ್ಷರ ಗಾತ್ರ : | |

ಮಹಾತ್ಮಾ ಗಾಂಧಿ-ಸಂಗ್ರಹ ಚಿತ್ರ

1926ರ ವೇಳೆಗೆ ಮೈಸೂರು ಸರ್ಕಾರ ಗೋ ಹತ್ಯಾ ನಿಷೇಧ ಜಾರಿಗೊಳಿಸಲು ಮುಂದಾದಾಗ ಮಹಾತ್ಮಾ ಗಾಂಧಿ ಅವರು ಅದನ್ನು ವಿರೋಧಿಸಿದ್ದರು ಎಂಬ ವದಂತಿ ಹಬ್ಬಿತ್ತು. ಅದಕ್ಕೆ ಸ್ಪಷ್ಟನೆ ನೀಡಿ ಗಾಂಧಿ ಅವರು ಜುಲೈ 7, 1927ರ ಯಂಗ್ ಇಂಡಿಯಾ ಸಂಚಿಕೆಯಲ್ಲಿ ಲೇಖನವೊಂದನ್ನು ಬರೆದಿದ್ದರು.

ರಾಜ್ಯದ ಬಿಜೆಪಿ ಸರ್ಕಾರ ಗೋಹತ್ಯಾ ನಿಷೇಧ ಕಾಯ್ದೆ ಜಾರಿಗೆ ತರಲು ಮುಂದಾಗಿದೆ. ಈ ಕಾಯ್ದೆ ಈಗಾಗಲೇ ವಿಧಾನಸಭೆಯಲ್ಲಿ ಅಂಗೀಕಾರವಾಗಿದ್ದು ವಿಧಾನ ಪರಿಷತ್ ನ ಒಪ್ಪಿಗೆ ಪಡೆಯಬೇಕಿದೆ. ಸದ್ಯಕ್ಕೆ ವಿಧಾನ ಪರಿಷತ್ ನಲ್ಲಿ ಒಪ್ಪಿಗೆ ಪಡೆಯುವುದು ಕಷ್ಟವಾದರೆ ಸುಗ್ರೀವಾಜ್ಞೆ ಮೂಲಕ ಕಾಯ್ದೆ ಜಾರಿಗೆ ತರುವುದಾಗಿ ರಾಜ್ಯ ಸರ್ಕಾರ ಹೇಳಿದೆ. ರಾಜ್ಯದಲ್ಲಿ ಗೋ ಹತ್ಯಾ ನಿಷೇಧ ಕಾಯ್ದೆ ಜಾರಿಗೆ ಬರುತ್ತಿರುವುದು ಇದೇ ಮೊದಲೇನೂ ಅಲ್ಲ. 1926ರ ವೇಳೆಗೆ ಆಗಿನ ಮೈಸೂರು ಸರ್ಕಾರ ಇಂತಹ ಕಾನೂನು ಜಾರಿಗೆ ಮುಂದಾಗಿತ್ತು. ಕಾಯ್ದೆ ಜಾರಿಗೆ ಮೈಸೂರು ಗೋ ರಕ್ಷಣಾ ಸಮಿತಿಯೊಂದನ್ನು ರಚಿಸಲಾಗಿತ್ತು. ಈ ಸಮಿತಿಗೆ ಮಹಾತ್ಮಾ ಗಾಂಧಿ ಅವರು ಒಂದು ಪತ್ರವನ್ನು ಬರೆದಿದ್ದರು. ಅದರಲ್ಲಿ ಅವರು ಗೋಹತ್ಯಾ ನಿಷೇಧ ಕಾಯ್ದೆಯನ್ನು ವಿರೋಧಿಸಿದ್ದಾರೆ ಎಂಬ ವದಂತಿ ಹಬ್ಬಿತ್ತು. ಈ ಬಗ್ಗೆ ಆಗಿನ ಪತ್ರಿಕೆಗಳಲ್ಲಿ ಸುದ್ದಿ ಕೂಡ ಪ್ರಕಟವಾಗಿದ್ದವು.

ಇಂತಹ ವದಂತಿ ಹಬ್ಬಿರುವುದು ಗಾಂಧೀಜಿ ಅವರ ಕಿವಿಗೂ ಬಿತ್ತು. ತಕ್ಷಣವೇ ಅವರು ಗೋ ಸಂರಕ್ಷಣಾ ಸಮಿತಿಗೆ ಇನ್ನೊಂದು ಪತ್ರ ಬರೆದು ತಾವು ಈ ಹಿಂದೆ ಬರೆದ ಪತ್ರದ ನಕಲನ್ನು ಕಳಿಸಲು ಹೇಳಿದರು. ಮೈಮರೆತು ಅಥವಾ ಅಜಾಗರೂಕತೆಯಿಂದ ತಾವೆಲ್ಲಿಯಾದರೂ ಗೋಹತ್ಯಾ ನಿಷೇಧವನ್ನು ವಿರೋಧಿಸಿದ ಬಗ್ಗೆ ಪ್ರಸ್ತಾಪಿಸಿರಬಹುದೇನೋ ಎಂಬ ಶಂಕೆ ಗಾಂಧಿ ಅವರನ್ನು ಕಾಡಿತ್ತು. ಅದಕ್ಕೇ ತಾವು ಬರೆದ ಪತ್ರವನ್ನು ಇನ್ನೊಮ್ಮೆ ನೋಡಿದರು. ಅದರಲ್ಲಿ ಅವರು ಗೋ ಹತ್ಯಾ ನಿಷೇಧ ಕಾಯ್ದೆಯನ್ನು ವಿರೋಧಿಸಿರಲಿಲ್ಲ. ಆದರೂ ತಮ್ಮ ನಿಲುವನ್ನು ಸ್ಪಷ್ಟಪಡಿಸುವುದಕ್ಕಾಗಿ ಯಂಗ್ ಇಂಡಿಯಾದಲ್ಲಿ ಲೇಖನ (ಜುಲೈ 7, 1927) ವನ್ನೇ ಬರೆದರು. ಆ ಲೇಖನದಲ್ಲಿ ಅವರು ಗೋ ಹತ್ಯಾ ನಿಷೇಧದ ಬಗ್ಗೆ ತಮ್ಮ ಸ್ಪಷ್ಟ ಅಭಿಪ್ರಾಯವನ್ನು ಹೇಳಿದ್ದಾರೆ.

‘ಧಾರ್ಮಿಕ ವಿಷಯಗಳಲ್ಲಿ ಸರ್ಕಾರ ಮಧ್ಯ ಪ್ರವೇಶಿಸುವುದನ್ನು ನಾನು ವಿರೋದಿಸುತ್ತೇನೆ. ಗೋವಿನ ವಿಷಯಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ಧಾರ್ಮಿಕ ಹಾಗೂ ಆರ್ಥಿಕ ವಿಷಯಗಳು ಬೆರೆತುಕೊಂಡಿವೆ. ಆರ್ಥಿಕ ದೃಷ್ಟಿಯಿಂದ ಅದು ಹಿಂದುಗಳದೇ, ಮುಸ್ಲಿಮರದೇ ಆಗಲಿ ಗೋಧನವನ್ನು ರಕ್ಷಿಸುವುದು ಪ್ರತಿಯೊಂದು ರಾಜ್ಯದ ಕರ್ತವ್ಯ ಎಂದು ನಿಸ್ಸಂದೇಹವಾಗಿ ಹೇಳಬಹುದು. ಯಾವುದೇ ಧರ್ಮಕ್ಕೆ ಸೇರಿದ ಅನುಯಾಯಿಗಳು ಧಾರ್ಮಿಕ ದೃಷ್ಟಿಯಿಂದ ಗೋವಧೆ ಮಾಡಬೇಕೆಂದು ಬಯಸಿದ್ದೇ ಆದರೆ ಹಿಂದೂ ರಾಜ್ಯ ಕೂಡ ಅಂತಹ ಮತಾನುಯಾಯಿಗಳಲ್ಲಿ ಬುದ್ಧಿವಂತರಾದ ಬಹುಜನರ ಸಮ್ಮತಿ ಪಡೆಯದೆ ಗೋವಧೆ ನಿಷೇಧಿಸಲಾಗದು. ಧರ್ಮಾಚರಣೆಗಾಗಿ ಮಾತ್ರವೇ ಅವರು ಗೋವಧೆಯನ್ನು ಹಿಂದೂಗಳಿಗೆ ಸಿಟ್ಟು ಬಾರದಂತೆ, ಅವರನ್ನು ಉದ್ರೇಕಿಸದಂತೆ ಖಾಸಗಿ ಸ್ಥಳಗಳಲ್ಲಿ ಸದ್ದಿಲ್ಲದೆ ನಡೆಸಬಹುದು. ಆದರೆ ಇಂತಹ ಗೋವಧೆ ಸುದ್ದಿ ಹಿಂದೂಗಳ ಕಿವಿಗೆ ಬೀಳುತ್ತದೆ. ಅವರು ಕುಪಿತರಾಗುವುದು ಸ್ವಾಭಾವಿಕ. ಆದರೆ ದುರದೃಷ್ಟವಶಾತ್ ಭಾರತದಲ್ಲಿ ಗೋವಧೆಯು ಹಿಂದೂಗಳ ಮನಸ್ಸನ್ನು ನೋಯಿಸಬೇಕು, ಸಿಟ್ಟಿಗೇಳಿಸಬೇಕು ಎಂಬ ಉದ್ದೇಶದಿಂದಲೇ ನಡೆಯುತ್ತದೆ ಎಂಬುದೂ ನನಗೆ ತಿಳಿದಿದೆ. ತನ್ನ ಪ್ರಜೆಗಳ ಬಗ್ಗೆ ಯತ್ಕಿಂಚಿತ್ ಭಾವನೆಯುಳ್ಳ ಯಾವುದೇ ಸರ್ಕರವೇ ಆಗಲಿ ಇಂತಹ ಪ್ರವೃತ್ತಿಯನ್ನು ಸದೆಬಡಿಯಬೇಕು. ಆದರೆ ನನ್ನ ಅಭಿಪ್ರಾಯದಲ್ಲಿ ಗೋ ಸಂಬಂಧದ ಆರ್ಥಿಕ ಪ್ರಶ್ನೆಯನ್ನು ಸರಿಯಾಗಿ ಹತೋಟಿಗೆ ತೆಗೆದುಕೊಂಡಲ್ಲಿ ಮುಂದೆ ತಾನೇ ತಾನಾಗಿ ನಾಜೂಕಾದ ಧಾರ್ಮಿಕ ಪ್ರಶ್ನೆಯೂ ಸರಿಹೋಗುತ್ತದೆ. ಗೋವಧೆ ಆರ್ಥಿಕ ದೃಷ್ಟಿಯಿಂದ ಅಸಾಧ್ಯವೆನಿಸುವಂತೆ ಮಾಡಬಹುದು. ಭಾರತದಲ್ಲಿ ಹಿಂದೂಗಳು ಪವಿತ್ರವೆಂದು ಭಾವಿಸುವ ಪ್ರಾಣಿ ಕೊಲೆ ಅತ್ಯಂತ ಅಗ್ಗವಾಗಿದೆ’ ಎಂದು ಅವರು ಹೇಳಿದ್ದಾರೆ.

ಗೋ ಸಂರಕ್ಷಣೆಯ ಗುರಿಯನ್ನು ಸಾಧಿಸಲು ಅವರು ಕೆಲವು ಸೂಚನೆಗಳನ್ನೂ ನೀಡಿದ್ದಾರೆ.

1) ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಬರುವ ಪ್ರತಿಯೊಂದು ದನವನ್ನೂ ಅಧಿಕ ಧಾರಣೆಗೆ ಸವಾಲು ಮಾಡಿ ರಾಜ್ಯ ಸರ್ಕಾರ ಕೊಂಡುಕೊಳ್ಳಬೇಕು.

2) ಪ್ರತಿಯೊಂದು ಮುಖ್ಯ ಪಟ್ಟಣದಲ್ಲಿಯೂ ಸರ್ಕಾರ ಕ್ಷೀರ ಕ್ಷೇತ್ರಗಳನ್ನು ಸ್ಥಾಪಿಸಿ ಹಾಲು ಸುಲಭ ದರದಲ್ಲಿ ದೊರಕುವಂತೆ ವ್ಯವಸ್ಥೆ ಮಾಡಬೇಕು.

3) ತನ್ನ ದೇಶದಲ್ಲಿರುವ ಎಲ್ಲ ಸತ್ತ ದನಗಳ ತೊಗಲು, ಮೂಳೆ ಇತ್ಯಾದಿಗಳನ್ನು ಸರಿಯಾಗಿ ಉಪಯೋಗಕ್ಕೆ ಬರುವಂತೆ ಚರ್ಮಾಲಯ (ಟ್ಯಾನರಿ) ಗಳನ್ನು ಸರ್ಕಾರದವರು ತೆರೆಯಬೇಕು. ಖಾಸಗಿಯವರ ದನಗಳು ಸತ್ತಾಗ ಅವುಗಳನ್ನು ಸಹ ಬಹಿರಂಗ ಮಾರುಕಟ್ಟೆಯಲ್ಲಿ ಕೊಳ್ಳಬೇಕು.

4) ಸರ್ಕಾರ ಮಾದರಿ ಪಶುಪಾಲನಾ ಕೇಂದ್ರಗಳನ್ನು ಸ್ಥಾಪಿಸಿ ದನಗಳ ಪಾಲನೆ, ಪೋಷಣೆ, ತಳಿ ವೃದ್ಧಿ ಇವುಗಳನ್ನು ಜನರಿಗೆ ಅರಿವಾಗುವಂತೆ ಕಲಿಸಿಕೊಡಬೇಕು.

5) ದನಗಳ ಮೇವಿಗಾಗಿ ಗೋಮಾಳಗಳಿಗೆ ಉದಾರವಾಗಿ ಸರ್ಕಾರ ಭೂಮಿ ಮೀಸಲಿಡಬೇಕು. ಗೋಪಾಲನೆಯನ್ನು ಜನರಿಗೆ ಶಾಸ್ತ್ರೀಯವಾಗಿ ತಿಳಿಸಲು ಪ್ರಪಂಚದಲ್ಲಿ ದೊರೆಯುವ ಶ್ರೇಷ್ಠ ನಿಷ್ಣಾತರನ್ನು ಬರಮಾಡಿಕೊಳ್ಳಬೇಕು.

6) ಈ ಉದ್ದೇಶ ಸಾಧನೆಗಾಗಿ ಪ್ರತ್ಯೇಕ ಇಲಾಖೆ ಇರಬೇಕು. ಈ ಇಲಾಖೆಯ ಉದ್ದೇಶ ಲಾಭ ಗಳಿಕೆ ಆಗಬಾರದು. ಉತ್ತಮ ತಳಿ ಅಭಿವೃದ್ಧಿಯಾಗುವಂತೆ ಹಾಗೂ ಪಶುಪಾಲನೆಗೆ ಸಂಬಂಧಪಟ್ಟ ಸಮಗ್ರ ವಿಷಯಗಳು ಜನರಿಗೆ ಅರಿವಾಗುವಂತೆ ಮಾಡುವುದು ಈ ಇಲಾಖೆಯ ಕೆಲಸ.

‘ಮುದಿ, ಕುಂಟು, ಕಾಯಿಲೆ ಮತ್ತು ಅನುಪಯುಕ್ತವಾದ ದನಗಳ ಪೋಷಣೆಯನ್ನು ಸರ್ಕಾರ ಕೈಗೊಳ್ಳಬೇಕು. ಇದು ದುಬಾರಿ ವೆಚ್ಚಕ್ಕೆ ದಾರಿಯಾಗುವುದೇನೋ ನಿಜ. ಆದರೆ ಎಲ್ಲ ಸರ್ಕಾರಗಳು ಸಂತೋಷದಿಂದಲೇ ಇದನ್ನು ಭರಿಸಬೇಕು. ಪಶುಪಾಲನಾ ಕ್ಷೇತ್ರಗಳನ್ನು, ಚರ್ಮಾಲಯಗಳನ್ನು ಶಾಸ್ತ್ರೀಯವಾಗಿ ನಡೆಸಿಕೊಂಡು ಬಂದರೆ ಆರ್ಥಿಕವಾಗಿ ನಿರುಪಯೋಗಿಯಾದ ದನಗಳ ಪಾಲನೆಗೆ ಬೇಕಾದ ಹಣ ಇದರಿಂದಲೇ ಸಿಗುತ್ತದೆ. ಅವುಗಳಿಂದ ದೊರೆಯುವ ಗೊಬ್ಬರ ಮತ್ತು ಹಾಲು, ಅದರ ಉತ್ಪನ್ನಗಳು, ಚರ್ಮ ಮತ್ತು ಚರ್ಮದಿಂದ ತಯಾರಾಗುವ ಮಾಲು, ಸತ್ತ ದನಗಳಿಂದ ತಯಾರಿಸಬಹುದಾದ ನಾನಾಬಗೆಯ ಸರಕುಗಳ ಮಾರಾಟದಿಂದ ವೆಚ್ಚ ಸರಿದೂಗಿಸಬಹುದು ಎಂಬುದು ನನ್ನ ಅಭಿಪ್ರಾಯ. ವೈಜ್ಞಾನಿಕ ತಿಳಿವಳಿಕೆಯ ಅಭಾವದಿಂದ ಮತ್ತು ತಪ್ಪು ಭಾವನೆಯಿಂದ ಮೃತ ದನಗಳಿಂದ ತಯಾರಿಸಬಹುದಾದ ಅನೇಕ ಪದಾರ್ಥಗಳು ಉತ್ಪನ್ನವಾಗದೆ ನಷ್ಟವಾಗಿ ಹೋಗುತ್ತಿವೆ. ಅವುಗಳ ಪೂರ್ಣ ಪ್ರಯೋಜನವನ್ನು ನಾವು ಪಡೆಯುತ್ತಿಲ್ಲ. ಗೋಹತ್ಯಾ ನಿಷೇಧ ಶಾಸನ ಮಾಡಲೇ ಬಾರದು ಎಂದು ನಾನು ಎಲ್ಲಿಯೂ ಹೇಳಿಲ್ಲ. ಗೋವಧೆಯ ನಿಷೇಧದಿಂದ ಯಾರಿಗೆ ಅನಾನುಕೂಲವಾಗುತ್ತದೆಯೋ ಅವರ ಪೈಕಿ ಬಹುಜನರ ಸಮ್ಮತಿ ಪಡೆಯದೆ ಗೋಹತ್ಯೆ ನಿಷೇಧ ಕಾನೂನು ಮಾಡಲಾಗದು’ ಎಂದು ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.

‘ಗೋರಕ್ಷಣೆಯ ಕಾರ್ಯಕ್ರಮದಲ್ಲಿ ಗೋಹತ್ಯೆಯನ್ನು ಶಾಸನಬದ್ಧವಾಗಿ ನಿಷೇಧಿಸುವುದು ಬಹುಸಣ್ಣ ಭಾಗ. ಶಾಸನ ಸಮ್ಮತವಾಗಿ ಗೋಹತ್ಯೆ ನಿಷೇಧದಿಂದಲೇ ಸಾಕಷ್ಟು ಮಂದಿ ಸಂತೃಪ್ತರಾಗಿರುವಂತೆ ಕಾಣುತ್ತಿದ್ದಾರೆ. ಈ ರೀತಿಯ ಶಾಸನ ಜಾರಿಗೆ ಬಂದರೆ ತಮ್ಮ ಕಾರ್ಯ ಮುಗಿದಂತೆ ಎಂದು ತಿಳಿಯುವವರಿದ್ದಾರೆ. ಶಾಸನಗಳಿಂದಲೇ ತುಂಬಿ ತುಳುಕುತ್ತಿರುವ ಈ ನಾಡಿನಲ್ಲಿ ಸಾಕಷ್ಟು ಶಾಸನಗಳಿವೆ. ಉನ್ನತಾಭಿಮಾನವುಳ್ಳ ಮತಾಂಧರು ಧರ್ಮದ ಸೋಗಿನಲ್ಲಿ ನಡೆಸುವ ಚಳವಳಿಯ ವಿರುದ್ಧ ಶಾಸನ ಎಂದಿಗೂ ಯಶಸ್ವಿಯಾಗದು. ಗೋಧನ ನಾಶವಾಗದಂತೆ ರಕ್ಷಿಸಲು ವ್ಯಾಪಕ ರಚನಾತ್ಮಕ ಕಾರ್ಯಕ್ರಮ ಕೈಗೊಳ್ಳಬೇಕಾಗಿದ್ದು ಅಗತ್ಯ. ಭಾರತದ ಪಶು ಸಂಪತ್ತಿನ ರಕ್ಷಣೆ ಎಂದರೆ ನಿಜವಾಗಿಯೂ ಆ ದನಗಳ ಪಾಡಿಗೆ ಇಳಿದಿರುವ ಹಸಿವಿನಿಂದ ಕಂಗಾಲಾಗಿರುವ ಭಾರತದ ಲಕ್ಷಾಂತರ ಸ್ತ್ರೀ ಪುರುಷರ ರಕ್ಷಣೆ ಎಂದೇ ಆಗುತ್ತದೆ. ಪಶುಸಂಗೋಪನ, ಉತ್ತಮ ತಳಿ ಅಭಿವೃದ್ಧಿ, ಹಾಲಿನ ಉತ್ಪನ್ನ, ಮೃತ ದನಗಳ ದೇಹದ ಸದುಪಯೋಗ, ಇವುಗಳನ್ನು ರಾಷ್ಟ್ರದ ಇಡೀ ಜನರ ಹಿತಕ್ಕಾಗಿ ವಿನಿಯೋಗಿಸಲು ಸರ್ಕಾರಗಳು ಮತ್ತು ಜನರು ಒಂದಾಗಿ ಪರಸ್ಪರ ಸಹಯೋಗಿಗಳಾಗಿ ವರ್ತಿಸದೆ ಹೋದಲ್ಲಿ ಗೋವಧೆಯ ವಿರುದ್ಧ ಎಷ್ಟೇ ಶಾಸನಗಳು ಕಡತಕ್ಕೆ ಏರಿಸಿದರೂ ದನಗಳು ಅನ್ಯಾಯವಾಗಿ ಕಟುಕನ ಕೈಗೆ ಬಲಿಯಾಗುತ್ತವೆ’. ಹಿಂದೂಗಳಲ್ಲಿ ಕೆಲವರು ಗೋಮಾಂಸ ತಿನ್ನುತ್ತಾರೆ ಎನ್ನುವುದು ತಿಳಿದು ನನಗೆ ಸಿಡಿಲು ಬಡಿದಂತಾಯಿತು. ಇದು ನಿಜವೇ ಆಗಿದ್ದಲ್ಲಿ ಉತ್ತಮ ಸ್ಥಾನದಲ್ಲಿರುವ ಹಿಂದೂಗಳು ಈ ಅಪವಾದಕ್ಕೆ ಸ್ಪಷ್ಟವಾಗಿ ಗುರಿಯಾಗಬೇಕಾಗುತ್ತದೆ. ಗೋಮಾಂಸ ಭಕ್ಷಕರಿಗೆ ಗೋವಿನ ಪಾವಿತ್ರ್ಯತೆ ಅರಿವಿಲ್ಲದಿದ್ದಲ್ಲಿ ಅದಕ್ಕೆ ಕಾರಣ ಅವರ ಅಜ್ಞಾನ. ತಿಳೀವಳಿಕೆಯ ಅಭಾವ. ಆದರೆ ಹಿಂದೂ ಧರ್ಮದ ಮೂಳ ಸತ್ಯ ಅವರಿಗೆ ತಿಳಿಸಿ ಹೇಳದೆ ತಮ್ಮ ಸಹೋದರರನ್ನು ಈ ದುರ್ಗತಿಗೆ ತಂದಿರುವ ಹಿಂದೂಗಳಿಗೆ ಏನನ್ನೋಣ?’ ಹೀಗೆಂದು ಗಾಂಧೀಜಿ ಲೇಖನ ಮುಗಿಸುತ್ತಾರೆ.

ಈಗ ಗೋಹತ್ಯೆ ನಿಷೇಧಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ ಮತ್ತು ಅದನ್ನು ವಿರೋಧಿಸುತ್ತಿರುವವರೂ ಗಾಂಧಿ ವಾದದತ್ತ ಗಮನ ಹರಿಸಿದರೆ ಸಮಸ್ಯೆ ತಹಬದಿಗೆ ಬಂದೀತು.

ಆಧಾರ: ಸಿದ್ದವ್ವನಹಳ್ಳಿ ಕೃಷ್ಣಶರ್ಮ ಅವರ ‘ಗಾಂಧೀ ಮತ್ತು ಕರ್ನಾಟಕ’

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು