ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾ. ಬಸವರಾಜ ಸಾದರ ಲೇಖನ: ಸಾಕ್ಷ್ಯ ಆದೀತೇ ಅಪರಾಧಿಗಳ ಆತ್ಮಸಾಕ್ಷಿ?

ಅಪರಾಧಿಗಳ ಮನಸ್ಸು ನಿತ್ಯವೂ ಸತ್ಯವನ್ನು ಹತ್ತಿಕ್ಕುತ್ತಲೇ ಇರುತ್ತದೆ
Last Updated 1 ಸೆಪ್ಟೆಂಬರ್ 2021, 19:45 IST
ಅಕ್ಷರ ಗಾತ್ರ

ಆ ಘಟನೆ ನೆನಪಾದರೆ, ಹೈಕೋರ್ಟಿನ ನ್ಯಾಯಮೂರ್ತಿ ಯೊಬ್ಬರಿಗೆ, ಇಷ್ಟು ಹುಂಬಾಗುತ್ತಿಗೆಯ ಪ್ರಶ್ನೆಯನ್ನು ಹೀಗೆ ನೇರವಾಗಿ ಕೇಳಬಹುದೇ ಎಂಬ ಅಳುಕು ಈಗಲೂ ನನ್ನನ್ನು ಕಾಡುತ್ತದೆ. ಆದರೆ, ಆ ನ್ಯಾಯಮೂರ್ತಿಯವರು ಆಗ ಕೊಟ್ಟ ಉತ್ತರ ಮಾತ್ರ, ಎಲ್ಲರ ಆತ್ಮಸಾಕ್ಷಿ ಯನ್ನು ಕೆಣಕುವಂಥದ್ದಾಗಿರುವ ಕಾರಣ ಅದು ಮತ್ತೆ ಮತ್ತೆ ನೆನಪಾಗುತ್ತಲೇ ಇರುತ್ತದೆ.

ಬೆಂಗಳೂರು ಆಕಾಶವಾಣಿಯಲ್ಲಿ ನಾನು ಕಾರ್ಯ ಕ್ರಮ ನಿರ್ವಾಹಕನಾಗಿದ್ದಾಗ, ‘ಕಾನೂನು ಸಲಹೆ’ ಎಂಬ ಕಾರ್ಯಕ್ರಮವನ್ನು ತಿಂಗಳಿಗೊಂದರಂತೆ ಪ್ರಸಾರ ಮಾಡುತ್ತಿದ್ದೆ. ಕಾನೂನಿಗೆ ಸಂಬಂಧಪಟ್ಟ ಕೇಳುಗರ ಪ್ರಶ್ನೆಗಳಿಗೆ ತಜ್ಞರಿಂದ ನೇರವಾಗಿ ಉತ್ತರ ಕೊಡಿಸುವ ಉಪಯುಕ್ತ ಕಾರ್ಯಕ್ರಮ ಅದಾಗಿತ್ತು. ಇದಕ್ಕಾಗಿ ಪ್ರತೀ ತಿಂಗಳೂ ಹೈಕೋರ್ಟಿನ ನ್ಯಾಯಮೂರ್ತಿಯೊಬ್ಬರನ್ನು ಆಮಂತ್ರಿಸುತ್ತಿದ್ದೆ. ಈ ಮಾಲಿಕೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಂದಿದ್ದರು, ಆ ಹಿರಿಯ ನ್ಯಾಯಮೂರ್ತಿ.

ಕಾರ್ಯಕ್ರಮವನ್ನು ಧ್ವನಿಮುದ್ರಿಸುವ ಮುಂಚೆ, ನ್ಯಾಯಮೂರ್ತಿ ಜೊತೆಗೆ ಚಹಾ ಕುಡಿಯುತ್ತ ಕುಳಿತಿದ್ದಾಗ, ‘ಸರ್, ನ್ಯಾಯಮೂರ್ತಿಯಾದ ನೀವು, ಯಾವುದೇ ಅಪರಾಧದ ಪ್ರಕರಣದಲ್ಲಿ ತೀರ್ಪು ಕೊಡುವಾಗ, ಅಪರಾಧಿ ಯಾರೆಂಬುದು ನಿಮಗೆ ಮೊದಲೇ ತಿಳಿದಿರುತ್ತ ದೆಯೇ?’ ಎಂದು ಹೆದರುತ್ತಲೇ ಆ ಪ್ರಶ್ನೆ ಕೇಳಿದ್ದೆ. ಆದರೆ ಅವರು ಎಳ್ಳಷ್ಟೂ ಕೋಪಿಸಿಕೊಳ್ಳದೆ, ‘ಇಲ್ಲ, ಅಪರಾಧಿ ಯಾರೆಂಬುದು ಖಂಡಿತವಾಗಿಯೂ ಮೊದಲು ನ್ಯಾಯಮೂರ್ತಿಗಳಿಗೆ ಗೊತ್ತಿರುವುದಿಲ್ಲ’ ಎಂದು ಅತ್ಯಂತ ಸ್ಪಷ್ಟ ಮತ್ತು ನೇರವಾದ ಉತ್ತರ ಕೊಟ್ಟುಬಿಟ್ಟಿದ್ದರು.

ಅಷ್ಟಕ್ಕೇ ಬಿಡದೆ, ‘ಹಾಗಾದರೆ, ಅಪರಾಧಿಗಳ ಪರ ಹಾಗೂ ವಿರುದ್ಧ ವಾದ ಮಂಡಿಸುವ ವಕೀಲರಿಗೆ ಅಪರಾಧಿ ಯಾರೆಂಬುದು ಮೊದಲೇ ತಿಳಿದಿರುತ್ತದೆಯೇ?’ ಎಂದು ನಾನು ಮತ್ತೊಂದು ಪ್ರಶ್ನೆಯನ್ನು ಎಸೆದಿದ್ದೆ. ಅದಕ್ಕೂ ಅವರು ಅಷ್ಟೇ ತಾಳ್ಮೆಯಿಂದ, ‘ಪೂರ್ತಿಯಾಗಿ ಅಲ್ಲ’ ಎಂದು ಎರಡೇ ಶಬ್ದಗಳಲ್ಲಿ ಉತ್ತರ ಕೊಟ್ಟುಬಿಟ್ಟರು! ಅಲ್ಲಿಗೇ ನಿಲ್ಲಿಸದ ನಾನು, ‘ಹಾಗಾದರೆ, ಅಪರಾಧಿ ಯಾರೆಂಬುದು ನಿಜವಾಗಿಯೂ ಮೊದಲು ಯಾರಿಗೆ ತಿಳಿದಿರುತ್ತದೆ?’ ಎಂದು ನನ್ನ ಮೂರನೆಯ ಹಾಗೂ ಕೊನೆಯ ಪ್ರಶ್ನೆಯನ್ನು ಹಿಂಜರಿಕೆಯಿಂದಲೇ ಕೇಳಿದ್ದೆ. ಅದಕ್ಕೆ ಅವರು ಅತ್ಯಂತ ತಾಳ್ಮೆಯಿಂದ ಕೊಟ್ಟ ಉತ್ತರ ಅಚ್ಚರಿಯದಾಗಿತ್ತು- ‘ಅಪರಾಧಿ ಯಾರೆಂಬುದು ಗೊತ್ತಿರುವುದು ಒಬ್ಬರಿಗೆ ಮಾತ್ರ, ಅದು ಅಪರಾಧ ಮಾಡಿದ ವ್ಯಕ್ತಿಗೆ’ ಎಂದು. ನ್ಯಾಯಮೂರ್ತಿಯವರ ಆ ಪ್ರಾಮಾಣಿಕ ಹಾಗೂ ವಾಸ್ತವಿಕವಾದ ಉತ್ತರ ಕೇಳಿ ನಾನು ದಂಗಾಗಿ ಹೋಗಿದ್ದೆ.

ಈಗ ಅದನ್ನೆಲ್ಲ ನೆನೆಸಿಕೊಂಡರೆ, ಅಂದು ಆ ನ್ಯಾಯಮೂರ್ತಿಯವರು ಕೊಟ್ಟ ವೈಯಕ್ತಿಕ ಉತ್ತರದಲ್ಲಿ ಎಷ್ಟೊಂದು ಸತ್ಯಾಂಶವಿದೆಯಲ್ಲ ಎಂದು ಸೋಜಿಗವಾಗುತ್ತದೆ. ನಿಜವಾದ ಅಪರಾಧಿ ಯಾರೆಂಬುದು ಅಪರಾಧ ಮಾಡಿದ ವ್ಯಕ್ತಿಗೆ ಗೊತ್ತಿರಲು ಸಾಧ್ಯವೇ ಹೊರತು, ಉಳಿದವರಿಗಲ್ಲ. ನ್ಯಾಯಾಲಯದಲ್ಲಿ ಆಯಾ ಕಕ್ಷಿಗಾರರ ಪರ ಅಥವಾ ವಿರೋಧವಾಗಿ ವಕೀಲರು ಒದಗಿಸುವ ಸಾಕ್ಷ್ಯಾಧಾರ
ಗಳಿಂದ ಹಾಗೂ ಕಾನೂನಿನ ಇನ್ನಿತರ ಮಾಪನಗಳಿಂದ ಅಳೆದು, ತೂಗಿದ ನಂತರವೇ ನ್ಯಾಯಾಧೀಶರು, ನ್ಯಾಯಮೂರ್ತಿಗಳು ‘ಇಂಥವನೇ ಅಪರಾಧಿ’ ಎಂಬ ನಿರ್ಣಯಕ್ಕೆ ಬರುವುದು ನಮ್ಮ ಕಾನೂನುಗಳ ರೀತಿ ಮತ್ತು ಕ್ರಮ. ನಿಜ, ಅಪರಾಧ ಮಾಡಿದವನಿಗೆ ಮಾತ್ರವೇ ತಾನು ಅಪರಾಧಿ ಎಂಬ ಸತ್ಯ ಗೊತ್ತಿರುತ್ತದೆ. ಆ ಸತ್ಯವನ್ನು ಅವನ ಆತ್ಮಸಾಕ್ಷಿಯು ಸದಾ ಜಾಗೃತವಾಗಿ ಇಟ್ಟಿರುತ್ತದೆ. ಆದರೆ, ಅಂಥ ಆತ್ಮಸಾಕ್ಷಿಗೆ ಅನುಗುಣವಾಗಿ ‘ನಾನೇ ಅಪರಾಧಿ’ ಎಂದು ಒಪ್ಪಿಕೊಂಡುಬಿಡುವ ಅಪರಾಧಿಗಳು ಇದ್ದಾರೆಯೇ ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆ. ಹಾಗೇನಾದರೂ ಇದ್ದಿದ್ದರೆ ನ್ಯಾಯಾಲಯ, ನ್ಯಾಯಾಧೀಶರು, ವಕೀಲರು ಮತ್ತು ನ್ಯಾಯಾಂಗದ ಇನ್ನಿತರ ಪ್ರಕ್ರಿಯೆಗಳ ಅಗತ್ಯವೇ ಇರುತ್ತಿರಲಿಲ್ಲ.

ಆತ್ಮಸಾಕ್ಷಿ ಎಂಬುದು ಉಳಿದ ಯಾವ ಸಾಕ್ಷ್ಯವನ್ನೂ ಬಯಸದ ಎಲ್ಲರೊಳಗಿನ ಅಂತಃಸಾಕ್ಷಿ. ಅದು ಎಂದೂ ಸತ್ಯವನ್ನೇ ಹೇಳುತ್ತಿರುತ್ತದೆ ಮತ್ತು ಸದಾ ಜಾಗೃತ ವಾಗಿಯೇ ಇರುತ್ತದೆ. ಆದರೆ ಅಪರಾಧಿ ಮನಸ್ಸುಗಳು ತಮ್ಮ ಕಳ್ಳತನ ಮುಚ್ಚಿಕೊಳ್ಳಲು ಮತ್ತು ಸಾಚಾಗಳೆಂದು ತೋರಿಸಿಕೊಳ್ಳಲು ಆ ಆತ್ಮಸಾಕ್ಷಿಯನ್ನು ಸದಾ ಸದೆ ಬಡಿಯುತ್ತಲೇ ಇರುತ್ತವೆ. ಹೀಗೆ ಅದರ ಬಾಯಿ ಮುಚ್ಚಿಸಿ, ಸುಳ್ಳುಗಳ ಸಾಮ್ರಾಜ್ಯವನ್ನೇ ಕಟ್ಟಿಬಿಡುವ ಕಾರಣಕ್ಕಾಗಿ ಆತ್ಮಸಾಕ್ಷಿಯು, ‘ನನ್ನನ್ನೂ ಇವರು ಅಪರಾಧಿಯನ್ನಾಗಿ ಮಾಡುತ್ತಿದ್ದಾರಲ್ಲ!’ ಎಂದು ಒಳಗೊಳಗೇ ಅಳುತ್ತಿರುತ್ತದೆ. ಆದರೆ ಅದರ ಮೊರೆ ಕೇಳುವವರಾರು?

1970ರ ದಶಕದಲ್ಲಿ, ಜಿ.ಎನ್.ಸಭಾಹಿತ ಎಂಬ ಅತ್ಯಂತ ಸರಳ-ಸಜ್ಜನ, ಕಾನೂನು ತಜ್ಞರೊಬ್ಬರು ಧಾರವಾಡದಲ್ಲಿ ನ್ಯಾಯಾಧೀಶರಾಗಿದ್ದರು. ವಿದ್ಯಾರ್ಥಿ ಗಳೆಂದರೆ ಕಕ್ಕುಲಾತಿಯನ್ನು ಹೊಂದಿದ್ದ ಅವರು, ವಿದ್ಯಾರ್ಥಿಗಳಿಗೆ ಕಾನೂನಿನ ಅರಿವು ಬರಲಿ ಹಾಗೂ ಅಪರಾಧ ಮಾಡದಂಥ ಶುದ್ಧ ವ್ಯಕ್ತಿಗಳು ಅವರಾಗಲಿ ಎಂಬ ಸದುದ್ದೇಶದಿಂದ ನ್ಯಾಯಾಲಯದ ಕಾರ್ಯ ಕಲಾಪಗಳು ನಡೆಯುವಾಗಲೇ ಅವರಿಗೆ ಕೋರ್ಟಿನಲ್ಲಿ ಬಂದು ನೋಡಲು-ಕೇಳಲು ಅವಕಾಶ ಕಲ್ಪಿಸುತ್ತಿದ್ದರು. ಕಲಾಪಗಳು ಮುಗಿದ ನಂತರ, ವಿದ್ಯಾರ್ಥಿಗಳೊಂದಿಗೆ ಸಂವಾದವನ್ನೂ ನಡೆಸಿ, ಅವರು ಕೇಳುತ್ತಿದ್ದ ಕಾನೂನು ಸಂಬಂಧಿ ಪ್ರಶ್ನೆಗಳಿಗೆ ಆಪ್ತವಾಗಿ ಉತ್ತರಗಳನ್ನೂ ಕೊಡುತ್ತಿದ್ದರು. ಅಂಥ ಒಂದು ಸಂದರ್ಭದಲ್ಲಿ ಆತ್ಮಸಾಕ್ಷಿಯ ಜೀವಂತಿಕೆ ಮತ್ತು ಮಹತ್ವದ ಬಗ್ಗೆ ಅವರು ಹೇಳಿದ ಒಂದು ಕೇಸಿನ ವಿವರಗಳು ಯಾವಾಗಲೂ ನೆನಪಿನಲ್ಲಿ ಉಳಿಯುವಂಥವು.

ಜಮೀನಿನ ಜಗಳಕ್ಕೆ ಸಂಬಂಧಿಸಿದಂತೆ ಒಬ್ಬ ಶ್ರೀಮಂತ ರೈತನು ತನ್ನ ಹತ್ತಿರದ ಸಂಬಂಧಿಕನನ್ನು ಕೊಲೆ ಮಾಡಿರುತ್ತಾನೆ. ಎಲ್ಲ ಸಾಕ್ಷ್ಯಾಧಾರಗಳನ್ನೂ ನಾಶ ಮಾಡುವಷ್ಟು ಪ್ರಭಾವಿಯಾಗಿದ್ದ ಆತನು ತಾನು ಕೊಲೆ ಮಾಡಿಲ್ಲವೆಂದು ಸಾಬೀತುಪಡಿಸಲು ಏನೆಲ್ಲ ಹಿಕಮತ್ತುಗಳನ್ನು ಮಾಡುತ್ತಾನೆ. ಆದರೆ, ಸಾಕ್ಷ್ಯಗಳನ್ನೆಲ್ಲ ಕೂಲಂಕಷವಾಗಿ ಪರಿಶೀಲಿಸಿದ ನ್ಯಾಯಾಧೀಶರಿಗೆ ಮಾತ್ರ ಅವನೇ ಅಪರಾಧಿ ಎಂಬುದು ತಿಳಿದಿತ್ತು. ಆದರೂ ಅವರು ಆ ಶ್ರೀಮಂತ ರೈತನಿಗೇ ಅಚ್ಚರಿಯಾಗುವಂತೆ, ‘ನೀವು ನಿರಪರಾಧಿಯೆಂದು ಈ ನ್ಯಾಯಾಲಯವು ತೀರ್ಮಾನಿಸಿದೆ. ನೀವಿನ್ನು ಹೋಗಬಹುದು’ ಎಂದು ಸಾರಿಬಿಡುತ್ತಾರೆ. ರೈತನಿಗೆ ಖುಷಿಯೋ ಖುಷಿ! ಆತ ಕೋರ್ಟ್ ಹಾಲಿನಲ್ಲಿಯೇ ಕೂಗಾಡುತ್ತ, ಕುಣಿದಾಡುತ್ತ ಬಾಗಿಲ ಕಡೆಗೆ ಹೋಗುತ್ತಿದ್ದಾಗ, ಆ ನ್ಯಾಯಾಧೀಶರು ಒಮ್ಮೆಲೇ, ‘ಯಜಮಾನ್ರೆ, ನಿಮ್ಮ ಕಂಬಳಿಯನ್ನು ನೀವು ಇಲ್ಲೇ ಬಿಟ್ಟು ಹೊರಟಿದ್ದೀರಲ್ಲಾ’ ಎಂದು ಆತನಿಗೆ ಸೂಚಿಸುತ್ತಾರೆ. ನಿರಪರಾಧಿಯೆಂದು ಬಿಡುಗಡೆಯಾದ ಉಮೇದಿನಲ್ಲಿದ್ದ ಆ ರೈತನು, ಅದೇ ವೇಗದಲ್ಲಿ ಹಿಂದಕ್ಕೆ ಬರುತ್ತ, ‘ಏ ಹೌದ್ ನೋಡ್ರೀ ಸಾಹೇಬ್ರ, ಅವತ್ತ ನಾನು ಖೂನೀ ಮಾಡಾಕ ಹೋದಾಗ ಈ ಕಂಬಳೀನ ಅಲ್ಲೇ ಮರತ್ ಬಿಟ್ಟ್ ಬಂದಿದ್ಯಾ ನೋಡ್ರಿ’ ಅಂದವನೇ ಅದನ್ನು ತೆಗೆದುಕೊಳ್ಳಲು ವಾಪಸ್‌ ಬರುತ್ತಾನೆ. ಕೂಡಲೇ ನ್ಯಾಯಾಧೀಶರು, ಅಲ್ಲಿದ್ದ ಪೊಲೀಸರಿಗೆ, ‘ಬಂಧಿಸಿರಿ ಇವನನ್ನು. ಕೊಲೆ ಮಾಡಿದ್ದು ತಾನೇ ಎಂಬುದನ್ನು ಅವನೇ ಒಪ್ಪಿಕೊಂಡಿದ್ದಾನೆ’ ಎಂದು ಆದೇಶ ನೀಡಿದರಂತೆ.

ಕೊಲೆಗಾರ ತಾನೇ ಆಗಿದ್ದರೂ, ಏನೆಲ್ಲ ಅನ್ಯಾಯದ ದಾರಿ ಹಿಡಿದು, ತಾನು ನಿರಪರಾಧಿ ಎಂದು ಸಾಬೀತು ಮಾಡಲು ಶ್ರಮಿಸಿದ್ದ ಆತ ಕೊನೆಗೂ ತನ್ನ ಆತ್ಮಸಾಕ್ಷಿಯನ್ನು ಮುಚ್ಚಿಡಲಾಗಲಿಲ್ಲ ಅಥವಾ ಆತನ ಆತ್ಮಸಾಕ್ಷಿಯು ಸತ್ಯವನ್ನೇ ಹೇಳಿತ್ತು. ಹೊರಗಿನ ಸಾವಿರ ಸಾಕ್ಷಿಗಳು ಸುಳ್ಳಿನ ಸರಮಾಲೆ ಕಟ್ಟಿದರೂ, ಒಳಗಿನ ಆತ್ಮಸಾಕ್ಷಿ ಮಾತ್ರ ಸದಾ ನಿಜವನ್ನೇ ನುಡಿಯುತ್ತದೆ ಎಂಬುದಕ್ಕೆ ನ್ಯಾಯಾಧೀಶ ಜಿ.ಎನ್.ಸಭಾಹಿತ ಅವರು ಅಂದು ವಿದ್ಯಾರ್ಥಿಗಳಿಗೆ ಹೇಳಿದ ಘಟನೆಯೇ ಸಾಕ್ಷಿ.

–ಡಾ. ಬಸವರಾಜ ಸಾದರ
–ಡಾ. ಬಸವರಾಜ ಸಾದರ

ಆತ್ಮಸಾಕ್ಷಿ ಎಲ್ಲರ ಅಂತರಂಗದಲ್ಲೂ ಸದಾ ಜೀವಂತ ವಾಗಿಯೇ ಇರುತ್ತದೆ. ಆದರೆ, ಕಳ್ಳ ಮತ್ತು ಅಪರಾಧಿ ಮನಸ್ಸುಗಳು ಸತ್ಯವನ್ನು ಮರೆಮಾಚಲು ಅದನ್ನು ನಿತ್ಯವೂ ಹತ್ತಿಕ್ಕುತ್ತ ಅಥವಾ ಕೊಲ್ಲುತ್ತಲೇ ಇರುತ್ತವೆ. ಇಂದಿನ ಅನಿಯಂತ್ರಿತ ಭ್ರಷ್ಟಾಚಾರ, ಅತ್ಯಾಚಾರ, ಅನಾಚಾರದ ಪ್ರಸಂಗಗಳಲ್ಲಂತೂ ಇದು ಸಾಬೀತಾಗಿರುವ ಸತ್ಯ. ಆತ್ಮ ಸಾಕ್ಷಿಗೆ ಸಾಕ್ಷ್ಯ ಆಗುವ ಏಕೈಕ ಸಾಧನವೆಂದರೆ ಮನುಷ್ಯನ ಮನಸ್ಸು. ಅದನ್ನೇ ಬಸವಣ್ಣನವರು, ‘ಎನ್ನ ಮನವೇ ಸಾಕ್ಷಿ’ ಎಂದು ಹೇಳಿದ್ದು. ಆದರೆ ಇಂದಿನ ಅಪರಾಧಿತ ಮನಸ್ಸುಗಳೇ ಪೂರ್ತಿ ಭ್ರಷ್ಟವಾಗಿರುವಾಗ, ಅವು ಆತ್ಮಸಾಕ್ಷಿಗೆ ಸಾಕ್ಷ್ಯ ಆಗಲು ಸಾಧ್ಯವೇ?

ನ್ಯಾಯಮೂರ್ತಿಗಳು ಹೇಳಿದಂತೆ, ಅಪರಾಧಿ ತಾನೇ ಎಂದು ಗೊತ್ತಿರುವ ಅಪರಾಧಿಗಳ ಆತ್ಮಸಾಕ್ಷಿಯು ‘ನಾನೇ ಅಪರಾಧಿ’ ಎಂದು ಹೇಳುವ ಕಾಲ ಎಂದಾದರೂ ಬಂದೀತೆ? ಇದು ಒಂದಲ್ಲ; ಸಾವಿರ ಮಿಲಿಯನ್ ಡಾಲರ್ ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT