ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive| ಪತ್ರಿಕೋದ್ಯಮ: ಸ್ವಹಿತಾಸಕ್ತಿ, ಅಭಿವ್ಯಕ್ತಿ, ವಿಶ್ವಾಸಾರ್ಹತೆ

Last Updated 22 ನವೆಂಬರ್ 2020, 11:28 IST
ಅಕ್ಷರ ಗಾತ್ರ
ADVERTISEMENT
""
""

ವೈಯಕ್ತಿಕ ಹಿತಾಸಕ್ತಿ ಹೊಂದಿರುವ ಮಾಧ್ಯಮಗಳು, ಅವುಗಳನ್ನು ರಕ್ಷಿಸಿಕೊಳ್ಳಲು ಆಳುವ ಪಕ್ಷದ ವಕ್ತಾರರಾಗುತ್ತಿರುವುದು ಪತ್ರಿಕೋದ್ಯಮದ ದುರಂತಗಳಲ್ಲಿ ಒಂದು. ರಾಜಕೀಯ ಪಕ್ಷಗಳ, ನಾಯಕರ, ಜಾತಿ–ಧರ್ಮ ಹಾಗೂ ಉದ್ಯಮಿಗಳ ಪರವಾಗಿ ಮಾಧ್ಯಮಗಳು ನಿಲ್ಲುತ್ತಿವೆ. ತಾವು ಓಲೈಸುತ್ತಿದ್ದ ಸರ್ಕಾರ ಬದಲಾದ ಕೂಡಲೇ, ಅಂತಹ ಮಾಧ್ಯಮಗಳು ಹಾಗೂ ಮುಖ್ಯ ಸ್ಥಾನಗಳಲ್ಲಿರುವವರು ಪ್ರಭುತ್ವದ ಗುರಿಯಾಗುತ್ತಿದ್ದಾರೆ. ಈ ವ್ಯೂಹದಿಂದ ಮಾಧ್ಯಮಗಳು ಹೊರಬರಲು ಬೇಕಿರುವುದು ಪತ್ರಿಕಾ ಬದ್ಧತೆ. ಜತೆಗೆ, ಮಾಲೀಕರ ಅಡ್ಡದಾರಿಗಳಿಲ್ಲದ ನ್ಯಾಯಯುತ ವ್ಯವಹಾರ ಹಾಗೂ ಪ್ರಶ್ನಿಸುವ ಪ್ರಜ್ಞಾವಂತ ಓದುಗ/ವೀಕ್ಷಕ ಬಳಗ.

ಅಮೆರಿಕದ ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ಒಂದೊಂದು ರಾಜ್ಯದ ಮತ ಎಣಿಕೆ ಮುಗಿದಾಗಲೂ, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಮುನ್ನಡೆ ಸಾಧಿಸಿ, ಅಧ್ಯಕ್ಷಗಿರಿಗೆ ಹತ್ತಿರವಾಗುತ್ತಿದ್ದರು. ಪರಾಭವ ಒಪ್ಪಿಕೊಳ್ಳಲು ಸಿದ್ಧರಿಲ್ಲದ ಹಾಲಿ ಅಧ್ಯಕ್ಷ ಹಾಗೂ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್, ‘ಚುನಾವಣೆಯಲ್ಲಿ ನಾನೇ ಗೆದ್ದಿದ್ದೇನೆ’ ಎಂದು ಘೋಷಿಸಿಕೊಂಡಿದ್ದರಲ್ಲದೆ, ‘ಮತ ಎಣಿಕೆಯಲ್ಲಿ ವಂಚನೆ ನಡೆದಿದೆ’ ಎಂದೂ ಆರೋಪಿಸಿದ್ದರು.

ಮುಂದುವರಿದು ಶ್ವೇತಭವನದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಅದೇ ಆರೋಪವನ್ನು ಪುನರುಚ್ಚರಿಸಿದ್ದರು. ಆಗ ಅಲ್ಲಿನ ಮಾಧ್ಯಮಗಳು ಟ್ರಂಪ್ ಅವರ ಆಧಾರರಹಿತ ಆರೋಪಗಳನ್ನು ನೇರ ಪ್ರಸಾರ ಮಾಡದಿರಲು ನಿರ್ಧರಿಸಿದವು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳ ಆಯ್ಕೆಯ ವಿರುದ್ಧ ತಳಬುಡವಿಲ್ಲದ ಆರೋಪದ ವಿರುದ್ಧ ಅಲ್ಲಿನ ಮಾಧ್ಯಮಗಳು ತೋರಿದ ನಡೆ ಬಿಸಿ ಚರ್ಚೆಗೂ ಕಾರಣವಾಯಿತು.

ಭಾರತದ ಮಾಧ್ಯಮ ಲೋಕದಲ್ಲಿ ಇಂತಹದ್ದೊಂದು ನಡೆಯನ್ನು ನಿರೀಕ್ಷಿಸಬಹುದೇ. ಒಂದು ವೇಳೆ ಹಾಗೇನಾದರೂ ಇದಿದ್ದರೆ ಹರಕು ಬಾಯಿ ರಾಜಕಾರಣಿಗಳು ಸೇರಿದಂತೆ ಜವಾಬ್ದಾರಿಯುತ ಸ್ಥಾನದಲ್ಲಿರುವವರ ತಳಬುಡವಿಲ್ಲದ ಆರೋಪಗಳು, ತುಚ್ಛ ಮಾತುಗಳು ಮಾಧ್ಯಮಗಳಿಗೆ ಸುದ್ದಿಯ ಸರಕಾಗುತ್ತಿರಲಿಲ್ಲ.

ದೇಶದ ಸಂವಿಧಾನವು ಮಾಧ್ಯಮಗಳಿಗೆ ವಿಶೇಷ ಸ್ವಾತಂತ್ರ್ಯವನ್ನೇನೂ ನೀಡಿಲ್ಲ. ಪ್ರಜೆಗಳಿಗೆ ನೀಡಿರುವ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವೇ ಮಾಧ್ಯಮಗಳಿಗೂ ಅನ್ವಯಿಸುತ್ತದೆ. ದೇಶದಲ್ಲೀಗ ಮುದ್ರಣ ಮಾಧ್ಯಮ, ವಿದ್ಯುನ್ಮಾನ ಮಾಧ್ಯಮದ ಜತೆಗೆ, ಆನ್‌ಲೈನ್ ಮಾಧ್ಯಮಗಳ ಭರಾಟೆ ಹೆಚ್ಚಾಗಿದೆ. ಸಾಮಾಜಿಕ ಜಾಲತಾಣಗಳು ಸುದ್ದಿ ತಾಣಗಳಾಗುತ್ತಿವೆ.

ಆಳುವ ಸರ್ಕಾರಗಳು ಮತ್ತು ಪ್ರಭುತ್ವದ ಮೇಲೆ ಪ್ರಭಾವ ಬೀರಬಲ್ಲ ಉದ್ಯಮಿಗಳ ಕೈಲಿರುವ ಮಾಧ್ಯಮಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಪ್ರಾಮಾಣಿಕ ಮಾಧ್ಯಮಗಳ ಒಳಗೆ ಮತ್ತು ಹೊರಗೆ ಉಸಿರುಗಟ್ಟಿಸುವ ವಾತಾವರಣವಿದೆ. ವೃತ್ತಿಯ ಅಭದ್ರತೆ ನಡುವೆಯೂ ವಿಶ್ವಾಸಾರ್ಹ ಸುದ್ದಿ ನೀಡುವ ಪತ್ರಕರ್ತರ ಸಂಖ್ಯೆ ಇಳಿಕೆಯಾಗುತ್ತಿದೆ. ಏನು ಪ್ರಕಟವಾಗಬೇಕು/ಪ್ರಸಾರವಾಗಬೇಕು ಮತ್ತು ಏನು ಆಗಬಾರದು ಎಂಬುದರ ಗೆರೆಗಳನ್ನು ಬಹುತೇಕ ಮಾಧ್ಯಮಗಳ ಹೂಡಿಕೆದಾರರು ಸ್ಪಷ್ಟವಾಗಿ ಎಳೆದಿದ್ದಾರೆ. ಸ್ವಹಿತಾಸಕ್ತಿಯ ಓಟದಲ್ಲಿ ‘ವಿಶ್ವಾಸಾರ್ಹತೆ’ ಗೌಣವಾಗಿದೆ.

ಭಾರತದ ಪತ್ರಿಕೋದ್ಯಮದಲ್ಲಾಗುತ್ತಿರುವ ಇಂತಹ ಬೆಳವಣಿಗೆಗಳು ಪತ್ರಿಕಾ ಸ್ವಾತಂತ್ರ್ಯದ ಸೂಚ್ಯಂಕದಲ್ಲಿ ದೇಶದ ಸ್ಥಾನ ವರ್ಷದಿಂದ ವರ್ಷಕ್ಕೆ ಕುಸಿತವಾಗಲು ಕಾಣುತ್ತಿದೆ. 2020ರಲ್ಲಿ ಭಾರತದ ರ‍್ಯಾಂಕಿಂಗ್ 142. ಕಳೆದ ವರ್ಷಕ್ಕೆ ಹೋಲಿಸಿದರೆ ಎರಡು ಪಾಯಿಂಟ್ ಕುಸಿತವಾಗಿದೆ. ಪಕ್ಕದ ಶ್ರೀಲಂಕಾ (127) ಮತ್ತು ನೇಪಾಳದ (112) ಸ್ಥಿತಿ ಉತ್ತಮವಾಗಿದ್ದರೆ, ಪಾಕಿಸ್ತಾನ (145) ಮತ್ತು ಬಾಂಗ್ಲಾದೇಶಗಳ (151) ಪರಿಸ್ಥಿತಿ ಭಾರತಕ್ಕಿಂತಲೂ ಹೀನಾಯವಾಗಿದೆ.

ರಿಪೋರ್ಟರ್ಸ್‌ ವಿತೌಟ್‌ ಬಾರ್ಡರ್ಸ್‌ (ಆರ್‌ಎಸ್‌ಎಫ್‌) ವಿಶ್ವದ 180 ದೇಶಗಳಲ್ಲಿ ಪ್ರತಿ ವರ್ಷ ಸಮೀಕ್ಷೆ ನಡೆಸಿ, ಅಲ್ಲಿನ ಮಾಧ್ಯಮಗಳ ಸ್ಥಿತಿಗತಿಗೆ ಅನುಗುಣವಾಗಿ ರ‍್ಯಾಂಕಿಂಗ್ ನೀಡುತ್ತಾ ಬರುತ್ತದೆ. ದೇಶದಲ್ಲಿ ನಡೆಯುವ ಮಾಧ್ಯಮಗಳ ಕತ್ತು ಹಿಚುಕುವ ಕೆಲಸಗಳು, ಪತ್ರಕರ್ತರ ಹತ್ಯೆ ಹಾಗೂ ಅವರ ಮೇಲಿನ ಹಲ್ಲೆಗಳನ್ನು ಆಧರಿಸಿ ಈ ವರದಿ ತಯಾರಿಸಲಾಗಿದೆ.

2018ರಲ್ಲಿ ದೇಶದ ರ‍್ಯಾಂಕಿಂಗ್ 138ಕ್ಕೆ ಕುಸಿತ ಕಂಡಿತು. ಇದಕ್ಕೆ ಕಾರಣವಾಗಿದ್ದು ಆ ವರ್ಷ ನಡೆದಿದ್ದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ. ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ್ದ ಪ್ರಕರಣದಿಂದಾಗಿ, ಭಾರತದ ರ‍್ಯಾಂಕಿಂಗ್‌ ಕುಸಿತವಾಗಿದೆ ಎಂದು ಗ್ಲೋಬಲ್‌ ಮೀಡಿಯಾ ವಾಚ್‌ಡಾಗ್‌ ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿತ್ತು. ನರೇಂದ್ರ ಮೋದಿ ಪ್ರಧಾನಿಯಾದ ನಂತರ ಹಿಂದೂ ಮೂಲಭೂತವಾದಿಗಳ ದ್ವೇಷದ ಭಾಷಣ ಹೆಚ್ಚಾಗಿದೆ. ಪತ್ರಕರ್ತರನ್ನು ಅತ್ಯಂತ ಹಿಂಸಾತ್ಮಕ ಭಾಷೆಯಿಂದ ನಿಂದಿಸಲಾಗುತ್ತಿದೆ. ಆಡಳಿತ ಪಕ್ಷ ಅಥವಾ ಹಿಂದುತ್ವವನ್ನು ಟೀಕಿಸುವ ಪತ್ರಕರ್ತರನ್ನು ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಟ್ರೋಲ್‌ ಮಾಡಲಾಗುತ್ತಿದೆ. ತಮ್ಮ ವಿರುದ್ಧ ಟೀಕಿಸುವ ಪತ್ರಕರ್ತರನ್ನು ಅವಮಾನಿಸುವ ಹಾಗೂ ಅಂತ್ಯಗೊಳಿಸುವುದೇ ಇವರ ಗುರಿಯಾಗಿದೆ‌ ಎಂದು 2018ರಲ್ಲಿ ಆರ್‌ಎಸ್‌ಎಫ್‌ ವರದಿ ಹೇಳಿತ್ತು.

2020ರ ವರದಿಯ ಅಂಶಗಳು ಅಂದಿಗಿಂತ ಭಿನ್ನವಾಗೇನೂ ಇಲ್ಲ. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಧ್ಯಮಗಳ ಮೇಲಿನ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿದೆ. ಹಿಂದೂ ರಾಷ್ಟ್ರೀಯತೆಯ ಗೆರೆ ದಾಟದಂತೆ ಮಾಧ್ಯಮಗಳ ಮೇಲೆ ಒತ್ತಡ ಹಾಕುತ್ತಿದೆ. ಹಿಂದುತ್ವವಾದಿಗಳನ್ನು ಕೆರಳಿಸುವಂತಹ ವರದಿಗಳನ್ನು ಮಾಡುವ ಪತ್ರಕರ್ತರ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ದ್ವೇಷ ಭಾವನೆ ಮೂಡಿಸುವಂತಹ ಅಭಿಯಾನವನ್ನು ವ್ಯವಸ್ಥಿತವಾಗಿ ನಡೆಸಲಾಗುತ್ತಿದೆ. ಜತೆಗೆ, ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಕಲಂ 370 ರದ್ದು ನಂತರದ ಅಲ್ಲಿನ ಬೆಳವಣಿಗೆಗಳು ಹಾಗೂ ಪತ್ರಕರ್ತರು ತಮ್ಮ ಕರ್ತವ್ಯ ನಿರ್ವಹಿಸಲಾಗದ ಸ್ಥಿತಿ ರ‍್ಯಾಂಕಿಂಗ್‌ ಕುಸಿತಕ್ಕೆ ಮುಖ್ಯ ಕಾರಣ ಎಂದು ಆರ್‌ಎಸ್‌ಎಫ್ ಅಭಿಪ್ರಾಯಪಟ್ಟಿದೆ.

ಈ ವರದಿ ಕುರಿತು ಪ್ರತಿಕ್ರಿಯಿಸಿದ್ದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ ಜಾವಡೇಕರ್, ‘ಭಾರತದ ಪತ್ರಿಕಾ ಸ್ವಾತಂತ್ರ್ಯ ಕುರಿತು ಕೆಟ್ಟದಾಗಿ ಬಿಂಬಿಸುವ ಸಮೀಕ್ಷೆಗಳನ್ನು ಬಯಲಿಗೆಳೆಯುತ್ತೇವೆ’ ಎಂದಿದ್ದರು. 2018ರ ರ‍್ಯಾಂಕಿಂಗ್ ವರದಿ ವಿರುದ್ಧವೇ ಪತ್ರಿಕಾ ಮಂಡಳಿ ಅಸಮಾಧಾನ ಹೊರ ಹಾಕಿತ್ತು. ದೇಶದ ಪತ್ರಿಕೋದ್ಯಮದ ಸ್ಥಿತಿಯ ಬಗ್ಗೆ ಅವಲೋಕಿಸಿ, ಸುಧಾರಣೆಗೆ ಕ್ರಮ ಕೈಗೊಳ್ಳಲು ಮುಂದಾಗದ ಸಚಿವರು ಹಾಗೂ ಮಂಡಳಿ ವರದಿಯನ್ನು ಟೀಕಿಸಿ ಕೈ ತೊಳೆದುಕೊಂಡಿದ್ದರು.

ಭಾರತದ ಪತ್ರಿಕೋದ್ಯಮವೀಗ ‘ಫೇವರ್ ಜರ್ನಲಿಸಂ’ (ಓಲೈಕೆ ಪತ್ರಿಕೋದ್ಯಮ) ರೂಪವನ್ನೂ ಪಡೆದುಕೊಂಡಿದೆ. ಪತ್ರಿಕೋದ್ಯಮಿಗಳ ಮೇಲೆ ಪ್ರಭುತ್ವ ಸಾಧಿಸುತ್ತಿರುವ ಪ‍ರೋಕ್ಷ ಹಿಡಿತ ಇದಕ್ಕೆ ಕಾರಣ. ಮಾಧ್ಯಮಗಳು ತಮ್ಮ ಅಸ್ತಿತ್ವ ಅಥವಾ ಉಳಿವಿಗಾಗಿ ಪ್ರಭುತ್ವದೆದುರು ಮಂಡಿಯೂರುವ ಸ್ಥಿತಿ ಬಂದಿದೆ. ತನಗೆ ವಿರುದ್ಧವೆನಿಸುವ ಪತ್ರಿಕೋದ್ಯಮದ ನಡೆಯನ್ನು, ಅಧಿಕಾರದ ಬಲದಿಂದ ಹೊಸಕಿ ಹಾಕಬಲ್ಲ ಅಥವಾ ಬಾಯಿ ಮುಚ್ಚಿಸುವ ಮಟ್ಟಕ್ಕೆ ಪ್ರಭುತ್ವ ಬಂದು ನಿಂತಿದೆ. ಪತ್ರಕರ್ತರ ವಿರುದ್ಧ ದೇಶದ್ರೋಹ ಮತ್ತುಯುಎಪಿಎಯಡಿ (ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ) ಪ್ರಕರಣ ದಾಖಲು ಈಗ ಮಾಮೂಲಿಯಾಗಿದೆ.

ಕಾಶ್ಮೀರದಲ್ಲಿ ಕಲಂ 370 ರದ್ದಾದ ಬಳಿಕ, ಭದ್ರತಾ ಏಜೆನ್ಸಿಗಳಿಂದಲೇ ತಮಗೆ ಭಯವಿದೆ ಎಂದು ಅಲ್ಲಿನ ಪತ್ರಕರ್ತರು ಪ್ರತಿಭಟಿಸಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ದೇಶವಿರೋಧಿ ಚಟುವಟಿಕೆಗಳನ್ನು ವೈಭವೀಕರಿಸಿದ ಆರೋಪದಡಿ, ಶ್ರೀನಗರ ಮೂಲದ ಪತ್ರಿಕಾ ಛಾಯಾಗ್ರಾಹಕಿ ವಿರುದ್ಧ ಯುಎಪಿಎಯಡಿ (ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ) ಪ್ರಕರಣ ದಾಖಲಿಸಲಾಗಿತ್ತು. ಇಷ್ಟಕ್ಕೂ ಪತ್ರಕರ್ತೆ ಕ್ಲಿಕ್ಕಿಸಿದ್ದ ಹಾಗೂ ಪ್ರಕಟವಾಗಿದ್ದ ಚಿತ್ರಗಳಲ್ಲಿ ಆಕ್ಷೇಪಾರ್ಹವಾದುವು ಇರಲಿಲ್ಲ.

ಹಾಥರಸ್‌ ಘಟನೆ ಕುರಿತು ವರದಿ ಮಾಡಲು ತೆರಳುತ್ತಿದ್ದ ಕೇರಳ ಮೂಲದ ಪರ್ತಕರ್ತನನ್ನು ಉತ್ತರಪ್ರದೇಶ ಪೊಲೀಸರು ಅಕ್ಟೋಬರ್ 5ರಂದು ಮಾರ್ಗಮಧ್ಯೆಯೇ ಬಂಧಿಸಿದ್ದರು. ಬಂಧನದ ಎರಡು ದಿನದ ಬಳಿಕ ಅವರ ವಿರುದ್ಧ ದೇಶದ್ರೋಹ, ಯುಎಪಿಎ ಸೇರಿದಂತೆ ಇತರ ಐಪಿಸಿ ಕಲಂಗಳ ಅಡಿ ಪ್ರಕರಣ ದಾಖಲಿಸಲಾಗಿತ್ತು. ಇದಾದ 43 ದಿನಗಳ ಬಳಿಕ ಪತ್ರಕರ್ತನಿಗೆ ತಮ್ಮ ವಕೀಲರೊಂದಿಗೆ ಮೊಬೈಲ್ ಫೋನ್‌ ಮೂಲಕ ಮಾತನಾಡಲು ಅವಕಾಶ ನೀಡಲಾಗಿತ್ತು.

ಉತ್ತರಪ್ರದೇಶದ ಕೋಹಿರಿಪುರ್ ಗ್ರಾಮದಲ್ಲಿ ಮುಷಾಹರ್ ಸಮುದಾಯದವರು ಲಾಕ್‌ಡೌನ್‌ನಿಂದಾಗಿ, ತಮ್ಮ ಬದುಕಿಗಾಗಿ ಹುಲ್ಲನ್ನೇ ನೆಚ್ಚಿಕೊಂಡಿದ್ದಾರೆ ಎಂಬ ವರದಿಯನ್ನು ಪತ್ರಿಕೆಯೊಂದು ಪ್ರಕಟಿಸಿತ್ತು. ಇದಕ್ಕಾಗಿ ವಾರಾಣಸಿಯ ಜಿಲ್ಲಾ ಮ್ಯಾಜಿಸ್ಟ್ರೇಟ್, ವರದಿಗಾರ ಮತ್ತು ಮುಖ್ಯ ಸಂಪಾದಕನಿಗೆ ಮಾರ್ಚ್ 26ರಂದು ನೋಟಿಸ್ ನೀಡಿತ್ತು.

ಲಾಕ್‌ಡೌನ್ ನಡುವೆಯೂ ಉ.ಪ್ರದೇಶ ಮುಖ್ಯಮಂತ್ರಿ ಮಾ. 25ರಂದು, ಅಯೋಧ್ಯೆಯಲ್ಲಿ ಸಾರ್ವಜನಿಕ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು ಎಂದು ‘ದ ವೈರ್’ ವರದಿ ಮಾಡಿತ್ತು. ಇದಕ್ಕಾಗಿ, ಅದರ ಸಂಪಾದಕನ ವಿರುದ್ಧ ಅಲ್ಲಿನ ಸರ್ಕಾರ ಐಪಿಸಿ 188, 505(2) ಅಡಿ ಪ್ರಕರಣ ದಾಖಲಿಸಿತ್ತು.

ಆರೋಗ್ಯ ಸಿಬ್ಬಂದಿಗೆ ಕಳಪೆ ಗುಣಮಟ್ಟದ ಪಿಪಿಇ ಕಿಟ್ ವಿತರಿಸಲಾಗಿದೆ ಎಂದು ವರದಿ ಮಾಡಿದ್ದ ಪತ್ರಕರ್ತನೊಬ್ಬನಿಗೆ ಲಖನೌ ಪೊಲೀಸರು ಸಮನ್ಸ್ ನೀಡಿದ್ದರು.

ಮಿರ್ಜಾಪುರ ಜಿಲ್ಲೆಯ ಪ್ರಾಥಮಿಕ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳು ಮಧ್ಯಾಹ್ನದ ಊಟಕ್ಕೆ ರೊಟ್ಟಿ ಮತ್ತು ಉಪ್ಪು ತಿನ್ನುತ್ತಿದ್ದನ್ನು ಸ್ಥಳೀಯ ಪತ್ರಕರ್ತನೊಬ್ಬ ಚಿತ್ರೀಕರಿಸಿ ವರದಿ ಮಾಡಿದ್ದ. ಇದಕ್ಕಾಗಿ ಅಲ್ಲಿನ ಪೊಲೀಸರು, ವರದಿಯು ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಸಂಚಾಗಿದೆ ಎಂದು ಆರೋಪಿಸಿ ಪತ್ರರ್ತನ ವಿರುದ್ಧ ಕ್ರಿಮಿನಲ್ ಸಂಚು, ವಂಚನೆಯಡಿ ಪ್ರಕರಣ ದಾಖಲಿಸಿದ್ದರು.

ಇದೇ ರೀತಿ ಹಿಮಾಚಲ ಪ್ರದೇಶದಲ್ಲಿ ಐವರ ವಿರುದ್ಧ, ಮಹಾರಾಷ್ಟ್ರದಲ್ಲಿ 7, ಜಮ್ಮು ಮತ್ತು ಕಾಶ್ಮೀರದಲ್ಲಿ 4, ತಮಿಳುನಾಡು 2, ಕರ್ನಾಟಕ 5, ದೆಹಲಿ 2, ಕೇರಳ 2, ಮಧ್ಯಪ್ರದೇಶ 2, ಪಶ್ಚಿಮ ಬಂಗಾಳ 4, ರಾಜಸ್ಥಾನ 2 ಸೇರಿದಂತೆ ಹಲವು ರಾಜ್ಯಗಳಲ್ಲಿ ಪತ್ರಕರ್ತರ ಮೇಲೆ ಪ್ರಕರಣಗಳು ದಾಖಲಾಗುತ್ತಲೇ ಇವೆ. ಕೆಲವರನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳಿಸಿದ್ದಾರೆ. ಉಳಿದವರು ಜಾಮೀನಿಗಾಗಿ ಹೆಣಗಾಡುತ್ತಿದ್ದಾರೆ.

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಅಲ್ಪಸಂಖ್ಯಾತ ಮುಸ್ಲಿಮರು ಹೆಚ್ಚಾಗಿ ಆಯ್ಕೆಯಾಗುತ್ತಿರುವ ಬಗ್ಗೆ ಸುದರ್ಶನ್ ಟಿ.ವಿಯಲ್ಲಿ ‘ಯುಪಿಎಸ್‌ಸಿ ಜಿಹಾದ್‌’ ಕಾರ್ಯಕ್ರಮ ಪ್ರಸಾರವಾಗಿತ್ತು. ಸಮುದಾಯವೊಂದನ್ನು ಅವಹೇಳನ ಮಾಡುವ ಇಂತಹ ಕಾರ್ಯಕ್ರಮಗಳನ್ನು ಪ್ರಸಾರ ಮಾಡದಂತೆ ಸುಪ್ರೀಂಕೋರ್ಟ್‌ ಆ ಚಾನೆಲ್‌ಗೆ ತಾಕೀತು ಮಾಡಿತ್ತು. ಸೂಕ್ಷ್ಮ ವಿಷಯಗಳಲ್ಲಿ ಸುದ್ದಿವಾಹಿನಿಗಳು ಹದ್ದುಮೀರಿ ವರ್ತಿಸುತ್ತಿದ್ದು, ಸ್ವಯಂ ನಿಯಂತ್ರಣದ ಅಗತ್ಯವಿದೆ ಎಂದೂ ಅಭಿಪ್ರಾಯಪಟ್ಟಿತ್ತು.

ಮಹಾರಾಷ್ಟ್ರ ಸರ್ಕಾರ ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕನನ್ನು ಬಂಧಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಈ ಬಂಧನ ಹಿಂದೆ ಇದ್ದದ್ದು, ಸರ್ಕಾರ ಮತ್ತು ಚಾನೆಲ್ ನಡುವಿನ ತಿಕ್ಕಾಟ. ಪ್ರಕರಣ ಸುಪ್ರೀಂಕೋರ್ಟ್‌ ಮೆಟ್ಟಿಲೇರಿತ್ತು. ‘ವೈಯಕ್ತಿಕ ಸ್ವಾತಂತ್ರ್ಯವನ್ನು ಕಸಿದುಕೊಂಡರೆ ಅದು ‘ನ್ಯಾಯದ ವಿಡಂಬನೆ’ಯಾಗಲಿದೆ’ ಎಂದು ಅಭಿಪ್ರಾಯಪಟ್ಟಿದ್ದ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಜತೆಗೆ, ‘ಭಾರತದ ಪ್ರಜಾಪ್ರಭುತ್ವವು ‘ಸ್ಥಿತಿಸ್ಥಾಪಕತ್ವವುಳ್ಳ’ದಾಗಿದ್ದು, ಟಿವಿಯ ಟೀಕೆಗಳನ್ನು ಮಹಾರಾಷ್ಟ್ರ ಸರ್ಕಾರವು ಅಲಕ್ಷ್ಯ ಮಾಡಬೇಕು. ಅವರ ಸಿದ್ಧಾಂತ ಏನೇ ಇರಬಹುದು. ನಾನು ಅವರ ಚಾನೆಲ್‌ ನೋಡುವುದೇ ಇಲ್ಲ. ಆದರೆ, ಈ ಪ್ರಕರಣದಲ್ಲಿ ಸಾಂವಿಧಾನಿಕ ನ್ಯಾಯಾಲಯಗಳು ಮಧ್ಯಪ್ರವೇಶಿಸದೇ ಇದ್ದರೆ, ನಾವು ನಾಶದ ಹಾದಿಯಲ್ಲಿ ಸಾಗುತ್ತಿದ್ದೇವೆ. ಆರೋಪಗಳ ಮೇಲೆ ವ್ಯಕ್ತಿಯೊಬ್ಬರ ವೈಯಕ್ತಿಕ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲು ಸಾಧ್ಯವೇ’ ಎಂದು ಕೋರ್ಟ್ ಅಭಿಪ್ರಾಯಪಟ್ಟಿತ್ತು.

ಜಾಮೀನು ಮಂಜೂರು ವಿರುದ್ಧ ಹಾಸ್ಯ ಕಲಾವಿದ ಕುನಾಲ್ ಕಮ್ರಾ ಮಾಡಿದ್ದ ಟ್ವೀಟ್‌ ವಿರುದ್ಧ, ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗಿದೆ. ಕ್ರಮಕ್ಕೆ ಅಟಾರ್ನಿ ಜನರಲ್ ಕೂಡ ಒಪ್ಪಿಗೆ ಕೊಟ್ಟಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಬಂಧಿತರಾಗಿದ್ದ ಸಂಪಾದಕ ಏಳೇ ದಿನದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ದೇಶದಲ್ಲಿ ಅನೇಕ ಪತ್ರಕರ್ತರು ವಿವಿಧ ಪ್ರಕರಣಗಳಡಿ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಪ್ರಭುತ್ವದ ಪ್ರಭಾವಳಿಗೆ ಸಿಗದ ಇವರ ಜಾಮೀನುಗಳಿಗೆ ಗ್ರಹಣ ಹಿಡಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT